ಆಫ್ರಿಕಾ ಖಂಡವು ಪೂರ್ವಾರ್ಧಗೋಳದಲ್ಲಿರುವ ವಿಸ್ತೀರ್ಣದಲ್ಲಿ ಏಷ್ಯಾ ಖಂಡಕ್ಕೆ ಎರಡನೆಯದು. ಇಡೀ ಜಗತ್ತಿನ ಒಟ್ಟು ಭೂಭಾಗದ ಐದನೇ ಒಂದು ಭಾಗವನ್ನು ಇದು ಅಕ್ರಮಿಸಿದ್ದು, ವಿಸ್ತೀರ್ಣದಲ್ಲಿ ಯುರೋಪಿನ ಮೂರು ಪಟ್ಟು ಇದೆ. ಉತ್ತರದಿಂದ ದಕ್ಷಿಣಕ್ಕೆ ಸುಮಾರು ೫,೦೦೦ ಮೈಲಿ ಉದ್ದವೂ ಪೂರ್ವ ಪಶ್ಚಿಮವಾಗಿ ೪,೫೦೦ ಮೈಲಿಗಳಷ್ಟು ಅಗಲವಾಗಿಯೂ ಇದೆ.

ಕಳೆದ ಮೂರು ನಾಲ್ಕು ಶತಮಾನಗಳಲ್ಲಿ ಆಫ್ರಿಕಾ ಖಂಡದ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಲೂಟಿ ಮಾಡಿ ಅಭಿವೃದ್ದಿಗೆ ಕಡಿವಾಣ ಹಾಕಿದ್ದರ ಫಲವಾಗಿ ಈ ಭೂಭಾಗಕ್ಕೆ ಕಗ್ಗತ್ತಲೆಯ ಖಂಡವೆಂಬ ಹಣೆಪಟ್ಟಿ ನೀಡಲಾಗಿದೆ. ಆಫ್ರಿಕಾದಲ್ಲಿ ಯಥೇಚ್ಛವಾಗಿ ದೊರೆಯುತ್ತಿದ್ದ ಚಿನ್ನ, ದಂತ, ವಜ್ರ ಮುಂತಾದ ಕಣ್ಣು ಕೋರೈಸುವ ಸಂಪತ್ತನ್ನು ದೋಚಲು ವ್ಯಾಪಾರದ ಸೋಗು ಹಾಕಿಕೊಂಡು ಪೋರ್ಚುಗೀಸರು, ಡಚ್ಚರು ಮತ್ತು ಫ್ರೆಂಚರು ಈ ಭೂಖಂಡಕ್ಕೆ ಬಂದಿಳಿದರು. ಆಫ್ರಿಕಾದ ವಿವಿಧ ಜನಾಂಗ ಮತ್ತು ಬುಡಕಟ್ಟುಗಳ ನಡುವಿನ ವೈರುಧ್ಯ, ವೈಮನಸ್ಸುಗಳನ್ನು ಬಳಸಿಕೊಂಡು ಮಿಲಿಟರಿ ಬಲದಿಂದ ತಮ್ಮ ಯಜಮಾನಿಕೆಯನ್ನು ಹೇರುವಲ್ಲಿ ಯಶಸ್ವಿಯಾದರು. ಕಾಲಕ್ರಮೇಣ ವಸಾಹತುಗಳಾಗಿ ಪರಿವರ್ತಿತಗೊಂಡ ಈ ಭೂಭಾಗದಲ್ಲಿ ಪೋರ್ಚುಗೀಸರು ಪಶ್ಚಿಮ ಆಫ್ರಿಕಾದ ಕರಾವಳಿ ಪ್ರದೇಶದಲ್ಲಿ, ಫ್ರೆಂಚರು ವಾಯುವ್ಯ ಪ್ರದೇಶದಲ್ಲಿ, ಬ್ರಿಟಿಷರು ಪೂರ್ವದಲ್ಲಿ, ಡಚ್ಚರು ದಕ್ಷಿಣದಲ್ಲಿ, ಬೆಲ್ಜಿಯನ್ನರು ಮಧ್ಯ ಆಫ್ರಿಕಾದಲ್ಲಿ, ಇಟಾಲಿಯನ್ನರು ಉತ್ತರ ಆಫ್ರಿಕಾ ಪ್ರದೇಶಗಳನ್ನು ತಮ್ಮ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡಿದ್ದರು. ೧೯ನೇ ಶತಮಾನದ ಕೊನೆಯ ಭಾಗದಲ್ಲಿ ತೃತೀಯ ರಾಷ್ಟ್ರಗಳನ್ನು ವಸಾಹತುಗೊಳಿಸುತ್ತಾ ಬಂಡವಾಳವು ಅಗಾಧ ಮಟ್ಟದಲ್ಲಿ ಬೆಳೆಯ ತೊಡಗಿತ್ತು. ವಿಶ್ವದ ಭೂಭಾಗಗಳನ್ನು ಹಂಚಿಕೊಳ್ಳಲು ಯುರೋಪಿನ ಬಂಡವಾಳಶಾಹಿ ರಾಷ್ಟ್ರಗಳ ನಡುವೆ ಇನ್ನಿಲ್ಲದಂಥ ಸ್ಪರ್ಧೆ ಏರ್ಪಟ್ಟಿತು. ಈ ಹಿನ್ನೆಲೆಯಲ್ಲಿ ಆಫ್ರಿಕಾದ ರಾಷ್ಟ್ರಗಳನ್ನು ವಸಾಹತುಗಳನ್ನಾಗಿ ತೀವ್ರಗತಿ ಯಲ್ಲಿ ಪರಿವರ್ತಿಸಲಾಯಿತು. ೧೯೭೬ರ ಹೊತ್ತಿಗೆ ಆಫ್ರಿಕಾದ ಹತ್ತನೇ ಒಂದು ಭಾಗವನ್ನು ಮಾತ್ರ ವಶಪಡಿಸಿಕೊಳ್ಳಲಾಗಿದ್ದರೆ, ೧೯೦೦ರ ಹೊತ್ತಿಗೆ ಹತ್ತನೇ ಒಂಬತ್ತರಷ್ಟು ಭಾಗವನ್ನು ವಶಪಡಿಸಿಕೊಳ್ಳಲಾಗಿತ್ತು.

ಆಫ್ರಿಕಾ ಭೂಖಂಡ: ಹಂಚಿಕೆಗಾಗಿ ಕಾದಾಟ

ಈಜಿಪ್ಟ್ ಕೈರೋದಿಂದ ದಕ್ಷಿಣ ಅಫ್ರಿಕಾದ ಕೇಪ್ ಟೌನ್‌ವರೆಗೆ ಪೂರ್ಣಪ್ರದೇಶವನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಿದ್ದ ಇಂಗ್ಲೆಂಡ್‌ನ ಆಸೆ ಮೊದಲನೇ ವಿಶ್ವ ಮಹಾಯುದ್ಧ ನಂತರವಷ್ಟೇ ಕೈಗೂಡಿತು. ಈಜಿಪ್ಟನ್ನು ಅಕ್ರಮಿಸಿಕೊಳ್ಳುವಾಗಲೇ ಪೂರ್ವ ಸೂಡಾನ್‌ನೊಳಗೂ ಇಂಗ್ಲೆಂಡ್ ಒಳನುಸುಳಿಕೊಂಡಿತು. ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಾದ ಘಾನಾ ಮತ್ತು ನೈಜೀರಿಯಾದ ಭೂಭಾಗಗಳ ಮೇಲೆ ಇಂಗ್ಲೆಂಡ್ ಆಕ್ರಮಣಕಾರಿ ಯುದ್ಧಗಳನ್ನು ಹೂಡಿತ್ತು. ಫ್ರಾನ್ಸ್ ಕೂಡ ಆಫ್ರಿಕಾದಲ್ಲಿ ಅತಿ ದೊಡ್ಡ ವಸಾಹತು ಸಾಮ್ರಾಜ್ಯವನ್ನೇ ಹೊಂದಿತ್ತು. ಆಲ್ಜೀರಿಯಾದಿಂದ ಆರಂಭಿಸಿ ತುನಿಷಿಯಾ, ಮೊರಾಕೊ ಮತ್ತು ಸೆನೆಗಲ್‌ಗಳನ್ನು ಫ್ರಾನ್ಸ್ ವಸಾಹತುವನ್ನಾಗಿಸಿತು. ಜರ್ಮನಿಯು ಆಫ್ರಿಕಾದ ಕೆಲವು ಬುಡಕಟ್ಟು ನಾಯಕರ ಮೇಲೆ ಅಸಮ್ಮತ ಒಪ್ಪಂದಗಳನ್ನು ಹೇರಿ ಪೂರ್ವ ಆಫ್ರಿಕಾದ ಭಾಗಗಳನ್ನು ಒಳಗೊಂಡಂತೆ ಪಶ್ಚಿಮದ ಟೋಗೋ ಮತ್ತು ಕೆಮರೂನ್‌ಗಳನ್ನು ತನ್ನ ಬಗಲಿಗೆ ಹಾಕಿಕೊಂಡಿತು.

