ರಾಜಕೀಯ ನಿವೃತ್ತಿ

ನೆಲ್ಸನ್ ಮಂಡೇಲಾ ಅವರು ಪ್ರಿಟೋರಿಯಾ ಸರಕಾರದ ಕಪಿಮುಷ್ಟಿಯಿಂದ ಬಹುಸಂಖ್ಯಾತ ದಕ್ಷಿಣ ಆಫ್ರಿಕಾ ಜನತೆಯನ್ನು ತಮ್ಮ ಆಚಲ ಹೋರಾಟದಿಂದ ಬಿಡುಗಡೆ ಗೊಳಿಸಿದರು. ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಂಡ ದಕ್ಷಿಣ ಆಫ್ರಿಕಾದ ಮೊಟ್ಟಮೊದಲ ಚುನಾಯಿತ ಅಧ್ಯಕ್ಷರಾಗಿ ನೆಲ್ಸನ್ ಮಂಡೇಲಾ ಅವರು ಕಾರ್ಯಭಾರ ಮಾಡಿದರು. ಅಲ್ಲದೇ ಈ ದೇಶದಲ್ಲಿ ಈವರೆಗೆ ಆಡಳಿತ ನಿರ್ವಹಿಸಿದವರಲ್ಲಿ ಅತೀ ಹಿರಿಯ ವಯಸ್ಸಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದರ ಮೂಲಕ ಇತಿಹಾಸ ನಿರ್ಮಿಸಿದರು. ತಮ್ಮ ಇಳಿವಯಸ್ಸಿನ ೭೫ರ ವಸಂತದಲ್ಲಿ ಅಧ್ಯಕ್ಷ ಗಾದಿ ಏರಿದ ಇವರು ಪ್ರಜಾಸತ್ತಾತ್ಮಕ ಧೋರಣೆಗಳಿಂದ ಹೆಸರುವಾಸಿಯಾಗಿದ್ದಾರೆ. ೧೯೯೪ ರಿಂದ ೧೯೯೯ರ ವರೆಗೆ ಅಧಿಕಾರ ನಿರ್ವಹಿಸಿದ ನೆಲ್ಸನ್ ಮಂಡೇಲಾ ಅವರು ತಾವು ಈ ಹಿಂದೆ ಜನತೆಗೆ ಕೊಟ್ಟ ಮಾತಿನಂತೆ ಎರಡನೆಯ ಅವಧಿಗೆ ಅಧಿಕಾರವನ್ನು ವಹಿಸಿಕೊಳ್ಳದೇ ಮುಂದಿನ ಆಡಳಿತಗಾರರಿಗೆ ಮಾದರಿಯಾಗಿ ನಿಂತರು. ತಮ್ಮ ಉತ್ತರಾಧಿಕಾರಿ ಥಾಬೋ ಬೆಕಿ ಅವರಿಗೆ ೧೯೯೯ರಲ್ಲಿ ತಾವು ಹೊಂದಿದ ಅಧ್ಯಕ್ಷಗಾದಿಯ ಅಧಿಕಾರ ಬಿಟ್ಟುಕೊಟ್ಟರು. ಈ ಹುದ್ದೆಯಿಂದ ನಿವೃತ್ತಿ ಆದ ನಂತರ ತಮ್ಮ ಮುಂದಿನ ಬದುಕಿನ ದಿನಗಳನ್ನು ರಷ್ಯಾದ ಬಡತನ, ವರ್ಣಭೇದ ನೀತಿ ಹಾಗೂ ಏಡ್ಸ್ ನಂತಹ ಮಹಾರೋಗಗಳ ನಿವಾರಣೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟವನ್ನು ಕೈಗೊಂಡು ಆದರ್ಶಪ್ರಾಯರಾದರು. ಲಕ್ಷಾನು ಸಂಖ್ಯೆಯ ಚಿಕ್ಕ ಮಕ್ಕಳ ಭವಿಷ್ಯದ ಬಗೆಗೆ ಕಾಳಜಿ ಮೂಲಕ ಕ್ರಮವಹಿಸುವ ಹಲವು ದತ್ತಿ ನಿಗಮಗಳನ್ನು ಸಹ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಹಲವಾರು ಆಟಗಳ ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ಆಯೋಜಿಸಿದ್ದಾರೆ. ಅನಾಥ ಹಾಗೂ ಗತಿ ಇಲ್ಲದೇ ತಿರುಗುವ ಮಕ್ಕಳ ಭವಿಷ್ಯಕ್ಕಾಗಿ ವಿವಿಧ ಯೋಜನೆಗಳನ್ನು ನಿರಂತರವಾಗಿ ಹಾಕಿಕೊಳ್ಳುತ್ತಿದ್ದಾರೆ. ಮಾನವೀಯತೆಯ ಹಿನ್ನೆಲೆ ಇಟ್ಟುಕೊಂಡು ಕಾಳಜಿ ಪೂರಕವಾಗಿ ಕೆಲಸ ಮಾಡುತ್ತಿರುವ ನೆಲ್ಸನ್ ಮಂಡೇಲಾ ಅವರು ೨೦೦೬ರಲ್ಲಿ ಜರುಗಿದ ಚಳಿಗಾಲದ ಓಲಂಪಿಕ್ ಪಂದ್ಯಾವಳಿಯ ಉದ್ಘಾಟನಾ ಭಾಷಣ ಮಾಡುತ್ತಾ ಜಗತ್ತಿನ ಮಹಾಜನತೆಯು ಹೊಂದುವ ಎಲ್ಲ ಬಗೆಯ ದೃಷ್ಟಿಕೋನವು ‘‘ಮಾನವೀಯತೆ’’ ನೆಲೆಯಲ್ಲಿ ನೆಲೆಗೊಳ್ಳಬೇಕಾಗಿರುವ ಅವಶ್ಯಕತೆಯನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಮಾನವರ ಬದುಕು ಒಂದು ನಿಯಮಬದ್ಧ ಆಟದ ತರಹ.  ಆದ್ದರಿಂದ ಈ ಸಂದರ್ಭದಲ್ಲಿ ತಮ್ಮ ಜಯದ ಆಟಕ್ಕಾಗಿ ಮಾತ್ರ ಎಲ್ಲರೂ ಕೆಲವು ನಿಮಿಷಗಳ ವರೆಗೆ  ಪ್ರತಿಸ್ಪರ್ಧಿಗಳಾಗಿರುತ್ತಾರೆ. ಉಳಿದ ಎಲ್ಲ ದಿನಗಳಲ್ಲಿ ಅವರು ಮಾನವೀಯತೆ ಮರೆಯು ತ್ತಾರೆ ಎಂಬ ದೂರದೃಷ್ಟಿಯಿಂದೊಕೂಡಿದೊದೃಷ್ಟಾಂತ ಕೊಡುವುದರ ಮೂಲಕ ಮಾನವೀಯತೆಯ ರಕ್ಷಣೆಗಾಗಿ ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಕಳಕಳಿಯಿಂದ ಮನವಿ ಮಾಡಿಕೊಂಡರು.

