ವಸಾಹತುಕಾರನ ನರಕ: ಕೊಂದವರುಳಿಯುವರೆ?

ಒಂದಾನೊಂದು ಕಾಲದಲ್ಲಿ ಇಥಿಯೋಪಿಯಾದಲ್ಲಿದ್ದ ವಿಚಿತ್ರ ನಿಯಮವೊಂದನ್ನು ಕುರಿತು ಮನೋನಿ ಹೇಳುತ್ತಾನೆ: ಆ ನಿಯಮದ ಪ್ರಕಾರ, ಸಾಲ ಕೊಟ್ಟವನು ಸಾಲಗಾರನನ್ನು ಸರಪಳಿಯಿಂದ ಕಟ್ಟಿ, ಅದರ ಇನ್ನೊಂದು ತುದಿಯನ್ನು ತನ್ನ ದೇಹದ ಯಾವುದಾದರೂ ಭಾಗಕ್ಕೆ ಕಟ್ಟಿಕೊಳ್ಳುವ ಅವಕಾಶವಿತ್ತು. ಇಲ್ಲಿ ಇಬ್ಬರೂ ಒಂದೇ ಪರಿಸ್ಥಿತಿಯ ಬಂಧಿಗಳು. ಆದರೆ ಸಾಲಗಾರ ಕರುಣೆಗೆ ಅರ್ಹನಾದ, ದೈನೇಸಿ ಸ್ಥಿತಿಯ ವ್ಯಕ್ತಿಯಾದರೆ, ಸಾಲಿಗನಿಗೆ ವಿಚಿತ್ರ ತೃಪ್ತಿಯೊಂದು ಸಿಕ್ಕಿದ ಆನಂದವಿರುತ್ತಿತ್ತು.

ವಸಾಹತುಸನ್ನಿವೇಶದ ಮನಃಶಾಸ್ತ್ರೀಯ ಆಯಾಮವನ್ನು ಸಮರ್ಥವಾಗಿ ಹಿಡಿದಿಡ ಬಲ್ಲ ರೂಪಕವಿದು. ವಸಾಹತುವಾದೀ ಸನ್ನಿವೇಶದಲ್ಲಿ ಗೆದ್ದವನೂ ವಸಾಹತು ಸನ್ನಿವೇಶದ ತೆರೆಮರೆಯ ಬಲಿಯೇ ಎಂಬುದನ್ನು ಏಮಿಸಿಸಾರೆ, ಮೆಮ್ಮಿ, ಜಾರ್ಜ್ ಆರ್ವೆಲ್, ಅಶೀಶ್ ನಂದಿಯಂಥವರು ಹಲವು ಆಧಾರಗಳ ಮೂಲಕ ತೋರಿಸುತ್ತಾರೆ. ಜಾರ್ಜ್ ಆರ್ವೆಲ್ ತನ್ನ ‘ಶೂಟಿಂಗ್ ಆ್ಯನ್ ಎಲಿಫೆಂ‰’(ಆನೆಯನ್ನು ಕೊಲ್ಲುವುದೆಂದರೆ…) ಎಂಬ ಅನುಭವ ಕಥನದಲ್ಲಿ ಹಿಂಸೆಯನ್ನು ಒಲ್ಲದ ವಸಾಹತುಕಾರ ಹಿಂಸೆಗಿಳಿಯಲು ವಸಾಹತೀಕರಣ ಗೊಂಡವನ ಒತ್ತಾಯವೂ ಕಾರಣವಾಗುವುದನ್ನು ತೋರಿಸುತ್ತಾನೆ. ವಸಾಹತುವಾದೀ ದಬ್ಬಾಳಿಕೆಯ ಮತ್ತೊಂದು ಮುಖದಲ್ಲಿ ವಸಾಹತುಕಾರನ ನಿರ್ನಾಗರೀಕರಣವೂ ನಡೆಯುವ ಬಗೆಯನ್ನು ಏಮಿಸಿಸಾರೆ ಗುರುತಿಸುತ್ತಾನೆ:

… ವಸಾಹತೀಕರಣಗೊಂಡವನನ್ನು ಪ್ರಾಣಿಯನ್ನಾಗಿ ಕಾಣಹೊರಡುವ ವಸಾಹತುಕಾರ ತನ್ನನ್ನೂ ಪ್ರಾಣಿಯನ್ನಾಗಿ ಪರಿವರ್ತಿಸಿಕೊಳ್ಳಲಾರಂಭಿಸು ತ್ತಾನೆ. ಭಾರತೀಯರನ್ನು ಅಥವಾ ಆಫ್ರಿಕನ್ನರನ್ನು ಮಾತ್ರ ಕೊಲ್ಲುತ್ತಿದ್ದೇವೆಂದು ತಿಳಿದಿರುವ ಯುರೋಪಿಯನ್ನರು, ಆ ಪ್ರಕ್ರಿಯೆಯಲ್ಲಿ ಯುರೋಪಿನ ನಾಗರಿಕತೆ ಸ್ವತಂತ್ರವಾಗಿ ಬೆಳೆಯಲು ಅಗತ್ಯವಾಗಿದ್ದ ತಳಹದಿಗಳನ್ನೇ ತಾವು ಒಂದೊಂದಾಗಿ ಕಳಚಿ ಎಸೆದಿರುವುದನ್ನು ಮರೆತಿದ್ದಾರೆ.

ಇಂಥ ಎರಡು ಅಲಗಿನ ಹಿಂಸೆಯ ವಸಾಹತು ಸನ್ನಿವೇಶ ವಸಾಹತುಕಾರನಾಗಲೊಲ್ಲದ ವಸಾಹತುವಾದೀ ದೇಶದ ಪ್ರಜೆಯನ್ನೂ ವಸಾಹತುಕಾರನನ್ನಾಗಿ ಪರಿವರ್ತಿಸುವ ಬಗೆಯನ್ನು ಆಲ್ಬರ್ಟ್‌ಮೆಮ್ಮಿ ವಿವರಿಸುತ್ತಾನೆ. ‘ವಸಾಹತುಕಾರ’ ಹಾಗೂ ‘ವಸಾಹತೀಕರಣಗೊಂಡವ’ ಎಂಬ ಎರಡು ನಿರ್ದಿಷ್ಟ ಮಾದರಿಗಳ ಮೂಲಕ ವಸಾಹತುವಾದೀ ಹಿಂಸೆಯನ್ನು ವ್ಯಾಖ್ಯಾನಿಸಿದವರಲ್ಲಿ ಮೆಮ್ಮಿ ಮೊದಲಿಗ. ವಸಾಹತುವಾದೀ ಧೃವೀಕರಣಗಳು ಮಾಡುವ ಮೊದಲ ಕೆಲಸವೆಂದರೆ ವಸಾಹತುಕಾರ ಹಾಗೂ ವಸಾಹತೀಕರಣಗೊಂಡವನ ನಡುವಣ ವ್ಯತ್ಯಾಸವನ್ನು ಕಂಡುಹಿಡಿದು, ಅದನ್ನು ಸಿದ್ಧಾಂತವನ್ನಾಗಿ ಮಾಡುವುದು; ವಸಾಹತುಕಾರನ ದೃಷ್ಟಿಕೋನದಿಂದ ಶ್ರೇಷ್ಠ-ಕನಿಷ್ಠ ಎಂಬ ವರ್ಗೀಕರಣವನ್ನು ಮಾಡುವುದು. ಈ ವರ್ಗೀಕರಣವನ್ನು ಒಂದು ಅತಿಗೆ ಒಯ್ಯುವ ಮೂಲಕ ಅವು ಬದಲಾಗದ ಸ್ಥಿತಿಗಳು ಎಂಬಂತೆ ಚಿತ್ರಿಸುವುದು. ತನ್ಮೂಲಕ ವಸಾಹತುವಾದೀ ಆಕ್ರಮಣಕ್ಕೆ ಸಮರ್ಥನೆಗಳನ್ನು ಸೃಷ್ಟಿಸುವುದು.

ವಸಾಹತುಕಾರ ಹಾಗೂ ವಸಾಹತೀಕರಣಗೊಂಡವರಿಬ್ಬರೂ ತಪ್ಪಿಸಿಕೊಳ್ಳಲಾಗದ ಸ್ಥಿತಿಯೊಂದನ್ನು ವಸಾಹತು ಸನ್ನಿವೇಶ ಸೃಷ್ಟಿಸುತ್ತದೆ. ವಸಾಹತು ಸನ್ನಿವೇಶದ ಹಿಂಸೆ ವಸಾಹತುಕಾರನಲ್ಲಿ ಪ್ರಕಟಗೊಂಡು ವಸಾಹತೀಕರಣಗೊಂಡವನಲ್ಲೂ ಮುಂದುವರಿಯುತ್ತದೆ. ಅದರ ಪರಿಣಾಮವಾಗಿಯೇ ವಸಾಹತು ವ್ಯವಸ್ಥೆಯಲ್ಲಿ ಆಳುವ ವರ್ಗಕ್ಕೆ ಹತ್ತಿರವಾಗುವ ವಸಾಹತೀಕರಣಗೊಂಡ ವರ್ಗಗಳು ಬರುಬರುತ್ತಾ ವಸಾಹತುಕಾರನ ಉದ್ದೇಶವನ್ನೇ ರಕ್ಷಿಸಲಾರಂಭಿಸುತ್ತವೆ. ಅವನ ಭಾಷೆಯಲ್ಲೇ ಮಾತಾಡತೊಡಗುತ್ತವೆ. ಅವನ ತತ್ವವನ್ನೇ ಅನುಸರಿಸತೊಡಗುತ್ತವೆ. ಈ ಬೆಳವಣಿಗೆಗಳನ್ನು ‘ಸಣ್ಣಪುಟ್ಟ ದಮನಕಾರರ ಪಿರಮಿಡ್ಡಿನ ಚರಿತ್ರೆ’ ಎನ್ನುತ್ತಾನೆ ಮೆಮ್ಮಿ. ಈ ವ್ಯವಸ್ಥೆಯಲ್ಲಿ ತನಗಿಂತ ಮೇಲಿರುವ ವಸಾಹತುಕಾರ ಸೃಷ್ಟಿಸಿದ ದಮನದ ರೂಪಗಳನ್ನು ವಸಾಹತೀಕರಣಕ್ಕೆ ತುತ್ತಾದ ಸಮಾಜದ ಒಂದು ವರ್ಗ ತನ್ನ ಕೆಳಗಿನವರ ಮೇಲೆ-ಅಂದರೆ ತನ್ನ ದೇಶೀಯರ ಮೇಲೆ-ಹರಿಯಬಿಡುತ್ತದೆ; ಹಾಗೂ ಈ ವರ್ಗ ತನ್ನ ಸಮಾಜದ ವಿರುದ್ಧವೇ ಕ್ರೂರವಾಗಿ ತಿರುಗಿಬೀಳುವ ಪ್ರಕ್ರಿಯೆ ಶುರುವಾಗುತ್ತದೆ ಎಂಬುದನ್ನು ಮೆಮ್ಮಿ ಗುರುತಿಸುತ್ತಾನೆ.

