ಆಫ್ರಿಕಾದಲ್ಲಿ ಬಂಡವಾಳ ಹೂಡಿಕೆಯ ಅವಕಾಶವಿರುವ ಪ್ರದೇಶಗಳಲ್ಲಿ ನಿಯಂತ್ರಣ ಸಾಧಿಸಲು ಮತ್ತು ಅವುಗಳ ಏಕಸ್ವಾಮ್ಯಕ್ಕಾಗಿ ಯುರೋಪಿನ ಬಲಿಷ್ಠ ದೇಶಗಳು ಸ್ಪರ್ಧೆ ನಡೆಸಿದವು. ಈ ಅಂಶ ಸಾಮ್ರಾಜ್ಯವಾದದ ಗುಣಲಕ್ಷಣಗಳಲ್ಲಿ ಒಂದಾಗಿದೆ. ಹಾಗೆಯೇ ಈ ಅಂಶಕ್ಕೆ ಬಂಡವಾಳವಾದಿ ದೇಶಗಳ ನಡುವೆ ಒಮ್ಮತವಿರಲಿಲ್ಲ ಎನ್ನುವುದೂ ಗಮನಾರ್ಹವಾದ ಸಂಗತಿಯಾಗಿದೆ. ವ್ಯಾಪಾರದಲ್ಲಿ ಲಾಭ ಹಾಗೂ ರಾಜ್ಯವಿಸ್ತಾರದ ಧೋರಣೆಯನ್ನು ತಳೆದಿದ್ದ ರಾಷ್ಟ್ರಗಳೊಳಗೆ ಸಂಘರ್ಷ ನಡೆಯುತ್ತಲೇ ಇತ್ತು. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿನ ಆಫ್ರಿಕಾ ಖಂಡ ಯುರೋಪಿನ ಸಾಮ್ರಾಜ್ಯಶಾಹಿ ವಸಾಹತುಶಾಹಿತ್ವದ ಆಕ್ರಮಣಕಾರಿ ಸ್ವಭಾವಕ್ಕೆ ಉತ್ತಮ ನಿದರ್ಶನ. ನೆಪೋಲಿಯನ್ ಬೊನಾಪಾರ್ಟೆಯ ಈಜಿಪ್ಟ್ ಯುದ್ಧದಿಂದ ಪ್ರಾರಂಭಗೊಂಡ ಆಫ್ರಿಕಾದ ವಿಭಜನೆ, ೧೯೦೪ರಲ್ಲಿ ಬ್ರಿಟನ್ ಮತ್ತು ಫ್ರಾನ್ಸ್‌ನ ನಡುವೆ ನಡೆದ ಒಪ್ಪಂದದಲ್ಲಿಯವರೆಗೆ ಮುಂದುವರೆಯಿತು. ಸಾಮ್ರಾಜ್ಯಶಾಹಿ ಶಕ್ತಿಗಳು ಆಫ್ರಿಕಾವನ್ನು ತಮ್ಮ ಹಿತಾಸಕ್ತಿಗಳಿಗನು ಗುಣವಾಗಿ ವಿಂಗಡಿಸಿಕೊಂಡವು. ಪ್ರಥಮ ಜಾಗತಿಕ ಯುದ್ಧದ ಸಮಯದಲ್ಲಿ ಯುರೋಪಿನ ರಾಷ್ಟ್ರಗಳು ತಮ್ಮ ಸೈನಿಕ ಖರ್ಚುಗಳಲ್ಲಿ ಹೆಚ್ಚಿನ ಭಾಗವನ್ನು ತಮ್ಮ ಪ್ರಧಾನ ವಸಾಹತುಗಳ ಮೇಲೆ ಹೊರಿಸಿದವು. ಇದರಿಂದಾಗಿ ಆಫ್ರಿಕಾದ ಶೋಷಣೆ ಮತ್ತಷ್ಟು ತೀವ್ರವಾಯಿತು. ಯುದ್ಧದ ಸಂದಭದರ್ಲ್ಲಿ ಜಗತ್ತಿನ ಆರ್ಥಿಕ ಸಂಬಂಧಗಳಲ್ಲಿ ಅವ್ಯವಸ್ಥೆ ಉಂಟಾಯಿತು. ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ, ಪೋರ್ಚುಗಲ್, ಬೆಲ್ಜಿಯಂ ಮುಂತಾದ ಯುರೋಪಿನ ರಾಷ್ಟ್ರಗಳು ಆಫ್ರಿಕಕ್ಕಾಗಿ ನಡೆದ ಕಿತ್ತಾಟದಲ್ಲಿ ಪಾಲ್ಗೊಂಡವು. ಬಂಡವಾಳಶಾಹಿ ಬೆಳವಣಿಗೆಯ ಮಾರ್ಗ ಹಿಡಿದಿದ್ದ ಯುರೋಪಿಯನ್ನರು ಆಫ್ರಿಕಾವನ್ನು ಸಂಪತ್ತನ್ನು ಗಳಿಸಿಕೊಳ್ಳುವ ಆಕರವನ್ನಾಗಿ ಮಾತ್ರ ಕಂಡುಕೊಂಡರು. ಇದೇ ಸಂದರ್ಭದಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಚಳುವಳಿಯು ನಿಧಾನವಾಗಿ ಆದರೆ ಗಟ್ಟಿಯಾಗಿ ಕಾಣಿಸಿ ಕೊಳ್ಳಲಾರಂಭಿಸಿತು.

ಪ್ರಥಮ ಜಾಗತಿಕ ಯುದ್ಧದ ಬಳಿಕ ಕಾಣಿಸಿಕೊಂಡ ತೀವ್ರ ಮಾರುಕಟ್ಟೆ ಕುಸಿತದಿಂದಾಗಿ ಆಫ್ರಿಕಾ ತೀರಾ ಪ್ರತಿಕೂಲವಾದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಬಂಡವಾಳಶಾಹಿ ದೇಶಗಳೂ ಇದರಿಂದಾಗಿ ಕಂಗೆಟ್ಟವು. ಇಪ್ಪತ್ತನೆಯ ಶತಮಾನದ ಮೂವತ್ತರ ದಶಕದಲ್ಲಿ ಕಾಣಿಸಿಕೊಂಡ ಈ ಮಾರುಕಟ್ಟೆ ಕುಸಿತ ಅನೇಕ ಬೆಳವಣಿಗೆಗಳಿಗೆ ಕಾರಣವಾಯಿತು. ಈ ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳಲು ಬಂಡವಾಳಶಾಹಿ ದೇಶಗಳು ಹೊರ ಮಾರುಕಟ್ಟೆಗಳ ಹುಡುಕಾಟ ಪ್ರಾರಂಭಿಸಿದವು. ಆದರೆ ಇದು ಸುಲಭದ ಕೆಲಸವಾಗಿರಲಿಲ್ಲ. ಆದ್ದರಿಂದ ಮಾರುಕಟ್ಟೆ ಕುಸಿತದ ಹೊರೆಯನ್ನು ಆಫ್ರಿಕಾದ ದೇಶಗಳಿಗೆ ವರ್ಗಾಯಿಸಿ ಬಿಡುವ ಪ್ರಯತ್ನವನ್ನು ಮಾಡಿದವು. ಆಫ್ರಿಕಾದಲ್ಲಿ ರಾಷ್ಟ್ರೀಯ ಚಳುವಳಿ ಪ್ರಾರಂಭವಾಗುವುದಕ್ಕೆ ಇದು ಮುಖ್ಯ ಕಾರಣವಾಗಿದೆ. ಆಫ್ರಿಕಾದ ಕೈಗಾರಿಕಾ ಕಾರ್ಮಿಕರು, ಕೃಷಿಕರು ಹಾಗೂ ಇನ್ನಿತರ ಜನಸಮೂಹದವರು ಯುರೋಪಿನ ರಾಷ್ಟ್ರಗಳ ಧೋರಣೆಯನ್ನು ವಿರೋಧಿಸಿ ಚಳುವಳಿ ನಡೆಸಲಾರಂಭಿಸಿದರು.

