ಭಾಗ ೧

ನೆಲೆಸುವವನ ಪಾದಗಳು ಎಂದೂ ಕಾಣುವುದಿಲ್ಲ.
                                                                                                ಫ್ರಾಂಜ್ ಫ್ಯಾನನ್

….. ಅಭಿವೃದ್ದಿ, ಬೆಳವಣಿಗೆ, ಚರಿತ್ರೆ, ವಿಜ್ಞಾನ, ತಂತ್ರಜ್ಞಾನ ಮುಂತಾದ ಪರಿಕಲ್ಪನೆಗಳು ಪ್ರಭುತ್ವದ ಹೊಸ ವಿವೇಚನಾ ಕ್ರಮಗಳು ಮಾತ್ರವೇ ಅಲ್ಲ, ಹಿಂಸೆಯ ಹೊಸ ರೂಪಗಳ ನಿಗೂಢೀಕರಣಗಳೂ ಆಗಿವೆ.

                                                                                                ಅಶೀಶ್‌ನಂದಿ

….. ಅದು ಆಗುವುದು ಹೀಗೆಯೇ. ನಮ್ಮ ಕಣ್ಣು ಏನನ್ನೋ ನೋಡುತ್ತದೆ. ನಾವು ಕಲ್ಲೆತ್ತಿಕೊಂಡು ಅದಕ್ಕೆ ಗುರಿ ಇಡುತ್ತೇವೆ. ಆದರೆ ನಮ್ಮ ಕಣ್ಣು ಗುರಿ ತಲುಪಿದ ಹಾಗೆ ಆ ಕಲ್ಲು ಗುರಿ ತಲುಪುವುದು ಕಡಿಮೆ.
ಆಫ್ರಿಕಾದ ಒಂದು ಗಾದೆ

ವಸಾಹತುವಾದದ ಸ್ವರೂಪ

ಏಕಕಾಲಕ್ಕೆ ಒಂದು ಪರಕೀಯ ಸಮಾಜದ ರಾಜಕೀಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಲೋಕಗಳನ್ನೂ ಒಂದು ಜನಾಂಗದ ಪ್ರಜ್ಞೆಯನ್ನೂ ಆಕ್ರಮಿಸಿಕೊಳ್ಳಲು ಪ್ರಯತ್ನಿಸುವ ಆಧುನಿಕ ವಸಾಹತುವಾದ ಆಧುನಿಕ ಪಶ್ಚಿಮ ರೂಪಿಸಿದ ಒಂದು ವಿಶಿಷ್ಟ ಆಕ್ರಮಣವಾದಿ ಸಿದ್ಧಾಂತ. ಯುರೋಪಿಯನ್ ಪುನರುಜ್ಜೀವನ ಘಟ್ಟ ಹಾಗೂ ಬಂಡವಾಳ ಶಾಹಿ ಯುಗದ ಆರಂಭದಲ್ಲಿ ರೂಪುಗೊಂಡ ವಸಾಹತುವಾದ ಮೂಲತಃ ಒಂದು ಯಜಮಾನಿಕೆಯ ವ್ಯವಸ್ಥೆ ಹಾಗೂ ಒಂದು ನೋಟಕ್ರಮ. ಇದು ನಿರ್ದಿಷ್ಟ ಸಂಕಥನಗಳು, ಪರಿಭಾಷೆ, ಧರ್ಮ, ಸಂಸ್ಕೃತಿ, ಯಜಮಾನಿಕೆ, ವ್ಯಾಪಾರ, ಶಿಕ್ಷಣ, ಆಧುನಿಕ ವಿಜ್ಞಾನ, ಅದೃಶ್ಯ ನಿಯಂತ್ರಣ ಇವೆಲ್ಲವೂ ಕೂಡಿ ರೂಪುಗೊಂಡ ವ್ಯವಸ್ಥೆ. ಆದ್ದರಿಂದಲೇ ಚರಿತ್ರೆಯುದ್ದಕ್ಕೂ ನಡೆದಿರುವ ಅನ್ಯ ದೇಶಗಳ ಆಕ್ರಮಣಕ್ಕೂ, ಒಂದು ನಾಡಿನ ಎಲ್ಲ ಅಂಗಗಳನ್ನೂ ವ್ಯಾಪಿಸುವ ಆಧುನಿಕ ವಸಾಹತೀಕರಣಕ್ಕೂ ವ್ಯತ್ಯಾಸವಿದೆ. ಹೀಗಾಗಿ, ವಸಾಹತುಗಳು ಸ್ವತಂತ್ರವಾದ ಮಾತ್ರಕ್ಕೆ ವಸಾಹತುಕಾರ ಹಾಗೂ ವಸಾಹತೀಕರಣಗೊಂಡವನ ಪ್ರಜ್ಞೆ ಅಥವಾ ಮನಸ್ಸನ್ನು ನಿಯಂತ್ರಿಸುವ ವಸಾಹತುವಾದ ಕೊನೆಗೊಳ್ಳುವುದಿಲ್ಲ. ಕಾರಣ, ಸಾಮ್ರಾಜ್ಯವಾದ ಹಾಗೂ ವಸಾಹತುವಾದಗಳೆರಡೂ ಕೇವಲ ನಿರ್ದಿಷ್ಟ ಪ್ರಾಂತಗಳನ್ನು ರಾಜಕೀಯವಾಗಿ ನಿಯಂತ್ರಿಸುವ ಸಾಧನಗಳಷ್ಟೇ ಅಲ್ಲ. ಆದ್ದರಿಂದ ವಸಾಹತೀಕರಣಕ್ಕೊಳಗಾದ ಸಂಸ್ಕೃತಿಗಳಲ್ಲಂತೂ ಅಧಿಕೃತ ನಿರ್ವಸಾಹತೀಕರಣ ಪ್ರಕ್ರಿಯೆ ಆರಂಭವಾಗುವುದೇ ವಸಾಹತುಕಾರನ ನಿರ್ಗಮನದ ನಂತರ. ವಸಾತೋತ್ತರದಲ್ಲೂ ವಸಾಹತುವಾದೀ ಮಾದರಿಗಳು ನಿರಂತರವಾಗಿ ಮುಂದುವರಿ ಯುತ್ತಲೇ ಇರುತ್ತವೆ. ಆಧುನಿಕ ಅಭಿವೃದ್ದಿ ಪಥಗಳಲ್ಲಿ, ಆಧುನಿಕ ಮೌಲ್ಯಗಳಲ್ಲಿ, ಆಧುನಿಕ ಸಂಸ್ಥೆಗಳಲ್ಲಿ, ಶಿಥಿಲಗೊಂಡ ಪಾರಂಪರಿಕ ಸಂಸ್ಥೆಗಳಲ್ಲಿ, ಸಂಸ್ಕೃತಿಯ ವ್ಯಾಖ್ಯಾನಗಳಲ್ಲಿ, ಅಲ್ಲಿ ಹುಟ್ಟುವ ಕಲಾಕೃತಿಗಳಲ್ಲಿ ಹಾಗೂ ವಸಾಹತುವಾದೀ ಸನ್ನಿವೇಶದಲ್ಲಿ ಹುಟ್ಟಿದ ಆಧುನಿಕತೆ ಹಾಗೂ ಪರಂಪರೆಗಳ ನಿರಂತರ ಮುಖಾಮುಖಿಗಳಲ್ಲಿ ವಸಾಹತುವಾದೀ ರಚನೆಗಳು ಹಾಗೂ ನೋಟಕ್ರಮಗಳು ತಮ್ಮ ಇರವನ್ನು ಪ್ರಕಟಿಸುತ್ತಲೇ ಇರುತ್ತವೆ.

ಅಲ್ಲದೆ, ವಸಾಹತುಶಾಹಿಯ ದೈಹಿಕ ಪ್ರವೇಶವನ್ನೇ ಎದುರಿಸದ ಸಂಸ್ಕೃತಿಗಳನ್ನೂ ಪಶ್ಚಿಮದ ಯಜಮಾನೀ ಮಾದರಿಗಳು ಹಲವು ಬಗೆಗಳಲ್ಲಿ ಆಕ್ರಮಿಸುತ್ತಿರುತ್ತವೆ. ಓರಿಯೆಂಟಲ್ ಪರಿಕಲ್ಪನೆಯ ಸೃಷ್ಟಿ ಹಾಗೂ ಓರಿಯೆಂಟಲ್‌ವಾದಗಳೆರಡೂ ಪಶ್ಚಿಮ ರೂಪಿಸಿಕೊಂಡ ನಿಯಂತ್ರಣ ಹಾಗೂ ಯಜಮಾನಿಕೆಗಳ ಸಾಧನಗಳಾಗಿ ನಿರಂತರವಾಗಿ ಮುಂದುವರಿಯುವುದನ್ನು ಓರಿಯೆಂಟಲ್‌ವಾದಿ ರಾಜಕಾರಣದ ಸೂಕ್ಷ್ಮ ರೂಪಗಳನ್ನು ಶೋಧಿಸುವ ಎಡ್ವರ್ಡ್ ಸೈದನ ಅಧ್ಯಯನ ತೋರಿಸುತ್ತದೆ. ಸೈದನ ಪ್ರಕಾರ ಓರಿಯೆಂಟ್ (ಅಥವಾ ‘ಪ್ರಾಚೀನ’ ಅಥವಾ ‘ಹಳೆಯ ಜಗತ್ತು’) ಎಂಬ ಸೃಷ್ಟಿಯೇ  ಯುರೋಪಿನ ಆಲೋಚನಾ ಕ್ರಮದ ಫಲ. ಯುರೋಪು ತಾನು ‘ಓರಿಯೆಂಟ್’ ಎಂದು ಕರೆದ ಜಗತ್ತಿನ ಬಗ್ಗೆ ವ್ಯಾಖ್ಯಾನ ಮಾಡುವುದು, ಆ ವ್ಯಾಖ್ಯಾನಗಳನ್ನು ಸಮರ್ಥಿಸುವುದು, ಆ ಜಗತ್ತನ್ನು ವರ್ಣಿಸುವುದು, ಅದನ್ನು ಕುರಿತು ಬೋಧಿಸುವುದು ಹಾಗೂ ಅಲ್ಲಿ ನೆಲೆಸುವುದು ಮತ್ತು ಆಳುವುದು… ಈ ಎಲ್ಲ ಅಂಶಗಳು ಸೇರಿ ರೂಪುಗೊಂಡ ಒಂದು ನೋಟಕ್ರಮ ಅಥವಾ ಸಂಸ್ಥೆಯೇ ಓರಿಯೆಂಟಲ್‌ವಾದ. ಅಂದರೆ, ತನಗಿಂತ ಭಿನ್ನವಾದ ಇನ್ನೊಂದು ಜಗತ್ತನ್ನು ನೋಡುವ ಕ್ರಮದಲ್ಲಿಯೇ ಆ ಜಗತ್ತನ್ನು ತನಗೆ ಸರಿ ಕಂಡಂತೆ ನಿರ್ಮಿಸಿಕೊಳ್ಳುವ ಹಾಗೂ ಅದನ್ನು ಆಳುವ ಕ್ರಮವೂ ಇರುತ್ತದೆ. ಯುರೋಪಿನ ಹಲವು ತಲೆಮಾರುಗಳ ಬುದ್ದಿಜೀವಿ ಗಳು, ಕಲಾವಿದರು, ವ್ಯಾಖ್ಯಾನಕಾರರು, ಲೇಖಕರು ಹಾಗೂ ರಾಜಕಾರಣಿಗಳು ಕೆಲವು ನಿರ್ದಿಷ್ಟ ಬಗೆಯ ಅನಿಸಿಕೆಗಳನ್ನು ಹಾಗೂ ಸಿದ್ಧಮಾದರಿಗಳನ್ನು ‘ಸತ್ಯ’ವೆಂದು ಪ್ರತಿ ಪಾದಿಸಿದ ರೀತಿಯಿಂದಾಗಿ ಯುರೋಪಿಗೆ ‘ಪ್ರಾಚೀನ’ ಎಂದು ತಾನು ಕರೆದ ಜಗತ್ತಿನ ಮೇಲೆ ಯಜಮಾನಿಕೆ ಸುಲಭವಾಯಿತು ಎಂಬುದು ಸೈದನ ವಾದ. ಇದೇ ವಾದದ ಆಧಾರದ ಮೇಲೆ, ಭಾರತದಲ್ಲಿ ಇಂಗ್ಲಿಷ್ ಸರಕಾರದ ಬೆಂಬಲದಿಂದ ನಡೆದ ಓರಿಯೆಂಟಲ್‌ವಾದೀ ಸಂಶೋಧನೆಯೇ ಆಂಗ್ಲವಾದಿಗಳಿಗೆ ಭಾರತೀಯ ಸಂಸ್ಕೃತಿಯ ಆಕ್ರಮಣಕ್ಕೆ ಸಾಧನವಾದದ್ದನ್ನು ಗೌರಿ ವಿಶ್ವನಾಥನ್ ತಮ್ಮ ‘ಮಾಸ್ಕ್ಸ್ ಆಫ್ ಕಾಂಕ್ವೆಸ್ಟ್’ (ಆಕ್ರಮಣದ ಮುಖವಾಡಗಳು) ಪುಸ್ತಕದಲ್ಲಿ ವಿಸ್ತೃತವಾಗಿ ಚರ್ಚಿಸುತ್ತಾರೆ.

