ಸುಮಾರು ಮುಕ್ಕಾಲು ಶತಮಾನದ ಕಾಲ ಆಫ್ರಿಕನ್ನರು ಯುರೋಪಿಯನ್ನರ ಆಳ್ವಿಕೆಗೆ ಒಳಪಟ್ಟಿದ್ದರೂ ಎರಡನೇ ಮಹಾಯುದ್ಧದ ಕೊನೆಯಲ್ಲಿ ಯೂರೋಪಿನ ಹಿಡಿತದ ವಿರುದ್ಧ ಆಫ್ರಿಕನ್ನರು ದಂಗೆ ಎದ್ದರು. ಹತ್ತೊಂಬತ್ತನೇ ಶತಮಾನದ ಕೊನೆಯ ಎರಡು ದಶಕಗಳಲ್ಲಿ ಯುರೋಪಿಯನ್ನರು ಆಫ್ರಿಕಾದ ಸಂಪೂರ್ಣ ಭಾಗವನ್ನು ಆಕ್ರಮಿಸತೊಡಗಿದರು. ಆಫ್ರಿಕಾದ ವಿಷಯಗಳು ಯುರೋಪಿನಲ್ಲಿ ಚರ್ಚಿತವಾಗುತ್ತಿದ್ದುದು ಸಾಮಾನ್ಯವಾಗಿತ್ತು. ೧೯೩೦ರ ಹೊತ್ತಿಗೆ ಈ ರೀತಿಯ ಧೋರಣೆ ಸಂಪ್ರದಾಯವಾಗಿ ಹೋಗಿತ್ತು. ಆಫ್ರಿಕಾದ ಕೆಲ ದೇಶಪ್ರೇಮಿಗಳು ಈ ರೀತಿಯ ಪರಿಸ್ಥಿತಿಯಿಂದಾಗಿ ಕುದಿಯತೊಡಗಿದರು. ಎರಡು ಮಹಾಯುದ್ಧಗಳ ಪ್ರಭಾವದಿಂದಾಗಿ ಆಫ್ರಿಕನ್ನರು ಸ್ವಂತದ ನಿರ್ದಿಷ್ಟವಾದ ನಿರ್ಧಾರವನ್ನು ಕಂಡುಕೊಂಡರು. ೧೯೪೫ರಲ್ಲಿ ದಕ್ಷಿಣ ಆಫ್ರಿಕಾವನ್ನು ಹೊರತುಪಡಿಸಿ ಈಜಿಪ್ಟ್, ಸೈಬಿರಿಯಾ ಮತ್ತು ಇಥಿಯೋಪಿಯಾ ಇವು ಯುರೋಪಿನ ಹಿಡಿತದಲ್ಲಿದ್ದವು. ಕಳೆದ ಎಪ್ಪತ್ತು ವರ್ಷಗಳಿಂದಲೂ ಆಫ್ರಿಕಾದ ಜನಜೀವನ ಯೂರೋಪಿನ ರಾಷ್ಟ್ರಗಳ ಹಿಡಿತದಲ್ಲಿತ್ತು. ಆಫ್ರಿಕಾದ ರಾಷ್ಟ್ರೀಯತೆ ಎಚ್ಚೆತ್ತ ಹದಿನೈದು ವರ್ಷಗಳಲ್ಲೇ ಆಫ್ರಿಕಾವು ಯುರೋಪಿಯನ್ನರ ನೇರ ಸಾರ್ವಭೌಮತ್ವವನ್ನು ಇದೇ ಖಂಡದಲ್ಲಿ ಮುಕ್ತಿಗೊಳಿಸಿತು.

ಪಶ್ಚಿಮ ಆಫ್ರಿಕಾ

ಎರಡನೇ ಮಹಾಯುದ್ಧದ ನಂತರ ಪಶ್ಚಿಮ ಆಫ್ರಿಕಾದ ಮೇಲಿದ್ದ ಇತರ ದೇಶಗಳ ಹಿಡಿತ ಮುಕ್ತವಾಗತೊಡಗಿತು. ಈ ಮಹಾಯುದ್ಧವು ನೇರವಾಗಿ ಪಶ್ಚಿಮ ಆಫ್ರಿಕಾದಲ್ಲಿ ಬ್ರಿಟಿಷರಿಗಿಂತ ಫ್ರೆಂಚರಿಗೆ ಹೆಚ್ಚಿನ ಪೆಟ್ಟು ನೀಡಿತು. ೧೯೪೨ರವರೆಗೆ ಫ್ರೆಂಚರ ಪಶ್ಚಿಮ ಆಫ್ರಿಕಾವು ವಿಚೆಯ ಆಡಳಿತಕ್ಕೆ ಒಳಪಟ್ಟಿತು. ಇದು ಆತನ ಅಧಿಕಾರವನ್ನು ಹೆಚ್ಚಿಸಿತ್ತು. ಬಲವಂತದ ದುಡಿಮೆ ಆಫ್ರಿಕನ್ನರ ಶೋಷಣೆ ಇಂತಹ ಪೈಶಾಚಿಕ ವರ್ತನೆಗಳು ೧೯೩೦ರಲ್ಲಿ ಆಫ್ರಿಕನ್ನರು ಪ್ಯಾರಿಸ್‌ನಲ್ಲಿ ಹಲವು ರಾಜಕೀಯ ಸಂಘಗಳನ್ನು ಸೇರುವಂತೆ ಮಾಡಿತು.

೧೯೪೬ರ ಹೊತ್ತಿಗೆ ಫ್ರೆಂಚರ ಪಶ್ಚಿಮ ಆಫ್ರಿಕಾದಲ್ಲಿದ್ದ ಆಫ್ರಿಕಾದ ನಾಯಕರು ಫ್ರೆಂಚರೊಂದಿಗೆ ಸಮಾನ ನಾಗರಿಕ ಹಕ್ಕು ಬೇಕೆಂದು ಮತ್ತು ಬಲವಂತದ ದುಡಿಮೆಯನ್ನು ಅನುಸರಿಸತೊಡಗಿದರು. ಜನವರಿ ೮, ೧೯೫೦ರಲ್ಲಿ ಒಂದು ಸಾಧಾರಣವಾದ ಮುಷ್ಕರ ಪ್ರಾರಂಭವಾಯ್ತು. ಗವರ್ನರನ್ನು ತುರ್ತುಪರಿಸ್ಥಿತಿಯನ್ನು ಹೇರಿ ನುಕ್ರುಮ್ ಮತ್ತು ಆತನ ಸಂಗಡಿಗರನ್ನು ಬಂಧಿಸಿದನು. ತುರ್ತುಪರಿಸ್ಥಿತಿ ಕೊನೆಗೊಂಡು ಮಾರ್ಚ್ ೧೯೫೦ರಲ್ಲಿ ನುಕ್ರುಹನ್ ಉಪನಾಯಕನಾಗಿ ಮುಷ್ಕರವನ್ನು ಮುಂದುವರೆಸಿದನು. ಕೌಸೇ ಸಂವಿಧಾನದ ನೇತೃತ್ವದಲ್ಲಿ ಮೊದಲ ಚುನಾವಣೆಯು ೧೯೫೧ರ ಫೆಬ್ರವರಿಯಲ್ಲಿ ಪ್ರಾರಂಭವಾಯಿತು. ನುಕ್ರುಮ್ ಬಂದಿಖಾನೆಯಲ್ಲಿದ್ದಾಗಲೇ ಚುನಾವಣೆಯಲ್ಲಿ ಗೆದ್ದ ಆತನನ್ನು ಬಿಡುಗಡೆಗೊಳಿಸಲಾಯಿತು. ೧೯೫೨ರಲ್ಲಿ ಆತನೇ ಪ್ರಧಾನಮಂತ್ರಿಯಾದನು.