ಪ್ರಥಮ ಜಾಗತಿಕ ಯುದ್ಧದ ನಂತರ ಏರ್ಪಟ್ಟ ಪ್ಯಾರಿಸ್ ಶಾಂತಿ ಒಪ್ಪಂದದ ಪ್ರಕಾರ ಆಫ್ರಿಕಾದ ಭೂಪಟವನ್ನು ಪುನಾರಚಿಸುವ ಕಾರ್ಯದಲ್ಲಿ ಮೈತ್ರಿಕೂಟ ಮಗ್ನವಾಯಿತು. ಆದರೆ ಇದು ವಿದೇಶೀ ಸಾಮ್ರಾಜ್ಯವಾದದ ಮತ್ತು ಆಗ ತಾನೇ ಉದಯಿಸುತ್ತಿರುವ ಆಫ್ರಿಕಾದ ರಾಷ್ಟ್ರೀಯಪ್ರಜ್ಞೆಯ ನಡುವೆ ವಿರೋಧಾಭಾಸಗಳನ್ನು ಹುಟ್ಟುಹಾಕಿತು. ಸಾಮ್ರಾಜ್ಯಶಾಹಿ ನೀತಿಯನ್ನು ವಿರೋಧಿಸಿ ಆಫ್ರಿಕಾದ್ಯಂತ ಚಳುವಳಿಗಳು ಪ್ರಾರಂಭಗೊಂಡವು. ಬಂಡವಾಳಶಾಹಿ ರಾಷ್ಟ್ರಗಳ ವಿರುದ್ಧ ಕಾರ್ಮಿಕ ಚಳುವಳಿಗಳು ಹುಟ್ಟಲಾರಂಭಿಸಿದವು. ಬಂಡವಾಳಶಾಹಿಗಳಿಂದ ನಿರಂತರವಾಗಿ ಶೋಷಣೆಗೊಳಪಟ್ಟಿದ್ದ ರೈತರು ಹಳ್ಳಿಯನ್ನು ತೊರೆದು ನಗರ ಪ್ರದೇಶಗಳಿಗೆ ವಲಸೆ ಬಂದರು. ನಗರ ಕಾರ್ಮಿಕರೊಡನೆ ಬೆರೆತು ಹೊಸ ಚಿಂತನೆಗಳಿಂದ ಪ್ರೇರೇಪಿತಗೊಂಡು ಸಾಮ್ರಾಜ್ಯಶಾಹಿ ವಿರೋಧಿ ನೀತಿಯನ್ನು ಶಿಸ್ತುಬದ್ಧಗೊಳಿಸಿದರು. ೧೯೧೯ರಲ್ಲಿ ಪ್ರಥಮ ಬಾರಿಗೆ ಪ್ಯಾರಿಸ್‌ನಲ್ಲಿ ಆಫ್ರಿಕಾದ ಕುರಿತು ಚರ್ಚೆಯನ್ನು ನಡೆಸಲು ಸಭೆ ಕರೆಯಲಾಯಿತು. ಆಫ್ರಿಕಾದ ಪರ ಚಿಂತನೆಗಳನ್ನು ಹೊಂದಿರುವ ಈ ಸಭೆ ಪ್ಯಾರಿಸ್ ಶಾಂತಿ ಒಪ್ಪಂದದ ಸಂಘಟಕರಿಗೆ ಒತ್ತಡವನ್ನು ಹೇರಿತು. ಇವರ ಮುಖ್ಯ ಬೇಡಿಕೆಯೆಂದರೆ ಆಫ್ರಿಕಾದ ವಿವಿಧ ಪ್ರದೇಶಗಳ ಆಳ್ವಿಕೆಗೆ ಸರಕಾರವನ್ನು ರಚಿಸುವಾಗ ಸ್ಥಳೀಯರನ್ನು ಸೇರಿಸಿಕೊಳ್ಳಬೇಕು. ಏಕೆಂದರೆ ಸ್ಥಳೀಯ ಜನರ ಸಮಸ್ಯೆಗಳ ಬಗ್ಗೆ ಸಾ್ರಾಜ್ಯವಾದಿ ಶಕ್ತಿಗಳಿಗೆ ಅರಿವು ಇರುವುದಿಲ್ಲ. ಅದೇ ರೀತಿ ಗುಲಾಮ ಪದ್ಧತಿಯನ್ನು ರದ್ದುಗೊಳಿಸುವುದು. ಈ ಉದ್ದೇಶ ಈಡೇರಿಕೆಗಾಗಿಯೇ ೧೯೨೧, ೧೯೨೩ ಮತ್ತು ೧೯೨೭ರಲ್ಲಿ ಆಫ್ರಿಕಾ ಪರ ಕಾಂಗ್ರೆಸ್‌ಗಳು ನಡೆದವು. ಇವೆಲ್ಲದರ ಫಲವಾಗಿ ಆಫ್ರಿಕಾದ ರಾಷ್ಟ್ರೀಯ ವಿಮೋಚನಾ ಚಳುವಳಿ ಹೆಚ್ಚು ವ್ಯಾಪಕವಾಗಿ ಬೆಳೆಯಿತು. ಬ್ರಿಟನ್, ಫ್ರಾನ್ಸ್, ಇಟಲಿ, ಬೆಲ್ಜಿಯಂ, ಪೋರ್ಚುಗಲ್ ಮತ್ತು ಸ್ಪೈನಿನ ಆಳ್ವಿಕೆಗೊಳಪಟ್ಟಿದ್ದ ಪ್ರದೇಶಗಳಲ್ಲಿ ವಿಮೋಚನಾ ಚಳುವಳಿ ಪ್ರಾರಂಭಗೊಂಡಿತು.

ಬ್ರಿಟಿಶ್ ವಿರೋಧಿ ಹೋರಾಟಗಳು

ಬ್ರಿಟನ್ನಿನ ಅಧೀನದಲ್ಲಿದ್ದ ಈಜಿಪ್ಟ್, ಸುಡಾನ್, ನೈಜೀರಿಯಾ, ಗೋಲ್ಡ್ ಕೋಸ್ಟ್, ಗ್ಯಾಂಬಿಯಾ, ಲಿಯೋನ್, ಸೊಮಾಲಿಯಾ, ಕಿನ್ಯಾ, ಉಗಾಂಡ, ನ್ಯಾಸಾಲ್ಯಾಂಡ್, ದಕ್ಷಿಣ ಮತ್ತು ಉತ್ತರ ರೊಡೇಶಿಯಾ, ತಾಂಗಾನ್ಯಕಾ ಮತ್ತು ಜಾನ್ ಸಿಬಾರ್, ಬ್ರಿಟನ್ ದಕ್ಷಿಣ ಆಫ್ರಿಕಾಗಳಲ್ಲಿ ವಿವಿಧ ಕಾಲಘಟ್ಟದಲ್ಲಿ ಚಳುವಳಿ ಪ್ರಾರಂಭಗೊಂಡಿತು. ಈಜಿಪ್ಟ್‌ನಲ್ಲಿ ಬ್ರಿಟನ್ ವಿರೋಧಿ ದಂಗೆಗಳು ೧೯೧೯ರ ನಂತರದ ಅವಧಿಯಲ್ಲಿ ಪ್ರಾರಂಭಗೊಂಡಿತು. ಪ್ರಾರಂಭಿಕ ಹಂತದಲ್ಲಿ ಬ್ರಿಟನ್ ಈಜಿಪ್ಟ್‌ನ ಕ್ರಾಂತಿಕಾರಿ ಸಂಘಟನೆಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಯಿತು. ರಷ್ಯಾದಲ್ಲಿ ನಡೆದ ಕ್ರಾಂತಿಯಿಂದ ಸ್ಫೂರ್ತಿಗೊಂಡ ಈಜಿಪ್ಟ್‌ನ ಕೈಗಾರಿಕಾ ಕಾರ್ಮಿಕರು ಬ್ರಿಟನ್ನಿನ ಪ್ರಬಲ ಶತ್ರುಗಳಾಗಿ ರೂಪುಗೊಂಡರು. ೧೯೨೦ರಲ್ಲಿ ಈಜಿಪ್ಟ್‌ನಲ್ಲಿ ಸಮಾಜವಾದಿ ಪಕ್ಷ ರಚನೆಗೊಂಡಿತು. ೧೯೨೨ರಲ್ಲಿ ಅದನ್ನು ಕಮ್ಯುನಿಸ್ಟ್ ಪಕ್ಷ ಎಂಬುದಾಗಿ ಮರುನಾಮಕರಣಗೊಳಿಸಲಾಯಿತು. ಕಾರ್ಮಿಕ ಸಂಘಟನೆಗಳ ವಿರೋಧವನ್ನು ಸುಲಭವಾಗಿ ಹತ್ತಿಕ್ಕಿದ ಬ್ರಿಟನ್ ಚಾಣಾಕ್ಷತನವನ್ನು ತೋರಿಸಿ, ೧೯೨೨ ರಲ್ಲಿ ಈಜಿಪ್ಟ್ ಸ್ವತಂತ್ರದೇಶ ಎಂಬ ಘೋಷಣೆಯನ್ನು ಹೊರಡಿಸಿತು. ಆದರೆ ಅಲ್ಲಿ ಪರೋಕ್ಷವಾಗಿ ಬ್ರಿಟಿಷರೇ ಆಡಳಿತವನ್ನು ನಡೆಸುತ್ತಿದ್ದರು.

