ಕಳೆದ ೨೫ ವರ್ಷಗಳುದ್ದಕ್ಕೂ ಆಫ್ರಿಕಾದ ಅಭಿವೃದ್ದಿಗಾಗಿ ತಾವು ನಿರಂತರ ನೆರವು ಮತ್ತು ಅನುದಾನ ನೀಡುತ್ತಿರುವೆವೆಂದು ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಮತ್ತು ವಿದೇಶಿ ಹಣಕಾಸು ಸಂಸ್ಥೆಗಳು ಬೊಗಳೆ ಹೊಡೆದರೂ ಆಫ್ರಿಕಾದ ಮುಕ್ಕಾಲು ಪಾಲು ಜನತೆ ಇನ್ನೂ ಬಡತನದ ದವಡೆಯಲ್ಲಿದ್ದಾರೆ. ಉದಾಹರಣೆಗೆ ಇಥಿಯೋಪಿಯಾದ ಒಟ್ಟಾರೆ ಜನಸಂಖ್ಯೆಯು ೧೯೯೩ರಲ್ಲಿ ೫೩.೨ ಮಿಲಿಯನ್ ಇದ್ದು, ಅದರಲ್ಲಿ ಬಡ ಜನತೆಯ ಸಂಖ್ಯೆ ೨೦ ಮಿಲಿಯನ್‌ಗೂ ಹೆಚ್ಚಿದ್ದಾರೆ. ಅದಕ್ಕೆ ನಿರಾಶ್ರಿತರು, ಭೂರಹಿತರು ಮತ್ತು ಯುದ್ಧದಿಂದ ನಿರಾಶ್ರಿತರಾದವರ ಸಂಖ್ಯೆಯನ್ನು ಸೇರಿಸಿದಲ್ಲಿ ಬಡಜನತೆಯ ಸಂಖ್ಯೆ ೫೨ ಮಿಲಿಯನ್ ಮುಟ್ಟುತ್ತದೆ. ಹೀಗೆ ಇಥಿಯೋಪಿಯಾದಲ್ಲಿ ಶೇ.೯೭ರಷ್ಟು ಬಡಜನತೆಯಿದ್ದಾರೆ. ಸಿಯಾರ್ ಲಿಯೋನ್‌ನಲ್ಲಿ ಆದಾಯ ಗಳಿಕೆಯು ಅಸಮಾನವಾಗಿದೆ. ೧೯೯೩ರ ಅಂದಾಜಿನ ಪ್ರಕಾರ ಮೂರನೇ ಎರಡರಷ್ಟು ಜನ ಬಡತನದಲ್ಲಿದ್ದು ಬಹುತೇಕ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ವಯಸ್ಕರ ಅನಕ್ಷರತೆಯು ಶೇ.೭೯ರಷ್ಟಿದ್ದು ಇದು ಆಫ್ರಿಕಾ ಖಂಡದಲ್ಲಿ ಹೆಚ್ಚಿನ ಪ್ರಮಾಣದ್ದು. ಪ್ರಾಥಮಿಕ ಶಿಕ್ಷಣಕ್ಕೆ ಸೇರುವವರ ಸಂಖ್ಯೆ ಇಡೀ ಖಂಡದಲ್ಲೇ ಕಡಿಮೆ ಪ್ರಮಾಣದ್ದಾಗಿದೆ. ಈ ನಡುವೆ, ಶ್ರೀಮಂತ ಕೃಷಿ ಪ್ರದೇಶವನ್ನು ಹೊಂದಿದ್ದರೂ ಜನಾಂಗೀಯ ಅಂತಃಕಲಹದಿಂದಾಗಿ ಶೇ.೧೫ರಿಂದ ೨೦ರಷ್ಟು ಜನತೆ ನಿರಾಶ್ರಿತರಾಗಿದ್ದಾರೆ.

ಉಗಾಂಡಾದಲ್ಲಿ ಶೇ.೯೩ರಷ್ಟು ಬಡವರಿದ್ದು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಬಡತನವು ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿದ್ದು ತೀವ್ರ ಸ್ವರೂಪದಲ್ಲಿದೆ. ಪುರುಷರ ಜೀವಿತಾವಧಿಯು ಇಡೀ ಖಂಡದಲ್ಲೇ ಕಡಿಮೆ ಪ್ರಮಾಣದಲ್ಲಿದೆ. ಇದರೊಂದಿಗೆ ದುರದೃಷ್ಟವಶಾತ್ ಏಡ್ಸ್ ರೋಗವು ಕೂಡ ಕೈಜೊಡಿಸಿ ಸಾವಿನ ಸಂಖ್ಯೆಯನ್ನು ಇಮ್ಮಡಿಗೊಳಿಸಿದೆ. ಘಾನಾದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಬಡತನವು ಪಟ್ಟಣ ಪ್ರದೇಶಗಳಿಗಿಂತ ೧೩ಪಟ್ಟು ಹೆಚ್ಚಿನದು. ಕಡಿಮೆ ಉತ್ಪಾದನಾ ಸಮಸ್ಯೆಯು ಇನ್ನೂ ಅರ್ಧ ಶತಮಾನ ಕಾಲ ಹಾಗೆಯೇ ಮುಂದುವರೆಯುತ್ತದೆಂದು ಅಭಿಪ್ರಾಯ ಪಡಲಾಗಿದೆ. ನಮೀಬಿಯಾದಲ್ಲಿ ಆದಾಯ ಹಂಚಿಕೆಯು ತೀವ್ರತರದ ಅಸಮಾನತೆಯಿಂದ ಕೂಡಿದ್ದು ಸಂಪೂರ್ಣ ಬಡತನವು ವ್ಯಾಪಕವಾಗಿ ಹಬ್ಬಿದೆ. ಅಲ್ಲಿನ ಶೇ.೫ರಷ್ಟು ಶ್ರೀಮಂತರು ಜಿಡಿಪಿಯ ಶೇ.೭೦ರಷ್ಟನ್ನು ನಿಯಂತ್ರಿಸಿದರೆ ಶೇ.೫೫ರಷ್ಟು ಬಡವರು ಬರೆ ಶೇ.೩ರಷ್ಟು ಹೊಂದಿದ್ದಾರೆ. ಮಹಿಳೆಯು ಗಂಭೀರ ಬಡತನದಿಂದ ಜರ್ಜರಿತಳಾಗಿದ್ದಾಳೆ.