ಈ ಹಿನ್ನೆಲೆಯಲ್ಲಿ, ಒಮ್ಮೆ ವಸಾಹತುವಾಗಿದ್ದ ಆಫ್ರಿಕನ್ ಸಮಾಜದಲ್ಲಿ ಸೃಷ್ಟಿಯಾಗುವ ಸಾಹಿತ್ಯಕೃತಿಗಳ ಅಧ್ಯಯನದಲ್ಲಿ ವಸಾಹತುವಾದದ ಪರಿಣಾಮಗಳನ್ನು ವಿಶ್ಲೇಷಿಸುವ ನಿರ್ವಸಾಹತೀಕರಣ ಸಿದ್ಧಾಂತಗಳ ಚರ್ಚೆ ಕೇಂದ್ರಸ್ಥಾನದಲ್ಲಿರಬಲ್ಲದು. ವಸಾಹತೋತ್ತರ ಆಫ್ರಿಕಾ ಹಾಗೂ ಭಾರತದಲ್ಲಿ ಮತ್ತೆ ಮತ್ತೆ ಚರ್ಚಿತವಾಗುತ್ತಿರುವ ಫ್ರಾಂಜ್ ಫ್ಯಾನನ್, ಸಾರ್ತ್ರ್, ಆಲ್ಬರ್ಟ್ ಮೆಮ್ಮಿ, ಮನೋನಿ, ಗಾಂಧಿ, ಅಶೀಶ್ ನಂದಿ, ನುಗುಗಿ, ಎಡ್ವರ್ಡ್ ಸೈದ್, ಅಲಿ ಮುಝರಾಯ್ ಮೊದಲಾದವರ ವಸಾಹತುವಾದ ಕುರಿತ ಗ್ರಹಿಕೆಗಳು ಆಫ್ರಿಕನ್ ಸಮಾಜಗಳ ಸಾಹಿತ್ಯ ಕೃತಿಗಳ ಗ್ರಹಿಕೆಗೂ ಬಹುಮುಖ್ಯ ತಾತ್ವಿಕ ನೆಲೆಗಳನ್ನು ಒದಗಿಸಬಲ್ಲವು. ಈ ಅಧ್ಯಾಯ ಅಂಥ ವಿಸ್ತೃತ ತಾತ್ತ್ವಿಕ ನೆಲೆಯನ್ನು ಗ್ರಹಿಸುವ ಒಂದು ಪ್ರಯತ್ನ.

‘ವಸಾಹತುವಾದೀ ಹಿಂಸೆ ಉಳಿದೆಲ್ಲ ಬಗೆಯ ಸಾಂಸ್ಥಿಕ ಹಿಂಸೆಗಿಂತ ಭೀಕರವಾದದ್ದು’ ಇದು ಅಶೀಶ್‌ನಂದಿಯವರ ನಿಲುವು. ಈ ನಿಲುವಿನಿಂದ ವಸಾಹತುವಾದವನ್ನು ಪರಿಶೀಲಿಸಿ ದರೆ ಅದು ಸೃಷ್ಟಿಸುವ ಹಿಂಸೆಯ ಹಲವು ಸ್ತರಗಳು ಕಾಣತೊಡಗುತ್ತವೆ: ವಸಾಹತುವಾದ ನಾಗರೀಕರಣದ ಹೆಸರಿನಲ್ಲಿ ದೇಶೀ ನಾಗರಿಕತೆಗಳನ್ನು ನಿರ್ನಾಮ ಮಾಡಲೆತ್ನಿಸುತ್ತಿರುತ್ತದೆ. ಧರ್ಮ ಪ್ರಸಾರದ ಹೆಸರಿನಲ್ಲಿ ಅದು ದೇಶೀ ಧರ್ಮಗಳನ್ನು ಅಧೀನಗೊಳಿಸಿಕೊಳ್ಳಲೆತ್ನಿ ಸುತ್ತಿರುತ್ತದೆ. ಯಂತ್ರಮುಖೀ ನಾಗರಿಕತೆ, ಹೊಸ ಪ್ರಗತಿ ತತ್ತ್ವ ಹಾಗೂ ಆಧುನಿಕ ಬಂಡವಾಳಶಾಹಿ ನೆಲೆಗಳಲ್ಲಿ ನಿಂತು ದೇಶೀ ಸಾಂಪ್ರದಾಯಿಕ ಸಮಾಜಗಳನ್ನು ಮುಖಾ ಮುಖಿಯಾಗುತ್ತದೆ. ಈ ಮುಖಾಮುಖಿಯಲ್ಲಿ, ಎರಡು ಸಂಸ್ಕೃತಿಗಳ ಸಹಜ ಸಂಪರ್ಕದಿಂದ ಉಂಟಾಗುವ ಪರಿಣಾಮಗಳು ಹಾಗೂ ಒಂದು ಸಂಸ್ಕೃತಿ ಇನ್ನೊಂದು ಸಂಸ್ಕೃತಿಯಿಂದ ತನಗೆ ಬೇಕಾದದ್ದನ್ನು ಪಡೆಯುವ ಕ್ರಿಯೆಗಳೂ ಇರುತ್ತವೆ. ಆದರೆ ಇಲ್ಲಿ ಹೇರಿಕೆಯ ಕ್ರಿಯೆಯೇ ಪ್ರಧಾನವಾಗಿರುವುದನ್ನು ಮರೆಯಬಾರದು. ತನ್ನ ಸಾಂಸ್ಕೃತಿಕ ಹಿರಿಮೆಯ ಪ್ರತಿಷ್ಠಾಪನೆಯ ಮೂಲಕ ವಸಾಹತುವಾದ ದೇಶೀ, ಜಾನಪದೀಯ ಸಾಂಸ್ಕೃತಿಕ ಮಾದರಿಗಳನ್ನು ಕನಿಷ್ಠವಾಗಿಸಲೆತ್ನಿಸುತ್ತಿರುತ್ತದೆ. ದೇಶೀ ಮಾನವರನ್ನು ಅರೆಮಾನವರನ್ನಾಗಿ ಸುತ್ತಿರುತ್ತದೆ; ವಸಾಹತುಕಾರ ಹಾಗೂ ವಸಾಹತೀಕರಣಗೊಂಡವರಿಬ್ಬರನ್ನೂ ಅದು ನಿರ್ಮಾನವೀಕರಣ ಗೊಳಿಸುತ್ತಿರುತ್ತದೆ. ವಸಾಹತುವಾದೀ ದಮನದ ಮಾದರಿಗಳು ದೇಶೀ ಸಮಾಜಗಳಲ್ಲಿ ಹೊಸ ಬಗೆಯ ದಮನದ ಮಾದರಿಗಳನ್ನು- ಸ್ತ್ರೀಯರು, ಅಲ್ಪಸಂಖ್ಯಾತರು, ಕೆಳಜಾತಿಗಳ ದಮನಗಳ ಹೊಸ ರೂಪಗಳೂ ಸೇರಿದಂತೆ-ಸೃಷ್ಟಿಸುತ್ತಿರುತ್ತವೆ. ವಸಾಹತುವಾದದ ಚರಿತ್ರೆಯುದ್ದಕ್ಕೂ ‘ಕಾಲೊನೈಸರ್’ (ವಸಾಹತುಕಾರ) ಎಂಬ ಪದಕ್ಕೆ ‘He’(ಅವನು) ಎಂಬ ಸರ್ವನಾಮವನ್ನೇ ಬಳಸಿರುವುದು ಇಡೀ ವಸಾಹತೀಕರಣದ ಚಟುವಟಿಕೆಯಲ್ಲಿ ಗಂಡಿನ ಮೇಲುಗೈಯನ್ನೇ ಸೂಚಿಸುತ್ತದೆಂದು ಸ್ತ್ರೀವಾದಿಗಳು ಹೇಳುತ್ತಾರೆ.

ಆದರೆ ವಸಾಹತುವಾದವನ್ನು ದಮನದ ಸಾಧನವನ್ನಾಗಿ ಮಾತ್ರ ನೋಡುವವರು ಅದು ಸಾಂಪ್ರದಾಯಿಕ ಸಮಾಜದ ಹಿಂಸೆಗೊಳಗಾದ ಅನೇಕ ವರ್ಗಗಳಿಗೆ ಬಿಡುಗಡೆಯ ಮಾರ್ಗವನ್ನು ತೆರೆಯುವುದನ್ನು ಮರೆಯುತ್ತಾರೆ. ಅಲ್ಲದೆ, ತನ್ನೆಲ್ಲ ಮಾದರಿಗಳನ್ನು ದೇಶೀ ಸಂಸ್ಕೃತಿಗಳು ಸಂಪೂರ್ಣ ವಿಧೇಯತೆಯಿಂದ ಒಪ್ಪಿಕೊಳ್ಳುವಂತೆ ವಸಾಹತುವಾದ ಮಾಡಲಾರದು. ತನ್ನ ಮಾದರಿಗಳಿಗೆ ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಸಮರ್ಥನೆಗಳನ್ನು ವಸಾಹತುವಾದ ಸಮರ್ಥವಾಗಿ ಸೃಷ್ಟಿಸಿಕೊಳ್ಳುತ್ತಿರುತ್ತಾದರೂ, ದೇಶೀ ಸಾಂಪ್ರದಾಯಿಕ ದಮನದ ಬೇರುಗಳಿಗೆ ಅದು ನಿರ್ಣಾಯಕ ಹೊಡೆತ ಕೊಡುತ್ತದೆ. ಭಾರತದಂಥ ಸಮಾಜಗಳಲ್ಲಿ ಜಾತಿಪದ್ಧತಿಯ ಖಾಯಂ ಅಸಮಾನತೆಯನ್ನು ಕದಲಿಸತೊಡಗುತ್ತದೆ. ವಸಾಹತುವಾದದ ಜೊತೆಗೇ ಬಂದ ಆಧುನಿಕತೆ ಅಸ್ಪೃಶ್ಯರಿಗೆ, ಸ್ತ್ರೀಯರಿಗೆ ವಿಮೋಚನೆಯ ಹಾದಿಯಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ವಸಾಹತೀಕರಣದ ಸ್ವರೂಪಗಳನ್ನು ಚರ್ಚಿಸಬೇಕು.