೧೯೫೧ರ ಚುನಾವಣೆಯ ನಂತರ ಎರಡು ವರ್ಷಗಳ ಅವಧಿಯಲ್ಲಿ ಅಂದರೆ ೧೯೫೩ರ ಅವಧಿಯ ಹೊತ್ತಿಗೆ ನುಕ್ರುಮ್ ಜವಾಬ್ದಾರಿಯುತ ಉತ್ತಮ ಸರ್ಕಾರವನ್ನು ನೀಡಿದ. ಇಲ್ಲಿಂದ ಮುಂದೆ ಬ್ರಿಟಿಷ್ ಸರ್ಕಾರ ಸ್ವಾತಂತ್ರ್ಯವನ್ನು ಕೊಡಲು ನಿರ್ಧರಿಸಿತು.

ಸಿ.ಪಿ.ಪಿ.ಯ ಅಧಿಕ ಬಹುಮತದಿಂದ ೧೯೫೪ ಮತ್ತು ೫೬ರಲ್ಲಿ ಲೆಜಿಸ್ಲೆಚರ್‌ಗಳು ಚುನಾಯಿತರಾದರು. ವಸಾಹತುಗಳ ಕಾರ್ಯದರ್ಶಿಯು ಸಮಂಜಸ ಬಹುಮತಗಳನ್ನು ಹೊಂದಿದ ಪ್ರದೇಶಕ್ಕೆ ಸ್ವಾತಂತ್ರ್ಯ ಕೊಡುವುದಾಗಿ ವಚನವಿತ್ತರು. ಅಂತೆಯೇ ವಸಾಹತು ಕಾರ್ಯದರ್ಶಿ ೧೯೫೭ರ ಮಾರ್ಚ್ ೬ರಂದು ಘಾನಾದ ಸ್ವಾತಂತ್ರ್ಯ ದಿನವೆಂದು ಘೋಷಿಸಿ ದರು. ೧೯೬೦ರಲ್ಲಿ ಘಾನಾ ಗಣರಾಜ್ಯವಾಯಿತು. ‘ಘಾನಾ’ ಯೂರೋಪಿಯನ್ನರಿಂದ ಮುಕ್ತಿ ಹೊಂದಿದ ಮೊದಲ ರಾಷ್ಟ್ರವಾಯಿತು. ಅಲ್ಲಿಂದಲೇ ನುಕ್ರುಮ್ ಇಡೀ ಆಫ್ರಿಕಾವನ್ನು ಬಿಳಿಯರಿಂದ ಮುಕ್ತಿಗೊಳಿಸಲು ಪ್ರತಿಧ್ವನಿಯ ಮಳೆಗರೆದನು.

ಇದರಂತೆ ನೈಜೀರಿಯಾ ಕೂಡ ೧೯೫೬ರಲ್ಲಿ ತನ್ನ ಸ್ವಂತ ಸರ್ಕಾರಕ್ಕಾಗಿ ಬೇಡಿಕೆಯಿಟ್ಟಿತು. ೫೦,೦೦೦,೦೦ ಜನಸಂಖ್ಯೆಯನ್ನು ಹೊಂದಿದ್ದ ನೈಜೀರಿಯಾವು ಆಫ್ರಿಕಾದ ದೊಡ್ಡದೇಶ. ಬೇಡಿಕೆಯ ಪರಿಣಾಮವಾಗಿ ಪೂರ್ವ ಮತ್ತು ಪಶ್ಚಿಮ ನೈಜೀರಿಯಾವು ತನ್ನ ಪ್ರತ್ಯೇಕ ಸರ್ಕಾರವನ್ನು ೧೯೫೭ರಲ್ಲಿ ಪಡೆಯಿತು. ೧೯೬೦ರ ಅಕ್ಟೋಬರ್ ೧ರಲ್ಲಿ ನೈಜೀರಿಯಾವು ಸ್ವತಂತ್ರವಾಯಿತು. ೧೯೬೩ರಲ್ಲಿ ನೈಜೀರಿಯಾವು ಸಂಯುಕ್ತವಾಗಿದ್ದರೂ ಒಳ ಆಡಳಿತದಲ್ಲಿ ಸ್ವತಂತ್ರವಾಗಿ ರೂಪುಗೊಂಡಿತು.

ಹೊಸದಾಗಿ ಆಚರಣೆಗೆ ಬಂದ ಫ್ರೆಂಚ್ ಕಮ್ಯುನಿಟಿಯು ಉಪಯೋಗಕ್ಕೆ ಬರದೆ ಅಸಮಂಜಸವಾಗಿತ್ತು. ಪಶ್ಚಿಮ ಆಫ್ರಿಕಾದ ಎಲ್ಲಾ ದಿಕ್ಕುಗಳಿಂದಲೂ ಸ್ವತಂತ್ರದ ಕೂಗು ಕೇಳುತ್ತಿತ್ತು. ೧೯೫೯ರ ಏಪ್ರಿಲ್‌ನಲ್ಲಿ ಮಾಲಿ ಫೆಡರೇಶನ್‌ನಲ್ಲಿ ಸೆನೆಗಲ್ ಮತ್ತು ಫ್ರೆಂಚ್ ಸೂಡಾನ್‌ಗಳು ಜೊತೆಯಾದವು. ಇವು ಫ್ರಾನ್ಸ್‌ನ ಸ್ವಾತಂತ್ರ್ಯ ಕೇಳುವ ಪ್ರತಿನಿಧಿಗಳಾದವು. ಫ್ರೆಂಚ್ ಮಾಲಿನಲ್ಲಿ ೧೯೬೦ರಲ್ಲಿ ಅಲ್ಲಿಯ ಸಮುದಾಯಕ್ಕೆ ಮಾತ್ರ ಸ್ವತಂತ್ರ ದೊರೆಯಿತು. ೧೯೬೦ರಲ್ಲಿ ಟೋಗೋಲ್ಯಾಂಡ್ ಮತ್ತು ಕ್ಯಾಮರೂನ್‌ಗಳು ಗಣರಾಜ್ಯವಾದವು. ಇತರೆ ಕೆಲವು ಸಮುದಾಯ ರಾಜ್ಯಗಳು ಅವುಗಳ ಉದಾಹರಣೆಯನ್ನು ಪಾಲಿಸತೊಡಗಿದವು. ಜೂನ್ ೧೯೬೦ರಲ್ಲಿ ಐವರಿಕೋಸ್ಟ್, ನೈಗರ್, ಅಪ್ಪರ್ ವೋಲ್ಟ್ ಮತ್ತು ಡಾಹೋಮಿಗಳು ಸಮುದಾಯದ ಹೊರಗೂ ಸ್ವತಂತ್ರ ಕೊಡುವಂತೆ ಫ್ರಾನ್ಸ್ ಅನ್ನು ಕೇಳಿಕೊಂಡವು. ೧೯೬೦ರಲ್ಲಿ ಎಂಟು ಹೊಸ ಫ್ರೆಂಚ್ ಪಶ್ಚಿಮ ಆಫ್ರಿಕಾ ರಾಷ್ಟ್ರಗಳು ತಮ್ಮ ಸ್ಥಾನವನ್ನು ವಿಶ್ವಸಂಸ್ಥೆಯಲ್ಲಿ ಪಡೆದುಕೊಂಡವು.

ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ಮತ್ತು ಇತರೆ ಆಫ್ರಿಕಾ ದೇಶಗಳು ವಸಾಹತುಗಳಾಗಿರುವುದಕ್ಕೂ ವ್ಯತ್ಯಾಸವಿದೆ. ದಕ್ಷಿಣ ಆಫ್ರಿಕಾದ ಸರ್ಕಾರವು ಬಿಳಿಯರನ್ನು ಪ್ರತಿನಿಧಿಸಿತ್ತು. ಎರಡು ಪ್ರತ್ಯೇಕ ವಿಧಾನಗಳನ್ನೊಳಗೊಂಡ ಸರ್ಕಾರವು ಬಿಳಿಯರು ಮತ್ತು ಕರಿಯರನ್ನು ಪ್ರತ್ಯೇಕಿ ಸಿದ್ದರಿಂದ ಜನಾಂಗಭೇದ ಹೆಚ್ಚಿತ್ತು.