ವಿಶ್ವಬ್ಯಾಂಕ್ ಬೃಹತ್ ಮಟ್ಟದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಟಾಂಜೇನಿಯಾದ ಜೀವನ ಗುಣಮಟ್ಟ ದರವು ೧೯೬೯ ಮತ್ತು ೧೯೮೩ರ ನಡುವಿನ ವರ್ಷಗಳಲ್ಲಿ ಸರಾಸರಿ ವಾರ್ಷಿಕ ಶೇ.೨.೫ರಷ್ಟು ಇಳಿಮುಖಗೊಂಡಿತು. ಇದೇ ಅವಧಿಯಲ್ಲಿ ನಗರ ಪ್ರದೇಶದ ಕೂಲಿದರ ಶೇ.೬೫ರಷ್ಟು ಕುಸಿತ ಕಂಡಿತು. ಸಾಮಾನ್ಯ ಜನರು ಮಾಂಸ, ಡೈರಿ ಉತ್ಪನ್ನ, ತರಕಾರಿಗಳಿಂದ ದೂರಸರಿದು ಕಳಪೆ ಆಹಾರ ಪದಾರ್ಥಗಳೆಡೆಗೆ ಸರಿದರು. ಹೆಚ್ಚು ಜನಸಂಖ್ಯೆ ಹೊಂದಿದ್ದು ಶ್ರೀಮಂತ ರಾಷ್ಟ್ರವೂ ಆಗಿರುವ ನೈಜೀರಿಯಾದಲ್ಲಿ ೧೯೮೦ರಲ್ಲಿ ಆಹಾರ ಬಳಕೆಯು ಶೇ.೭ರಷ್ಟು ಕಡಿಮೆಗೊಂಡು ಅಲ್ಲಿನ ಜೀವನ ಗುಣಮಟ್ಟವು ೧೯೫೦ರ ಪ್ರಮಾಣಕ್ಕಿಂತ ಕೆಳಗಿದ್ದಿತು. ೧೯೮೦ರ ದಶಕದ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ಅಲ್ಲಿನ ಪ್ರಗತಿಯು ಕಳೆದ ೨೦ ವರ್ಷಗಳ ಹಿಂದಿನ ಮಟ್ಟ ತಲುಪಿತು. ಜಾಂಬಿಯಾದಲ್ಲಿ ಶೇ.೮೦ರಷ್ಟು ಗ್ರಾಮೀಣವಾಸಿಗಳು ಬಡತನದಲ್ಲಿದ್ದಾರೆ. ನಿರಂತರವಾಗಿ ಹಳ್ಳಿಗಾಡಿನಿಂದ ನಗರ ಪ್ರದೇಶದೆಡೆಗೆ ಮತ್ತು ವಿದೇಶಕ್ಕೆ ಹಣ ಹರಿದು ಹೋದದ್ದೇ ಬಡತನಕ್ಕೆ ಕಾರಣವಾಗಿತ್ತು. ಇದರೆ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ದಕ್ಷಿಣ ಆಫ್ರಿಕಾದ ಬಡತನ ಪ್ರಮಾಣವು ೧೯೮೦ ಮತ್ತು ೧೯೯೦ರ ದಶಕಗಳ ನಡುವೆ ಹೆಚ್ಚಳಗೊಂಡಿತು. ಜನಸಂಖ್ಯೆ ಬೆಳೆಯತೊಡಗಿತು. ನಗರಗಳು ವಿಸ್ತರಣೆಗೊಂಡವು ಮತ್ತು ಆಹಾರ ಧಾನ್ಯಗಳಿಗಾಗಿ ವಿದೇಶದ ೆುೀಲಿನ ಅವಲಂಬನೆಯು ಹೆಚ್ಚತೊಡಗಿತು.

೧೯೮೦ರ ದಶಕದಲ್ಲಿ ಆಫ್ರಿಕಾದ ಬಹುತೇಕ ಎಲ್ಲ ಬಡರಾಷ್ಟ್ರಗಳು ಸಾಲ ಮರು ಪಾವತಿಸಲಾಗದೆ ದಿವಾಳಿ ಎದ್ದಾಗ ಹಳೆ ಸಾಲೊತೀರಿಸಲು ಹೊಸ ಸಾಲ ನೀಡಲಾಯಿತು. ತಮ್ಮ ರಾಷ್ಟ್ರದ ಅಭಿವೃದ್ದಿ ಮತ್ತು ಕಲ್ಯಾಣಕಾರ್ಯಗಳಿಗಿಂತ ಸಾಲ ಮರುಪಾವತಿಗಾಗಿ ಹೆಚ್ಚಿನ ವೆಚ್ಚ ಭರಿಸಿವೆ. ಉದಾಹರಣೆಗೆ, ದೇಶದ ಜಿಡಿಪಿಯಲ್ಲಿ ಸರಾಸರಿ ಆಫ್ರಿಕಾದ ಸಾಲ ಮರುಪಾವತಿ ಶೇಕಡಾ ೧೬ರಷ್ಟಿದ್ದರೆ, ಶಿಕ್ಷಣ, ರಕ್ಷಣೆ ಮತ್ತು ಆರೋಗ್ಯಕ್ಕೆ ಅದಕ್ಕಿಂತಲೂ ಕಡಿಮೆ ಹಣ ಹಂಚಿಕೆಯಾಗುತ್ತಿತ್ತು. ಸಾಲ ಮರುಪಾವತಿಯ ಒತ್ತಡದಿಂದಾಗಿ ಬಲಿಪಶು ಗಳಾದವರೆಂದರೆ ಮಕ್ಕಳು, ಅಂಗವಿಕಲರು ಮತ್ತು ಮಹಿಳೆಯರು. ಅಪೌಷ್ಟಿಕತೆ, ಮಾನಸಿಕ ಒತ್ತಡ, ನಿರುದ್ಯೋಗ, ಹಸಿವು ಮತ್ತು ದಾರಿದ್ರ್ಯಗಳಿಂದಾಗಿ ಈ ವರ್ಗದ ಜನತೆಗೆ ತಕ್ಷಣದ ಹೊಡೆತ ಬಿದ್ದಿತು. ಉದಾಹರಣೆಗೆ ಆಫ್ರಿಕಾದಲ್ಲಿ ಏಡ್ಸ್ ರೋಗವು ವ್ಯಾಪಕ ಪ್ರಮಾಣದಲ್ಲಿ ಹಬ್ಬಲು ವಿಶ್ವಬ್ಯಾಂಕಿನ ಆರ್ಥಿಕ ನೀತಿಗಳೇ ಕಾರಣವೆಂದು ಅಮೆರಿಕ ರೋಗ ನಿಯಂತ್ರಣ ಸಂಸ್ಥೆಯು ಒಂದೊಮ್ಮೆ ದೂರಿತ್ತು. ಆರೋಗ್ಯ ಕ್ಷೇತ್ರದಲ್ಲಿ ಒಂದೆಡೆ ಸರ್ಕಾರವು ಸಹಾಯಧನವನ್ನು ಕಡಿತಗೊಳಿಸಿ ಮತ್ತೊಂದೆಡೆ ಬಳಕೆದಾರರ ಶುಲ್ಕವನ್ನು  ಹೆಚ್ಚಿಸಿದ್ದರಿಂದ ಆರೋಗ್ಯ ಮತ್ತು ಶಿಕ್ಷಣ ಸೇವೆಯನ್ನು ಬಳಸುವವರ ಸಂಖ್ಯೆ ಕುಸಿದು ಬಿದ್ದಿತು. ಮಾನವ ಸಂಪನ್ಮೂಲದ ಸರೋವರವಾಗಬೇಕಿದ್ದ ಆಫ್ರಿಕಾ ಹಿಂಸೆಯಿಂದ ನರಳುತ್ತಿರುವವರ ಕೋಪವಾಯಿತು.

ಆಫ್ರಿಕಾದಲ್ಲಿ ಜನಾಂಗೀಯ ಘರ್ಷಣೆ

೨೦ನೆಯ ಶತಮಾನದಲ್ಲಿ ಆಫ್ರಿಕಾದಲ್ಲಿ ನಡೆದಿರುವ ಜನಾಂಗೀಯ ಕಲಹಗಳು ಆಫ್ರಿಕಾದ ಇತಿಹಾಸದಲ್ಲೇ ಕಂಡಿರದ ಮಾರಣಹೋಮಗಳನ್ನು ಮತ್ತು ಕಗ್ಗೊಲೆಗಳನ್ನು ಉಂಟು ಮಾಡಿವೆ. ವಿಶ್ವದಲ್ಲೇ ಅತಿ ಹೆಚ್ಚು ನಿರಾಶ್ರಿತರನ್ನು ಆಫ್ರಿಕಾ ಹೊಂದಿತ್ತು. ೧೯೯೨ ರಲ್ಲಿ ನಿರಾಶ್ರಿತರ ಸಂಖ್ಯೆ ೫೦ ಲಕ್ಷ ಮೀರಿತ್ತು. ೨೩ಲಕ್ಷ ಜನಸಂಖ್ಯೆಯಿರುವ ಲೈಬೀರಿಯಾ ದಂಥಹ ಚಿಕ್ಕ ದೇಶದಲ್ಲಿ ಬರೇ ೪ ವರ್ಷಗಳಲ್ಲಿ ಸುಮಾರು ೨.೫೦ಲಕ್ಷ ಜನರು ಅಂತಃಕಲಹದಿಂದ ಅಸು ನೀಗಿದ್ದಾರೆ. ೧೯೯೩ರಲ್ಲಿ ಘಾನಾದಲ್ಲಿ ನಡೆದ ರಕ್ತಪಾತದಲ್ಲಿ ಬುಡಕಟ್ಟು ಗುಂಪುಗಳ ೬೦೦೦ ಮಂದಿ ಹತ್ಯೆಯಾಗಿತ್ದು, ೨೦೦ ಹಳ್ಳಿಗಳು ನಾಶಗೊಂಡು ೧೫೦೦೦ ಮಂದಿ ನಿರಾಶ್ರಿತರಾಗಿದ್ದಾರೆ. ಸಿಯಾರ ಲಿಯೋನ್ ಪ್ರಾಂತ್ಯದಲ್ಲಿ ನಡೆದ ಸಶಸ್ತ್ರ ಕಾದಾಟದಿಂದ ಅಂದಾಜು ೩೫,೦೦೦ ನಿರಾಶ್ರಿತರು ಒಂದೇ ವಾರದಲ್ಲಿ ಪಕ್ಕದ ಜಿನಿಯಾ ಗಡಿಗೆ ನುಸುಳಿದ್ದಾರೆ.