ಈಜಿಪ್ಟ್‌ನ ವಫದ್ ಪಾರ್ಟಿಯ ನಾಯಕ ಜಗಲುಲ್ ಪಾಷಾ ಹೊಸ ಸರಕಾರದ ನೇತೃತ್ವವನ್ನು ವಹಿಸಿದ. ತನ್ನ ಸರಕಾರವನ್ನು ಭದ್ರಪಡಿಸುವುದಕ್ಕೋಸ್ಕರ ೧೯೨೪ರಲ್ಲಿ ಕಮ್ಯೂನಿಸ್ಟ್ ಪಾರ್ಟಿಯನ್ನು ಸಂಪೂರ್ಣವಾಗಿ ನಾಶಪಡಿಸಿದ. ಕಾರ್ಮಿಕ ಸಂಘಟನೆಗಳನ್ನು ರದ್ದುಗೊಳಿಸಲಾಯಿತು. ಅಲೆಗ್ಸಾಂಡ್ರಿಯಾ ಮತ್ತು ಕೈರೋದಲ್ಲಿ ನಡೆದ ಈ ಆಂತರಿಕ ಸಮಸ್ಯೆಯಿಂದಾಗಿ ಬ್ರಿಟಿಷರು ನೇರ ಹಸ್ತಕ್ಷೇಪ ನಡೆಸುವಂತಾಯಿತು. ೧೯೨೪ರಿಂದ ೧೯೩೦ರವರೆಗೆ ಸುಮಾರು ಹತ್ತು ಬಾರಿ ಈಜಿಪ್ಟ್‌ನ ಸರಕಾರವನ್ನು ಬದಲಾಯಿಸಲಾಯಿತು. ಸುಡಾನ್ ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ವಿಷಯದಲ್ಲಿ ಬ್ರಿಟನ್ ಮತ್ತು ಈಜಿಪ್ಟ್ ಪರಸ್ಪರ ಕಿತ್ತಾಟ ಪ್ರಾರಂಭಿಸಿದವು. ಈ ಹಿನ್ನೆಲೆಯಲ್ಲಿಯೇ ಬ್ರಿಟಿಷರ ನಾಯಕ ಲೀಸ್ಟಾಕ್ ನನ್ನು ಕೈರೋದಲ್ಲಿ ಕೊಲೆ ಮಾಡಲಾಯಿತು. ಇದರ ಪರಿಣಾಮವಾಗಿ ಜುಗಲ್ ಪಾಷಾ ತನ್ನ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ೧೯೩೦ರಲ್ಲಿ ಈಜಿಪ್ಟ್‌ನ ಅರಸ ಸಿದ್ಧಕೀ ಪಾಷಾ ಹೊಸ ಸಂವಿಧಾನವನ್ನು ಜಾರಿಗೆ ತಂದ. ಇದು ಪಾರ್ಲಿಮೆಂಟಿನ ಅಧಿಕಾರವನ್ನು ಮೊಟಕುಗೊಳಿಸಿ ಅರಸನಿಗೆ ಹೆಚ್ಚಿನ ಅಧಿಕಾರವನ್ನು ನೀಡಿತು. ಆದರೆ ಇದನ್ನು ವಿರೋಧಿಸಿ ೧೯೩೧ರಲ್ಲಿ ವಫದ್ ಪಾರ್ಟಿ ಮುಷ್ಕರ ನಡೆಸಿತು. ೧೯೩೬ರವರೆಗೆ ಈಜಿಪ್ಟ್‌ನಲ್ಲಿ ಮುಷ್ಕರ ನಡೆದು ಹೊಸ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ವಫದ್ ಪಾರ್ಟಿ ಮತ್ತೊಮ್ಮೆ ಜಯಗಳಿಸಿ ಮುಸ್ತಾಫ್ ನಹಾಸೌ ಹೊಸ ಮುಖಂಡನಾಗಿ ನೇಮಕಗೊಂಡ. ಬ್ರಿಟಿನ್ ಅನೇಕ ಬೇಡಿಕೆಗಳನ್ನು ಹೊಸ ಸರಕಾರದ ಮುಂದಿಟ್ಟಿತು. ಮುಖ್ಯವಾಗಿ ಸುಯೇಜ್ ಕಾಲುವೇ ವಲಯದಲ್ಲಿ ಬೃಹತ್ ಸೈನ್ಯವನ್ನು ಹೊಂದುವುದು. ವಫದ್ ಪಾರ್ಟಿ ಅನಿವಾರ್ಯವಾಗಿ ಈ ಒಪ್ಪಂದಕ್ಕೆ ಸಹಿ ಮಾಡಬೇಕಾಯಿತು. ಇದು ಈಜಿಪ್ಟ್‌ನ ಜನರಲ್ಲಿ ವಫದ್ ಪಾರ್ಟಿಯ ಬಗ್ಗೆ ಕೆಟ್ಟ ಭಾವನೆಯನ್ನು ಮೂಡಿಸಿತು. ಇದರಿಂದಾಗಿಯೇ ೧೯೩೮ರ ಚುನಾವಣೆಯಲ್ಲಿ ವಫದ್ ಪಾರ್ಟಿ ಸೋಲಬೇಕಾಯಿತು. ಈ ಎಲ್ಲಾ ಬೆಳವಣಿಗೆಗಳು ಈಜಿಪ್ಟ್‌ನಲ್ಲಿ ಬ್ರಿಟನ್ ವಿರೋಧಿ ನೀತಿಯನ್ನು ಹುಟ್ಟುಹಾಕಿದವು.

ನೈಜೀರಿಯಾ, ಗ್ಯಾಂಬಿಯಾ, ಗೋಲ್ಡ್‌ಕೋಸ್ಟ್ ಮತ್ತು ಸೀರಾ ಲಿಯೋನೆ ಬ್ರಿಟನ್ನಿನ ಪಶ್ಚಿಮ ಆಫ್ರಿಕಾದ ವಸಾಹತು ನೆಲೆಗಳು. ೧೯೨೦ರಲ್ಲಿ ನೈಜೀರಿಯಾದಲ್ಲಿ ಬ್ರಿಟಿಷ್ ಪಶ್ಚಿಮ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್‌ನ ವಿಭಾಗವೊಂದು ಅಸ್ತಿತ್ವಕ್ಕೆ ಬಂತು. ೧೯೨೨ರಲ್ಲಿ ನೈಜೀರಿಯಾದ ರಾಷ್ಟ್ರೀಯ ಪ್ರಜಾಪ್ರಭುತ್ವ ಪಾರ್ಟಿಯನ್ನು ರಚಿಸಲಾಯಿತು. ಸಾಮ್ರಾಜ್ಯಶಾಹಿ ವಿರೋಧಿ ನೀತಿಯೇ ಈ ಪಾರ್ಟಿಯ ಮುಖ್ಯ ಪ್ರಣಾಳಿಕೆಯಾಗಿತ್ತು. ೧೯೩೮ರಲ್ಲಿ ನೈಜೀರಿಯನ್ ಯೂತ್ ಮೂವ್‌ಮೆಂಟ್ (ಯನ್.ವೈ.ಎಂ) ಅಸ್ತಿತ್ವಕ್ಕೆ ಬಂತು. ಇದರ ಉದ್ದೇಶವೆಂದರೆ ನೈಜೀರಿಯಾವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸುವುದು. ಇದೇ ಮಾದರಿಯಲ್ಲಿ ಗೋಲ್ಡ್ ಕೋಸ್ಟ್, ಗ್ಯಾಂಬಿಯಾ ಮತ್ತು ಸೀರಾ ಲಿಯೋನೆಗಳಲ್ಲೂ ಸಂಘ ಸಂಸ್ಥೆಗಳು ಹುಟ್ಟಿಕೊಂಡವು. ೧೯೨೦ರಲ್ಲಿ ಗೋಲ್ಡ್‌ಕೋಸ್ಟ್‌ನಲ್ಲಿ ಬೃಹತ್ ಸಮ್ಮೇಳನ ವೊಂದನ್ನು ಏರ್ಪಡಿಸಲಾಯಿತು. ಈ ಸಮ್ಮೇಳನದಲ್ಲಿ ನೈಜೀರಿಯಾ, ಗ್ಯಾಂಬಿಯಾ ಮತ್ತು ಸೀರಾ ಲಿಯೋನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಮ್ಮೇಳನದ ಒಮ್ಮತದ ತೀರ್ಪಿನಂತೆ ಬ್ರಿಟಿಷ್ ಪಶ್ಚಿಮ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ಸನ್ನು ರಚಿಸಲಾಯಿತು. ಕೀನ್ಯಾ, ಉಗಾಂಡ, ಜಾನ್‌ಸಿಬಾರ್ ಮತ್ತು ತಾಂಗಾನ್ಯಕಾ ಗಳಲ್ಲೂ ಬ್ರಿಟಿಷ್ ವಿರೋಧಿ ಮುಷ್ಕರಗಳು ಪ್ರಾರಂಭಗೊಂಡವು. ೧೯೨೧ರಲ್ಲಿ ಬ್ರಿಟನ್ ಆಫ್ರಿಕಾದ ಈ ಪ್ರದೇಶಗಳನ್ನು ಒಟ್ಟು ಸೇರಿಸಿ ಒಂದು ಸಂಯುಕ್ತ ಒಕ್ಕೂಟವನ್ನು ರಚಿಸುವ ಯೋಜನೆ ಹಾಕಿತು. ಆದರೆ ಈ ಯೋಜನೆಗೆ ಪ್ರಬಲ ವಿರೋಧವಿದ್ದುದರಿಂದಾಗಿ ಕೈಬಿಡಬೇಕಾಯಿತು. ೧೯೩೦ರಲ್ಲಿ ಕೀನ್ಯಾದಲ್ಲಿ ಅನೇಕ ಬೇಡಿಕೆಗಳನ್ನು ಒಳಗೊಂಡು ಕೇಂದ್ರೀಯ ರೆಕುಯೂ ಸಂಸ್ಥೆಯೊಂದು ಸ್ಥಾಪನೆಗೊಂಡಿತು. ಕೀನ್ಯಾದ ಜನತೆಗೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಹಕ್ಕನ್ನು ನೀಡಬೇಕೆನ್ನುವುದೇ ಈ ಸಂಸ್ಥೆಯ ಬೇಡಿಕೆಯಾಗಿತ್ತು. ಎರಡನೇ ಜಾಗತಿಕ ಯುದ್ಧದ ಪ್ರಾರಂಭದವರೆಗೂ ಈ ಸಂಸ್ಥೆ ಬ್ರಿಟನ್ ಸರಕಾರಕ್ಕೆ ಒತ್ತಡವನ್ನು ಹೇರುತ್ತಲೇ ಇತ್ತು. ೧೯೨೧ರಲ್ಲಿ ಉಾಂಡಾದಲ್ಲಿ ರೈತರ ಸಂಸ್ಥೆಯೊಂದು ರಚನೆಗೊಂಡರೆ ೧೯೨೯ರಲ್ಲಿ ಟಾಂಗಾನ್ಯಕಾದಲ್ಲೂ ಇದೇ ಮಾದರಿಯ ಸಂಸ್ಥೆಯೊಂದು ಹುಟ್ಟಿಕೊಂಡಿತು. ೧೯೨೯-೩೩ರಲ್ಲಿ ಪ್ರಪಂಚದಾದ್ಯಂತ ಕಾಣಿಸಿಕೊಂಡ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಟಾಂಗಾನ್ಯಕಾದಲ್ಲಿ ಅನೇಕ ಕಾರ್ಮಿಕ ಸಂಘಟನೆಗಳು ಕಾಣಿಸಿಕೊಂಡವು. ಆದರೂ ಈ ಸಂಘಟನೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತಿರಲಿಲ್ಲ.