ಪಶ್ಚಿಮ ರೂಪಿಸಿದ ವಸಾಹತುವಾದೀ ಸಂಕಥನಗಳು

ಸಾಮ್ರಾಜ್ಯವಾದದಂತೆ ವಸಾಹತುವಾದದಲ್ಲೂ ಆಕ್ರಮಣದ ಹಂಬಲವೇ ಪ್ರಧಾನವಾಗಿದ್ದರೂ ವಸಾಹತುವಾದಕ್ಕೆ ಸಮಸ್ತ ನಾಗರಿಕತೆಗಳ ಹಾಗೂ ಜನಾಂಗಗಳ ಏಕತೆಯ ಕನಸೂ ಇತ್ತು. ಈ ಹಿನ್ನೆಲೆಯಲ್ಲಿ ವಸಾಹತುವಾದೀ ಆಕ್ರಮಣಕ್ಕೆ ಹಲವು ಬಗೆಯ ನ್ಯಾಯಬದ್ಧತೆಗಳನ್ನೂ, ಸಮರ್ಥನೆಗಳನ್ನೂ ಪಶ್ಚಿಮ ಹುಟ್ಟುಹಾಕಿದೆ. ಅವುಗಳ ಸಂಗ್ರಹ ರೂಪ ಇಲ್ಲಿದೆ:

೧. ‘ಬಿಳಿಯ ಮನುಷ್ಯನ ಹೊರೆ’(‘Whiteman’s burden’) ಸಿದ್ಧಾಂತದ ಪ್ರಕಾರ ‘ಹಿಂದುಳಿದ’ ಜನಾಂಗಗಳು ಹಾಗೂ ‘ಹಿಂದುಳಿದ’ ದೇಶಗಳನ್ನು ‘ನಾಗರಿಕ’ಗೊಳಿಸ ಬೇಕಾದದ್ದು ಬಿಳಿಯರ ಹೊಣೆ. ಫ್ರೆಂಚ್ ವಸಾಹತುವಾದಿಗಳು ತಾವು ಹಾಗೂ ತಮ್ಮ ನೆರೆಹೊರೆಯ ದೇಶಗಳು ರೋಮನ್ ನಾಗರಿಕತೆಯಿಂದ ಪ್ರೇರಣೆಗಳನ್ನು ಪಡೆದಂತೆ, ಇತರ ದೇಶಗಳಿಗೆ ನಾಗರಿಕತೆಯನ್ನು ಪ್ರಸಾರ ಮಾಡುವುದು ತಮ್ಮ ಹೊಣೆಯೆಂದು ನಂಬಿದ್ದರು. ಆಫ್ರಿಕಾದ ಸಂದರ್ಭದಲ್ಲಿ ‘ಅನಾಗರಿಕ’ನನ್ನು(‘ಸ್ಯಾವೇಜ’ನ್ನು) ನಾಗರಿಕರಣ ಗೊಳಿಸುವ ಹೊಣೆ ಇದ್ದಂತೆ, ಭಾರತದ ಸಂದರ್ಭದಲ್ಲಿ ‘ಅರ್ಧ ಮಗು- ಇನ್ನರ್ಧ ಅನಾಗರಿಕ’ನನ್ನು ಪ್ರಬುದ್ಧಗೊಳಿಸುವ ಹೊಣೆ ತಮ್ಮದೆಂದು ಬ್ರಿಟಿಷ್ ವಸಾಹತುವಾದಿಗಳು ನಂಬಿದ್ದರು. ಶ್ರೇಷ್ಠ ಇಂಗ್ಲಿಷ್ ಕಾದಂಬರಿಕಾರರಲ್ಲೊಬ್ಬನಾದ ಜೋಸೆಫ್ ಕಾನ್ರಾಡ್ ತನ್ನ ಕಾದಂಬರಿಗಳಲ್ಲಿ ಬ್ರಿಟಿಷ್ ವಸಾಹತುವಾದದ ಹಿನ್ನೆಲೆಯಲ್ಲಿ ಒಂದು ಆದರ್ಶವಿತ್ತು ಎಂದು ಪ್ರತಿಪಾದಿಸಿದ. ಆರಂಭ ಘಟ್ಟದ ‘ಸಾಹಸಿ’ ವಸಾಹತುವಾದಿಗಳು ಕೂಡ ಹೀಗೆಯೇ  ಯೋಚಿಸಿದ ಅನೇಕ ಸಂದರ್ಭಗಳಿವೆ.

೨. ಕಾರ್ಲ್‌ಮಾರ್ಕ್ಸ್ ಭಾರತದ ವಸಾಹತೀಕರಣವನ್ನು ಸಮರ್ಥಿಸುತ್ತಾ, ಇಂಗ್ಲೆಂಡನ್ನು  ‘ಚರಿತ್ರೆಯ ಅಪ್ರಜ್ಞಾಪೂರ್ವಕ ಸಾಧನ’ ಎನ್ನುತ್ತಾನೆ. ಮಾರ್ಕ್ಸ್‌ನ ಪ್ರಕಾರ, ಇಂಗ್ಲೆಂಡ್ ಸಾಧಿಸಬೇಕಾದ ಎರಡು ಗುರಿಗಳಿದ್ದವು: ಒಂದು, ಹಳೆಯ ಏಷ್ಯಾಟಿಕ್ ಸಮಾಜದ ನಿರ್ನಾಮ. ಎರಡು, ಏಷ್ಯಾದಲ್ಲಿ ಪಾಶ್ಚಿಮಾತ್ಯ ಸಮಾಜದ ನಿರ್ಮಾಣ. (ಬಿಪಿನ್ ಚಂದ್ರಪಾಲ್ ಅವರ ಪ್ರಕಾರ, ಮಾರ್ಕ್ಸ್ ಈ ಹೇಳಿಕೆ ನೀಡುವ ಹೊತ್ತಿಗೆ ವಸಾಹತು ವಾದದ ‘ಮುಕ್ತ ವ್ಯಾಪಾರ’ದ ಬಂಡವಾಳಶಾಹಿ ಮುಖ ಇನ್ನೂ ಸ್ಪಷ್ಟವಾಗಿ ಕಾಣಿಸಿಕೊಂಡಿರಲಿಲ್ಲ).

೩. ಪ್ರಜಾಪ್ರಭುತ್ವಕ್ಕೆ ಇನ್ನೂ ಸಿದ್ಧವಾಗದ ಸಮಾಜಗಳನ್ನು ಅದಕ್ಕಾಗಿ ಸಿದ್ಧಗೊಳಿಸುವುದೇ ವಸಾಹತುವಾದೀ ಸರ್ಕಾರದ ಹೊಣೆ ಎಂದು ವಸಾಹತುವಾದದ ಉಗ್ರ ಸಮರ್ಥಕನಾದ ಜೇಮ್ಸ್ ಮಿಲ್ ವಾದಿಸುತ್ತಿದ್ದ. ಈಗಾಗಲೇ ಪ್ರಬುದ್ಧ ಸಮಾಜವನ್ನು ರೂಪಿಸಿಕೊಂಡಿರುವ ಬ್ರಿಟನ್ ಕಿರಿಯ, ಅಪ್ರಬುದ್ಧ ಹಾಗೂ ಆದಿಮ ಸ್ಥಿತಿಯ ಭಾರತೀಯ ಸಮಾಜವನ್ನು ಪ್ರಬುದ್ಧತೆ ಹಾಗೂ ಪ್ರೌಢತೆಯತ್ತ ಕರೆದೊಯ್ಯುತ್ತದೆ ಎಂದು ಮಿಲ್ ನಂಬಿದ್ದ.

೪. ನಾಗರಿಕತೆಯೆಂದರೆ ಪಶ್ಚಿಮದ ನಾಗರಿಕತೆಯೆಂಬ ಯಜಮಾನೀ ನಿಲುವಿನಂತೆಯೇ, ಧರ್ಮವೆಂದರೆ ಕ್ರಿಶ್ಚಿಯನ್ ಧರ್ಮ ಮಾತ್ರ ಎಂಬ ನಿಲುವಿನಿಂದ ಹೊರಟ ಧಾರ್ಮಿಕ ಪ್ರಸಾರದ ಉದ್ದೇಶವೂ ವಸಾಹತೀಕರಣದ ಒಂದು ಭಾಗ. ‘ದೇವರು ಭಾರತವನ್ನು  ನಮಗೆ ವಹಿಸಿಕೊಟ್ಟಿದ್ದಾನೆ, ಅದನ್ನು ಬಿಟ್ಟುಕೊಡಲು ನಮಗೆ ಹಕ್ಕಿಲ್ಲ’ ಎಂಬ ಆಕ್ಸ್‌ಫರ್ಡ್‌ನ ಪಾದ್ರಿ ರಿಚರ್ಡ್ ಕಾಂಗ್ರೀವರ ಪ್ರಾತಿನಿಧಿಕ ನಿಲುವಿನಲ್ಲಿ ವಸಾಹತುವಾದಕ್ಕೆ ದೈವೀ ಹಾಗೂ ಧಾರ್ಮಿಕ ಪ್ರೇರಣೆಗಳನ್ನೂ ಸೃಷ್ಟಿಸಲಾಗಿರುವುದನ್ನು ಗಮನಿಸಬೇಕು.

೫. ಆಫ್ರಿಕನ್ ನಾಗರಿಕತೆಯನ್ನು, ಅದರ ಬುಡಕಟ್ಟು ತಳಹದಿಯ ಸಮಾಜವನ್ನು ಹಾಗೂ ಮೌಖಿಕ ಪ್ರಧಾನ ಪರಂಪರೆಯನ್ನು ‘ಅನಾಗರಿಕ’ವೆಂದು ತಳ್ಳಿಹಾಕುವುದು ವಸಾಹತುವಾದಿಗಳಿಗೆ ಸುಲಭವಾಗಿತ್ತು. ಆದರೆ ಯುರೋಪಿಯನ್ ಕಣ್ಣಿಗೆ ಅದೆಷ್ಟೇ ವಿಚಿತ್ರವಾಗಿ ಕಂಡರೂ, ಭಾರತಕ್ಕೆ ಸುದೀರ್ಘ ನಾಗರಿಕತೆಯ ಚರಿತ್ರೆಯಿರುವುದನ್ನಂತೂ ವಸಾಹತುವಾದ ಒಪ್ಪಿಕೊಳ್ಳಬೇಕಾಯಿತು. ಆದ್ದರಿಂದ ಭಾರತೀಯ ನಾಗರಿಕತೆಯ ವೈಭವ ಭೂತಕ್ಕೆ ಮಾತ್ರ ಸೇರಿದ್ದೆಂದೂ, ವರ್ತಮಾನದ ಭಾರತ ರೋಗಗ್ರಸ್ತವೆಂದೂ ವಸಾಹತೀಕರಣಕ್ಕೆ ಸಮರ್ಥನೆಯನ್ನು ಸೃಷ್ಟಿಸಲಾಯಿತು.

