ದಕ್ಷಿಣ ಆಫ್ರಿಕಾದ ಜನತೆಯ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ದುಡಿದ ನೆಲ್ಸನ್ ಮಂಡೇಲಾ ಅವರು ೨೦ನೆಯ ಶತಮಾನದ ಶ್ರೇಷ್ಠ ಹೋರಾಟಗಾರರಾಗಿ ಪ್ರಸಿದ್ದಿಯಾಗಿದ್ದಾರೆ. ನಾನು ಆಫ್ರಿಕನ್ ಜನತೆಯ ಸ್ವಾತಂತ್ರ್ಯದ ಹೋರಾಟಕ್ಕಾಗಿಯೇ ನನ್ನನ್ನು ಅರ್ಪಿಸಿಕೊಂಡಿದ್ದೇನೆ. ಬಿಳಿಯರ ದಬ್ಬಾಳಿಕೆಯ ವಿರುದ್ಧ ಜೀವಂತವಾಗಿರುವವರೆಗೆ ನಿರಂತರವಾಗಿ ಹೋರಾಡುತ್ತೇನೆ. ಇದೇ ಸಮಯದಲ್ಲಿ ಕಪ್ಪು ಶ್ರೀಮಂತರ ದಬ್ಬಾಳಿಕೆಯನ್ನು ವಿರೋಧಿಸುತ್ತೇನೆ. ಈ ಎಲ್ಲ ಜನತೆಯನ್ನೊಳಗೊಂಡ ಸಮಾನತೆಯ ಹಾಗೂ ಸೌರ್ಹದತೆ ಯಿಂದ ಬದುಕುವ ಆದರ್ಶ ಪ್ರಜಾಪ್ರಭುತ್ವದ ಗುಣವುಳ್ಳ ಸಮಾಜವನ್ನು ನಿರ್ಮಿಸ ಬಯಸುತ್ತೇನೆ. ಇಂತಹ ಸಾಧನೆಗಾಗಿ ಬದುಕುತ್ತೇನೆ. ಹಾಗೂ ಅಂತಹ ಸಂಗತಿಗಳಿಗಾಗಿ ಸಾಯಲು ಸಿದ್ಧನಿದ್ದೇನೆ ಎಂದು ಅಭಿಪ್ರಾಯಿಸಿ ಹಾಗೆ ನಡೆದುಕೊಂಡ ಧೀಮಂತ ವ್ಯಕ್ತಿಯಾಗಿ ಮೆರೆದಿದ್ದಾರೆ. ಹಲವು ದಶಕಗಳ ನಿರಂತರ ಹೋರಾಟದಲ್ಲಿಯೇ ತಮ್ಮ ಬದುಕನ್ನು ಸವೆಸಿದ ಮಂಡೇಲಾ ಮಾನವೀಯತೆಗಾಗಿ ‘ಐ ಆ್ಯಮ್ ಪ್ರಿಪೇರ್ಡ್‌ಟು ಡೈ’ ಎಂಬ ಧ್ಯೇಯ ವಾಕ್ಯವನ್ನು ಹೇಳಿ ಜಗತ್ ಪ್ರಸಿದ್ಧರಾಗಿದ್ದಾರೆ. ೨೦ನೇ ಶತಮಾನದ ಧೃವತಾರೆಯಾಗಿ ಮೆರೆದ ನೆಲ್ಸನ್ ಮಂಡೇಲಾ ಅವರ ಜೈಲುವಾಸದ ಬಿಡುಗಡೆಯ ನಂತರದ ದಿನಗಳ  ಬಗೆಗೆ ಈ ಲೇಖನದಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ.