ಬೆಚ್ಚುನಾಲ್ಯಾಂಡ್, ಬಸುಟೋಲ್ಯಾಂಡ್ ಮತ್ತು ಸ್ವಾಸಿಲ್ಯಾಂಡ್‌ಗಳು ಬ್ರಿಟನ್‌ನ ‘ಪಾಲನ ಪ್ರಭುತ್ವಕ್ಕೆ’ ಒಳಪಟ್ಟಿದ್ದವು. ಈ ದೇಶಗಳಲ್ಲಿ ಬ್ರಿಟನ್ ಪರೋಕ್ಷವಾಗಿ ಆಳ್ವಿಕೆ ನಡೆಸುತ್ತಿತ್ತು. ಬೆಚ್ಚುನಾಲ್ಯಾಂಡ್‌ನಲ್ಲಿ ೧೯೨೩ರಿಂದ ೧೯೨೬ರವರೆಗೆ ಅಧಿಕಾರಕ್ಕಾಗಿ ಹೋರಾಟ ನಡೆಯುತ್ತಿತ್ತು. ಈ ದೇಶಗಳಲ್ಲಿನ ವಸಾಹತು ವಿರೋಧಿ ಚಳುವಳಿ ಅತ್ಯಂತ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಪ್ರಥಮ ಜಾಗತಿಕ ಯುದ್ಧದ ನಂತರ ಬ್ರಿಟನ್ ಉತ್ತರ ಮತ್ತು ದಕ್ಷಿಣ ರೊಡೇಶಿಯಾದ ಮೇಲಿನ ತನ್ನ ಸ್ಥಾನಮಾನಗಳನ್ನು ಬದಲಿಸಿಕೊಂಡಿತು. ೧೯೨೨ರಲ್ಲಿ ದಕ್ಷಿಣ ರೊಡೇಶಿಯಾವು ಬಿಳಿಯರ ವಸಾಹತುವಾದರೂ ಪಾರ್ಲಿಮೆಂಟನ್ನು ಹೊಂದಿತ್ತು. ಇದೇ ರೀತಿಯ ವ್ಯವಸ್ಥೆ ಉತ್ತರ ರೊಡೇಶಿಯಾದಲ್ಲೂ ಜಾರಿಗೆ ಬಂತು. ಆದರೂ ಎರಡೂ ದೇಶಗಳಲ್ಲಿ ಬ್ರಿಟಿಷರ ಪಾಲನ ಪ್ರಭುತ್ವ ರೀತಿಯ ವಸಾಹತು ಸರಕಾರವನ್ನು ರಚಿಸಲಾಯಿತು. ಎರಡು ಜಾಗತಿಕ ಯುದ್ಧಗಳ ನಡುವೆ ಉತ್ತರ ಮತ್ತು ದಕ್ಷಿಣ ರೊಡೇಶಿಯಾದಲ್ಲಿ ಗಣಿಗಾರಿಕಾ ಉದ್ಯಮ ಅಭಿವೃದ್ದಿಗೊಂಡಿತು. ಇದು ಬ್ರಿಟನ್ನಿನ ಸ್ವಂತ ಆಸಕ್ತಿಯಾಗಿದ್ದು ಸ್ಥಳೀಯ ರೈತರು ಮತ್ತು ಕಾರ್ಮಿಕರು ಬ್ರಿಟನ್ನಿನ ನೀತಿಯನ್ನು ವಿರೋಧಿಸಿ ೧೯೩೫ರಲ್ಲಿ ಬೃಹತ್ ಪ್ರಮಾಣದಲ್ಲಿ ಮುಷ್ಕರ ನಡೆಸಿದರು. ದಕ್ಷಿಣ ರೊಡೇಶಿಯಾದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಕಾರ್ಮಿಕರ ಒಕ್ಕೂಟ ಮತ್ತು ರೊಡೇಶಿಯಾದ ಬಂಟು ಮತದಾರರ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಆಫ್ರಿಕಾದಲ್ಲಿ ಬ್ರಿಟನ್ನಿನ ಮತ್ತೊಂದು ಪ್ರಮುಖ ವಸಾಹತು ನೆಲೆಯೆಂದರೆ ದಕ್ಷಿಣ ಆಪಿ್ರಕಾದ ಒಕ್ಕೂಟ. ಬ್ರಿಟಿಷರ ನಾಲ್ಕು ವಸಾಹತು ಪ್ರದೇಶಗಳಾದ ನೆಟಾಲ್ ಮತ್ತು ಕೇಪ್ ಕಾಲೋನಿ ಹಾಗೂ ಆರೆಂಟ್ ಫ್ರೀ ಸ್ಟೇಟ್ ಮತ್ತು ಟ್ರಾನ್ಸ್‌ವಾಲ್‌ಗಳನ್ನು ಒಟ್ಟು ಸೇರಿಸಿ ದಕ್ಷಿಣ ಆಫ್ರಿಕಾದ ಒಕ್ಕೂಟವನ್ನು ರಚಿಸಲಾಯಿತು. ಸಿಸಿಲ್ ರೋಡ್ಸ್ ಪ್ರಥಮ ಜಾಗತಿಕ ಯುದ್ಧದ ಮೊದಲೇ ಈ ಪ್ರದೇಶದಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ಸ್ಥಾಪಿಸುವ ಕನಸು ಕಂಡಿದ್ದ.

ಆಫ್ರಿಕನ್ ರಾಷ್ಟ್ರೀಯ ಕಾಂಗ್ರೆಸ್

ದಕ್ಷಿಣ ಆಫ್ರಿಕಾದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳುವಲ್ಲಿ ಮೋಹನ್ ದಾಸ್ ಕರಮ್‌ಚಂದ್ ಗಾಂಧಿಯವರ ಪಾತ್ರವೂ ಹಿರಿದಾದದ್ದು. ಅಲ್ಲಿ ಅವರು ಭಾರತೀಯ ದೇಶಾಂತರವಾಸಿಗಳ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಪ್ರಾರಂಭಿಸಿದರು. ಭಾರತೀಯ ದೇಶಾಂತರ ವಾಸಿಗಳು ಅಲ್ಲಿ ಕ್ರೂರ ವರ್ಣ ಪಕ್ಷಪಾತಕ್ಕೆ ಗುರಿಯಾಗಿದ್ದರು. ಬ್ರಿಟಿಷ್ ವಸಾಹತುವಾದದ ವಿರುದ್ಧ ಅಹಿಂಸಾತ್ಮಕ ಪ್ರತಿರೋಧದ ಅಥವಾ ಸತ್ಯಾಗ್ರಹದ ಸೂತ್ರಗಳನ್ನು ಆಚರಣೆಯಲ್ಲಿ ತರಲು ಪ್ರಯತ್ನಿಸಿದರು. ೧೯೦೮ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಸಾಹತು ಆಡಳಿತವು ಜಾರಿಗೆ ತಂದಿದ್ದ ವರ್ಣ ಪಕ್ಷಪಾತ ಕಾನೂನುಗಳನ್ನು ಉಲ್ಲಂಘಿಸುವ ಚಳುವಳಿಯನ್ನು ಸಂಘಟಿಸಿದರು. ಗಾಂಧಿಯವರು ಅಹಿಂಸಾತ್ಮಕ ಚಟುವಟಿಕೆಗಳಲ್ಲಿ ಎಷ್ಟು ಅಂಟಿಕೊಂಡಿದ್ದರೆಂಬುದಕ್ಕೆ ಉತ್ತಮ ನಿದರ್ಶನ ೧೯೦೬ರಲ್ಲಿ ನಡೆದ ಘಟನೆ. ಅದೇನೆಂದರೆ ಜುಲೂ ಜನಾಂಗದವರು ಹಿಂಸಾತ್ಮಕ ಪ್ರವೃತ್ತಿಯನ್ನು ತೋರಿದಾಗ ಅವರ ಬಂಡಾಯವನ್ನು ಹತ್ತಿಕ್ಕಲು ಹೋದ ವಸಾಹತು ದಳಗಳ ಪರವಾಗಿ ಗಾಂಧಿ ಕೆಲಸ ಮಾಡಿದರು. ದಕ್ಷಿಣ ಆಫ್ರಿಕಾದಲ್ಲಿ ೧೯೧೨ರಲ್ಲಿ ಆಫ್ರಿಕನ್ ರಾಷ್ಟ್ರೀಯ ಕಾಂಗ್ರೆಸ್ ಹುಟ್ಟಿಕೊಳ್ಳುವುದಕ್ಕೆ ಗಾಂಧಿಯವರಿಂದ ಸ್ಥಾಪನೆಗೊಂಡ ನೆಟಾಲ್‌ನ ಭಾರತೀಯ ಕಾಂಗ್ರೆಸ್ ಸಂಸ್ಥೆಯೇ ಪ್ರಮುಖ ಕಾರಣ. ನೆಟಾಲ್ ಮತ್ತು ಟ್ರಾನ್ಸ್‌ವಾಲ್‌ಗಳಲ್ಲಿ ಭಾರತೀಯರ ವಿರುದ್ಧ ಹೊರಡಿಸಲಾದ ಕಾನೂನುಗಳನ್ನು ಗಾಂದಿ ವಿರೋಧಿಸಿದರು. ಈ ಉದ್ದೇಶಕ್ಕಾಗಿಯೇ ನೆಟಾಲ್‌ನ ಭಾರತೀಯ ಕಾಂಗ್ರೆಸ್ಸನ್ನು ಸ್ಥಾಪಿಸಲಾಯಿತು.