ಉತ್ತರ ರೊಡೇಶಿಯಾ, ದಕ್ಷಿಣ ರೊಡೇಶಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಇಂಗ್ಲಿಷ್ ಮಾತನಾಡುವ ಜನರು ರಾಜಕೀಯಯದಲ್ಲಿ ಅಷ್ಟೊಂದು ಆಸಕ್ತರಾಗಿರಲಿಲ್ಲ. ಅವರ ಮುಖ್ಯ ಉದ್ದೇಶ ಹಣ ಗಳಿಸುವುದಾಗಿತ್ತು. ಬ್ರಿಟನ್ ಜನರಿಗೆ ಆಫ್ರಿಕಾದ ಆರಾಮದಾಯಕ ಜೀವನ ಹಿಡಿಸಿತ್ತು. ಆದರೂ ದಕ್ಷಿಣ ಆಫ್ರಿಕಾದ ಬ್ರಿಟಿಷರು ಸಾಮಾಜಿಕ ಬಿಗುವಿನಿಂದ ಮುಕ್ತರಾಗುವಂತಿರಲಿಲ್ಲ. ದೊಡ್ಡ ದೊಡ್ಡ ನಗರಗಳಲ್ಲಿ ಬಿಳಿಯ ಜನರು ಕರಿಯ ಜನರಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸತೊಡಗಿದರು. ತುಪಾಕಿಯ ಜೀವನಕ್ಕೆ ಅಗತ್ಯವಾದ ವಸ್ತುವಾಗಿತ್ತು.

ಇದೇ ಸಮಯಕ್ಕೆ ವಿಶ್ವಸಂಸ್ಥೆಯು ದಕ್ಷಿಣ ಆಫ್ರಿಕಾದ ಸಂಯುಕ್ತ ಸಂಘದ ಸರ್ಕಾರಿ ನಾಯಕರನ್ನು ವರ್ಣಭೇದದ ಸಂಗತಿಗಳನ್ನು ಚರ್ಚಿಸಲು ಕರೆಯಿತು. ವಿಶ್ವಸಂಸ್ಥೆಯು ಉತ್ತರ ಮತ್ತು ದಕ್ಷಿಣ ಆಫ್ರಿಕಾದ ಬಗ್ಗೆ ಪ್ರಶ್ನೆಯನ್ನು ಎತ್ತಿದಾಗ ಹೆಚ್ಚಿನ ಸಂಖ್ಯೆಯ ಕರಿಯರು ಸಂಘದಲ್ಲಿ ಸಂಯೋಜಿತರಾಗುವ ಆಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಈ ಜನಾಭಿಪ್ರಾಯವನ್ನು ವಿಶ್ವಸಂಸ್ಥೆಯು ತೀಕ್ಷ್ಣವಾಗಿ ಪರಿಗಣಿಸಲಿಲ್ಲ.

೧೯೫೦ ಮತ್ತು ೧೯೬೦ರಲ್ಲಿ ಉತ್ತರ ಮತ್ತು ದಕ್ಷಿಣ ಆಫ್ರಿಕಾವು ವಿಶ್ವಸಂಸ್ಥೆಯಲ್ಲಿ ಸಂಯೋಜಿತವಾಯಿತೆಂದು ಸಂಘವು ಘೋಷಿಸಿತು. ಬ್ರಿಟಿಷರು ಸಾಧಾರಣವಾಗಿ ಕೀನ್ಯಾ ಮತ್ತು ಉತ್ತರ-ದಕ್ಷಿಣ ರೊಡೇಶಿಯಾದಲ್ಲಿದ್ದರು. ಪೋರ್ಚುಗೀಸರ ವಸಾಹತುಗಳಿಂದ ಮೊಸಾಂಬಿಕ್ಯೂ ಮತ್ತು ಅಂಗೋಲದಲ್ಲಿ ಉದಾಸೀನ ಮನೋಭಾವವನ್ನು ಬಿಟ್ಟು ಈ ಪ್ರದೇಶಗಳಲ್ಲಿ ಕೆಲ ಪುಟ್ಟ ಆಫ್ರಿಕಾದ ಗಣ್ಯರನ್ನು ಬಿಳಿಯರ ಸಮಾಜಕ್ಕೆ ಸೇರಿಸಿಕೊಳ್ಳ ಲಾಯಿತು. ಏಕೆಂದರೆ, ಬಿಳಿ ಸ್ತ್ರೀಯರ ಸಂಖ್ಯೆ ಕಡಿಮೆಯಿತ್ತು. ಭಿನ್ನ ಜನಾಂಗಗಳ ಸಂಕರಕ್ಕೆ ರಹದಾರಿ ನೀಡಲಾಯ್ತು. ಇಲ್ಲಿಂದ ಮುಂದೆ ದಕ್ಷಿಣ ಆಫ್ರಿಕಾದ ತುಂಬಾ ಸಾಮಾಜಿಕ ಆರ್ಥಿಕ ಉತ್ಕ್ರಾಂತಿ ಹರಡಿ ಇದು ಆಫ್ರಿಕಾದ ಎಲ್ಲಾ ಕಡೆ ಪ್ರಸಾರವಾಯ್ತು.

೧೯೫೦ ಮತ್ತು ೬೦ರಲ್ಲಿ ಕಪ್ಪು ಆಫ್ರಿಕನ್ನರು ಮಧ್ಯ ಮತ್ತು ಉತ್ತರ ಆಫ್ರಿಕಾದಲ್ಲಿ ಸ್ವತಂತ್ರ ರಾಷ್ಟ್ರಗಳನ್ನು ಹುಟ್ಟುಹಾಕತೊಡಗಿದರು. ಆದರೆ ಬಿಳಿಯರು ದಕ್ಷಿಣದಲ್ಲಿ ಕಪ್ಪು ಜನಾಂಗದವರ ರಾಷ್ಟ್ರೀಯತೆಯನ್ನು ಉತ್ತರದ ಪ್ರಭಾವಕ್ಕೆ ಒಳಗಾಗುವಂತೆ ಮತ್ತು ಬದಲಾಗದಂತೆ ತಡೆದಿದ್ದರು.

ಬಿಳಿಯ ರಾಷ್ಟ್ರೀಯವಾದಿಗಳು ನ್ಯಾಶನಲ್ ಪಾರ್ಟಿ ಎಂಬ ಹೆಸರಿನಲ್ಲಿ ನ್ಯಾಶನಲ್ ಮತ್ತು ಆಫ್ರಿಕನ್ನರ ಪಕ್ಷಗಳನ್ನು ಒಟ್ಟುಗೂಡಿಸಿದರು. ೧೯೫೧ರಲ್ಲಿ ಯೂನಿಯನ್ ಪಾರ್ಲಿಮೆಂಟನ್ನು ಪರಿಪೂರ್ಣ ಹತೋಟಿಗೆ ತೆಗೆದುಕೊಂಡರು. ಇದು ೧೯೭೦ರವರೆಗೂ ಮುಂದುವರೆದಿತ್ತು. ಹಲವಾರು ಕಾನೂನುಗಳನ್ನು ಜಾರಿಗೊಳಿಸಲಾಯ್ತು. ಅವುಗಳಲ್ಲಿ ಹಲವು ಬಿಳಿಯರ ವೈಯಕ್ತಿಕ ಸ್ವತಂತ್ರವನ್ನೂ ಸಹ ಮೊಟಕುಗೊಳಿಸಿದವು. ಈ ರೀತಿಯ ನಿರ್ಬಂಧದಿಂದಾಗಿ ಬಿಳಿಯರು ಯುರೋಪಿನ ಹೊರತಾದ ಸಮುದಾಯಕ್ಕೆ ಉಪಯುಕ್ತವಾದ ಮಾದರಿ ಜೀವನವನ್ನು ಕೇಳಿದರು. ೧೯೫೬ರಲ್ಲಿ ಕಾರ್ಮಿಕರ ಖಾತೆಯು ಕೆಲವು ಕೆಲಸಗಳನ್ನು ಬಿಳಿಯರಿಗೆಂದೇ ಮೀಸಲಿಟ್ಟಿತ್ತು. ಇದೇ ಕಾನೂನು ಬಿಳಿಯರು ಮತ್ತು ಕರಿಯರನ್ನು ಬೇರೆ ಬೇರೆ ಮಾಡಿತು. ಇದರಿಂದಾಗಿ ಕಪ್ಪು ಆಫ್ರಿಕನ್ನರು ದಂಗೆ ಏಳುವಂತಾಯ್ತು.