ವಸಾಹತುವಿರೋಧೀ ಸಿದ್ಧಾಂತಗಳ ಸ್ವರೂಪ

‘ನಾಗರಿಕತೆ’, ‘ಅಭಿವೃದ್ದಿ’, ‘ಆಧುನಿಕತೆ’ ‘ಚರಿತ್ರೆ’ ‘ಸಂಸ್ಕೃತಿ ಪ್ರಸಾರ’ ‘ವಿಜ್ಞಾನ’ ಎಂಬ ಹೊಸ ನೆಲೆಗಳು ರೂಪಿಸಿದ ಮಹಾಕಥನಗಳು ಅಥವಾ ಅಧಿಕಾರಸ್ಥ ಸಂಕಥನಗಳ ಮೂಲಕ ಆಧುನಿಕ ಪಶ್ಚಿಮವು ‘ಅನಾಗರಿಕ’, ‘ಹಿಂದುಳಿದ’ ಹಾಗೂ ‘ಸಾಂಪ್ರದಾಯಿಕ’ ಸಮಾಜಗಳಾದ ವಸಾಹತುಗಳಲ್ಲಿ ತಾನು ರೂಪಿಸಿಕೊಂಡ ಸ್ವ-ಪ್ರತಿಬಿಂಬದ ಸ್ವರೂಪವನ್ನು ಈವರೆಗೆ ಚರ್ಚಿಸಲಾದ ಆಫ್ರಿಕನ್ ಹಾಗೂ ಭಾರತೀಯ ವಸಾಹತುವಿರೋಧೀ ಸಿದ್ಧಾಂತಗಳು ಹೇಳುತ್ತವೆ. ಇಂಥ ತನ್ನ ಸ್ವ-ಪ್ರತಿರೂಪವನ್ನು ಸೃಷ್ಟಿಸಿಕೊಂಡ ವಸಾಹತುವಾದೀ ಸಂಸ್ಕೃತಿ ತನ್ನ ಆಕ್ರಮಣಕ್ಕೊಳಗಾದ ಸಂಸ್ಕೃತಿಗಳಲ್ಲಿ ಗುರುತಿಸುವ ಸಾಧನೆಗಳೇನಾದರೂ ಇದ್ದರೆ, ಅವು ಕಲೆ, ಧರ್ಮ, ಜಾನಪದೀಯ ಜ್ಞಾನದಂಥ ಕ್ಷೇತ್ರಗಳಲ್ಲಿ ಅಥವಾ ಆ ಸಂಸ್ಕೃತಿಗಳ ಕೆಲವು ‘ವಿಲಕ್ಷಣ’ ಅಂಶಗಳಲ್ಲಿ ಮಾತ್ರ. ಆದರೆ ಆಧುನಿಕ ಜಗತ್ತಿನಲ್ಲಿ ಗೆಲ್ಲುವ, ಉಳಿಯುವ ಗುಣಗಳಾಗಲೀ, ಶ್ರೇಷ್ಠ ಗುಣಗಳಾಗಲೀ ಇರುವುದು ತನ್ನಲ್ಲಿ ಮಾತ್ರ ಎಂಬುದು ಅದರ ದೃಢ ನಂಬಿಕೆ. ಇಂಥ ಯಜಮಾನಿಕೆಯ ಧೋರಣೆಯಿಂದ ಹೊರಟು ದೇಶೀ ಸಂಸ್ಕೃತಿಗಳ ದೈವೀ ನೆಲೆಗಳನ್ನೂ, ಬಹುರೂಪೀ ಗುಣವನ್ನೂ, ನ್ಯಾಯಬದ್ಧತೆಯನ್ನೂ ನಾಶಮಾಡಿ ಒಂದೇ ರೂಪದ ಯಾಂತ್ರಿಕ ಸಮಾಜವನ್ನೂ, ಆಧುನಿಕ ಹಿಂಸೆಗಳ ನೆಲೆಗಳನ್ನೂ ಸೃಷ್ಟಿಸುವ ವಸಾಹತು ಅನುಭವವನ್ನು ಮೂಲತಃ ಹಿಂಸೆಯ ಅನುಭವವನ್ನಾಗಿಯೇ ಈವರೆಗೆ ಚರ್ಚಿಸಲಾದ ವಸಾಹತು ವಿರೋಧೀ ಸಿದ್ಧಾಂತಗಳು ಗ್ರಹಿಸುತ್ತವೆ.

ಪಶ್ಚಿಮದ ಸೃಷ್ಟಿಯಾದ ಆಧುನಿಕ ವಸಾಹತುವಾದವನ್ನು ಚರ್ಚಿಸುವ ಈ ವಸಾಹತು ವಿರೋಧೀ ಸಿದ್ಧಾಂತಗಳ ಪ್ರಧಾನ ಧ್ವನಿ ಪಶ್ಚಿಮವಿರೋಧಿಯಾಗಿರುವುದು ಸಹಜ. ಹಾಗೆಯೇ ಈ ಸಿದ್ಧಾಂತಗಳು ದೇಶೀ ಸಂಸ್ಕೃತಿಗಳ ಸತ್ವವನ್ನು ಪ್ರತಿಪಾದಿಸುತ್ತಿರುವಾಗಲೂ ಪಶ್ಚಿಮವನ್ನೇ ಹೆಚ್ಚು ಉದ್ದೇಶಿಸಬೇಕಾಗಿರುವುದರಿಂದ ಅಲ್ಲಿ ದೇಶೀ ಸಂಸ್ಕೃತಿಗಳ ಅವಿಮರ್ಶಾತ್ಮಕ ಆರಾಧನೆ ಎದ್ದು ಕಾಣುವುದೂ ಪ್ರಾಯಶಃ ಸಹಜ.ಅಲ್ಲದೆ, ಈ ಸಿದ್ಧಾಂತಗಳು ವಸಾಹತೋತ್ತರ ಆಫ್ರಿಕಾದ ಆಂತರಿಕ ಲೋಕವನ್ನು ಚರ್ಚಿಸುವಾಗಲೂ ಸರ್ವವ್ಯಾಪಿ ಪಶ್ಚಿಮದತ್ತಲೇ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿರುತ್ತವೆ. ಆದ್ದರಿಂದ ದೇಶೀ ಜಗತ್ತಿನ ಆಂತರಿಕ ಹಿಂಸೆಗಳು ಹಾಗೂ ಸಾಂಪ್ರದಾಯಿಕ ಸಮಾಜಗಳ ದೌರ್ಬಲ್ಯಗಳತ್ತ ಅವುಗಳ ಒತ್ತು ಕಡಿಮೆ. ಅಲ್ಲದೆ, ಬೆನಿಟಾ ಪ್ಯಾರಿ ಅವರು ಗುರುತಿಸುವಂತೆ, ವಸಾಹತು ವಾದಿ ಪ್ರಭುತ್ವದ ದಬ್ಬಾಳಿಕೆಯನ್ನು ಗ್ರಹಿಸುವ ಹಲವು ವಸಾಹತುವಿರೋಧೀ ಸಿದ್ಧಾಂತಗಳು ವಸಾಹತೀಕರಣಗೊಂಡವನನ್ನು ಪರ್ಯಾಯ ಮಾದರಿಯ ಜ್ಞಾನ ಹಾಗೂ ಚರಿತ್ರೆಯ ವಾರಸುದಾರನನ್ನಾಗಿ, ಪರ್ಯಾಯ ಪರಂಪರೆಯ ಪ್ರತಿಪಾದಕನನ್ನಾಗಿ ಗುರುತಿಸುವ ನಿಟ್ಟಿನಲ್ಲಿ ಆಳವಾಗಿ ಕೆಲಸ ಮಾಡುವುದಿಲ್ಲ.