ದಕ್ಷಿಣ ಆಫ್ರಿಕಾದಲ್ಲಿ ೧೯೧೨ರಲ್ಲಿ ಸ್ಥಾಪನೆಗೊಂಡ ಆಫ್ರಿಕನ್ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟನ್ನಿನ ಸಾಮ್ರಾಜ್ಯಶಾಹಿ ನೀತಿಯನ್ನು ವಿರೋಧಿಸಲು ಸ್ಥಳೀಯ ಸಂಘಟನೆಗಳಾದ ಕೈಗಾರಿಕಾ ಕಾರ್ಮಿಕರ ಸಂಘ, ಕೈಗಾರಿಕಾ ಮತ್ತು ವಾಣಿಜ್ಯ ಕಾರ್ಮಿಕರ ಆಫ್ರಿಕನ್ ಒಕ್ಕೂಟ, ಕಾರ್ಮಿಕ ಸಂಘಟನೆಗಳು ಮತ್ತು ದಕ್ಷಿಣ ಆಫ್ರಿಕಾದ ಕಮ್ಯೂನಿಸ್ಟ್ ಪಾರ್ಟಿಯ ಸದಸ್ಯರ ಸಭೆಯನ್ನು ಕರೆಯಿತು. ಇದು ಕೆಲವೊಂದು ನಿರ್ಣಯಗಳನ್ನು ಕೈಗೊಂಡಿತು. ಅವುಗಳೆಂದರೆ; ಆಫ್ರಿಕಾದ ರೈತರಿಗೆ ಭೂಮಿಯನ್ನು ನೀಡುವುದು, ಜನಾಂಗೀಯ ಕಲಹಗಳನ್ನು ನಿಲ್ಲಿಸುವುದು, ಗುಲಾಮಿ ವ್ಯಾಪಾರ ಪದ್ಧತಿಯನ್ನು ರದ್ದುಪಡಿಸುವುದು. ೧೯೧೯ ಮತ್ತು ೧೯೨೦ರಲ್ಲಿ ಮುಷ್ಕರ ಯಶಸ್ವಿಗೊಂಡರೆ ೧೯೨೨ನೆಯ ಮಾರ್ಚ್‌ನಲ್ಲಿ ಮುಷ್ಕರವನ್ನು ಹತ್ತಿಕ್ಕಲಾಯಿತು. ಮುಷ್ಕರದಲ್ಲಿ ಪಾಲ್ಗೊಂಡ ನಾಯಕರನ್ನು ಗಲ್ಲಿಗೇರಿಸ ಲಾಯಿತು. ಈ ಘಟನೆಯನ್ನು ಕೆಂಪು ಕ್ರಾಂತಿ ಎಂಬುದಾಗಿಯೂ ಕರೆಯಲಾಗಿದೆ. ೧೯೨೯-೧೯೩೩ರಲ್ಲಿ ಉದ್ಭವಿಸಿದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕೈಗಾರಿಕಾ ಕಾರ್ಮಿಕರು ಮತ್ತು ರೈತರು ಎಡಪಂಥೀಯ ಸಂಘಟನೆಗಳ ಜೊತೆಗೂಡಿ ಉಗ್ರಹೋರಾಟವನ್ನು ನಡೆಸಿದರು. ಇವರ ಫಲವಾಗಿ ೧೯೩೬ರ ವೇಳೆಗೆ ಕೈಗಾರಿಕಾ ಕಾರ್ಮಿಕರಿಗೆ ಮತ್ತು ರೈತರಿಗೆ ಅನುಕೂಲ ವಾಗುವ ಕಾನೂನು ಕಾಯಿದೆಗಳನ್ನು ಜಾರಿಗೆ ತರಲಾಯಿತು.

ದಕ್ಷಿಣ ಆಫ್ರಿಕಾದಲ್ಲಿನ ಅನೇಕ ಪಕ್ಷಗಳು ೧೯೩೩-೧೯೩೪ರಲ್ಲಿ ದಕ್ಷಿಣ ಆಫ್ರಿಕಾದ ಒಕ್ಕೂಟದೊಡನೆ ವಿಲೀನಗೊಂಡು ದಕ್ಷಿಣ ಆಫ್ರಿಕಾದ ಸಂಯುಕ್ತ ಪಾರ್ಟಿಯನ್ನು ರಚಿಸಿಕೊಂಡವು. ಈ ಸಮ್ಮಿಶ್ರ ಸರಕಾರದ ಪ್ರಧಾನಮಂತ್ರಿಯಾಗಿ ಹರ್ಟ್‌ಸೊಂಗ್‌ನನ್ನು ನೇಮಿಸಲಾಯಿತು. ತೀವ್ರ ರಾಷ್ಟ್ರೀಯವಾದಿಗಳು ರಾಷ್ಟ್ರೀಯವಾದಿ ಪಕ್ಷವನ್ನು ರಚಿಸಿಕೊಂಡರು. ಈ ಪಕ್ಷ ಫಾಸಿಸ್ಟ್ ತತ್ವವನ್ನು ಒಳಗೊಂಡಿತ್ತು. ಆಂಗ್ಲೋ ಜರ್ಮನ್ ಯುದ್ಧದಲ್ಲಿ ಬ್ರಿಟನ್ ಸೋತು ದಕ್ಷಿಣ ಆಫ್ರಿಕಾದ ಮೇಲಿನ ಹಿಡಿತ ಸಡಿಲಗೊಳ್ಳಬಹುದೆಂಬ ನಂಬಿಕೆಯನ್ನು ರಾಷ್ಟ್ರೀಯವಾದಿ ಪಕ್ಷ ಹೊಂದಿತ್ತು. ದಕ್ಷಿಣ ಆಫ್ರಿಕಾದ ಮಧ್ಯಮವರ್ಗದ ಜನರು ಮತ್ತು ಬೊಯರ್ ಭೂಮಾಲೀಕರು ಈ ಪಕ್ಷಕ್ಕೆ ಬೆಂಬಲ ನೀಡಿದರು. ೧೯೪೦ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಈ ರೀತಿಯ ರಾಜಕೀಯ ಬೆಳವಣಿಗೆಗಳು ನಡೆಯು ತ್ತಿದ್ದವು. ಬ್ರಿಟಿನ್ನಿನ ಅಧೀನದಲ್ಲಿದ್ದ ಈ ಎಲ್ಲಾ ರಾಷ್ಟ್ರಗಳಲ್ಲಿ ಪ್ರಥಮ ಜಾಗತಿಕ ಯುದ್ಧದಿಂದ ದ್ವಿತೀಯ ಜಾಗತಿಕ ಯುದ್ಧದವರೆಗೆ ಅನೇಕ ಚಳುವಳಿಗಳು ನಡೆದರೂ ಸಾಮ್ರಾಜ್ಯವಾದಿ ಶಕ್ತಿಗಳ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ೧೯೪೫ರ ನಂತರ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಬ್ರಿಟನ್ನಿನ ಆಳ್ವಿಕೆಗೆ ಒಳಪಟ್ಟಿದ್ದ ಆಫ್ರಿಕಾದ ದೇಶಗಳು ಸ್ವತಂತ್ರಗೊಳ್ಳುವ ಹಂತಕ್ಕೆ ತಲುಪಿದವು.

ಫ್ರೆಂಚ್ ವಿರೋಧಿ ಹೋರಾಟಗಳು

ಪ್ರಥಮ ಜಾಗತಿಕ ಯುದ್ಧದ ನಂತರ ಫ್ರೆಂಚರ ಆಫ್ರಿಕಾದ ಮೇಲಿನ ಹಿಡಿತ ಬಲಗೊಂಡಿತು ಮತ್ತು ವಿಸ್ತಾರಗೊಳ್ಳಲಾರಂಭಿಸಿತು. ಯುದ್ಧದ ಸಂದರ್ಭದಲ್ಲಿ ಫ್ರಾನ್ಸ್‌ನ ವಸಾಹತು ಪ್ರದೇಶಗಳಲ್ಲಿನ ಆಫ್ರಿಕನ್ನರು ಫ್ರೆಂಚರ ಪರವಾಗಿ ಹೋರಾಡಿದರು. ೧೯೧೯ರಲ್ಲಿ ಯುದ್ಧ ಕೊನೆಗೊಂಡಾಗ ತಾಯ್ನಡಿಗೆ ಮರಳಿ ಸೈನಿಕರು ಸ್ವಲ್ಪಮಟ್ಟಿಗೆ ಯುರೋಪಿನ ಹೊಸ ಚಿಂತನೆಗಳಿಂದ ಪ್ರೇರೇಪಿತಗೊಂಡಿದ್ದರು. ಇದು ಆಫ್ರಿಕಾದಲ್ಲೂ ಪುನರಾವರ್ತನೆಗೊಳ್ಳುವ ಸೂಚನೆ ಕಂಡುಬಂತು. ರಷ್ಯಾ ದೇಶದಲ್ಲಾದ ಕ್ರಾಂತಿಕಾರಿ ಬದಲಾವಣೆ ಆಫ್ರಿಕನ್ನರ ಮೇಲೆ ಗಾಢವಾದ ಪ್ರಭಾವವನ್ನು ಬೇರಿತು. ಪ್ರಥಮ ಜಾಗತಿಕ ಯುದ್ಧದ ಸಂದರ್ಭದಲ್ಲಿ ಸಹರಾ, ಮೌರಿಟಾನ್ಯಾ, ಫ್ರೆಂಚ್ ಸುಡಾನ್ ಮುಂತಾದ ಪ್ರದೇಶಗಳಲ್ಲಿ ಪ್ರಾರಂಭಗೊಂಡ ಮುಷ್ಕರ, ದಂಗೆಗಳು ಎರಡನೇ ಜಾಗತಿಕ ಯುದ್ಧದವರೆಗೂ ಮುಂದುವರೆದವು. ಫ್ರೆಂಚರ ಗಿನ್ಯಾದಲ್ಲಿ ಕೈಗಾರಿಕಾ ಕಾರ್ಮಿಕರು, ಬಂದರು ಕಾರ್ಮಿಕರು ಹಾಗೂ ಇನ್ನಿತರ ಕೆಲಸಗಾರರು ಫ್ರೆಂಚರ ವಿರುದ್ಧ ದಂಗೆ ಎದ್ದರು. ೧೯೧೯ರಲ್ಲಿ ಸೆನೆಗಲ್‌ನಲ್ಲಿ ರೈಲ್ವೆ ಕಾರ್ಮಿಕರು ಫ್ರೆಂಚರ ಆಡಳಿತದ ವಿರುದ್ಧ ಮುಷ್ಕರ ನಡೆಸಿದರು. ಸ್ಥಳೀಯ ಮುಖಂಡರುಗಳ ಅಧಿಕಾರವನ್ನು ಕುಂಠಿತಗೊಳಿಸಿ ಫ್ರೆಂಚ್ ಅಧಿಕಾರಿಗಳು ನೇರ ಆಡಳಿತವನ್ನು ನಡೆಸುತ್ತಿದ್ದರು.