ಕರಿಯರು ಈ ರೀತಿಯ ವರ್ತನೆಯ ವಿರುದ್ಧ ಅಹಿಂಸಾತ್ಮಕ ದಂಗೆ ಎದ್ದು ಅವರದೇ ಆದ ಆಫ್ರಿಕನ್ ನ್ಯಾಷನ್ ಕಾಂಗ್ರೆಸ್ (ಎಎನ್‌ಸಿ) ಸಂಘವನ್ನು ಸ್ಥಾಪಿಸಿದರು. ೧೯೬೦ರಲ್ಲಿ ಟ್ರಾನ್ಸ್‌ವಾಲ್‌ನಲ್ಲಿರುವ ಶಾರ್‌ಪೆವೆಲ್ಲಿ(sharpavelle)ಯಲ್ಲಿ ಪೊಲೀಸರು ಅರವತ್ತು ಜನ ಆಫ್ರಿಕನ್ನರನ್ನು ಕೊಂದರು. ಶಾರ್‌ಪೆವೆಲ್ಲಿ ಹತ್ಯಾಕಾಂಡದಿಂದಾಗಿ ಪ್ರಪಂಚದ ಎಲ್ಲಾ ದಿಕ್ಕನಿಂದಲೂ ಬಿಳಿಯರ ವಿರುದ್ಧ ಹೇಳಿಕೆಗಳು ಬರತೊಡಗಿದವು. ಇದು ದಕ್ಷಿಣ ಆಫ್ರಿಕಾವನ್ನು ಪ್ರೇರೇಪಿಸಿತು. ೧೯೬೧ರಲ್ಲಿ ಅದು ಸ್ವತಂತ್ರ ಗಣರಾಜ್ಯವಾಯಿತು. ತಕ್ಷಣದಲ್ಲಿಯೇ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದು ಸಾವಿರಾರು ಆಫ್ರಿಕನ್ನರನ್ನೂ ಅವರು ಸಹಾಯಕ್ಕೆ ನಿಂತ ಬಿಳಿಯರನ್ನೂ ಬಂಧಿಸಲಾಯಿತು.

ಪೋರ್ಚುಗೀಸರ ಆಡಳಿತಕ್ಕೊಳಪಟ್ಟ ಅಂಗೋಲ ಮತ್ತು ಮೊಸಾಂಬಿಕ್ ರಾಜನೀತಿಗಳು ದಕ್ಷಿಣ ಆಫ್ರಿಕಾದ ನೀತಿಯಂತಿರದೆ ಹಳೆಯ ಸಾಂಪ್ರದಾಯಿಕ ವಸಾಹತು ನೀತಿಗಳನ್ನು ಬಳಸುತ್ತಿದ್ದರು. ಉಳಿದೆಲ್ಲ ಯುರೋಪ್ ಶಕ್ತಿಗಳಂತೆ ಪೋರ್ಚುಗೀಸ್ ಕೂಡ ಆಫ್ರಿಕಾದಲ್ಲಿ ತಮ್ಮ ನೆಲೆ ಅಜರಾಮರವೆಂದು ಘೋಷಿಸಿತ್ತು. ಆಫ್ರಿಕನ್ನರ ರಾಷ್ಟ್ರೀಯತೆಯು ಪೋರ್ಚುಗೀಸರನ್ನು ಎಲ್ಲಿ ಅಲ್ಲಾಡಿಸುವುದೋ ಎಂದು ಅದನ್ನು ನಿಗ್ರಹಿಸಲು ಮೊಸಾಂಬಿಕ್ ನಲ್ಲಿ ಹಾಗೂ ಆರ್ಥಿಕ ಅಭಿವೃದ್ದಿಯಿಂದ ಅಂಗೋಲದಲ್ಲಿ ಉತ್ತಮ ಸ್ಥಿತಿಯಿತ್ತು. ರೊಡೇಶಿಯಾ ಕೂಡ ಬಿಳಿಯರ ದರ್ಬಾರನ್ನು ಹತ್ತಿಕ್ಕಲು ಹೊರಟಿತು. ೧೯೬೯ರಲ್ಲಿ ರೊಡೇಶಿಯಾವು ಲಂಡನ್ನಿನ ಎಲ್ಲಾ ಬಂಧನಗಳಿಂದ ಮುಕ್ತಿ ಹೊಂದಿ ಗಣರಾಜ್ಯವಾಯಿತು.

ಮಧ್ಯ ಆಫ್ರಿಕಾ

ಎರಡನೇ ಮಹಾಯುದ್ಧವು ಆಫ್ರಿಕಾದ ಮಧ್ಯಭಾಗದಲ್ಲೂ ಸಾಕಷ್ಟು ಪರಿಣಾಮವನ್ನು ಬೀರಿತು. ೧೯೪೦ರಲ್ಲಿ ಬೆಲ್ಜಿಯಂ ಮತ್ತು ಫ್ರಾನ್ಸ್‌ಗಳು ನಾಜಿಗಳು ಆಳ್ವಿಕೆಯಲ್ಲಿದ್ದವು. ೧೯೪೦ರ ನವೆಂಬರ್‌ನಲ್ಲಿ ಮಧ್ಯ ಆಫ್ರಿಕಾ ಸಂಪೂರ್ಣವಾಗಿ ನಾಜಿಗಳ ವಿರುದ್ಧದವರಿಗೆ ಬೆಂಬಲಿಸಲು ತಯಾರಾಗಿತ್ತು. ಎರಡನೇ ಮಹಾಯುದ್ಧವು ಮಧ್ಯ ಆಫ್ರಿಕಾದ ರಾಜಕೀಯ, ಸಾಮಾಜಿಕ ಚಿಂತನೆಗಳಲ್ಲಿ ಬದಲಾವಣೆ ತಂದದ್ದಲ್ಲದೆ ಅಲ್ಲಿನ ಆರ್ಥಿಕ ಪರಿಸ್ಥಿತಿಯ ಮೇಲೂ ಪ್ರಭಾವ ಬೀರಿತು.

ಇಲ್ಲಿ ಬ್ರಿಟಿಷರ, ಫ್ರೆಂಚರ, ಬೆಲ್ಜಿಯನ್ನರ ವಸಾಹತು ಗುರಿಗಳು ಬೇರೆ ಬೇರೆಯಾಗಿದ್ದವು. ಫ್ರೆಂಚರು ಆಫ್ರಿಕನ್ನರನ್ನು ಕರಿಯ ಫ್ರೆಂಚರನ್ನಾಗಿ ಮಾರ್ಪಡಿಸಬೇಕೆಂದೂ, ಬೆಲ್ಜಿಯನ್ನರು ಆಫ್ರಿಕನ್ನರಿಗೆ ಶಿಕ್ಷಣ ನೀಡಿ ರೋಮನ್ ಕ್ಯಾಥೊಲಿಕ್‌ರ ಧರ್ಮಬೋಧನೆಯನ್ನು ನೀಡ ಬೇಕೆಂದೂ, ಬ್ರಿಟಿಷರು ಆರ್ಥಿಕ ಸಮತೋಲನವನ್ನು ಕಾಪಾಡುವಲ್ಲಿಯೂ ಮಗ್ನ ರಾಗಿದ್ದರು.