ನೈಲ್ಸನ್ ಮಂಡೇಲಾ ಜೈಲುವಾಸದ ೨೭ ವರ್ಷಗಳ ಶಿಕ್ಷೆಯಲ್ಲಿ ೧೮ ವರ್ಷಗಳ ಕಾಲ ರಾಬೆನ್ ಐಸ್‌ಲ್ಯಾಂಡ್‌ನ ಕಾರಾಗೃಹದಲ್ಲಿ ಕಳೆದರು. ಅವರು ಅನುಭವಿಸಿದ ಶಿಕ್ಷೆ ಹಾಗೂ ಆ ಸಂದರ್ಭದಲ್ಲಿ ಅವರು ತಳೆದ ಅಭಿಪ್ರಾಯಗಳಿಂದ ಇಡೀ ಸೌತ್ ಆಫ್ರಿಕಾದ ಕಪ್ಪು ಜನಾಂಗದ ಅದ್ವಿತೀಯ ಮೇರು ನಾಯಕನಾಗಿ ಪ್ರಸಿದ್ದಿಗೆ ಬಂದರು. ಪ್ರಿಟೋರಿಯಾ ಜೈಲಿನಲ್ಲಿ   ಜೈಲಿನ ಕ್ರೂರ ಅಧಿಕಾರಿಗಳು ಕೊಡುವ ಅತೀ ಕಷ್ಟದ ಕೆಲಸವನ್ನು ಅವರು ಮಾಡಬೇಕಿತ್ತು. ಕಠೋರವಾದ ಶಿಕ್ಷೆಗೆ ಒಳಪಡಿಸುತ್ತಿದ್ದಲ್ಲದೇ ಜೈಲಿನಲ್ಲಿ ಜನಾಂಗ ಹಾಗೂ ವರ್ಣದ ನೀತಿಗಳ ಮೇಲೆ ತಾರತಮ್ಯವನ್ನು ಅಧಿಕಾರಿಗಳು ಅವ್ಯಾಹತವಾಗಿ ಮಾಡುತ್ತಿದ್ದರು. ಕಪ್ಪು ಜನಾಂಗದವರಿಗೆ ಮಾತ್ರ ಅತೀ ಕಡಿಮೆ ಆಹಾರವನ್ನು  ಕೊಡುತ್ತಿದ್ದರು. ಅತೀ ಕಷ್ಟದ ಹಾಗೂ ಹೆಚ್ಚಿನ ಕೆಲಸವನ್ನು ಕಪ್ಪು ಕೈದಿಗಳಿಂದ ಮಾತ್ರ ತೆಗೆದುಕೊಳ್ಳುತ್ತಿದ್ದರು. ಸಾಮಾನ್ಯವಾಗಿ ರಾಜಕೀಯ ಕೈದಿಗಳಿಗೆ ಮತ್ತು ಇತರ ಕೈದಿಗಳಿಗೆ ಪ್ರತ್ಯೇಕ ಸೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ನೆಲ್ಸನ್ ಮಂಡೇಲಾ ಅವರಿಗೆ ಡಿ ದರ್ಜೆಯ ಕೈದಿಗಳಿಗೆ ಕೊಡುವ ಸವಲತ್ತನ್ನು ಮಾತ್ರ ನೀಡಲಾಗಿತ್ತು. ಸರ್ಕಾರ ಬಯಸಿದ್ದಲ್ಲಿ ಒಬ್ಬರು ಮಾತ್ರ ಅವರನ್ನೂ ಭೇಟಿ ಮಾಡಬಹುದಾಗಿತ್ತು. ಹಾಗೂ ಆರು ತಿಂಗಳಿಗೊಮ್ಮೆ ಮಾತ್ರ ಅವರಿಗೆ ಬಂದಿರುವ ಪತ್ರವನ್ನು ಒಟ್ಟಾಗಿ ನೀಡಲಾಗುತ್ತಿತ್ತು. ಅಂಥಹದರಲ್ಲಿಯೂ ಸಹ  ಅವರಿಗೆ ಬಂದಿರುವ ಪತ್ರಗಳೆಲ್ಲವುಗಳು ಎಲ್ಲ ಹಂತದಲ್ಲಿಯೂ ವಿಚಾರಣೆಗೊಳಗಾಗುತ್ತಿದ್ದವು. ಇಂಥ ಅನೇಕ ಕಷ್ಟಕಾರ್ಣ್ಯಗಳ ಮಧ್ಯೆ ಅರ್ಧಕ್ಕೆ ನಿಂತು ಹೋಗಿದ್ದ ತಮ್ಮ ವಿದ್ಯಾಭ್ಯಾಸವನ್ನು ಜೈಲಿನಲ್ಲಿದ್ದ ಮುಂದುವರೆಸಿ ಲಂಡನ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪೂರೈಸಿದರು. ಜೈಲಿನಲ್ಲಿದ್ದಾಗ ನೆಲ್ಸನ್ ಮಂಡೇಲಾ ಅವರಿಗೆ ತಪ್ಪಿಸಿಕೊಳ್ಳುವ ಅವಕಾಶವನ್ನು ಜೈಲು ಅಧಿಕಾರಿಗಳೇ ಸ್ವತಃ ಸೃಷ್ಟಿಸಿದ್ದರು. ಕಾರಣ ಅವರು ಉತ್ತೇಜನಗೊಂಡು ತಪ್ಪಿಸಿಕೊಳ್ಳುವ ಸಮಯದಲ್ಲಿ  ಕುತಂತ್ರದಿಂದ ಶೂಟ್ ಮಾಡಿ ಸಾಯಿಸುವ ತಂತ್ರವನ್ನು ಪ್ರಿಟೋರಿಯ ಆಡಳಿತ ರೂಪಿಸಿತ್ತು ಎಂದು ಗುಪ್ತವರದಿಗಳು ತಿಳಿಯಪಡಿಸಿದವು. ರಾಬಿನ್ ಐಸ್‌ಲ್ಯಾಂಡ್ ಸೆರೆಮನೆಯಿಂದ ಪಾಲ್ಸ್ ಮೂರ್ ಕಾರಾವಾಸಕ್ಕೆ ನೆಲ್ಸನ್ ಮಂಡೇಲಾ ಅವರನ್ನು ಒಳಗೊಂಡಂತೆ ಎಲ್ಲ ಪ್ರಮುಖ ನಾಯಕರನ್ನು ಸ್ಥಳಾಂತರಿಸಲಾಯಿತು. ಕಾರಣ ವರ್ಣಭೇದ ನೀತಿ ವಿರುದ್ಧದ ಹೋರಾಟದ ಸಂಬಂಧವಾಗಿ ಬಂಧಿಸಲ್ಪಟ್ಟು ಲಕ್ಷಾನು ಸಂಖ್ಯೆಯಲ್ಲಿ ಸಾಗರೋಪಾದಿಯಾಗಿ ಬರುತ್ತಿದ್ದ ಯುವ ಆಫ್ರಿಕಾ ಶಕ್ತಿಯ ಸಂಪರ್ಕದಿಂದ ಜೈಲಿನಲ್ಲಿರುವ ಕ್ರಾಂತಿಕಾರಿಗಳನ್ನು  ಬೇರ್ಪಡಿಸುವ ಉದ್ದೇಶವನ್ನು ಸರಕಾರ ಹೊಂದಿತ್ತು. ಈ ಜೈಲಿನ ಕೈದಿಗಳ ಪ್ರಭಾವದಿಂದ ಪ್ರೇರಿತವಾಗಿ ಆಫ್ರಿಕಾ ದೇಶದ ಎಲ್ಲ ಜನಸಾಮಾನ್ಯರು  ಹೋರಾಟವನ್ನು ಜೀವಂತವಾಗಿ ಸದಾ ಕಾಪಾಡಿಕೊಂಡು ಬಂದಿರುವ ಸಾಕ್ಷಿಗಳಿದ್ದವು.  ಈ ಕಾರಣಕ್ಕಾಗಿ ರಾಬಿನ್ ಐಸ್‌ಲ್ಯಾಂಡ್ ಕಾರಾವಾಸವನ್ನು ‘ಮಂಡೇಲಾ ಯುನಿವರ್‌ಸಿಟಿ’ ಎಂದು ಕರೆಯಲಾಗುತಿತ್ತು. ಅಂದರೆ ರಾಬಿನ್ ಐಸ್‌ಲ್ಯಾಂಡ್ ಕಾರಗೃಹವು ಎಷ್ಟೊಂದು ಪರಿಣಾಮವನ್ನು ಅಲ್ಲಿಯ ಸ್ವಾತಂತ್ರ್ಯ ಹೋರಾಟದ ಮೇಲೆ ಮಾಡಿದ್ದಿರಬಹುದೆಂದು ಊಹಿಸಬಹುದಾಗಿದೆ. ಇಂಥ ಆರೋಪದಿಂದ ಮುಕ್ತಗೊಳ್ಳಲು ಸರಕಾರವು ಬೇರೆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿತು. ಮಂಡೇಲಾರನ್ನು ಒಳಗೊಂಡು ಇನ್ನಿತರ ಪ್ರಮುಖ ಕೈದಿಗಳ ಸ್ಥಳಾಂತರವು ನ್ಯಾಷನಲ್ ಪಾರ್ಟಿಯ ಸರಕಾರ ಹಾಗೂ ಕಪ್ಪು ಜನಾಂಗದ ಮುಖಂಡರ ನಡುವೆ ರಹಸ್ಯವಾಗಿ ಮಾತುಕತೆ ನಡೆಯುವ ಸಲುವಾಗಿ ಮಾಡಲಾಗಿತ್ತು ವಿನಹ ಮತ್ತಾವ ಉದ್ದೇಶವನ್ನು ಸರ್ಕಾರ ಹೊಂದಿರಲಿಲ್ಲ ಎಂದು ಮಂತ್ರಿಯೊಬ್ಬರು ಅಭಿಪ್ರಾಯಿಸುವ ಮೂಲಕ ತೇಪೆ ಹಚ್ಚುವ ಕೆಲಸ ಮಾಡಲಾಯಿತು. ಸಶಸ್ತ್ರ ಹೋರಾಟವನ್ನು ಹಿಂತೆಗೆದುಕೊಳ್ಳುವ ಷರತ್ತಿನ ಮೇಲೆ ನೆಲ್ಸನ್ ಮಂಡೇಲಾ ಅವರನ್ನು ಸೆರೆ ವಾಸದಿಂದ ಮುಕ್ತಗೊಳಿಸಲು ಅಧ್ಯಕ್ಷ ಪಿಕ್ ಡಬ್ಲು ಬೋಥೋ ಒಪ್ಪಿದ್ದರು. ಆದರೆ ಈ ಕೊಡಕೊಳ್ಳುವಿಕೆಯ ಒಪ್ಪಂದದ ಮುಂದಿನ ಪರಿಣಾಮಗಳ ಬಗೆಗೆ ಸರಕಾರ ಹಾಗೂ ಎಎನ್‌ಸಿ  ಮಧ್ಯೆ ವಾಗ್ವಾದವಾಗಿ ಮತ್ತೆ ಹೆಚ್ಚಿನ ಬಿರುಕು ಉಂಟು ಮಾಡಿತು. ಸ್ವತಃ ಮಂಡೇಲಾ ಅವರೇ ಇದರ ಬಗೆಗೆ ಹೇಳಿಕೆ ನೀಡುತ್ತಾ, ಯಾವುದೇ ಒಬ್ಬ ವ್ಯಕ್ತಿ ‘ವ್ಯಕ್ತಿ ಸ್ವಾತಂತ್ರ್ಯ’ವನ್ನು ಪಡೆಯುವರೆಗೆ ಬಿಡುಗಡೆ ಹಾಗೂ ಸಂಘಟನೆ ಎಂಬ ಒಪ್ಪಂದದ ಮಾತುಗಳೇ ಇಲ್ಲ ಎಂದು ಖಂಡತುಂಡಾಗಿ ಅಭಿಪ್ರಾಯಸಿದರು. ಹೀಗಾಗಿ ತಾತ್ಕಾಲಿಕವಾಗಿ ಹುಟ್ಟಿಕೊಂಡಿದ್ದ ಗೊಂದಲಗಳಿಗೆ ಸ್ವತಹ ಮಂಡೇಲಾ ಅವರೇ ಹೇಳಿಕೆ ನೀಡುವುದರ ಮೂಲಕ ಪೂರ್ಣ ವಿರಾಮ ಹಾಕಿದರು.

ಅನಾರೋಗ್ಯದ ಕಾರಣ ೧೯೮೫ರಲ್ಲಿ ತಾತ್ಕಾಲಿಕ ಬಿಡುಗಡೆಗೆ ಸರಕಾರ ಒಪ್ಪಿತು. ಕೇಪ್ ಟೌನ್‌ನ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಪಡೆಯುತ್ತಿದ್ದ ನೆಲ್ಸನ್ ಮಂಡೇಲಾ ಅವರನ್ನು ರಾಷ್ಟ್ರೀಯ ಪಕ್ಷದ ಸರಕಾರದಲ್ಲಿದ್ದ ಮಂತ್ರಿ ಕೊಬಿ ಕೊಟ್ಸೇ ಮೊಟ್ಟ ಮೊದಲಿಗೆ  ಭೇಟಿ ಮಾಡಿದರು. ಇಂಥ ಬೆಳವಣಿಗೆಯು ಮುಂದಿನ ಮಾತುಕತೆಗಳಿಗೆ ದಾರಿ ಮಾಡಿಕೊಟ್ಟಿತು. ಸುಮಾರು ನಾಲ್ಕು ವರ್ಷಗಳ ಕಾಲ ಗಂಭೀರವಾದ ಚರ್ಚೆಗಳು ಎಎನ್‌ಸಿ ಮತ್ತು ಪ್ರಿಟೋರಿಯಾ ಸರಕಾರದ ನಡುವೆ ನಡೆದವು. ಮಂಡೇಲಾ ಅವರನ್ನು ಸೆರೆವಾಸಕ್ಕೆ ದೂಡಿದ ದಿನದಿಂದ ಹಿಡಿದೂ ೧೯೮೫ರ ವರೆಗಿನ ಕಾಲಾವಧಿಯಲ್ಲಿ ಸ್ಥಳೀಯವಾಗಿ, ಆಫ್ರಿಕಾ ಖಂಡದಲ್ಲಿರುವ ರಾಷ್ಟ್ರಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಬಿಡುಗಡೆಗಾಗಿ ಅನೇಕ ತರಹದ  ತೀವ್ರತರ ಒತ್ತಡಗಳು ಹಾಗೂ ಹೋರಾಟಗಳು ಜೋರಾಗಿ ನಡೆದವು. ೧೯೮೯ರ ಹೊತ್ತಿಗೆ ಮಾನವಹಕ್ಕುಗಳು ಹಾಗೂ ಸ್ವಾತಂತ್ರ್ಯದ ಬಗೆಗೆ ಸಂಬಂಧಿಸಿದ ವಿಷಯಗಳಲ್ಲಿ ಹೊಣೆಗಾರಿಕೆಯಿಂದ ವರ್ತಿಸುತ್ತಿದ್ದ ಅಂತಾರಾಷ್ಟ್ರೀಯ ಸಂಘಟನೆಗಳು ಹಾಗೂ ಬೇರೆ ಬೇರೆ ದೇಶಗಳ ಪ್ರಜ್ಞಾವಂತರು ಅಧ್ಯಕ್ಷ ಪಿ.ಡಬ್ಲ್ಯೂ.ಬೋಥಾ ಮೇಲೆ ತೀವ್ರವಾದ ಒತ್ತಡ ಹೇರಿದರು. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಪಾರ್ಟಿ ಸರಕಾರ ವಿಧಿಯಿಲ್ಲದೆ ಮಂಡೇಲಾ ಬಿಡುಗಡೆ ಬಗೆಗಿನ ಮಾತುಕತೆಗಳಿಗೆ ಬಗ್ಗಲೇ ಬೇಕಾಯಿತು. ಆದರೆ ದುರದೃಷ್ಟವಶಾತ್ ಇದೇ ವೇಳೆಗೆ ಅಧ್ಯಕ್ಷ ಬೋಥೊ ಅವರು ಪಾರ್ಶ್ವವಾಯು ಹೊಡೆತದಿಂದ ಅಧಿಕಾರ ತ್ಯಜಿಸಬೇಕಾಯಿತು. ಹೀಗಾಗಿ ಆಫ್ರಿಕಾದ ಹೋರಾಟಗಾರರ ಬಗೆಗೆ ಮೃದು ಧೋರಣೆ ತಾಳಿದ್ದ ನ್ಯಾಷನಲ್ ಪಾರ್ಟಿ ಸರಕಾರ ತನ್ನ ನಿಲುವುಗಳಲ್ಲಿನ ಬದಲಾವಣೆಗೆ ಹಿಂದೇಟು ಹಾಕಿತು. ಆದ್ದರಿಂದ ಬಿಡುಗಡೆಯ ನಿರ್ಧಾರ ಮತ್ತೆ  ಒಂದು ವರ್ಷ ಕಾಲ ಮುಂದೊಡಿತು. ಆದರೆ ಬಿಡುಗಡೆಗೆ ಸಂಬಂಧಿಸಿದ ಹೋರಾಟಗಳು ವ್ಯಾಪಕಗೊಂಡು ಪರಿಸ್ಥಿತಿ ತುಂಬ ಬಿಗಡಾಯಿಸಿತು. ತೆರವಾದ ಸ್ಥಾನಕ್ಕೆ ಬಂದ ಎಫ್.ಡಬ್ಲ್ಯೂ.ಡಿ.ಕ್ಲರ್ಕ್ (Frederik willem de Klerlc) ಅವರು ೧೯೯೦ರಲ್ಲಿ ನೆಲ್ಸನ್ ಮಂಡೇಲಾ ಅವರನ್ನು ಬಂಧಮುಕ್ತಗೊಳಿಸುವುದಾಗಿ ಘೋಷಿಸಿದರು. ಕಾರಣ ಸರಕಾರಕ್ಕೆ ಇದು ಅನಿವಾರ್ಯವಾಗಿತ್ತು.