೧೯೮೦ರ ದಶಕದಲ್ಲಿ ಅಂಗೋಲಾ ಮತ್ತು ಮೊಜಾಂಬಿಕ್‌ಗಳಲ್ಲಿ ನಡೆದ ವಿಶ್ವದಲ್ಲೇ ದೀರ್ಘಾವಧಿ ಜನಾಂಗೀಯ ಕಲಹದಲ್ಲಿ ೧೫ ಲಕ್ಷ ಜನ ಸಾವನ್ನಪ್ಪಿದ್ದಾರೆ. ಸೂಡಾನ್‌ನಲ್ಲಿ ಕಳೆದ ೧೦ ವರ್ಷಗಳಲ್ಲಿ ಯುದ್ಧ ಮತ್ತು ಕ್ಷಾಮಗಳಿಂದ ೫ ಲಕ್ಷ ಜನ ಸಾವನ್ನಪ್ಪಿದ್ದಾರೆ. ೧೯೮೮ರ ಒಂದೇ ವರ್ಷದಲ್ಲಿ ೨.೫ ಲಕ್ಷ ಜನ ಸತ್ತರು. ಈ ಜನಾಂಗೀಯ ಕಲಹಗಳು ಆಫ್ರಿಕಾದ ಅಭಿವೃದ್ದಿಗೆ ತೊಡಕಾಗಿದ್ದು, ರಾಷ್ಟ್ರೀಯ ಐಕ್ಯತೆಗೆ ಪೆಟ್ಟು ನೀಡಿವೆ.

ಈ ಜನಾಂಗೀಯ ಕಲಹಗಳು ಹಿಂದಿನ ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿ ಆಳ್ವಿಕೆಯಿಂದ ಬಳುವಳಿ ಪಡೆದುಕೊಂಡು ಬಂದಿವೆ. ಇಂತಹ ಘರ್ಷಣೆಗಳನ್ನು ಹತ್ತಿಕ್ಕಿ ಪ್ರಜಾಸತ್ತಾತ್ಮಕ ಚಳುವಳಿಯನ್ನು ರೂಪುಗೊಳಿಸುವಲ್ಲಿ ಆಫ್ರಿಕಾದ ನಾಯಕತ್ವವು ವಿಫಲ ವಾಗಿದ್ದೇಕೆಂದರೆ ವಿದೇಶಿ ಶಕ್ತಿಗಳ ನಿರಂತರ ಹಸ್ತಕ್ಷೇಪ. ನೈಜೀರಿಯಾದಲ್ಲಿ ೧೯೮೦ರಲ್ಲಿ ೬೦,೦೦೦ ಮಿಲಿಯನ್ ಡಾಲರ್‌ನಿಂದ ೧೯೮೭ರ ಹೊತ್ತಿಗೆ ೨.೦ ಲಕ್ಷ ಮಿಲಿಯನ್ ಡಾಲರ್‌ನಷ್ಟು ಬಂಡವಾಳ ಹೊರದೇಶಕ್ಕೆ ಹರಿದು ಹೋಗಿ ತೀವ್ರತರದ ಹಾನಿ ಉಂಟುಮಾಡಿತ್ತು.

೧೯೭೦ರಿಂದೀಚೆಗೆ ಆಫ್ರಿಕಾದ ವಯಸ್ಕರಲ್ಲಿ ಏಡ್ಸ್ ಪ್ರಮಾಣವು ೧ ಕೋಟಿ ಜನರಲ್ಲಿ ವ್ಯಾಪಿಸಿದೆ. ಏಡ್ಸ್ ರೋಗವು ವ್ಯಾಪಕವಾಗಿ ಹಬ್ಬಲು ಕಾರಣವೇನೆಂದರೆ, ಅಲ್ಲಿ ವಿವಿಧ ಜನಾಂಗೀಯ ಗುಂಪುಗಳ ನಡುವೆ ನಡೆಯುತ್ತಿರುವ ಕಾದಾಟಗಳು, ಕ್ಷಾಮ ಮತ್ತು ಅಂತಃಕಲಹ.

೧೯೭೦ರಲ್ಲಿ ಸೋಮಾಲಿಯಾದಲ್ಲಿ ಮಿಲಿಟರಿ ಆಳ್ವಿಕೆ ಬಂದಿತು. ಹಾಗೆಯೇ ಇಥಿಯೋಪಿಯಾ ೧೯೭೪ರಲ್ಲಿ ಮತ್ತು ಸೂಡಾನ್ ೧೯೬೯ರಲ್ಲಿ ಮಿಲಿಟರಿ ಆಡಳಿತದ ತೆಕ್ಕೆಗೆ ಸೇರಿದವು. ಇಥಿಯೋಪಿಯಾದಲ್ಲಿ ಮಾರ್ಕ್ಸ್‌ವಾದಿ-ಲೆನಿನ್‌ವಾದಿ ಪಕ್ಷದ ನಾಯಕ ಮೆಂಗಿಸ್ಟು ಹ್ಯೆಲ್ ಮೆರಿಯಮ್ ಆಳ್ವಿಕೆಯನ್ನು ಕಿತ್ತೊಗೆದು ದೇಶ ವಿಭಜನೆ ಮಾಡಲು ಯತ್ನಿಸಲಾಯಿತು. ಅಂತಿಮವಾಗಿ ೧೯೯೧ರಲ್ಲಿ ಮೆಂಗಿಸ್ಟು ಆಳ್ವಿಕೆಯನ್ನು ಕೊನೆಗಾಣಿಸ ಲಾಯಿತು. ತನ್ನ ವಿವಾದಿತ ಗಡಿಪ್ರದೇಶಗಳನ್ನು ವಾಪಸ್ಸು ಪಡೆಯಲು ಅದೀಗ ತಾನೆ ಸ್ವತಂತ್ರ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದಿದ್ದ ಎರಿಟ್ರಿಯಾ ದೇಶದ ಮೇಲೆ ಇಥಿಯೋಪಿಯಾವು ೧೯೯೮-೯೯ರಲ್ಲಿ ಯುದ್ಧ ಮಾಡಿತು. ೧೯೯೯ರ ಹೊತ್ತಿಗೆ, ಕೇಂದ್ರೀಯ ಸೋಮಾಲಿ ಭೂ ಪ್ರದೇಶದಲ್ಲಿ ವಾಯುವ್ಯ ಭೂಭಾಗವು ಸೋಮಾಲಿಲ್ಯಾಂಡ್ ಆಗಿ ವಿಭಜನೆಗೊಂಡು, ದಕ್ಷಿಣ ಭೂಭಾಗವು ಯುದ್ಧಕೋರರ ನಡುವೆ ಹರಿದು ಹಂಚಿಹೋಯಿತು.