ಸಾಂಪ್ರಾದಾಯಿಕ ಬೆಲ್ಜಿಯಂನ ನೀತಿಗಳು ರಾಜಕೀಯ ಜ್ಞಾನವನ್ನು ಹೊಂದಿದ ಕಾಂಗೋ ಆಫ್ರಿಕನ್ ಸಮುದಾಯವನ್ನು ತೃಪ್ತಿಗೊಳಿಸಲಿಲ್ಲ. ೧೯೪೮ರಿಂದ ಆಫ್ರಿಕಾದಲ್ಲಿ ಪ್ರವರ್ಧಮಾನಕ್ಕೆ ಬಂದ ಬುದ್ದಿವಂತ ಗಣ್ಯರು ಯುರೋಪಿಯನ್ನರಿಗೆ ನೀಡುವ ಸಂಬಳ ವನ್ನು ಮತ್ತು ಅವರಿಗೆ ಒದಗಿಸಿರುವಂತಹ ಅವಕಾಶವನ್ನು ತಮಗೂ ಒದಗಿಸಬೇಕೆಂದು ಕೇಳಿದರು. ಆದ್ದರಿಂದ ೧೯೪೮ರಲ್ಲಿ ಯುರೋಪಿಯನ್ನರ ಕೆಲವು ಶಾಲೆಗಳು ಪ್ರಾರಂಭವಾದವು. ೧೯೫೦ರ ಹೊತ್ತಿಗೆ ಶಾಲೆಯಲ್ಲಿನ ತಾರತಮ್ಯಗಳು ಮರೆಯಾದವು.

ಆದರೆ, ಎರಡನೇ ಮಹಾಯುದ್ಧದಿಂದ ಸಮಭಾಜಕ ರೇಖೆ ಹಾಯ್ದು ಹೋಗುವ ಫ್ರೆಂಚರಿಂದ ಆಫ್ರಿಕಾಕ್ಕೆ ಮೇಲಾದ ಪರಿಣಾಮ ಬೇರೆಯಾಗಿತ್ತು. ಇಲ್ಲಿ ರಾಜಕೀಯ ಬೆಳವಣಿಗೆ ನಿಧಾನಗತಿಯಲ್ಲಿತ್ತು. ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ಅಧೋಗತಿ ಗಿಳಿದಿದ್ದವು. ಆದರೂ ಇಲ್ಲಿ ಬದಲಾವಣೆಯನ್ನು ತರುವ ಸಾಧ್ಯತೆ ಇರಲಿಲ್ಲ. ಸಾಂಪ್ರದಾಯಿಕವಾಗಿ ಯೂರೋಪಿಯನ್ನರೇ ರಾಜಕೀಯವಾಗಿ ಶಕ್ತರಾಗಿದ್ದರು.

ಎರಡನೇ ಮಹಾಯುದ್ಧದ ನಂತರ ಮಧ್ಯ ಆಫ್ರಿಕಾದತ್ತ ಪ್ಯಾರೀಸ್‌ನ ಮನೋವೃತ್ತಿ ಬದಲಾಯಿತು. ಏಕೆಂದರೆ ಆಫ್ರಿಕೀಯತೆಗಿಂತ ಅಲ್ಲಿನ ಬುಡಕಟ್ಟುಗಳು ಮುಖ್ಯವಾಗಿದ್ದವು. ೧೯೫೧ರಲ್ಲಿ ಚುನಾವಣೆಯು ಮುಂದುವರೆದಿತ್ತು. ಆದರೆ ಇದರ ಪರಿಣಾಮಗಳು ನಿಧಾನವಾಗಿದ್ದವು. ಏಕೆಂದರೆ ಮಧ್ಯ ಹಾಗೂ ಪಶ್ಚಿಮ ಆಫ್ರಿಕಾಗಳಲ್ಲಿ ಕೈಗಾರಿಕೀಕರಣವು ನಿಧಾನತೆಯಲ್ಲಿ ಸಾಗುತ್ತಿತ್ತು. ಆದರೂ, ಸ್ವಾತಂತ್ರ್ಯವನ್ನು ಪಡೆಯುವ ಹಂಬಲವಿತ್ತು.

ಮಧ್ಯ ಆಫ್ರಿಕಾವು ರಾಜಕೀಯ ಅಸ್ಥಿರತೆಯಿಂದಾಗಿ ಮತ್ತು ತನ್ನ ಒಳ ಒತ್ತಡಗಳಿಗಿಂತ ಹೆಚ್ಚಾಗಿ ಹೊರ ಒತ್ತಡಗಳಿಂದ ಸ್ವಾತಂತ್ರ್ಯವಾಯಿತು. ಯುರೋಪಿನ ಅನೇಕ ರಾಷ್ಟ್ರಗಳು ರಾಜಕೀಯ ಆಸಕ್ತಿಯನ್ನು ತಾವಾಗಿಯೇ ಕೈಬಿಟ್ಟು ತಾಂತ್ರಿಕ ಮತ್ತು ಆರ್ಥಿಕ ವಿಷಯಗಳಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದರಿಂದ ರಾಜಕೀಯ ಶೂನ್ಯತೆ ಉಂಟಾಯ್ತು. ನಾಲ್ಕು ವರ್ಷಗಳಲ್ಲಿ ಸಮಭಾಜಕ ರೇಖೆಯಡಿಯಲ್ಲಿ ಹಾದುಹೋಗುವ ಫ್ರೆಂಚರ ಆಫ್ರಿಕಾ ದೇಶಗಳು ತಮ್ಮ ತಮ್ಮಲ್ಲೇ ಒಪ್ಪಂದ ಮಾಡಿಕೊಂಡವು. ೧೯೬೦ರ ನಂತರ ಇತರೆ ನಾಲ್ಕು ರಾಜ್ಯಗಳು ರಾಷ್ಟ್ರ ಕಟ್ಟುವಲ್ಲಿ ಮುನ್ನಡೆದವು.

ಇದಕ್ಕೆ ವಿರುದ್ಧವಾಗಿ ಕಾಂಗೋದ ಅನುಭವಗಳೇ ಬೇರೆಯಾಗಿದ್ದವು. ೧೯೫೦ರವರೆಗೆ ಬೆಲ್ಜಿಯನ್ನರು ಬ್ರೂಸೆಲ್ಸ್‌ನಿಂದ ನಿಯಂತ್ರಿಸಲ್ಪಟ್ಟಿದ್ದರು. ಬೆಲ್ಜಿಯನ್ನರು ಆಫ್ರಿಕನ್ನರಿಗೆ ವಿದ್ಯಾಭ್ಯಾಸವನ್ನು ಪರಿಣಾಮಕಾರಿಯಾಗಿ ಕಲಿಸಿದ್ದರಿಂದ, ಅವರು ಬುದ್ದಿಶಕ್ತಿಯನ್ನು ಗಳಿಸಿ ಸಂಪತ್ತನ್ನು ಹೆಚ್ಚಿಸಿಕೊಂಡರು. ಇದರಿಂದಾಗಿಯೇ ಆಫ್ರಿಕನ್ನರು ಅವರ ದೇಶದ ಬಗ್ಗೆ ಚಿಂತನೆ ನಡೆಸಲು ಸಾಧ್ಯವಾಯಿತು. ಬೆಲ್ಜಿಯನ್ನರ ನೀತಿಯಿಂದಾಗಿಯೇ ಆಫ್ರಿಕಾದ ಕಾಂಗೋದಲ್ಲಿ ರಾಷ್ಟ್ರೀಯತೆ ಉದಯವಾಯಿತು.