ಬಿಡುಗಡೆಗೊಂಡ ಬೇಡಿ

ಅಧ್ಯಕ್ಷ ಕ್ಲರ್ಕ್ ಅವರು ೨ನೇ ಫೆಬ್ರವರಿ ೧೯೯೦ರಲ್ಲಿ ಎಎನ್‌ಸಿ ಹಾಗೂ ಉಳಿದ ಎಲ್ಲ ಸಂಘಟನೆಗಳ ಮೇಲೆ ಹೇರಿದ್ದ ದಿಗ್ಬಂಧನವನ್ನು ತೆರವುಗೊಳಿಸಿದರು. ಅಲ್ಲದೇ  ೧೯೯೦ನೆಯೊಫೆಬ್ರವರಿ ೧೧ರಂದು ಕಾರಾವಾಸದಿಂದ ನೆಲ್ಸನ್ ಮಂಡೇಲಾ ಅವರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಅವರು ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಸಶಸ್ತ್ರ ಹೋರಾಟ ಬಿಳಿಯ ಸರಕಾರ ಮಾಡುತ್ತಿರುವ ವರ್ಣಭೇದ ತಾರತಮ್ಯಗೋಸ್ಕರ ನಿಲುವಿಗೆ ವಿರುದ್ಧವಾಗಿ ಹೊರತು ದೇಶದಲ್ಲಿ ಅಶಾಂತಿ ಹಾಗೂ ಭಯವನ್ನು ಹುಟ್ಟಿಸುವುದಲ್ಲವೆಂದು ಮತ್ತೆ ಪ್ರತಿಪಾದಿಸಿದರು. ಇಂಥ ಆಯ್ಕೆಯ ಹೊರತು ನಮಗೆ ಬೇರೆ ಯಾವ ದಾರಿಗಳಿಲ್ಲ. ಇದನ್ನು ತಪ್ಪಿಸಲು(ಹಿಂಸಾತ್ಮಕ ಹೋರಾಟ) ಬಹುಮತದಿಂದ ಆಯ್ಕೆಗೊಂಡ ಸರಕಾರ ದೇಶದ ಆಡಳಿತವನ್ನು ನಿರ್ವಹಿಸಬೇಕಾಗಿರು ವುದು ಅತ್ಯಾವಶ್ಯಕವೆಂದು ದಿಟವಾಗಿ ನುಡಿದರು. ಇದೇ ವೇಳೆಗೆ ಕಪ್ಪು ಜನಾಂಗ ಮಾಡುತ್ತಿದ್ದ ಹೋರಾಟ ಕುರಿತು ಶಾಂತಿಯಿಂದ ಇರುವಂತೆ ಮನವಿ ಮಾಡಿಕೊಂಡರು. ಅಲ್ಲದೇ ಮುಂದಿನ ದಿನಗಳಲ್ಲಿ ನಡೆಯಬಹುದಾದ ಚುನಾವಣೆಗಳಲ್ಲಿ ಎಲ್ಲ ಜನರಿಗೂ ಯಾವ ಭೇದವಿಲ್ಲದೇ ಮತದಾನದ ಪರಮಾಧಿಕಾರ ನೀಡಬೇಕೆಂದು ಒತ್ತಾಯ ಪೂರ್ವಕ ಆಗ್ರಹ ಮಾಡಿದರು.

ಸಂಧಾನ ಸಮಾಲೋಚನೆಗಳು

ಬಿಡುಗಡೆಗೊಂಡ ನೆಲ್ಸನ್ ಮಂಡೇಲಾ ಅವರು ೧೯೯೦ರಲ್ಲಿ ಎಎನ್‌ಸಿಯ ನೇತೃತ್ವವನ್ನು ವಹಿಸಿಕೊಂಡರು. ಅಧಿಕಾರವಹಿಸಿಕೊಂಡ ಮಂಡೇಲಾ ಮೊದಲು ಎಎನ್‌ಸಿ ಪಕ್ಷದಲ್ಲಿ ಬಹು ಜನಾಂಗಗಳು ಭಾಗವಹಿಸುವಿಕೆಯಿಂದ ಅದಕ್ಕೊಂದು ಹೊಸ ಸ್ವರೂಪ ನೀಡುವ ಪ್ರಯತ್ನ ಮಾಡಿದರು. ಸ್ವಾತಂತ್ರ್ಯ ಹೋರಾಟಗಾರರು ಹಲವು ದಶಕಗಳ ದಿಗ್ಭಂಧನದಿಂದ ಮುಕ್ತವಾದ ನಂತರ ಅದಕ್ಕೊಂದು ಸಭೆಯನ್ನು ನಡೆಸಲಾಯಿತು. ತಮ್ಮ ಮುಂದಿನ ಹೋರಾಟದ ನಾಯಕನ್ನನ್ನು ಕಂಡುಕೊಂಡ ಜನರು ಈ ಸಭೆಯಲ್ಲಿ ಸರ್ವಾನುಮತದಿಂದ ನೆಲ್ಸನ್ ಮಂಡೇಲಾ ಅವರನ್ನು ಎಎನ್‌ಸಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡರು.