ಅನಾರೋಗ್ಯದ ವದಂತಿ

೨೦೦೧ರಲ್ಲಿ ಮಂಡೇಲಾ ಅವರಿಗೆ ಕ್ಯಾನ್ಸ್‌ರ ರೋಗ ತಗಲಿರುವ ಬಗೆಗಿನ ವಿಷಯವನ್ನು ತುಂಬಾ ಪೈಪೋಟಿಯಿಂದ ಮಾಧ್ಯಮಗಳು ಅವರಿಗೆ ಇಷ್ಟವಾಗಲಾರದ ವಿಷಯವನ್ನು  ಬಿತ್ತರಿಸಿದವು. ಸುಮಾರು ಏಳು ವಾರಗಳ ಕಾಲ ಆರೈಕೆ ಪಡೆದ ಅವರು ತಮ್ಮ ರಾಜಕೀಯ ಪ್ರವೃತ್ತಿಗೆ ವಿದಾಯ ಹೇಳುವ ಮಾತುಗಳನ್ನಾಡಿದರು. ಅಲ್ಲದೇ ತಮ್ಮ ದೇಹಾರೋಗ್ಯವು ದಿನದಿನಕ್ಕೆ ಕ್ಷೀಣಿಸುತ್ತಿರುವುದರಿಂದ ೨೦೦೪ರ ಜೂನ್‌ನಲ್ಲಿ ಅವರು ಸಾರ್ವಜನಿಕ ಜೀವನದಿಂದ ತಮ್ಮ ೮೫ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದರು. ಈ ಮೊದಲು ದೇಹಾರೋಗ್ಯ ಕೆಟ್ಟಿರುವ ಸಂಗತಿಗಳನ್ನು ನೆಪ ಮಾಡಿಕೊಂಡು ಅವರು ಮರಣ ಹೊಂದಿದರು ಎಂಬ ಸುಳ್ಳು ಸುದ್ದಿಗಳು ಹುಟ್ಟಿಕೊಂಡವು. ಅವರ ಸಾವಿನ ಬಗೆಗೆ ಹಲವಾರು ವದಂತಿಗಳು ಹಬ್ಬಿ ಅನೇಕ ತಲ್ಲಣಗಳನ್ನು ಉಂಟು ಮಾಡಿದವು. ೨೦೦೩ರಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಟಿ.ವಿ ಪ್ರಸಾರವಾಹಿನಿಯು ಅವರ ಸಾವಿನ ಬಗೆಗೆ ಅನೇಕ ಸುದ್ದಿಗಳನ್ನು ಬಿತ್ತರಿಸಿತ್ತು. ಅಲ್ಲದೇ ಮತ್ತೊಮ್ಮೆ ೨೦೦೭ರಲ್ಲಿ ಆಕ್ಸ್ ಎಂಬ ಇಮೇಲ್ ಪೆಟ್ಟಿಗೆಯು ಸಹ ಅವರ ಸಾವಿನ ಬಗೆಗೆ ಕೆಲವು ವದಂತಿಗಳನ್ನು ಹಬ್ಬಿಸಿ ಇಡೀ ವಾತಾವರಣವನ್ನು ಕಲುಷಿತಗೊಳಿಸಿತು. ಜನರನ್ನು ಧೃತಿಗೆಡಿಸಿ ಹಲವಾರು ಅಪಾಯಗಳಿಗೆ ಎಡೆ ಮಾಡಿದವು. ಇದರಿಂದ ಕೆಲವು ಹತ್ಯೆಗಳು ಸಹ ಆಫ್ರಿಕಾದಲ್ಲಿ ನಡೆದವು. ಆದರೆ ಆ ವೇಳೆಗೆ ಅವರು ಮೊಜಾಂಬಿಕ್ ದೇಶದಲ್ಲಿ ವಿಶ್ರಾಂತಿಯನು್ನ ಪಡೆಯುತ್ತಿದ್ದ ಸುದ್ದಿಗಳು ಚಿತ್ರ ಸಹಿತ ಪ್ರಕಟವಾಗಿ ಎದ್ದಿರುವ ಆತಂಕವನ್ನು ಕಡಿಮೆಗೊಳಿಸಿತು. ಏನೆಲ್ಲಾ ಗಾಳಿ ಸುದ್ದಿಗಳು ಅವರ ಬಗೆಗೆ ಹರಡಿದ್ದರೂ ಅವರು ಅಚಲವಾಗಿದ್ದರು. ೨೦೦೮ರ ಜುಲೈ ೧೮ರಂದು ತಮ್ಮ ೯೦ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾ ಮುಖ್ಯ ಸಂದೇಶವೊಂದನ್ನು ನೀಡಿದರು. ಜಗತ್ತಿನ ಎಲ್ಲ ದೇಶಗಳಲ್ಲಿರುವ ಶ್ರೀಮಂತರು, ಎಲ್ಲ ಬಡವರ ಬವಣೆಗಳ ಬಗೆಗೆ ಕಾಳಜಿ ಹಾಗೂ ಅವರ ಉನ್ನತಿಯ ಕಡೆಗೆ ಸದಾ ಯೋಚಿಸಬೇಕೆಂಬ ಮಹತ್ವದ ಹೇಳಿಕೆಯನ್ನು ತಾವು ಹೊಂದಿದ್ದ ಕಾಳಜಿಯನ್ನು ಪುನರಚ್ಚೀಸಿದರು.

ವಯೋವೃದ್ಧ ಮುತ್ಸದ್ದಿ ಸಮೂಹ

೨೦೦೭ರಲ್ಲಿ ನೆಲ್ಸನ್ ಮಂಡೇಲಾ, ಗ್ರಾಕ್ ಮಕೆಲ್ ಹಾಗೂ ಡೆಸಮಂಡ್ ಟುಟು ಅವರು ಸೇರಿ ಅಂತಾರಾಷ್ಟ್ರೀಯ ವಯೋವೃದ್ಧ ಮುತ್ಸದ್ದಿಗಳ ಸಮೂಹ ಕಟ್ಟಿಕೊಂಡಿದ್ದಾರೆ. ಅವರ ೮೯ನೇ ಹುಟ್ಟುಹಬ್ಬದ ದಿನದಂದು ರಚನೆಗೊಂಡ ಈ ಸಂಘವು ಜಾಗತಿಕ ಮಟ್ಟ ದಲ್ಲಿ ತಲೆದೋರುವ ಮಾನವ ವಿರೋಧಿ ಕೃತ್ಯಗಳ ಬಗೆಗೆ ತನ್ನ ಪ್ರತಿಭಟನೆಯ ಹೇಳಿಕೆಗಳನ್ನು ನೀಡಿ ಶಾಂತಿ ಸಂದೇಶಗಳನ್ನು ಬಿತ್ತರಿಸುತ್ತದೆ. ಆರ್ಚ್‌ಬಿಷಪ್ ಟುಟು ಈ ಸಂಘದ ಮುಖ್ಯಸ್ಥರಾಗಿದ್ದಾರೆ. ಗ್ರಾಕ್ ಮೆಕಲ್, ಕೊಫಿ ಅನಾನ್, ಇಲಾ ಭಟ್, ಹರ್ಲಮ್ ಬ್ರಡೆಂಟ್‌ಲ್ಯಾಂಡ್, ಜಿಮ್ಮಿಕಾರ್ಟರ್, ಲಿ ಝೆುಯಾಂಗ್, ಮ್ಯಾರಿ ರಾಬಿನ್‌ಸನ್ ಮತ್ತು ಮಹ್ಮದ್ ಯುನಿಸ್ ಅವರಂಥಹ ಅಂತಾರಾಷ್ಟ್ರೀಯ ಖ್ಯಾತಿಯ ಚಿಂತಕರು ಈ ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ. ಯಾವುದೇ ಅಂಜಿಕೆ, ಅಳುಕಿಲ್ಲದೇ ಈ ಸಂಘಟನೆಯು ಜಗತ್ತಿನ ಯಾವುದೇ ಭಾಗದಲ್ಲಿ ಮಾನವನ ಜೀವ ವಿರೋಧಿಯಾಗಿ ನಡೆಯುವ ಎಲ್ಲ ಕುಕೃತ್ಯಗಳನ್ನು ಖಂಡಿಸುತ್ತದೆ. ಅಲ್ಲದೇ ಪ್ರತಿಭಟನಾ ಹೇಳಿಕೆ ನೀಡಿ ಜಗತ್ತನ್ನು ಜಾಗೃತವಾಗಿಡುವ ಪ್ರಯತ್ನದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಮಹಾಮಾರಿ ಏಡ್ಸ್‌ನ ವಿರುದ್ಧ ಚಳುವಳಿೊ

ಭೌಗೋಳಿಕ ಎಲ್ಲೆ ಇಲ್ಲದೇ ವಯಸ್ಸಿನ ಮಿತಿಗಳನ್ನು ಪರಿಗಣಿಸದೆ ಅತೀ ಭಯಾನಕ ವಾಗಿ ಏಡ್ಸ್ ಮಹಾಮಾರಿಯು ಇಡೀ ಆಫ್ರಿಕಾ ಖಂಡವನ್ನು ಪೀಡಿಸಲು ಪ್ರಾರಂಭಿಸಿದೆ. ಇದರ ತೀವ್ರತೆ ಎಷ್ಟಿದೆ ಅಂದರೆ ಈ ಮಹಾರೋಗವು ಕೆಲವೇ ವರ್ಷಗಳಲ್ಲಿ ಇಡೀ ಆಫ್ರಿಕಾ ಖಂಡದ ಜನಸಂಖ್ಯೆಯನ್ನು ಅರ್ಧಕ್ಕೆ ತಂದು ಇಳಿಸುವ ಕಾರ್ಯದಲ್ಲಿ ಯಶಸ್ವಿಯಾಗುವುದರಲ್ಲಿ ಯಾವ ಸಂಶಯವಿಲ್ಲ. ಇಂಥ ಮಹಾರೋಗದ ತಡೆಗಟ್ಟುವಿಕೆಗೆ ಬೇಕಾದ ತಿಳುವಳಿಕೆ ಕಲ್ಪಿಸುವಲ್ಲಿ ನೆಲ್ಸನ್ ಮಂಡೇಲಾ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ಪ್ರಾರಂಭಿಸಿದ್ದಾರೆ. ಜಗತ್ತಿನ ಎಲ್ಲ ಜನರಲ್ಲಿ ಜಾಗೃತಿ ಮೂಡಿಸಲು ೨೦೦೦ರಲ್ಲಿ ೧೩ನೇ ಅಂತರಾಷ್ಟ್ರೀಯ ಏಡ್ಸ್ ತಡೆಗಟ್ಟುವ ನಿಯಮಾವಳಿಗಳನ್ನು ರೂಪಿಸುವ ಸಭೆಯನ್ನು ದ.ಆಫ್ರಿಕಾದ ಡರ್ಬನ್‌ನಲ್ಲಿ ಮಂಡೇಲಾರ ಮುತುವರ್ಜಿಯಿಂದಲೇ ನಡೆಸಲಾಯಿತು. ಇದನ್ನು ಉದ್ದೇಶಿಸಿ ಮಾತನಾಡುತ್ತಾ ಮೂರನೆಯ ಜಗತ್ತಿನಲ್ಲಿ ತಲೆದೋರಿರುವ ಈ ಮಹಾರೋಗವನ್ನು ಒಗ್ಗಟ್ಟಿನಿಂದ ಎಲ್ಲ ದೇಶಗಳು ಸೇರಿ ನಿಯಂತ್ರಿಸಬೇಕೆಂದು ಕರೆ ನೀಡಿದರು. ೨೦೦೪ರಲ್ಲಿ ನಡೆದ ಬ್ಯಾಂಕ್‌ಕ್‌ನಲ್ಲಿಯೇ ಇಂಥದ್ದೇ (೧೫ನೆಯ) ಸಮ್ಮೇಳನವನ್ನೂ ಉದ್ದೇಶಿಸಿ ಇಡೀ ಜಗತ್ತಿಗೆ ಮತ್ತೆ ಏಡ್ಸ್ ತಡೆಗಟ್ಟುವ ತುರ್ತುಕ್ರಮಗಳ ಬಗೆಗೆ ಗಂಭೀರವಾದ ಸಂದೇಶ ನೀಡಿದರು. ಇದೇ ಮಹಾರೋಗದಿಂದ ಮಂಡೇಲಾರ ಮಗ ಮ್ಯಾಕ್ಗ್‌ಥೊ ಮಂಡೇಲಾ ಸಹ ೨೦೦೫ರಲ್ಲಿ ನಿಧನ ಹೊಂದಿದ. ಇದು ನೆಲ್ಸನ್ ಮಂಡೇಲಾರನ್ನು ತೀವ್ರವಾಗಿ ಗಾಸಿಗೊಳಿಸಿತು.