ವಸಾಹತೀಕರಣಕ್ಕೆ ಆಫ್ರಿಕಾದ ದೇಶೀ ಪರಂಪರೆಗಳ ಪ್ರತಿಕ್ರಿಯೆ

ವಸಾಹತುವಾದದ ಮೂಲಕ ಪ್ರವೇಶಿಸುವ ಅನ್ಯ ಸಂಸ್ಕೃತಿಯ ಆಕ್ರಮಣಕ್ಕೆ ದೇಶೀ ಸಂಸ್ಕೃತಿಗಳು ಹಲವು ಬಗೆಗಳಲ್ಲಿ ಪ್ರತಿಕ್ರಿಯಿಸುತ್ತಿರುತ್ತವೆ. ಆ ಪ್ರತಿಕ್ರಿಯೆಗಳಲ್ಲಿ ನೇರ ಸ್ವೀಕಾರ, ವಿಮರ್ಶಾತ್ಮಕ ಸ್ವೀಕಾರ, ಸಂಘರ್ಷ, ಸ್ವಪ್ರತಿಪಾದನೆ, ಅನುಕರಣೆ, ಜೀರ್ಣಿಸಿಕೊಳ್ಳುವ ಕ್ರಿಯೆ, ಒಪ್ಪಂದ, ಶರಣಾಗತಿ, ಉಪೇಕ್ಷೆ, ದೇಶೀ ಮಾದರಿಗಳ ಪುನರುಜ್ಜೀವನ, ಬುಡಮೇಲು ಕೃತ್ಯ, ನಿಷ್ಕ್ರಿಯತೆ… ಹೀಗೆ ಹಲವು ಸಂಕೀರ್ಣ ಮಾದರಿಗಳಿರುತ್ತವೆ. ಇಂಥ ಪ್ರತಿಕ್ರಿಯೆಗಳು ವಸಾಹತೀಕರಣಗೊಂಡವನನ್ನು ಮಾತ್ರವಲ್ಲದೆ ವಸಾಹತುಕಾರನನ್ನೂ ರೂಪಾಂತರಿಸಲೆತ್ನಿಸುತ್ತಿರುತ್ತವೆ. ಆದ್ದರಿಂದಲೇ ಸಮಾಜಶಾಸ್ತ್ರೀಯ ಮಾದರಿಗಳು ಗುರುತಿಸುವ ‘ಪ್ರತಿರೋಧ’, ‘ಅನುಕರಣೆ’ ಹಾಗೂ ‘ಸಮನ್ವಯ’ಗಳ ಪರಿಕಲ್ಪನೆಗಳು ವಸಾಹತು ಸನ್ನಿವೇಶದ ವಿಶಿಷ್ಟ ಪ್ರತಿಕ್ರಿಯೆಗಳನ್ನು ಸಮಗ್ರವಾಗಿ ಗ್ರಹಿಸಲಾರವು. ಕಾರಣ, ಹಲವು ದೇಶೀ ಸಂಸ್ಕೃತಿಗಳು ವಸಾಹತುವಾದೀ ಸಂಸ್ಕೃತಿಗೆ ಆರಂಭದಲ್ಲೇ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದ ಉದಾಹರಣೆಗಳಿರುವಂತೆ, ಇನ್ನು ಕೆಲ ಸಂಸ್ಕೃತಿಗಳು ಹೊಸ ಸಂಸ್ಕೃತಿಯನ್ನು ಸ್ವಾಗತಿಸಿದ ಉದಾಹರಣೆಗಳೂ ಇರುತ್ತವೆ.

ಯುರೋಪಿಯನ್ನರು ವಸಾಹತೀಕರಣವನ್ನಾರಂಭಿಸುವುದಕ್ಕಿಂತ ಮೊದಲೇ ಅವರ ಆಗಮನವನ್ನು ಕೆಲವು ಆಫ್ರಿಕನ್ ಸಂಸ್ಕೃತಿಗಳು ಅಪ್ರಜ್ಞಾಪೂರ್ವಕವಾಗಿ ಎದುರು ನೋಡುತ್ತಿದ್ದವೆಂಬುದಕ್ಕೆ ಮ್ಯಾಲಗೇಸಿ ಬುಡಕಟ್ಟಿನ ಜಾನಪದ ಕತೆಗಳ ಉದಾಹರಣೆಗಳನ್ನು ಮನೋನಿ ಕೊಡುತ್ತಾನೆ. ಕಡಲಿನಿಂದ ಬರುವ ಅಪರಿಚಿತರನ್ನು, ಅವರು ತರಲಿರುವ ಅದ್ಭುತವಾದ ಉಡುಗೊರೆಗಳನ್ನು ಕುರಿತು ಮ್ಯಾಲಗೇಸಿ ಪುರಾಣಗಳು ಹಾಗೂ ಜಾನಪದ ಕತೆಗಳಲ್ಲಿ ಬರುವ ಪ್ರತಿಮೆಗಳನ್ನು ಮನೋನಿ ಮನೋವೈಜ್ಞಾನಿಕ ದೃಷ್ಟಿಯಿಂದ ವಿಶ್ಲೇಷಿಸುತ್ತಾನೆ. ಅಲ್ಲಿ ಕಾಣುವ ರಮ್ಯ ನಿರೀಕ್ಷೆಗಳನ್ನು ದೇಶೀಯರು ವಸಾಹತುಕಾರನನ್ನು ನಿರೀಕ್ಷಿಸುವ ರೂಪಕಗಳಂತೆ ಮನೋನಿ ಕಾಣುವುದು ಮೇಲುನೋಟಕ್ಕೆ ಉತ್ಪ್ರೇಕ್ಷಿತ ಓದಿನಂತೆ ತೋರುತ್ತದೆ. ಆದರೆ ಮಡಗಾಸ್ಕರ್‌ನಲ್ಲಿ ಹದಿನೇಳನೆಯ ಶತಮಾನದ ಆರಂಭ ದಲ್ಲಿ ಅಪಘಾತಕ್ಕೀಡಾದ ಹಡಗುಗಳಿಂದ ಪಾರಾಗಿ ಬಂದ ವಿದೇಶೀ ನಾವಿಕರನ್ನು ತಮ್ಮವರನ್ನಾಗಿಸಿ ಕೊಳ್ಳಲು ಸ್ಥಳೀಯ ಜನಾಂಗಗಳಲ್ಲಿ ನಡೆಯುತ್ತಿದ್ದ ಪೈಪೋಟಿಯಲ್ಲಿ ವಸಾಹತುಕಾರನನ್ನು ಕುರಿತ ಒಂದು ಬಗೆಯ ಆರಾಧನೆಯನ್ನು ಮನೋನಿ ಕಾಣಲೆತ್ನಿಸುತ್ತಾನೆ. ಹೀಗೆ ಇದ್ದಕ್ಕಿದ್ದಂತೆ ದೇಶೀ ಸಮಾಜಗಳಿಗೆ ಪ್ರವೇಶಿಸಿದ ಯುರೋಪಿಯನ್ನರನ್ನು ಕೊಂದ ಘಟನೆಗಳೂ ಇದ್ದವು, ನಿಜ. ಆದರೆ ಒಟ್ಟಾರೆಯಾಗಿ ಮಡಗಾಸ್ಕರ್‌ನಲ್ಲಿ ಬಿಳಿಯ ಮನುಷ್ಯನ ಆಗಮನದ ಆರಂಭ ಘಟ್ಟದಲ್ಲಿ ಜನಾಂಗದ್ವೇಷದ ಸೂಚನೆಗಳು ದೊಡ್ಡ ರೀತಿಯಲ್ಲಿ ಕಾಣಿಸುತ್ತಿರಲಿಲ್ಲ. ಕಾರಣ, ಈ ಪ್ರದೇಶಗಳಿಗೆ ವಸಾಹತುಕಾರ ಮೊದಲು ಆಗಮಿಸಿದಾಗ ಅವನನ್ನು ಅಪರಿಚಿತನಂತೆ, ಅಥವಾ ಅತಿಥಿಯಂತೆ ಕಾಣಲಾಯಿತೇ ಹೊರತು ಶತ್ರುವಿನಂತಲ್ಲ. ಮಡಗಾಸ್ಕರ್‌ನ ಸ್ಥಳೀಯರು ಅವನನ್ನು ‘ವಝಾಹ’(ಅಂದರೆ ‘ಗೌರವಾನ್ವಿತ ಅಪರಿಚಿತ’) ಎಂದೇ ಕರೆಯುತ್ತಿದ್ದರು.

ಮನೋನಿಯ ಓದನ್ನು ಪಶ್ಚಿಮದ ಮನೋವಿಜ್ಞಾನದ ಗರಡಿಯಲ್ಲಿ ತಯಾರಾದ ಓದು ಎಂದು ತಳ್ಳಿಹಾಕುವುದು ಸುಲಭ. ಆದರೆ ಅವನು ಮ್ಯಾಲಗೇಸಿ ರೂಪಕಗಳಲ್ಲಿ ಗುರುತಿಸುವ ‘ಅನ್ಯ’ದ ನಿರೀಕ್ಷೆಯನ್ನು ಇನ್ನಷ್ಟು ಸೂಕ್ಷ್ಮವಾಗಿ ನೋಡಬೇಕು. ವಸಾಹತುಶಾಹಿಯನ್ನು ಕುರಿತು ಇತರ ಸಂಸ್ಕೃತಿಗಳಲ್ಲಿ ಇದ್ದಿರಬಹುದಾದ ಕುತೂಹಲ, ಕಾತುರ, ಕನಸುಗಳನ್ನೂ ಮನೋನಿಯ ಓದು ಗ್ರಹಿಸಲೆತ್ನಿಸಿದೆ. ವಸಾಹತೀಕರಣಕ್ಕೊಳಗಾದ ಸಮಾಜಗಳಲ್ಲಿ ವಸಾಹತುವಾದೀ ಸಂಸ್ಕೃತಿಯ ಬಗ್ಗೆ ಹಲಬಗೆಯ ಆಕರ್ಷಣೆಗಳಿದ್ದವು ಎಂಬ ವಾಸ್ತವವನ್ನು ಕಡೆಗಣಿಸುವಂತಿಲ್ಲ.