ನೆಲ್ಸನ್ ಮಂಡೇಲಾರ ಜೈಲುವಾಸದ ಸಮಯದಲ್ಲಿ ಎಎನ್‌ಸಿಯನ್ನು ಮುನ್ನಡೆಸಿದ ಓಲಿವರ್ ಟ್ಯಾಂಬೋ ಅವರನ್ನು ಗೌರವಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಮಂಡೇಲಾ ಅವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನ ಅಧ್ಯಕ್ಷತೆಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಅಧ್ಯಕ್ಷ ಎಫ್.ಡಬ್ಲ್ಯೂ.ಡಿ.ಕ್ಲರ್ಕ್ ಅವರೊಂದಿಗೆ ಸಂಧಾನ ಸಮಾಲೋಚನೆಗಳ ಮೂಲಕ ಸೌರ್ಹದ ಸಂಬಂಧ ಸ್ಥಾಪಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದರು. ಇದಕ್ಕೆ ಸರಕಾರವು ಸಹ ಸಾಕಾರಾತ್ಮಕ ಧೋರಣೆ ತಾಳಿತು. ಕೆಲವೊಮ್ಮೆ ಮನಸ್ಸಿಲ್ಲದಿದ್ದರೂ ಅಧ್ಯಕ್ಷ ಕ್ಲರ್ಕ್ ಮತ್ತು ಮಂಡೇಲಾ ಅವರು ಅಂತಾರಾಷ್ಟ್ರೀಯ ಸಂಘಟನೆಗಳ ಬಲವಂತದ ಒತ್ತಡದ ಮೇಲೆ ಕೆಲವು ಸಮಾಲೋಚನೆ ಸಂಧಾನಗಳನ್ನು ಕೈಗೊಂಡದ್ದುಂಟು. ಅಂದಿನ ಆಡಳಿತವು ನ್ಯಾಯಸಮ್ಮತವಲ್ಲದ, ತಾರತಮ್ಯತೆಯಿಂದ ಕೂಡಿದ ಹಾಗೂ ಅತಿಯಾಗಿ ಅಲ್ಪಸಂಖ್ಯಾತರ (ಬಿಳಿಯರು) ತುಷ್ಟೀಕರಣ ಕ್ರಮಗಳನ್ನು ನಿರ್ವಹಿಸುತ್ತಿದ್ದರೂ ಮಂಡೇಲಾ ಅವರು ಕ್ಲರ್ಕ್ ಜೊತೆ ಹೊಂದಿದ್ದ ಒಳ್ಳೆಯ ಸಂಬಂಧದಿಂದಾಗಿ ಕೆಲವು ಒಪ್ಪಂದಗಳನ್ನು ಮನಸ್ಸಿಲ್ಲದಿದ್ದರೂ ದೇಶದ ಮುಂದಿನ ಆಗುಹೋಗುಗಳಿಗಾಗಿ ಒಪ್ಪಿಕೊಂಡರು. ಆದರೆ ೧೯೯೨ರಲ್ಲಿ ನಡೆದ ಬಾಯೋಪಾಟಾಂಗ್ ಹತ್ಯಾಕಾಂಡದಿಂದ ಮತ್ತೆ ಪರಿಸ್ಥಿತಿ ಬಿಗಡಾಯಿಸಿ ದೇಶದಲ್ಲಿ ಹೆಚ್ಚಿನ ಅಶಾಂತಿ ಉಂಟಾಯಿತು. ಅಲ್ಲದೇ ಕೆಲವು ತಿಂಗಳು ಕಾಲ ತಣ್ಣಗಾಗಿದ್ದ ಹಿಂಸಾಪ್ರವೃತ್ತಿ ೧೯೯೩ರಲ್ಲಿ ಎಎನ್‌ಸಿಯ ನಾಯಕ ಕ್ರಿಸ್ ಹ್ಯಾನಿಯ ಹತ್ಯೆಯಿಂದ ಧೀಡಿರನೇ ಹೊರ ಹೊಮ್ಮಿತು. ದೇಶದಲ್ಲಿ ಮತ್ತೆ ಶಾಂತಿ ಕದಡಿದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ರಕ್ತಪಾತದ ಕುರಿತು ನೆಲ್ಸನ್ ಮಂಡೇಲಾರು ದೇಶವನ್ನು ಉದ್ದೇಶಿಸಿ ಮಾತನಾಡುತ್ತ,

ದೇಶದಲ್ಲಿ ಹುಟ್ಟಿಕೊಂಡಿರುವ ಈ ಅಶಾಂತಿಯನ್ನು ತಹಬಂಧಿಗೆ ತರುವುದು ಎಲ್ಲ ಆಫ್ರಿಕನ್‌ರ ಆದ್ಯ ಕರ್ತವ್ಯ. ಇದರಲ್ಲಿ ಕರಿಯರು ಹಾಗೂ ಬಿಳಿಯರು ಸಮಾನ ಪಾತ್ರವಹಿಸಬೇಕು. ಬಿಳಿಯರು ಅತಿಯಾಗಿ ಹೊಂದಿ ರುವ ಪೂರ್ವಾಗ್ರಹ ಹಾಗೂ ಬಹುಸಂಖ್ಯಾತ ಕರಿಯರನ್ನು ಅಲ್ಲಗಳೆಯುವ ನೀತಿಯನ್ನು ಕೈಬಿಡಬೇಕು. ಶತಮಾನಗಳಿಂದಲೂ ಅನುಸರಿಸುತ್ತಾ ಬಂದಿರುವ ವರ್ಣಭೇದ ನೀತಿಯನ್ನು ಕೈ ಬಿಟ್ಟು ಆಫ್ರಿಕಾಕ್ಕಾಗಿ ಪಣತೊಡಬೇಕು. ಕ್ರಿಸ್ ಹಾನಿಯ ಹತ್ಯೆಯನ್ನು ಯಾವ ತಾರತಮ್ಯವಿಲ್ಲದೇ ಎಲ್ಲರೂ ಖಂಡಿಸಬೇಕು ಎಂದು ಕರೆ ನೀಡಿದರು.

ಈ ಹತ್ಯೆಯು ಆಫ್ರಿಕಾದಲ್ಲಿ ಭಾರೀ ಪ್ರಮಾಣದಲ್ಲಿ ಶಾಂತಿ ಕದಡಿದರೂ ಸಂಧಾನದ ಮಾತುಕತೆಯ ಬಾಗಿಲುಗಳನ್ನು ಮುಚ್ಚುವ ಪ್ರಯತ್ನವನ್ನು ಯಾರೊಬ್ಬರು ಮಾಡಲು ಇಚ್ಚಿಸಲಿಲ್ಲ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಸಂಘಟನೆಗಳು ಮಾನವ ಹಕ್ಕುಗಳ ಸಂಬಂಧವಾಗಿ ಆಫ್ರಿಕಾ ಸರಕಾರದ ಮೇಲೆ ಒತ್ತಡ ಹೇರುವುದಕ್ಕೆ ಹೆಚ್ಚಿನ ಉತ್ತೇಜನ ಸಿಕ್ಕಂತಾಯಿತು. ಈ ಪರಿಣಾಮದಿಂದ ಸರಕಾರವು ಎಲ್ಲದಕ್ಕೂ ಹಿಡಿದುಕೊಂಡಿದ್ದ ಹಠದಿಂದ ಸೋತು ಹಿಂದೆ ಸರಿಯಿತು. ೧೯೯೪ರ ಏಪ್ರಿಲ್ ೨೨ರಂದು ಘೋಷಣೆ ಹೊರಡಿಸುತ್ತಾ ಪ್ರಜಾಸತ್ತಾತ್ಮಾಕವಾಗಿ ಎಲ್ಲರೂ ಭಾಗವಹಿಸುವ ಚುನಾವಣೆಗೆ ಯಾವ ವಿಧಿಯಿಲ್ಲದೆ ಸರಕಾರ ಒಪ್ಪಿಗೆ ನೀಡಿತು. ಇದು ಮಂಡೇಲಾ ನೇತೃತ್ವದ ಎ.ಎನ್.ಸಿ.ಯ ಐತಿಹಾಸಿಕ ವಿಜಯವೆಂದು ಅಭಿಪ್ರಾಯಿಸಲಾಗಿದೆ.

ಆತ್ಮಕಥನಗಳು

ನೆಲ್ಸನ್ ಮಂಡೇಲಾ ಸೆರೆವಾಸದ ಸಮಯದಲ್ಲಿ ತಮ್ಮ ಅನುಭವಗಳನ್ನು ಬರೆಯಲು  ಪ್ರಾರಂಭಿಸಿದರು. ಲಾಂಗ್ ವಾಕ್ ಟು ಫ್ರೀಡಮ್ ಅವರ ಪ್ರಸಿದ್ಧ ಆತ್ಮಕಥನ. ಆದರೆ ಇದರಲ್ಲಿ ಎಫ್.ಡಬ್ಲ್ಯೂ.ಡಿ. ಕ್ಲರ್ಕ್ ಆಡಳಿತದಲ್ಲಿ ನಡೆದ ಕ್ರೂರ ಹತ್ಯೆಗಳಾಗಲಿ ಹಾಗೂ ಮಂಡೇಲಾ ಮಾಜಿ ಪತ್ನಿ ವಿನಿಮಂಡೇಲಾ ಅವರು ಅನೇಕೊಹಿಂಸಾಕೃತ್ಯಗಳ ಹಿಂದೆ  ಹೊಂದಿದ್ದ ಕೈವಾಡಗಳ ಕುರಿತು ಮುಕ್ತವಾಗಿ ಬರೆಯಲಿಲ್ಲ(ಎಂಬತ್ತು, ತೊಂಭತ್ತರ ದಶಕದ ಕಗ್ಗೊಲೆಗಳು).ಇಂಥ ಕೊರತೆಗಳನ್ನು ಬಿಟ್ಟರೆ ಈ ಕೃತಿಯು ನೆಲ್ಸನ್ ಮಂಡೇಲಾರನ್ನು ಪೂರ್ಣವಾಗಿ ಕಟ್ಟಿಕೊಡುವ ಮಹತ್ವದ ಕೃತಿಯಾಗಿದೆ. ಲೇಖಕ ಜೇಮ್ಸ್ ಜಾರ್ಜ(ಮಂಡೇಲಾ ದಿ ಆಥರೈಸ್ಡ್ ಬಯೋಗ್ರಾಫಿ) ಅವರು ನೆಲ್ಸನ್ ಮಂಡೇಲಾ ಅವರ ವೈಯಕ್ತಿಕ ಕುಟುಂಬದ ಬಗೆಗೆ ಆಸಕ್ತಿದಾಯಕ ವಿಷಯಗಳನ್ನು ತಮ್ಮ ಪುಸ್ತಕಗಳಲ್ಲಿ ಮಂಡಿಸಿದ್ದಾರೆ. ಸಾಂಪ್ಸ್‌ನ್ ಎಂಬ ಲೇಖಕ ಸಹ ಮಂಡೇಲಾರ ಸೆರೆವಾಸದ ದಿನಗಳ ಕುರಿತಂತೆ ಬರೆದು ಪ್ರಕಟಿಸಿದ್ದಾರೆ. ಈ ಮೇಲ್ಕಾಣಿಸಿದ ಕೃತಿಗಳು ಮಂಡೇಲಾರ ಕುರಿತು ವಿವರವಾಗಿ ಬೆಳಕು ಚೆಲ್ಲುವ ಮಹತ್ವದ ಗ್ರಂಥಗಳಾಗಿವೆ.