ಇರಾಕ ಮೇಲಿನ ದಾಳಿಯ ಬಗೆಗೆ ಮಂಡೇಲಾ ತೆಳಿದ ನಿಲುವುಗಳು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕಾ ಮಾಡುತ್ತಿದ್ದ ಎಡಬಿಡಂಗಿತನವನ್ನು ನೆಲ್ಸನ್ ಮಂಡೇಲಾ ತೀವ್ರವಾಗಿ ಖಂಡಿಸಿದರು. ೨೦೦೨ ಮತ್ತು ೨೦೦೩ರಲ್ಲಿ ಅಮೆರಿಕಾ ಹಾಗೂ ಅದರ ಮಿತ್ರರಾಷ್ಟ್ರಗಳು ಸೇರಿ ಇರಾಕಿನ ಮೇಲೆ ಏಕಾಏಕಿಯಾಗಿ ಮಾಡಿದ ದಾಳಿಗಳನ್ನು ತೀವ್ರವಾಗಿ ವಿರೋಧಿಸಿ ಅಂಥ ದಾಳಿಯನ್ನು ತತ್‌ಕ್ಷಣವೇ ನಿಲ್ಲಿಸುವಂತೆ ಒತ್ತಡ ಹೇರಿದರು. ಜಾರ್ಜ್‌ಬುಶ್ ಆಡಳಿತ ತೆಗೆದುಕೊಳ್ಳುತ್ತಿದ್ದ ನಿಲುವುಗಳನ್ನು ಹಾಗೂ ಅಮೆರಿಕಾದ ಒತ್ತಡಗಳು ವಿಶ್ವಸಂಸ್ಥೆ ಸಂಘಟನೆಯನ್ನು ತಪ್ಪುದಾರಿಗೆ ಎಳೆಯುತ್ತಿರುವ ವಿಚಾರವನ್ನು ಬಹಿರಂಗವಾಗಿ ಟೀಕಿಸಿದರು. ಅಮೇರಿಕಾದ ಅನತಿಯಂತೆ ವಿಶ್ವಸಂಸ್ಥೆ  ಸಹ ಜನಾಂಗೀಯ ತಾರತಮ್ಯದ ಯುದ್ಧಕ್ಕೆ ಬೆಂಬಲವಾಗಿ ನಿಂತಿರುವ ವಿಷಯಗಳನ್ನು ಅತೀ ಬೇಸರದಿಂದ ಪ್ರತಿಭಟಿಸಿದರು. ಇದೇ ವೇಳೆಗೆ ವಿಶ್ವಸಂಸ್ಥೆಯ ಪ್ರಧಾನಕಾರ್ಯದರ್ಶಿ ಕೋಫಿ ಅನ್ನಾನ್ ಆಗಿದ್ದರು. ಇವರೊಬ್ಬ ಕಪ್ಪು ವರ್ಣೀಯ. ಆದ್ದರಿಂದ ಅಮೆರಿಕಾ ಇಂಥ ದುಷ್ಕೃತ್ಯಗಳನ್ನು ಒಬ್ಬ ಕಪ್ಪುವರ್ಣೀಯನಿಂದ ಮಾಡಿಸಲು ಯಶಸ್ವಿಯಾಗಿದೆ ಎಂದು ಗುರುತರ ಆಪಾದನೆ ಮಾಡಿದರು. ಆದರೆ ಇದೇ ಜಾಗದಲ್ಲಿ ಒಬ್ಬ ಬಿಳಿಯನಿದ್ದಿದ್ದರೆ ಇದನ್ನು ಅಮೆರಿಕಾ ಮಾಡಿಸುತ್ತಿತ್ತೆ? ಎಂಬ ವ್ಯಂಗ್ಯವಾದ ಅಭಿಪ್ರಾಯ ವ್ಯಕ್ತಪಡಿಸಿ ಅಮೆರಿಕಾ ತಾನು ತಾಳಿರುವ ಪೊಲೀಸ್ ಧೋರಣೆಯನ್ನು ಕೈಬಿಡಬೇಕೆಂದು ಪ್ರಬಲವಾಗಿ ಚುಚ್ಚಿದರು. ಬುಷ್ ಆಡಳಿತವನ್ನು ಹಾಗೂ ಅವನ ನೀತಿ-ನಿಯಮಗಳನ್ನು ಅಮೆರಿಕಾದ ಮಹಾಜನತೆ ಖಂಡಿಸಬೇಕೆಂದು ಒತ್ತಾಯಿಸಿದರು. ಒಂದೇ ಶಕ್ತಿ, ಒಬ್ಬನೇ ಅಧಿಕಾರಿ ಹಾಗೂ ಗೊತ್ತು ಗುರಿ ಇಲ್ಲದ ಆಕ್ರಮಣವನ್ನು ನಾನು ಎಂದೆಂದಿಗೂ ಒಪ್ಪುವುದಿಲ್ಲ ಎಂದು ಹೇಳಿ ತಾವು ಹೊಂದಿದ ಪ್ರಜಾಸತ್ತಾತ್ಮಕ ಅಭಿಪ್ರಾಯಗಳಿಗೆ ಕಟೀಬದ್ಧರಾಗಿ ನಿಂತರು. ಜಗತ್ತಿನಲ್ಲಿ ಯಾರ ಮಾತಿಗೂ ಬೆಲೆ ಕೊಡದೇ ಹಿಂಸೆಯನ್ನು ಪ್ರಚೋದಿಸುವ ಏಕೈಕ ದೇಶವೆಂದರೆ ಅದು ಅಮೆರಿಕಾ ಮಾತ್ರವೆಂದು ಕಟುವಾಗಿ ಟೀಕಿಸಿದರು. ಅಲ್ಲದೇ ವಿಶ್ವ ಸಂಸ್ಥೆಯು ಅಮೆರಿಕಾ ಹಾಗೂ ಯುರೋಪ್ ಖಂಡದ ಯುದ್ಧದಾಹಿ ದೇಶಗಳ ಮರ್ಜಿಗೆ ಒಳಗಾಗಿ ಮಾಡುವ ಕೆಲಸಕಾರ್ಯಗಳನ್ನು ಯಾವ ಮುಲಾಜಿಲ್ಲದೇ ಕಟುವಾಗಿ ಟೀಕಿಸಿದರು.

ಇಸ್ಮಾಯಿಲ್ ಅಯೂಬ್‌ರ ಜೊತೆಗಿನ ಗೊಂದಲಗಳು

ಇಸ್ಮಾಯಿಲ್ ಅಯೂಬ್ ಅವರು ಮೂವತ್ತು ವರ್ಷಗಳ ಕಾಲ ನೆಲ್ಸನ್ ಮಂಡೇಲಾ ಅವರಿಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದವರು. ಮಂಡೇಲಾ ಅವರ ಹಸ್ತಾಕ್ಷರ ಮಾರಾಟದ ಹಕ್ಕುಸಾಮ್ಯದ ಸಂಬಂಧವಾಗಿ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಿ ಇದು ಹೈಕೋರ್ಟ್‌ವರೆಗೂ ಹೋಯಿತು. ಇದನ್ನು ನೆಪ ಮಾಡಿಕೊಂಡು ನೆಲ್ಸನ್ ಮಂಡೇಲಾ ಅವರ ಬೆಂಬಲಿಗರು ಮತ್ತು ಹಿತೈಷಿಗಳು ಸ್ಮೆರ್ ನಲ್ಲಿ ನಡೆದ ಘಟನೆಗೆ ನನ್ನನ್ನು ಬಲಿಪಶು ಮಾಡಿದ್ದಾರೆ ಎಂದು ಅಯುಬ್ ಅವರು ಗಂಭೀರವಾಗಿ ಆರೋಪಿಸಿದರು. ೨೦೦೫ ಮತ್ತು ೨೦೦೬ರಲ್ಲಿ ಈ ವಿವಾದ ಹೆಚ್ಚಿನ ತೀವ್ರತೆ ಪಡೆಯಿತು. ಅಯೂಬ್ ಅವರ ಹೆಂಡತಿ ಹಾಗೂ ಮಕ್ಕಳ ಮೇಲೆ ಮಂಡೇಲಾ ಅವರ ಹಿತೈಷಿಗಳು ದೈಹಿಕ ಹಲ್ಲೆ ಮಾಡುವ ಪ್ರಯತ್ನ ಮಾಡಿದರು ಎಂದುೊಮಾಧ್ಯಮಗಳಲ್ಲಿ ಪ್ರಕಟಿಸಿದವು.  ಇಂಥ ವರದಿಗಳು ಇನ್ನೂ ಹೆಚ್ಚಿನ ಚರ್ಚೆಗೆ ಗ್ರಾಸವಾಗುವಂತೆ ಮಾಡಿದವು.