೬. ಶ್ರೇಷ್ಠ ಜನಾಂಗ ಹಾಗೂ ಕನಿಷ್ಠ ಜನಾಂಗ ಎಂಬ ವರ್ಗೀಕರಣವನ್ನು ಹುಟ್ಟು ಹಾಕಿದ ಜನಾಂಗೀಯ ಸಿದ್ಧಾಂತ ಕೂಡ ವಸಾಹತುವಾದಕ್ಕೆ ತಕ್ಕ ಸಮರ್ಥನೆಯನ್ನು  ಒದಗಿಸಿತು. ಎಡ್ವರ್ಡ್ ಸೈದ್ ಪ್ರಕಾರ, ಸಾಮ್ರಾಜ್ಯಶಾಹಿಯ ವಕ್ತಾರರು ‘ನಾವು’ ಮತ್ತು ‘ಅವರು’ (ಅಂದರೆ ‘ಯುರೋಪಿಯನ್ನರು’ ಮತ್ತು ‘ಇತರರು’) ಎಂಬ ಮೇಲು-ಕೀಳುಗಳ ತಾತ್ತ್ವಿಕ ವರ್ಗೀಕರಣದ ಪರಿಭಾಷೆಯನ್ನು ಕಾದಂಬರಿ, ರಾಜಕೀಯವಿಜ್ಞಾನ, ಜನಾಂಗೀಯ ಸಿದ್ಧಾಂತ ಹಾಗೂ ಪ್ರವಾಸಕಥನಗಳ ಮೂಲಕ ಸೃಷ್ಟಿಸಿದರು. ಯುರೋಪ್‌ಕೇಂದ್ರಿತ ಸಾಂಸ್ಕೃತಿಕ ಮಾದರಿಗಳು ಹಾಗೂ ‘ದೇಶೀ’ ಸಾಂಸ್ಕೃತಿಕ ಮಾದರಿಗಳು ಎಂಬ ವಿರುದ್ಧ ಜೋಡಿಪದವನ್ನು(binary opposites) ನಿರ್ಮಾಣ ಮಾಡುವ ಮೂಲಕ ಯುರೋಪಿನ ಭಾಷೆ, ಕಲೆ, ಚರಿತ್ರೆ ಎಲ್ಲವೂ ‘ದೇಶೀ’ ಮಾದರಿಗಳಿಗಿಂತ ಶ್ರೇಷ್ಠ ಎಂದು ಪ್ರತಿಪಾದಿಸುವ ವಸಾಹತುವಾದೀ ಸಂಕಥನ ಕೇಂದ್ರ ರಂಗಕ್ಕೆ ಬಂದಿತು.

ಫ್ಯೂಕೋನ ‘ಡಿಸ್ಕೋರ್ಸ್’(ಸಂಕಥನ) ಕಲ್ಪನೆಯನ್ನಾಧರಿಸಿ ಎಡ್ವರ್ಡ್ ಸೈದ್ ವಸಾಹತುವಾದೀ ಸಂಕಥನ ಎಂಬ ಪರಿಕಲ್ಪನೆಯನ್ನು ಚಾಲ್ತಿಗೆ ತಂದ. ‘ಡಿಸ್ಕೋರ್ಸ್’ ಎಂದರೆ ಮೂಲತಃ ‘ಬಳಕೆಯಲ್ಲಿರುವ ಭಾಷೆ’ ಎಂದರ್ಥ. ಈ ಕಲ್ಪನೆಯನ್ನು ಹೊಸದಾಗಿ ವಿವರಿಸಿದ ಫ್ಯೂಕೋನ ಪ್ರಕಾರ, ಡಿಸ್ಕೋರ್ಸ್ ಎಂದರೆ ಜಗತ್ತನ್ನು ಗ್ರಹಿಸುವ ವ್ಯಾಖ್ಯಾನಗಳ ಒಂದು ವ್ಯವಸ್ಥೆ. ಆದ್ದರಿಂದ ಯಾರು ಒಂದು ಕಾಲದ ಡಿಸ್ಕೋರ್ಸ್‌ಅನ್ನು (ಸಂಕಥನವನ್ನು) ನಿಯಂತ್ರಿಸುವರೋ ಅವರು ಆ ಕಾಲದಲ್ಲಿ ಅಧಿಕಾರ ಸ್ಥಾಪಿಸುತ್ತಾರೆ ಎಂಬುದು ಸ್ಥೂಲವಾಗಿ ಫ್ಯೂಕೋನ ವಾದ. ಈ ಹಿನ್ನೆಲೆಯಲ್ಲಿ ನೋಡಿದಾಗ ಚರಿತ್ರೆ, ಭಾಷೆ, ಆಧುನಿಕತೆ, ಧರ್ಮ, ಸಾಹಿತ್ಯ, ವಿಜ್ಞಾನ, ವಸಾಹತುಕಾರ ಹಾಗೂ ವಸಾಹತೀಕರಣಗೊಂಡವನ ನಡುವಣ ಸಂಬಂಧಗಳು- ಈ ಎಲ್ಲದರ ಬಗ್ಗೆ ವಸಾಹತುವಾದ ನಿರ್ದಿಷ್ಟ ವ್ಯಾಖ್ಯಾನಗಳನ್ನು ರೂಪಿಸುತ್ತಿರುತ್ತದೆ. ಈ ಎಲ್ಲ ವ್ಯಾಖ್ಯಾನಗಳು ಹಾಗೂ ಕಥನಗಳು ಒಗ್ಗೂಡಿ ಒಂದು ಸಂಯುಕ್ತ ಕಥನ (ಅಂದರೆ, ಸಂಕಥನ) ನಿರ್ಮಾಣವಾಗುತ್ತದೆ. ಈ ಸಂಕಥನ ಒಂದು ರಾಜಕೀಯ ವ್ಯವಸ್ಥೆಯನ್ನು ರೂಪಿಸುತ್ತದೆ. ಜೊತೆಗೆ ಆರ್ಥಿಕ ವಸಾಹತುವಾದವಂತೂ ಎಲ್ಲ ಬಗೆಯ ಸಾಮಾಜಿಕ, ಸಾಂಸ್ಕೃತಿಕ ಮುಖಗಳನ್ನು ನಿಯಂತ್ರಿಸುತ್ತಿರುತ್ತದೆ.

ವಸಾಹತುವಾದೀ ಸಂಕಥನಗಳ ಮುಖಾಮುಖಿ

ವಸಾಹತುಕಾರ ಸೃಷ್ಟಿಸಿದ ಇಂಥ ಅಧಿಕಾರಸ್ಥ ಸಂಕಥನಗಳನ್ನು ಅಥವಾ ಪುರಾಣಗಳನ್ನು ಪ್ರಶ್ನಿಸುವುದು ಅಥವಾ ನಿರ್ಪುರಾಣೀಕರಣಗೊಳಿಸುವುದು(demythification) ವಸಾಹತು ವಿರೋಧೀ ಸಿದ್ಧಾಂತಗಳ ಪ್ರಧಾನ ಆಶಯಗಳಲ್ಲೊಂದು. ಆಫ್ರಿಕನ್ ಚಿಂತಕೊಅಲಿ ಮುಝರಾಯ್ ಹೇಳುವಂತೆ, ಒಂದು ಜನಾಂಗ ಆರಂಭಿಸಿದ ನಾಗರೀಕರಣದ ಧರ್ಮಯುದ್ಧ ಇನ್ನೊಂದು ಜನಾಂಗಕ್ಕೆ ಹುತಾತ್ಮ ಪಟ್ಟವನ್ನು ತರುವ ರೀತಿಯನ್ನೂ, ವಸಾಹತೀಕರಣಕ್ಕೆ ದೇಶೀ ಸಂಸ್ಕೃತಿಗಳು ಪ್ರತಿಕ್ರಿಯಿಸಿದ ವಿಭಿನ್ನ ಬಗೆಗಳನ್ನೂ ಈ ಸಿದ್ಧಾಂತಗಳು ಗ್ರಹಿಸಲೆತ್ನಿಸು ತ್ತವೆ. ವಸಾಹತುವಾದೀ ಹಿಂಸೆಯ ಸ್ವರೂಪಗಳು ಹಾಗೂ ವಸಾಹತು ಘಟ್ಟದ ಪಲ್ಲಟಗಳ ಹಲವು ಸೂಕ್ಷ್ಮಗಳು ಅರಿವಾಗುವುದು ಕೂಡ ಇಂಥ ಸಿದ್ಧಾಂತಗಳ ಮೂಲಕವೇ.

ಮೂಲತಃ ವಸಾಹತುವಿರೋಧೀ ನೆಲೆಯಿಂದಲೇ ವಸಾಹತುವಾದೀ ಅನುಭವವನ್ನು  ಗ್ರಹಿಸುವ ಈ ಸಿದ್ಧಾಂತಗಳಲ್ಲಿ ಎರಡು ಮಾದರಿಗಳಿವೆ. ಉದಾಹರಣೆಗೆ, ಗಾಂಧಿ, ಅಶೀಶ್ ನಂದಿ, ಅಲಿ ಮುಝರಾಯ್ ಅಥವಾ ಚಿನುವ ಅಚೀಬೆಯಂಥ ಲೇಖಕರು ವಸಾಹತುವಾದವನ್ನು  ಮೂಲತಃ  ‘ಪಶ್ಚಿಮದ ಆಧುನಿಕತೆ’ ಮತ್ತು ‘ಆಧುನಿಕ ನಾಗರಿಕತೆ’ಯನ್ನಾಗಿ ಹಾಗೂ ಪಶ್ಚಿಮವನ್ನೂ, ಪಶ್ಚಿಮೇತರ ಜಗತ್ತನ್ನೂ ಒಟ್ಟಾರೆಯಾಗಿ ಕಬಳಿಸುತ್ತಿರುವ ಶಕ್ತಿಯನ್ನಾಗಿ ಗ್ರಹಿಸುತ್ತಾರೆ. ಇನ್ನೊಂದು ಮಾದರಿಯ ವಸಾಹತುವಿರೋಧೀ ಸಿದ್ಧಾಂತಗಳ ನೆಲೆಗಳು ಕೊಂಚ ಭಿನ್ನ. ಪಶ್ಚಿಮದ ಮನಃಶಾಸ್ತ್ರೀಯ ನೆಲೆಗಳಿಂದ ವಸಾಹತುವಾದೀ ಸನ್ನಿವೇಶವನ್ನು  ಅರ್ಥೈಸುವ ಓ.ಮನೋನಿ, ವರ್ಗ ಹೋರಾಟದ ನೆಲೆಗಳಿಂದ ವಸಾಹತುವಾದವನ್ನು ವ್ಯಾಖ್ಯಾನಿಸುವ ಫ್ಯಾನನ್, ವಸಾಹತುವಾದದ ಆರ್ಥಿಕ ಹಾಗೂ ಮನಃಶಾಸ್ತ್ರೀಯ ಆಯಾಮ ಗಳಿಗೆ ಒತ್ತು ನೀಡುವ ಆಲ್ಬರ್ಟ್ ಮೆಮ್ಮಿ ಮುಂತಾದವರು ಒಟ್ಟಾರೆಯಾಗಿ ಪಶ್ಚಿಮದ ಮಾನದಂಡಗಳಿಂದಲೇ ವಸಾಹತುವಾದೀ ಅನುಭವವನ್ನು ಗ್ರಹಿಸುತ್ತಾರೆ. ಮೇಲೆ ಪ್ರಸ್ತಾಪಿಸಿದ ಮೊದಲನೆಯ ಮಾದರಿಯ ವಸಾಹತು ವಿರೋಧಗಳಲ್ಲಿ ಕಾಣುವ ದೇಶೀ ಮಾದರಿಗಳ ಪ್ರತಿಷ್ಠಾಪನೆ ಅಥವಾ ಪುನರುಜ್ಜೀವನದ ಪ್ರಶ್ನೆ ಎರಡನೆಯ ವರ್ಗಕ್ಕೆ ಪ್ರಧಾನವಾಗಿ ಕಾಣುವುದಿಲ್ಲ. ಆಯಾ ವಸಾಹತುವಾದೀ ಸನ್ನಿವೇಶದ ಭಿನ್ನ ಭಿನ್ನ ಆಂತರಿಕ ಒತ್ತಡಗಳು ರೂಪಿಸಿರುವ ಈ ವಿಭಿನ್ನ ಗ್ರಹಿಕೆಗಳನ್ನು ಇನ್ನಷ್ಟು ವಿಸ್ತಾರವಾಗಿ ಇಲ್ಲಿ ಚರ್ಚಿಸಬೇಕು.