ದಕ್ಷಿಣ ಸೂಡಾನ್‌ನಲ್ಲಿ ಉತ್ತರದ ಇಸ್ಲಾಮಿಕ್ ಪಂಗಡ ಮತ್ತು ದಕ್ಷಿಣ ಜನತೆಯ ನಡುವಿನ ದೀರ್ಘಾವಧಿ ಯುದ್ಧ ಇನ್ನೂ ನಡೆಯುತ್ತಲೇ ಇದೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಧಾರ್ಮಿಕ ಅನುಯಾಯಿಗಳ ನಡುವಿನ ಘರ್ಷಣೆಯು ಜನಾಂಗೀಯ ಯುದ್ಧಕ್ಕೆ ಹೆಚ್ಚೆಚ್ಚು ಕಾರಣವಾಗಿದೆ. ಸೂಡಾನ್, ಇಥಿಯೋಪಿಯಾ ಮತ್ತು ಸೋಮಾಲಿ ಯಾಗಳಲ್ಲಿನ ಜನಾಂಗೀಯ ಘರ್ಷಣೆಗಳಿಂದಾಗಿ ಅಲ್ಲಿನ ಜನರೆಲ್ಲ ನಿರಾಶ್ರಿತ ಶಿಬಿರಗಳಲ್ಲೇ ಬಹುತೇಕ ತಮ್ಮೆಲ್ಲ ಜೀವನವನ್ನು ಕಳೆದಿದ್ದಾರೆ. ೧೯೯೪ರಲ್ಲಿ ರುವಾಂಡದಲ್ಲಿ ಘೋರವಾದ ಜನಾಂಗೀಯ ಘರ್ಷಣೆ ನಡೆದು ಬಹುಸಂಖ್ಯಾತ ಹುಟ್ಟು ಜನಾಂಗವು ಅಲ್ಪಸಂಖ್ಯಾತ ಟುಟ್ಸಿ ಜನಾಂಗದ ಮೇಲೆ ಮಿಲಿಟರಿ ಕಗ್ಗೊಲೆ ನಡೆಸಿತು.

ಆಫ್ರಿಕಾದ ಮಹಾಯುದ್ಧಗಳು

ಝೆುರೇ ದೇಶದ(ಇಂದಿನ ಕಾಂಗೋ)ಮೇಲಿನ ನಿಯಂತ್ರಣಕ್ಕಾಗಿ ವಿವಿಧ ಪಂಗಡಗಳ ನಡುವೆ ಈ ಮಹಾಯುದ್ಧಗಳು ಜರುಗಿದವು. ಇದರಲ್ಲಿ ಪ್ರಮುಖವಾಗಿ ನಾಲ್ಕು ಜನಾಂಗಗಳ ಸಶಸ್ತ್ರ ಗುಂಪುಗಳಿವೆ.

ಮೊದಲನೆಯ ಗುಂಪಿನಲ್ಲಿ, ರುವಾಂಡ ಮತ್ತು ಬುರುಂಡಿ ದೇಶಗಳಲ್ಲಿ ಟುಟ್ಸಿ ಜನಾಂಗವು ಪ್ರಾಬಲ್ಯ ಹೊಂದಿದೆ. ರುವಾಂಡ ಮತ್ತು ಬುರುಂಡಿಯ ರಾಷ್ಟ್ರೀಯ ಭದ್ರತೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಹಂಚಿಕೆಗಾಗಿ ಈ ಸರ್ಕಾರಗಳು ರುವಾಂಡಾದ ಮೈತ್ರಿ ಸೇನೆ ಹಾಗೂ ಟುಟ್ಸಿ ಜನಾಂಗದ ಮಿಲಿಟರಿ ಗುಂಪು ಉಗಾಂಡಾದ ಮೈತ್ರಿ ಸೇನೆಯ ವಿರುದ್ಧ ಕಾದಾಡಿತು. ಎರಡನೆಯದು, ಹುಟು ಮೈತ್ರಿಕೂಟವು ೧೯೯೪ರಲ್ಲಿ ರುವಾಂಡಾದಲ್ಲಿ ನಡೆದ ನರಮೇಧಕ್ಕೆ ಕಾರಣವಾಗಿದೆ. ಇದರಲ್ಲಿ ರುವಾಂಡಾದ ಹುಟು ಮತ್ತು ಬುರುಂಡಿಯ ದಂಗೆಕೋರ ಗುಂಪುಗಳು ಸೇರಿಕೊಂಡಿವೆ. ಬುರುಂಡಿ ಸರ್ಕಾರವನ್ನು ಕಿತ್ತೊಗೆಯುವುದು, ಕಾಂಗೋದ ಹುಟು ಜನಾಂಗ ಮತ್ತು ಮಾಯಿ ಎಂಬ ಹೆಸರಿನ ಮಿಲಿಟರಿ ಗುಂಪಿನ ಮೇಲೆ ಯುದ್ಧ ಮಾಡುವುದು ಮತ್ತು ನಿಸರ್ಗದ ಸಂಪತ್ತಿನ ನಿಯಂತ್ರಣ ಇದರ ಉದ್ದೇಶ. ಈ ಕೂಟವು ರುವಾಂಡ ಮತ್ತು ಬುರುಂಡಿಯ ಟುಟ್ಸಿ ಸೇನೆಯ ವಿರುದ್ಧ ಸದಾ ಕತ್ತಿ ಮಸೆಯುತ್ತಿದೆ. ಮೂರನೆಯದಾಗಿ, ಉಗಾಂಡದ ಮೈತ್ರಿಕೂಟವು ಉಗಾಂಡಾ ರಾಷ್ಟ್ರೀಯ ಸೇನೆ ಮತ್ತು ಬಂಡುಕೋರರ ಮೈತ್ರಿ ಕೂಟವಾಗಿದೆ. ಇದು ರಿಪಬ್ಲಿಕ್ ಕಾಂಗೋದ ಈಶಾನ್ಯ ಮತ್ತು ಉತ್ತರ ದಿಕ್ಕಿನ ಕೇಂದ್ರೀಯ ಭಾಗದ ಮೇಲೆ ನಿಯಂತ್ರಣ ಹೊಂದಿದೆ. ಇದರ ಉದ್ದೇಶ ಕಾಂಗೋ ಸರ್ಕಾರದ ಸೇನೆಯ ದಾಳಿಯಿಂದ ತನ್ನ ಸಂಪನ್ಮೂಲ ಮತ್ತು ಭೂಭಾಗವನ್ನು ರಕ್ಷಿಸಿಕೊಳ್ಳುವುದು. ನಾಲ್ಕನೆಯದಾಗಿ, ಕಿನ್ಸಾಶಾ ಮೈತ್ರಿಕೂಟದಲ್ಲಿ ಕಾಂಗೋ ಸರ್ಕಾರ, ಮಾಯಿ-ಮಯಿ ಗುಂಪು ಮತ್ತು ಮೈತ್ರಿ ದೇಶಗಳಾದ ಜಿಂಬಾಬ್ವೆ, ಅಂಗೋಲಾ, ಸೂಡಾನ್, ಛಡ್ ಮತ್ತು ನಮೀಬಿಯಾ ದೇಶಗಳು ಒಟ್ಟಿಗಿವೆ. ಈ ಮೈತ್ರಿ ಕೂಟವು ರಿಪಬ್ಲಿಕ್ ಕಾಂಗೋ ದೇಶದ ಪೂರ್ವ ಮತ್ತು ದಕ್ಷಿಣ ಭಾಗದ ಮೇಲೆ ನಿಯಂತ್ರಣ ಹೊಂದಿದೆ. ತನ್ನ ಗಡಿಯನ್ನು ರಕ್ಷಿಸಿಕೊಂಡು ನೈಸರ್ಗಿಕ ಸಂಪನ್ಮೂಲವನ್ನು ನಿಯಂತ್ರಿಸುವುದು ಇದರ ಉದ್ದೇಶ.