ಈ ಘಟನೆಗೆ ಮುಖ್ಯ ಕಾರಣಗಳೆಂದರೆ, ವಜ್ರದ ಗಣಿಗಾರಿಕೆ. ವ್ಯಾಪಾರಿ ಹ್ಯಾರಿ ಓಪನ್ಹೆರ್ ಅವರು ನೆಲ್ಸನ್ ಮಂಡೇಲಾ ಅವರ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಅನುಕೂಲವಾಗಲೆಂಬ ಹಿನ್ನೆಲೆಯಲ್ಲಿ ಸು.೭ ಲಕ್ಷ ರ‌್ಯಾಂಡ್ ಹಣವನ್ನು ನೀಡಿದ್ದರು. ಇದರ ಸದುಪಯೋಗವಾಗಲೆಂದು ಒಂದು ವಿಶ್ವಸ್ಥ ಮಂಡಳಿಯನ್ನು ಸಹ ರಚಿಸಿದ್ದರು. ಈ ಮಂಡಳಿಯಲ್ಲಿ ಇಸ್ಮಾಯಿಲ್ ಅಯೂಬ್, ಜಾರ್ಜ ಬಿಜೋಸ್ ಹಾಗೂ ವಿಮ್ ಟ್ರೆನ್ ಗೊ ಅವರನ್ನು ಸದಸ್ಯರನ್ನಾಗಿ ಮಾಡಲಾಗಿತ್ತು. ಈ ಸಂಸ್ಥೆಯ ಸದಸ್ಯರಲ್ಲಿ ಒಬ್ಬರಾದ ಇಸ್ಮಾಯಿಲ್ ಅಯೂಬ್ ಮಂಡಳಿಯ ನಿಯಮಗಳ ವಿರುದ್ಧವಾಗಿ ಇವರ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವನ್ನು ಉಳಿದ ಇಬ್ಬರು ಸದಸ್ಯರು ಮಾಡಿದರು. ಇದನ್ನರಿತ ನೆಲ್ಸನ್ ಮಂಡೇಲಾ ಅವರು ಈ ಹಿಂದೆ ಆಯೂಬ್‌ರಿಗೆ ತಮ್ಮ ಹಸ್ತಾಕ್ಷಾರವುಳ್ಳ ಸಂಗತಿಗಳನ್ನು ಮಾರಾಟ ಮಾಡಲು ವಹಿಸಿಕೊಟ್ಟಿದ್ದ ಜವಾಬ್ದಾರಿಯಿಂದ ಅಯೂಬ್‌ರನ್ನು ತೆಗೆದು ಹಾಕಲಾಯಿತು. ಅಲ್ಲದೇ ಅವರು ಈ ಹಿಂದೆ ನೆಲ್ಸನ್ ಮಂಡೇಲಾ ಹಾಗೂ ಸಂಸ್ಥೆಯ ಜೊತೆಗೆ ಹೊಂದಿದ್ದ ಎಲ್ಲ ಸಂಬಂಧಗಳಿಂದ ದೂರ ಮಾಡಲಾಯಿತು. ಹಸ್ತಾಕ್ಷರಕ್ಕೆ ಸಂಬಂಧಿಸಿದ ಸಮಸ್ಯೆ ಹೈಕೋರ್ಟ್‌ವರೆಗೆ ಹೋಗಿದ್ದರಿಂದ ಅಲ್ಲದೇ ತನಗಾದ ಅವಮಾನದಿಂದ ಹೆದರಿ ಮಾನಸಿಕ ಸ್ಥಿರತೆ ಕಳೆದುಕೊಂಡ ಆಯೂಬ್ ನೆಲ್ಸನ್ ಮಂಡೇಲಾ ರನ್ನು ಒಳಗೊಂಡಂತೆ ಈ ಸಂಸ್ಥೆಯಲ್ಲಿದ್ದ ಎಲ್ಲರನ್ನು ಗಂಭೀರವಾಗಿ ಟೀಕೆಗೆ ಒಳಪಡಿಸಿ ದರು. ಅನಾವಶ್ಯಕ ಹೇಳಿಕೆಗಳ ಮೂಲಕ ಪತ್ರಿಕೆಗೆ ತಪ್ಪು ವರದಿ ನೀಡಿ ಸಮಸ್ಯೆಯು ಮತ್ತಷ್ಟು ಬಿಗಾಡಿಯಿಸುವಂತೆ ಮಾಡಿದ. ಇಂಥ ಸುಳ್ಳು ಆರೋಪಗಳನ್ನು ಸಹಿಸದ ಆಫ್ರಿಕನ್‌ರು ಇಂಥ ಹೇಳಿಕೆಗಳು ವಿನಾಕಾರಣ ತಮ್ಮ ನಾಯಕನಿಗೆ ಮಾಡಿದ ಅವಮಾನ ವೆಂದು ತಿಳಿದು ಆಯೂಬ್ ಮೇಲೆ ಹಲ್ಲೆ ಮಾಡುವ ಪ್ರಯತ್ನ ಮಾಡಿದರು. ಉದ್ಭವವಾದ ಇಂಥ ಕೆಟ್ಟ ಹೇಳಿಕೆಗಳು ಹಿರಿಯ ಮುತ್ಸುದ್ದಿಗಳನ್ನು ತೀವ್ರವಾಗಿ ನೋಯುವಂತೆ ಮಾಡಿತು. ಮುಂದಿನ ದಿನಗಳಲ್ಲಿ ಈ ಸಂಬಂಧವಾಗಿ ಕೆಲವು ಕಾನೂನು ರೀತಿಯ ವಿಚಾರಣೆಗಳೂ ನಡೆದು ತಾನು ಮಾಡಿದ ಆಧಾರ ರಹಿತ ಟೀಕೆಗಳು ಹಾಗೂ ವಿಶ್ವಸ್ಥ ಮಂಡಳಿಯಿಂದ  ಮೋಸದ ಮೂಲಕ ಪಡೆದ ೭ ಲಕ್ಷ ರ‌್ಯಾಂಡ್ ಹಣವನ್ನು ಮರಳಿ ಕೊಡಲು ಒಪ್ಪಿ ಮಂಡೇಲಾರಿಗೆ ಹಾಗೂ ಕೋರ್ಟಿಗೆ ಬಹಿರಂಗ ಹಾಗೂ ಬೇಷರತ್ತ ತಪ್ಪೊಪ್ಪಿಗೆಯನ್ನು ಆಯೂಬ್ ಬರೆದುಕೊಟ್ಟರು. ಮುಂದೆ ಉದ್ಭವಿಸಬಹುದಾದ ನಾನಾ ಸಮಸ್ಯೆಗೆ ಆಯೂಬ್ ಕ್ಷಮೆಯಾಚಿಸುವುದರ ಮೂಲಕ ಉದ್ಭವವಾದ ವಿವಾದಕ್ಕೆ ತೆರೆ ಎಳೆದರು.