ಇಟಲಿಯೂ ಸಹ ಇಥಿಯೊಯಾ ವಿರುದ್ಧ ಯುದ್ಧ ಘೋಷಣೆಯಿಲ್ಲದೆ ಮಿಲಿಟರಿ ದಾಳಿ ನಡೆಸಿತು. ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳೊಂದಿಗೆ ಒಡಗೂಡಿ ಇಟಲಿಯು ಸೋಮಾಲಿಯಾ ವನ್ನು ವಿಭಜನೆ ಮಾಡಿತು. ಪೋರ್ಚುಗಲ್ ಮತ್ತು ಸ್ಪೇನ್‌ಗಳು ಆಫ್ರಿಕಾದ ಹಲವು ಸಂಖ್ಯೆಯ ಭೂಭಾಗಗಳನ್ನು ಆಕ್ರಮಿಸಿಕೊಂಡಿದ್ದವು. ಬೆಲ್ಜಿಯಂ ಕಾಂಗೋವನ್ನು ೧೯೦೮ರಲ್ಲಿ ವಸಾಹತುವನ್ನಾಗಿಸಿತು. ಮೊದಲನೇ ಮಹಾಯುದ್ಧಕ್ಕೆ ಮೊದಲು ಆಫ್ರಿಕಾದ ಎರಡು ರಾಷ್ಟ್ರಗಳಷ್ಟೇ ಇಥಿಯೊಯಾ ಮತ್ತು ಲೈಬೀರಿಯಾ ಸ್ವತಂತ್ರವಾಗಿದ್ದವು.

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು ಹಾಗೂ ಆಫ್ರಿಕನ್ ರಾಷ್ಟ್ರಗಳ ಮಿಲಿಟರಿ ದೌರ್ಬಲ್ಯ ಮತ್ತು ಆಫ್ರಿಕನ್ನರ ಅನೈಕ್ಯತೆಯು ಯುರೋಪಿಯನ್ನರ ವಿರುದ್ಧ ಆಫ್ರಿಕನ್ನರು ಸೋತದ್ದಕ್ಕೆ ಪ್ರಮುಖ ಕಾರಣ. ಸಾಮ್ರಾಜ್ಯಶಾಹಿ ರಾಷ್ಟ್ರಗಳು ಆಫ್ರಿಕಾದ ಜನತೆಯನ್ನು ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟುತ್ತಿದ್ದವು. ಕೆಲವು ಪಾಳೇಗಾರಿ ದೊರೆಗಳನ್ನು ಒಮ್ಮೆ ಮೇಲೇರಿಸುತ್ತಾ ಮತ್ತೆ ಕೆಲವೊಮ್ಮೆ ಕೆಳದೊಡುತ್ತಿದ್ದವು. ಆಫ್ರಿಕಾ ವನ್ನು ವಿಭಜಿಸಿದ ನಂತರ ಯುರೋಪಿಯನ್ ರಾಷ್ಟ್ರಗಳು ಅದನ್ನು ಅಭಿವೃದ್ದಿ ಪಡಿಸಲು ಶುರು ಮಾಡಿದವು. ತಮ್ಮ ರಾಷ್ಟ್ರಗಳಿಗೆ ಕೃಷಿ ಮತ್ತು ಕಚ್ಚಾ ವಸ್ತುಗಳನ್ನು ಸರಬರಾಜು ಮಾಡುವ ನೆಲೆಗಳನ್ನಾಗಿ ಆಫ್ರಿಕಾದ ವಸಾಹತುಗಳನ್ನು ಪರಿವರ್ತಿಸಲಾಯಿತು. ವಸಾಹತುಗಳ ಜನತೆಯು ಕ್ರೂರ ಶೋಷಣೆಗೆ ಬಲಿಯಾದರು.

ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಆಫ್ರಿಕಾದ ವಸಾಹತು ರಾಷ್ಟ್ರದೊಳಗೆ ಬಂಡವಾಳದ ಬೃಹತ್ ಪ್ರಮಾಣದಲ್ಲಿ ಹರಿಯತೊಡಗಿತು. ಈ ಮೊದಲು ಆಫ್ರಿಕಾದ ರೈತನು ತನ್ನ ಜೀವನೋಪಾಯಕ್ಕಾಗಿ ಕೃಷಿಯ ಮೇಲೆ ಅವಲಂಬಿತನಾಗಿದ್ದನು. ವಸಾಹತು ಶಾಹಿಯ ಪ್ರವೇಶದಿಂದಾಗಿ ಆಫ್ರಿಕಾದ ಹಲವು ರಾಷ್ಟ್ರಗಳಲ್ಲಿ ಕಡಲೆಕಾಯಿ ಮತ್ತು ನೈಜೀರಿಯದಲ್ಲಿ ಕೋಕೋ ಮತ್ತು ತಾಳೆ ಎಣ್ಣೆ ಇತ್ಯಾದಿ, ದಕ್ಷಿಣ ಆಫ್ರಿಕಾದಲ್ಲಿ ಚಿನ್ನ ಮತ್ತು ವಜ್ರ ಗಣಿಗಾರಿಕೆಗೆ ಪ್ರಾಶಸ್ತ್ಯ ನೀಡಲಾಯಿತು. ಇದರಿಂದಾಗಿ ಈ ರಾಷ್ಟ್ರಗಳ ಆರ್ಥಿಕತೆಯು ವಿಶ್ವ ಆರ್ಥಿಕತೆಯೊಂದಿಗೆ ಕೊಂಡಿ ಏರ್ಪಡಿಸಿಕೊಂಡಿತು. ಆಫ್ರಿಕಾವನ್ನು ವಿಶ್ವ ಮಾರುಕಟ್ಟೆಗೆ ಎಳೆದು ತಂದು ಅಲ್ಲಿನ ಸಾರಿಗೆ ಮತ್ತು ಸಂಪರ್ಕವನ್ನು ಅದರ ಸಂಪತ್ತನ್ನು ಹೊರಸಾಗಿಸುವ ಆವಶ್ಯಕತೆಗನುಗುಣವಾಗಿ ಅಭಿವೃದ್ದಿಗೊಳಿಸಿದವು. ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಹಿಗ್ಗಾಮುಗ್ಗಾ ದೋಚಲಾಯಿತು. ಆರಂಭದಲ್ಲಿ ಯುರೋಪಿಯನ್ ಕಬಳಿಕೆದಾರರು ೭೮೦ಲಕ್ಷ ಹೆಕ್ಟೇರ್ ಭೂಮಿಯನ್ನು ಆಕ್ರಮಿಸಿಕೊಂಡಿದ್ದರು. ಫಾರ‌್ಮನೀರ್ ಕಂಪನಿಯೊಂದೇ ೧.೪ ಲಕ್ಷ ಹೆಕ್ಟೇರ್ ಭೂಮಿಯನ್ನು ಆಕ್ರಮಿಸಿಕೊಂಡಿತ್ತು. ೧೯೧೩ರ ಹೊತ್ತಿಗೆ ಮೊರಾಕ್ಕೋದಲ್ಲಿ ೧.೦ ಲಕ್ಷ ಹೆಕ್ಟೇರ್ ಭೂಮಿಯನ್ನು ವಿದೇಶಿ ಕಂಪನಿಗಳು ಕಬಳಿಸಿದವು.

ಮೊದಲನೆಯ ವಿಶ್ವ ಮಹಾಯುದ್ಧ ಜರುಗಲು ಆಫ್ರಿಕಾದಲ್ಲಿನ ವಸಾಹತುಗಳಿಗಾಗಿ ಸಾಮ್ರಾಜ್ಯಶಾಹಿ ದೇಶಗಳ ನಡುವೆ ನಡೆದ ಕಿತ್ತಾಟವೂ ಒಂದು ಪ್ರಮುಖ ಕಾರಣವಾಗಿತ್ತು. ಸೂಯೆಜ್ ಕಾಲುವೆ ನಿರ್ಮಾಣ ಮಾಡಿ ತಮ್ಮ ವ್ಯಾಪಾರಕ್ಕಾಗಿ ಈ ಜಲಮಾರ್ಗವನ್ನು ಬಳಸಿಕೊಂಡು ಬ್ರಿಟಿಷರು ಮತ್ತು ಫ್ರೆಂಚರು ವ್ಯಾಪಾರ ದ್ವಿಗುಣ ಮಾಡಿಕೊಳ್ಳಲು ಯೋಜಿಸಿದ್ದರು. ಆದರೆ ಜರ್ಮನ್ ತುರ್ಕರು ಇದನ್ನು ಬಲವಾಗಿ ವಿರೋಧಿಸಿದರೂ ಈ ಪ್ರತಿರೋಧವನ್ನು ಯಶಸ್ವಿಯಾಗಿ ಹತ್ತಿಕ್ಕಲಾಯಿತು.