೧೯೫೩ರಲ್ಲಿ ಕಾನ್‌ಸೈನ್ಸ್ ಆಫ್ರಿಕನ್ ಎಂಬ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಪತ್ರಿಕೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿತು. ಅದರಲ್ಲಿ ಜೋಸೆಫ್ ಕಸವುಟು ಎಂಬಾತ ಮುನಿಸಿಪಾಲಿಟಿಗಳಿಗೆ ಚುನಾವಣೆಗಳನ್ನು ನಡೆಸುವಂತೆ ಒತ್ತಾಯಿಸಿದನು. ಆತನ ಪಕ್ಷವು ಅರ್ಧದಷ್ಟು ಸ್ಥಾನಗಳನ್ನು ಗೆದ್ದುಕೊಂಡಿತು. ೧೯೫೮ರಲ್ಲಿ ಆತನ ವಿರೋಧ ಪಕ್ಷವು, ಆ ಪಕ್ಷದ ನಾಯಕ ಪಟ್ರಿಸ್ ಇ. ಲ್ಯುಮಂಬಾ ರಾಷ್ಟ್ರೀಯ ಸಂಘಟನೆ ಯೊಂದನ್ನು ಮಾಡಿಕೊಂಡು ಕಾಂಗೋಕ್ಕೆ ಸ್ವತಂತ್ರ ತರಲು ಮುಂದಾದನು. ೧೯೫೮ರ ಅಂತ್ಯದಲ್ಲಿ ಕಾಂಗೋದಲ್ಲಿ ರಾಜಕೀಯ ಅಸ್ಥಿರತೆ ಇದ್ದಾಗ ಪೆಟ್ರಿಸ್ ಲ್ಯುಮಂಬಾ ಆಫ್ರಿಕಾದಲ್ಲಿ ಅಖಿಲ ಆಫ್ರಿಕನ್ ಸಮ್ಮೇಳನವನ್ನು ಉದ್ಘಾಟಿಸಿ ಸ್ವತಂತ್ರದ ಬಗ್ಗೆ ಭಾವ ನಾತ್ಮಕವಾಗಿ ಚರ್ಚಿಸಿದ. ಆತ ಲಿಯೋಪೋಲ್ಟ್‌ವೆಲಿಗೆ ವಾಪಸ್ಸಾದ ನಂತರ ತನ್ನ ಅತ್ಯಂತ ತಕ್ಷಣದ ಕೆಲಸವೆಂದರೆ ಬೆಲ್ಜಿಯನ್ನರಿಂದ ಸ್ವತಂತ್ರ ಪಡೆಯುವುದೆಂದು ಘೋಷಿಸಿದ. ಕೆಲದಿನಗಳಲ್ಲೇ ೧೯೬೦ರಲ್ಲಿ ಬ್ರೂಸೆಲ್ಸ್‌ನಲ್ಲಿ ದುಂಡುಮೇಜಿನ ಸಮ್ಮೇಳನ ವನ್ನು ಕರೆಯಲಾಯಿತು. ಅಲ್ಲಿ ಕಾಂಗೋವನ್ನು ಸ್ವತಂತ್ರವೆಂದು ಘೋಷಿಸಲಾಯಿತು. ಮುಂದೆ ಹಲವಾರು ಘರ್ಷಣೆಗೊಳಗಾದರೂ ಕೂಡ ೧೯೬೫ರಲ್ಲಿ ಜನರಲ್ ಜೋಸೆಫ್ ಡಿ. ಮೊಬೂಟೊ ಕಾಂಗೋದ ಅಧ್ಯಕ್ಷನಾದನು.

ಪೂರ್ವ ಆಫ್ರಿಕಾ

ಎರಡನೇ ಮಹಾಯುದ್ಧದ ನಂತರ ಆಫ್ರಿಕಾದ ಇತರ ಪ್ರದೇಶಗಳಲ್ಲಿರುವಂತಹ ಯುರೋಪಿಯನ್ನರ ಹಿಡಿತ ಪೂರ್ವ ಆಫ್ರಿಕಾ ದೇಶಗಳಲ್ಲಿರಲಿಲ್ಲ. ಆದರೂ ಕೂಡ ಘರ್ಷಣೆಯ ಬೇರುಗಳು ಬೀಡು ಬಿಟ್ಟಿದ್ದವು. ರಾಜಕೀಯ ಪ್ರಜ್ಞೆಯು ಅರಿವಿಗೆ ಬಂದದ್ದು ಮಹಾಯುದ್ಧದ ನಂತರವೇ. ೧೯೪೫ರ ನಂತರ ಬ್ರಿಟಿಷರು ಕೆಲ ಆಫ್ರಿಕನ್ನರನ್ನು ಸರ್ಕಾರಿ ಮಂಡಲಿಗಳಲ್ಲಿ ನೇಮಿಸಿಕೊಂಡಿದ್ದರು. ಇದು ಯುನೈಟೆಡ್ ನೇಶನ್ಸ್ ಟ್ರಸ್ಟೀಶಿಪ್ ಕೌನ್ಸಿಲ್‌ನ ಒತ್ತಾಯದಿಂದ ಮಾತ್ರ ಸಾಧ್ಯವಾಗಿತ್ತು. ಇಂತಹುದೇ ಸಾಂವಿಧಾನಿಕ ಅಭಿವೃದ್ದಿಯು ಉಗಾಂಡದಲ್ಲಿ ಕಂಡಿತು. ಬಟಾಕಾ ಇಲ್ಲಿಯ ಮೊದಲ ರಾಜಕೀಯ ಪಕ್ಷ. ಇದು ಸಾಮಾಜಿಕ ಆರ್ಥಿಕ ಬದಲಾವಣೆಗಳನ್ನು ತರಲು ಕೆಲಸ ಮಾಡತೊಡಗಿತು.

ಆದರೂ ಪೂರ್ವ ಆಫ್ರಿಕಾದ ರಾಜಕೀಯದ ಮೇಲೆ ಹೆಚ್ಚು ಪ್ರಭಾವ ಬೀರಿದ ಅಂಶವೆಂದರೆ ಇಥಿಯೋಫಿಯಾದ ಸ್ಥಿತಿ. ಇಥಿಯೋಫಿಯಾ ಅಭಿವೃದ್ದಿ ಹೊಂದದ ರಾಷ್ಟ್ರವಾದರೂ ಆ ದೇಶದ ಚಕ್ರಾಧಿಪತ್ಯ ಸ್ವದೇಶಿಯದ್ದಾಗಿತ್ತು. ಆದ್ದರಿಂದ ಎಲ್ಲಾ ರಾಷ್ಟ್ರಗಳು ಇಥಿಯೋಫಿಯಾದ ಪ್ರಭಾವಕ್ಕೆ ಒಳಗಾಗಿದ್ದವು.

ಟಾಂಗನಾಯಿತ ಮತ್ತು ಉಗಾಂಡಾ ದೇಶಗಳು ತಮ್ಮ ಸ್ವಂತ ಸರ್ಕಾರವನ್ನು ಹೊಂದುವ ಆಸಕ್ತಿ ಹೊಂದಿದ್ದವು. ಆದರೆ ಆ ರೀತಿಯ ರಾಜಕೀಯ ಬೆಳವಣಿಗೆಯಾಗಿದ್ದು ಕೀನ್ಯಾದಲ್ಲಿ. ಕೀನ್ಯಾವು ಬುಡಕಟ್ಟು ಜನಾಂಗಕ್ಕೆ ಸೇರಿದ ರಾಷ್ಟ್ರ. ಅಲ್ಲಿ ಸುಮಾರು ೨೦,೦೦೦ ಯೂರೋಪಿಯನ್ನರು ಉತ್ತಮ ಅಂತಸ್ತುಗಳನ್ನು ಹೊಂದಿದ ಸರ್ಕಾರಿ ನೌಕರಿಗಳಲ್ಲಿ ಮತ್ತು ವ್ಯಾಪಾರದಲ್ಲಿ ಮಗ್ನರಾಗಿದ್ದರು. ೧,೨೦,೦೦೦ ಏಷಿಯನ್ನರು ಮತ್ತು ೫,೦೦೦,೦೦೦ ಆಫ್ರಿಕನ್ನರು ವಾಸವಾಗಿದ್ದರು. ಆಫ್ರಿಕನ್ನರು ಸಾಧಾರಣವಾಗಿ ಬುಡಕಟ್ಟಿನ ಗುಂಪಿನಲ್ಲೇ ವಾಸವಾಗಿದ್ದು ಯುರೋಪಿಯನ್ನರ ಜಮೀನನಲ್ಲಿ ಕೆಲಸಗಾರರಾಗಿದ್ದರು.