ವಸಾಹತು ಸನ್ನಿವೇಶ ವಸಾಹತುವಾದೀ ಮೌಲ್ಯಗಳ ಶ್ರೇಷ್ಠತೆಯನ್ನು ಪ್ರತಿಪಾದಿಸಲು ಹಾಗೂ ಹೇರಲು ನಿರಂತರವಾಗಿ ಪ್ರಯತ್ನಿಸುವುದರಿಂದ ಎರಡು ಬಗೆಯ ಪ್ರತಿಕ್ರಿಯೆಗಳು ಹುಟ್ಟಿಕೊಳ್ಳುತ್ತವೆ: ಒಂದು, ವಸಾಹತೀಕರಣಗೊಂಡವನೂ ವಸಾಹತುಕಾರನ ಮೌಲ್ಯಗಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾನೆ. ಎರಡು, ವಸಾಹತುಕಾರನ ಮೌಲ್ಯಗಳನ್ನು ವಿರೋಧಿಸುತ್ತಾ, ತನ್ನ ಮೌಲ್ಯಗಳಿಗೆ ತೀವ್ರವಾಗಿ ಆತುಕೊಳ್ಳುತ್ತಾ ಉಗ್ರ ಸ್ವ-ಸಮರ್ಥನೆಯನ್ನಾರಂಭಿಸುತ್ತಾನೆ. ಮತೀಯವಾದೀ ಮೂಲಭೂತವಾದ ಹುಟ್ಟುವುದು ಈ ಘಟ್ಟದಲ್ಲಿ. ಆದರೆ, ಈ ಎರಡು ಪ್ರತಿಕ್ರಿಯೆಗಳನ್ನೂ ಸೂಕ್ಷ್ಮವಾಗಿ ವಸಾಹತುವಾದವೇ ನಿಯಂತ್ರಿಸುವುದರಿಂದ ಮೊದಲನೆಯ ಮಾದರಿಯ ಪ್ರತಿಕ್ರಿಯೆಯಲ್ಲಿ ದೇಶೀ ಪಾರಂಪರಿಕ ಮೌಲ್ಯಗಳು ನಿರ್ನಾಮವಾಗತೊಡಗುತ್ತವೆ. ಅವುಗಳಲ್ಲಿ ಅಳಿಯಲು ಲಾಯಕ್ಕಾದ ಹಾಗೂ ಉಳಿಸಿಕೊಳ್ಳಬಹುದಾದ ಮೌಲ್ಯಗಳೂ ಸೇರಿರುತ್ತವೆ. ಎರಡನೇ ಬಗೆಯ ಪ್ರತಿಕ್ರಿಯೆಯಲ್ಲಿ ವಸಾಹತುವಾದೀ ನೋಟ ಕ್ರಮ ಗಳನ್ನಾಧರಿಸಿದ ಪಾರಂಪರಿಕ ಮೌಲ್ಯಗಳ ಪುನರುಜ್ಜೀವನ ಆರಂಭವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ದೇಶೀ ಮೌಲ್ಯಗಳಲ್ಲಿ ಇದ್ದಿರಬಹುದಾದ ಅರ್ಥ ಮತ್ತು ಪಾವಿತ್ರ್ಯಗಳು ನಾಶವಾಗತೊಡಗುವುದರ ಜೊತೆಗೇ ಪ್ರತಿಗಾಮಿ ಮೌಲ್ಯಗಳೂ ಹುಟ್ಟಿಕೊಳ್ಳುತ್ತವೆ. ಆಲ್ಜೀರಿಯಾದಲ್ಲಿ ಪರದಾ ಪದ್ಧತಿಯನ್ನು ಸಂಪ್ರದಾಯವಾದಿಗಳು ಉಗ್ರವಾಗಿ ಪ್ರತಿಪಾದಿಸಲಾರಂಭಿಸಿದ ಪ್ರತಿಗಾಮಿ ಧೋರಣೆ ಹೆಚ್ಚತೊಡಗಿದ್ದು ವಸಾಹತು ಘಟ್ಟದಲ್ಲೇ ಎಂಬುದನ್ನು ಫ್ಯಾನನ್ ಗುರುತಿಸುತ್ತಾನೆ. ಈ ಎರಡೂ ಬಗೆಯ ಪ್ರತಿಕ್ರಿಯೆಗಳಿಗಿಂತ ಭಿನ್ನವಾಗಿ, ಅಶೀಶ್‌ನಂದಿಯವರು ಭಾರತದ ಸಂದರ್ಭದಲ್ಲಿ ತೋರಿಸುವಂತೆ, ಪರಂಪರೆಯ ಒಳಗಿನ ವಿಮರ್ಶಕರಾದ ಈಶ್ವರಚಂದ್ರ ವಿದ್ಯಾಸಾಗರ ಹಾಗೂ ಗಾಂಧೀ ಮಾದರಿಗಳು ತೀವ್ರವಾದ ಸ್ವ-ವಿಮರ್ಶೆಯ ಮೂಲಕ ಪರಂಪರೆಯ ಸತ್ವವನ್ನು ಕಾಪಾಡಲೆತ್ನಿಸುತ್ತಲೇ ವಸಾಹತುವಾದವನ್ನು ವಿರೋಧಿಸುತ್ತಿರುತ್ತವೆ. ಅಶೀಶ್ ನಂದಿಯವರ ಪ್ರಕಾರ, ಈ ಮೂರನೆಯ ಮಾದರಿಯೇ  ನಿಜವಾದ ವಸಾಹತು ವಿರೋಧ.

ಮೇಲಿನ ಮೂರು ಮಾದರಿಗಳಲ್ಲಿ, ಮೊದಲನೆಯ ಮಾದರಿಯ ಪ್ರತಿಕ್ರಿಯೆಯಲ್ಲಿ ಸೂಚಿಸಲಾದ ವಸಾಹತು ಮೌಲ್ಯಗಳ ಆರಾಧನೆಯನ್ನು ಕುರಿತು ಆಲ್ಬರ್ಟ್ ಮೆಮ್ಮಿ ಬರೆಯುತ್ತಾನೆ: ವಸಾಹತುಕಾರ ಸೃಷ್ಟಿಸಿರುವ ಆಕರ್ಷಕ ಮಾದರಿಗಳನ್ನು ಅಪ್ಪಿಕೊಳ್ಳುವ ದೇಶೀಯ ತನ್ನನ್ನು ತಾನೇ ಇಲ್ಲವಾಗಿಸಿಕೊಳ್ಳುವ ಹಂತ ತಲುಪುತ್ತಾನೆ. ವಸಾಹತುಕಾರ ಉತ್ಪಾದಿಸಿದ ವಸ್ತು, ಅವನ ವರ್ತನೆ, ಉಡುಪು, ವಾಸ್ತುಶಿಲ್ಪ, ಕಲೆ ಎಲ್ಲವನ್ನೂ ಅನುಕರಿಸುವ ಈ ಘಟ್ಟದಲ್ಲಿ ಸ್ವಂತದ ನಿರಾಕರಣೆ ಹಾಗೂ ವಸಾಹತುಕಾರನ ಆರಾಧನೆ-ಹೀಗೆ ಎರಡು ಮುಖಗಳಿರುತ್ತವೆ. ಈ ಸ್ಥಿತಿ ಹೆಚ್ಚು ವ್ಯಕ್ತವಾಗುವುದು ವಸಾಹತೀಕರಣಕ್ಕೊಳಗಾದ ದೇಶೀ ಬೂರ್ಜ್ವಾ ವರ್ಗದಲ್ಲಿ. ಹೀಗೆ ವಸಾಹತುಕಾರನಾಗಬಯಸುವ ದೇಶೀಯ ಎಷ್ಟು ಅಪಾಯಕಾರಿಯಾಗುತ್ತಾನೆಂದರೆ, ಆತ ದೇಶೀ ಜನತೆಯನ್ನೂ ವಸಾಹತುಕಾರನ ಕಣ್ಣಿನ ಮೂಲಕ ನೋಡಲಾರಂಭಿಸುತ್ತಾನೆ. ದೇಶೀ ಸಮಾಜದಲ್ಲಿ ಹಲವು ವೈರುಧ್ಯಗಳೂ, ಶಿಥಿಲ ಅಂಶಗಳೂ ಇರುವುದು ನಿಜ. ಆದರೆ ಈಗ(ವಸಾಹತುಕಾರನಿಗೆ ಕಂಡಂತೆಯೇ) ದೇಶೀಯನಿಗೂ ತನ್ನ ಸಮಾಜ ಅದಕ್ಷವಾಗಿ, ನಿಕೃಷ್ಟವಾಗಿ ಕಾಣತೊಡಗುತ್ತದೆ.