ಯುದ್ಧ ಸಮಯದಲ್ಲಿ ಆಫ್ರಿಕಾವು ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳಿಗೆ ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸರಬರಾಜು ಮಾಡುವ ಪ್ರಧಾನ ಆಕರವಾಗಿತ್ತು. ಈ ಸಮಯದಲ್ಲಿ ಮಿಲಿಯನ್‌ಗಟ್ಟಲೆ ಆಹಾರ ಸಾಮಗ್ರಿ ಮತ್ತು ತರಕಾರಿ ಹಾಗೂ ಖನಿಜ ವಸ್ತುಗಳನ್ನು ತಮ್ಮ ವಶದಲ್ಲಿದ್ದ ಆಫ್ರಿಕಾದಿಂದ ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳು ಸರಬರಾಜು ಮಾಡಿಕೊಂಡವು. ಆಫ್ರಿಕಾದ ವಸಾಹತುವಿನ ಐದು ಲಕ್ಷಕ್ಕೂ ಹೆಚ್ಚು ಬುಡಕಟ್ಟು ಜನರನ್ನು ಫ್ರೆಂಚ್ ಸೇನೆಯು ತನ್ನ ಸೇನೆಯಲ್ಲಿ ಹೊಂದಿತ್ತು. ಬ್ರಿಟಿಷ್ ಸೇನೆಯು ಸುಮಾರು ಮೂರು ಲಕ್ಷ ಆಫ್ರಿಕನ್ನರನ್ನು ಸಿದ್ಧಪಡಿಸಿತ್ತು. ಜರ್ಮನ್ ಸೇನೆಯು ಸುಮಾರು ೨೦,೦೦೦ ಆಫ್ರಿಕನ್ ಸೈನಿಕರು ಮತ್ತು ೨೦,೦೦೦ ಬುಡಕಟ್ಟು ಜನರನ್ನು ತನ್ನ ಬಗಲಿಗೆ ಹಾಕಿಕೊಂಡಿತ್ತು.

ವಸಹಾತುಶಾಹಿ ರಾಷ್ಟ್ರಗಳು ಯುದ್ಧದಲ್ಲಿ ತಮ್ಮ ಮೇಲೆ ಬಿದ್ದ ಅಪಾರ ಹೊರೆಯನ್ನು ಆಫ್ರಿಕಾದ ಜನತೆಯ ಮೇಲೆ ವರ್ಗಾಯಿಸಿದವು. ಶೋಷಣೆಯ ಸ್ವರೂಪ ವ್ಯಾಪಿಸ ತೊಡಗುತ್ತಿದ್ದಂತೆ, ತೀವ್ರಗೊಂಡ ವಸಹಾತುಶಾಹಿ ರಾಷ್ಟ್ರಗಳ ದೌರ್ಜನ್ಯದ ವಿರುದ್ಧ ಜನತೆಯು ಎದಿರು ನಿಲ್ಲುವಂತೆ ಪ್ರೇರೇಪಿಸಿತು. ಬ್ರಿಟಿಷ್ ಮತ್ತು ಫ್ರೆಂಚ್ ವಸಾಹತುಗಳಲ್ಲಿ ರಾಷ್ಟ್ರೀಯ ವಿಮೋಚನಾ ಚಳುವಳಿಯು ತೀವ್ರಗೊಂಡಿತು. ಸೂಡಾನ್, ನೈಜೀರಿಯಾ, ಲಿಬಿಯಾಗಳಲ್ಲಿ ಜನರು ಬಂಡಾಯವೆದ್ದರು. ಅಲ್ಜೀರಿಯಾ, ತುನೀಷಿಯಾ, ಮೊರಾಕೊಗಳ ಜನತೆ ಫ್ರೆಂಚ್ ಸೇನೆಯ ವಿರುದ್ಧ ಕಾದಾಡತೊಡಗಿದರು.

ಪ್ರಥಮ ಮಹಾಯುದ್ಧ ಪರಿಣಾಮ ಆಫ್ರಿಕಾದ ರಾಜಕೀಯ ಭೂಪಟವನ್ನು ಪುನರ್ ರಚಿಸಲಾಯಿತು. ಈ ಮೊದಲು ಜರ್ಮನಿಯ ತೆಕ್ಕೆಯಲ್ಲಿದ್ದ ವಸಾಹತು ಪ್ರದೇಶಗಳನ್ನು ಲೀಗ್ ಆಫ್ ನೇಷನ್ ಮುಖಾಂತರ ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಂಗಳಿಗೆ ವಹಿಸಿ ಕೊಡಲಾಯಿತು. ದಕ್ಷಿಣ ಆಫ್ರಿಕಾ ಒಕ್ಕೂಟ, ಟೋಗೋ ಮತ್ತು ಕೆಮರೂನ್‌ಗಳ ಲೀಗ್ ಆಫ್ ನೇಷನ್‌ನ ಸದಸ್ಯತ್ವವನ್ನು ರದ್ದುಗೊಳಿಸಿ ಅವುಗಳನ್ನು ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳಿಗೆ ಹಂಚಲಾಯಿತು.

ಪ್ರಥಮ ವಿಶ್ವ ಯುದ್ಧಾನಂತರ ವಿದೇಶಿ ಬಂಡವಾಳವು ಆಫ್ರಿಕಾದ ರಾಷ್ಟ್ರಗಳಲ್ಲಿ ಸ್ವೇಚ್ಛಾಚಾರದಿಂದ ಹರಿದಾಡಲಾರಂಭಿಸಿತು. ವಸಾಹತುಶಾಹಿ ರಾಷ್ಟ್ರಗಳು ಹಳೆಯ ಬಂಡವಾಳಶಾಹಿಪೂರ್ವ ಸಂಬಂಧಗಳನ್ನೇ ಮುಂದುವರಿಸಲು ಯತ್ನಿಸಿದ್ದವು. ಆ ರಾಷ್ಟ್ರ ಗಳಲ್ಲಿ ದೇಶೀಯ ಬಂಡವಾಳಶಾಹಿಯು ಬೆಳೆಯದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳ ಲಾಯಿತು. ಪಾಳೇಗಾರಿ ಮತ್ತು ಪಾಳೇಗಾರಿಪೂರ್ವ ಶೋಷಣೆಯ ವಿಧಾನಗಳನ್ನು ಅನುಸರಿಸಲಾಯಿತು. ಗಣಿಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳನ್ನು ಹೊರತುಪಡಿಸಿದರೆ, ಇನ್ನಾವುದೇ ಬೃಹತ್ ಕೈಗಾರಿಕಾ ರಂಗದಲ್ಲಿ ದೇಶೀಯ ಬಂಡವಾಳವು ತಲೆ ಎತ್ತದಂತೆ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಕಠಿಣ ಕ್ರಮ ಕೈಗೊಂಡವು. ಏಕಮುಖ ಕೃಷಿ ಮತ್ತು ಕಚ್ಚಾ ವಸ್ತು ತಯಾರಿಕೆ ಆಧಾರಿತ ಆರ್ಥಿಕತೆಯನ್ನು ವಸಾಹತುಶಾಹಿ ರಾಷ್ಟ್ರಗಳು ಬಲಗೊಳಿಸಿದವು. ಆಫ್ರಿಕಾದ ಸಮಾಜದಲ್ಲಿ ಆಂತರಿಕವಾಗಿ ಪ್ರಮುಖ ಬದಲಾವಣೆಗಳು ಜರುಗತೊಡಗಿದವು. ಅತಿ ಹೆಚ್ಚು ಹಿಂದುಳಿದ ಆಫ್ರಿಕಾದಲ್ಲಿ ಬಂಡವಾಳಶಾಹಿಪೂರ್ವದ ಅಸಂಬಂಧಗಳ ಮೇಲೆ ಪ್ರಹಾರಗಳು ಹೆಚ್ಚಾದವು. ಈ ಹಂತದಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಉದ್ದಿಮೆದಾರ ಮತ್ತು ಕಾರ್ಮಿಕ ವರ್ಗಗಳು ಅಸ್ತಿತ್ವಕ್ಕೆ ಬಂದವು.

ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಳು

ಎರಡನೇ ಮಹಾಯುದ್ಧ ಸಮಯದಲ್ಲಿ ಗಣಿಗಾರಿಕೆ ಮತ್ತು ಉತ್ಪಾದನಾ ಕೈಗಾರಿಕೆಗಳ ಅಭಿವೃದ್ದಿಯಾಯಿತು. ಹಲವು ವಿಧದ ಕಚ್ಚಾ ವಸ್ತುಗಳ ಉತ್ಪಾದನೆಯಾಯಿತು. ಖನಿಜ ಸಂಪತ್ತುಗಳ ಶೋಧನೆಯಾಯಿತು. ಆಫ್ರಿಕಾದಿಂದ ಹೆಚ್ಚೆಚ್ಚು ಯುದ್ಧ ಸಾಮಗ್ರಿಗಳು ಮತ್ತು ಗಣಿ ಸಂಪತ್ತುಗಳನ್ನು ಸಂಸ್ಕರಿಸಿ ಸಾಗಿಸುತ್ತಿದ್ದರಿಂದ ೧೯೪೦-೪೫ರ ಅವಧಿಯಲ್ಲಿ ಆಫ್ರಿಕಾದ ನಗರಗಳು ಮೂರುಪಟ್ಟು ನಾಲ್ಕುಪಟ್ಟು ಹೆಚ್ಚಾದವು. ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಆಫ್ರಿಕಾದಿಂದ ಸಾಗಣೆ ಮಾಡುವ ಸಲುವಾಗಿ ಜೀವನಕ್ಕಾಗಿ ಕೃಷಿ ಮಾಡುತ್ತಿದ್ದ ಮತ್ತು ಸಣ್ಣ ಕೈಗಾರಿಕೆಗಳಿದ್ದ ಆಫ್ರಿಕಾದ ಆರ್ಥಿಕ ತಳಪಾಯವನ್ನು ಬೃಹತ್ ಮಟ್ಟದ ರಪ್ತು ಆಧಾರಿತ ಆರ್ಥಿಕತೆಯನ್ನಾಗಿ ಪರಿವರ್ತಿಸಲಾಯಿತು. ಈ ಮಧ್ಯೆ, ಏಷ್ಯಾದಿಂದ ಬರುತ್ತಿದ್ದ ಲಾಭಕ್ಕೆ ಪೆಟ್ಟು ಬಿದ್ದ ನಂತರ ಪ್ರಪಂಚದ ಸುಲಿಗೆಕೋರರ ದೃಷ್ಟಿ ಆಫ್ರಿಕಾ ವಸಾಹತುವಿನತ್ತ ಹೆಚ್ಚೆಚ್ಚು ಹರಿಯಿತು. ಇದರಿಂದಾಗಿ ಸಾವಿರಾರು ವರ್ಷಗಳಿಂದ ಬೆಳೆದುಬಂದ ಸಂಸ್ಕೃತಿಯನ್ನು ನಾಶಗೊಳಿಸಿ ರೈತಾಪಿಯನ್ನು ಬಲವಂತವಾಗಿ ಕೈಗಾರಿಕಾ ಕಾರ್ಮಿಕರನ್ನಾಗಿಸಲಾಯಿತು. ಹಳ್ಳಿಗರನ್ನು ಗಣಿಗಳು, ರೈಲು, ರಸ್ತೆಗಳು ಮತ್ತುೊಸಂಸ್ಕರಣಾ ಘಟಕಗಳಲ್ಲಿ ಕೆಲಸ ಮಾಡಲು ಯೋಗ್ಯವಿರುವ ‘ಕ್ರೂರಪಶು’ಗಳೆಂದು ಪರಿಗಣಿಸಲಾಗುತ್ತಿತ್ತು.

ಕಾರ್ಮಿಕ ಪಡೆಯನ್ನು ನಿರ್ಮಿಸಲು ಎರಡು ವಿಧಾನಗಳನ್ನು ಬಳಸಲಾಗುತ್ತಿತ್ತು. ಮೊದಲನೆಯದು, ಹೆಚ್ಚೆಚ್ಚು ತೆರಿಗೆಯನ್ನು ವಿಧಿಸಿ ಅದನ್ನು ಹಣದ ರೂಪದಲ್ಲೇ ಪಾವತಿಸುವಂತೆ ಮಾಡಿದ್ದು. ಈ ತೆರಿಗೆ ಪಾವತಿಸಲು ಹಣಕ್ಕಾಗಿ ಆಫ್ರಿಕನ್ನರು ಯುರೋಪ್ ಅಥವಾ ಅಮೆರಿಕದ ಕಂಪನಿಗಳಲ್ಲಿ ಕೆಲಸಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದರು. ಬಹುತೇಕ ವಸಾಹತುಗಳಲ್ಲಿ ಆಫ್ರಿಕನ್ನರ ಭೂಮಿ ಮೇಲಿನ ಒಡೆತನ ಶೇಕಡ ೧೦ಕ್ಕೆ ಮಾತ್ರ ಸೀಮಿತವಾಗಿತ್ತು. ಉಳಿದ ಭೂಮಿಯನ್ನು ರಪ್ತು ಆಧಾರಿತ ಬೆಳೆ ಬೆಳೆಯಲು ಅಗತ್ಯಕ್ಕಿಂತ ಆಗಾಧವಾದ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಮತ್ತು ವಸಾಹತುಶಾಹಿಗಳಿಗೆ ನೀಡಿದ್ದರಿಂದ ಸ್ವಾವಲಂಬಿಯಾಗಿದ್ದ ಆಫ್ರಿಕಾ ಆಹಾರಕ್ಕಾಗಿ ಅಮದು ಮಾಡಿಕೊಳ್ಳಬೇಕಾಯಿತು. ಎರಡನೆಯದು, ಬಲಾತ್ಕಾರದಿಂದ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಅಥವಾ ಆಧುನಿಕ ಗುಲಾಮಗಿರಿ. ಹಳ್ಳಿಗಳಿಂದ ಅಪಹರಿಸಿದ ಜನರನ್ನು ಗುತ್ತಿಗೆದಾರರ ನೆರವಿನಿಂದ ಬಲವಂತ ವಾಗಿ ಕಾರ್ಮಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಆರೋಗ್ಯ ಸಂರಕ್ಷಣೆ, ನೈರ್ಮಲ್ಯ ವ್ಯವಸ್ಥೆ, ಕುಡಿಯುವ ನೀರು ಮುಂತಾದ ಅತ್ಯವಶ್ಯ ಸೌಲಭ್ಯಗಳಿಲ್ಲದೆ ಹಂದಿಗೂಡಿನಂತಹ ವಸತಿಗಳಲ್ಲಿ ವಾಸವಾಗಿದ್ದುಕೊಂಡು ದೀರ್ಘಾವಧಿ ಸಮಯ ಕೆಲಸ ಮಾಡುತ್ತಾ ಕುಟುಂಬದ ಸಂಪರ್ಕವಿಲ್ಲದೆ ಕಾರ್ಮಿಕರ ಜೀವನ ಹೀನಾಯ ಸ್ಥಿತಿಯಲ್ಲಿತ್ತು.

ಇಂಥಹ ಕ್ರೂರ ಸ್ಥಿತಿಗಳಿಂದಾಗಿ ಉತ್ತಮ ವೇತನ, ಉತ್ತಮ ದುಡಿಯುವ ವಾತಾವರಣಕ್ಕಾಗಿ ಮತ್ತು ಗುಲಾಮಗಿರಿಯನ್ನು ಕೊನೆಗಾಣಿಸಲು ಕಾರ್ಮಿಕ ಸಂಘಟನೆಗಳು ೧೯೨೦ರ ದಶಕದಲ್ಲಿ ತುನೀಷಿಯಾ, ಜಾಂಬಿಯಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಬೆಳೆದು ಬಂದವು. ಆರಂಭದ ಕಾರ್ಮಿಕ ಸಂಘಟನೆಗಳು ಕಾನೂನುಬಾಹಿರವಾಗಿದ್ದು ಮುಷ್ಕರಗಳನ್ನು ನಡೆಸುವವರಿಗೆ ಆಮಿಷವನ್ನೊಡ್ಡಲಾಗುತ್ತಿತ್ತು. ಇದಕ್ಕೆ ಬಗ್ಗದಿದ್ದರೆ ದಂಡನೆಗೊಳಪಡಿಸಲಾಗುತ್ತಿತ್ತು. ಮುಷ್ಕರಗಳಲ್ಲಿ ಡಜನ್‌ಗಟ್ಟಲೆ ಕಾರ್ಮಿಕರನ್ನು ಕೊಂದು ನೂರಾರು ಮಂದಿಯನ್ನು ಬಂಧಿಸಿ ಅವರನ್ನು ಮತ್ತೆ ಆಧುನಿಕ ಗುಲಾಮಗಿರಿಗೆ ದೂಡಲಾಗುತ್ತಿತ್ತು.