ಫ್ರೆಂಚರ ಆಳ್ವಿಕೆಗೆ ಒಳಪಟ್ಟಿದ್ದ ಆಫ್ರಿಕಾದ ದೇಶಗಳು ಸಂಪೂರ್ಣವಾಗಿ ಶೋಷಣೆ ಗೊಳಪಟ್ಟಿದ್ದವು. ಆಫ್ರಿಕಾದಲ್ಲಿನ ಸಂಪನ್ಮೂಲಗಳನ್ನು ಫ್ರಾನ್ಸ್‌ಗೆ ರಫ್ತು ಮಾಡಲಾಗುತ್ತಿತ್ತು. ಅದೇ ರೀತಿ ಸುಡಾನ್, ವೊಲ್ಟಾ, ಮಧ್ಯ ಕಾಂಗೋ ಪ್ರದೇಶಗಳು ಫ್ರೆಂಚರ ವ್ಯಾಪಾರಕ್ಕೆ ಅನುಕೂಲವಾಗಿರುವ ರೈಲು ಮತ್ತು ಭೂಮಾರ್ಗ ರಚನೆಗೆ ಬೇಕಾದ ಮಾನವಶಕ್ತಿಯನ್ನು ಒದಗಿಸಿಕೊಟ್ಟಿತು. ಸೆನೆಗಲ್, ಕೇಮ್‌ರೂನ್, ಐವರಿಕೋಸ್ಟ್, ಗೇಬನ್ ಮುಂತಾದ ಪ್ರದೇಶಗಳಲ್ಲಿ ಫ್ರೆಂಚ್ ವ್ಯಾಪಾರಸ್ಥರು ಮತ್ತು ಅಧಿಕಾರಿಗಳು ಸೂಚಿಸಿದ ಬೆಳೆಯನ್ನೇ ಬೆಳೆಯಬೇಕಾಗಿತ್ತು. ಈ ರೀತಿಯ ಒತ್ತಡ ಹೇರುವ ಕಾನೂನುಗಳನ್ನು ಜಾರಿಗೆ ತರಲಾಗು ತ್ತಿತ್ತು. ಫ್ರೆಂಚರ ಈ ನೀತಿಯನ್ನು ವಿರೋಧಿಸಿ ೧೯೨೨ ಮತ್ತು ೧೯೨೭ರಲ್ಲಿ ಫ್ರೆಂಚ್ ವಿರೋಧಿ ಗಲಭೆಗಳು ಪ್ರಾರಂಭಗೊಂಡವು. ಈ ಗಲಭೆಗಳಲ್ಲಿ ಗೇಬನ್, ಸೆನೆಗಲ್, ಟೊಗೋ, ಕೇಮ್‌ರೂನ್ ಮುಂತಾದ ಪ್ರದೇಶಗಳ ರೈತರು ಭಾಗವಹಿಸಿದ್ದರು.

ಆಫ್ರಿಕಾದ ಪ್ರಜ್ಞಾವಂತ ಜನವರ್ಗ ತಮ್ಮ ಬರವಣಿಗೆಯ ಮೂಲಕ ಫ್ರೆಂಚ್ ವಸಾಹತು ನೀತಿಯನ್ನು ಬಲವಾಗಿ ಖಂಡಿಸಿತು. ಸೆನೆಗಲ್ ಮತ್ತು ಫ್ರೆಂಚ್ ಸುಡಾನಿನಲ್ಲಿ ಮಾರ್ಕ್ಸ್‌ವಾದಿ ಹಿನ್ನೆಲೆಯ ಚಿಂತಕರು ಫ್ರೆಂಚ್ ಕಮ್ಯೂನಿಸ್ಟ್ ಪಾರ್ಟಿಯ ಚಿಂತನೆಗಳನ್ನು ಅಳವಡಿಸಿಕೊಂಡು ವಸಾಹತು ಆಳ್ವಿಕೆಯ ಸ್ವರೂಪದ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ಮಗ್ನರಾದರು. ಇದರಿಂದಾಗಿ ೧೯೩೮ರ ನಂತರ ಕಾರ್ಮಿಕ ಸಂಘಟನೆಗಳು ಬಲಗೊಂಡು ಸೆನೆಗಲ್, ಐವರಿಕೋಸ್ಟ್ ಮುಂತಾದ ಪ್ರದೇಶಗಳಲ್ಲಿ ಆಗಿಂದಾಗ್ಗೆ ಮುಷ್ಕರ ಗಳು ಕಾಣಿಸಿಕೊಂಡವು. ಫ್ರೆಂಚರ ಇನ್ನೊಂದು ವಸಾಹತು ನೆಲೆಯಾದ ಮಡಗಾಸ್ಕರ್‌ನಲ್ಲೂ ಕಾರ್ಮಿಕ ಸಂಘಟನೆಗಳು ಹುಟ್ಟಿಕೊಂಡು ಫ್ರೆಂಚರ ಪಾಲನಪ್ರಭುತ್ವವನ್ನು ರದ್ದುಗೊಳಿಸಲು ಪ್ರಯತ್ನಿಸಿದವು. ಮಡಗಾಸ್ಕರ್‌ನಲ್ಲಿ ನಡೆದ ಮಹತ್ವದ ಘಟನೆಯೆಂದರೆ ೧೯೨೯ರ ಮೇ ೧೯ರಲ್ಲಿ ನಡೆದ ಸಾಮ್ರಾಜ್ಯಶಾಹಿ ವಿರುದ್ಧದ ಸಮಾವೇಶ. ಇದು ಫ್ರೆಂಚರ ಆಳ್ವಿಕೆಯನ್ನು ಕೊನೆಗೊಳಿಸುವಲ್ಲಿ ವಿಫಲವಾದರೂ, ಜನರಲ್ಲಿ ತಮ್ಮ ತಾಯ್ನಡಿನ ಬಗ್ಗೆ ಪ್ರೀತಿ ಮತ್ತು ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.