ಹೀಗೆ ವಸಾಹತೀಕರಣಗೊಂಡವರು ವಸಾಹತುಕಾರನ ಸಂಸ್ಕೃತಿಯನ್ನು ಅನುಕರಿಸುವ ಘಟ್ಟದ ಹಲವು ದುರಂತ ಮುಖಗಳನ್ನು ಪಾಶ್ಚಾತ್ಯೀಕರಣ ಹಾಗೂ ಸಂಸ್ಕೃತೀಕರಣದಂಥ ಮೇಲ್ಮುಖ ಚಲನೆ ಕುರಿತ ಸಮಾಜಶಾಸ್ತ್ರೀಯ ಪರಿಕಲ್ಪನೆಗಳು ಸಂಪೂರ್ಣವಾಗಿ ಗ್ರಹಿಸು ವುದಿಲ್ಲ. ಕಾರಣ, ಅವು ಒಂದು ಬಗೆಯ ಚಲನೆಯನ್ನಷ್ಟೇ ಗಮನಿಸುತ್ತವೆ. ವಸಾಹತು ಸನ್ನಿವೇಶವೊಂದರಲ್ಲಿ ವಸಾಹತುಕಾರನನ್ನು ಅನುಸರಿಸುವ ಯಹೂದಿಗಳ ದುರಂತ ಚಿತ್ರವನ್ನು ಮೆಮ್ಮಿ ಕೊಡುತ್ತಾನೆ:

ವಸಾಹತೀಕರಣದ ನಿಕೃಷ್ಟಸ್ಥಿತಿಯಿಂದ ತಪ್ಪಿಸಿಕೊಳ್ಳಲು ವಸಾಹತುಕಾರನನ್ನು ಅನುಸರಿಸುವುದೇ ರಾಜಮಾರ್ಗವೆಂದು ಯಹೂದಿಗಳು ಭ್ರಮಿಸಿದರು. ಹಾಗೆ ಅನುಸರಿಸಿದರೆ ವಸಾಹತುಕಾರ ತಮ್ಮನ್ನು ಪರಕೀಯರಂತೆ ಕಾಣದೆ ತನ್ನವರನ್ನಾಗಿಯೇ ಕಾಣುತ್ತಾನೆಂದು ಈ ಯಹೂದಿಗಳು ಒಂದು ಘಟ್ಟ ದಲ್ಲಿ ನಂಬಿದರು. ಆದ್ದರಿಂದ ತಮ್ಮ ಭೂತದಿಂದ ಬಿಡಿಸಿಕೊಳ್ಳುವ ಸಲುವಾಗಿ ಸಾಮೂಹಿಕ ಅಭ್ಯಾಸಗಳನ್ನು ಬದಲಿಸಿಕೊಂಡ ಅವರು ಪಶ್ಚಿಮದ ಭಾಷೆ, ಸಂಸ್ಕೃತಿ, ಆಚರಣೆಗಳನ್ನು ಉತ್ಸಾಹದಿಂದ ಸ್ವೀಕರಿಸ ಲಾರಂಭಿಸಿದರು. ಆದರೆ ವಸಾಹತುಕಾರ ಮಾತ್ರ ಅವರನ್ನು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಅವರು(ತಮ್ಮ ಸಂಸ್ಕೃತಿಯನ್ನು ಕಳೆದು ಕೊಂಡು)ಎಲ್ಲೂ ಸಲ್ಲದ ಭೀಕರ ಸ್ಥಿತಿಯಲ್ಲಿ ಮುಂದುವರಿಯಬೇಕಾಯಿತು.

ಭೂತ-ವರ್ತಮಾನಗಳ ಸಂಬಂಧಗಳನ್ನು ರೂಪಾಂತರಿಸಲೆತ್ನಿಸುವ ವಸಾಹತುವಾದದ ನಾಗರೀಕರಣದ ಧರ್ಮಯುದ್ಧ ತರುವ ದುರಂತಗಳ ಅರಿವಾಗುವುದು ಈ ಘಟ್ಟಗಳಲ್ಲೇ. ಯಾವ ಸಂಸ್ಕೃತಿಗೂ ಸಲ್ಲದ ಛಿದ್ರೀಕರಣಗೊಂಡ ವ್ಯಕ್ತಿತ್ವಗಳು ಹುಟ್ಟುವುದೂ ಈ ಘಟ್ಟಗಳಲ್ಲೇ.

ಆದರೆ, ಈ ಘಟ್ಟಗಳಲ್ಲೇ ವಸಾಹತೀಕರಣಕ್ಕೆ ತೀವ್ರವಾಗಿ ಪ್ರತಿಕ್ರಿಯಿಸುತ್ತಾ, ಇನ್ನೊಂದುೊದೇಶೀವರ್ಗ ದೇಶೀ ಮೌಲ್ಯಗಳ ಪುನರುಜ್ಜೀವನದ ಪ್ರಶ್ನೆಯನ್ನು ಎತ್ತಲಾರಂಭಿ ಸುತ್ತದೆ. ಆಫ್ರಿಕಾದ ‘ನೆಗ್ರಿಟ್ಯೂಡ್’(negritude) ಚಳುವಳಿ ಎತ್ತಿದ ನೀಗ್ರೋತನ ಹಾಗೂ ಆಫ್ರಿಕನ್ ಸಂಸ್ಕೃತಿಗಳ ಶ್ರೇಷ್ಠತೆಯ ಪ್ರಶ್ನೆಗಳಲ್ಲಿ ಇಂಥ ಮಾದರಿಗಳಿವೆ. ವಸಾಹತು ಘಟ್ಟದಲ್ಲಿ ಪ್ರವೇಶಿಸುವ ರಾಷ್ಟ್ರದ ಕಲ್ಪನೆಯೇ ಹೊಸ ಬಗೆಯ ಅಸ್ತಿತ್ವಗಳನ್ನು ಹಾಗೂ ಪ್ರತ್ಯೇಕತೆಗಳನ್ನು ನಿರ್ಮಿಸುತ್ತದೆ. ಜೊತೆಗೆ, ಎಡ್ವರ್ಡ್ ಸೈದ್ ಗುರುತಿಸುವಂತೆ ವಸಾಹತು ಘಟ್ಟದಲ್ಲಿ ಆರಂಭವಾಗುವ ಭೂತಕಾಲದೆಡೆಗಿನ ‘ಮರು ಪ್ರಯಾಣ’ಗಳು ಧಾರ್ಮಿಕ ಹಾಗೂ ರಾಷ್ಟ್ರೀಯ ಮೂಲಭೂತವಾದವನ್ನು ಹುಟ್ಟುಹಾಕುತ್ತವೆ. ಅಶೀಶ್‌ನಂದಿ ಕೂಡ ಆಧುನಿಕ ಹಿಂದೂ ಮೂಲಭೂತವಾದ ವಸಾಹತುಶಾಹಿಯ ಅನೈತಿಕ ಕೂಸು ಎನ್ನುತ್ತಾರೆ. ‘ಈ ಪುನರುಜ್ಜೀವನದ ಕಲ್ಪನೆ ಹುಟ್ಟುವುದು ಕೂಡ ಈಗಾಗಲೇ ತನ್ನ ದೇಶೀ ಮಾರ್ಗಗಳನ್ನು ಕೈಬಿಟ್ಟ(ಆಧುನಿಕ ವರ್ಗದ) ಸುಪ್ತ ಪಾಪಪ್ರಜ್ಞೆಯಿಂದಲೇ’ ಎನ್ನುವ ಮನೋನಿಯ ಮಾತು, ಪರಂಪರೆಯ ಮರುಪ್ರತಿಪಾದನೆಯ ಹಿನ್ನೆಲೆಯಲ್ಲಿರುವ ವಸಾಹತು ವಾದದ ಎಳೆಗಳನ್ನು ಗುರುತಿಸುತ್ತದೆ.

ನಿರ್ವಸಾಹತೀಕರಣ ಮತ್ತು ನಿಜಮುಗ್ಧತೆಯ ಆರಾಧನೆ

ಪ್ರತಿಕ್ರಿಯೆ: ಒಂದು

ನೀನು ನನಗೆ ಭಾಷೆ ಕಲಿಸಿದೆ. ಅದರಿಂದ ನನಗೆ ಆದ ಲಾಭವೇನೆಂದರೆ, ನಾನು ಬೈಯುವುದು ಹೇಗೆಂದು ಕಲಿತೆ.
                                                                                                ಕ್ಯಾಲಿಬನ್
‘ದಿ ಟೆಂಪೆಸ್ಟ್’, ಅಂಕ-೧, ದೃಶ್ಯ-೨

ಪ್ರತಿಕ್ರಿಯೆ: ಎರಡು
ಸಂದರ್ಶಕ
: ಪಶ್ಚಿಮದ ನಾಗರಿಕತೆಯ ಬಗ್ಗೆ ನಿಮ್ಮ ಅಭಿಪ್ರಾಯ?