ಅಧ್ಯಕ್ಷರಾಗಿ ನೆಲ್ಸನ್ ಮಂಡೇಲಾ

ಕಪ್ಪು ಜನಾಂಗವು ಹಲವು ದಶಕಗಳ ಕಾಲ ನಿರಂತರ ಹೋರಾಟ ಮಾಡುವುದರ ಮೂಲಕ ಕೊನೆಗೂ ಕ್ರೂರಿಯಾದ ಪ್ರಿಟೋರಿಯಾ ಆಡಳಿತವನ್ನು ಮಣಿಸಿತು. ೧೯೯೪ರಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಮೊಟ್ಟಮೊದಲಿಗೆ ದಕ್ಷಿಣ ಆಫ್ರಿಕಾದಲ್ಲಿದ್ದ ಎಲ್ಲ ಜನರು ಉತ್ಸಾಹದಿಂದೊಪಾಲ್ಗೊಂಡು ಎ.ಎನ್.ಸಿ.ಯನ್ನು ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಿದರು. ಶೇಕಡಾ ಅರವತ್ತೇರಡರಷ್ಟು ಮತಗಳನ್ನು ಎಎನ್‌ಸಿಯು ಪಡೆದುಕೊಂಡಿತು. ಜನನಾಯಕರಾಗಿ ಮೂಡಿಬಂದ ನೆಲ್ಸನ್ ಮಂಡೇಲಾ ೧೯೯೪ರ ಮಹಾಚುನಾವಣೆಯಲ್ಲಿ ಜಯಭೇರಿ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ಇತಿಹಾಸದಲ್ಲಿ ಮೊಟ್ಟಮೊದಲ ಕಪ್ಪು ನಾಯಕನೊಬ್ಬ ಅಧ್ಯಕ್ಷನಾಗಿ ಆಯ್ಕೆ ಆಗುವ ಸುಸಂದರ್ಭ ಒದಗಿಬಂತು. ವರ್ಣಭೇದ ನೀತಿಗೆ ಶಾಶ್ವತವಾದ ತೆರೆ ಎಳೆದು ಎಲ್ಲರ ಹಕ್ಕುಗಳನ್ನು ಗೌರವಿಸುವ ವಾಗ್ದನವನ್ನು ಮಾಡಿದರು. ನೂರಾರು ವರ್ಷಗಳಿಂದ ಆಳವಾದ ಕಂದಕದ ಹಾಗೆ ಸೃಷ್ಟಿಗೊಂಡಿದ್ದ ಬಿಳಿಯರ ಮತ್ತು ಕರಿಯರ ಮಧ್ಯದ ಅಸಮಾಧಾನ ಅಥವಾ ದ್ವೇಷವನ್ನು ಶಾಶ್ವತವಾಗಿ ನಂದಿಸುವ ಗಂಭೀರವಾದ ಪ್ರಯತ್ನವನ್ನು ಮಾಡಿದರು. ಆಫ್ರಿಕನ್ನರ ಸೌರ್ಹಾದತೆಯನ್ನು ಜಗತ್ತಿಗೆ ಸಾರಿ ಹೇಳುವ ಮನೋಭಾವನೆಯನ್ನಿಟ್ಟುಕೊಂಡು ಜಾಗತಿಕ ಮಟ್ಟದ ರಗ್ಬಿ ಪಂದ್ಯಾವಳಿಯನ್ನು ಏರ್ಪಡಿಸಿ ಶಾಂತಿಯುತ ಆಡಳಿತದ ನಿರ್ವಹಣೆಯ ಪ್ರಾರಂಭಕ್ಕೆ ಹಸಿರು ನಿಶಾನೆ ತೋರಿಸಿದಂತಾಯಿತು. ಅಂತಿಮ ಪಂದ್ಯದಲ್ಲಿ ಗೆಲುವು ಪಡೆದ ನ್ಯೂಜಿಲೆಂಡ್ ತಂಡಕ್ಕೆ ತಾವೇ ಖುದ್ದಾಗಿ ಟ್ರೋಫಿಯನ್ನು ಸಹ ನೀಡಿದರು. ಸೌಂದರ್ಯ ಪ್ರಿಯರಾಗಿದ್ದ ಅವರು ವರ್ಣಚಿತ್ರಾಲಂಕಾರಗಳಿಂದ ಕೂಡಿದ (ಕಪ್ಪು ಅಂಗಿಗಳು)ತಮ್ಮ ಅಧ್ಯಕ್ಷಾವಧಿಯಲ್ಲಿಯೂ ಹಾಕುತ್ತಿದ್ದರು. ಇದು ‘‘ಮಡಿಬಾ ಶರ್ಟ್ಸ್’’  ಎಂತಲೇ ಪ್ರಸಿದ್ದಿಯಾಗಿತ್ತು. ವರ್ಣಭೇದ ಸರಕಾರ ಪತನಾನಂತರ ಅಖಂಡ ದಕ್ಷಿಣ ಆಫ್ರಿಕಾದ ಆಡಳಿತ ಚುಕ್ಕಾಣಿ ಹಿಡಿದು ಎ.ಎನ್.ಸಿ.ಸರಕಾರವು ೧೯೯೮ರಲ್ಲಿ ಮೊಟ್ಟಮೊದಲಿಗೆ ನೆಲ್ಸನ್ ಮಂಡೇಲಾ ಅವರ ಅಣತಿಯಂತೆ  ಸೈನಿಕ ಕಾರ್ಯಾಚರಣೆ ಕೈಗೊಂಡತು. ಪ್ರಧಾನಿ ಪಕಲಿತಾ ಮೊಸಿಸಿಲಿಯ ಸರಕಾರವು ವಿರೋಧಿಗಳ ಉಪಟಳದಿಂದ ಕಂಗೆಟ್ಟಾಗ ಸಮಸ್ಯೆಯ ನಿವಾರಣೆಗಾಗಿ ಅನಿವಾರ್ಯತೆಯಿಂದ ಮೊಟ್ಟಮೊದಲಿಗೆ ಸೈನಿಕ ಕಾರ್ಯಾಚರಣೆ ಕೈಗೊಳ್ಳಲು ಅಧ್ಯಕ್ಷರಾದ ಮಂಡೇಲಾ ಅವರು ಆಜ್ಞೆ ನೀಡಿದರು. ಸೈನಿಕ ಕಾರ್ಯಾಚರಣೆಯನ್ನು ಪ್ರಬಲವಾಗಿ ವಿರೋಧಿಸಿಕೊಂಡು ಬಂದಿದ್ದ ಎ.ಎನ್.ಸಿ.ಪಕ್ಷಕ್ಕೆ ತುಂಬ ಮುಜುಗರ ಉಂಟು ಮಾಡುವ ವರದಿಗಳು ಪ್ರಕಟವಾದವು. ಆದರೆ ಇಂಥ ಕಾರ್ಯಾಚರಣೆ ಧೋರಣೆಯು ಪ್ರಜಾ ಪ್ರಭುತ್ವವನ್ನು ಕಾಪಾಡಿಕೊಳ್ಳುವ ಏಕ ಮಾತ್ರ ಉದ್ದೇಶ ಹೊಂದಿತ್ತು ಹೊರತು ಯಾವ ಅಧಿಕಾರವನ್ನು ಚಲಾಯಿಸುವ ದುರದ್ದೇಶ ಹೊಂದಿಲ್ಲ ಎಂಬುದನ್ನು ಅಧ್ಯಕ್ಷರು ಸ್ಪಷ್ಟಪಡಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಏಡ್ಸ್  ಮಹಾ ಮಾರಿಯು ದೊಡ್ಡ ಪ್ರಮಾಣದಲ್ಲಿ ಜೀವ ಹಾನಿ ಮಾಡುತ್ತಿತ್ತು. ಇದು ರಾಜಕೀಯ ವಿಪ್ಲವಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಕ್ಷಿಣ ಆಫ್ರಿಕಾದ ಇಡೀ ವ್ಯವಸ್ಥೆಯನ್ನು ಕೆಂಗೆಡಿಸಿತ್ತು. ಜಗತ್ತಿನಲ್ಲಿಯೇ ಅತೀ ಹೆಚ್ಚು ಏಡ್ಸ್  ರೋಗಿಗಳನ್ನು ಆ ಸಮಯದಲ್ಲಿ  ದೇಶವು ಹೊಂದಿತ್ತು. ಹೀಗಾಗಿ ಇದನ್ನು ತಡೆಗಟ್ಟಲು ನೆಲ್ಸನ್ ಮಂಡೇಲಾ ಸರಕಾರ ಸಂಪೂರ್ಣ ವಿಫಲಗೊಂಡಿತು ಎಂಬ ತೀವ್ರ ಟೀಕೆಗಳು ವ್ಯಕ್ತವಾದವು. ಏಡ್ಸ್  ಮಹಾರೋಗವನ್ನು ತಡೆಗಟ್ಟುವ ಜಾಗೃತ ಪಡೆಯ ನಾಯಕನಾಗಿದ್ದ ಎಡ್ವಿನ್ ಕ್ಯಾಮರೂನ್ ಸಹ ನೆಲ್ಸನ್ ಮಂಡೇಲಾರ ಆಡಳಿತವನ್ನು ಗಂಭೀರ ಟೀಕೆ ಮಾಡುವುದರ ಮೂಲಕ ಹೆಚ್ಚಿನ ಮುಜುಗರಕ್ಕೆ ಒಳಪಡಿಸಿದನು. ಹೊಸದಾಗಿ ರಚನೆಗೊಂಡ ಆಡಳಿತ ಇಂಥ ಭಯಂಕಾರವಾದ ಜೀವಹಾನಿಯನ್ನು ತಡೆಗಟ್ಟಲು ಏನೆಲ್ಲಾ ಕ್ರಮ ಕೈಗೊಂಡರೂ ಏಡ್ಸ್  ಹಾಗೂ ಎಚ್‌ಐವಿ ಮಹಾಮಾರಿಯನ್ನು  ಸಂಪೂರ್ಣವಾಗಿ ತಡೆಗಟ್ಟುವ ಪ್ರಯತ್ನದಲ್ಲಿ ಮಂಡೇಲಾ ಸರಕಾರ ವಿಫಲವಾಯಿತು. ಸಾವಿರ ಪರಿಣಾಮಗಳು ಕಪ್ಪು ಜನರ ಅಪ್ರಜ್ಞಾವಂತ ಮನೋಭಾವನೆಗಳಿಗೆ ಹಿಡಿದ ಕೈಗನ್ನಡಿಯಾಯಿ ತೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ವಿಚಾರಣೆ