ಸಾಮ್ರಾಜ್ಯಶಾಹಿ ಮತ್ತು ಖಾಸಗಿ ಆಧುನಿಕ ದುರಾಸೆ ಮತ್ತು ಶೋಷಣೆ ಹೆಚ್ಚಾದಂತೆ, ದುಡಿಯುವ ಜನತೆಯ ಐಕ್ಯತೆ ಗಟ್ಟಿಗೊಂಡಿತು. ಸಾಮ್ರಾಜ್ಯಶಾಹಿ ಗುಲಾಮತನದ ವಿರುದ್ಧದ ಹೋರಾಟದಲ್ಲಿ ಮೊದಲಿಗೆ ದೇಶೀಯ ಬಂಡವಾಳಶಾಹಿ ಮತ್ತು ಬುದ್ದಿಜೀವಿಗಳ ನೇತೃತ್ವದಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳನ್ನು ಸ್ಥಾಪಿಸಲಾಯಿತು. ೧೯೨೦ರಲ್ಲಿ ಅಲ್ಜೀರಿಯಾ, ತುನೀಷಿಯಾ ಮತ್ತು ಮೊರಾಕೊಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳನ್ನು ಸ್ಥಾಪಿಸಲಾಯಿತು. ಎಲ್ಲೆಡೆ ವ್ಯಾಪಿಸುತ್ತಿದ್ದ ಸಾಮ್ರಾಜ್ಯಶಾಹಿ ವಿರೋಧಿ ಚಳುವಳಿಗಳಲ್ಲಿ ಉತ್ತರ ಆಫ್ರಿಕಾದ ರಾಷ್ಟ್ರಗಳಾದ ಈಜಿಪ್ಟ್, ಸೂಡಾನ್, ಮೊರಾಕೋ ಮುಂಚೂಣಿಯಲ್ಲಿದ್ದವು. ಪೂರ್ವ ಆಫ್ರಿಕನ್ ಒಕ್ಕೂಟವನ್ನು ಕೀನ್ಯಾದಲ್ಲಿ ಸ್ಥಾಪಿಸಲಾಯಿತು. ದಕ್ಷಿಣ ಆಫ್ರಿಕಾ ಒಕ್ಕೂಟದಲ್ಲಿ ಅಂಗೋಲಾ, ಕಾಂಗೋ, ಇಟಾಲಿಯನ್ ಸೋಮಾಲಿಲ್ಯಾಂಡ್ ಮತ್ತು ಚಡ್ ಇನ್ನಿತರ ಪ್ರದೇಶಗಳಲ್ಲಿ ರೈತಾಪಿಯ ಗಲಭೆಗಳಿಂದ ಮತ್ತು ದೊಡ್ಡ ನಗರಗಳಲ್ಲಿ ನಡೆದ ಮುಷ್ಕರ ಮತ್ತು ಪ್ರದರ್ಶನಗಳಿಂದ ಬಂಡಾಯವು ತೀವ್ರ ಸ್ವರೂಪ ವನ್ನು ಪಡೆದುಕೊಂಡು ಆಳುವ ವರ್ಗಗಳಿಂದ ಕೆಲವು ವಿನಾಯಿತಿಗಳನ್ನು ಪಡೆಯಲು ಸಾಧ್ಯವಾಗಿತ್ತು. ಇಟಲಿಯು ಇಥಿಯೋಪಿಯಾದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಹಲವು ಆಫ್ರಿಕನ್ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ಜರುಗಿದವು.

ದ್ವಿತೀಯ ಮಹಾಯುದ್ಧ ಸಮಯದಲ್ಲಿ ಆಫ್ರಿಕಾದ ಎಲ್ಲ ರಾಷ್ಟ್ರಗಳ ಮೇಲೂ ಯುದ್ಧವನ್ನು ಹೇರಲಾಯಿತು. ೧೯೩೦ರ ದಶಕದಲ್ಲಿ ಆಫ್ರಿಕಾವು ಫ್ಯಾಸಿಸ್ಟ್ ಆಕ್ರಣವನ್ನು ಎದುರಿಸಬೇಕಾಯಿತು. ಈಜಿಪ್ಟ್, ಲಿಬ್ಯಾ, ತುನೀಷಿಯಾ, ಇಥಿಯೋಪಿಯಾ, ಸೋಮಾಲಿ ಲ್ಯಾಂಡ್, ಸೂಡಾನ್ ಮತ್ತು ಕೀನ್ಯಾ ಭೂಪ್ರದೇಶಗಳಲ್ಲಿ ಯುದ್ಧ ಚಟುವಟಿಕೆಗಳು ಜರುಗಿದವು. ಲಕ್ಷೋಪಲಕ್ಷ ಸಂಖ್ಯೆಯ ಆಫ್ರಿಕಾ ಸೈನಿಕರು ಬ್ರಿಟನ್ ಮತ್ತು ಜಪಾನ್ ಸೇನೆಯ ಭಾಗವಾಗಿ ಯುದ್ಧಗಳಲ್ಲಿ ಕಾದಾಡಿದರು. ಆಫ್ರಿಕಾದಲ್ಲಿನ ಇಟಾಲಿಯನ್ ಮತ್ತು ಜರ್ಮನ್ ಫ್ಯಾಸಿಸಂ ವಿರುದ್ಧ ನಡೆದ ಹೋರಾಟಗಳಲ್ಲಿ ಆಫ್ರಿಕಾದ ವಸಾಹತುಗಳು ಗಣನೀಯ ಮಿಲಿಟರಿ ಕೊಡುಗೆ ನೀಡಿವೆ.

ಅಮೆರಿಕ ಮತ್ತು ಯುರೋಪ್ ವಸಾಹತುಶಾಹಿ ರಾಷ್ಟ್ರಗಳಿಗೆ ಎರಡನೇ ಮಹಾಯುದ್ಧವು ನಾಜಿವಾದದ ವಿರುದ್ಧವಿದ್ದರೆ, ಆಫ್ರಿಕಾದ ಸೈನಿಕರಿಗೆ ವರ್ಣಭೇದ ನೀತಿ ಮತ್ತು ವಸಾಹತುಶಾಹಿಯ ವಿರುದ್ಧದ ಯುದ್ಧವಾಗಿತ್ತು. ಭಾರತದಲ್ಲಿ ಬ್ರಿಟಿಷರಿಗಾಗಿ ಸೇವೆ ಸಲ್ಲಿಸುತ್ತಿದ್ದ ನೈಜೀರಿಯಾದ ಸೈನಿಕನೊಬ್ಬ ೧೯೪೫ರಲ್ಲಿ ತಾನು ಮನೆಗೆ ಬರೆದ ಪತ್ರದಲ್ಲಿ ಈ ರೀತಿ ದಾಖಲಿಸಿದ್ದಾನೆ.

ವಿದೇಶದಲ್ಲಿರುವ ನಾವೆಲ್ಲ ಸೈನಿಕರು ಹೊಸ ವಿಚಾರದೊಂದಿಗೆ ವಾಪಸ್ಸು ಬರುತ್ತಿದ್ದೇವೆ. ನಾವೆಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತೇವೆಂದು ನಮಗೆ ತಿಳಿಸಲಾಗಿದೆ. ನಮಗೆ ಸ್ವಾತಂತ್ರ್ಯ ಬೇಕಷ್ಟೆ.

ಬಿಳಿಯ ಸೈನಿಕರೊಂದಿಗೆ ಸರಿಸಮಾನರಾಗಿ ಆಫ್ರಿಕಾದ ಸೈನಿಕರು ಹೋರಾಡಿದರು. ದೂರ ಪ್ರದೇಶಗಳಲ್ಲಿ ಯುದ್ಧಗಳನ್ನು ಗೆದ್ದರು. ಹಲವರು ಓದಲು ಬರೆಯಲು ಕಲಿತರು, ತಾಂತ್ರಿಕ ಪರಿಣತಿ ಪಡೆದರು. ಇದರಿಂದ ಬಿಳಿಯರು ಮಾತ್ರವೇ ಶ್ರೇಷ್ಠರೆಂಬುದು ಅಸಂಬದ್ಧವೆನಿಸಿತವರಿಗೆ. ಹೀಗಾಗಿ ಸ್ವಾತಂತ್ರ್ಯದ ವಿಚಾರಗಳನ್ನು ಅವರು ಅತ್ಯುತ್ಸಾಹದಿಂದ ಸ್ವಾಗತಿಸಿದರು.