ಗಾಂಧೀಜಿ: ಅವರಿಗೆ ಅಂಥದೊಂದು ಇರುವುದೇ ನನಗೆ ಗೊತ್ತಿಲ್ಲವಲ್ಲ…

ಎಲ್ಲೆಡೆ ಹಬ್ಬುವ ತನ್ನ ಶಕ್ತಿಯ ಮೂಲಕ ವಸಾಹತುವಾದ ದೇಶೀ ಪ್ರತಿಕ್ರಿಯೆಗಳ ಹಲವು ಮಾದರಿಗಳನ್ನು ನಿಯಂತ್ರಿಸುವ ರೀತಿಯನ್ನು ಹಿಂದಿನ ಭಾಗದಲ್ಲಿ ಚರ್ಚಿಸಲಾದ ಅಂಶಗಳು ಹೇಳುತ್ತವೆ. ಆಶ್ಚರ್ಯವೆಂದರೆ, ನಿರ್ವಸಾಹತೀಕರಣದ ಕೆಲವು ಮಾದರಿಗಳನ್ನೂ ವಸಾಹತುವಾದವೇ ಸೃಷ್ಟಿಸುವುದು. ಅಶೀಶ್‌ನಂದಿಯವರ ಮಾತಿನಲ್ಲೇ ಹೇಳುವುದಾದರೆ, ವಸಾಹತುವಾದ ತನ್ನ ವಿರುದ್ಧದ ಭಿನ್ನಮತಗಳನ್ನೂ, ವಸಾಹತುವಿರೋಧೀ ಸಿದ್ಧಾಂತ ಗಳನ್ನೂ ಪ್ರಭಾವಿಸಬಲ್ಲದು. ಆದ್ದರಿಂದಲೇ ನಿಜವಾದ ನಿರ್ವಸಾಹತೀಕರಣ ಆರಂಭ ವಾಗುವುದು ದೇಶೀಯ ತನ್ನ ಸಂಪೂರ್ಣ ಸ್ವಾಯತ್ತತೆಯನ್ನು ಪ್ರತಿಪಾದಿಸಿದಾಗ ಹಾಗೂ ಪ್ರಜ್ಞೆಯ ನಿರ್ವಸಾಹತೀಕರಣವಾದಾಗ. ‘ನಿರ್ವಸಾಹತೀಕರಣವೆಂದರೆ ಹೊಸ ಮನುಷ್ಯನ ಸೃಷ್ಟಿ; ವಸಾಹತೀಕರಣಕ್ಕೊಳಗಾಗಿದ್ದ ‘ವಸ್ತು’ ತನ್ನನ್ನು ತಾನು ಸ್ವತಂತ್ರಗೊಳಿಸಿಕೊಳ್ಳುವ ರೀತಿಯಿಂದಲೇ ಮನುಷ್ಯನಾಗುತ್ತದೆ’ ಎಂದು ನಿರ್ವಸಾಹತೀಕರಣದ ಮೂಲಕ ಆರಂಭ ವಾಗುವ ಸ್ವ-ಪ್ರತಿಪಾದನೆಯನ್ನು ಫ್ಯಾನನ್ ಸೂಚಿಸುತ್ತಾನೆ. ವಸಾಹತೀಕರಣಗೊಂಡವನ ಸ್ವ-ಪ್ರತಿಪಾದನೆಯಲ್ಲಿ ಫ್ಯಾನನ್, ಸಾರ್ತರ್ ಹಾಗೂ ಮೆಮ್ಮಿ ಮೂಲತಃ ವಸಾಹತುಕಾರ ನಿಂದ ಪರಿವರ್ತನೆಗೊಂಡ ಕ್ಯಾಲಿಬನ್‌ನ ಬಂಡಾಯದ ಮಾದರಿಯನ್ನು ಅಧಿಕೃತವೆಂದು ಗುರುತಿಸುತ್ತಾರೆ. ಆದರೆ ಗಾಂಧಿ, ಅಶೀಶ್‌ನಂದಿ ಮೊದಲಾದವರು ವಸಾಹತುಕಾರನ ಮಾದರಿಗಳನ್ನು ತಿರಸ್ಕರಿಸುವ ದೇಶೀ ಮನುಷ್ಯನ ವ್ಯಕ್ತಿತ್ವದ ಪ್ರತಿಪಾದನೆಯನ್ನು ನಿಜವಾದ ವಸಾಹತುವಿರೋಧವೆಂದು ಗುರುತಿಸುತ್ತಾರೆ.

ಮೊದಲಿಗೆ, ಫ್ಯಾನನ್ ಮಾದರಿಯನ್ನು ಗಮನಿಸಬಹುದು: ಈ ಮಾದರಿಯ ಪ್ರಕಾರ, ವಸಾಹತೀಕರಣಗೊಂಡವನು ಮೂಲತಃ ಬಲಿಪಶು. ಆದರೆ, ಈತ ಶೇಕ್ಸ್‌ಪಿಯರ್‌ನ ‘ಟೆಂಪೆಸ್ಟ್’ ನಾಟಕದ ಪ್ರಾಸ್ಪರೋ ಎಂಬ ವಸಾಹತುಕಾರನ ಭಾಷೆಯನ್ನು ಕಲಿತು ವಸಾಹತು ಕಾರನ ವಿರುದ್ಧ ಬಂಡೆದ್ದಿರುವ ಕ್ಯಾಲಿಬನ್. ‘ವಸಾಹತು ವಿರೋಧವನ್ನು ವ್ಯಾಖ್ಯಾನಿಸಲು ವಸಾಹತು ಸೃಷ್ಟಿಯಾದ ಕ್ಯಾಲಿಬನ್‌ನ ಪ್ರತಿರೂಪವನ್ನು ಬಳಸುವುದೇ ವಸಾಹತೀಕರಣ ಗೊಂಡವನ ಸ್ವ-ನಿರಾಕರಣೆಯ ಸೂಚನೆಯೆನ್ನುತ್ತಾರೆ ಡಿ.ಆರ್. ನಾಗರಾಜ್. ಫ್ಯಾನನ್ ಮಾದರಿಯ ವಸಾಹತು ವಿರೋಧ ಪಶ್ಚಿಮದ ಕಲ್ಪನೆಯ ರಾಷ್ಟ್ರಪ್ರಭುತ್ವ, ಆಧುನೀಕರಣ ಹಾಗೂ ವ್ಯವಸ್ಥಿತ ಹಿಂಸೆಯ ಮಾದರಿಯನ್ನು-ಮೂಲತಃ ವಸಾಹತುಕಾರನೇ ಹುಟ್ಟುಹಾಕಿದ ವ್ಯವಸ್ಥಿತ ಹಿಂಸೆಯ ಇನ್ನೊಂದು ರೂಪವನ್ನು-ಅಧಿಕೃತ ವಸಾಹತು ವಿರೋಧವೆಂದು ಪ್ರತಿಪಾದಿಸುತ್ತದೆ. ‘ಹಿಂಸೆ ಸೋಲನ್ನೊಪ್ಪುವುದು ಮತ್ತಷ್ಟು ಭೀಕರವಾದ ಹಿಂಸೆಯೆದುರು ಮಾತ್ರ’ ಎನ್ನುವ ಫ್ಯಾನನ್, ವಸಾಹತುಕಾರ ಹುಟ್ಟುಹಾಕಿದ ಹಿಂಸೆಯ ಭಾಷೆ ಅವನ ವಿರುದ್ಧವೇ ತಿರುಗುತ್ತದೆ ಎನ್ನುತ್ತಾನೆ.

ಫ್ಯಾನನ್ ಪ್ರತಿಪಾದಿಸುವ ವಸಾಹತುವಿರೋಧೀ ಹಿಂಸೆಯನ್ನು ‘ವಸಾಹತು ರೋಗದಿಂದ ಮುಕ್ತವಾಗುವ ಪ್ರಕ್ರಿಯೆ’ ಎನ್ನುವ ಸಾರ್ತರ್, ‘ವಸಾಹತು ಸನ್ನಿವೇಶದಲ್ಲಿ ಒಬ್ಬ ಯುರೋಪಿಯನ್ನನನ್ನು ಕೊಲ್ಲುವುದೆಂದರೆ, ಒಂದೇ ಬಾಣದಿಂದ ಎರಡು ಹಕ್ಕಿಗಳನ್ನು ಕೊಂದಂತೆ. ಅಂದರೆ ಇದು ಶೋಷಕ ಹಾಗೂ ಶೋಷಿತರಿಬ್ಬರ ಹತ್ಯೆ; ಶೋಷಕ ನೆಲಕ್ಕುರುಳಿದ ತಕ್ಷಣ, ಶೋಷಿತ ಮೊದಲ ಬಾರಿಗೆ  ‘ತನ್ನ’ ನೆಲದ, ರಾಷ್ಟ್ರದ ಮಣ್ಣನ್ನು ಸ್ಪರ್ಶಿಸುತ್ತಾನೆ’ ಎನ್ನುತ್ತಾನೆ. ಆದರೆ, ಗಾಂಧಿಯ ಪ್ರಕಾರ ವಸಾಹತುವಾದದ ವಿರೋಧದಲ್ಲಿ  ಹಿಂಸಾಮಾರ್ಗ ಹಿಡಿಯುವುದರ ಮೂಲಕ ನಿಜವಾದ ಅರ್ಥದಲ್ಲಿ ನಿರ್ವಸಾಹತೀಕರಣ ಪ್ರಕ್ರಿಯೆ ನಡೆಯುವುದಿಲ್ಲ. ಕಾರಣ, ‘ವಸಾಹತುವಾದದ ವಿರೋಧದಲ್ಲಿ ಹಿಂಸಾಮಾರ್ಗವನ್ನು ಹಿಡಿಯುವುದೆಂದರೆ ಆಧುನಿಕ ನಾಗರಿಕತೆಯನ್ನು ಒಪ್ಪಿಕೊಳ್ಳುವುದು ತಪ್ಪದು’ ಎಂಬುದು ಗಾಂಧಿಯ ನಿಲುವು: ‘ದೊಡ್ಡ ಪ್ರಮಾಣದಲ್ಲಿ ಹಿಂದೂಸ್ಥಾನವನ್ನು ಶಸ್ತ್ರಾಸ್ತ್ರಗಳಿಂದ ಸಬಲವಾಗಿಸುವುದೆಂದರೆ ಹಿಂದೂಸ್ಥಾನವನ್ನೂ ಯುರೋಪಿನ ಹಾಗೆ ಮಾಡುವುದು. ಆಮೇಲೆ ಯುರೋಪಿನ ಶೋಚನೀಯ ಸ್ಥಿತಿಯೇ ಇಲ್ಲಿಯೂ ಬರುತ್ತದೆ. ಅಂದರೆ ಹಿಂದೂಸ್ಥಾನ ಯುರೋಪಿನ ನಾಗರಿಕತೆಯನ್ನೇ ಅವಲಂಬಿಸಬೇಕು ಎಂದರ್ಥ’. ಗಾಂಧಿಯ ಈ ವಾದದೆದುರು ಫ್ಯಾನನ್ ಮಾದರಿಯ ವಸಾಹತು ವಿರೋಧವನ್ನು ಚರ್ಚಿಸುತ್ತಾ ಅಶೀಶ್‌ನಂದಿ, ‘ಫ್ಯಾನನ್‌ನ ನೋಟಕ್ರಮ ವಸಾಹತೀಕರಣಗೊಂಡವನನ್ನು ವಸಾಹತುಕಾರನ ಸಂಸ್ಕೃತಿಗೆ ಹಾಗೂ ವಸಾಹತುಕಾರನ ದಮನಕಾರಿ ಮೌಲ್ಯಗಳಿಗೇ ಹೆಚ್ಚು ಹತ್ತಿರವಾಗಿಸುತ್ತದೆ’ ಎನ್ನುತ್ತಾರೆ: ‘ಹಿಂಸೆಗೆ ಆಂತರಿಕ ನ್ಯಾಯಬದ್ಧತೆ ಸಿಕ್ಕಿಬಿಟ್ಟ ತಕ್ಷಣ, ಎರಡು ಮಾನವ ಸಮಾಜಗಳ ವಿಭಿನ್ನ ಲೋಕದರ್ಶನಗಳ ನಡುವಣ ಹೋರಾಟವನ್ನು ಅದು ಅಧಿಕಾರ ಹಾಗೂ ಸಂಪತ್ತುಗಳಿಗಾಗಿ ನಡೆಯುವ ಹೋರಾಟದ ಮಟ್ಟಕ್ಕೆ ಇಳಿಸಿ ಬಿಡುತ್ತದೆ. ಹೋರಾಡುತ್ತಿರುವ ಎರಡು ಗುಂಪುಗಳೂ ಒಂದೇ ರೀತಿಯ ಮೌಲ್ಯಗಳ ಚೌಕಟ್ಟನ್ನು ಹಂಚಿಕೊಳ್ಳಬೇಕಾಗಿ ಬರುವುದು ಆಗಲೇ’.