ಪೋರ್ಚುಗೀಸ್ ವಿರೋಧಿ ಹೋರಾಟಗಳು

ಪೋರ್ಚುಗಲ್ ಆಫ್ರಿಕಾದ ಕೆಲಭಾಗಗಳಲ್ಲಿ ತನ್ನ ಪ್ರಭಾವಿ ನೆಲೆಗಳನ್ನು ಸ್ಥಾಪಿಸಿ ಕೊಂಡಿತ್ತು. ಮೊಜಾಂಬಿಕ್, ಅಂಗೋಲಾ, ಗಿನ್ಯಾ ಮುಂತಾದ ಪ್ರದೇಶಗಳು ಪೋರ್ಚುಗೀಸರ ವಸಾಹತುಗಳಾಗಿದ್ದವು. ಈ ಪ್ರದೇಶಗಳು ಪೋರ್ಚುಗೀಸರ ಆಳ್ವಿಕೆಗೆ ಒಳಪಟ್ಟಿದ್ದರೂ ಬ್ರಿಟಿಷರ ಸಾಮಾಜ್ಯಶಾಹಿ ನೀತಿಯಿಂದಾಗಿ ಬ್ರಿಟಿಷರ ಹತೋಟಿಗೂ ಒಳಪಡಬೇಕಾಯಿತು. ಪೋರ್ಚುಗಲ್ ವ್ಯಾಪಾರಸ್ಥರು ಯುರೋಪಿನ ಇತರ ರಾಷ್ಟ್ರಗಳ ವ್ಯಾಪಾರಸ್ಥರಂತೆ ಶ್ರೀಮಂತರಾಗಿರಲಿಲ್ಲ. ಈ ಕಾರಣಕ್ಕಾಗಿ ಬ್ರಿಟನ್ ಮತ್ತು ಜರ್ಮನಿಯಿಂದ ಬಂಡವಾಳವನ್ನು ಪಡೆದುಕೊಂಡರು. ಬಂಡವಾಳದ ಮರುಪಾವತಿಯ ಪ್ರಶ್ನೆ ಬಂದಾಗ ತಮ್ಮ ವಸಾಹತುಗಳಿಂದ ಹೆಚ್ಚುವರಿ ತೆರಿಗೆಯನ್ನು ವಿಧಿಸಿ ಹಣವನ್ನು ಸಂಗ್ರಹಿಸುತ್ತಿದ್ದರು. ಗುಲಾಮ ವ್ಯಾಪಾರ ಪದ್ಧತಿ ಹಿಂದಿನಂತೆಯೇ ಮುಂದುವರಿಯಿತು. ಮೊಜಾಂಬಿಕ್‌ನಿಂದ ದಕ್ಷಿಣ ಆಫ್ರಿಕಾದ ಒಕ್ಕೂಟ ಮತ್ತು ದಕ್ಷಿಣ ರೊಡೋಶಿಯಾಕ್ಕೆ ಕೆಲಸಗಾರರನ್ನು ರಫ್ತು ಮಾಡಲಾಗುತ್ತಿತ್ತು. ಪ್ರಥಮ ಜಾಗತಿಕ ಯುದ್ಧದ ಸಂದರ್ಭದಲ್ಲಿ ಪೋರ್ಚುಗೀಸರ ವಸಾಹತುಗಳಲ್ಲಿ ದಂಗೆಗಳು ಪ್ರಾರಂಭಗೊಂಡವು. ಗಿನಿಯಾದಲ್ಲಿ ೧೯೧೭, ೧೯೨೫ ಮತ್ತು ೧೯೩೬ರಲ್ಲಿ ಮೂರು ಬಾರಿ ದಂಗೆ ಏರ್ಪಟ್ಟಿತು. ೧೯೨೫ರಲ್ಲಿ ಮೊಜಾಂಬಿಕ್, ೧೯೨೪ ಮತ್ತು ೧೯೨೫ರಲ್ಲಿ ಅಂಗೋಲದಲ್ಲಿ ಕಾರ್ಮಿಕರು ಮತ್ತು ರೈತರು ಪೋರ್ಚುಗೀಸ್ ಆಳ್ವಿಕೆಯ ವಿರುದ್ಧ ಮುಷ್ಕರ ನಡೆಸಿದರು. ೧೯೨೯ರಲ್ಲಿ ಅಂಗೋಲಾದಲ್ಲಿ ರಾಷ್ಟ್ರೀಯ ಆಫ್ರಿಕನ್ ಲೀಗ್ ಮತ್ತು ಸ್ಥಳೀಯರ ಪ್ರಾದೇಶಿಕ ಸಂಸ್ಥೆಗಳು ಸ್ಥಾಪನೆಗೊಂಡವು. ಈ ಸಂಸ್ಥೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವವನ್ನು ಕೊಟ್ಟವು. ೧೯೩೦ರಲ್ಲಿ ಪೋರ್ಚುಗಲ್ ವಸಾಹತು ಕಾಯಿದೆಯೊಂದನ್ನು ಜಾರಿಗೊಳಿಸಿ ವಸಾಹತುಗಳ ಮೇಲಿನ ನೇರ ಆಡಳಿತವನ್ನು ಸಮರ್ಥಿಸಿಕೊಂಡಿತು. ಈ ಕಾಯಿದೆಯ ಪ್ರಕಾರ ಆಫ್ರಿಕನ್ನರು ಅನಾಗರಿಕರು ಮತ್ತು ಪೋರ್ಚುಗೀಸರು ನಾಗರಿಕರು. ೧೯೩೦ ಮತ್ತು ೧೯೩೯ರಲ್ಲಿ ಅಂಗೋಲದಲ್ಲಿಯೂ ಪೋರ್ಚುಗೀಸರ ವಿರುದ್ಧ ಕ್ರಾಂತಿ ಉಂಟಾಯಿತು.

ಆಫ್ರಿಕಾದ ವಿಭಜನೆಯಲ್ಲಿ ಪಾಲ್ಗೊಂಡ ಯುರೋಪಿನ ರಾಷ್ಟ್ರಗಳಲ್ಲಿ ಇಟಲಿ ಕಡೆಯ ರಾಷ್ಟ್ರ. ಇಟಲಿ ದೇಶದ ವಸಾಹತುಗಳಾಗಿದ್ದ ಸೊಮಾಲಿಯಾ, ಇರಿಟ್ರ್ಯ, ನೈಲ್ ಪ್ರದೇಶ, ಟ್ರಿಪೋಲಿ, ಅಬಿಸೀನಿಯಾ ಮತ್ತು ಲಿಬಿಯಾಗಳಲ್ಲಿ ೧೯೧೪ರಿಂದ ೧೯೪೦ರವರೆಗೆ ಅನೇಕ ಕ್ರಾಂತಿಕಾರಿ ಬೆಳವಣಿಗೆಗಳು ಉಂಟಾದವು. ಸೊಮಾಲಿಯಾವನ್ನು ಬ್ರಿಟನ್, ಫ್ರಾನ್ಸ್ ಮತ್ತು ಇಟಲಿ ದೇಶಗಳು ಹಂಚಿಕೊಂಡಿದ್ದವು. ೧೯೨೫ ರಿಂದ ೧೯೨೭ರವರೆಗೆ ಮಹಮ್ಮದ್ ಹಸನ್‌ನ ನೇತೃತ್ವದಲ್ಲಿ ಸೊಮಾಲಿಯಾದಲ್ಲಿ ಇಟಲಿ ವಿರೋಧಿ ಕ್ರಾಂತಿಗಳು ನಡೆದವು. ಇದೇ ರೀತಿಯ ಬೆಳವಣಿಗೆಗಳನ್ನು ನಾವು ಇಟಲಿಯ ಅಧೀನದಲ್ಲಿದ್ದ ಇತರ ಪ್ರದೇಶ ಗಳಲ್ಲಿಯೂ ಕಾಣಬಹುದು. ಇಪ್ಪತ್ತನೆಯ ಶತಮಾನದ ದ್ವಿತೀಯಾರ್ಧದಲ್ಲಿ ಈ ಪ್ರದೇಶ ಗಳು ಸ್ವತಂತ್ರಗೊಂಡವು. ಆಫ್ರಿಕಾದ ಕಾಂಗೋ ಪ್ರದೇಶದ ಮೇಲೆಯೇ ತನ್ನ ಗಮನವನ್ನು ಕೇಂದ್ರೀಕರಿಸಿಕೊಂಡಿದ್ದ ಬೆಲ್ಜಿಯಂ ಇನ್ನಿತರ ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಸೇರಿಸಿಕೊಂಡಿತು. ಇವುಗಳಲ್ಲಿ ರುವಾಂಡಾ ಮತ್ತು ಉರುಂಡಿಗಳು ಪ್ರಮುಖವಾದವು. ಪ್ರಥಮ ಜಾಗತಿಕ ಯುದ್ಧದ ನಂತರ ಬೆಲ್ಜಿಯಂ ಕಾಂಗೋದಲ್ಲಿ ಗಣಿಗಾರಿಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿತು. ಅದೇ ರೀತಿ ತಮ್ಮ ಆಸಕ್ತಿ ಮತ್ತು ಬೇಡಿಕೆಗೆ ಅನುಗುಣವಾದ ವ್ಯವಸಾಯ ಪದ್ಧತಿಯನ್ನು ಕಾಂಗೋದಲ್ಲಿ ಜಾರಿಗೆ ತರಲಾಯಿತು. ಕೈಗಾರಿಕಾ ಕ್ಷೇತ್ರದಲ್ಲೂ ಕಾಂಗೋದ ಕಾರ್ಮಿಕರು ವಸಾಹತುಗಾರರನ್ನೇ ಆಶ್ರಯಿಸಬೇಕಿತ್ತು. ಬೆಲ್ಜಿಯಂನ ವಸಾಹತು ಕೌನ್ಸಿಲ್‌ನಲ್ಲಿ ಕಾಂಗೋದ ಪ್ರತಿನಿಧಿಗಳಿಗೆ ಸ್ಥಾನವಿರಲಿಲ್ಲ. ನಗರ ಪ್ರದೇಶಗಳಲ್ಲಿಯೂ ಆಫ್ರಿಕನ್ನರು ಮುಖ್ಯ ಕೇಂದ್ರಗಳಲ್ಲಿ ವಾಸಿಸುತ್ತಿದ್ದರೆ ಆಫ್ರಿಕನ್ನರು ಕೊಳಚೆ ಪ್ರದೇಶಗಳಲ್ಲಿ ವಾಸಿಸಬೇಕಾಗಿತ್ತು.

ಕಿಂಬಾಂಗು ಚಳವಳಿ

ಕಾಂಗೋದಲ್ಲಿ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ನಡೆದ ಪ್ರಮುಖ ಘಟನೆಯೆಂದರೆ ಕಿಂಬಾಂಗು ಚಳುವಳಿ. ಇದೊಂದು ಧಾರ್ಮಿಕ ಸಂಘಟನೆಯಾಗಿದ್ದು ಸ್ಥಳೀಯ ಧಾರ್ಮಿಕ ಮುಖಂಡ ಕಿಂಬಾಂಗು ಇದರ ನೇತೃತ್ವವನ್ನು ವಹಿಸಿದ. ‘‘ಕಾಂಗೋ ಕಾಂಗೋದ ಜನರಿಗೆ’’ ಎನ್ನುವುದು ಈ ಚಳುವಳಿಯ ಮುಖ್ಯ ಪ್ರಣಾಳಿಕೆಯಾಗಿತ್ತು. ಕೃಷಿಕರು ಮತ್ತು ಕೈಗಾರಿಕಾ ಕಾರ್ಮಿಕರು ಈ ಚಳುವಳಿಯಲ್ಲಿ ಪಾಲ್ಗೊಂಡರು. ಬೆಲ್ಜಿಯಂನ ವ್ಯಾಪಾರ ಮತ್ತು ರಾಜ್ಯವಿಸ್ತಾರದ ಧೋರಣೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಕಿಂಬಾಂಗು ಚಳುವಳಿಯು ಹೊಂದಿತ್ತು. ಅದೇ ರೀತಿ ಬಿಳಿಯರ ಧಾರ್ಮಿಕ ನೀತಿಯನ್ನು ತಡೆಗಟ್ಟುವ ಯೋಜನೆಯನ್ನು ಈ ಚಳುವಳಿ ಹಾಕಿಕೊಂಡಿತು. ಆದರೆ ೧೯೨೧ರಲ್ಲಿ ಬೆಲ್ಜಿಯಂ ಸರಕಾರ ಕಿಂಬಾಂಗು ಚಳುವಳಿಯನ್ನು ಹತ್ತಿಕ್ಕಿತು. ಈ ಚಳುವಳಿಯ ಮುಖಂಡ ಕಿಂಬಾಂಗುವನ್ನು ಸೆರೆಹಿಡಿದು ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಕಿಂಬಾಂಗು ಚಳುವಳಿಯ ಮಾದರಿಯ ಇನ್ನಿತರ ಚಳುವಳಿಗಳು ಪ್ರಾರಂಭಗೊಂಡರೂ ಬೆಲ್ಜಿಯಂನ ಸಾಮ್ರಾಜ್ಯಶಾಹಿ ನೀತಿಗೆ ಸಿಲುಕಿ ವಿಫಲಗೊಂಡವು. ೧೯೩೧ರಲ್ಲಿ ಕಾಂಗೋ ಪ್ರದೇಶದಲ್ಲಿ ನಡೆದ ಗಲಭೆ ರಕ್ತಪಾತದಲ್ಲಿ ಕೊನೆಗೊಂಡಿತು. ಪ್ರಥಮ ಜಾಗತಿಕ ಯುದ್ಧದ ನಂತರ ಏರ್ಪಟ್ಟ ಪ್ಯಾರಿಸ್ ಶಾಂತಿ ಒಪ್ಪಂದದ ಪ್ರಕಾರ ರುವಾಂಡಾ ಮತ್ತು ಉರುಂಡಿಯನ್ನು ಬೆಲ್ಜಿಯಂನ ಆಧೀನಕ್ಕೆ ಬಿಟ್ಟುಕೊಡಲಾಯಿತು. ೧೯೨೫ರಲ್ಲಿ ಬೆಲ್ಜಿಯಂ ಹೊರಡಿಸಿದ ಕಾಯಿದೆಯ ಪ್ರಕಾರ ರುವಾಂಡಾ ಮತ್ತು ಉರುಂಡಿಗಳನ್ನು ಬೆಲ್ಜಿಯಂನ ಕಾಂಗೋದೊಡನೆ ವಿಲೀನಗೊಳಿಸಲಾಯಿತು. ಈ ಎರಡೂ ಪ್ರದೇಶಗಳಲ್ಲಿನ ಶ್ರೀಮಂತವರ್ಗ ಬೆಲ್ಜಿಯಂ ಸರಕಾರದ ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸಿದ್ದೇ ವಸಾಹತು ಆಳ್ವಿಕೆ ಬಲಗೊಳ್ಳುವುದಕ್ಕೆ ಮೂಲ ಕಾರಣ.

ಆಫ್ರಿಕಾ ಖಂಡವನ್ನು ತಮ್ಮ ಉದ್ದೇಶ ಈಡೇರಿಕೆಗಾಗಿ ವಿಭಜಿಸಿಕೊಂಡ ಯುರೋಪಿನ ರಾಷ್ಟ್ರಗಳು ಎರಡು ಜಾಗತಿಕ ಯುದ್ಧಗಳ ನಡುವಿನ ಅವಧಿಯಲ್ಲಿ ಅನೇಕ ರೀತಿಯ ಕಷ್ಟ-ನಷ್ಟಗಳನ್ನು ಎದುರಿಸಬೇಕಾಗಿ ಬಂತು. ಈ ಅವಧಿಯಲ್ಲಿ ಆಫ್ರಿಕನ್ನರಲ್ಲಿ ತಮ್ಮ ತಾಯ್ನಡಿನ ಬಗ್ಗೆ ಪ್ರೀತಿ ಮತ್ತು ಅರಿವು ಮೂಡಲಾರಂಭಿಸಿತು. ಆಫ್ರಿಕಾದ ಎಲ್ಲ ಭೂಪ್ರದೇಶಗಳಲ್ಲಿಯೂ ತಮ್ಮ ನೇರ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸುವ ದೃಢ ವಿಶ್ವಾಸವನ್ನು ಯುರೋಪಿನ ರಾಷ್ಟ್ರಗಳು ಹೊಂದಿದ್ದವು. ಇದೇ ಹಿನ್ನೆಲೆಯಲ್ಲಿ ಕಂದಾಯದ ದರವನ್ನು ಹೆಚ್ಚಿಸಲಾಯಿತು. ಇದರಿಂದಾಗಿ ಕಾರ್ಮಿಕರ ಸ್ಥಿತಿ ಹಿಂದಿಗಿಂತಲೂ ಕೀಳಾಯಿತು. ಅರಸು ಮನೆತನಗಳ ಸ್ಥಾನವನ್ನು ಸಾಮಾನ್ಯ ಪ್ರಜೆಯ ಮಟ್ಟಕ್ಕೆ ನೀಡಬೇಕೆಂದು ಗೊತ್ತುಪಡಿಸಲಾಯಿತು. ಈ ಕಾರಣಕ್ಕಾಗಿಯೇ ೧೯೧೪ರಿಂದ ೧೯೪೦ರ ಅವಧಿಯಲ್ಲಿ ರೈತ ಹೋರಾಟಗಳು, ಕೈಗಾರಿಕಾ ಕಾರ್ಮಿಕರ ಮುಷ್ಕರಗಳೂ, ಬುಡಕಟ್ಟು ಜನರ ಬಂಡಾಯಗಳು ಆಗಾಗ್ಗೆ ಜರುಗತೊಡಗಿದವು ಮತ್ತು ಈ ಉದ್ದೇಶಕ್ಕಾಗಿ ಅನೇಕ ಸಂಘ-ಸಂಸ್ಥೆಗಳು ಹುಟ್ಟಿಕೊಂಡವು. ವಸಾಹತು ಆಡಳಿತದ ವಿರುದ್ಧ ಭುಗಿಲೆದ್ದ ಈ ಎಲ್ಲಾ ಆಂದೋಲನಗಳು. ಯುರೋಪಿಯನ್ನರ ವಿರುದ್ಧ ಆಫ್ರಿಕಾದ ಜನರಲ್ಲಿ ದ್ವೇಷ ಭಾವನೆ ಎಷ್ಟು ಆಳವಾಗಿ ಬೇರು ಬಿಟ್ಟಿದ್ದಿತೆಂಬುದನ್ನು ತಿಳಿಸುತ್ತದೆ. ಇದು ಆಫ್ರಿಕಾದ ರಾಷ್ಟ್ರೀಯ ವಿಮೋಚನಾ ಚಳುವಳಿಯ ಪ್ರಾಥಮಿಕ ಹಂತವಾಗಿದ್ದು ಎರಡನೆಯ ಜಾಗತಿಕ ಯುದ್ಧದ ನಂತರ ಆಫ್ರಿಕಾದ ದೇಶಗಳು ಸ್ವತಂತ್ರಗೊಂಡವು.

 

ಪರಾಮರ್ಶನ ಗ್ರಂಥಗಳು

೧. ಪೀಟರ್ ಮಾನ್ಸ್ ಫೀಲ್ಡ್,  ೧೯೭೧. ದಿ ಬ್ರಿಟಿಷ್ ಇನ್ ಜಿಪ್ಟ್, ವ್ವೀಡನ್ ಫೀಲ್ಡ್ ಮತ್ತು ನಿಕೋಲ್‌ಸನ್.

೨. ರೋಬರ್ಟ್ಸ್, ಎ.ಡಿ., ೧೯೭೫. ದಿ ಕೇಂಬ್ರಿಡ್ಜ್ ಹಿಸ್ಟರಿ ಆಫ್ ಆಫ್ರಿಕಾ ೧೯೦೫, ೧೯೪೦, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್.

೩. ಜಾನ್ ಆರ್ಮ್‌ಸ್ಟ್ರಾಂಗ್ ಎ., ೧೯೮೨. ನೇಶನ್ಸ್ ಬಿಫೋರ್ ನೇಶನಲಿಸಂ, ಚಾಪೆಲ್ ಹಿಲ್; ಯೂನಿವರ್ಸಿಟಿ ಆಫ್ ಎನ್.ಪಿ. ಪ್ರೆಸ್.

೪. ಲೇಪಿಂಗ್ ಬ್ರಿಯಾನ್, ೧೯೮೬. ಎಪಾರ್‌ತ್ಯೆಡ್ ಎ ಹಿಸ್ಟರಿ, ಲಂಡನ್: ಕೋಲಿನ್ಸ್ ಪಬ್ಲಿಷಿಂಗ್ ಗ್ರೂಪ್.

೫. ಡೆವನ್‌ಪೋರ್ಟ್ ಟಿ.ಆರ್., ೧೯೮೪. ಸೌತ್ ಆಫ್ರಿಕಾ, ಎ ಮಾಡರ್ನ್ ಹಿಸ್ಟರಿ, ಮೆಕ್ ಮಿಲನ್.

೬. ಮೊನಿಕಾ ವಿಲ್ಸನ್  ಮತ್ತು ಲಿಯೋನಾರ್ಡ್ ಥೋಮ್ಸನ್ (ಸಂ), ೧೯೭೧. ಅಕ್ಸ್‌ಫರ್ಡ್ ಹಿಸ್ಟರಿ ಆಫ್ ಸೌತ್ ಆಫ್ರಿಕಾ, ಸಂಪುಟ ೨, ೧೮೭೦-೧೯೬೬, ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್.