ಬ್ಲಡ್ ಡೈಮಂಡ್ ಗೊಂದಲಗಳು

ವಜ್ರದ ಗಣಿಗಾರಿಕೆಗೆ ಸಂಬಂಧಿಸಿದಂತೆ ದ.ಆಫ್ರಿಕಾ ದೇಶವು ಜಾಗತಿಕ ಮಟ್ಟದಲ್ಲಿ ತುಂಬಾ ಪ್ರಸಿದ್ದಿಯನ್ನು ಪಡೆದಿದೆ. ಈ ದೇಶದ ವಜ್ರದ ಉತ್ಪಾದನೆಯು ಜಗತ್ತಿನಲ್ಲಿರುವ ಎಲ್ಲ ದೇಶಗಳಲ್ಲಿನ ಉತ್ಪಾದನೆಯನ್ನು ಸರಿಗಟ್ಟುವುದು. ಆದರೆ ಇಲ್ಲಿನ ಗಣಿಗಾರಿಕೆಗೆ ಸಂಬಂಧಿಸಿದ ಬಹುತೇಕ ವ್ಯವಹಾರಗಳು ಮೇಲ್ವರ್ಗ ಹಾಗೂ ಕೆಲವೇ ಶ್ರೀಮಂತರ ಕೈಯಲ್ಲಿ ಕೇಂದ್ರೀಕರಣಗೊಂಡಿವೆ. ಈ ವಲಯದಲ್ಲಿನ ಎಲ್ಲ ಶೋಷಣೆಗಳ ಕುರಿತು ಎಡ್ವರ್ಡ್ ಜಾವಿಕ್, ಬ್ಲಡ್ ಡೈಮಂಡ್ ಎಂಬ ಹೆಸರಲ್ಲಿ ಚಲನಚಿತ್ರ ಮಾಡಿದನು.  ಗಣಿ ಗಾರಿಕೆಯಲ್ಲಿ ದುಡಿಯುವ ಕೂಲಿಕಾರ್ಮಿಕರು ಅದರಲ್ಲೂ ಕಪ್ಪು ವರ್ಣೀಯರು ಯಾವ ರೀತಿ ಇಲ್ಲಿನ ಅಮಾನುಷ ಕೃತ್ಯಗಳಿಗೆ ಬಲಿಯಾಗುತ್ತಾರೆ ಎಂಬುದನ್ನು ತಾನು ತೆಗೆದ ಚಲನಚಿತ್ರದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟ. ಆದರೆ ನೆಲ್ಸನ್ ಮಂಡೇಲಾ ಅವರು ಇದರಲ್ಲಿಯ ಚಿತ್ರಗಳು ವಾಸ್ತವಕ್ಕೆ ದೂರವಾದವು ಎಂಬ ಹಗುರವಾದ ಹೇಳಿಕೆ ನೀಡಿದರು. ಹಾಗೂ ವಜ್ರದ ತಯಾರಿಕೆಗೆ ಸಂಬಂಧಿಸಿದಂತೆ ಚಲನಚಿತ್ರದಲ್ಲಿ ತೋರಿಸಿದ ಅಗಾಧ ಹಿಂಸೆ ಮತ್ತು ಕ್ರೌರ್ಯ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಪ್ರತಿಯಾಗಿ ಅಭಿಪ್ರಾಯಿಸಿದರು. ಅಲ್ಲದೇ ಇದರ ಪರಿಣಾಮದಿಂದ ಜಾಗತಿಕವಾಗಿ ವಜ್ರದ ವಹಿವಾಟು ಕುಸಿದು ಅದು ಪರೋಕ್ಷವಾಗಿ ದ.ಆಫ್ರಿಕಾದ ಆರ್ಥಿಕತೆಯ ಮೇಲೆಯೇ ಕೊಡಲಿಪೆಟ್ಟು ಬೀಳುತ್ತದೆ ಎಂದು ಅಧ್ಯಕ್ಷರಾಗಿ ನೆಲ್ಸನ್ ಮಂಡೇಲಾ ಅಭಿಪ್ರಾಯ ವ್ಯಕ್ತಪಡಿಸಿ ದ್ವಂದ್ವಗಳಿಗೆ ಎಡೆ ಮಾಡಿದರು. ಅವರ ಹೇಳಿಕೆಯನ್ನು ಪತ್ರಿಕೆಗಳು ನಾನಾ ರೀತಿಯಲ್ಲಿ ಅರ್ಥೈಸಿ ಇನ್ನೂ ಗೊಂದಲಗೊಳಿಸಿದವು. ಅಮೆರಿಕಾದ ನ್ಯೂ ರಿಪ್ಲಬಿಕ್ ಅನ್ನುವ ಪತ್ರಿಕೆಯು ವಜ್ರದ ವ್ಯಾಪಾರಿ ಹ್ಯಾರಿ ಓಪನ್ಹೆರ್ ಹಾಗು ನೆಲ್ಸನ್ ಮಂಡೇಲಾ ಅವರು ಜೀವದ ಗೆಳೆಯರು ಅದಕ್ಕಾಗಿ ಅವರು ಗಣಿಗಾರಿಕೆಯಲ್ಲಿ ಸಂಭವಿಸುತ್ತಿರುವ ಹಿಂಸೆಯನ್ನು ಕಂಡು ಕಾಣದಂತೆ ಮರೆ ಮಾಚಿ, ಬೀಸು ಹೇಳಿಕೆ ನೀಡುತ್ತಿದ್ದಾರೆ ಎಂದು ಬರೆದು  ಉದ್ಭವವಾಗಿದ್ದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ  ಮಾಡಿತು. ಹೆಚ್ಚಿನ ಪತ್ರಿಕೆಗಳು ಆಫ್ರಿಕಾ ಸರಕಾರವನ್ನು ಟೀಕಿಸುತ್ತ ಇದು ಸರಕಾರದ ‘‘ರಾಷ್ಟ್ರೀಯ ತುಚ್ಛೀಕರಣ’’ ಎಂದು ಬರೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆಲ್ಸನ್ ಮಂಡೇಲಾರನ್ನು ಟೀಕಿಸಿ ಅವರಿಗಿದ್ದ ಗೌರವವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದವು. ಅಲ್ಲದೇ ತಿಂಗಳಾನುಗಟ್ಟಲೇ ಆರೋಪದ ಕಪ್ಪು ಮಸಿಯನ್ನು ಸರಕಾರದ ಮುಖಕ್ಕೆ ಹಚ್ಚಿ ಕೈ ತೊಳೆದುಕೊಂಡವು. ಇಂಥ ಹೇಳಿಕೆಗಳಿಂದ ನೊಂದ ಮಂಡೇಲಾ ಅವರು ಗಣಿಗಾರಿಕೆಗೆ ಸಂಬಂಧಿಸಿದ ವಿಚಾರಗಳ ಬಗೆಗೆ ಮತನಾಡುವುದನ್ನು ಬಿಟ್ಟರು.