‘ವಸಾಹತುಕಾರನ ಮೌಲ್ಯಗಳನ್ನೇ ಸ್ವೀಕರಿಸಿ, ಅವನೇ ನಿರ್ಮಿಸಿದ ಮಾನಸಿಕ ಮಿತಿಗಳೊಳಗೇ ವಸಾಹತುಕಾರನನ್ನು ವಸಾಹತೀಕರಣಗೊಂಡವರು ಎದುರಿಸಬೇಕಾದ ಸ್ಥಿತಿಯನ್ನು ವಸಾಹತುವಾದ ಸೃಷ್ಟಿಸುತ್ತದೆ’ ಎಂದು ಅಶೀಶ್‌ನಂದಿ ಇನ್ನೊಂದೆಡೆ ಬರೆಯುತ್ತಾರೆ. ಆದ್ದರಿಂದ, ಗಾಂಧೀಜಿಯವರ ದೃಷ್ಟಿಕೋನದಿಂದ ನೋಡಿದರೆ ವಸಾಹತು ವಿರೋಧವೆಂದರೆ ಕ್ಯಾಲಿಬನ್ ಪ್ರಾಸ್ಪರೋ ಆಗುವುದಲ್ಲ; ಪ್ರಾಸ್ಪರೋ ಹಾಗೂ ಕ್ಯಾಲಿಬನ್ ಇಬ್ಬರೂ ರೂಪಾಂತರಗೊಳ್ಳುವುದು:

ವಸಾಹತು ಸನ್ನಿವೇಶದಲ್ಲಿ ತಾನಿರುವ ಎರಡನೆಯ ಅಥವಾ ಮೂರನೆಯ ದರ್ಜೆಯ ಸ್ಥಿತಿಯ ಬದಲಿಗೆ, ದಮನಕಾರಿ ವ್ಯವಸ್ಥೆಯಲ್ಲಿ ಮೊದಲನೇ ದರ್ಜೆಯ ನಾಗರಿಕನಾಗುವುದು ದಮನಕ್ಕೊಳಗಾದವನ ಗುರಿಯಾಗಿರ ಬಾರದು. ಬದಲಿಗೆ, ತನ್ನ ಮನುಷ್ಯತ್ವವನ್ನು ಮರಳಿ ಗಳಿಸಿಕೊಳ್ಳಲು ಸಾಧ್ಯವಾಗುವ ಪರ್ಯಾಯ ವ್ಯವಸ್ಥೆಯನ್ನು ಸೃಷ್ಟಿಸುವುದು ಅವನ ಗುರಿಯಾಗಿರಬೇಕು.

-ಇದು ಗಾಂಧೀಜಿಯ ನಿಲುವು.

ಎನೇಕೆ ನಟುಲುಕ್ಪ: ಎಲ್ಲೂ ಕೂರದ ಹಕ್ಕಿ

ವಸಾಹತೀಕರಣದ ಆಘಾತಕ್ಕೆ ಸಿಕ್ಕದೆ ಉಳಿದುಕೊಳ್ಳುವ ಹಲವು ಮಾರ್ಗಗಳನ್ನು ಪರಂಪರೆ ಹುಡುಕಿಕೊಳ್ಳುತ್ತಿರುತ್ತದೆ ಎಂಬುದನ್ನು ಸೂಚಿಸಲು ಪಶ್ಚಿಮ ಆಫ್ರಿಕಾದ ಕಾದಂಬರಿಕಾರ ಚಿನುವ ಅಚೀಬೆ ‘ಎನೇಕೆ ನಟುಲುಕ್ಪ’ ಎಂಬ ಹಕ್ಕಿಯ ಕತೆಯನ್ನು ಹೇಳುತ್ತಾನೆ. ಎನೇಕೆ ಎಂಬುದು ಎಲ್ಲೂ ಕೂರದೆ ಸದಾ ರೆಕ್ಕೆಯನ್ನೆತ್ತಿಕೊಂಡು ಹಾರಲು ಸಿದ್ಧವಾಗಿರುವ ಹಕ್ಕಿ. ಆ ಹಕ್ಕಿಯನ್ನು ‘ನೀನೇಕೆ ಹೀಗೆ ಎಲ್ಲೂ ಕೂರದೆ ಹಾರುತ್ತಿರುತ್ತೀಯ?’ ಎಂದು ಕೇಳಿದರೆ, ‘ಗುರಿಯಿಟ್ಟು ಕೊಲ್ಲುವುದನ್ನು ಜನ ಕಲಿತಿದ್ದಾರೆ, ನಾನು ಆ ಗುರಿಗೆ ಸಿಕ್ಕದೆ ತಪ್ಪಿಸಿಕೊಂಡು ಹಾರುವುದನ್ನು  ಕಲಿತಿದ್ದೇನೆ!’ ಎನ್ನುತ್ತದೆ. ಹೀಗೆ ಸಂಸ್ಕೃತಿಗಳು ಅಥವಾ ಪರಂಪರೆಗಳು ಕೂಡ ಸದಾ ಎಚ್ಚರವಾಗಿದ್ದು ಹೊಸ ಸವಾಲುಗಳನ್ನು ಸ್ವೀಕರಿಸಿ ಬದುಕಿ ಉಳಿಯಲೆತ್ನಿಸುತ್ತವೆ ಎನ್ನುತ್ತಾನೆ ಅಚೀಬೆ.

ಆದ್ದರಿಂದಲೇ ವಸಾಹತೀಕರಣಕ್ಕೆ ದೇಶೀ ಪರಂಪರೆಗಳು ನೀಡಿದ ಪ್ರತಿಕ್ರಿಯೆಗಳ ಚರ್ಚೆಯಲ್ಲಿ ರಾಷ್ಟ್ರೀಯವಾದಿ ಹೋರಾಟಗಳಿಗೆ ಸ್ಥಾನವಿರುವಂತೆ, ಪರಂಪರೆಯಲ್ಲಿ ಅಡಗಿ ಕುಳಿತ ಇಂಥ ಅದೃಶ್ಯಶಕ್ತಿಗಳ ಹಾಗೂ ಗುಪ್ತ ಬಂಡಾಯದ ಮಾದರಿಗಳ ಚರ್ಚೆಗೂ ಮಹತ್ವವಿದೆ. ಇಂಥ ಗುಪ್ತ ಬಂಡಾಯವನ್ನು  ಚರ್ಚಿಸುತ್ತಾ ಅಶೀಶ್‌ನಂದಿ ಬರೆಯುತ್ತಾರೆ:

ದಮನಕ್ಕೊಳಗಾದವನು ಸಂಪೂರ್ಣ ಬಲಿಪಶುವಲ್ಲ. ಅವನ ಒಂದು ಭಾಗ ರಾಜಿಮಾಡಿ ಕೊಳ್ಳುತ್ತದೆ. ಹೊಂದಿಕೊಳ್ಳುತ್ತದೆ. ಇನ್ನೊಂದು ಭಾಗ ಆ ದಮನವನ್ನು ತಿರಸ್ಕರಿಸುತ್ತದೆ, ಅಸಹಕಾರ ತೋರುತ್ತದೆ; ಬುಡಮೇಲು ಗೊಳಿಸುತ್ತದೆ, ಅಥವಾ ನಾಶಮಾಡುತ್ತದೆ. ಈ ಬುಡಮೇಲು ಕೃತ್ಯಗಳನ್ನು ಎಷ್ಟೋಸಲ ಹೊಂದಾಣಿಕೆಯ ಹೆಸರಿನಲ್ಲೇ, ದಾಸ್ಯದ ಮುಸುಕು ಹೊದ್ದೇ ಮಾಡುತ್ತಿರುತ್ತದೆ….