ಮೊದಲಿಗೆ, ಗಾಂಧೀಜಿಯವರ ಗ್ರಹಿಕೆಗಳ ಬಗ್ಗೆ ಚರ್ಚಿಸ ಬಹುದು: ವಸಾಹತುವಾದದಿಂದ ಭಾರತದಲ್ಲಿ ಉಂಟಾದ ಇಬ್ಬಗೆಯ ಪರಿಣಾಮಗಳ ಸ್ವರೂಪವನ್ನು ಗ್ರಹಿಸಿದ ಗಾಂಧಿ ಅದರಲ್ಲಿ ಒಳಿತಿನ ಪರಿಣಾಮವನ್ನು ಆಧುನಿಕಪೂರ್ವ ಪಶ್ಚಿಮದ ಫಲವೆಂದೂ, ಕೆಡುಕಿನ ಪರಿಣಾಮವನ್ನು ಆಧುನಿಕ ಪಶ್ಚಿಮದ ಫಲವೆಂದೂ ವ್ಯಾಖ್ಯಾನಿಸಿದ್ದರು. ಪಶ್ಚಿಮವನ್ನೂ ಪೂರ್ವವನ್ನೂ ಏಕಕಾಲಕ್ಕೆ ಈ ಆಧುನಿಕ ಪಶ್ಚಿಮದ ಹಿಡಿತದಿಂದ ಪಾರುಮಾಡಬೇಕೆಂಬುದು ಗಾಂಧಿಯ ಕೇಂದ್ರ ಕಾಳಜಿ. ಅಶೀಶ್‌ನಂದಿ ಗುರುತಿಸುವಂತೆ,

ಗಾಂಧಿ ಆಧುನಿಕ ಪಶ್ಚಿಮವನ್ನು ತಿರಸ್ಕರಿಸಿದ್ದು ಅದರ ಧರ್ಮಾತೀತ ವೈಜ್ಞಾನಿಕ ಲೋಕದರ್ಶನದ ಕಾರಣಕ್ಕಾಗಿ. ತನ್ನದೇ ಶ್ರೇಷ್ಠ ಸಂಸ್ಕೃತಿಯೆಂಬ ಅಧಿಕಾರವನ್ನು ಆಧುನಿಕ ಪಶ್ಚಿಮ ಚಲಾಯಿಸಹೊರಡುವುದಕ್ಕೆ ಮೂಲ ಕಾರಣವೊಂದಿದೆ. ಅದೇನೆಂದರೆ, ಸೆಕ್ಯುಲರೈಸ್ಡ್ ಸಮಾಜಗಳು ಸೆಕ್ಯುಲರೀಕರಣ ಗೊಳ್ಳದ ಸಮಾಜಗಳಿಗಿಂತ ಶ್ರೇಷ್ಠವೆಂಬ ಅದರ ನಂಬಿಕೆ.

ಗಾಂಧೀ ಗ್ರಹಿಕೆಯ ಪ್ರಕಾರ ವಸಾಹತುವಾದ ದೇಶೀ ಆರ್ಥಿಕ ವ್ಯವಸ್ಥೆ, ದೇಶೀ ಕೈಗಾರಿಕೆ ಹಾಗೂ ದೇಶೀ ಸಾಂಸ್ಕೃತಿಕ ಹಿರಿಮೆಯ ನಾಶವನ್ನು ಒಂದೆಡೆಯಿಂದ ಆರಂಭಿಸಿತು; ಇನ್ನೊಂದೆಡೆಯಿಂದ ಭೌತಿಕವಾದಿ ಕೈಗಾರಿಕಾ ನಾಗರಿಕತೆಯನ್ನು ಭಾರತದ ಮೇಲೆ ಹೇರಿ ಭಾರತದ ‘ಸಹಜ’ ಬೆಳವಣಿಗೆಗೆ ಮಾರಕವಾಯಿತು. ಗಾಂಧಿಯ ಪ್ರಕಾರ ವಸಾಹತುವಾದದ ಮುಖ್ಯ ವಿನಾಶಕಾರಿ ಗುಣಗಳು ಇವು. ವಸಾಹತುವಾದೀ ಮೂಲದಿಂದ ಬಂದ ಪ್ರಭುತ್ವದ ಕಲ್ಪನೆಯನ್ನೇ ತಿರಸ್ಕರಿಸುವ ಗಾಂಧಿಯ ಕಣ್ಣಲ್ಲಿ ಪಾರ್ಲಿಮೆಂಟು ‘ಬಂಜೆ’ ಹಾಗೂ ‘ವೇಶ್ಯೆ’.

ವಸಾಹತುವಾದ ಕುರಿತ ಗಾಂಧಿಯ ಗ್ರಹಿಕೆಗಳಲ್ಲಿ ಎದ್ದುಕಾಣುವ ಅಂಶವೆಂದರೆ, ಸ್ವೀಕರಿಸುವ ಸಂಸ್ಕೃತಿಯ ಕೀಳರಿಮೆ ಅಲ್ಲಿ ಇಲ್ಲದಿರುವುದು. ಆದ್ದರಿಂದ ಮೂಲತಃ ಸಾಂಸ್ಕೃತಿಕ ಕೀಳರಿಮೆಯಿಂದ ಹುಟ್ಟುವ ದೇಶೀ ಮಾದರಿಗಳ ಉಗ್ರ ಸಮರ್ಥನೆ ಹಾಗೂ ಪಶ್ಚಿಮದ ವಿರೋಧ ಗಾಂಧೀ ಗ್ರಹಿಕೆಯಲ್ಲಿಲ್ಲ. ಗಾಂಧಿಯ ವಿರೋಧವಿದ್ದದ್ದು ಆಧುನಿಕ ಪಶ್ಚಿಮವನ್ನು ಕುರಿತು ಹಾಗೂ ಮೂಲತಃ ಕೇಡಿನ ತಳಹದಿಯ ಮೇಲೆ ನಿಂತಿರುವ ಪಶ್ಚಿಮದ ಆಧುನಿಕ ನಾಗರಿಕತೆಯನ್ನು ಕುರಿತು. ‘ಆಧುನಿಕ ಸಂಸ್ಕೃತಿಯನ್ನು ಸೈತಾನೀ ಸಂಸ್ಕೃತಿ ಎಂದ ಗಾಂಧಿ, ರಾಷ್ಟ್ರಪ್ರಭುತ್ವ, ಆಧುನಿಕ ವಿಜ್ಞಾನ, ಆಧುನಿಕ ತಂತ್ರಜ್ಞಾನ, ನಗರೀಕೃತ ಕೈಗಾರಿಕೀಕರಣ-ಇಂಥ ಆಧುನಿಕ ಮಾದರಿಗಳನ್ನು ತಿರಸ್ಕರಿಸಿದ್ದರು’. ಇದು ಸ್ಥೂಲವಾಗಿ ಗಾಂಧಿ ವಸಾಹತುವಾದವನ್ನು ವ್ಯಾಖ್ಯಾನಿಸಿದ ಬಗೆ.

ಇನ್ನು ಮುಂದೆ ಅಶೀಶ್‌ನಂದಿಯವರ ಗ್ರಹಿಕೆಗಳನ್ನು ಚರ್ಚಿಸಬಹುದು: ವಸಾಹತೀಕರಣ ವನ್ನು ಮೂಲತಃ ಮಾನಸಿಕ ಪ್ರಕ್ರಿಯೆಯನ್ನಾಗಿ ಹಾಗೂ ಪಶ್ಚಿಮದಲ್ಲಿ ಹುಟ್ಟುತ್ತಿದ್ದ ಹೊಸ ದಮನದ ಮಾದರಿಗಳ (ಆ ಘಟ್ಟದಲ್ಲಿ ಅಮೆರಿಕದಲ್ಲಿ ಆರಂಭಗೊಂಡ ಆಫ್ರಿಕಾದ ಗುಲಾಮರ ಮಾರಾಟ ಇಂಥ ದಮನದ ಒಂದು ಮಾದರಿ) ಪ್ರತಿರೂಪವನ್ನಾಗಿ ಅಶೀಶ್‌ನಂದಿ ಕಾಣು ತ್ತಾರೆ. ಪುನರುಜ್ಜೀವನ ಘಟ್ಟದ ಯುರೋಪಿನಲ್ಲಿ ಬಾಲ್ಯಾವಸ್ಥೆ ಕುರಿತಂತೆ ಬದಲಾದ ದೃಷ್ಟಿಕೋನಕ್ಕೂ ವಸಾಹತುವಾದದ ಉಗಮಕ್ಕೂ ಸಂಬಂಧವಿದೆಯೆಂದು ನಂದಿ ವಾದಿಸುತ್ತಾರೆ. ಯುರೋಪಿನ ಪ್ರಗತಿವಾದಿ ಸಿದ್ಧಾಂತಗಳ ಆ ಘಟ್ಟದಲ್ಲಿ ಬಾಲ್ಯಾವಸ್ಥೆ ಆನಂದದ ಅಥವಾ ದೈವೀಸ್ಥಿತಿಯಾಗಿ ಕಾಣುವುದಿಲ್ಲ. ಬದಲಿಗೆ, ಹಿರಿಯರು ನೀತಿ ನಿಯಮಗಳ ಪಟ್ಟಿಯನ್ನು ಬರೆಯಬೇಕಾದ ಖಾಲಿ ಸ್ಲೇಟಾಗಿ, ಅಪ್ರಬುದ್ಧವಾದ ಹಾಗೂ ಏನನ್ನೂ ಉತ್ಪಾದಿಸದ ಸ್ಥಿತಿಯಾಗಿ ಕಾಣುತ್ತದೆ. ಬಂಡವಾಳಶಾಹೀ ಯುಗದ ಹೊಸ ಪ್ರಗತಿವಾದಿ ಸಿದ್ಧಾಂತಗಳ ಜೊತೆಗೆ ಹುಟ್ಟಿದ ವಸಾಹತುವಾದ ಆದಿಮಸ್ಥಿತಿ ಹಾಗೂ ಬಾಲ್ಯಾವಸ್ಥೆಗಳೆರಡನ್ನೂ ಒಂದೇ ತೆರನಾಗಿ ಕಂಡಿತು. ಅಂದರೆ, ಬಾಲ್ಯಾವಸ್ಥೆಯೆನ್ನುವುದು ತಿದ್ದಿ ಬದಲಿಸಬೇಕಾದ ಸ್ಥಿತಿ. ಹಾಗೆಯೇ, ಬಾಲ್ಯಾವಸ್ಥೆಯಲ್ಲಿರುವ ‘ಹಿಂದುಳಿದ’ ನಾಡುಗಳ ‘ಆದಿಮಸ್ಥಿತಿ’ ಹಾಗೂ ‘ಅನಾಗರಿಕ ಸ್ಥಿತಿ’ ಕೂಡ ‘ಹಿರಿಯ’ನೂ ‘ರಕ್ಷಕ’ನೂ ಆದ ವಸಾಹತುಕಾರ ಬದಲಿಸಬೇಕಾದ ಸ್ಥಿತಿ ಎಂಬುದು ವಸಾಹತುವಾದದ ನಂಬಿಕೆ.