ಜಿಂಬಾಬೆಯ ಅಧ್ಯಕ್ಷ ರಾಬರ್ಟ್ ಮುಗಾಬೆ ಬಗೆಗಿನ ಮಂಡೇಲಾ ಅಭಿಪ್ರಾಯ

ವಸಾಹತುಶಾಹಿ ಇಂಗ್ಲೆಂಡಿನಿಂದ ಬಿಡುಗಡೆಗೊಂಡ ಜಿಂಬಾಬೆಯು ದುರದೃಷ್ಟವಶಾತ್ ೧೯೮೦ರಿಂದ ಅಧ್ಯಕ್ಷ ರಾಬರ್ಟ್ ಮುಗಾಬೆಯವರ ಹಿಡಿತದಲ್ಲಿ ನಲುಗಲಾರಂಭಿಸಿತು. ಅಧ್ಯಕ್ಷರ ಕುಮ್ಮಕ್ಕಿನಿಂದ ಹಲವು ರಾಜಕೀಯ ಕೊಲೆಗಳು, ಸ್ವಜನ ಪಕ್ಷಪಾತ, ವಿಪರೀತ ಭ್ರಷ್ಟಾಚಾರ ಹಾಗೂ ಕ್ರೌರ್ಯಗಳು ಹಿಡಿತವಿಲ್ಲದೇ ವಿಸ್ತರಿಸಿಕೊಂಡಿವೆ. ಇದರಿಂದ ಇಡೀ ದೇಶದ ಆರ್ಥಿಕ ವ್ಯವಸ್ಥೆ ನೆಲಕಚ್ಚಿದೆ. ಮೊದಮೊದಲು ತಾನು ಸಹ ವಸಾಹತುಶಾಹಿಗಳಿಂದ ಬಿಡಿಸಿಕೊಳ್ಳಲು ಮಾಡಿದ ದೀರ್ಘಕಾಲದ ಹೋರಾಟ ವನ್ನು ಮರೆತು ಜಿಂಬಾಬೆಯ ಆಡಳಿತವು ತಾನು ಆಡಳಿತ ವಹಿಸಿಕೊಂಡ ನಂತರ ವಸಾಹತುಶಾಹಿಗಳನ್ನು ಮೀರಿಸುವಷ್ಟು ದಬ್ಬಾಳಿಕೆಯನ್ನು ಮಾಡುತ್ತಿದೆ. ನೆಲ್ಸನ್ ಮಂಡೇಲಾ ಹಾಗೂ ರಾಬರ್ಟ್ ಮುಗಾಬೆ ತಮ್ಮ ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅವಿರತ ಶ್ರಮವಹಿಸಿ ವಿಮೋಚನೆ ಹೋರಾಟವನ್ನು ಯಶಸ್ವಿಗೊಳಿಸಿದ್ದಾರೆ. ಆ ಸಂದರ್ಭದಲ್ಲಿ ಮುಗಾಬೆ ಹಾಗೂ ನೆಲ್ಸನ್ ಮಂಡೇಲಾರ ಸಂಬಂಧ ಬಹಳ ಸುಮಧುರವಾಗಿತ್ತು. ಆದರೆ ಅಧಿಕಾರದ ಪಿಪಾಸೆ ಮುಗಾಬೆ ಅವರನ್ನು ಬದಲಾಯಿಸಿ ರಾಕ್ಷಸನನ್ನಾಗಿ ಮಾಡಿದೆ ಎಂದು ಮಂಡೇಲಾ ಅವರು ಕಟುವಾಗಿ ಟೀಕಿಸಿದ್ದಾರೆ. ೨೦೦೭ರವರೆಗೂ ಮುಗಾಬೆಯ ಮೇಲೆ ಮಂಡೇಲಾ ಅವರು ಅನೇಕ ರಾಜಕೀಯ ಒತ್ತಡಗಳನ್ನು ಹೇರುತ್ತಿದ್ದರು. ಪ್ರಜಾಸತ್ತಾತ್ಮಕ ಆಡಳಿತದ ಬಗೆಗೆ ಅನೇಕ ಬಾರೀ ಮುಗಾಬೆ ಅವರಿಗೆ ಕಿವಿಮಾತನ್ನು ಹೇಳಿ ಬದಲಾಯಿಸುವ ಪ್ರಯತ್ನ ಮಾಡಿದರು. ಆದರೆ ಅವುಗಳಿಗೆ ಮುಗಾಬೆ ಅವರು ಯಾವುದೇ ರೀತಿಯ ಸ್ಪಂದನ ನೀಡದೆ ತಮ್ಮ ಹಠವನ್ನೆ ಸಾಧಿಸಲಾರಂಭಿಸಿದರು. ೨೦೦೮ರಲ್ಲಿ ಅಧ್ಯಕ್ಷರ ಆಯ್ಕೆಗಾಗಿ ನಡೆದ ಮಹಾಚುನಾವಣೆಯಲ್ಲಿ ರಾಬರ್ಟ್ ಮುಗಾಬೆ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯವ ಹಾಗೆ ಸರಕಾರವನ್ನು ದುರ್ಬಳಕೆ ಮಾಡಿಕೊಂಡು ಜಯಶಾಲಿಯಾದರು. ಇದನ್ನು ಉಲ್ಲೇಖಿಸಿ ನೆಲ್ಸನ್ ಮಂಡೇಲಾ ಅವರು ‘‘ಜಿಂಬಾವ್ವೆಯ ದುರಂತ ನಾಯಕತ್ವ’’ ಎಂದು ಅಭಿಪ್ರಾಯಪಟ್ಟರು. ಆದರೆ ಇತ್ತೀಚಿಗೆ ತಮ್ಮ ಆರೋಗ್ಯದಲ್ಲಾದ ಕ್ಷೀಣತೆಯಿಂದ ಅಂತಾರಾಷ್ಟ್ರೀಯ ಮಟ್ಟದೊಎಲ್ಲ ಸಂಗತಿಗಳಿಂದ ಬಹುದೂರದಲ್ಲಿ ನಿಂತಿದ್ದಾರೆ. ತಮ್ಮ ನೇರವಾದ ನಡೆ-ನುಡಿಗಳಿಂದ ಎಲ್ಲರ ಪ್ರೀತಿಪಾತ್ರ ರಾಗಿರುವ ನೆಲ್ಸನ್ ಮಂಡೇಲಾ ಅವರನ್ನು ಇಡೀ ದಕ್ಷಿಣ ಆಫ್ರಿಕಾ ದೇಶ ಹಾಗೂ ಆಫ್ರಿಕಾ ಖಂಡದ ಇತರ ದೇಶಗಳ ಯಾವೊಬ್ಬ ನಾಯಕ ಮುಟ್ಟಲಾರದ ಜಾಗದಲ್ಲಿ ಇಟ್ಟು ಪೂಜಿಸುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ದೇಶಗಳೂ ಅವರ ಬಗೆಗೆ ಅಪರಮಿತ ಗೌರವ ನೀಡಿ ಸನ್ಮಾನಿಸಿವೆ. ಜಾರ್ಜ ವಾಷಿಂಗ್‌ಟನ್ ಹಾಗೂ ಅಬ್ರಾಹಿಂ ಲಿಂಕನ್‌ರು ಹೊಂದಿರುವ ಸ್ಥಾನಮಾನಗಳ ಗೌರವದಷ್ಟೆ ಜಾಗತಿಕ ಮಟ್ಟದಲ್ಲಿ ನೆಲ್ಸನ್ ಮಂಡೇಲಾ ಅವರಿಗೆ ನೀಡಿರುವುದು ಅವರ ಜನಪ್ರಿಯತೆಯನ್ನು ಸಾಬೀತುಪಡಿಸುತ್ತದೆ.

ಸಿಕ್ಕಿರುವ ಪ್ರಶಸ್ತಿಗಳು

ನೆಲ್ಸನ್ ಮಂಡೇಲಾರ ಜೀವನಗಾಥೆಯನ್ನು ಗಮನಿಸಿ ಜಗತ್ತಿನ ಎಲ್ಲ ದೇಶಗಳು ಪ್ರಶಸ್ತಿ ಗೌರವಗಳಿಂದ ಸನ್ಮಾನಿಸಿವೆ. ೧೯೯೩ರಲ್ಲಿ ಫ್ರೆಡ್ರಿರಿಕ್ ವಿಲಿಯಂ ಡಿ ಕ್ಲರ್ಕ್ ಜೊತೆಗೆ ಶಾಂತಿಗಾಗಿ ಇರುವ ನೊಬೆಲ್ ಪ್ರಶಸ್ತಿಯನ್ನು ನೆಲ್ಸನ್ ಮಂಡೇಲಾ ಅವರಿಗೂ ನೀಡಿ ಗೌರವಿಸಲಾಗಿದೆ. ಇಂಗ್ಲೆಂಡ್ ಹಾಗೂ ಅಮೆರಿಕಾ ದೇಶಗಳು ತಾವು ಹೊಂದಿರುವ ಅತ್ಯುನ್ನತ ಗೌರವ ಪ್ರಶಸ್ತಿ ನೀಡಿ ಅವು ಗೌರವಿಸಿವೆ. ಈವರೆಗೂ ಯಾರಿಗೂ ಯಾವ ಸಮಯದಲ್ಲೂ ಕೊಡಲಾರದ ಗೌರವ ಪ್ರಶಸ್ತಿಯನ್ನು ಕೆನಡಾ ದೇಶ ನೆಲ್ಸನ್ ಮಂಡೇಲಾ ಅವರಿಗೆ ನೀಡಿ ಗೌರವಿಸಿದೆ. ಭಾರತ ದೇಶವು ತನ್ನ ಅತ್ಯುನ್ನತ ಗೌರವ ಸನ್ಮಾನವಾದ ಭಾರತರತ್ನ ಎಂಬ ಪ್ರಶಸ್ತಿ ಸನ್ಮಾನದಿಂದ ಗೌರವವಾಗಿ ಪುರಸ್ಕರಿಸಿದೆ. ಜಗತ್ತಿನ ಅನೇಕ ದೇಶಗಳು ನೆಲ್ಸನ್ ಮಂಡೇಲಾ ಅವರನ್ನು ಬೇರೆ ಬೇರೆ ಗೌರವ ಪುರಸ್ಕಾರಗಳಿಂದ ಗೌರವಿಸಿರುತ್ತಾರೆ. ಜಾಗತಿಕ ಮನ್ನಣೆ ಪಡೆದಿರುವ ಅನೇಕ ಸಂಗೀತಗಾರರು ತಮ್ಮ ಸಂಗೀತದ ಅಲ್ಬಮಗಳನ್ನು ನೆಲ್ಸನ್ ಮಂಡೇಲಾ ಅವರ ಕುರಿತಂತೆ ಸಿದ್ಧಗೊಳಿಸಿದ್ದಾರೆ. ಜಗತ್ಪ್ರಸಿದ್ಧ ಅನೇಕ ಗಾಯನಗಳು ಮಂಡೇಲಾರಿಗೆ ಅರ್ಪಿತವಾಗಿವೆ. ಶಾಂತಿಗಾಗಿ ಇರುವ ನೊಬೆಲ್ ಪ್ರಶಸ್ತಿಯನ್ನು ಪಡೆಯುವ ಸಂದರ್ಭದಲ್ಲಿ ಇಂಥ ಅನೇಕ ಹಾಡುಗಳನ್ನು ನುಡಿಸಲಾಯಿತು. ನಿಕೆಲ್ ಬ್ಲಾಕ್ ರಚಿತ ‘‘ಇಫ್ ಎವರಿವನ್ ಕ್ಯಾರ್ಡ್‌’’ ಎಂಬ ಅಲ್ಬಮನ್ನು ೨೦೦೬ರಲ್ಲಿ ಬಿಡುಗಡೆಗೊಳಿಸಲಾಗಿದೆ. ಅದು ಅವರ ಜೀವನದ ಗಾಥೆಯನ್ನು ಗಾನರೂಪದಲ್ಲಿ ವಿವರವಾಗಿ ನೀಡುವ ಒಂದು ಗುಚ್ಛ. ನೆಲ್ಸನ್ ಮಂಡೇಲಾ ಮಾಡಿದ ಐತಿಹಾಸಿಕ ಭಾಷಣದ ಭಾವಾರ್ಥವುಳ್ಳ ‘‘ಟರ್ನ್‌ಡ್ ಎರೌಂಡ್ ಫಾರ್ ದಿ ಚಿಲ್ಡ್ರನ್’’ ಎಂಬ ವಿಷಯದ ಕುರಿತಿರುವ ಅಲ್ಬಮನ್ನು ಅವರ ೯೦ನೇ ವರ್ಷದ ಜನ್ಮದಿನಾಚರಣೆಯ ಸಂದರ್ಭದಲ್ಲಿ ಲಂಡನ್‌ನ ಹೈಡ್ ಪಾರ್ಕ್‌ನಲ್ಲಿ ೨೦೦೮ರ ಜೂನ್ ೨೭ರಂದು ಹಾಡಲಾಯಿತು.