ಹೊಂದಾಣಿಕೆಯ ಪ್ರಕ್ರಿಯೆ ಸಂಸ್ಕೃತಿಯೊಂದು ತನ್ನನ್ನು ತಾನು ಕಳೆದುಕೊಳ್ಳುವ ಮಾರ್ಗವಾಗಿರಬಹುದಾದಂತೆ ತನ್ನನ್ನು ತಾನು ಉಳಿಸಿಕೊಳ್ಳುವ ಮಾರ್ಗವೂ, ಹೊಸ ಶಕ್ತಿಗಳನ್ನು ಜೀರ್ಣಿಸಿಕೊಳ್ಳುವ ಕ್ರಮವೂ ಆಗಿರಬಹುದೆಂಬುದನ್ನು ಮ್ಯಾಲಗೇಸಿ ಜನಾಂಗದ ಕ್ರಿಶ್ಚಿಯನೀಕರಣದ ಅಧ್ಯಯನದಲ್ಲಿ ಮನೋನಿ ತೋರಿಸುತ್ತಾನೆ. ಕ್ರಿಶ್ಚಿಯನ್ ಧರ್ಮವನ್ನು ಕೇವಲ ಸಾಮಾಜಿಕ ಮುಖವಾಡವನ್ನಾಗಿ ಸ್ವೀಕರಿಸಿದ ಮ್ಯಾಲಗೇಸಿ ಪರಂಪರಾವಾದಿಗಳು ತಂತಮ್ಮ ದೇವರುಗಳ ಜೊತೆಗಿನ ಸಂಬಂಧವನ್ನೂ ಮುಂದುವರಿಸಿಕೊಂಡು ಹೋಗುತ್ತಾರೆ. ಇದನ್ನು ಚರ್ಚಿಸುತ್ತಾ, ವಸಾಹತುವಾದ ಆರಂಭಿಸುವ ದೇಶೀ ಸಂಸ್ಕೃತಿಗಳ ನಿರ್ನಾಮ ಹಾಗೂ ಆಧುನಿಕ ನಾಗರಿಕತೆಯ ಪ್ರತಿಷ್ಠಾಪನೆಗಳನ್ನು ದೇಶೀ ಸಂಸ್ಕೃತಿಗಳು ಹಲವು ನೆಲೆಗಳಲ್ಲಿ ಒಪ್ಪಿಕೊಳ್ಳುವಂತೆ ತೋರುತ್ತಲೇ ಗುಪ್ತವಾಗಿ ವಿರೋಧಿಸುತ್ತಿರುವುದನ್ನು ಮನೋನಿ ಗುರುತಿಸುತ್ತಾನೆ. ಈ ದೃಷ್ಟಿಯಿಂದ, ವಸಾಹತೀಕರಣದ ವಿರುದ್ಧ ಹೋರಾಡಿ ಸೋತ ಪರಂಪರೆಯ ಮಾದರಿಗಳಿಗಿಂತ, ‘ತಪ್ಪಿಸಿಕೊಳ್ಳುತ್ತಾ ಹೋರಾಡಿದ’ ಅಥವಾ ‘ಸೋಲೊಪ್ಪಿಕೊಂಡೇ ಹೋರಾಡಿದ’ ಮಾದರಿಗಳು ಕುತೂಹಲಕಾರಿಯಾಗಿ ಕಾಣುತ್ತವೆ ಎಷ್ಟೋ ಸಂದರ್ಭಗಳಲ್ಲಿ ಹೇಡಿತನದಲ್ಲಿರುವುದು ಕೂಡ ಬದುಕಿ ಉಳಿಯುವ ಮಾರ್ಗವೇ ಎಂಬುದಕ್ಕೆ ಅಚೀಬೆಯ ‘ಆರೋ ಆಫ್ ಗಾಡ್’ ಕಾದಂಬರಿಯ ಉಮುವಾರೋವಿನ ಧರ್ಮಗುರು ಎಝೆಲುವಿನ ಬುದ್ದಿವಾದದಲ್ಲೂ ಸೂಚನೆಗಳಿವೆ: ‘ಧೈರ್ಯಶಾಲಿಯಾಗಿರುವುದು ಅಥವಾ ನಿರ್ಭೀತನಾಗಿರುವುದು ಮೆಚ್ಚತಕ್ಕ ವಿಷಯವೇನೋ ನಿಜ. ಆದರೆ ಕೆಲವು ಸಲ ಹೇಡಿಯಾಗಿರುವುದು ಕೂಡ ಒಳ್ಳೆಯದೇ. ಎಷ್ಟೋ ಸಲ ನಾವು ಹೇಡಿಯ ಮನೆಯಂಗಳದಲ್ಲಿ ನಿಂತು ‘ಧೈರ್ಯಶಾಲಿ’ ಮನುಷ್ಯ ಬದುಕಿದ್ದ ಸ್ಥಳದ ಅವಶೇಷಗಳನ್ನು ನೋಡಬೇಕಾದ ಪ್ರಸಂಗ ಬರುತ್ತದೆ. ಎಂದೂ ಯಾವುದಕ್ಕೂ ತಲೆಬಾಗದವನು ಬಲುಬೇಗ ಚಟ್ಟದ ಬೊಂಬಿಗೆ ತಲೆಬಾಗಬೇಕಾಗುತ್ತದೆ’.

ವಸಾಹತುಕಾರನ ಕಣ್ಣಿಗೆ ‘ನಿಷ್ಕ್ರಿಯತೆ’ಯಂತೆ ಕಾಣುವ ಪ್ರತಿಭಟನೆಯ ಮಾರ್ಗಗಳನ್ನು ಹಾಗೂ ಉಳಿದುಕೊಳ್ಳುವ ಮಾರ್ಗಗಳನ್ನು ದೇಶೀ ಸಂಸ್ಕೃತಿಗಳು ಅಳವಡಿಸಿಕೊಳ್ಳುವುದನ್ನು ಈ ಅಂಶಗಳು ಸೂಚಿಸುತ್ತವೆ. ಆಧುನಿಕತೆಗೆ ಯಾವಾಗಲೂ ಸವಾಲಾಗಿ  ಉಳಿದಿರುವ ದೇಶೀ ಸಂಸ್ಕೃತಿಗಳ ಅಂಗಗಳು ಅಥವಾ ಮಾದರಿಗಳು ಕೂಡ ಇವೇ. ಹಾಗೆ ನೋಡಿದರೆ ಎಲ್ಲ ಬಗೆಯ ದಬ್ಬಾಳಿಕೆಯ ಮಾದರಿಗಳಿಗೂ ಈ ಬಗೆಯ ‘ನಿಷ್ಕ್ರಿಯ’ ಎಂಬಂತೆ ಕಾಣುವ ಪ್ರತಿಕ್ರಿಯೆಗಳು ಸವಾಲಾಗಿರುತ್ತವೆಂದು ಕಾಣುತ್ತದೆ.

ಈ ಹಿಂದೆ ಉಲ್ಲೇಖಿಸಲಾದ, ಬಂದೂಕಿನ ಗುರಿಯಿಂದ ತಪ್ಪಿಸಿಕೊಂಡು ಹಾರುವ ಎನೇಕೆ ಹಕ್ಕಿ ಹಾಗೂ ಪರಂಪರೆಯ ಶಕ್ತಿಗಳ ನಡುವಣ ಸಾಮ್ಯ ಅಚೀಬೆಯ ‘ಥಿಂಗ್ಸ್ ಫಾಲ್ ಅಪಾರ್ಟ್’ ಹಾಗೂ ‘ಆರೋ ಆಫ್ ಗಾಡ್’ ಕಾದಂಬರಿಗಳೆರಡರಲ್ಲೂ ಸುಳಿಯುತ್ತದೆ. ಎನೇಕೆ ಹಕ್ಕಿಯಂತೆ ಹಾರುತ್ತಾ, ಅಥವಾ ಚರಿತ್ರೆಯ ಚಲನೆಯ ಪ್ರಶ್ನೆಯೇ ಅಮುಖ್ಯ ಎಂಬಂತೆ ಅದನ್ನು ಮೀರುತ್ತಾ, ವಸಾಹತೀಕರಣದ ಆಘಾತವನ್ನು ದೇಶೀ ಸಂಸ್ಕೃತಿಗಳ ಹಲವು ಅಂಗಗಳು ತಪ್ಪಿಸಿಕೊಳ್ಳುತ್ತವೆ, ನಿಜ. ಆದರೆ, ವಸಾಹತುವಾದವನ್ನು ಮುಖಾ ಮುಖಿಯಾಗುವ, ಪರಕೀಯ ನೋಟಕ್ರಮಗಳು ಎತ್ತಬಹುದಾದ ಹಲವು ನ್ಯಾಯಬದ್ಧ ಹಾಗೂ ವಿಮರ್ಶಾತ್ಮಕ ಪ್ರಶ್ನೆಗಳನ್ನು ಎದುರಿಸುವ, ಒಪ್ಪುವ, ಅಂತರ್ಗತಗೊಳಿಸಿ ಕೊಳ್ಳುವ, ಆಧುನಿಕತೆ ಹಾಗೂ ಪರಂಪರೆಗಳೆರಡರ ಜೀವನಾಶಕ ಗುಣಗಳೆರಡರ ಬಗೆಗೂ ಎಚ್ಚರವಾಗಿರಬಲ್ಲ ಸಂಸ್ಕೃತಿಗಳು ಮಾತ್ರ ಕೇವಲ ವಸಾಹತುವಾದೀ ಸಂಸ್ಕೃತಿಯ ಅನುಕರಣೆ ಗಳಾಗದೆ ಅಥವಾ ಅತಿ ಸಾಂಪ್ರದಾಯಿಕತೆಯ ಚಿಪ್ಪಿನೊಳಹೊಕ್ಕು ಪ್ರತಿಗಾಮಿಯಾಗದೆ, ತಮ್ಮ ಸ್ವಾಯತ್ತ ಅಸ್ತಿತ್ವವನ್ನೂ ಕಾಪಾಡಿಕೊಂಡು ಬರಬಲ್ಲವು.