ಆಧುನಿಕ ವಸಾಹತುವಾದ ಆಧುನಿಕ ಯುಗದ ಉಳಿದೆಲ್ಲ ದಮನಕಾರಿ ಮಾರ್ಗಗಳಿಗಿಂತ ಪರಿಣಾಮಕಾರಿಯಾಗಿ ಆಳತೊಡಗಿದ್ದಕ್ಕೆ ಮುಖ್ಯ ಕಾರಣ, ಅದರ ಸ್ಪಷ್ಟವಾದ ತಾತ್ವಿಕ ನೆಲೆಗಟ್ಟು, ಸಾಂಸ್ಕೃತಿಕ ಬೇರುಗಳನ್ನುಳ್ಳ ಅದರ ನ್ಯಾಯಬದ್ಧ ಅಧಿಕಾರ ಹಾಗೂ ಪ್ರತಿ ಹಿಂಸೆಯನ್ನು ನಿಯಂತ್ರಿಸಬಲ್ಲ ಶಕ್ತಿ. ವಸಾಹತುಗಳನ್ನು ನಾಗರೀಕರಣಗೊಳಿಸಲು ತಾನು ಆರಂಭಿಸಿದ ಯುದ್ಧಕ್ಕೆ ವಸಾಹತುವಾದ ಆಧುನಿಕ ತಂತ್ರಜ್ಞಾನ ಹಾಗೂ ಆಧುನಿಕ ತಂತ್ರಜ್ಞಾನ ಸಂಸ್ಕೃತಿಯ ಮೂಲಕ ಸಮರ್ಥನೆಗಳನ್ನು ಸೃಷ್ಟಿಸಿತು. ಪಶ್ಚಿಮದ ತಂತ್ರಜ್ಞಾನ ಸಂಸ್ಕೃತಿ, ಪಶ್ಚಿಮದ ಮನುಷ್ಯ ಹಾಗೂ ಪಶ್ಚಿಮದ ತಂತ್ರಜ್ಞಾನಗಳ ಹಿರಿಮೆಯನ್ನು ಪ್ರತಿಪಾದಿಸುವ ಇಂಥ ಸಿದ್ಧಾಂತದ ಮೂಲ ತುಡಿತವೇ ಆಧುನಿಕ ಸಮಾಜಗಳು, ಆಧುನಿಕ ವಿಜ್ಞಾನಗಳು ಮತ್ತು ಆಧುನಿಕ ತಂತ್ರಜ್ಞಾನಗಳು ಮಾತ್ರ ಶ್ರೇಷ್ಠವೆಂದು ಪ್ರತಿಪಾದಿಸುವುದು. ಆ ಪ್ರತಿಪಾದನೆಯ ಇನ್ನೊಂದು ಮುಖದಲ್ಲಿ ಪಾರಂಪರಿಕ ತಂತ್ರಜ್ಞಾನದ, ಪಾರಂಪರಿಕವಾದ ಮಾನವ-ಪ್ರಕೃತಿ ಸಂಬಂಧಗಳ ವ್ಯವಸ್ಥೆಯ, ಅಂದರೆ ಒಟ್ಟಾರೆಯಾಗಿ ಪಾರಂಪರಿಕ ಮನುಷ್ಯನ ನಿರ್ನಾಮ ಆರಂಭವಾಗುತ್ತದೆ. ಇದು ವಸಾಹತುವಾದ ಕುರಿತಂತೆ ಅಶೀಶ್ ನಂದಿಯವರ ಚಿಂತನೆಯ ಸಾರಾಂಶ.

ವಸಾಹತೀಕರಣವನ್ನು ಮನಃಶಾಸ್ತ್ರೀಯ ಹಾಗೂ ಮಾನವಶಾಸ್ತ್ರೀಯ ನೆಲೆಗಳ ಮೂಲಕ ವ್ಯಾಖ್ಯಾನಿಸುವ ಮಾನವಶಾಸ್ತ್ರಜ್ಞೊಓ.ಮನೋನಿ, ವಸಾಹತು ಸನ್ನಿವೇಶವನ್ನು ಎರಡು ವಿಭಿನ್ನ ವ್ಯಕ್ತಿತ್ವಗಳ ಭೇಟಿಯನ್ನಾಗಿ ಹಾಗೂ ಆ ವ್ಯಕ್ತಿತ್ವಗಳು ಪರಸ್ಪರ ಪ್ರತಿಕ್ರಿಯಿಸುವ ರೀತಿಯಿಂದ ಹುಟ್ಟುವ ಸನ್ನಿವೇಶವನ್ನಾಗಿ ಗ್ರಹಿಸುತ್ತಾನೆ. ಈ ಗ್ರಹಿಕೆಯಲ್ಲಿ ಶೇಕ್ಸ್‌ಪಿಯರ್‌ನ ‘ಟೆಂಪೆಸ್ಟ್’ ನಾಟಕದ ಪ್ರಾಸ್ಪರೋ ಹಾಗೂ ಕ್ಯಾಲಿಬನ್ ಕ್ರಮವಾಗಿ ವಸಾಹತುಕಾರ ಹಾಗೂ ವಸಾಹತೀಕರಣಗೊಂಡವರ ಮೂಲ ಮಾದರಿಗಳು. ವಸಾಹತುವಾದೀ ದೇಶಕ್ಕೆ ಸೇರಿದ ಲೇಖಕರಾದ ಶೇಕ್ಸ್‌ಪಿಯರ್‌ನ ‘ಟೆಂಪೆಸ್ಟ್’ ನಾಟಕದ ಪ್ರಾಸ್ಪರೋ ಹಾಗೂ ಡೇನಿಯಲ್ ಡಿಫೋ ಸೃಷ್ಟಿಸಿದ ‘ರಾಬಿನ್‌ಸನ್ ಕ್ರೂಸೊ’ ಎಂಬ ಎರಡು ಪಾತ್ರಗಳ ವಸಾಹತುವಾದೀ ಮನಸ್ಥಿತಿಯ ಮೂಲವನ್ನರಿಯಲು ಮನೋನಿ ಯತ್ನಿಸುತ್ತಾನೆ. ಅನ್ಯದ್ವೀಪಗಳನ್ನು ಆಕ್ರಮಿ ಸುವ ಈ ಎರಡು ಕಾಲ್ಪನಿಕ ಪಾತ್ರಗಳನ್ನು ಯುರೋಪಿಯನ್ ಪ್ರಜ್ಞೆಯಲ್ಲಿ ಸುಪ್ತವಾಗಿದ್ದ ವಸಾಹತುಶಾಹಿ ಧೋರಣೆಯೇ ಸೃಷ್ಟಿಸಿತೆಂದು ಮನೋನಿ ವಾದಿಸುತ್ತಾನೆ. ಎಡ್ವರ್ಡ್  ಸೈದ್ ಕೂಡ ‘ಆಧುನಿಕ ವಾಸ್ತವವಾದೀ ಮಾರ್ಗದ ‘ರಾಬಿನ್‌ಸನ್ ಕ್ರೂಸೋ’ ಕಾದಂಬರಿಯಲ್ಲಿ ಯುರೋಪಿಯನ್ನನೊಬ್ಬ ಯುರೋಪಿನಿಂದ ಹೊರಗಿರುವ ದೂರದ ಪ್ರದೇಶವೊಂದರಲ್ಲಿ ತನಗಾಗಿ ಒಂದು ಜಹಗೀರನ್ನು ಸೃಷ್ಟಿಸಿಕೊಳ್ಳುವುದು ಕೇವಲ ಆಕಸ್ಮಿಕವಲ್ಲ’ ಎನ್ನುತ್ತಾ, ಅದರ ಹಿಂದಿನ ವಸಾಹತೀಕರಣದ ಉದ್ದೇಶವನ್ನೇ ಗುರುತಿಸುತ್ತಾನೆ. ಅಂದರೆ, ಯುರೋಪಿನ ಚಿತ್ತದಲ್ಲಿ ಸುಪ್ತವಾಗಿದ್ದ ಆಕ್ರಮಣವಾದೀ ಭಾವನೆಗಳು ಹಾಗೂ ಕೆಲವು ನಿರ್ದಿಷ್ಟ ಗೀಳುಗಳು ಕ್ರಮೇಣ ವಸಾಹತು ಸನ್ನಿವೇಶದಲ್ಲಿ ವಸಾಹತುವಾದ ಎಂಬ ಸಿದ್ಧಾಂತವಾಗಿ ರೂಪಗೊಂಡವು.

ಒಂದು ಕಲಾಕೃತಿಯ ಪಾತ್ರಗಳು ಹಾಗೂ ಕೃತಿಕಾರನ ಸಂಬಂಧ ಕುರಿತು (ಅಂದರೆ ಶೇಕ್ಸ್‌ಪಿಯರ್ ಮತ್ತು ಪ್ರಾಸ್ಪರೋ; ಡಿಫೋ ಮತ್ತು ಕ್ರೂಸೋ ನಡುವಣ ಸಂಬಂಧಗಳನ್ನು ಕುರಿತು) ಕೃತಿಕೇಂದ್ರಿತ ವಿಮರ್ಶೆ ಒಪ್ಪದ ವಾದವನ್ನು ಮನೋನಿ ಒಂದು ಸಂಸ್ಕೃತಿಯಲ್ಲಿ ಹುಟ್ಟುವ ಪಾತ್ರಗಳಿಗೂ, ಆ ಸಂಸ್ಕೃತಿಯ ನೋಟಕ್ರಮಗಳಿಗೂ ಇರುವ ಸಂಬಂಧವನ್ನು ಗುರುತಿಸಲು ಬಳಸುತ್ತಾನೆ. ಅವನ ಪ್ರಕಾರ, ಕ್ಯಾಲಿಬನ್ ಅಥವಾ ಲಿಲಿಪುಟ್ಟರಂಥ ಅರೆ ಮಾನವ ಪ್ರಾಣಿಗಳನ್ನು ಸೃಷ್ಟಿಸುವ ಕೃತಿಕಾರನ ಅಪ್ರಜ್ಞೆಯಲ್ಲಿ ಇಡೀ ಮಾನವಕುಲವನ್ನೇ ಕೀಳಾಗಿ ಚಿತ್ರಿಸುವ ಆಶಯವಿರುತ್ತದೆ. ಆದ್ದರಿಂದಲೇ ಪ್ರಾಸ್ಪರೋ ಹಾಗೂ ಕ್ರೂಸೋ ಎಂಬ ಕಾಲ್ಪನಿಕ ಪಾತ್ರಗಳು ಭವಿಷ್ಯದಲ್ಲಿ ಪಶ್ಚಿಮ ರೂಪಿಸಲಿದ್ದ ವಸಾಹತುಕಾರನ ಮಾದರಿಗಳು. ಈ ಇಬ್ಬರೂ ಹುಡುಕಿಕೊಂಡು ಹೊರಟಿರುವುದು ‘ಮನುಷ್ಯರಿಲ್ಲದ ಜಗತ್ತನ್ನು’. ಆ ಜಗತ್ತುಗಳಲ್ಲಿ ಅವರಿಗೆ ಸಿಕ್ಕುವ ಫ್ರೈಡೇ, ಏರಿಯಲ್, ಕ್ಯಾಲಿಬನ್ ಮುಂತಾದ ಮನುಷ್ಯರು ಅವರ ಕಣ್ಣಲ್ಲಿ ಮನುಷ್ಯರೇ ಅಲ್ಲ. ಕ್ರೂಸೋ, ಪ್ರಾಸ್ಪರೋರಲ್ಲಿ ಕಾಣುವ ಈ ವಸಾಹತುಕಾರನ ಮೂಲ ಮಾದರಿಯೇ ಆಧುನಿಕ ವಸಾಹತು ಸನ್ನಿವೇಶದಲ್ಲಿ ಮುಂದು ವರಿಯುತ್ತದೆ. ಯುರೋಪಿಯನ್ ಅಪ್ರಜ್ಞೆಯಲ್ಲಿದ್ದ ‘ಅನಾಗರಿಕ’ ಪಾತ್ರಗಳು ಸಾಹಿತ್ಯ ಕೃತಿಗಳಲ್ಲಿ ಫ್ರೈಡೇ ಅಥವಾ ಕ್ಯಾಲಿಬನ್‌ಗಳಾದಂತೆ, ಅದೇ ಅಪ್ರಜ್ಞೆಯಲ್ಲಿದ್ದ ಧೋರಣೆಗಳೇ ಯುರೋಪಿಯನ್ನರನ್ನು ತಾವೆಂದೂ ಕಾಣದ ದ್ವೀಪಗಳನ್ನು ಆಕ್ರಮಿಸಿಕೊಳ್ಳುವಂತೆ, ಈಗಾಗಲೇ ತಮ್ಮ ಅಪ್ರಜ್ಞೆಯಲ್ಲಿ ಸೃಷ್ಟಿಯಾಗಿದ್ದ ಆ ದ್ವೀಪವಾಸಿಗಳಾದ ‘ಕ್ರೂರ ಪ್ರಾಣಿ’ ಗಳನ್ನು (ಅಂದರೆ ಅಲ್ಲಿನ ಮನುಷ್ಯರನ್ನು) ಶಸ್ತ್ರಬಲದಿಂದ ಆಳುವಂತೆ ಪ್ರೇರೇಪಿಸುತ್ತವೆ.