ನೆಲ್ಸನ್ ಮಂಡೇಲಾರ ಕುರಿತಂತೆ ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕರು ಕೆಲವು ಸಿನಿಮಾಗಳನ್ನು ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ‘‘ಗುಡ್ ಬೈ ಬಫಾನಾ’’ ಎಂಬ ಚಲನಚಿತ್ರ ಮಂಡೇಲಾರ ಜೀವನವನ್ನು ಬೆಳ್ಳಿಯ ತೆರೆಯ ಮೇಲೆ ತೋರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ‘‘ಮಂಡೇಲಾ ಆ್ಯಂಡ್ ದಿ ಕ್ಲರ್ಕ್’’ ಎಂಬ ಚಲನಚಿತ್ರವು ಅವರು ಸೆರೆವಾಸದಿಂದ ಬಿಡುಗಡೆಗೊಳ್ಳುವ ಕೊನೆಯ ದಿನಗಳಲ್ಲಿ ನಡೆದ ಸಂಗತಿಗಳನ್ನು ಕುರಿತು ಸರಕಾರ ಮತ್ತು ಮಂಡೇಲಾರ ಮಧ್ಯೆ ನಡೆದ ರಾಜಕೀಯ ಸಂಭಾಷಣೆಗಳನ್ನು ಇಟ್ಟುಕೊಂಡು ರಚನೆಯಾಗಿದೆ. ‘‘ಗುಡ್ ಬೈ ಬಫಾನಾ’’ ಎಂಬ ಚಲನಚಿತ್ರವನ್ನು ೨೦೦೭ರಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಅಮೇರಿಕಾದ ನಿರ್ದೇಶಕನೊಬ್ಬ ನಿರ್ದೇಶಿಸಿದ ‘‘ಮಾಲ್ಕೊಮ್ ಎಕ್ಸ್’’ಎಂಬ ಪ್ರಸಿದ್ಧವಾದ ಸಿನಿಮಾದಲ್ಲಿ ನೆಲ್ಸನ್ ಮಂಡೇಲಾ ಅವರು ಶಾಲಾ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಒಬ್ಬ ಶಿಕ್ಷಕರಾಗಿ ಪಾತ್ರನಿರ್ವಹಿಸಿದ್ದಾರೆ. ಇದರಲ್ಲಿ ವಿಶೇಷವೆನೆಂದರೆ ಶಿಕ್ಷಕನಾಗಿರುವ ನೆಲ್ಸನ್ ಮಂಡೇಲಾರ ಬಾಯಿಂದ ಸಾಮಾಜಿಕ ಹೋರಾಟಗಾರ ಮಾಲ್ಕಮ್‌ನ ವಿಚಾರಗಳಾದ

ಈ ಜಗತ್ತಿನಲ್ಲಿ ಮನುಷ್ಯರಾಗಿರುವುದು ನಮ್ಮ ಹಕ್ಕೆಂದು ನಾವು ಘೋಷಿಸುತ್ತೇವೆ. ನಮ್ಮನ್ನು ಮನುಷ್ಯರೆಂದು ಗೌರವಿಸುವುದು, ಸಮಾಜ ದೊಳಗೆ ಮನುಷ್ಯರು ಗೌರವದಿಂದಿರಲ್ಲೂ ಬೇಕಾಗುವ ಹಕ್ಕುಗಳಿಗಾಗಿ ಹೋರಾಡುವುದು ಬಹುಮುಖ್ಯವಾಗಿದೆ. ಏಕೆಂದರೆ ಅವುಗಳು ನಮ್ಮ ಇರುವಿಕೆಗೆ ಬಹಳ ಮುಖ್ಯ.

ಎಂಬ ಪ್ರಸಿದ್ಧ ಸಂಗತಿಗಳನ್ನು ನಿರ್ದೇಶಕ ಹೇಳಿಸುತ್ತಾನೆ. ಆದರೆ ಇದನ್ನು ಸಾಧಿಸಲು ಯಾವ ಮಾರ್ಗವನ್ನಾದರೂ ಅನುಸರಿಸುತ್ತೇನೆ ಎಂಬ ಅರ್ಥ ಬರುವ ‘‘ಬೈ ಮೀನ್ಸ್ ನೆಸೆಸ್ಸರಿ’ ಮಾತುಗಳನ್ನು ಮಾತ್ರ ಸಿನಿಮಾದಲ್ಲಿ ನೆಲ್ಸನ್ ಮಂಡೇಲಾರ ಪಾತ್ರಧಾರಿಯಾಗಿದ್ದ ಮಾಲ್ಕಮ ಎಕ್ಸ್‌ನ ಮೂಲಕ ನಿರ್ದೇಶಕ ಸ್ಪಿಕ್ ಲೀ ಹೇಳಿಸುವುದರಲ್ಲಿ ತೋರಿರುವ ಜಾಣ್ಮೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ಕಾರಣ ಕೊನೆಯ ಮಾತನ್ನು ನೆಲ್ಸನ್ ಮಂಡೇಲಾ ಅವರ ಬಾಯಿಂದ ಹೇಳಿಸಿದ್ದೆ ಆಗಿದ್ದರೆ ಪ್ರಿಟೋರಿಯಾ ಆಡಳಿತ ಆಗಷ್ಟೇ ಬಿಡುಗಡೆಗೊಂಡಿದ್ದ ಮಂಡೇಲಾರನ್ನು ಮತ್ತೆ ಸೆರೆವಾಸಕ್ಕೆ ತಳ್ಳುವ ಸಾಧ್ಯತೆಗಳಿದ್ದವು. ಈ ಚಲನ ಚಿತ್ರದಲ್ಲಿ ಪಾತ್ರವಹಿಸುವ ಕೆಲವೇ ದಿನಗಳ ಮೊದಲಷ್ಟೇ ನೆಲ್ಸನ್ ಮಂಡೇಲಾರು ೨೭ ವರ್ಷಗಳ ಸೆರೆವಾಸದಿಂದ ಆಗಷ್ಟೇ ಬಿಡುಗಡೆಗೊಂಡಿದ್ದರು. ನೆಲ್ಸನ್ ಮಂಡೇಲಾರ ಎರಡನೆಯ ಪತ್ನಿ ವಿನ್ನಿ ಮಂಡೇಲಾರ ಕುರಿತಂತೆ ಬಿಬಿಸಿ ದೂರದರ್ಶನವು ನಾಟಕವೊಂದನ್ನು ನಿರ್ಮಿಸಿ ಬಿತ್ತಿರಿಸಿತು. ಈ ನಾಟಕದ ದೃಶ್ಯಗಳಲ್ಲಿ ತೂಗು ಹಾಕಿರುವ ನೆಲ್ಸನ್ ಮಂಡೇಲಾರ ಭಾವಚಿತ್ರವು ಒಂದು ಪಾತ್ರಧಾರಿಯಾಗಿ ನಾಟಕದ ಉದ್ದಕ್ಕೂ ಪ್ರದರ್ಶನವಾಗುತ್ತಾ ಹೋಗುವುದು ಅದ್ಭುತವಾಗಿ ಮೂಡಿಬಂದಿದೆ ಎಂದು ಚಿತ್ರ ವಿಮರ್ಶಕರು ಅಭಿಪ್ರಾಯಿಸಿದ್ದಾರೆ.