ಸ್ವತಂತ್ರವಾದ ಆಫ್ರಿಕಾ ದೇಶದ ಸರಕಾರ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ  ಪ್ರತಿಕ್ರಿಯಿಸಿದ ಮೊಟ್ಟಮೊದಲ ನಡೆ ಈ ವಿಚಾರದಲ್ಲಿ ವ್ಯಕ್ತವಾಯಿತು. ಪ್ರಮಾಣಿಕರು ತುಂಬಿದ ವಿಮಾನವನ್ನು ಲಿಬಿಯಾದ ಇಬ್ಬರು ನಾಗರಿಕರು ಸಂಚುಮಾಡಿ ಅಪಘಾತ ಮಾಡಿದ್ದರ ಸಂಬಂಧವಾದ ಈ ವಿಚಾರಣೆಯ ಬಗೆಗೆ ನೆಲ್ಸನ್ ಮಂಡೇಲಾ ಅವರು ಹೆಚ್ಚಿನ ಮುತವರ್ಜಿ ವಹಿಸಿದ್ದರು.

೧೯೮೮ರಲ್ಲಿ ಪಾನ್‌ಆಮ್ ೧೦೩ ಎಂಬ ನಾಗರಿಕ ವಿಮಾನವನ್ನು ಸ್ಕಾಟ್‌ಲ್ಯಾಂಡ್ ಪಟ್ಟಣದ ಬಳಿಯ ಲಾಕರ್‌ಬಿ ಎಂಬಲ್ಲಿ ಅಪಘಾತಗೊಳ್ಳಲು ಸಂಚು ರೂಪಿಸಿದ್ದರೂ ಹಾಗೂ ಇದರಲ್ಲಿದ್ದ ೨೭೦ ಜನರ ದುರ್ಮರಣಕ್ಕೆ ಇವರು ಕಾರಣಕರ್ತರು ಎಂದು ಆಪಾಧಿಸಿ ಲಿಬಿಯಾದ ಇಬ್ಬರು ನಾಗರಿಕರನ್ನು ಮರಣದಂಡನೆ ಶಿಕ್ಷೆಗೆ ಒಳಪಡಿಸಲು ಅಮೆರಿಕಾ ಹಾಗೂ ಇಂಗ್ಲೆಂಡ್ ಸರಕಾರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಒತ್ತಡವನ್ನು ತೀವ್ರವಾಗಿ ತರುತ್ತಿದ್ದವು. ಹಾಗೂ ಇಂಥ ದುಷ್ಕೃತ್ಯಕ್ಕೆ ಲಿಬಿಯಾದ ಕರ್ನ್‌ಲ್ ಗಡಾಫಿ ಸರಕಾರವೇ ಹೊಣೆಗಾರವೆಂದು ಪ್ರಬಲವಾಗಿ ಈ ದೇಶಗಳು ಆರೋಪಿಸುತ್ತಿದ್ದವು. ಅಲ್ಲದೇ ಈ ದುರಂತಕ್ಕೆ ಕಾರಣರಾದವರನ್ನು ತಾನು ಬಯಸಿದ ಸ್ಥಳದಲ್ಲಿಯೇ ಸೂಕ್ತ ವಿಚಾರಣೆಗೆ ಒಳಪಡಿಸಬೇಕೆಂದು ಇಂಗ್ಲೆಂಡ ದೇಶವು ಪ್ರಬಲವಾಗಿ ವಾದಿಸುತ್ತಿತ್ತು. ಇದಕ್ಕೆ ಕಾರಣ ತಾನು ಇಚ್ಛೆ ಪಡದ ಯಾವುದೇ ಸ್ಥಳದಲ್ಲಿ ಈ ಕೃತ್ಯದ ಆರೋಪಿಗಳ ವಿಚಾರಣೆ ನಡೆದರೆ ಅದು ನ್ಯಾಯ ಸಮ್ಮತವಾಗಿ ನಡೆಯಲಾರದೆಂದು ಇಂಗ್ಲೆಂಡ್‌ನ ದೃಢ ನಿಲುವಾಗಿತ್ತು. ಆದರೆ ನೆಲ್ಸನ್ ಮಂಡೇಲಾ ಅವರು ಅಮೆರಿಕಾ ಹಾಗೂ ಇಂಗ್ಲೆಂಡ್ ದೇಶಗಳು ತಾಳಿರುವ ಹಟಮಾರಿತನದಿಂದ ಕೂಡಿದ ನಿಲುವುಗಳ ಬಗೆಗೆ ತೀವ್ರತರ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.  ಕಾರಣ ಆರೋಪ ಮಾಡಿರುವ ದೇಶವು ಈ ಸಂಬಂಧದ  ‘‘ವಿಚಾರಣೆ ಹಾಗೂ ತೀರ್ಪನ್ನು’’ ತಾನೇ ನೀಡುತ್ತೇನೆ ಎನ್ನುವ ಪ್ರಮೇಯಗಳೇ ಭಾರೀ ಸಂಶಯಗಳಿಗೆ ಎಡೆಮಾಡಿಕೊಡು ವಂತದ್ದು. ಆದ್ದರಿಂದ ಇಂಗ್ಲೆಂಡ್ ಸರಕಾರದ ನ್ಯಾಯ ಪರಿಪಾಲನೆಯು  ತಪ್ಪುದಾರಿಗೆ ಇಡಾಗಬಹುದೆಂದು ಅಭಿಪ್ರಾಯಿಸಿದರು. ನಿಕ್ಷಪಕ್ಷಪಾತ ಧೋರಣೆಯಿಂದ ಮಂಡೇಲಾ ಅವರ ಪ್ರವೇಶದಿಂದ ಸ್ವಲ್ಪಮಟ್ಟಿಗೆ ಇಂಗ್ಲೆಂಡ್ ದೇಶವು ಬಗ್ಗಿತು. ಜಾನ್ ಮೇಜರ್ ನಂತರ ಅಧಿಕಾರಕ್ಕೆ ಬಂದ ಟೋನಿ ಬ್ಲೇರ್ ಆಡಳಿತವು ಈ ಹಿಂದೆ ಇಂಗ್ಲೆಂಡ ಹೊಂದಿದ ನಿಲುವನ್ನು ಸಡಿಲಿಸಿ ಬೇರೊಂದು ದೇಶದಲ್ಲಿ ಆರೋಪಿತ ಖೈದಿಗಳ ವಿಚಾರಣೆಗೆ ಸಹಮತ ವ್ಯಕ್ತಪಡಿಸಿತು. ಪರಿಣಾಮ ನೆದರಲ್ಯಾಂಡ್‌ನ ಕ್ಯಾಂಪ್ ಜೆಯಿಸ್ಟ್‌ನಲ್ಲಿ ಸಂಬಂಧಿಸಿದವರ ವಿಚಾರಣೆಯನ್ನು ಕೈಗೊಳ್ಳಲು ನೆಲ್ಸನ್ ಮಂಡೇಲಾ ಅವರು ಲಿಬಿಯಾದ ಅಧ್ಯಕ್ಷ ಕರ್ನಲ್ ಗಡಾಫಿ ಅವರನ್ನು ಒಪ್ಪಿಸಿ ಇಬ್ಬರು ನಾಗರಿಕರನ್ನು ಹಸ್ತಾಂತರಿಸುವಂತೆ ಮನ ಒಲಿಸಿದರು. ಇದು ಅಧ್ಯಕ್ಷ ಮಂಡೇಲಾ ಅವರು ಜಾಗತಿಕ ಮಟ್ಟದಲ್ಲಿ ಹೊಂದಿದ್ದ ಬಿಗಿ ಹಿಡಿತವನ್ನು ಸ್ಪಷ್ಟಪಡಿಸುತ್ತದೆ. ಮೆಗ್ರೈ ಹಾಗೂ ಫಾಹಿಮ್ ಅವರಿಬ್ಬರನ್ನು ಸ್ಕಾಟ್‌ಲ್ಯಾಂಡ ದೇಶದ ಕಾನೂನಿನ್ವಯ ವಿಚಾರಣೆಗೆ ಒಳಪಡಿಸಲಾಯಿತು. ಸುಮಾರು ೯ ತಿಂಗಳ ಕಾಲ ನಡೆದ ಈ ವಿಚಾರಣೆಯಲ್ಲಿ ಮೆಗ್ರೈನನ್ನು ದೋಷಮುಕ್ತವಾಗಿ ಮಾಡಿತಲ್ಲದೇ ಫಾಹಿಮ್‌ನಿಗೆ ಅಲ್ಲಿನ ಕಾನೂನಿನ್ವಯ ೨೭ ವರ್ಷಗಳ ಅವಧಿಯ ಸೆರೆವಾಸದ ಶಿಕ್ಷೆಯನ್ನು ವಿಧಿಸಲಾಯಿತು. ಆದರೆ ಈತನು ನೆಲ್ಸನ್ ಮಂಡೇಲಾ ಅವರಿಗೆ ಹಾಗೂ ಜಗತ್ತಿನ ಬೇರೆ ಬೇರೆ ನಾಯಕರಿಗೆ ಮನವಿ ಸಲ್ಲಿಸಿ ತನ್ನನ್ನು ಸ್ಕಾಟ್‌ಲ್ಯಾಂಡ್‌ನ ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿಕೊಂಡನು. ಈತನ ಮನವಿಯನ್ನು ಪುರಸ್ಕರಿಸಿ, ಮಂಡೇಲಾ ಅವರು ಫಾಹಿಮ್‌ನನ್ನು ೨೦೦೨ ಜೂನ್ ಬರ್ಲಿನ್ನೈ ಜೈಲಿನಲ್ಲಿ ಭೇಟಿ ಮಾಡಿದರು. ಆತನು ಸೆರೆವಾಸವಧಿಯಲ್ಲಿ ಅನುಭವಿಸುತ್ತಿದ್ದ  ನೋವನ್ನು ಜಗತ್ತಿನ ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಐರೋಪ್ಯ ರಾಷ್ಟ್ರಗಳ ಜೈಲಿನಲ್ಲಿ ರಾಜಕೀಯ ಯುದ್ಧ ಕೈದಿಗಳು ಪಡುವ ನರಕ ಯಾತನೆಯನ್ನು ನಿರ್ದಾಕ್ಷಿಣ್ಯವಾಗಿ ಹೊರಗೆಡವಿದರು. ಈ ಪರಿಣಾಮದಿಂದ ಬಿಳಿಯ ಸರಕಾರಗಳ ಬಗೆಗೆ ಜಾಗತಿಕ ನಾಗರಿಕ ಸಮಾಜವು ತುಂಬ ತೀಕ್ಷಣವಾಗಿ ಪ್ರತಿಭಟಿಸುವಂತಹ ಸಂದರ್ಭಗಳು ಉಂಟಾದವು. ಆರೋಪಿತ ಕೈದಿಯನ್ನು ಈಜಿಪ್ಟ್, ಮೊರೆಕ್ಕೊ ಅಥವಾ ಟ್ಯೂನೇಷಿಯಾ ದೇಶಗಳಲ್ಲಿರುವ ಯಾವುದಾದರೊಂದು ಜೈಲಿಗೆ ಸ್ಥಳಾಂತರಿಸಿ ಆತನು ಪಡುವ ಏಕಾತಾನ ಯಾತನೆಯನ್ನು ಶೀಘ್ರವೇ ಬಗೆಹರಿಸಬೇಕೆಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆಕೊಟ್ಟರು.

ಮಂಡೇಲಾರ ಕರೆಗೆ ಓಗೊಟ್ಟು (ಫಾಹಿಮ್‌ನನ್ನು) ಬಿಡುಗಡೆ ಮಾಡಲು ಅಂತಾರಾಷ್ಟ್ರೀಯ ಸಮೂಹ  ಸಂಘಟನೆಗಳು ಇಂಗ್ಲೆಂಡ್ ಹಾಗೂ ಸ್ಕಾಟ್‌ಲ್ಯಾಂಡ್‌ನ ಮೇಲೆ ತೀವ್ರ ಒತ್ತಡ ಹೇರಲಾರಂಭಿಸಿದವು. ಆದರೆ ದುರದೃಷ್ಟವಶಾತ ಫಾಹಿಮ್‌ನಿಗೆ ಕ್ಯಾನ್ಸರ್ ಭಾದೆೆ ತಗಲಿದ್ದರಿಂದ ಆತ ಬಿಡುಗಡೆಗೊಂಡು ಮೂರು ತಿಂಗಳುಗಳಲ್ಲಿ ಮರಣ ಹೊಂದಿದ. ಆದರೆ ಇಡೀ ವಿಚಾರಣೆಯ ಪ್ರಕರಣದ ಪ್ರತಿಹಂತದಲ್ಲಿ ಪರಿಗಣಿಸಬಹುದಾದ ಮುಖ್ಯ ಸಂಗತಿಗಳೆಂದರೆ, ಜಾಗತಿಕ ಯಜಮಾನ್ಯ ಹೊಂದಿರುವ ರಾಷ್ಟ್ರಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸುವ ನೀತಿನಿಯಮಗಳನ್ನು ನೆಲ್ಸನ್ ಮಂಡೇಲಾ ಅವರು ಯಾವ ಮುಲಾಜಿಗೆ ಒಳಗಾಗದೆ ಬಿಚ್ಚಿಟ್ಟರು. ಹಾಗೂ ಯಾವ ಭಯವಿಲ್ಲದೇ ಅವರು ಇಂಥ ತಂತ್ರಗಳನ್ನು ತೀವ್ರವಾಗಿ ವಿರೋಧಿಸಿದರು. ಅಲ್ಲದೇ ತಾವು ಈ ಹಿಂದೆ ಅನುಭವಿಸಿದ ಎರಡು ದಶಕಗಳ ಒಂಟಿತನದ ಸೆರೆವಾಸದ ಅನುಭವಗಳು ಯಾರಿಗೂ ಒದಗಿ ಬರಬಾರದೆಂಬ ಕಾಳಜಿಗಳಿಂದ ಲಾಕರ್‌ಬಿ ಟ್ರಯಲ್ ಪ್ರಕರಣದ ಬಗೆಗೆ ಹೆಚ್ಚಿನ  ಮುತವರ್ಜಿ ವಹಿಸಿ ಜಾಗತಿಕ ಯಜಮಾನ್ಯ  ಆಡಳಿತಗಾರರನ್ನು ಬಗ್ಗಿಸಿದರು. ಈ ವಿಚಾರಣೆಯನ್ನು ಪ್ರತಿಭಟಿಸಲು ಮಂಡೇಲಾ ಅವರಿಗೆ ಇದ್ದ ಮುಖ್ಯ ಉದ್ದೇಶಗಳೆಂದರೆ ಪ್ರತಿಯೊಬ್ಬನ ವೈಯಕ್ತಿಕ ಸ್ವಾತಂತ್ರ್ಯವನ್ನು ಕಾಪಾಡುವುದಾಗಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

ಮದುವೆಯ ಸಂಬಂಧಗಳು

ಮಂಡೇಲಾ ಅವರು ಮೂರು ಬಾರಿ ಮದುವೆಯಾಗಿದ್ದಾರೆ. ಅವರಿಗೆ ಒಟ್ಟು ಆರು ಜನ ಮಕ್ಕಳು. ಇಪ್ಪತ್ತು ಮೊಮ್ಮಕ್ಕಳು ಹಾಗೂ ಹಲವಾರು ಮರಿಮಕ್ಕಳನ್ನು ಹೊಂದಿದ ತುಂಬು ಸಂಸಾರ.

ಇವೆಲಾಯಿನ್ ನಟೊಕೊ ಮಸೇ ನೆಲ್ಸನ್‌ರ ಮೊದಲ ಹೆಂಡತಿ. ಸೌತ್ ಆಫ್ರಿಕಾದ ಟ್ರಾನ್ಸ್‌ಕೆಯವಳಾದ ಇವಳು ಮೊಟ್ಟ ಮೊದಲಿಗೆ ಜೊಹಾನ್ಸ್ ಬರ್ಗ್‌ನಲ್ಲಿ ಮಂಡೇಲಾ ಅವರನ್ನು ಭೇಟಿ ಆಗಿದ್ದಳು. ಪರಿಚಯವು ಪ್ರಣಯದೊಂದಿಗೆ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಅವರಿಬ್ಬರಿಗೂ ಮದುವೆಯಾಯಿತು. ಸುಮಾರು ೧೩ ವರ್ಷಗಳ ದಾಂಪತ್ಯದ ನಂತರ ೧೯೫೭ರಲ್ಲಿ ಸಂಬಂಧ ಮುರಿದು ಬಿತ್ತು. ಕಾರಣ ನೆಲ್ಸನ್ ಮಂಡೇಲಾರು ಸತತವಾಗಿ ಹಲವಾರು ವರ್ಷಗಳ ಕಾಲ ಸ್ವಾತಂತ್ರ್ಯ ಹೋರಾಟದಲ್ಲಿಯೇ ತಮ್ಮನ್ನು ತೊಡಗಿಸಿ ಕೊಂಡಿದ್ದರಿಂದ ಕುಟುಂಬವನ್ನು ಸರಿಯಾಗಿ ನಿರ್ವಹಿಸಲಾಗಲಿಲ್ಲ. ಈ ಕಾರಣದಿಂದ ಅವರಿಬ್ಬರ ಮಧ್ಯೆ ಯಾವ ಸಂಬಂಧಗಳು ಉಳಿದುಕೊಳ್ಳಲಿಲ್ಲ. ದೀರ್ಘ ಕಾಲಾವಧಿಯ ಅವರಿಬ್ಬರ ಅಗಲಿಕೆಯ ಪರಿಣಾಮವೇ ಅವರು ವಿವಾಹ ವಿಚ್ಛೇಧನ ಪಡೆಯುವ ಸಂದರ್ಭ ವ್ಯಕ್ತವಾಗುವಂತಾಯಿತು. ರಾಜಕೀಯ ತಾಟಸ್ಥ್ಯವನ್ನು ತಾಳುವಂತೆ  ಅವರ ಹೆಂಡತಿಯು ಮಂಡೇಲಾ ಅವರಿಗೆ ಹಲವಾರು ಬಾರಿ ಕೇಳಿದರೂ ಅವರು ಹೆಂಡತಿಯನ್ನೇ ಬಿಟ್ಟರು ಹೊರತು ತಾವು ನಿಶ್ಚಿಯಿಸಿಕೊಂಡಿದ್ದ ಹೋರಾಟವನ್ನು ಬಿಡಲಿಲ್ಲ. ಇದು ಒಬ್ಬ ನಿಜವಾದ ಹೋರಾಟಗಾರನ ಖಾಸಗಿಯ ಬದುಕು ದುರಂತದಲ್ಲಿ ಪರಿಸಮಾಪ್ತಿಗೊಳ್ಳುವ ನೋವಿನ ಸಂಗತಿಯಾಗಿ ನಿಲ್ಲುತ್ತದೆ. ಮೊದಲ ಹೆಂಡತಿ ಇವೆಲಾಯಿನ್ ನಟೊಕೊ ಮಸೇ ಅವರು ೨೦೦೪ರಲ್ಲಿ ಅನಾರೋಗ್ಯದಿಂದ ತೀರಿಕೊಂಡರು. ಇವರಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ಇವರೆಲ್ಲರೂ ಸಹ ತೀರಿ ಹೋಗಿದ್ದಾರೆ.