ಕ್ರಾಂತಿಕಾರಿ ವಿಚಾರಗಳನ್ನು ಹೊಂದಿರುವ ಕಾರ್ಮಿಕರ ಪಕ್ಷ ಮಾತ್ರವೇ ಪೂರ್ಣ ಸ್ವಾತಂತ್ರ್ಯಗಳಿಸಲು ಸಾಧ್ಯವೆಂದು ಅಲ್ಜೀರಿಯಾ ಸ್ವಾತಂತ್ರ್ಯ ಹೋರಾಟಗಾರರು ನಂಬಿದ್ದರು. ಆರಂಭಿಕ ಕಾರ್ಮಿಕ ಸಂಘಟನೆಗಳ ನಾಯಕರೆಲ್ಲ ಕಮ್ಯುನಿಷ್ಟರೇ ಆಗಿದ್ದು ಯುರೋಪಿನ ಸಮಾಜವಾದಿ ಚಳುವಳಿಗಳೊಂದಿಗೆ ಸಂಪರ್ಕ ಹೊಂದಿದ್ದರು. ಭಾರತ ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳು ರಾಷ್ಟ್ರೀಯ ವಿಮೋಚನಾ ಕ್ರಾಂತಿಗಳಲ್ಲಿ ಯಶಸ್ಸು ಗಳಿಸಿದ್ದು ಮತ್ತು ರಷ್ಯಾ, ಚೀನಾ, ವಿಯೆಟ್ನಾಂ, ಉತ್ತರ ಕೊರಿಯಾಗಳು ಸಮಾಜವಾದಿ ರಾಷ್ಟ್ರಗಳಾಗಿ ಪರಿವರ್ತನೆಯಾದದ್ದು ಆಫ್ರಿಕಾದ ರಾಷ್ಟ್ರಗಳಿಗೆ ಮತ್ತಷ್ಟು ಪ್ರೇರಣೆ ನೀಡಿದವು.

ವಿಮೋಚನಾ ಹೋರಾಟ ಸಮಯದಲ್ಲಿ ಆಫ್ರಿಕಾದ ಜನತೆಯು ಒಗ್ಗೂಡಲಾರಂಭಿಸಿದರು. ಅವರ ಸಾಮಾಜಿಕ ಪ್ರಜ್ಞೆಯು ಬೆಳೆಯತೊಡಗಿತು ಮತ್ತು ಬುದ್ದಿಮತ್ತೆಯ ಮಿಲಿಟರಿ ಕಮ್ಯಾಂಡರ್‌ಗಳು ಮತ್ತು ನಾಯಕರು ಉತ್ತುಂಗಕ್ಕೆ ಬರತೊಡಗಿದರು. ಆದರೂ ವಸಾಹತುಶಾಹಿ ಶಕ್ತಿಗಳ ಪ್ರಹಾರವನ್ನು ತಾಳಲಾರದೆ, ಆದಾಯ ಗಳಿಸುವ ಹಾದಿಗಳಿಲ್ಲದೆ ಹಸಿವು ಮತ್ತು ಹಲವು ರೋಗರುಜಿನಗಳಿಂದ ಲಕ್ಷೋಪಲಕ್ಷ ಸಂಖ್ಯೆಯ ಆಫ್ರಿಕನ್ನರು ಸಾವನ್ನಪ್ಪುತ್ತಿದ್ದರು. ರಪ್ತು ಆಧಾರಿತ ಕೈಗಾರಿಕೆಗಳು ಹೆಚ್ಚಾದಂತೆ ಕಾರ್ಮಿಕ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ೧೯೫೦ರ ದಶಕದಲ್ಲಿ ೪.೦ ಲಕ್ಷ ಸ್ವೇಚ್ಛಾ ಕಾರ್ಮಿಕರಿದ್ದರೆ ಸುಮಾರು ೩.೮ ಲಕ್ಷ ಗುತ್ತಿಗೆ ಕಾರ್ಮಿಕರಿದ್ದರು ಎಂದು ಅಂಗೋಲಾದ ವಸಾಹತುಶಾಹಿ ಸರ್ಕಾರದ ವರದಿಗಳೇ ತಿಳಿಸುತ್ತವೆ. ಆಫ್ರಿಕಾದಾದ್ಯಂತ ಈ ಪ್ರಮಾಣದ ಗುತ್ತಿಗೆ ಕಾರ್ಮಿಕರ ಸಂಖ್ಯೆ ಸರ್ವ ಸಾಮಾನ್ಯವಾಗಿತ್ತು.

ನಿಧಾನವಾಗಿ ಆಫ್ರಿಕಾದಲ್ಲಿ ತಳವೂರಿದ್ದ ವಸಾಹತು ವ್ಯವಸ್ಥೆಯು ಶಿಥಿಲಗೊಳ್ಳ ತೊಡಗಿತು. ಫ್ಯಾಸಿಸ್ಟ್ ರಾಷ್ಟ್ರಗಳ ಕೂಟವನ್ನು ಸೋವಿಯತ್ ಸೇನೆ ಮತ್ತು ಮೈತ್ರಿಕೂಟವು ಹೀನಾಯವಾಗಿ ಸೋಲಿಸಿದ್ದು ಆಫ್ರಿಕಾವು ರಾಜಕೀಯವಾಗಿ ಜಾಗೃತಗೊಳ್ಳಲು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿತು. ದ್ವಿತೀಯ ಮಹಾಯುದ್ಧ ನಂತರದಲ್ಲಿ ವಸಾಹತು ರಾಷ್ಟ್ರಗಳಲ್ಲಿ ವಿಮೋಚನೆಗಾಗಿ ಹೋರಾಡುವ ರಾಜಕೀಯ ಪಕ್ಷಗಳು ಅಸ್ತಿತ್ವಕ್ಕೆ ಬಂದವು. ಇವುಗಳಿಗೆ ವ್ಯತಿರಿಕ್ತವಾಗಿ ವಿಮೋಚನೆಗಾಗಿ ಹೋರಾಡುವ ರಾಜಕೀಯ ಪಕ್ಷಗಳು ಅಸ್ತಿತ್ವಕ್ಕೆ ಬಂದವು. ಇವುಗಳಿಗೆ ವ್ಯತಿರಿಕ್ತವಾಗಿ ವಸಾಹತು ಪರ ಪಕ್ಷಗಳು ಮತ್ತು ಗುಂಪುಗಳನ್ನು ಸಹ ಸ್ಥಾಪಿಸಲಾಯಿತು. ಈ ಗುಂಪುಗಳು ಪ್ರಮುಖವಾಗಿ ಬಂಡವಾಳಗಾರರಾಗಿ ಪರಿವರ್ತಿತಗೊಂಡಿದ್ದ ಪಾಳೇಗಾರಿ ದೊರೆಗಳನ್ನು ಬೆಂಬಲಿಸುತ್ತಿದ್ದವು. ಆಫ್ರಿಕಾದ ರಾಷ್ಟ್ರ ಗಳಲ್ಲಿ ಸ್ವಾತಂತ್ರ್ಯ ಹೋರಾಟವು ವಿವಿಧ ರೂಪಗಳಲ್ಲಿತ್ತು. ಬಹುತೇಕ ವಸಾಹತುಗಳಲ್ಲಿ ಅದು ಪ್ರತಿಭಟನೆಗಳು, ಮುಷ್ಕರ ಮತ್ತು ನಾಗರಿಕ ಅಸಹಕಾರ ಚಳುವಳಿಯ ರೂಪದ ಲ್ಲಿತ್ತು. ಇನ್ನೂ ಕೆಲವು ರಾಷ್ಟ್ರಗಳಲ್ಲಿ ಬಂಡಾಯಗಳು, ಗೆರಿಲ್ಲಾ ಹೋರಾಟಗಳು ನಡೆದವು. ಈಜಿಪ್ಟ್‌ನಲ್ಲಿ ಸಶಸ್ತ್ರ ಹೋರಾಟಗಳು ಜರುಗಿದವು.

ಆಫ್ರಿಕಾದ ವಿಮೋಚನೆಯಲ್ಲಿ ಪ್ರಧಾನ ಪಾತ್ರ ವಹಿಸಿದ ಅಂಶವೆಂದರೆ ಕಾರ್ಮಿಕ ಸಂಘಟನೆಗಳ ಬೆಳವಣಿಗೆ ಮತ್ತು ಅಭಿವೃದ್ದಿ. ೨೦ನೇ ಶತಮಾನದ ಪ್ರಾರಂಭದಲ್ಲಿ ವಸಾಹತುಶಾಹಿ ಶೋಷಣೆಯ ಸಂಕಷ್ಟಮಯ ಪರಿಸ್ಥಿತಿಯಿಂದಾಗಿ ಆಫ್ರಿಕಾದ ಕಾರ್ಮಿಕ ಸಂಘಟನೆಗಳು ಸೆಟೆದೆದ್ದು ಬಂದವು. ಮೊರಾಕೋ ಮತ್ತು ತುನೀಷಿಯಗಳಲ್ಲಿ ಬೆಳೆದು ಬಂದ ಸಶಸ್ತ್ರ ಚಳುವಳಿಯಿಂದಾಗಿ ೧೯೫೬ರಲ್ಲಿ ಫ್ರೆಂಚ್ ಸರ್ಕಾರವು ಸ್ವಾತಂತ್ರ್ಯ ಘೋಷಿಸಬೇಕಾಯಿತು. ಇಟಲಿಯ ವಸಾಹತುವಾಗಿದ್ದ ಲಿಬ್ಯಾವನ್ನು ನಂತರ ಬ್ರಿಟಿಷ್ ಸೇನೆಗಳು ವಶಪಡಿಸಿಕೊಂಡವು. ಏಳು ವರ್ಷಗಳವರೆಗೆ ಸ್ವಾತಂತ್ರಕ್ಕಾಗಿ ನಡೆದ ಹೋರಾಟದಲ್ಲಿ ೧೫ ಲಕ್ಷ ಜನರನ್ನು ಕಳೆದುಕೊಂಡಿದ್ದ ಅಲ್ಜೀರಿಯಾ ಅಂತಿಮವಾಗಿ ೧೯೬೨ರಲ್ಲಿ ಯಶಸ್ಸು ಗಳಿಸಿತು.

ಜ್ಯೂಲಿಯಸ್ ನೈರೇರೆಯವರು ಟಾಂಜೇನಿಯ ದೇಶದಲ್ಲಿ ತಾಂಗಾನಿಕಾ ಆಫ್ರಿಕನ್ ನ್ಯಾಷನಲ್ ಯೂನಿಯನ್ ಒಂದನ್ನು ಸಂಘಟಿಸಿ ಸ್ವಾತಂತ್ರ್ಯ ಹೋರಾಟಕ್ಕೆ ನಾಯಕತ್ವ ನೀಡಿದರು. ಅವರು ಆ ದೇಶದ ಮೊದಲ ಅಧ್ಯಕ್ಷರೂ(೧೯೬೨-೧೯೮೫) ಆಗಿದ್ದರು. ಇಡೀ ಆಫ್ರಿಕಾಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ನಾಯಕತ್ವ ನೀಡಿದರು. ಜಿಂಬಾಬ್ವೆ, ಮೊಜಾಂಬಿಕ್, ಅಂಗೋಲಾ ಮತ್ತು ಉಗಾಂಡಾದ ಸ್ವಾತಂತ್ರ್ಯ ಹೋರಾಟದ ಗೆರಿಲ್ಲಾ ನೆಲೆಗಳಿಗೆ ಸಹಾಯ ಒದಗಿಸಿದ್ದರು.

ಬೆಲ್ಜಿಯನ್ ಕಾಂಗೋ ಪ್ರಸ್ತುತ ಝೆುರೇ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮುಂಚೂಣಿ ನಾಯಕತ್ವ ನೀಡಿದವರೆಂದರೆ ಪ್ಯಾಟ್ರಿಕ್ ಲೂಮುಂಬಾರವರು. ೧೯೫೯ರಲ್ಲಿ ಬೆಲ್ಜಿಯಂ ಸರ್ಕಾರವು ಕಾಂಗೋ ದೇಶಕ್ಕೆ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ತಮ್ಮ ಬಾಲಂಗೋಚಿಗಳಿಗೆ ನೀಡುವ ಪ್ರಯತ್ನವನ್ನು ಲೂಮುಂಬಾ ನಾಯಕತ್ವದ ಪಕ್ಷವು ವಿರೋಧಿಸಿತು. ತೀವ್ರ ಚಳುವಳಿಗಳಿಂದಾಗಿ ಚುನಾವಣೆ ನಡೆಸಲಾಯಿತು. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಲೂಮುಂಬಾ ಪ್ರಧಾನಮಂತ್ರಿಯಾದರೂ ಪ್ರತ್ಯೇಕತಾ ವಾದದ ದನಿಯೆತ್ತಿ ಬಂಡಾಯ ಸಾರಿದ ಕಟಿಂಗಾ ಪ್ರಾಂತ್ಯಕ್ಕೆ ಬೆಂಬಲವಾಗಿ ಬೆಲ್ಜಿಯನ್ ಸೇನೆ ನಿಂತಿತು. ಇದರ ವಿರುದ್ಧ ಲೂಮುಂಬಾ ವಿಶ್ವಸಂಸ್ಥೆಗೆ ದೂರಿತ್ತರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂದಿನ ಅಧ್ಯಕ್ಷ ಈಸಬವು ಲೂಮುಂಬಾ ಸರ್ಕಾರವನ್ನು ವಜಾ ಮಾಡಿದರು. ಈ ಅವಕಾಶ ಬಳಸಿಕೊಂಡು ಮಿಲಿಟರಿ ನಾಯಕರು ಅಧಿಕಾರ ಗ್ರಹಣ ಮಾಡಿದರು. ನಂತರದಲ್ಲಿ ಲೂಮುಂಬಾರನ್ನು ಹತ್ತೆ ಮಾಡಲಾಯಿತು. ಇದರ ಹಿಂದೆ ಅಮೆರಿಕದ ಗೂಢಾಚಾರ ಸಂಸ್ಥೆ ಸಿಐಎಯ ಪ್ರಧಾನ ಪಾತ್ರವಿದೆ ಎನ್ನಲಾಗುತ್ತದೆ.

ಘಾನಾದಲ್ಲಿ ಮುಂಚೂಣಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಕ್ವಾಮೆ ಎನ್ ಕ್ರೂಮಾ ಅವರು ಸ್ವತಂತ್ರ ಘಾನಾದ ಅಧ್ಯಕ್ಷರಾದರು. ಅವರು ಇಡೀ ಆಫ್ರಿಕಾವನ್ನು ಸಾಮ್ರಾಜ್ಯಶಾಹಿ ವಸಾಹತುಶಾಹಿಯಿಂದ ಬಿಡುಗಡೆ ಮಾಡುವ ಉದ್ದೇಶದಿಂದ ಆಫ್ರಿಕಾದ ಐಕ್ಯತೆಗಾಗಿ ಶ್ರಮಿಸಿದರು. ಈ ನಿಟ್ಟಿನಲ್ಲಿ ಅವರು ಹಲವು ರಾಷ್ಟ್ರಗಳ ಬೆಂಬಲ ಗಳಿಸಿ ಆಫ್ರಿಕಾ ಐಕ್ಯತಾ ಸಂಘಟನೆ(ಓಎಯು)ನ್ನು ೧೯೬೩ರಲ್ಲಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

೧೯೬೦ರ ಹೊತ್ತಿಗೆ ೧೭ ರಾಷ್ಟ್ರಗಳು ಸ್ವತಂತ್ರಗೊಂಡವು. ೧೯೭೦ರ ಹೊತ್ತಿಗೆ ಬಹುತೇಕ ರಾಷ್ಟ್ರಗಳು ಸ್ವಾತಂತ್ರ್ಯ ಪಡೆದವು. ೧೯೬೧ರಲ್ಲಿ ಅಂಗೋಲಾದಲ್ಲಿ, ೧೯೬೪ರಲ್ಲಿ ಜುನಿಯಾ ಮತ್ತು ೧೯೬೪ರಲ್ಲಿ ಮೊಜಾಂಬಿಕ್‌ಗಳಲ್ಲಿ ಪೋರ್ಚುಗೀಸರ ವಿರುದ್ಧ ಸಶಸ್ತ್ರ ಹೋರಾಟ ನಡೆಯಿತು.

ಆಫ್ರಿಕಾದ ದಕ್ಷಿಣ ಭಾಗದಲ್ಲಿ ಯಥೇಚ್ಛವಾದ ಖನಿಜ ಸಂಪತ್ತು ದೊರೆಯುತ್ತಿದ್ದರಿಂದ ಪಶ್ಚಿಮ ರಾಷ್ಟ್ರಗಳ ಕಣ್ಣೆಲ್ಲ ಅಲ್ಲಿತ್ತು. ೧೯೬೦ರ ದಶಕದಿಂದೀಚೆಗೆ ದಕ್ಷಿಣ ಆಫ್ರಿಕಾ ದೊಂದಿಗೆ ಹೆಚ್ಚು ಬಂಡವಾಳ ಹೂಡುವ ಮತ್ತು ವ್ಯಾಪಾರ ಬಾಂಧವ್ಯ ಹೊಂದಿದ್ದ ಬ್ರಿಟನ್, ಅಮೆರಿಕಗೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿತು. ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳು ಜಿಂಬಾಬ್ವೆ, ಅಂಗೋಲಾ, ಮೊಜಾಂಬಿಕ್ ಮತ್ತು ನಮೀಬಿಯಾದ ಭೂಭಾಗ ಗಳಲ್ಲಿ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿದ್ದವು. ಜಿಂಬಾಬ್ವೆ ಮತ್ತು ನಮೀಬಿಯಾಗಳಲ್ಲಿ ಗೆರಿಲ್ಲಾ ಯುದ್ಧ ಚಟುವಟಿಕೆಗಳು ತೀವ್ರ ಸ್ವರೂಪ ಪಡೆದುಕೊಂಡದ್ದರಿಂದ ಅಲ್ಲಿ ಚುನಾವಣೆ ನಡೆಸಲು ಅಮೆರಿಕ ಒಪ್ಪದೆ ಅನ್ಯ ಮಾರ್ಗವಿರಲಿಲ್ಲ.