ಮಾನವೀಯತೆಯ ಪ್ರತಿಪಾದಕರಾಗಿರುವ ಮಂಡೇಲಾರ ನೆನಪಿಗಾಗಿ ಹಲವು ದೇಶಗಳು ತಮ್ಮ ನೆಲದಲ್ಲಿ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದನ್ನು ತಿಳಿಯುತ್ತೇವೆ. ಲೀಡ್ಸ್ (ಇಂಗ್ಲೆಂಡ್)ನಲ್ಲಿ ೨೦೦೧ನೇ ಏಪ್ರಿಲ್ ೩೦ರಂದು ಅಲ್ಲಿನ ಸ್ಥಳೀಯ ಸರಕಾರ ಸ್ವಾತಂತ್ರ್ಯದ ಪ್ರತೀಕವಾಗಿ ನೆಲ್ಸನ್ ಮಂಡೇಲಾ ಮೂರ್ತಿಯನ್ನು ಸ್ಥಾಪಿಸಿತು. ೨೦೦೪ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ೬ಅಡಿ ಎತ್ತರವುಳ್ಳ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಬ್ರಿಟನ್‌ನಿನ ಪಾರ್ಲಿಮೆಂಟ್ ಸ್ಕ್ಪೇರ್‌ನಲ್ಲಿ ಸ್ಥಾಪಿಸಿದ್ದ ನೆಲ್ಸನ್ ಮಂಡೇಲಾರ ಪ್ರತಿಮೆ ಯನ್ನು ೨೦೦೭ರಲ್ಲಿ ಅನಾವರಣಗೊಳಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ರಿಚರ್ಡ್ ಅಟೆನ್‌ಬರ್ಗ್, ಕೆನ್ ಲಿವ್ಹಿಂಗ್ ಸ್ಟಾನ್, ವೆನ್‌ಡೆ ವುಡ್ಸ್ ಮತ್ತು ಗಾರ್ಡ್‌ನ್ ಬ್ರೌನ್ ಅವರು ಭಾಗವಹಿಸಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸೌಥ ಆಫ್ರಿಕಾ ದೇಶದವರೇ ಆಗಿದ್ದ ಪತ್ರಕರ್ತ ಡೊನಾಲ್ಡ್ ವುಡ್ಸ್ ಅವರ ಪ್ರಯತ್ನದಿಂದ ೨೦೦೦ರಲ್ಲಿ ಈ ಪ್ರತಿಮೆಯ ಸ್ಥಾಪನೆಗೆ ಚಾಲನೆ ನೀಡಲಾಗಿತ್ತು. ಆದರೆ ಇದು ಅನಾವರಣ ಆಗುವುದ ರೊಳಗಾಗಿ ಅಂದರೆ ೨೦೦೭ರ ಹೊತ್ತಿಗೆ ಡೊನಾಲ್ಡ್ ವುಡ್ಸ್ ತೀರಿಕೊಂಡರು. ಇವರೊಬ್ಬ ವರ್ಣಭೇದ ನೀತಿಯ ವಿರುದ್ಧದ ಪ್ರಬಲ ಪ್ರತಿಭಟನಾಕಾರರಾಗಿದ್ದರು. ಪ್ರತಿಮೆಯ ಅನಾವರಣ ಸಂದರ್ಭದಲ್ಲಿ ನೆಲ್ಸನ್ ಮಂಡೇಲಾರು ಡೊನಾಲ್ಡ್ ವುಡ್ಸ್ ಹಾಗೂ ಇತರ ಹೋರಾಟಗಾರರನ್ನು ನೆನೆದುಕೊಳ್ಳುತ್ತಾ

ದಕ್ಷಿಣ ಆಫ್ರಿಕಾದ ಹೋರಾಟದ ಚರಿತ್ರೆಯು ಹಿರೋ ಮತ್ತು ಹಿರೋಯಿನ್‌ಗಳ ಕಥನಗಳಿಂದಾಗಿ ಬಹಳ ಶ್ರೀಮಂತವಾಗಿದೆ. ಅವರಲ್ಲಿ ಕೆಲವರು ನಾಯಕರಾದರೆ ಮತ್ತೆ ಕೆಲವರು ಅವರ ಅನುಯಾಯಿಗಳು. ಈ ಸಂದರ್ಭದಲ್ಲಿ ಎಲ್ಲಾರನ್ನು ನೆನಪಿಸಿಕೊಳ್ಳಬೇಕಾಗಿದೆ.

ಎಂದು ಅಭಿಪ್ರಾಯಿಸಿದರು. ಸೈಪ್ರಸ್ ದೇಶವು ತನ್ನ ಮುಖ್ಯವಾದ ಬೀದಿಗೆ ನೆಲ್ಸನ್ ಮಂಡೇಲಾರ ಹೆಸರಿನ್ನಿಟ್ಟು ಗೌರವಿಸಿದೆ. ಇಂಗ್ಲೆಂಡ್ ದೇಶದ ಲ್ಯಾಂಕ್‌ಪೈರ್‌ನಲ್ಲಿರುವ ನೆಲ್ಸನ್ ಮಂಡೇಲಾರ ಸ್ಮರಣಾರ್ಥ ಸ್ಥಾಪಿಸಿರುವ ಪಾರ್ಕ್‌ನಲ್ಲಿ ಅವರೇ ಹೇಳಿದ ಪ್ರಸಿದ್ಧ ವಾಕ್ಯವಾದ ‘ಸೌತ್ ಆಫ್ರಿಕಾ ಬಿಲಾಂಗ್ಸ್ ಟು ಆಲ್ ಧೋಸ್ ಹೌ ಲಿವ್ ದೇರ್ ಬ್ಲಾಕ್ ಆ್ಯಂಡ್ ವೈಟ್’ ಎಂದು ಬರೆಯಲಾಗಿದೆ. ಲಿಬಿಯಾ ದೇಶವು ಮಾನವ ಹಕ್ಕುಗಳಿಗಾಗಿ ಸ್ಥಾಪಿಸಿರುವ ಪ್ರಶಸ್ತಿಯೊಂದನ್ನು ನೀಡಿದಲ್ಲದೇ ನೆಲ್ಸನ್ ಮಂಡೇಲಾರ ನೆನಪಿನಲ್ಲಿ ಅಂಚೆ ಚೀಟಿಯೊಂದನ್ನು ಹೊರಡಿಸಿದೆ. ಸೌಥ ಆಫ್ರಿಕಾದಲ್ಲಿನ ಪ್ರಾಣಿ ಶಾಸ್ತ್ರಜ್ಞರು ಟ್ರಾಫ್ ಡೊರ್ ಸ್ಪೈಡರ್ ವಂಶವಾಹಿನಿಗೆ ಸೇರಿದ ವರ್ಗಕ್ಕೆ ‘‘Strasim opus madelai’’ ಎಂದು ಮರುನಾಮಕರಣ ಮಾಡಿ ಗೌರವಿಸಿದ್ದಾರೆ.

 

ಪರಾಮರ್ಶನ ಗ್ರಂಥಗಳು

೧. ದಿ ನೊಬೆಲ್ ಫೌಂಡೇಶನ್, ೧೯೯೩. ನೆಲ್ಸನ್ ಮಂಡೇಲಾ ಬಯೋಗ್ರಾಪಿ, ದಿ ನೊಬೆಲ್ ಫೌಂಡೇಶನ್

೨. ಐಕಮನ್ ಡೆವಿಡ್, ೨೦೦೩. ಗ್ರೇಟ್ ಸೊಲ್ಸ್ ಸಿಕ್ಸ್ ಹು ಚೇಂಜ್ಡ ಎ ಸೆಂಚುರಿ, ಲೆಕ್ಸೆಂಗ್ಟನ್ ಬುಕ್ಸ್

೩. ಮಾಪೆಲಾ ಮುಂಜೆಡ್ಜಿ ಜೇಮ್ಸ್, ೨೦೦೮. ದಿ ರೆವಿಲ್ಯೂಶನ್ ಆಫ್ ಆಫ್ರಿಕನ್ ಕಲ್ಚರ್ ಇನ್ ಲಾಂಗ್ ವಾಕ್ ಟು ಫ್ರಿಡಮ್, ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್‌ಸಿಟಿ

೪. ಮಂಡೇಲಾ ನೆಲ್ಸನ್, ೧೯೯೪. ಲಾಂಗ್ ವಾಕ್ ಟು ಫ್ರಿಡಮ್, ಲಿಟಲ್ ಬ್ರೌನ್ ಆ್ಯಂಡ್ ಕಂಪನಿ

೫. ನೆಲ್ಸನ್ ಮಂಡೇಲಾ ಬಯೋಗ್ರಾಫಿ ಅರ್ಲಿಯರ್ಸ್‌, ೨೦೦೮. ನೆಲ್ಸನ್ ಮಂಡೇಲಾ ಫೌಂಡೇಶನ್, ಜೋಹನ್ಸ್‌ಬರ್ಗ್

೬. ಭಾನಾ ಸುರೇಂದ್ರ ವಾಹೇದ್, ೨೦೦೫. ಗ್ಲೂಮ್, ದಿ ಮೇಕಿಂಗ್ ಆಫ್ ಎ ಪಾಲಿಟಿಕಲ್ ರಿಫಾರ್ಮ್‌ರ್ ಗಾಂಧೀ ಇನ್ ಸೌತ್ ಆಫ್ರಿಕಾ, ಕೇಪ್‌ಟೌನ್

೭. ಶಿಲಿಂಗಟನ್ ಕೆವಿನ್, ೨೦೦೫. ಎನ್‌ಸೈಕ್ಲೋಪಿಡಿಯಾ ಆಫ್ ಆಫ್ರಿಕನ್ ಹಿಸ್ಟರಿ, ಸಿಆರ್‌ಸಿ ಪ್ರೆಸ್

೮. ಸಾಂಪ್ಸ್‌ನ್ ಆಂಟೋನಿ, ೧೯೯೯. ಮಂಡೇಲಾ ದಿ ಆಥರೈಸ್ಡ್ ಬಯೋಗ್ರಾಫಿ, ಹಾರ್‌ಪರ್ ಕಾಲಿನ್ಸ್

೯. ನೆಲ್ಸನ್ ಮಂಡೇಲಾ, ೨೦೦೯. ವಿಕಿಪಿಡಿಯಾ

೧೦. ರಂಜಾನ್ ದರ್ಗಾ, ೧೯೯೦, ನೆಲ್ಸನ್ ಮಂಡೇಲಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕೋಲಾರ