ದಕ್ಷಿಣ ಆಫ್ರಿಕಾ

ವರ್ಣಭೇದ ನೀತಿಯಿರುವ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯ ಜನಾಂಗವು ಸಾಮ್ರಾಜ್ಯಶಾಹಿ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್ ಮತ್ತು ಜರ್ಮನಿಗಳಿಂದ ಬೆಂಬಲ ಪಡೆದಿತ್ತು. ದಕ್ಷಿಣ ಆಫ್ರಿಕಾದ ಸಾಮಾಜಿಕ ಮತ್ತು ಆರ್ಥಿಕ ರಚನೆ ಹೇಗಿತ್ತೆಂದರೆ ಅದು ವಸಾಹತುವಾಗಿರದಿದ್ದರೂ, ವಿದೇಶಿ ಬಿಳಿಯ ಜನಾಂಗವು ಸಣ್ಣ ಸಂಖ್ಯೆಯಲ್ಲಿದ್ದರೂ, ಬಹುಸಂಖ್ಯಾತ ಜನತೆಯನ್ನು ದಮನ ಮಾಡುತ್ತಿತ್ತು. ಆ ದೇಶವನ್ನು ನಿಯಂತ್ರಣದಲ್ಲಿಟ್ಟುಕೊಂಡದ್ದು ದೂರದಲ್ಲೆಲ್ಲೊ ಇರುವ ಅನ್ಯರಾಷ್ಟ್ರವಾಗಿರದೆ, ತನ್ನದೇ ಗಡಿಯೊಳಗಿರುವ ಬಿಳಿಯ ಜನಾಂಗವಾಗಿತ್ತು. ದಕ್ಷಿಣ ಆಫ್ರಿಕಾದ ಕಾರ್ಮಿಕರ ಸಂಖ್ಯೆಯು ಹೆಚ್ಚಳಗೊಂಡಂತೆ ಸ್ವಾತಂತ್ರ್ಯಕ್ಕಾಗಿ ಮುಷ್ಕರ ಗಳನ್ನು ನಡೆಸಲಾಯಿತು. ದಕ್ಷಿಣ ಆಫ್ರಿಕಾದ ಕಾರ್ಮಿಕರ ಸಂಖ್ಯೆಯು ಹೆಚ್ಚಳಗೊಂಡಂತೆ ಸ್ವಾತಂತ್ರ್ಯಕ್ಕಾಗಿ ಮುಷ್ಕರಗಳನ್ನು ನಡೆಸಲಾಯಿತು. ಇದರೊಂದಿಗೆ ಸ್ಟೀವ್ ಬೈಕೊ ಅವರ ಕಪ್ಪು ಜನಾಂಗದ ಪ್ರಜ್ಞೆಯ ಚಳುವಳಿ ಮತ್ತು ವಿದ್ಯಾರ್ಥಿ ನೇತೃತ್ವದ ಚಳುವಳಿಗಳು ತೀವ್ರಗೊಂಡವು. ೧೯೮೫ರಲ್ಲಿ ದಕ್ಷಿಣ ಆಫ್ರಿಕಾ ಕಾರ್ಮಿಕ ಸಂಘಟನೆಗಳ ಒಕ್ಕೂಟವನ್ನು ಕೊಸಾಟು ಸ್ಥಾಪಿಸಲಾಯಿತು. ಇದು ಸ್ವಾತಂತ್ರ್ಯ ಚಳುವಳಿಗೆ ಇನ್ನಿಲ್ಲದಂಥ ಸ್ಥೈರ್ಯ ನೀಡಿತು. ಈ ಒಕ್ಕೂಟವು ಒಂದು ಮಾದರಿ ಸಂಘಟನೆಯಾಗಿ ನಮೀಬಿಯಾ, ಜಾಂಬಿಯಾ, ಜಿಂಬಾಬ್ವೆ ಮತ್ತು ಸ್ವಾಜಿಲ್ಯಾಂಡ್‌ಗಳಲ್ಲಿನ ಕಾರ್ಮಿಕ ಸಂಘಟನೆಗಳಿಗೆ ನೇರವಾದ ನೆರವು ುತ್ತು ನಿರ್ದೇಶನಗಳನ್ನು ನೀಡಿತು. ಆದರೂ ದಕ್ಷಿಣ ಆಫ್ರಿಕಾ ಸರ್ಕಾರದ ನಾಯಕನಾಗಿದ್ದ ಪಿ.ಡಬ್ಲ್ಯೂ ಬೋಥಾನು ಇದಕ್ಕೆ ಮಣಿಯದೆ ತುರ್ತು ಪರಿಸ್ಥಿತಿ ಹೇರಿದನು. ಧೃತಿಗೆಡದ ಕಾರ್ಮಿಕರ ನೇತೃತ್ವದಲ್ಲಿ ಜನರು ಬೀದಿಗಳಲ್ಲಿ ಹೆಚ್ಚೆಚ್ಚು ನೆರೆಯಲಾರಂಭಿಸಿದರು. ಕಾರ್ಖಾನೆಗಳು ಮುಷ್ಕರದಿಂದ ಗರಬಡಿದಂತೆ ನಿಂತವು. ವರ್ಣಭೇದ ನೀತಿಯನ್ನು ಹತ್ತಿಕ್ಕುವಂತೆ ಮತ್ತು ಕರಿಯರಿಗೂ ಕೂಡ ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ದಕ್ಷಿಣ ಆಫ್ರಿಕಾದ ಜನತೆಯೂ ಸೇರಿದಂತೆ ಪ್ರಪಂಚದ ಎಲ್ಲ ಮೂಲೆಗಳಿಂದ ಒತ್ತಡ ಬರಲಾಂಭಿಸಿತು. ಹಲವು ದೇಶಗಳು ಆರ್ಥಿಕ ದಿಗ್ಬಂಧನ ವಿಧಿಸಿದವು.

೧೯೮೯ರಲ್ಲಿ ಪಿ.ಡಬ್ಲ್ಯೂ ಬೋಥಾ ಅವರ ಸ್ಥಾನದಲ್ಲಿ ಎಫ್.ಡಬ್ಲ್ಯೂ.ಡಿ. ಕ್ಲರ್ಕ್ ಎಂಬುವನು ಅಧ್ಯಕ್ಷನಾದನು. ಒಂದೆಡೆ, ನೆಲ್ಸನ್ ಮಂಡೇಲಾ, ಆಲಿವರ್ ಟ್ಯಾಂಬೊ ಮತ್ತು ವಾಲ್ಟರ್ ಸಿಸುಲು ಅವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಸಂಘಟನೆಗೆ ನಾಯಕತ್ವ ನೀಡಿದ್ದರು. ೧೯೯೦ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮತ್ತು ದಕ್ಷಿಣ ಆಫ್ರಿಕಾದ ಕಮ್ಯುನಿಸ್ಟ್ ಪಕ್ಷಗಳ ಮೇಲೆ ವಿಧಿಸಿದ್ದ ನಿರ್ಬಂಧವನ್ನು ರದ್ದುಗೊಳಿಸಲಾಯಿತು. ಇದರೊಂದಿಗೆ ಈ ಪಕ್ಷಗಳು ತಮ್ಮ ಹಿಂಸಾತ್ಮಕ ಹೋರಾಟವನ್ನು ಕೈಬಿಟ್ಟವು. ಮತ್ತೊಂದೆಡೆ, ಈ ಒತ್ತಡದ ಪರಿಣಾಮ ೧೯೯೦ರ ಹೊತ್ತಿಗೆ ವರ್ಣಭೇದ ನೀತಿಯ ವಿರುದ್ಧ ಹೋರಾಡುತ್ತಿದ್ದ ನೇತಾರ ಆಫ್ರಿಕಾದ ಮಹಾತ್ಮ ನೆಲ್ಸನ್ ಮಂಡೇಲಾರನ್ನು ಬಿಡುಗಡೆ ಮಾಡಿ ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ೧೯೯೪ರಲ್ಲಿ ನಡೆದ ಚುನಾವಣೆಯಲ್ಲಿ ನೆಲ್ಸನ್ ಮಂಡೇಲಾ ನೇತೃತ್ವದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ನ್ಯಾಷನಲ್ ಪಕ್ಷ ಮತ್ತು ಇಂಕತ ಫ್ರೀಡಂ ಪಕ್ಷಗಳೊಂದಿಗೆ ಒಡಗೂಡಿ ಮೈತ್ರಿ ಸರ್ಕಾರವನ್ನು ರಚಿಸಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ ಹೊಸ ಸರ್ಕಾರವು ಜುಲು ಎಂಬ ಅಲ್ಪಸಂಖ್ಯಾತ ಜನತೆಯ ಹಿತಕಾಯಲಾರದೆಂದು ಇಂಕತ ಫ್ರೀಡಂ ಪಕ್ಷವು ೧೯೯೬ರಲ್ಲಿ ತನ್ನ ಬೆಂಬಲವನ್ನು ವಾಪಸ್ಸು ಪಡೆದುಕೊಂಡಿತು. ಈ ಪಕ್ಷದ ನಾಯಕ ಮಾಂಗೊಸುತು ಬುತೆಲೆಜಿಯ ನೇತೃತ್ವದಲ್ಲಿ ಜುಲು ಜನಾಂಗದ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಜನಾಂಗೀಯ ಘರ್ಷಣೆಗಳು ನಡೆದವು. ೧೯೯೯ರಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ಜಯ ಭೇರಿ ಬಾರಿಸಿ ಶೇಕಡಾ ೬೬ರಷ್ಟು ಮತಗಳಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ತಬೋ ಮುಬೆಕಿಯವರು ಆಫ್ರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ ೨೦೦೪ರಲ್ಲಿ ನಡೆದ ಚುನಾವಣೆಯಲ್ಲೂ ಕೂಡ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ಜಯ ಗಳಿಸಿದರೂ ಸಂವಿಧಾನಕ್ಕೆ ತಿದ್ದುಪಡಿ ತರಲು ಅವಶ್ಯವಿರುವ ಮೂರನೇ ಎರಡರಷ್ಟು ಸ್ಥಾನಗಳನ್ನು ಗಳಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಕಮ್ಯುನಿಸ್ಟ್ ಪಕ್ಷವು ಕಾರ್ಮಿಕ ಸಂಘಟನೆಗಳ ಚಳುವಳಿ ಮತ್ತು ಹೋರಾಟಗಳ ಮೂಲಕ ತನ್ನ ಪ್ರಭಾವವನ್ನು ವಿಸ್ತೃತಗೊಳಿಸುತ್ತಿದೆ. ವಸಾಹತು ರಾಷ್ಟ್ರಗಳು ರಾಜಕೀಯ ಸ್ವಾತಂತ್ರ್ಯ ಪಡೆದದ್ದೇನೂ ವಸಾಹತುಶಾಹಿಯು ಅಂತಿಮ ಸೋಲನುಭವಿಸಿತು ಎಂದೇನಲ್ಲ. ಆದರೆ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಹೊಸ ರೂಪದ ವಸಾಹತು ನೀತಿಯನ್ನು ಜನತೆಗಳ ಮೇಲೆ ಹರಿಯಬಿಟ್ಟಿತು. ಸಾಲ ನಿಧಿ ಮತ್ತು ಇನ್ನಿತರ ಹೆಸರಿನಲ್ಲಿ ಆರ್ಥಿಕ ಗುಲಾಮಗಿರಿಯನ್ನು ಆಧುನಿಕ ನಾಗರಿಕ ಚೌಕಟ್ಟಿಗೆ ಅಳವಡಿಸಿತು.

ಆಫ್ರಿಕಾದ ಜನತೆಯಲ್ಲಿ ಬೇರೂರಿರುವ ಆರ್ಥಿಕ ಹಿಂದುಳಿಕೆ, ಅಸ್ಥಿರ ರಾಜಕೀಯ, ತಂತ್ರಜ್ಞರ ಕೊರತೆ ಮತ್ತು ಮಿಲಿಯಗಟ್ಟಲೆ ಜನರ ಪ್ರಜ್ಞೆಯಲ್ಲಿ ಬುಡಕಟ್ಟು ಸಿದ್ಧಾಂತದ ಪ್ರಭಾವ ಈ ದೌರ್ಬಲ್ಯಗಳನ್ನು ಬಳಸಿಕೊಂಡು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಹೆಚ್ಚೆಚ್ಚು ಶೋಷಿಸಲಾರಂಭಿಸಿದವು. ರಾಷ್ಟ್ರೀಯ ವಿಮೋಚನಾ ಚಳುವಳಿಗಳನ್ನು ವಿಭಜಿಸಲು ಯತ್ನಿಸಿದವು. ಇದಕ್ಕೆ ಉದಾಹರಣೆಯೆಂದರೆ ಪ್ರ್ಯಾಟ್ರಿಸ್ ಲೂಮುಂಬಾ ನೇತೃತ್ವದ ಕಾಂಗೋ ಸರ್ಕಾರದ ಪ್ರಗತಿಪರ ನೀತಿಗಳ ವಿರುದ್ಧ ವಿದೇಶಿ ಶಕ್ತಿಗಳು ಆಕ್ರಮಣ ಮಾಡಿದ್ದು. ಆಫ್ರಿಕಾ ಒಕ್ಕೂಟದ ರಾಷ್ಟ್ರಗಳ ಸರ್ಕಾರವನ್ನು ನಿರಂತರವಾಗಿ ಅಸ್ಥಿರಗೊಳಿಸುತ್ತಾ ಕೈಗೊಂಬೆ ಸರ್ಕಾರಗಳನ್ನು ಸ್ಥಾಪಿಸಲು ಯತ್ನಿಸಿದವು.

ಆಂಗ್ಲೋ-ಫ್ರೆಂಚ್-ಇಸ್ತ್ರೇಲ್ ದಾಳಿ ವಿರುದ್ಧ ಈಜಿಪ್ಟಿನ ಜನತೆಯು ಜಯ ಗಳಿಸುವಲ್ಲಿ ಸೋವಿಯತ್ ಒಕ್ಕೂಟದ ಬೆಂಬಲವು ನಿರ್ಣಾಯಕವಾಗಿತ್ತು. ೧೯೭೦ರ ಹೊತ್ತಿಗೆ ಸೋವಿಯತ್ ರಷ್ಯಾವು ೩೪ ಆಫ್ರಿಕನ್ ರಾಷ್ಟ್ರಗಳೊಡನೆ ಸಂಬಂಧ ಬೆಳೆಸಿತ್ತು. ಆರ್ಥಿಕ, ತಾಂತ್ರಿಕ ಮತ್ತು ಇನ್ನಿತರ ನೆರವನ್ನು ಅದು ನೀಡಿತ್ತು. ಅದರ ನೆರವಿನಿಂದಾಗಿ ಆಫ್ರಿಕಾದಲ್ಲಿ ಸ್ವತಂತ್ರಗೊಂಡ ರಾಷ್ಟ್ರಗಳ ಅಧಿಕಾರದಡಿಯಲ್ಲಿ ಪ್ರಥಮ ಬಾರಿಗೆ ೧೨೫ ಕೈಗಾರಿಕಾ ಘಟಕಗಳು ಸೇರಿದಂತೆ ೩೨೦ ವಾಣಿಜ್ಯ ಘಟಕಗಳನ್ನು ನಿರ್ಮಿಸಲಾಯಿತು. ಆ ಸಮಯ ದಲ್ಲಿ ೫,೦೦೦ಕ್ಕೂ ಮೀರಿ ಆಫ್ರಿಕನ್ ವಿದ್ಯಾರ್ಥಿಗಳು ಸೋವಿಯತ್ ರಷ್ಯಾದಲ್ಲಿ ಅಭ್ಯಸಿಸುತ್ತಿದ್ದರು. ೧೯೭೦ರ ಹೊತ್ತಿಗೆ ಸ್ವತಂತ್ರ ಆಫ್ರಿಕನ್ ರಾಷ್ಟ್ರಗಳ ಸಂಖ್ಯೆಯು ೪೧ನ್ನು ಮುಟ್ಟಿತು.

ಆಫ್ರಿಕಾದ ರಾಜಕೀಯ ಹಾದಿ ಮತ್ತು ಸ್ವಾತಂತ್ರ್ಯಾನಂತರದ ಆಫ್ರಿಕಾ

ಆಫ್ರಿಕಾದಲ್ಲಿ ದುಡಿಯುವ ವರ್ಗವು ಸಣ್ಣ ವಿಭಾಗವಾಗಿತ್ತು. ರಾಜಕೀಯ ಅಧಿಕಾರವು ಸಣ್ಣಪುಟ್ಟ ಬಂಡವಾಳಿಗರ ಕೈಯಲ್ಲಿತ್ತು. ಆಫ್ರಿಕಾದ ಹಲವು ದೇಶಗಳು ಪ್ರಮುಖವಾಗಿ ಮೂರು ಸೈದ್ಧಾಂತಿಕ ರಾಜಕೀಯ ಕವಲು ಹಾದಿಯಲ್ಲಿ ಮುನ್ನಡೆದವು. ಮೊದಲ ಎರಡು ವಿಭಾಗದಲ್ಲಿ ಸಮಾನತೆಯುಳ್ಳ ಸಮಾಜ ನಿರ್ಮಾಣಕ್ಕಾಗಿ ದೂರದೃಷ್ಟಿ ಹೊಂದಿದ್ದ ನಾಯಕರನ್ನು ಕಾಣಬಹುದಾಗಿದೆ. ಈ ನಾಯಕರು ಸಮಾನತೆ ಮತ್ತು ಸ್ವಾವಲಂಬನೆಗೆ ಮಹತ್ವ ನೀಡಿದರು. ತಮ್ಮ ದೇಶದ ಆರ್ಥಿಕತೆಯನ್ನು ವಸಹಾತುಶಾಹಿಯ ಸರಪಳಿಯಿಂದ ಬಂಧಮುಕ್ತಗೊಳಿಸಲು ಆಸ್ಥೆ ವಹಿಸಿದರು.

ಮೊದಲನೆಯದಾಗಿ ಆಫ್ರೋಮಾರ್ಕ್ಸ್‌ವಾದಿ ಸಿದ್ಧಾಂತದಲ್ಲಿ ಕೆಲಮಟ್ಟಿಗೆ ನಂಬಿಕೆ ಯಿಟ್ಟಿದ್ದ ರಾಷ್ಟ್ರಗಳೆಂದರೆ ಅಂಗೋಲಾ, ಇಥಿಯೋಯಾ, ಜಿನಿಯಾ ಬಿಸ್ಸಾವು, ಕೇಪ್ ವರ್ಡ್ ಮತ್ತು ಪ್ರಿನ್ಸಿಪ್ ದ್ವೀಪಗಳು, ಮೊಜಾಂಬಿಕ್, ಬಿನಿನ್, ಮಲಗಯ್, ಸೋಮಾಲಿಯಾ, ಬುರ್ಕಿನಾಫಾಸೋ ಮತ್ತು ಕಾಂಗೋ. ಇದರ ಪ್ರತಿಪಾದಕರು ತಮ್ಮ ಸಿದ್ಧಾಂತವನ್ನು ವಸಾಹತುಪೂರ್ವ ಆಫ್ರಿಕಾದ ಪ್ರಮುಖವಾಗಿ ಆಸ್ತಿಯ ಮೇಲೆ ಸಾಮೂಹಿಕ ಒಡೆತನ ಹೊಂದಿದ್ದ ಆದಿಮ ಕಮ್ಯುನಿಸ್ಟ್ ಸಮಾಜದ ದೃಷ್ಟಿಕೋನ ಹೊಂದಿದ್ದರು. ಆದರೆ ವಸಾಹತುಶಾಹಿಯು ಆಫ್ರಿಕಾದ ಸಮಾಜದೊಳಗೆ ಮಾಡಿದ್ದ ಮಾರ್ಪಾಡುಗಳನ್ನು ಮತ್ತು ಸಮಾಜದ ವಿಭಜನೆಯನ್ನು ಇವರು ಕಡೆಗಣಿಸಿದ್ದರು. ಈ ಸಿದ್ಧಾಂತವು ಯಾವುದೇ ಕಾರ್ಮಿಕ ಚಳುವಳಿಯ ವಿಸ್ತರಣೆಯಾಗಿರದೆ ರಾಷ್ಟ್ರೀಯ ವಿಮೋಚನೆ, ಪ್ರಜಾಸತ್ತಾತ್ಮಕ ಚಳುವಳಿಗಳು ಮತ್ತು ವಸಾಹತುಶಾಹಿ ವಿರೋಧಿ ಚಳುವಳಿಯೊಂದಿಗೆ ಮೂಡಿಬಂದಿತು.

ಎರಡನೆಯದಾಗಿ, ಮಾರ್ಕ್ಸ್‌ವಾದಿ-ಸಮಾಜವಾದಿಗಳೆಂದು ಕರೆಯಲ್ಪಡುತ್ತಿದ್ದ ರಾಷ್ಟ್ರ ಗಳೆಂದರೆ ಟ್ಯಾಂಜೇನಿಯಾ (ಜೂಲಿಯಸ್ ನ್ಯೇರೇರೆ), ಘಾನಾ (ಕ್ವಾಮೆ ಎನ್‌ಕ್ರೂಮಾ), ಜಾಂಬಿಯಾ (ಕೆನೆತ್ ಕೌಂಡ), ಜಿಂಬಾಬ್ವೆ (ರಾಬರ್ಟ್ ಮುಗಾಬೆ), ಜಿನಿಯಾ (ಸಿಕಾವೊ ಟೌರೆ) ಮತ್ತು ಉಗಾಂಡಾ (ಮಿಲ್ಟನ್ ಒಬೊಟು), ಮಾರ್ಕ್ಸ್‌ವಾದಿ-ಸಮಾಜವಾದಿಗಳು ಮಾರ್ಕ್ಸ್‌ವಾದ-ಲೆನಿನ್‌ವಾದವನ್ನು ಒಪ್ಪಿ ತಮ್ಮ ನಿರ್ಣಯಗಳನ್ನು ಕೆಲಮಟ್ಟಿಗೆ ವಿಶ್ವದ ಮುಂಚೂಣಿ ಕಮ್ಯೂನಿಸ್ಟ್ ರಾಷ್ಟ್ರಗಳಾದ ಯುಎಸ್‌ಎಸ್‌ಆರ್, ಕ್ಯೂಬಾ, ವಿಯೆಟ್ನಾಂ ಮತ್ತು ಚೀನಾ ದೇಶಗಳ ನಿಲುವೆಯ ಆಧಾರದಲ್ಲಿ ಕೈಗೊಳ್ಳುತ್ತಿದ್ದವು. ೧೯೭೦ರ ದಶಕದ ಕೊನೆಯ ಹೊತ್ತಿಗೆ ಇಥಿಯೋಪಿಯಾ, ಅಂಗೋಲಾ ಮತ್ತು ಮೊಜಾಂಬಿಕ್‌ಗಳಲ್ಲಿ ಸಮಾಜವಾದಿ ಅಥವಾ ಮಾರ್ಕ್ಸ್‌ವಾದಿ ಗುಂಪುಗಳು ಜಯ ಗಳಿಸಿದ ನಂತರ ತಮ್ಮ ಹಿತಾಸಕ್ತಿಗೆ ಪೆಟ್ಟುಬೀಳುವುದೆಂದು ಪಾಶ್ಚಿಮಾತ್ಯ ದೇಶಗಳಿಗೆ ನಡುಕ ಉಂಟಾಗಿತ್ತು. ಸೋಮಾಲಿಯಾ, ನಮೀಬಿಯಾ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಸಹ ಅದೇ ಹಾದಿ ತುಳಿಯುವ ಎಲ್ಲ ಸಾಧ್ಯತೆಗಳೂ ಇದ್ದವು.

ಆಫ್ರಿಕಾದ ಸಮಾಜವಾದಿಗಳು ಮತ್ತು ಮಾರ್ಕ್ಸ್‌ವಾದಿಗಳು ತಮ್ಮ ಮುಂದಿದ್ದ ಕಾರ್ಯಭಾರವನ್ನು ಮನಗಂಡಿದ್ದರು. ಸಮಾಜಕಲ್ಯಾಣ ಸೇವೆಗಳನ್ನು ವಿಸ್ತರಿಸುವುದು ಮತ್ತು ಭೂಸುಧಾರಣೆ ಜಾರಿಗೊಳಿಸಿ ಉತ್ಪಾದನೆಯನ್ನು ಆಧುನಿಕಗೊಳಿಸುವುದು ಸೇರಿದಂತೆ ಇನ್ನಿತರ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಸಕ್ತಿ ಹೊಂದಿದ್ದರು. ಹೀಗೆ ಅಂಗೋಲಾ, ಮೊಜಾಂಬಿಕ್, ಇಥಿಯೋಪಿಯಾ, ಜಿನಿಯಾ ಬಿಸ್ಸಾವು ಮತ್ತು ಕಾಂಗೋ ದೇಶಗಳು ಕೃಷಿಯಲ್ಲಿ ಬದಲಾವಣೆ ತರುವುದರೊಂದಿಗೆ ಆರ್ಥಿಕಾಭಿವೃದ್ದಿಗಾಗಿ ಮತ್ತು ಸಾರ್ವಜನಿಕ ಉದ್ದಿಮೆಗಳ ಅಭಿವೃದ್ದಿಗಾಗಿ ಶ್ರಮಿಸಲಾರಂಭಿದ್ದವು. ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಸಾಮಾಜಿಕ ಭದ್ರತೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿಂದ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಾನವ ಸಂಪನ್ಮೂಲದ ಅಭಿವೃದ್ದಿಯಾಗುತ್ತದೆಂದು ನಿರೀಕ್ಷಿಸಲಾಗಿತ್ತು.

ಆದರೆ, ಆರ್ಥಿಕತೆಯನ್ನು ಪುನಾರಚಿಸುವ ಆವರ ಯೋಜನೆಗಳೆಲ್ಲ ನಿರಂತರವಾದ ಸಮಾಜಘಾತುಕ ಚಟುವಟಿಕೆಗಳು, ಅಂತಃಕಲಹ, ಆಕ್ರಮಣ ಮತ್ತು ಬಂಡುಕೋರರ ಉಪಟಳಗಳಿಂದ ಆ ನಿಟ್ಟಿನಲ್ಲಿ ಯಾವೊಂದು ಪ್ರಗತಿಯನ್ನು ಸಹ ಕಾಣಲು ಸಾಧ್ಯವಾಗಲಿಲ್ಲ.. ಅಮೆರಿಕ ಬೆಂಬಲಿತ ವಿರೋಧಿ ಶಕ್ತಿಗಳು ಮತ್ತು ದಕ್ಷಿಣ ಆಫ್ರಿಕಾದ ವರ್ಣಭೇದ ಆಡಳಿತವು ಸಶಸ್ತ್ರ ಹೋರಾಟ ನಡೆಸಿ ಅಂಗೋಲಾ ಮತ್ತು ಮೊಜಾಂಬಿಕ್‌ಗಳ ಮಾರ್ಕ್ಸ್‌ವಾದಿ ಸರ್ಕಾರಗಳನ್ನು ಕೆಳಗುರುಳಿಸಿದವು. ಹಾಗೆಯೇ, ಇಥಿಯೋಪಿಯಾ ಮತ್ತು ಸೋಮಾಲಿಯಾಗಳು ಸಶಸ್ತ್ರ ಬಿಕ್ಕಟ್ಟು, ಅಂತಃಕಲಹ ಮತ್ತು ಪ್ರತ್ಯೇಕತಾವಾದಿಗಳ ವಿರೋಧವನ್ನು ಎದುರಿಸ ಬೇಕಾಯಿತು. ಈ ದೇಶ ವಿರೋಧಿ ಶಕ್ತಿಗಳನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರಗಳು ಕ್ರಮ ಕೈಗೊಂಡವಾದರೂ ವಿರೋಧಿ ಶಕ್ತಿಗಳ ಕೈಮೇಲಾಗಿ ಸರ್ವಾಧಿಕಾರಿ ಪ್ರವೃತ್ತಿಗಳು ಮೂಡಿಬಂದವು.

ಮೂರನೆಯದಾಗಿ, ಸಾಮ್ರಾಜ್ಯಶಾಹಿ ಆರ್ಥಿಕತೆಯ ಜೊತೆಜೊತೆಗೆ ತಮ್ಮ ಆರ್ಥಿಕತೆ ಯನ್ನು ಮುನ್ನಡೆಸಿದಲ್ಲಿ, ಅದರೊಂದಿಗೆ ಹೆಚ್ಚೆಚ್ಚು ಸಂಬಂಧ ಹೊಂದಿದಲ್ಲಿ ತಮ್ಮ ದೇಶವೂ ಅಭಿವೃದ್ದಿ ಹೊಂದಿದ ರಾಷ್ಟ್ರವಾಗುತ್ತದೆಂದು ಬೊಗಳೆ ಬಿಡುತ್ತಾ ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾಗಿ ತಮ್ಮ ಸಂಪತ್ತನ್ನು ವೃದ್ದಿಸಿಕೊಳ್ಳುತ್ತಿದ್ದ ರಾಷ್ಟ್ರೀಯವಾದಿ ನಾಯಕರು. ಈ ರಾಷ್ಟ್ರಗಳಲ್ಲಿ ಸಮಾನತೆಗಿಂತ ಹೆಚ್ಚಾಗಿ ಆರ್ಥಿಕ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲಾಯಿತು. ಖಾಸಗಿ ಕ್ಷೇತ್ರಕ್ಕೆ ಹೆಚ್ಚಿನ ನೆರವು ನೀಡಲಾಯಿತು. ರಪ್ತು ಬೆಳೆಗಳ ಉತ್ಪಾದನೆಯನ್ನು ವಿಸ್ತರಿಸಲಾಯಿತು. ಉದಾಹರಣೆಗೆ, ಕೀನ್ಯಾದಲ್ಲಿ ಕಾಫಿ ಮತ್ತು ಟೀ ಬೆಳೆಯನ್ನು ವಿಸ್ತರಿಸಿ ಹೆಚ್ಚಿನ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಲಾಯಿತು. ಈ ರಾಷ್ಟ್ರಗಳು ಅಮೆರಿಕ ಕೆನಡಾ, ಅಸ್ಟ್ರೇಲಿಯಾ, ಜರ್ಮನಿ ಮತ್ತು ಜಪಾನ್ ದೇಶ ಗಳೊಂದಿಗೆ ಹೆಚ್ಚಿನ ಸಂಬಂಧವಿಟ್ಟುಕೊಂಡು ಸಮಯ ಬಂದಾಗಲೆಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ದೇಶಗಳ ಪರ ದನಿಯೆತ್ತುತ್ತಿದ್ದವು. ಕೀನ್ಯಾ, ನೈಜೀರಿಯಾ, ಘಾನಾ, ಐವರಿ ಕೋಸ್ಟ್ ಮತ್ತು ಸೆನೆಗಲ್ ದೇಶದ ರಾಷ್ಟ್ರೀಯವಾದಿ ನಾಯಕರು ತಾವು ಅನುಸರಿಸಿದ ನೀತಿಗಳಲ್ಲಿ ದೋಷವಿದೆಯೆಂದು ಕಾಲಕ್ರಮೇಣ ಒಪ್ಪಿಕೊಳ್ಳುವ ಹಂತಕ್ಕೆ ಬಂದಿವೆ.

ಆಫ್ರಿಕಾದ ದೇಶಗಳು ರಾಜಕೀಯ ಸ್ವಾತಂತ್ರ್ಯ ಪಡೆದರೂ ಆರ್ಥಿಕ ಸ್ವಾತಂತ್ರ್ಯ ಪಡೆದವೆಂದು ಹೇಳಲಾಗದು. ಆಫ್ರಿಕಾದ ದೇಶಗಳಲ್ಲಿ ಅಧಿಕಾರವನ್ನು ಶಾಂತಿಯುತವಾಗಿ ಸಾಮ್ರಾಜ್ಯಶಾಹಿ ರಾಷ್ಟ್ರಗಳು ವರ್ಗಾಯಿಸಿದ್ದನ್ನು ನವವಸಾಹತು ಪರಿಹಾರ ಎಂಥಲೂ ಕರೆಯಲಾಗುತ್ತದೆ. ಏಕೆಂದರೆ ಹೊಸ ಸರ್ಕಾರಗಳಿಗೆ ದೊರಕಿರುವ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯದತ್ತ ಗಮನಹರಿಸಿದಾಗ ವಿದೇಶಿ ಕಂಪನಿಗಳ ಆರ್ಥಿಕ ಹಿತಾಸಕ್ತಿಗಳನ್ನು ಬಹುವಾಗಿ ಸಂರಕ್ಷಿಸಿರುವುದು ಮತ್ತು ವಿದೇಶಿ ರಾಷ್ಟ್ರಗಳ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಂಡಿರುವುದು ಕಂಡುಬರುತ್ತದೆ.