ಆಫ್ರಿಕಾದ ಮೊದಲನೇ ಮಹಾಯುದ್ಧ

ರುವಾಂಡಾದ ಹುಟು ಮತ್ತು ಬುರುಂಡಿಯ ದಂಗೆಕೋರ ಗುಂಪುಗಳು ೧೯೯೪ರಲ್ಲಿ ನಡೆಸಿದ ರುವಾಂಡಾ ನರಮೇಧದ ಅಂತ್ಯದಲ್ಲಿ ರುವಾಂಡಾ ಸರ್ಕಾರಿ ಸೇನೆಯ ಪ್ರತಿದಾಳಿಗೆ ಹೆದರಿ ೨೦ಲಕ್ಷ ಹುಟು ಜನತೆಯು ನಿರಾಶ್ರಿತರಾಗಿ ರುವಾಂಡಾವನ್ನು ತ್ಯಜಿಸಿ ಪಕ್ಕದ ಝೆುರೇ ಮತ್ತು ಟಾಂಜೇನಿಯಾ ದೇಶಗಳಿಗೆ ಓಡಿಹೋದರು. ಇದರಲ್ಲಿ ನರಮೇಧ ನಡೆಸಿದ ಹುಟು ಜನಾಂಗದ ನಾಯಕರು ಇದ್ದರು. ಝೆುರೇಯ ಬುಕಾವು, ಗೋಮ ಮತ್ತು ಉವಿರಾ ಪ್ರದೇಶಗಳಲ್ಲಿ ನೆಲೆಯೂರಿದ್ದ ನಿರಾಶ್ರಿತರ ಶಿಬಿರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಈ ನಾಯಕರು ಯಶಸ್ವಿಯಾದರು. ಇವರಿಗೆ ಬುರುಂಡಿಯ ಟುಟ್ಸಿ ಜನಾಂಗದ ಸರ್ಕಾರವನ್ನು ಕಿತ್ತೊಗೆಯಲು ಯತ್ನಿಸುತ್ತಿದ್ದ ಹುಟು ಜನತೆಯ ಸಂಘಟನೆ ಮತ್ತು ಝೆುರೇಯ ಅಧ್ಯಕ್ಷ ಮೊಬುಟು ಸೆಸೆ ಸೆಕೊ ಅವರು ಬೆಂಬಲವಾಗಿ ನಿಂತರು. ನೆರೆಯ ನೈರೋಬಿ, ಕೀನ್ಯಾ, ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳಿಂದ ಸಂಪನ್ಮೂಲ ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಾ ನಿರಾಶ್ರಿತ ಜನತೆಗೆ ಮಿಲಿಟರಿ ತರಬೇತಿ ನೀಡಿ ಸನ್ನದ್ಧಗೊಳಿಸಿದರು. ಅಂತಿಮವಾಗಿ, ಸೆಂಬ್ಲಮೆಂಟ್ ಡೆಮಕ್ರಟಿಕ್ ಪೋರ್ ಲ ರುವಾಂಡಾ(ಆರ್‌ಡಿಆರ್) ಎಂಬ ಸಂಘಟನೆಯ ನೇತೃತ್ವದಲ್ಲಿ ರುವಾಂಡದ ಹುಟು ಮತ್ತು ಬುರುಂಡಿಯ ದಂಗೆಕೋರ ಗುಂಪುಗಳು ರುವಾಂಡಾ ಸರ್ಕಾರದ ವಿರುದ್ಧ ೧೯೯೫-೧೯೯೬ರಲ್ಲಿ ಯುದ್ಧ ಸಾರಿದವು. ಇದಕ್ಕೆ ಪ್ರತ್ಯುತ್ತರವಾಗಿ, ಪಾಲ್ ಕಗಾಮೆ ನಾಯಕತ್ವದ ರುವಾಂಡಾ ಸರ್ಕಾರಿ ಸೇನೆಯು ಬಂಡಾಯ ಗುಂಪುಗಳ ನಾಯಕ ಕಬಿಲಾ ಸಹಕಾರದಲ್ಲಿ ಪೂರ್ವ ಝೆುರೇಯ ಮೇಲೆ ದಾಳಿಯಿಟ್ಟಿತು. ಆರ್‌ಡಿಆರ್ ಸೇನಾ ನೆಲೆಗಳನ್ನು ಧ್ವಂಸಗೊಳಿಸಿತು. ಈ ಪ್ರತಿ ದಾಳಿಯಿಂದ ನಿರಾಶ್ರಿತ ಜನತೆ ದಿಕ್ಕೆಟ್ಟು ಚೆಲ್ಲಾಪಿಲ್ಲಿಯಾದರು. ೬.೦ ಲಕ್ಷ ಜನ ನಿರಾಶ್ರಿತರಾಗಿ ಕಿವುಸ್ ಪ್ರದೇಶಕ್ಕೂ, ಸುಮಾರು ೪.೦ ಲಕ್ಷ ಜನರು ಟಾಂಜೇನಿಯಾಕ್ಕೂ ಓಡಿಹೋದರು. ಸಾವಿರಗಟ್ಟಲೆ ಜನ ಹಸಿವು, ಹಿಂಸೆಗಳಿಂದ ಮರಣ ಹೊಂದಿದರು. ಮೇ, ೧೯೯೭ರಲ್ಲಿ ರಾಜಧಾನಿ ಕಿನ್ಸಾಸಾವನ್ನು ಪ್ರವೇಶಿಸಿದಾಕ್ಷಣ ಝೆುರೇ ಅಧ್ಯಕ್ಷ ಮೊಬಟು ಅಲ್ಲಿಂದ ಪರಾರಿಯಾದ. ಯುದ್ಧಕ್ಕೆ ಅಂತ್ಯ ಹಾಡಿ ರಿಪಬ್ಲಿಕ್ ಕಾಂಗೋದ ಅಧ್ಯಕ್ಷ ಕಬಿಲಾ ಎಂದು ಘೋಷಿಸಲಾಯಿತು.

ಆಫ್ರಿಕಾದ ಎರಡನೇ ಮಹಾಯುದ್ಧ

ಜಾಂಬಿಯಾ, ಅಂಗೋಲಾ, ಕಾಂಗೋ, ಬೆಜ್ಜವಿಲ್ಲೆ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಛಡ್, ಸೂಡಾನ್, ಬುರುಂಡಿ ಮತ್ತು ಟಾಂಜೇನಿಯಾಗಳಲ್ಲಿ ಚದುರಿಹೋಗಿದ್ದ ಹುಟು ಜನಾಂಗದ ಹೋರಾಟಗಾರರು ಮತ್ತೆ ರುವಾಂಡಾ ವಿಮೋಚನಾ ಮೈತ್ರಿ (ಎಎಲ್‌ಐಆರ್) ಯನ್ನು ಸಂಘಟಿಸಿದರು. ಅದು ೧೯೯೭ರ ಹೊತ್ತಿಗೆ ಕೆಲಸ ಮಾಡಲಾರಂಭಿಸಿತು. ಇವರು ಕಬಿಲಾ ಸರ್ಕಾರದ ವಿರುದ್ಧ ಕತ್ತಿ ಮಸೆಯಲಾರಂಭಿಸಿದರು. ಎರಡನೇ ಕಾಂಗೋ ಮಹಾಯುದ್ಧವನ್ನು ಆಫ್ರಿಕಾದ ಮಹಾಯುದ್ಧವೆಂದೂ ಕರೆಯಲಾಗುತ್ತದೆ. ಆಫ್ರಿಕಾದ ೮ ರಾಷ್ಟ್ರಗಳ ನಡುವೆ ನಡೆದ ಈ ಯುದ್ಧವು ೧೯೯೪ರಲ್ಲಿ ಆರಂಭವಾಗಿ ೨೦೦೩ರಲ್ಲಿ ಕೊನೆಗೊಂಡಿತು. ಎರಡನೇ ವಿಶ್ವ ಮಹಾಯುದ್ಧಾನಂತರದಲ್ಲಿ ನಡೆದ ಅತ್ಯಂತ ಬರ್ಬರ ಯುದ್ಧ ಇದಾಗಿತ್ತು. ಇದರಲ್ಲಿ ೨೫ ಸಶಸ್ತ್ರ ಗುಂಪುಗಳು ಭಾಗಿಯಾಗಿದ್ದು ಸುಮಾರು ೩೮ ಲಕ್ಷ ಜನ ಬಹುತೇಕ ಹಸಿವು ಮತ್ತು ಬಡತನದಿಂದ ಅಸುನೀಗಿದ್ದಾರೆ. ಲಕ್ಷಾಂತರ ಜನರು ಈ ಯುದ್ಧದಿಂದಾಗಿ ನಿರಾಶ್ರಿತರಾಗಿದ್ದಾರೆ.

೨೦೦೧ರಲ್ಲಿ ಎಲ್ಲ ಬಂಡುಕೋರ ಗುಂಪುಗಳು ಮತ್ತು ದೇಶಗಳ ನಡುವೆ ಮಾತುಕತೆ ಗಳ ಮುಖಾಂತರ ಸಮಸ್ಯೆ ಬಗೆಹರಿಸಲು ಯತ್ನಿಸಲಾಯಿತು ಹಾಗೂ ಮಧ್ಯಂತರ ಸರ್ಕಾರ ರಚಿಸಿ ಲಾರೆಂಟ್ ಕಬಿಲಾರನ್ನು ರಿಪಬ್ಲಿಕ್ ಕಾಂಗೋದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅಂಗೋಲಾ, ಜಿಂಬಾಬ್ವೆ, ಛಡ್, ಸೂಡಾನ್ ಮತ್ತು ಲಿಬ್ಯಾಗಳು ಕಬಿಲಾ ಬೆಂಬಲಕ್ಕೆ ನಿಂತವು. ಆದರೆ, ೨೦೦೨ರಲ್ಲಿ ಅವರನ್ನು ಹತ್ಯೆ ಮಾಡಿದ್ದರಿಂದ ಅವರ ಮಗ ಜೋಸೆಫ್ ಕಬಿಲಾರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಮಧ್ಯಾಂತರ ಸರ್ಕಾರದ ಅವಧಿ ಮುಗಿದ ನಂತರ ೨೦೦೬ರಲ್ಲಿ ಸಾಮಾನ್ಯ ಚುನಾವಣೆ ನಡೆದು ಕಬಿಲಾ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದರು.

ಜಾಗತೀಕರಣ ಯುಗದಲ್ಲಿ ಆಫ್ರಿಕಾ

ನೈಜೇರಿಯಾವು ಪೆಟ್ರೋಲಿಯಂ ಉತ್ಪಾದನೆಯಲ್ಲಿ ಇಡೀ ವಿಶ್ವದಲ್ಲೇ ಹನ್ನೊಂದನೇ ಸ್ಥಾನದಲ್ಲಿದೆ. ನೈಜೀರಿಯಾ ಸರ್ಕಾರದ ಶೇ.೮೦ರಷ್ಟು ಆದಾಯವು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿದ್ದು ಯುರೋಪ್ ಮತ್ತು ಅಮೆರಿಕಗಳು ಪ್ರಧಾನವಾಗಿ ಆಮದು ಮಾಡಿಕೊಳ್ಳುತ್ತವೆ. ಅಂಗೋಲಾವು ಪೆಟ್ರೋಲಿಯಂ ಉತ್ಪಾದನೆಯಲ್ಲಿ ಆಫ್ರಿಕಾದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಆದರೆ ಶೇ.೯೦ರಷ್ಟು ಆದಾಯವು ಪೆಟ್ರೋಲಿಯಂ ರಪ್ತಿನಿಂದ ಬರುತ್ತಿದೆ. ಚೀನಾ ಈ ದೇಶದ ಪ್ರಮುಖ ಅಮದುದಾರ ರಾಷ್ಟ್ರವೆನಿಸಿದೆ. ಸೂಡಾನ್ ದೇಶವೂ ತನ್ನ ಬಹುಪಾಲು ಆದಾಯವನ್ನು ಪೆಟ್ರೋಲಿಯಂ ರಫ್ತಿನಿಂದಾಗಿ ಗಳಿಸುತ್ತಿದೆ.

ಆದರೂ ಆಫ್ರಿಕಾದಲ್ಲಿ ೧೯೮೫ರಿಂದೀಚೆಗೆ ಬಡತನ ಮತ್ತು ಮಿಲಿಟರಿ ಗಲಭೆಗಳು ಅಗಾಧ ಪ್ರಮಾಣದಲ್ಲಿ ಹೆಚ್ಚುತ್ತಿವೆ. ೧೯೮೯ರಲ್ಲಿ ಸೋವಿಯತ್ ಒಕ್ಕೂಟವು ವಿಘಟನೆಗೊಂಡದ್ದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಫ್ರಿಕಾವನ್ನು ಮತ್ತಷ್ಟು ಮಣಿಸಿ ಹೊಸ ರೂಪದ ಸುಲಿಗೆಕೋರ ಆರ್ಥಿಕ ನೀತಿಗಳನ್ನು ಹೇರಲಾಗುತ್ತಿದೆ.

ಒಂದರ್ಥದಲ್ಲಿ ಪ್ರಪಂಚದೆಲ್ಲೆಡೆ ಜಾಗತೀಕರಣ ನೀತಿಯನ್ನು ಜಾರಿ ಮಾಡುವ ಮೊದಲೇ ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಮೊದಲಿಗೆ ಅದನ್ನು ಅನಧಿಕೃತವಾಗಿ ಆಫ್ರಿಕಾ ರಾಷ್ಟ್ರಗಳಲ್ಲಿ ೧೯೮೦ರ ದಶಕದ ಸುಮಾರಿಗೆ ಜಾರಿ ಮಾಡಿದ್ದವೆಂದೇ ಹೇಳಬಹುದು. ಆಫ್ರಿಕನ್ ರಾಷ್ಟ್ರಗಳನ್ನು ಒಂದೇ ಮಾರುಕಟ್ಟೆಗೆ ಎಳೆತರುವುದು ನವ ವಸಾಹತುವಾದದ ರೂಪಗಳಲ್ಲೊಂದು. ಆಫ್ರಿಕಾದ ರಾಷ್ಟ್ರಗಳ ಸ್ವಾವಲಂಬನೆ ಮತ್ತು ಸ್ವತಂತ್ರ ಆರ್ಥಿಕ ಹಾದಿಗಳನ್ನು ಬುಡಮೇಲುಗೊಳಿಸಿದ ಪಾಶ್ಚಿಮಾತ್ಯ ರಾಷ್ಟ್ರಗಳು, ವಿಶ್ವಬ್ಯಾಂಕ್ ಮತ್ತು ಐಎಂಎಫ್ ಪ್ರೇರಿತ ರಚನಾತ್ಮಕ ಹೊಂದಾಣಿಕೆ ಕಾರ್ಯಕ್ರಮಗಳು, ಉದಾರ ಆರ್ಥಿಕ ನೀತಿ, ಸಾರ್ವಜನಿಕ ಉತ್ಪಾದನಾ ಕ್ಷೇತ್ರವನ್ನು ಕಿತ್ತೊಗೆಯುವುದು ಮತ್ತು ಮುಕ್ತ ಮಾರುಕಟ್ಟೆ ನೀತಿಗಳನ್ನು ಪರಿಹಾರವೆಂಬಂತೆ ನೀಡಿದವು. ಪಶ್ಚಿಮ ರಾಷ್ಟ್ರಗಳಲ್ಲಿ ಮುಖ್ಯವಾಗಿ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‌ಗಳು ಅಲ್ಲಿ ರಾಜಕೀಯ ಸುಧಾರಣೆ, ಬಹುಪಕ್ಷ ವ್ಯವಸ್ಥೆ, ಪತ್ರಿಕೋದ್ಯಮದ ಮುಕ್ತ ಸ್ವಾತಂತ್ರ್ಯಗಳ ನೆಪದಲ್ಲಿ ಮೇಲಿನ ವಿಧಾನಗಳನ್ನು ಪರಿಹಾರ ರೂಪದಲ್ಲಿ ಉಣಬಡಿಸಿದವು. ಜಾಗತೀಕರಣವು ಸ್ಥಳೀಯ ಉತ್ಪಾದನಾ ವ್ಯವಸ್ಥೆಯನ್ನು ಹಾಳುಗೆಡವಿ ಜಾಗತಿಕ ಸ್ಪರ್ಧಾ ಮಾರುಕಟ್ಟೆಯಲ್ಲಿ ಆಫ್ರಿಕಾದ ಉತ್ಪನ್ನಗಳನ್ನು ಮೂಲೆಗೆ ತಳ್ಳಿತು. ೧೯೯೨ ಮತ್ತು ೧೯೯೪ರ ನಡುವೆ ಜಿಂಬಾಬ್ವೆಯ ದೊಡ್ಡ ಜವಳಿ ಕಾರ್ಖಾನೆ ಸೇರಿದಂತೆ ಸುಮಾರು ೬೦ಕ್ಕೂ ಹೆಚ್ಚು ಕಾರ್ಖಾನೆಗಳನ್ನು ಮುಚ್ಚಲಾಯಿತು.

ರಪ್ತು ಕುಸಿತ

ಅಸಮಾನ ವ್ಯಾಪಾರ ನೀತಿಗಳಿಂದ ಆಫ್ರಿಕಾಗೆ ಬಹಳ ಪೆಟ್ಟು ಬಿದ್ದಿತು. ರಪ್ತು ಉತ್ಪನ್ನಗಳಿಗೆ ದೊರಕುತ್ತಿದ್ದ ಬೆಲೆಯು ಅಮದು ಉತ್ಪನ್ನಗಳಿಗೆ ಹೋಲಿಸಿದಲ್ಲಿ ಏನೇನೂ ಇರಲಿಲ್ಲ. ಜಾಗತಿಕ ವ್ಯಾಪಾರದಲ್ಲಿ ಆಫ್ರಿಕಾದ ಪಾಲು ಕುಸಿದು ಹೋಗಲು ಕಾರಣವೆಂದರೆ ಬಹುತೇಕ ರಾಷ್ಟ್ರಗಳು ಕೇವಲ ಕೆಲವೇ ಉತ್ಪನ್ನಗಳ ರಪ್ತಿನ ಮೇಲೆ ಅವಲಂಬಿತವಾಗಿದ್ದವು. ಒಟ್ಟಾರೆ ರಪ್ತಿನಲ್ಲಿ ಶೇ.೭೫ರಷ್ಟು ಪಾಲು ಒಂದೇ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ರಾಷ್ಟ್ರಗಳೆಂದರೆ ಅಂಗೋಲ, ಬೊಟ್ಸಾವಾನಾ, ಬುರುಂಡಿ, ಕಾಂಗೋ, ಗ್ಯಾಬನ್, ನೈಜರ್, ನೈಜೀರಿಯಾ, ಸೋಮಾಲಿಯಾ, ಉಗಾಂಡಾ ಮತ್ತು ಜಾಂಬಿಯಾ. ತಮ್ಮ ರಪ್ತು ಪ್ರಮಾಣದಲ್ಲಿ ಕನಿಷ್ಟ ಶೇ.೨೫ರಷ್ಟನ್ನು ನಾಲ್ಕಕ್ಕೂ ಹೆಚ್ಚು ಉತ್ಪನ್ನಗಳಿಂದ ಗಳಿಸುವ ರಾಷ್ಟ್ರಗಳೆಂದರೆ ಗ್ಯಾಂಬಿಯಾ, ಲೆಸೊತೊ, ದಕ್ಷಿಣ ಆಫ್ರಿಕಾ, ಸ್ವಾಜಿಲ್ಯಾಂಡ್, ಟ್ಯಾಂಜೇನಿಯಾ ಮತ್ತು ಜಿಂಬಾಬ್ವೆ. ೧೯೮೦ರಿಂದ ೨೦೦೦ರವರೆಗೆ, ಆಫ್ರಿಕಾದ ರಫ್ತು ಪ್ರಮಾಣವು ಕುಸಿತಗೊಂಡು ಸಕ್ಕರೆ ಶೇ.೭೭ರಷ್ಟು ಕೋಕೋ ಶೇ.೭೧, ಕಾಫಿ ಶೇ.೬೪ರಷ್ಟು ಮತ್ತು ಹತ್ತಿಯು ಶೇ.೪೭ರಷ್ಟು ಕುಸಿತಗೊಂಡಿದೆ. ಇದೇ ವೇಳೆ ಆಫ್ರಿಕಾದಿಂದ ಅಮೆರಿಕಕ್ಕೆ ರಪ್ತಾಗುವ ಕಡಲೆಕಾಯಿ ಮೇಲಿನ ಅಮದು ಸುಂಕವನ್ನು ಅಮೆರಿಕವು ಶೇ.೧೩೨ರಷ್ಟು ಹೆಚ್ಚಿಸಿದೆ.

ಈ ಮಧ್ಯೆ ಚೀನಾ ಮತ್ತು ಆಫ್ರಿಕಾ ನಡುವಿನ ಬಾಂಧವ್ಯ ವೃದ್ದಿಸುತ್ತಿದೆ. ೧೯೯೦ರ ಹೊತ್ತಿಗೆ ಆಫ್ರಿಕಾ ಮತ್ತು ಚೀನಾದ ವ್ಯಾಪಾರವು ಶೇ.೭೦೦ರಷ್ಟು ಬೆಳವಣಿಗೆ ಹೊಂದಿದೆ. ಅಂಗೋಲಾ, ಸೂಡಾನ್ ಮತ್ತು ಇನ್ನಿತರ ದೇಶಗಳಿಂದ ಚೀನಾ ಪೆಟ್ರೋಲಿಯಂನ್ನು ಆಮದು ಮಾಡಿಕೊಳ್ಳುತ್ತಿದೆ. ಅಮೆರಿಕ ಮತ್ತು ಫ್ರಾನ್ಸ್‌ನ ನಂತರ ಚೀನಾ ಅತಿ ದೊಡ್ಡ ವ್ಯಾಪಾರ ಮೈತ್ರಿಯನ್ನು ಏರ್ಪಡಿಸಿದೆ. ಚೀನಾದ ಮೈತ್ರಿಯು ಬರೆ ವ್ಯಾಪಾರೋದ್ದೇಶಕ್ಕೆ ಮಾತ್ರವೇ ಸೀಮಿತವಾಗಿರದೆ, ಆಫ್ರಿಕಾದಲ್ಲಿ ರೈಲು ಮಾರ್ಗ, ಶಾಲೆಗಳು, ರಸ್ತೆಗಳು, ಆಸ್ಪತ್ರೆಗಳು, ಸೇತುವೆಗಳು ಮತ್ತು ಕಚೇರಿ ನಿರ್ಮಾಣಗಳಂತಹ ಅಭಿವೃದ್ದಿ ಕಾರ್ಯಗಳಿಗೂ ಸಹ ನೆರವು ನೀಡುತ್ತಿದೆ. ಆಫ್ರಿಕಾ ಪಡೆದಿದ್ದ ೧೦ ಬಿಲಿಯನ್ ಡಾಲರ್ ಸಾಲವನ್ನು ಚೀನಾ ಇತ್ತೀಚೆಗಷ್ಟೇ ಮನ್ನಾ ಮಾಡಿತು. ಆಫ್ರಿಕಾ ದೇಶಗಳಲ್ಲಿ ಶಾಂತಿಪಾಲನೆಗಾಗಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಸುಮಾರು ೧,೫೦೦ ಸೈನಿಕರನ್ನು ಅದು ಕಳುಹಿಸಿದೆ. ಆರೋಗ್ಯ ಸೇವೆ ಒದಗಿಸಲು ತನ್ನ ಡಾಕ್ಟರುಗಳನ್ನು ಆಫ್ರಿಕಾಕ್ಕೆ ಕಳುಹಿಸಿದೆ. ಆಫ್ರಿಕಾದ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಚೀನಾದ ವಿಶ್ವವಿದ್ಯಾನಿಲಯ ಮತ್ತು ತರಬೇತಿ ಕೇಂದ್ರಗಳಲ್ಲಿ ತರಬೇತು ಪಡೆಯುತ್ತಿದ್ದಾರೆ.