೧೯೭೫ರಲ್ಲಿ ಅಂಗೋಲಾವು ಸ್ವತಂತ್ರ ಗಳಿಸಿತು. ಸ್ವಾತಂತ್ರ್ಯಗೊಂಡ ಬಳಿಕ ಅಂಗೋಲಾ ದಲ್ಲಿ ಮಾರ್ಕ್ಸ್‌ವಾದಿ ಪಕ್ಷವು ಅಧಿಕಾರಕ್ಕೆ ಬಂದಿತು. ಆದರೆ ಕೆಲವೇ ವರ್ಷಗಳಲ್ಲಿ ಜೋನಾಸ್ ಸವಿಂಬಿ ಎಂಬುವನ ನಾಯಕತ್ವದಲ್ಲಿ ಯೂನಿಟಾ ಎಂಬ ಹೆಸರಿನ ಚಳವಳಿಯು ಆರಂಭಗೊಂಡು ಹೊಸ ಸರ್ಕಾರದ ವಿರುದ್ಧ ಗೆರಿಲ್ಲಾ ಯುದ್ಧ ನಡೆಸಿತು. ಈ ಚಳವಳಿಗೆ ಬಿಳಿಯ ಜನಾಂಗದ ನೇತೃತ್ವ ಹೊಂದಿದ್ದ ದಕ್ಷಿಣ ಆಫ್ರಿಕಾ ಸರ್ಕಾರವು ಸೇರಿದಂತೆ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಬೆಂಬಲ ನೀಡಿದ್ದವು. ಅಂಗೋಲಾದ ಸರ್ಕಾರವನ್ನು ರಕ್ಷಿಸುವ ಸಲುವಾಗಿ ಕ್ಯೂಬಾ ಮತ್ತು ಸೋವಿಯತ್ ರಷ್ಯಾ ನೆರವು ನೀಡಿದವು. ಆದರೂ ೧೯೯೧ರ ಸಂಧಾನಗಳು ಮತ್ತು ೧೯೯೨ರ ಚುನಾವಣೆಗಳು ಕೂಡ ಈ ನಾಗರಿಕ ಯುದ್ಧವನ್ನು ಕೊನೆಗಾಣಿಸುವಲ್ಲಿ ವಿಫಲವಾದವು. ೧೯೯೮-೯೯ರ ಹೊತ್ತಿಗೆ ಅಂಗೋಲಾದ ಶೇ.೬೦ರಷ್ಟು ಪ್ರದೇಶದ ಮೇಲೆ ಯೂನಿಟಾ ಸಂಘಟನೆಯು ನಿಯಂತ್ರಣ ಹೊಂದಿದ್ದು, ಗಂಭೀರವಾದ ಹೋರಾಟಗಳು ನಡೆದು ತೀವ್ರ ಸ್ವರೂಪ ಪಡೆದುಕೊಂಡಿದ್ದವು. ಅಂಗೋಲಾದ ಸೇನೆಯು ಯೂನಿಟಾ ನೆಲೆಗಳ ಮೇಲೆ ಬೃಹತ್ ಪ್ರಮಾಣದ ದಾಳಿ ನಡೆಸಿ ಶತ್ರುಪಡೆಗಳನ್ನು ಬಹುತೇಕ ಧ್ವಂಸಗೊಳಿಸಿತು. ಆದರೂ ೨೦೦೨ರಲ್ಲಿ ಸವಿಂಬಿಯು ಮರಣಗೊಂಡ ನಂತರವಷ್ಟೆ ನಾಗರಿಕ ಯುದ್ಧವು ಅಂತ್ಯ ಕಂಡಿತು. ಯೂನಿಟಾ ಸಂಘಟನೆಯು ತನ್ನ ಸೇನೆಯನ್ನು ನಾಶ ಮಾಡಿ ತಾನೊಂದು ರಾಜಕೀಯ ಪಕ್ಷವೆಂದು ಘೋಷಿಸಿಕೊಂಡಿತು. ಅಂಗೋಲಾದಲ್ಲಿ ಕಳೆದ ೨೫ ವರ್ಷಗಳಲ್ಲಿ ನಡೆದ ನಿರಂತರ ನಾಗರಿಕ ಯುದ್ಧಗಳಿಂದಾಗಿ ೧೫ ಲಕ್ಷಕ್ಕೂ ಹೆಚ್ಚು ಮಂದಿ ಮರಣ ಹೊಂದಿದ್ದಾರೆ.

ದಕ್ಷಿಣ ಆಫ್ರಿಕಾದ ಬಿಳಿಯರ ಸರ್ಕಾರವು ನಮೀಬಿಯಾವನ್ನು ಆಕ್ರಮಿಸಿಕೊಂಡಿತ್ತು. ದಕ್ಷಿಣ ಆಫ್ರಿಕಾ ಸೇನೆಯ ವಿರುದ್ಧ ನೈರುತ್ಯ ಪೊಲೀಸ್ ಸಂಘಟನೆಯು ಸ್ಯಾಮ್ ನೂಜೋಮಾ ಅವರ ನಾಯಕತ್ವದಲ್ಲಿ ಅವಿರತ ಹೋರಾಟ ನಡೆಸಿತು. ಇದರ ಫಲವಾಗಿ ಸ್ಯಾಮ್ ನೂಜೋಮಾ ಅವರು ೧೯೯೦ರಲ್ಲಿ ಸ್ವಾತಂತ್ರ್ಯ ಗಳಿಸಿದ ನಮೀಬಿಯಾದ ಅಧ್ಯಕ್ಷರಾಗಿ ಆಯ್ಕೆಯಾದರು. ನಮೀಬಿಯಾವು ಅಂಗೋಲಾ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿನ ಬಂಡುಕೋರ ಯೂನಿಟಾ ಸಂಘಟನೆಯ ವಿರುದ್ಧ ಹೋರಾಡಲು ಬೆಂಬಲ ನೀಡಿತು. ಯೂನಿಟಾ ಸೇನೆಯ ಮೇಲೆ ದಾಳಿ ನಡೆಸಲು ನಮೀಬಿಯಾ ತನ್ನ ಭೂನೆಲೆಗಳನ್ನು ಅಂಗೋಲಾ ಸೇನೆಗೆ ನೀಡಿತು. ಅಂಗೋಲಾದ ಯುದ್ಧದಿಂದಾಗಿೊಸಾವಿರಾರು ಸಂಖ್ಯೆಯ ನಿರಾಶ್ರಿತರು ನಮೀಬಿಯಾದಲ್ಲಿ ಆಶ್ರಯ ಪಡೆದರು. ೨೦೦೧ರಲ್ಲಿ ಸುಮಾರು ೩೦,೦೦೦ ಅಂಗೋಲಾ ನಿರಾಶ್ರಿತರು ನಮೀಬಿಯಾದಲ್ಲಿದ್ದರು. ನಮೀಬಿಯಾದಲ್ಲಿ ಶೇ. ೨೦ರಷ್ಟು ಜನತೆ ಶೇ.೭೫ರಷ್ಟು ಭೂಮಿಯನ್ನು ಹೊಂದಿದ್ದಾರೆ. ಭೂಸುಧಾರಣೆಯ ಅತ್ಯಂತ ಪ್ರಮುಖವಾದ ವಿಷಯವಾಗಿದ್ದು, ತೀರಾ ನಿಧಾನಗತಿಯಲ್ಲಿ ಭೂಸುಧಾರಣಾ ಕಾರ್ಯವು ಸಾಗುತ್ತಿದೆ. ೨೦೦೩ರಲ್ಲಿ ಹಿಫಿಕೆಪುನೈ ಪೊಹಂಬಾ ನಮೀಬಿಯಾದ ಅಧ್ಯಕ್ಷರಾಗಿ ಚುನಾಯಿತರಾದರು.