ಯುರೋಪಿಯನ್ನರು ಬರುವ ಮುಂಚೆ ಕೇನ್ಯಾ ಜನರ ಜೀವನವು ಹಳೆಯ ಕಾಲದ ಸಂಘಟಿತವಾದ ಬುಡಕಟ್ಟು ರೇಖೆಯಲ್ಲೇ ನಡೆಯುತ್ತಿತ್ತು. ಯುರೋಪಿಯನ್ನರು ಬಂದ ನಂತರ ಮತ ಪ್ರಚಾರಕರು ಅವರ ದುಷ್ಟ ಆಚರಣೆಗಳನ್ನು ವಿಮರ್ಶಿಸಿದರು. ಮತ ಪ್ರಚಾರಕರ ಪ್ರಯತ್ನದಿಂದಾಗಿ ವಿದ್ಯೆ, ಆರೋಗ್ಯ, ಸಾಮಾನ್ಯಕಲ್ಯಾಣಗಳು ಲಭ್ಯವಾಗಿ ಅದು ಇಡೀ ಆಫ್ರಿಕಾ ಸಮಾಜವನ್ನೇ ಅಲ್ಲಾಡಿಸಿದವು. ಇದು ಅಂತ್ಯದಲ್ಲಿ ಬೇರೆ ಬೇರೆ ಜನಾಂಗಗಳ ನಡುವೆ ಒಳ್ಳೆಯ ಸಂಬಂಧ ಕಲ್ಪಿಸಲು ಸಾಧ್ಯವಾಯಿತು.

೧೯೫೨ರ ಅಕ್ಟೋಬರ್‌ನಲ್ಲಿ ಯುರೋಪಿನ ಹಿಡಿತದಲ್ಲಿದ್ದ ಕೀನ್ಯಾ ಸ್ಥಳಗಳ ಮೇಲೆ ಹಲವಾರು ಆಕ್ರಮಣಗಳು ಮೊದಲುಗೊಂಡವು. ಅಕ್ಟೋಬರ್ ೨೦ರಲ್ಲಿ ಗ್ರೇಟ್ ಬ್ರಿಟನ್ ತುರ್ತುಪರಿಸ್ಥಿತಿಯನ್ನು ಘೋಷಿಸಿ ಕೆನ್ಯಾಟ ಎಂಬ ಕ್ರಾಂತಿಕಾರಿಯನ್ನು ಆತನ ತೊಂಬತ್ತೆಂಟು ಜನ ಸಂಗಡಿಗರೊಡನೆ ಬಂಧಿಸಲಾಯಿತು. ೧೯೬೦ರ ಹೊತ್ತಿಗೆ ಅನೇಕ ಜನರು ಹತ್ಯೆಗೀಡಾದರು. ಕೀನ್ಯಾದ ಪ್ರಜೆಗಳು ತಮಗೆ ರಾಜಕೀಯ ಹಕ್ಕುಗಳನ್ನು ಕೊಡುವಂತೆ ಬಂಡೆದ್ದರು. ೧೯೬೧ರಲ್ಲಿ ಕೆನ್ಯಾಟನನ್ನು ಬಿಡುಗಡೆ ಮಾಡಲಾಯಿತು. ೧೯೬೩ರಲ್ಲಿ ಕೀನ್ಯಾದಲ್ಲಿ ಚುನಾವಣೆಗಳನ್ನು ನಡೆಸಲಾಯಿತು. ಬೊನೋ ಕೆನ್ಯಾಟ ಮೊದಲ ಅಧ್ಯಕ್ಷನಾದ.

ಕೀನ್ಯಾವು ಸ್ವತಂತ್ರ ಗಳಿಸಿದ ನಂತರ ಕೆನ್ಯಾಟನು ಈಸ್ಟ್ ಆಫ್ರಿಕನ್ ಫೆಡರೇಶನ್ ಸಂಘವನ್ನು ಕಟ್ಟುವ ಉದ್ದೇಶಕ್ಕಾಗಿ ಟಾಂಗನೀಕ ಮತ್ತು ಉಗಾಂಡಾ ಸರ್ಕಾರದೊಂದಿಗೆ ಚರ್ಚಿಸಿದ. ಇದರಿಂದ ಈಸ್ಟ್ ಆಫ್ರಿಕನ್ ಫೆಡರೇಶನ್ ಅಸ್ತಿತ್ವಕ್ಕೆ ಬಂದಿತು.

ಕೀನ್ಯಾ ಸ್ವತಂತ್ರ ಗಳಿಸಿದ ನಂತರ ಟಾಂಗನೀಕ ಕೂಡ ಸ್ವತಂತ್ರವಾಯ್ತು. ಸ್ವತಂತ್ರ ಗಳಿಸಿಕೊಟ್ಟ ಮಹಾನ್ ಪುರುಷ ಜೂಲಿಯಸ್ ನೈರೇರೆ. ೧೯೬೧ರ ಡಿಸೆಂಬರ್ ತಿಂಗಳಿನಲ್ಲಿ ಟಾಂಗನೀಕವು ಎಲ್ಲಾ ನಾಗರಿಕ ಹಕ್ಕುಗಳೊಂದಿಗೆ ಸ್ವತಂತ್ರವಾಯಿತು. ಬ್ರಿಟಿಷ್ ಪ್ರದೇಶ ಗಳಿಂದ ಜಾಂಜಿಬಾರ್ ಮತ್ತು ಪೆಂಬಾಗಳು ಟಾಂಗನೀಕದಲ್ಲಿ ವಿಲೀನವಾಗಿ ಟಾಂಜಿನಿಯಾ ಎಂಬ ಹೊಸ ರಾಷ್ಟ್ರವಾಗಿ ನೈರೇರೆ ಅಧ್ಯಕ್ಷನಾದ.

ಉಗಾಂಡಾ ಮಾತ್ರ ರಾಷ್ಟ್ರೀಯ ಧೋರಣೆಯನ್ನು ಬೆಳೆಸಿಕೊಳ್ಳದೆ ಹಾಗೆಯೇ ಉಳಿದಿತ್ತು. ಇದಕ್ಕೆ ಕಾರಣ ಅಲ್ಲಿಯ ಸಂಪ್ರದಾಯಶರಣ ಜನರು. ೧೯೬೦ರಲ್ಲಿ ಮಿಲ್ಟನ್ ಲಾಯೊಂಟ ಎಂಬುವರ ನೇತೃತ್ವದಲ್ಲಿ ಉಗಾಂಡಾ ಪೀಪಲ್ಸ್ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಿತು. ೧೯೬೧ರಲ್ಲಿ ಉಗಾಂಡಾಕ್ಕೆ ಸ್ವತಂತ್ರ ಕೊಡಬೇಕೆಂದು ಒಪ್ಪಂದವಾಯಿತು. ೧೯೬೨ರ ಅಕ್ಟೋಬರ್ ೯ರಲ್ಲಿ ಮಿಲ್ಟನ್ ಅಬೋಟೆ ಅಧ್ಯಕ್ಷನಾದ, ಉಗಾಂಡಾ ಸ್ವತಂತ್ರ ರಾಷ್ಟ್ರವಾಯಿತು. ಪೂರ್ವ ಆಫ್ರಿಕಾದ ಎಲ್ಲಾ ಕಡೆಗಳಲ್ಲಿಯೂ ಇಟಲಿಯ ವಶದಲ್ಲಿದ್ದ ಸೋಮಾಲಿ ಲ್ಯಾಂಡ್‌ಗೆ ಬ್ರಿಟಿಷ್ ಸೋಮಾಲಿ ಲ್ಯಾಂಡ್‌ಗಳೂ ಸೇರಿ ಸಂಯುಕ್ತ ಸೋಮಾಲಿ ರಾಜ್ಯವನ್ನಾಗಿ ಮಾಡಿಕೊಂಡವು ೧೯೬೦ರಲ್ಲಿ ಅಡೆನ್ ಅಡುಲ್ಲಾ ಅಸಮನ್ ಇಟಾಲಿಯನ್ ಎಂಬುವನು ಸೋಮಾಲಿ ಲ್ಯಾಂಡ್‌ನ ಪ್ರಧಾನ ಮಂತ್ರಿಯಾದ ನಂತರ ಅವನೇ ಸೋಮಾಲಿ ಗಣರಾಜ್ಯದ ಅಧ್ಯಕ್ಷನಾದ.