ನೈಸರ್ಗಿಕ ವಿಕೋಪಗಳೊಂದಿಗೆ ಫಲವತ್ತತೆಯಿಲ್ಲದ ಭೂಮಿಗಳಲ್ಲಿ ರೈತರು ಬೇಸಾಯ ಮಾಡಬೇಕಾಗಿತ್ತು. ಜನತೆಗೆ ಅವಶ್ಯವಿರುವ ಬೆಳೆಗಳ ಬದಲು ವಿದೇಶಿ ರಾಷ್ಟ್ರಗಳಿಗೆ ಅಗತಕ್ಯವಿರುವ ಬೆಳೆಗಳನ್ನು ಬೆಳೆಯುವಂತೆ ಅವರನ್ನು ಬಲವಂತಗೊಳಿಸ ಲಾಗುತ್ತಿತ್ತು. ಅಗಾಧ ತೆರಿಗೆ, ಕಡ್ಡಾಯವಾಗಿ ನಿರ್ದಿಷ್ಟ ಬೆಳೆ ಬೆಳೆಯುವುದು, ಬಲವಂತ ಕೆಲಸ ಮತ್ತು ದೈಹಿಕ ಕಿರುಕುಳಗಳಿಂದಾಗಿ ತಮ್ಮ ಭೂಮಿಯ ಫಲವತ್ತತೆ ಕಳೆದುಕೊಳ್ಳುವ ಮತ್ತು ಕ್ಷಾಮಕ್ಕೀಡಾಗುವಂತಹ ವಿದೇಶಿ ಕಂಪನಿಗಳಿಗೆ ಅವಶ್ಯವಿರುವ ಬೆಳೆಗಳನ್ನು ರೈತರು ಬೆಳೆಯಬೇಕಾಗಿತ್ತು.

ಆಫ್ರಿಕಾದ ದೇಸಿ ಸಂಸ್ಕೃತಿಯನ್ನು ವಿದೇಶಿ ಆಳ್ವಿಕೆಯು ನಾಶ ಮಾಡತೊಡಗಿತ್ತು. ಆಫ್ರಿಕಾದ ಉಪಖಂಡವನ್ನು ಫ್ರೆಂಚ್ ಮಾತನಾಡುವ ಪ್ರದೇಶ, ಇಂಗ್ಲಿಷ್ ಮಾತನಾಡುವ ಪ್ರದೇಶ ಮತ್ತು ಅರಬ್ ಮಾತನಾಡುವ ಪ್ರದೇಶಗಳೆಂದೇ ವಿಂಗಡಿಸಿ ಕರೆಯಲಾಗುತ್ತಿತ್ತು. ಸ್ವತಂತ್ರಗೊಂಡ ಆಫ್ರಿಕಾ ರಾಷ್ಟ್ರಗಳ ಜನರಲ್ಲಿ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆ ಕುರಿತಂತೆ ಗೌರವ ಮೂಡಿತ್ತು. ಏಕೆಂದರೆ, ಈ ಭಾಷೆ ಮಾತನಾಡಬಲ್ಲವರು ಅಥವಾ ಕಲಿತವರು ವಿಶೇಷ ಆರ್ಥಿಕ ಮತ್ತು ರಾಜಕೀಯ ವಿನಾಯಿತಿಗಳನ್ನು ಸುಲಭವಾಗಿ ಪಡೆಯಬಹುದಿತ್ತು.

ಸ್ವಾತಂತ್ರ್ಯಾನಂತರದಿಂದಲೂ, ಜನತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಪೂರ್ಣ ಜವಾಬ್ದಾರಿ ಹೊರಲು ಸರ್ಕಾರಗಳು ಅಸಮರ್ಥವಾಗಿದ್ದವು. ಮಧ್ಯಮ ಕುಶಲಕರ್ಮಿಗಳು, ಶ್ರೀಮಂತ ರೈತರು, ಅಧಿಕಾರಿಗಳು ಮತ್ತು ದೇಶ ವಿದೇಶಗಳಲ್ಲಿ ಖಾಸಗಿ ಕಂಪನಿಗಳಲ್ಲಿ ದುಡಿದು ಹಣ ಗಳಿಸಿದ್ದವರಿಂದ ಖಾಸಗಿ ಬಂಡವಾಳ ಹೂಡಿಕೆಗಾಗಿ ಸರ್ಕಾರ ಯತ್ನಿಸುತ್ತಿತ್ತು. ಸ್ಥಳೀಯವಾಗಿ ದೊಡ್ಡ ಬಂಡವಾಳಿಗರಿಲ್ಲದ್ದರಿಂದ ಸಣ್ಣ ಕೈಗಾರಿಕೆಗಳು ಸ್ಥಾಪನೆಗೊಂಡು ವಿದೇಶಿ ಬಂಡವಾಳದೊಂದಿಗೆ ಕೈಜೋಡಿಸಿದವು.

ಸ್ವಾತಂತ್ರ್ಯ ಗಳಿಸಿದ ಕೆಲವೇ ವರ್ಷಗಳಲ್ಲಿ ಆಫ್ರಿಕಾ ದೇಶಗಳು ಸಂವಿಧಾನದಲ್ಲಿ ಭಾರಿ ಬದಲಾವಣೆ ಮಾಡಿದವು. ಅಧಿಕಾರವು ಪ್ರಜೆಗಳಿಂದ ಮಿಲಿಟರಿಗೆ ವರ್ಗಾವಣೆಗೊಂಡು ಸರ್ವಾಧಿಕಾರಿ ಧೋರಣೆ ಬೆಳೆದು ಬಂದಿತು. ಹಲವಾರು ಆಳುವ ನಾಯಕರು ಸಂವಿಧಾನವನ್ನು ತಿರುಚಿ ತಮ್ಮ ವೈಯಕ್ತಿಕ ನಿರಂಕುಶ ಅಧಿಕಾರವನ್ನು ಜಾರಿ ತಂದರು. ಚುನಾವಣೆಗಳನ್ನು ನಡೆಸಲಾಯಿತಾದರೂ ಅದರಲ್ಲಿ ಭಾಗವಹಿಸಿದವರಿಗೆ ಪರ್ಯಾಯವಾದ ಪ್ರಜಾಸತ್ತಾತ್ಮಕ ಆಯ್ಕೆಗಳಿರಲಿಲ್ಲ. ಉದಾಹರಣೆಗೆ, ಕೀನ್ಯಾದ ಏಕ ಪಕ್ಷದ ಆಳ್ವಿಕೆಯಲ್ಲಿ ಸರ್ಕಾರದ ನೀತಿಗಳನ್ನು ಬದಲಿಸುವ ಆಯ್ಕೆ ಮತದಾರರಿಗಿರಲಿಲ್ಲ. ಹೆಚ್ಚೆಂದರೆ ಆ ಸಮಯದಲ್ಲಿ ಆಳುತ್ತಿದ್ದ ಕೀನ್ಯಾ ಆಫ್ರಿಕನ್ ರಾಷ್ಟ್ರೀಯ ಒಕ್ಕೂಟ ಪಕ್ಷವು ನಿಲ್ಲಿಸಿದ್ದ ಅಭ್ಯರ್ಥಿಗಳಲ್ಲಿ ಯಾವ ಅಭ್ಯರ್ಥಿಯನ್ನಾದರು ಮತದಾರರು ಆಯ್ಕೆ ಮಾಡಬಹುದಿತ್ತಷ್ಟೆ.

ಬಹುತೇಕ ಆಫ್ರಿಕನ್ ರಾಷ್ಟ್ರಗಳಲ್ಲಿನ ಬಡಜನತೆಯು ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ತತ್ತರಿಸಿ ಹೋದರು. ಬಡತನ, ಹಸಿವು ಮತ್ತು ಅಪೌಷ್ಟಿಕತೆಯಿಂದ ಜನರು ನರಳುತ್ತಿದ್ದರು. ತೀರಾ ಕಡಿಮೆ ಅಭಿವೃದ್ದಿ ಹೊಂದಿರುವ ವಿಶ್ವ ರಾಷ್ಟ್ರಗಳ ಪಟ್ಟಿಯಲ್ಲಿ ೩೦ರಲ್ಲಿ ೨೧ರಾಷ್ಟ್ರಗಳು ಆಫ್ರಿಕಾ ಖಂಡಕ್ಕೆ ಸೇರಿವೆ. ೧೯೭೦-೮೦ರ ದಶಕದಲ್ಲಿ ಆಫ್ರಿಕಾದ ೨೦ ರಾಷ್ಟ್ರಗಳ ಒಟ್ಟಾರೆ ಆಂತರಿಕ ಉತ್ಪನ್ನವು ಹಿಮ್ಮುಖ ದರದಲ್ಲಿತ್ತು. ೧೯೭೦ ರಿಂದೀಚೆಗೆ, ಬಹುತೇಕ ರಾಷ್ಟ್ರಗಳ ಹಣದುಬ್ಬರದ ದರವು ಎರಡಂಕೆಯಲ್ಲಿದೆ. ತಲಾದಾಯವು ಒಂದೇ ಮಟ್ಟದಲ್ಲಿದೆ. ಯುರೋಪ್ ರಾಷ್ಟ್ರಗಳಲ್ಲಿ ಪ್ರತಿ ಹಸುವಿಗೆ ದಿನವೊಂದಕ್ಕೆ ೨ ಡಾಲರ್ ಸಹಾಯಧನ ದೊರೆಯುತ್ತದೆಯಾದರೂ ಇದು ಆಫ್ರಿಕಾದ ಪ್ರತಿ ಕುಟುಂಬದ ಆದಾಯಕ್ಕಿಂತ ಎರಡರಷ್ಟು ಉತ್ಪಾದನಾ ಅಥವಾ ಕೃಷಿ ಕ್ಷೇತ್ರದ ಬೆಳವಣಿಗೆ ನಿರಾಶ ದಾಯಕವಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲದ ಮೊತ್ತ ೧೯೭೦ರಲ್ಲಿ ೯೦೨ ಕೋಟಿ ಅಮೆರಿಕನ್ ಡಾಲರ್‌ಗಳಷ್ಟು ಇದ್ದದ್ದು ೧೯೭೮ರಲ್ಲಿ ೪೯೬೦ ಕೋಟಿ ಡಾಲರ್ ಬೆಳೆದಿತ್ತು. ನಿರುದ್ಯೋಗವು ಶೇ.೧೦ರಿಂದ ಶೇ.೫೦ಕ್ಕೇರಿತ್ತು. ಕೆಲವು ರಾಷ್ಟ್ರಗಳಲ್ಲಿ ಶೇ.೪೦ರಷ್ಟು ಜನತೆಗೆ ವಸತಿ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಇಂಧನ ಮತ್ತು ಶೈಕ್ಷಣಿಕ ಸೌಲಭ್ಯಗಳು ದೊರಕೇ ಇಲ್ಲ. ಉತ್ಪಾದನೆಯನ್ನು ಮತ್ತಷ್ಟು ಅಭಿವೃದ್ದಿ ಪಡಿಸುವತ್ತ ಗಮನ ಹರಿಸದೆ ಜನತೆಯನ್ನು ಹೀರಿ ಹಿಪ್ಪೆ ಮಾಡಿ ಆಫ್ರಿಕಾದ ಸಣ್ಣ ಬಂಡವಾಳಿಗರು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಲಾಭ ಗಳಿಸುತ್ತಿದ್ದವು.

ಆಫ್ರಿಕಾ ರಾಷ್ಟ್ರಗಳು ಈ ಹಿಂದಿನ ಸಾಮ್ರಾಜ್ಯಶಾಹಿ ರಾಷ್ಟ್ರಗಳ ಮೇಲೆ ಎಂದಿನಂತೆ ಆರ್ಥಿಕವಾಗಿ ಅವಲಂಬನೆಯನ್ನು ಮುಂದುವರಿಸುವಂತಾಯಿತು. ಕೀನ್ಯಾ, ಜಾಂಬಿಯಾ ಮತ್ತು ಸೆನೆಗಲ್‌ಗಳು ಒಂದೆಡೆ ಮಾರ್ಕ್ಸ್‌ವಾದಿ ಸಿದ್ಧಾಂತವನ್ನು ಖಂಡಿಸುತ್ತಾ ತಾವು ಸಮಾಜವಾದಿಗಳೆಂದು ಘೋಷಿಸಿಕೊಂಡವು. ಆದರೆ ೧೯೮೦ರ ಹೊತ್ತಿಗೆ ಕೀನ್ಯಾದಲ್ಲಿ ಆಳುವ ಮೇಲ್‌ಸ್ತರದವರು ರಾಜಕೀಯ ಅಧಿಕಾರವನ್ನು ತಮ್ಮ ಸ್ವತ್ತಾಗಿಸಿಕೊಂಡು ಸಂಪತ್ತನ್ನು ಲೂಟಿ ಮಾಡಿದರು. ಅಧಿಕಾರಶಾಹಿ ಮತ್ತು ಸರ್ಕಾರದೊಂದಿಗೆ ಸಂಪರ್ಕವಿದ್ದ ಮೇಲ್‌ಸ್ತರದವರು ದೇಶದ ಆದಾಯದ ಬಹುತೇಕ ಪಾಲನ್ನು ಭ್ರಷ್ಟತೆಯಿಂದ ಸೂರೆ ಮಾಡಿದರು. ೧೯೮೦ ಮತ್ತು ೧೯೯೦ರ ದಶಕದಲ್ಲಿ ಕೀನ್ಯಾದಲ್ಲಿ ಪ್ರಮುಖ ರಾಜಕೀಯ ನಾಯಕರುಗಳ ಭ್ರಷ್ಟಾಚಾರ ಯಾವ ಹಂತ ತಲುಪಿತ್ತೆಂದರೆ ಇದರಿಂದ ಸರ್ಕಾರದಲ್ಲಿ ಹಣಕಾಸು ಕೊರತೆಯುಂಟಾಗಿ ಹಣದುಬ್ಬರ ತೀರಾ ದೊಡ್ಡ ಮಟ್ಟ ತಲುಪಿತು.

೧೯೭೮ ಮತ್ತು ೧೯೯೦ರ ನಡುವೆ ಆಫ್ರಿಕಾ ಖಂಡದ ಸರಾಸರಿ ತಲಾ ಆದಾಯವು ೮೫೪ ಡಾಲರ್‌ಗಳಿಂದ ೫೬೫ ಡಾಲರ್‌ಗಿಳಿಯಿತು. ೧೯೮೧ ಮತ್ತು ೧೯೯೧ರ ನಡುವೆ ಕಡಿಮೆ ಅಭಿವೃದ್ದಿ ಹೊಂದಿರುವ ಆಫ್ರಿಕಾದ ರಾಷ್ಟ್ರಗಳ ಸಂಖ್ಯೆ ೨೧ರಿಂದ ೨೮ಕ್ಕೇರಿತು. ೧೯೭೮ ಮತ್ತು ೧೯೮೮ರ ನಡುವೆ ಒಟ್ಟಾರೆ ದೇಶೀಯ ಆಂತರಿಕ ಉತ್ಪನ್ನವು (ಜೆಡಿಪಿ) ಶೇ.೩.೦೩ರಿಂದ ಶೇ.೦.೭ಕ್ಕಿಳಿಯಿತು. ಅಕ್ಷರಸ್ಥರ ಸಂಖ್ಯೆಯು ೧೯೬೨ರಲ್ಲಿದ್ದ ೧೪೨ ಮಿಲಿಯನ್‌ನಿಂದ ೧೯೮೫ರಲ್ಲಿ ೧೬೫ ಮಿಲಿಯನ್ ಆಗಿದೆಯಷ್ಟೆ. ಆಫ್ರಿಕಾದ ಆಯವ್ಯಯ ಕೊರತೆಯು ೧೯೭೮ರಲ್ಲಿ ೩.೯ ಬಿಲಿಯನ್ ಡಾಲರ್‌ಗಳಿಂದ ೧೯೮೮ರ ಹೊತ್ತಿಗೆ ೨೦.೩ ಬಿಲಿಯನ್ ಮುಟ್ಟಿತ್ತು. ವಿದೇಶಿ ಸಾಲವು ೧೯೭೮ರಲ್ಲಿ ೪೮.೩ ಬಿಲಿಯನ್ ಡಾಲರ್‌ನಿಂದ ಏರಿಕೆ ಕಂಡು ೧೯೮೦ರಲ್ಲಿ ೨೩೦ ಬಿಲಿಯನ್ ಡಾಲರ್ ಮತ್ತು ೧೯೯೦ರ ಹೊತ್ತಿಗೆ ೨೬೦ ಬಿಲಿಯನ್ ಡಾಲರ್ ತಲುಪಿತು. ೧೯೮೦ರಲ್ಲಿ ಶೇ.೫.೩ರಷ್ಟಿದ್ದ ನಿರುದ್ಯೋಗ ದರವು ೧೯೯೦ರ ಹೊತ್ತಿಗೆ ಶೇ.೧೩ರಷ್ಟು ಹೆಚ್ಚಿತು.

ಹೀಗೆ ೧೯೭೦ರ ದಶಕದ ನಂತರ ಐಎಂಎಫ್, ವಿಶ್ವಬ್ಯಾಂಕ್ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ವಾಣಿಜ್ಯ ಹಣಕಾಸು ಬ್ಯಾಂಕುಗಳ ಕೂಟವು ವಸಾಹತುಶಾಹಿಯ ಸಿದ್ಧಾಂತ ಮತ್ತು ಆಕ್ರಣಗಳನ್ನು ನಡೆಸುತ್ತಾ ಬಂದಿತು. ಈ ಕೂಟವನ್ನು ನವ ವಸಾಹತುಶಾಹಿ ಎಂದು ಕರೆಯಲಾಗುತ್ತದೆ. ಅಂಗೋಲಾ, ಮೊಜಾಂಬಿಕ್, ಇಥಿಯೋಪಿಯಾ ಮತ್ತು ಇತರೆ ರಾಷ್ಟ್ರಗಳು ತಮ್ಮ ಮೇಲೆ ನೇರವಾಗಿ ಆಕ್ರಮಣ ಮಾಡುತ್ತಿರುವ ನ್ಯಾಟೋ ಶಕ್ತಿಯ ವಿರುದ್ಧ ಸೆಣಸಬೇಕಾಯಿತು. ಜೊತೆಗೆ ನವವಸಾಹತುಶಾಹಿಯಿಂದ ಹಣಕಾಸು ನೆರವು ಮತ್ತು ಶಸ್ತ್ರಾಸ್ತ್ರ ಪಡೆಯುತ್ತಿರುವ ಸಶಸ್ತ್ರಧಾರಿ ಬಂಡಾಯಗಾರರನ್ನು ಸಹ ಆ ರಾಷ್ಟ್ರಗಳು ಎದುರಿಸಬೇಕಾಯಿತು.

ಆಫ್ರಿಕಾದಲ್ಲಿ ಬಡತನ

ಅಭಿವೃದ್ದಿ ಹೊಂದುತ್ತಿರುವ ವಿಶ್ವದ ಇತರೆ ಪ್ರದೇಶಗಳಿಗೆ ಆಫ್ರಿಕಾದ ಅಭಿವೃದ್ದಿ ಸೂತ್ಯಂಕಗಳನ್ನು ಹೋಲಿಸಿದರೆ ಆಘಾತಕಾರಿ ಅಂಶಗಳು ಹೊರಬೀಳುತ್ತವೆ.

ಪ್ರದೇಶ ತಲಾ

ಆದಾಯ ಜಿಡಿಪಿಯ ಬೆಳವಣಿಗೆ ಶೇಕಡಾವಾರು

೧೯೬೫೭೩

೧೯೭೩೭೮

೧೯೮೦೮೯

ಆಫ್ರಿಕಾ ಖಂಡ ೩.೨ ೦.೧ -೨.೨.
ಪೂರ್ವ ಏಷ್ಯಾ ೫.೧ ೪.೭ ೬.೭
ದಕ್ಷಿಣ ಏಷ್ಯಾ ೧.೨ ೧.೭ ೩.೨
ಲ್ಯಾಟಿನ್ ಅಮೆರಿಕ ಮತ್ತು ಕೇರಿಬೀಯನ್ ೩.೭ ೨.೬ -೦.೬

ಮೂಲೊ: ವಿಶ್ವ ಅಭಿವೃದ್ದಿ ವರದಿ ೧೯೯೦, ಬಡತನ (ವಾಷಿಂಗ್ಟನ್, ೧೯೯೦)