ಕಪ್ಪು ವರ್ಣೀಯ ಸಾಮಾಜಿಕ ಕರ್ತೆಯಾದ ವಿನ್ನಿ ಮಡಿಕಿಜೇಲಾ ಅವರು ನೆಲ್ಸನ್ ಮಂಡೇಲಾ ಅವರನ್ನು ೧೯೫೭ರಲ್ಲಿ ಮದುವೆಯಾದರು. ಇವರು ಈ ಮೊದಲು ಜೋಹಾನ್ಸ್‌ಬರ್ಗ್ ನಗರದ ಮೊಟ್ಟಮೊದಲ ಮಹಿಳಾ ಹೋರಾಟಗಾರ್ತಿಯಾಗಿ ನಿರೂಪಿತಗೊಂಡವರು. ಇಬ್ಬರು ಒಂದೇ ಮನೋಭಾವನೆ ಹಾಗೂ ಗುರಿಯನ್ನಿಟ್ಟುಕೊಂಡಿದ್ದ ರಿಂದ ಈ ಮೊದಲಿನಂತೆ ಹೋರಾಟವು ಅವರ ದಾಂಪತ್ಯಕ್ಕೆ ಅಡ್ಡಿಯಾಗಲಿಲ್ಲ. ಇವರಿಗೂ ಸಹ ಎರಡು ಮಕ್ಕಳಿದ್ದೂ ಇವರನ್ನೆಲ್ಲಾ ವಿನ್ನಿ ಮಂಡೇಲಾ ಅವರೇ ಸಾಕಿ ಸಲುಹಿದರು. ಕಾರಣ ಮಕ್ಕಳಿಬ್ಬರ ಬಾಲ್ಯ ಮತ್ತು ಯೌವನದ ಅವಧಿಯಲ್ಲಿ ನೆಲ್ಸನ್ ಮಂಡೇಲಾ ಅವರು ಇಡೀ ತಮ್ಮ ಬದುಕನ್ನು ಜೈಲಿನಲ್ಲಿ ಕಳೆಯುತ್ತಿದ್ದರು. ಇಂಥ ಕಷ್ಟದ ಏಕಾಂಗಿತನವು ಅವರಿಗೆ ಬಹಳ ದೊಡ್ಡ ಆಡೆತಡೆಯಾಗಲಿಲ್ಲ. ಟ್ರಾನ್ಸ್‌ಕೆ ಪ್ರಾಂತದವರಾದ ವಿನ್ನಿ ಮಂಡೇಲಾರ ತಂದೆ ಅಲ್ಲಿನ ಸ್ಥಳೀಯ ಸರಕಾರದಲ್ಲಿ ಕೃಷಿ ಮಂತ್ರಿಯಾಗಿದ್ದರು. ಹೋರಾಟದ ಕಠಿಣ ದಿನಗಳಲ್ಲಿ ಒಂದಾಗಿದ್ದ ವಿನ್ನಿ ಮಂಡೇಲಾ ಹಾಗೂ ನೆಲ್ಸನ್ ಮಂಡೇಲಾ ಅವರು ಕೆಲವು ಕಾರಣಗಳಿಂದ ೧೯೯೨ರಲ್ಲಿ ದಾಂಪತ್ಯಬಂಧನದಿಂದ ಬಿಡುಗಡೆಗೊಳ್ಳಲು ನಿರ್ಧರಿಸಿದ್ದು ಇನ್ನೊಂದು ದುರಂತವೇ ಸರಿ. ಉಂಟಾಗಿದ್ದ ಮನಸ್ತಾಪಗಳನ್ನು ಸರಿಪಡಿಸಿಕೊಳ್ಳಲಾರದ ಈ ದಂಪತಿಗಳು   ೧೯೯೬ರಲ್ಲಿ ವಿವಾಹ ವಿಚ್ಛೇದನ ಪಡೆದರು. ಇವರಿಬ್ಬರಿಗೂ ಹುಟ್ಟಿದ ಝೆುನನಿಯನ್ನು ಸ್ವಾಜಿಲ್ಯಾಂಡ್‌ನ ರಾಜಕುಮಾರ ಥುಮಾಂಭುಜಿ ದ್ಲಮಿನಿಗೆ ೧೯೭೩ರಲ್ಲಿಯೇ ಮದುವೆ ಮಾಡಿಕೊಡಲಾಗಿತ್ತು. ಇವಳಿಗೂ ಸಹ ತಂದೆಯ ಯಾವ ನೆನಪುಗಳು ಇರಲಿಲ್ಲ. ಹಾಗೂ ಪ್ರಿಟೋರಿಯಾ ಸರಕಾರವು ಸಹ ಈ ಹಿಂದೆ ತಮ್ಮ ತಂದೆಯ್ನನು ಭೇಟಿ ಮಾಡಲು ಯಾವ ಅವಕಾಶ ಕೊಟ್ಟಿರಲಿಲ್ಲ. ದ್ಲಮಿನಿ ದಂಪತಿಗಳು ಪಿಕ್ ಬೋಥೋ ಸರಕಾರದ ಕಿರುಕುಳಕ್ಕೆ ಹೆದರಿ ಅಮೆರಿಕಾ ದೇಶದಲ್ಲಿರುವ ಬೋಸ್ಟನ್ ಪಟ್ಟಣಕ್ಕೆ ಪಲಾಯನ ಗೈಯುವಂತೆ ಮಾಡಿತು. ಇವರಿಬ್ಬರಿಗೆ ಹುಟ್ಟಿದ ಪ್ರಿನ್ಸ್ ಸೆಡ್ಜಾದ್ಲಮಿನಿಯು ಸಹ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹಿತರಕ್ಷಣಾ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇವರ ಇನ್ನೊಬ್ಬ ಮಗಳಾದ ಜಿಂದಜಿಯು, ಪ್ರಿಟೋರಿಯಾ ಸರಕಾರವು ಮಂಡೇಲಾ ಅವರನ್ನು ಬಿಡುಗಡೆ ಮಾಡುವ ಷರತ್ತು ಬದ್ಧ ವಿಷಯಗಳಿಗೆ ಸಂಬಂಧಿಸಿದಂತೆ ೧೯೮೫ರಲ್ಲಿ  ಹೇಳಿಕೆ ನೀಡುವುದರ ಮೂಲಕ ಜಗತ್ಪ್ರಸಿದ್ದಿ ಆದಳು. ಈವರೆಗೂ ಜೀವಂತವಾಗಿರುವ ಇವರು ತಮ್ಮ ಬದುಕು ನಿರ್ವಹಣೆಗಾಗಿ ವ್ಯಾಪಾರದಲ್ಲಿ ತೊಡಗಿದ್ದಾರೆ.

೧೯೯೬ರಲ್ಲಿ ವಿನ್ನಿಮಂಡೇಲಾ ಅವರಿಂದ ವಿಚ್ಛೇದನ ಪಡೆದಿದ್ದ ನೆಲ್ಸನ್ ಮಂಡೇಲಾ ಅವರು ತಮ್ಮ ೮೦ನೇ ವರ್ಷದಲ್ಲಿ ಗ್ರಾಕ್ ಮಾಕೆಲ್ ನೀ ಸಿಂಬಿನಿ(ಅವನನ್ನು ಮಂಡೇಲಾ ಅವರು)ಯನ್ನು ವಿವಾಹವಾದರು. ಇವರು ಮೊಜಾಂಬಿಕ್ ದೇಶದ ಮಾಜಿ ಅಧ್ಯಕ್ಷರಾಗಿದ್ದ ಹಾಗೂ ವಿಮಾನ ಅಪಘಾತದಲ್ಲಿ ಮರಣ ಹೊಂದಿದ ಸಮೊರಾ ಮಾಕೆಲ್ ಅವರ ಪತ್ನಿ ಆಗಿದ್ದಳು. ೧೯೯೮ರಲ್ಲಿ ತಮ್ಮ ಇಳಿವಯಸ್ಸಿನಲ್ಲಿ ಇವರಿಬ್ಬರ ನಡುವೆ ಮದುವೆ ಜರುಗಿತು. ಆ ದಿನ ನೆಲ್ಸನ್ ಮಂಡೇಲಾರ ಹುಟ್ಟುಹಬ್ಬವೂ ಆಗಿತ್ತು. ಇಳಿ ವಯಸ್ಸಿನಲ್ಲಿ ಮದುವೆಯಾದ ಈ ಸಂಗತಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರಸವತ್ತಾದ ಚರ್ಚೆಗೆ ಗ್ರಾಸವಾಯಿತು. ಜೋಹಾನ್ಸ್‌ಬರ್ಗ್ ಸಮೀಪದ ಕ್ವಿನುನಲ್ಲಿ ಇವರಿಬ್ಬರೂ ದಂಪತಿಗಳಾಗಿ ಈಗಲೂ ವಾಸವಾಗಿದ್ದಾರೆ.