ಉತ್ತರ ಆಫ್ರಿಕಾ

ಎರಡನೆಯ ಮಹಾಯುದ್ಧದ ನಂತರ ಈಜಿಪ್ಟ್ ನಿಧಾನವಾಗಿ ಕ್ರಾಂತಿಯತ್ತ ಸಾಗಿತು. ಸೂಯೆಜ್ ಕಾಲುವೆಯ ಆವಶ್ಯಕತೆಯಿಂದಾಗಿ ಬ್ರಿಟನ್ ಈಜಿಪ್ಟನ್ನು ಬಿಟ್ಟಕೊಡುತ್ತಿರಲಿಲ್ಲ. ಈಜಿಪ್ಟಿನ ಜನರು ಬ್ರಿಟಿಷರನ್ನು ಕೈರೋದಿಂದ ಅಲ್ಲದೆ ಈಜಿಪ್ಟ್‌ನಿಂದಲೇ ಹೊಡೆದೋಡಿಸಲು ಜರ್ಮನ್ನರಿಂದ ಮಾತ್ರ ಸಾಧ್ಯ ಎಂದು ನಂಬಿದ್ದರು. ೧೯೪೮ರಲ್ಲಿ ಈಜಿಪ್ಟಿನಲ್ಲಿ ತುಮುಲ ಉಂಟಾಯಿತು. ರಾಜ ಫರೂಕ್ ತನ್ನ ಪ್ರಭಾವಶಕ್ತಿಯುನ್ನು ಉಪಯೋಗಿಸಿ ಹೊಸ ಚುನಾವಣೆಗಳನ್ನು ನಡೆಸಲು ನಿಶ್ಚಯಿಸಿದ ೧೯೪೪ರಲ್ಲಿ ವಾಫ್ಡ್ ಸರ್ಕಾರವನ್ನು ವಿಸರ್ಜಿಸಲಾಯಿತು. ವಾಫ್ಡ್ ಗೆರಿಲ್ಲಾ ಸೈನಿಕರು ಬ್ರಿಟಿಷರ ವಿರುದ್ಧವಾಗಿ ನಿಂತು ೧೯೩೬ರ ಒಪ್ಪಂದವನ್ನು ಖಂಡಿಸಿದರು. ಸಾಮಾಜಿಕ ವ್ಯವಸ್ಥೆ ಹದಗೆಟ್ಟಿತು. ರಾಜನು ವಾಫ್ಡ್ ಸರ್ಕಾರವನ್ನು ವಿಸರ್ಜಿಸಿದ ನಂತರ ಜನರನ್ನು ಹಿಡಿತದಲ್ಲಿಡಲು ಸಾಧ್ಯವಾಗಲಿಲ್ಲ.

ಈಜಿಪ್ಟಿನಲ್ಲಿ ಕ್ರಾಂತಿಗೆ ಪ್ರಮುಖವಾಗಿ ಎರಡು ಆಡಚಣೆಗಳಿದ್ದವು. ಮೊದಲನೆಯದಾಗಿ ಸಂಪ್ರದಾಯಸ್ಥ ಈಜಿಪ್ಟ್ ಜನರು ಬದಲಾಗದಿರುವುದು. ಎರಡನೆಯದಾಗಿ ಇಸ್ಲಾಂ ಪ್ರದೇಶಗಳು ಪ್ರಗತಿ ವಿರೋಧಿಗಳಾಗಿದ್ದು ಸಾಮಾಜಿಕ ಬದಲಾವಣೆಗಳನ್ನು ಸಹಿಸದಿರುವುದು. ೧೯೫೨ರ ಜನವರಿಯಲ್ಲಿ ಕೈರೋ ದಂಗೆಯ ನಂತರ ಫರೂಕ್ ಚಕ್ರಾಧಿಪತ್ಯ ಉರುಳಲಾರಂಭಿಸಿತು. ೧೯೫೩ರ ಸೆಪ್ಟೆಂಬರ್‌ನಲ್ಲಿ ನಗೊಬಿಯಾ ಪ್ರಧಾನ ಮಂತ್ರಿಯಾದನು. ಇದರಿಂದ ಈಜಿಪ್ಟಿನಲ್ಲಿದ್ದ ಸರ್ವಾಧಿಕಾರ ಕೊನೆಯಾಯಿತು. ನಗೊಬಿಯಾ ಅಧ್ಯಕ್ಷ ಹಾಗೂ ಪ್ರಧಾನ ಮಂತ್ರಿ ಎರಡೂ ಸ್ಥಾನಗಳನ್ನೂ ಅಲಂಕರಿಸಿದ.

೧೯೫೪ರಲ್ಲಿ ನಾಸರ್ ನಗೋಬಿಯಿಂದ ಈಜಿಪ್ಟನ್ನು ವಶಪಡಿಸಿಕೊಂಡು ಇತರೆ ಶಕ್ತಿಗಳನ್ನು ದಮನಗೊಳಿಸಿದ. ಮುಸ್ಲಿಂ ಬಾಂಧವರು ಬ್ರಿಟಿಷರನ್ನು ಹೊರದೂಡಿ ದೇಶವನ್ನು ತಮ್ಮ ಹಿಡಿತದಲ್ಲಿಡುವನೆಂಬ ನಂಬಿಕೆಯಲ್ಲಿದ್ದರು. ಆದರೆ ನಾಸರ್ ಒಂದು ಜಾತ್ಯತೀತ ಗಣರಾಜ್ಯವನ್ನು ಹುಟ್ಟುಹಾಕಬೇಕೆಂದುಕೊಂಡಿದ್ದ. ಈ ವಿಚಾರವನ್ನು ಇಸ್ಲಾಂ ಸಂಘಟಕರು ಒಪ್ಪದೆ ಹೋರಾಟ ಮುಂದುವರೆಸಿದರು. ೧೯೫೬ರಲ್ಲಿ ನಾಸರ್ ಈಜಿಪ್ಟ್‌ನ ಅಧ್ಯಕ್ಷನಾಗಿ ಚುನಾಯಿತನಾದ. ಅದೇ ವರ್ಷದಲ್ಲಿ ಲಂಡನ್ ಮತ್ತು ವಾಷಿಂಗ್‌ಟನ್‌ಗಳು ಆಸವಾನ್ ಅಣೆಕಟ್ಟಿಗೆ ಹಣವನ್ನು ನೀಡುವುದನ್ನು ನಿಲ್ಲಿಸಿದವು. ಸೂಯೆಜ್ ಕಾಲುವೆಯು ರಾಷ್ಟ್ರೀಕೃತವಾಯಿತು. ಸೂಯೆಜ್ ಕಾಲುವೆಯ ವಿಷಯದಿಂದ ನಾಸರ್ ವಸಾಹತುಶಾಹಿ ನೀತಿಯನ್ನು ವಿರೋಧಿಸುವ ನಾಯಕನಾಗಿ ಕಂಗೊಳಿಸತೊಡಗಿದ. ೧೯೫೮ ರಿಂದ ೧೯೬೧ರವರೆಗೆ ಸಿರಿಯಾದೊಡನೆ ಸೇರಿ ಯುನೈಟೆಡ್ ಅರಬ್ ರಿಪಬ್ಲಿಕ್ ಅನ್ನು ತಾತ್ಕಾಲಿಕವಾಗಿ ಹುಟ್ಟು ಹಾಕಿ, ೧೯೭೦ರವರೆಗೆ ಅರಬ್ ರಾಷ್ಟ್ರಗಳ ನೇತಾರನಾದನು.

 

ಪರಾಮರ್ಶನ ಗ್ರಂಥಗಳು

೧. ಅಬ್ರಹಾಂ ಡಬ್ಲ್ಯು ಇ., ೧೯೬೨. ದಿ ಮೈಂಡ್ ಆಫ್ ಆಫ್ರಿಕಾ.

೨. ಬರ್ಕ್ ಎಫ್.ಜಿ., ೧೯೬೪. ಆಫ್ರಿಕಾ ಕ್ವೆಸ್ಟ್ ಫಾರ್ ಆರ್ಡರ್.

೩. ಕಿನ್ ರಿವ್ ಎ., ೧೯೬೨. ಆಫ್ರಿಕಾ ಆ್ಯಂಡ್ ದಿ ವೆಸ್ಟ್.