ಮನೋನಿಯ ಗ್ರಹಿಕೆಯ ಪ್ರಕಾರ, ವಸಾಹತುವಾದದ ಹಿನ್ನೆಲೆಯಲ್ಲಿರುವ ಆರ್ಥಿಕ ಅಥವಾ ರಾಜಕೀಯ ಒತ್ತಡಗಳಿಗಿಂತ ಯುರೋಪಿಯನ್ನರ ಅಪ್ರಜ್ಞೆಯಲ್ಲಿ ಬಾಲ್ಯದಿಂದಲೂ ನೆಲೆಸಿರುವ ಮರುಭೂಮಿ ಹಾಗೂ ನರಭಕ್ಷಕರನ್ನು ಕುರಿತ ಕಲ್ಪನೆಗಳೇ ವಸಾಹತುವಾದೀ ಮನಸ್ಥಿತಿಯ ಹುಟ್ಟಿನಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಮನೋನಿ ಗುರುತಿಸುವಂತೆ, ವಸಾಹತುವಾದೀ ದೃಷ್ಟಿಕೋನದ ಅತ್ಯಂತ ಅಪಾಯಕಾರಿ ಗುಣವೆಂದರೆ, ತನ್ನನ್ನು ಬಿಟ್ಟು ಉಳಿದವರಿಗೆ- ಅಂದರೆ, ಮಿರಾಂಡ, ಏರಿಯಲ್, ಫ್ರೈಡೇಗಳಿಗೆ (ಅಂದರೆ ಹೆಣ್ಣಿಗೆ ಹಾಗೂ ಇತರ ದೇಶೀಯರಿಗೆ)- ವ್ಯಕ್ತಿತ್ವವೇ ಇಲ್ಲವೆಂಬ ವಸಾಹತುಕಾರನ ಧೋರಣೆ. ಆದ್ದರಿಂದಲೇ ಕ್ಯಾಲಿಬನ್ ಸ್ವಾತಂತ್ರ್ಯಕ್ಕೋಸ್ಕರ ಹೂಡುವ ಬಂಡಾಯವನ್ನು ಪ್ರಾಸ್ಪರೋ ಕೇವಲ ಮೃಗೀಯ ವರ್ತನೆಯಂತೆ ಕಾಣುತ್ತಾನೆ. ಪ್ರಾಸ್ಪರೋನಂತೆ ವಸಾಹತುಕಾರನಿಗೂ ‘ಇತರರ’ ಜಗತ್ತನ್ನು ಕುರಿತು ಗೌರವವಿಲ್ಲ. ಪ್ರತಿ ವಸಾಹತುಕಾರನಲ್ಲೂ ಇಂಥ ಪ್ರಾಸ್ಪರೋ ಮನಸ್ಥಿತಿ ಎದ್ದು ಕಾಣುತ್ತದೆ.

ಮಡಗಾಸ್ಕರ್ ದ್ವೀಪದ ಮ್ಯಾಲಗೇಸಿ ಜನಾಂಗದ ವಸಾಹತೀಕರಣದ ಅಧ್ಯಯನದ ಮೂಲಕ ಮನೋನಿ ಗ್ರಹಿಸುವ ಪ್ರಧಾನ ಅಂಶವೆಂದರೆ ವಸಾಹತೀಕರಣಗೊಂಡವನಲ್ಲಿರುವ ಅವಲಂಬನೆಯ ಮನಸ್ಥಿತಿಯಿಂದ ಹುಟ್ಟುವ ವಸಾಹತು ಸಂಬಂಧ. ಮನೋನಿಯ ಪ್ರಕಾರ, ವಸಾಹತು ಸನ್ನಿವೇಶ ವಸಾಹತುಕಾರ ಹಾಗೂ ವಸಾಹತೀಕರಣಗೊಂಡವರಿಬ್ಬರ ಮೂಲಭೂತ ಅಗತ್ಯವೊಂದನ್ನು ತೃಪ್ತಿಪಡಿಸುತ್ತಿರುತ್ತದೆ. ವಸಾಹತು ಸಂದರ್ಭದಲ್ಲಿ ತನ್ನ ಬುಡಕಟ್ಟು ಬದುಕಿನ ಆಸರೆ ಹಾಗೂ ರಕ್ಷಣೆಯನ್ನು ಕಳೆದುಕೊಳ್ಳುವ ದೇಶೀಯ ತಾನು ಅವಲಂಬಿಸಲು ಯಾರನ್ನಾದರೂ ಹುಡುಕುತ್ತಿರುತ್ತಾನೆ. ಹಾಗೆ ಅವಲಂಬಿಸಬಲ್ಲ ವ್ಯಕ್ತಿತ್ವವನ್ನು ಅವನು ಕಾಣುವುದು ‘ಬಲಿಷ್ಠ’ನಾದ, ‘ರಕ್ಷಕ’ನಾದ, ‘ಸ್ವಾವಲಂಬಿ’ಯಾದ ಹಾಗೂ ಸ್ಥಳೀಯ ಮಾಂತ್ರಿಕ ಶಕ್ತಿಗಳಿಗೆ ಹೆದರದ ಯುರೋಪಿಯನ್ನನಲ್ಲಿ. ಈ ಅವಲಂಬನೆಯ ಮನಸ್ಥಿತಿ ವಸಾಹತುವಾದೀ ಯುರೋಪಿಯನ್ ಮನಸ್ಸಿನ ಅಗತ್ಯವೊಂದನ್ನು ಕೂಡ ಪೂರೈಸುತ್ತಿರುತ್ತದೆ. ಆಕ್ರಮಣಕಾರಿಯಾದ ಹಾಗೂ ಸ್ಪರ್ಧಾತ್ಮಕವಾದ ಸಮಾಜದಲ್ಲಿ ಹುಟ್ಟುವ ಯಶಸ್ಸಿನ ಕಲ್ಪನೆಯಿಂದ ರೂಪುಗೊಂಡ ಯುರೋಪಿಯನ್ ವಸಾಹತುವಾದಿಗೆ ಹಾಗೂ ಅವನ ಸಾಮರ್ಥ್ಯಕ್ಕೆ ಒತ್ತಾಸೆ ಹಾಗೂ ಭರವಸೆ ದಕ್ಕುವುದು ವಸಾಹತುಗಳ ದೇಶೀಯನಲ್ಲಿರುವ ಈ ಅವಲಂಬನೆಯ ಬಯಕೆಯಿಂದ. ಆದ್ದರಿಂದ ವಸಾಹತುವಾದಿಯನ್ನು ಅವಲಂಬಿಸುವ ದೇಶೀಯನ ಗುಲಾಮಗಿರಿ ವಸಾಹತುವಾದಿಯ ಬಹುಮುಖ್ಯ ಮಾನಸಿಕ ಅಗತ್ಯವೊಂದನ್ನು ಕೂಡ ಪೂರೈಸುತ್ತಿರುತ್ತದೆ. ಹಾಗೆಯೇ, ವಸಾಹತೀಕರಣಕ್ಕೊಳಗಾದ ಮ್ಯಾಲಗೇಸಿ ಜನಾಂಗ ವಸಾಹತುಕಾರನ ಜೊತೆಗಿನ ಸಂಬಂಧದಲ್ಲಿ ಗತಿಸಿದ ತನ್ನ ಹಿರೀಕರ ಜೊತೆಗಿನ ಸಂಬಂಧ ವನ್ನು ಕಂಡುಕೊಂಡಿತು ಎನ್ನುವ ಮನೋನಿ, ಅವಲಂಬನೆಯ ಅಗತ್ಯವೇ ಮಾನಸಿಕ ವಸಾಹತೀಕರಣದ ಕೇಂದ್ರದಲ್ಲಿರುವುದನ್ನು ಒತ್ತಿ ಹೇಳುತ್ತಾನೆ. ಆದರೆ ಮನೋನಿಯ ಈ ಅವಲಂಬನೆಯ ಸಿದ್ಧಾಂತವನ್ನು ಫ್ಯಾನನ್ ಹಾಗೂ ಏಮಿ ಸಿಸಾರೆ ‘ಜನಾಂಗೀಯವಾದೀ ವಿಶ್ಲೇಷಣೆಯ ಮಾದರಿ’ ಎನ್ನುತ್ತಾರೆ. ದಮನಕ್ಕೊಳಗಾದ ಸಂಸ್ಕೃತಿಗಳನ್ನು ಕುರಿತಂತೆ ಪಶ್ಚಿಮದ ಮನೋವಿಜ್ಞಾನಿಗಳ ಪೂರ್ವಗ್ರಹಗಳಿಗೆ ಇಂಥ ದೃಷ್ಟಿಕೋನಗಳೇ ಸಾಕ್ಷಿ ಎನ್ನುತ್ತಾನೆ ಏಮಿ ಸಿಸಾರೆ.

ಯುರೋಪಿಯನ್ ಪುನರುಜ್ಜೀವನ ಘಟ್ಟದಲ್ಲಿ ಹುಟ್ಟಿದ ಹೊಸ ದಮನಕಾರಿ ಸಿದ್ಧಾಂತ ಗಳ ಸಾಂಸ್ಥಿಕ ರೂಪವಾದ ವಸಾಹತುವಾದದ ಕೇಂದ್ರದಲ್ಲಿರುವ ಜನಾಂಗೀಯವಾದವು ವಸಾಹತುವಾದೀ ಸಂಸ್ಥೆಗಳು, ಧೋರಣೆಗಳು, ಉತ್ಪಾದನಾ ಕ್ರಮಗಳು, ಕೊಡುಕೊಳ್ಳುವ ಕ್ರಿಯೆ, ರಾಜಕೀಯ ಹಾಗೂ ಕಾನೂನುಗಳಲ್ಲಿ ಹುದುಗಿರುವುದನ್ನು ಸಾರ್ತರ್ ಮತ್ತು ಫ್ಯಾನನ್ ತೋರಿಸುತ್ತಾರೆ. ಆಫ್ರಿಕಾದ ವಸಾಹತೀಕರಣವನ್ನು ಕುರಿತು ಚರ್ಚಿಸುತ್ತಾ, ‘ಫ್ಯಾಸಿಸ್ಟ್‌ವಾದದ ಇನ್ನೊಂದು ರೂಪವೇ ವಸಾಹತುವಾದ’ ಎನ್ನುವ ಸಾರ್ತರ್, ‘ಹಲವು ರೀತಿಯ ಹಿಂಸೆಗಳ ಮೂಲಕ ದೇಶೀಯರನ್ನು ನಿಯಂತ್ರಿಸುವ ಜನಾಂಗೀಯವಾದೀ ವಸಾಹತುವಾದದ ತಾತ್ತ್ವಿಕ ತಳಹದಿ ನಾಝೀವಾದಿಗಳ ಹುಟ್ಟಿಗೆ ಹೇಳಿ ಮಾಡಿಸಿದಂತಿದೆ’ ಎನ್ನುತ್ತಾನೆ. ವಸಾಹತೀಕರಣದ ಗುರಿಯೇ ಚರಿತ್ರೆಯನ್ನು ವ್ಯವಸ್ಥಿತವಾಗಿ ವಿರೂಪಗೊಳಿಸುವುದು ಹಾಗೂ ದೇಶೀಯರನ್ನು ಅರೆ ಮಾನವ ಸ್ಥಿತಿಯಲ್ಲಿಡುವುದು ಎನ್ನುವ ಸಾರ್ತರ್, ವಸಾಹತುವಾದೀ ಹಿಂಸೆಯಲ್ಲಿ ಎರಡು ಬಗೆಯ ನಿರ್ಮಾನವೀಕರಣವನ್ನು ಗುರುತಿಸುತ್ತಾನೆ: ವಸಾಹತುವಾದೀ ಹಿಂಸೆ ದೇಶೀಯನನ್ನು ಗುಲಾಮನನ್ನಾಗಿ ಮಾಡಿ ತನ್ನ ಬಂದೂಕಿನ ನಳಿಗೆಯೆದುರು ನಿಲ್ಲಿಸಿಕೊಂಡಿರುತ್ತದೆ. ಅವನನ್ನು ನಿರ್ಮಾನವೀಕರಣಗೊಳಿಸುತ್ತದೆ. ವಸಾಹತೀಕರಣವನ್ನು ಪ್ರತಿಭಟಿಸಿದರೆ ಸಾಯುವ ದೇಶೀಯ, ವಸಾಹತೀಕರಣವನ್ನು ಒಪ್ಪಿಕೊಂಡರೆ ತನ್ನನ್ನು ತಾನೇ ಕನಿಷ್ಠ ಸ್ಥಿತಿಗೆ ದೂಡಿಕೊಳ್ಳುತ್ತಾನೆ. ಅಂದರೆ, ಈ ಎರಡೂ ಸ್ಥಿತಿಗಳಲ್ಲಿ ಅವನು ಮನುಷ್ಯನಾಗಿ ಉಳಿದಿರುವುದಿಲ್ಲ. ಆದರೆ, ವಸಾಹತು ಸನ್ನಿವೇಶದ ನಿರ್ಮಾನವೀಕರಣ ಅಂತಿಮವಾಗಿ ವಸಾಹತುಕಾರ ಹಾಗೂ ವಸಾಹತೀಕರಣಗೊಂಡ ವರಿಬ್ಬರನ್ನೂ ಒಳಗೊಳ್ಳುವುದನ್ನು ಸಾರ್ತರ್ ಗುರುತಿಸುತ್ತಾನೆ. ‘ವಸಾಹತುವಾದದ ಯಂತ್ರ ವೃತ್ತಾಕಾರದಲ್ಲಿ ಚಲಿಸುತ್ತಿರುತ್ತದೆ. ಅಲ್ಲಿ ಅಭ್ಯಾಸಬಲದಿಂದ ಹುಟ್ಟಿದ ಚಲನೆ ಹಾಗೂ ಗುರಿಗಳ ನಡುವೆ ವ್ಯತ್ಯಾಸ ಹುಡುಕುವುದು ಸಾಧ್ಯವೇ ಇಲ್ಲ’ ಎನ್ನುವ ಸಾರ್ತರ್, ‘ಶೋಷಿತನ ನಿರ್ಮಾನವೀಕರಣದ ಇನ್ನೊಂದು ಮುಖವೇ ಶೋಷಕನ ಪರಕೀಯತೆ’ ಎನ್ನುತ್ತಾನೆ.

ತೀವ್ರ ಸಾಮಾಜಿಕ ವಿಭಜನೆಯನ್ನು ಹೇರುವ ಮೂಲಕ ಆಳುವ ವಿದೇಶೀಯರು ಹಾಗೂ ವಸಾಹತೀಕರಣಗೊಂಡ ದೇಶೀಯರ ನಡುವಣ ಸಂಬಂಧಗಳನ್ನು ಭ್ರಷ್ಟಗೊಳಿಸುವ ಶಕ್ತಿಯನ್ನಾಗಿ ವಸಾಹತುವಾದವನ್ನು ಗ್ರಹಿಸುತ್ತಾನೆ, ಫ್ರಾಂಜ್ ಫ್ಯಾನನ್. ‘ವಸಾಹತುವಾದ ದೇಶೀ ಸಮಾಜದ ಎಲ್ಲ ಅಂಗಗಳಲ್ಲೂ ಗೊಂದಲಗಳನ್ನು ಸೃಷ್ಟಿಸುತ್ತದೆ. ತನ್ನ ಮೌಲ್ಯಗಳೊಂದಿಗೆ ದೇಶೀ ಸಮಾಜವನ್ನು ಪ್ರವೇಶಿಸುವ ಆಕ್ರಮಣವಾದೀ ಜನಾಂಗ ಎಷ್ಟು ಹಿಂಸಾತ್ಮಕವಾಗಿ ಆ ಮೌಲ್ಯಗಳನ್ನು ಹೇರುತ್ತದೆಂದರೆ, ವಸಾಹತೀಕರಣಗೊಂಡವರು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಲೋ ಅಥವಾ ಹೆಚ್ಚೂ ಕಡಿಮೆ ಕಳ್ಳಮಾರ್ಗಗಳಲ್ಲೋ ಉಳಿದುಕೊಳ್ಳಬೇಕಾಗುತ್ತದೆ. ಇಂಥ ವಸಾಹತುವಾದೀ ದಬ್ಬಾಳಿಕೆಯ ಸ್ಥಿತಿಯಲ್ಲಿ ವಸಾಹತೀಕರಣಗೊಂಡವರು ತಮ್ಮ ಸಂಸ್ಕೃತಿಯೊಂದಿಗೆ ಇರಿಸಿಕೊಂಡ ಸಂಬಂಧ ಕೂಡ ಕಲುಷಿತಗೊಳ್ಳುತ್ತಿರುತ್ತದೆ. ವಸಾಹತುವಾದವೆಂದರೆ ಮೂಲತಃ ಹೇರಿಕೆಯ ವ್ಯವಸ್ಥೆಯೆಂಬುದು ಫ್ಯಾನನ್‌ನ ಕೇಂದ್ರ ನಿಲುವು. ಇಂಥ ವಸಾಹತು ಜಗತ್ತನ್ನು ಫ್ಯಾನನ್ ‘ಮ್ಯಾನೀಖಿಯನ್ ಜಗತ್ತು’(manichean world) ಎನ್ನುತ್ತಾನೆ. ಒಳಿತು, ಕೆಡುಕುಗಳನ್ನು ಗೆರೆ ಕೊಯ್ದು ವರ್ಗೀಕರಿಸುವ ‘ಮ್ಯಾನೀಖಿಯನಿಸಂ’ ಎಂಬ ಧಾರ್ಮಿಕ ತತ್ವದಿಂದ ಮ್ಯಾನೀಖಿಯನ್ ಎಂಬ ಶಬ್ದ ಹುಟ್ಟಿದೆ. ಈ ತತ್ವದ ಪ್ರಕಾರ, ಬೆಳಕು, ದೇವರು, ಆತ್ಮ ಇವು ಒಳಿತಿನ ಪ್ರತಿನಿಧಿಗಳು; ಕತ್ತಲು, ಸೈತಾನ, ದೇಹ ಇವು ಕೇಡಿನ ಪ್ರತಿನಿಧಿಗಳು. ಈ ಬಗೆಯಲ್ಲಿ ಆಫ್ರಿಕಾದ ದೇಶೀ ಸಮಾಜವನ್ನು ನೋಡುವ ವಸಾಹತುಕಾರನನ್ನು ಕುರಿತು ಫ್ಯಾನನ್ ಹೇಳುವ ಮಾತುಗಳು ಇವು:

ವಸಾಹತುವಾದೀ ವ್ಯವಸ್ಥೆ ಸೃಷ್ಟಿಸುವ ಚಿತ್ರದ ಪ್ರಕಾರ, ಸ್ಥಳೀಯನೆಂದರೆ ಕೇಡಿನ ಪ್ರತಿರೂಪ. ದೇಶೀ ಸಮಾಜವೆಂದರೆ ಮೌಲ್ಯಗಳೇ ಇಲ್ಲದ ಸಮಾಜ. ಸ್ಥಳೀಯರಿಗೆ ನೀತಿ ನಡವಳಿಕೆಗಳೇ ಇಲ್ಲ, ಅವರು ಸುಂದರ ವಾದದ್ದೆಲ್ಲವನ್ನೂ ಕುರೂಪಗೊಳಿಸುವವರು, ಅವರ ಬೌದ್ದಿಕ ದಾರಿದ್ರ್ಯಕ್ಕೆ ಹಾಗೂ ಅವರ ಹುಟ್ಟುಗುಣವಾದ ಕೇಡಿಗೆ ಅವರ ಸಂಪ್ರದಾಯಗಳು ಹಾಗೂ ಪುರಾಣಗಳೇ ಸಾಕ್ಷಿ ಎಂದು ವಸಾಹತುವಾದ ಮತ್ತೆ ಮತ್ತೆ ಸಿದ್ಧಮಾಡಲೆತ್ನಿಸುತ್ತಿರುತ್ತದೆ. ಈ ಬಗೆಯ ಮ್ಯಾನೀಖಿಯನಿಸಂ ದೇಶೀಯ ನನ್ನು ಪ್ರಾಣಿಯನ್ನಾಗಿ ಕಾಣುತ್ತದೆ; ಅವನನ್ನು ನಿರ್ಮಾನವೀಕರಣಗೊಳಿಸುತ್ತದೆ.

ಆದ್ದರಿಂದಲೇ, ‘ವಸಾಹತುವಾದವೆನ್ನುವುದು ಹಿಂಸಾವಾದಿ ನೋಟಕ್ರಮ; ಅದು ಬಗ್ಗು ವುದು ಪ್ರತಿಹಿಂಸೆಯಿಂದಲೇ’ ಎಂಬುದು ಫ್ಯಾನನ್ನನ ನಿಲುವು.

ವಸಾಹತುವಾದದ ವಿರುದ್ಧ ಉಗ್ರವಾದೀ ಪರಿಭಾಷೆಯನ್ನು ಬಳಸಿದ ಫ್ಯಾನನ್ ತನ್ನ ‘ಬ್ಲ್ಯಾಕ್ ಸ್ಕಿನ್, ವೈಟ್ ಮಾಸ್ಕ್ಸ್’(ಕಪ್ಪು ಚರ್ಮ, ಬಿಳಿಯ ಮುಖವಾಡಗಳು) ಪುಸ್ತಕದಲ್ಲಿ ವಸಾಹತೀಕರಣದ ಸಮರ್ಥನೆಗೆ ಯುರೋಪು ತನ್ನದೇ ಆದ ಸಂಜ್ಞಾಶಾಸ್ತ್ರ (semiotics) ಒಂದನ್ನು ರೂಪಿಸಿಕೊಂಡದ್ದನ್ನು ತೋರಿಸಿದ. ಆ ಸಂಜ್ಞಾಶಾಸ್ತ್ರದ ಪ್ರಕಾರ ಬಿಳಿತನ ವಿವೇಚನೆ, ಸದ್ಗುಣ ಹಾಗೂ ಸೌಂದರ್ಯಗಳ ಸೂಚಕ; ಕಪ್ಪುತನ ಅವೈಚಾರಿಕತೆ ಹಾಗೂ ಹಸಿ ಐಂದ್ರಿಕತೆಯ ಸೂಚಕ. ಇಂಥ ಕೀಳರಿಮೆಯನ್ನು ಹುಟ್ಟುಹಾಕುವ ಜನಾಂಗೀಯವಾದೀ ಸಂಕೇತಗಳ ಫಲವಾಗಿ ಕಪ್ಪು ಚರ್ಮಗಳು ಬಿಳಿಯ ಮುಖವಾಡ ತೊಟ್ಟು ಬಿಳಿಯರಾಗಲು ಹಾತೊರೆಯುತ್ತವೆ. ಇದು ಫ್ಯಾನನ್ ಪುಸ್ತಕದ ಮುಖ್ಯ ಗ್ರಹಿಕೆ.