ಇನ್ನೊಂದೆಡೆ, ನಿರಂತರವಾಗಿ ಆಫ್ರಿಕನ್ ರಾಷ್ಟ್ರಗಳಿಗೆ ಅಗಾಧ ಪ್ರಮಾಣದ ಸಾಲ ನೀಡುತ್ತಾ ಐಎಂಎಫ್ ಮತ್ತು ವಿಶ್ವಬ್ಯಾಂಕ್ ಮೂಲಕ ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಅಪಾರ ಹೊರೆಯನ್ನು ಹೇರಿದವು. ಉದಾಹರಣೆಗೆ, ೧೯೯೦ರಲ್ಲಿ ೬೦ ಬಿಲಿಯನ್ ಡಾಲರ್ ಸಾಲ ಪಡೆದದ್ದಕ್ಕೆ ೧೯೯೭ರ ಹೊತ್ತಿಗೆ ಆಫ್ರಿಕಾದ ರಾಷ್ಟ್ರಗಳು ೧೬೨ ಬಿಲಿಯನ್ ಡಾಲರ್ ಬಡ್ಡಿ ಸಮೇತ ಸಾಲ ಮರುಪಾವತಿ ಮಾಡಿದ್ದವು. ಕುತ್ತಿಗೆಯ ಸುತ್ತ ಉಸಿರುಗಟ್ಟುವಂತೆ ಬಿಗಿದಿದ್ದ ಸಾಲವನ್ನು ಮರುಪಾವತಿ ಮಾಡಲಾಗದೆ ಮಿಸುಕಾಡುತ್ತಿದ್ದವು. ಇದರಂದಾಗಿ ವಿಶ್ವಸಂಸ್ಥೆಯ ವರದಿಯಂತೆ, ಸರಾಸರಿ ಆಫ್ರಿಕಾದ ಕುಟುಂಬಕ್ಕೆ ೨೫ ವರ್ಷಗಳ ಹಿಂದೆ ಸಿಗುತ್ತಿದ್ದ ಆಹಾರಕ್ಕಿಂತ ಶೇಕಡಾ ೨೦ರಷ್ಟು ಕಡಿಮೆ ಆಹಾರ ದೊರಕುತ್ತಿದೆ. ಅಮೆರಿಕದ ಪ್ರಜೆಯೊಬ್ಬ ಗಳಿಸುವ ಪ್ರತಿ ಡಾಲರ್‌ಗೆ ಆಫ್ರಿಕಾದ ಪ್ರಜೆ ಕೇವಲ ೦.೦೬ ಡಾಲರ್ ಗಳಿಸುತ್ತಿದ್ದಾನಷ್ಟೆ. ೧೯೯೮ರಲ್ಲಿ ಆಫ್ರಿಕಾವು ಶೇ.೧೦ರಷ್ಟು ವಿಶ್ವ ಜನಸಂಖ್ಯೆಯನ್ನು ಹೊಂದಿದ್ದರೆ, ಕೇವಲ ಶೇ.೧ರಷ್ಟು ಕೈಗಾರಿಕಾ ಉತ್ಪಾದನೆಯ ಪಾಲನ್ನು ಹೊಂದಿತ್ತು. ಇಸ್ತ್ರೇಲ್ ಮತ್ತು ಬೆಲ್ಜಿಯಂ ದೇಶಗಳು ಅಗಾಧ ಮೊತ್ತ ಶಸ್ತ್ರಾಸ್ತ್ರಗಳನ್ನು ಉಗಾಂಡಕ್ಕೆ ನೀಡಿ ಬದಲಿಗೆ ಅಲ್ಲಿನ ಬೆಲೆಬಾಳುವ ವಜ್ರಗಳನ್ನು ಕೊಳ್ಳೆ ಹೊಡೆಯುತ್ತಿವೆ. ಆಫ್ರಿಕಾ ರಾಷ್ಟ್ರಗಳಲ್ಲಿ ಮಕ್ಕಳ ಅಪೌಷ್ಟಿಕತೆಯ ಪ್ರಮಾಣವು ಶೇ.೨೫ರಿಂದ ೫೦ರವರೆಗೂ ಇದೆ. ಹೆಚ್.ಐ.ವಿ.ರೋಗದ ಸೋಂಕಿಗೆ ತುತ್ತಾದವರ ಸಂಖ್ಯೆಯು ವಿಶೇಷವಾಗಿ ಪೂರ್ವ, ಮಧ್ಯ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಎಬೋಲಾದಂತಹ ಅಪಾಯಕಾರಿ ವೈರಸ್ ರೋಗಗಳನ್ನು ನಿಯಂತ್ರಿಸಲಾಗದೆ ಸಾವಿರಾರು ಆಫ್ರಿಕನ್ನರು ಮರಣವಾದರು. ಪ್ರತಿ ವರ್ಷ ಸುಮಾರು ೭೦,೦೦೦ ಪರಿಣತ ಕೆಲಸಗಾರರು ಆಫ್ರಿಕಾದಿಂದ ಅಭಿವೃದ್ದಿ ಹೊಂದಿದ ರಾಷ್ಟ್ರಗಳಿಗೆ ವಲಸೆ ಹೋಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಜಾಂಬಿಯಾವು ತನ್ನ ೧೪೦೦ ಡಾಕ್ಟರುಗಳಲ್ಲಿ ಸುಮಾರು ೪೦೦ ಮಂದಿಯನ್ನು ಪ್ರತಿಭಾ ಪಲಾಯನದಿಂದಾಗಿ ಕಳೆದುಕೊಂಡಿದೆ.

 

ಪರಾಮರ್ಶನ ಗ್ರಂಥಗಳು

೧. ಬೆಸಿಲ್ ಡೇವಿಡ್ಸನ್, ೧೯೭೩. ವಿಚ್ ವೇ ಆಫ್ರಿಕಾ?  ಮೂರನೇ ಮುದ್ರಣ, ಲಂಡನ್: ಪೆಂಗ್ವಿನ್ ಬುಕ್ಸ್.

೨. ಜಾಕ್ ವುಡ್ಸ್, ೧೯೭೭. ನ್ಯೂ ಥಿಯರೀಸ್ ಆಫ್ ರೆವಲ್ಯೂಷನ್,   ನ್ಯೂಯಾರ್ಕ್‌ : ಇಂಟರ್ ನ್ಯಾಷನಲ್ ಪಬ್ಲಿಷರ್ಸ್‌.

೭. ಪ್ಯಾಟ್ರಿಕ್ ಬಾಂಡ್, ಡಾರ್ಲಿನ್ ಮಿಲ್ಲರ್ ಮತ್ತು ಗ್ರೆಗ್ ರಾಯಟರ್ಸ್‌, ೨೦೦೧. ದಿ ಸೌತ್ ಆಫ್ರಿಕನ್ ವರ್ಕಿಂಗ್ ಕ್ಲಾಸ್: ಪ್ರೊಡಕ್ಷನ್, ರಿಪ್ರೊಡಕ್ಷನ್ ಅಂಡ್ ಪಾಲಿಟಿಕ್ಸ್,  ಸೋಷಿಯಲಿಸ್ಟ್ ರಿಜಿಸ್ಟರ್.