ಹಿಂಸೆ, ಪ್ರಜಾಪ್ರಭುತ್ವ ಹಾಗೂ ವರ್ಗಸಂಘರ್ಷ

ಸ್ವಾತಂತ್ರ್ಯ ಬಂದ ಕೆಲವೇ ದಶಕಗಳಲ್ಲಿ ‘ವಸಾಹತು ಸುವರ್ಣಯುಗ’ದ ಹಿರಿಮೆಯನ್ನು ಕೀರ್ತಿಸುವ ದುರ್ಗತಿಯನ್ನೆದುರಿಸಿದ ಆಫ್ರಿಕನ್ ಸಮಾಜಗಳಲ್ಲಿ ಆಧುನಿಕ ಶಿಕ್ಷಣ ಪಡೆದ ಒಂದು ವರ್ಗ ಭ್ರಮನಿರಸನದ ಸ್ಥಿತಿಯನ್ನು ಬದಲಿಸುವ ಹೋರಾಟವನ್ನೂ ಆರಂಭಿಸುತ್ತದೆ. ಇಂಥ ಪ್ರಯತ್ನಗಳು ಹಲವೆಡೆ ಸೀಮಿತವೆಂಬಂತೆ ಕಂಡರೂ ವಸಾಹತೋತ್ತರ ಸಮಾಜಗಳ ಮುಖ್ಯ ಹೋರಾಟಗಳನ್ನು ಈ ವರ್ಗವೇ ಕೆಲವು ಸಲ ಪುಟ್ಟ ಗುಂಪುಗಳ ಮೂಲಕ, ಹಲವೊಮ್ಮೆ ಬಹುಸಂಖ್ಯಾತ ಜಗತ್ತಿನ ಸಾತ್ತ್ವಿಕ ಸಿಟ್ಟನ್ನು ಬಡಿದೆಬ್ಬಿಸುತ್ತಾ ರೂಪಿಸುತ್ತದೆ. ಈ ಹಿನ್ನೆಲೆಯಲ್ಲಿ ಈವರೆಗೆ ಚರ್ಚಿಸಿದ ವಿವಿಧ ಆಫ್ರಿಕನ್ ಕಾದಂಬರಿಗಳ ಓಡಿಲಿ ಸಾಮುಲು ಹಾಗೂ ಮ್ಯಾಕ್ಸ್, ಇಕೆಮ್, ಕ್ರಿಸ್, ಬೀಟ್ರಿಸ್, ಸ್ಯಾಗೋ, ಒಫೇಯಿ ಮುಂತಾದ ಪಾತ್ರಗಳು ಆಫ್ರಿಕನ್ ಸಮಾಜದ ಒಳಗಿನ ವಸಾಹತೋತ್ತರ ಹೋರಾಟಗಳ ಕೆಲವು ಮುಖ್ಯ ಮಾದರಿಗಳನ್ನು ಪ್ರತಿನಿಧಿಸುತ್ತವೆ.

‘ಎ ಮ್ಯಾನ್ ಆಫ್ ದಿ ಪೀಪಲ್’ನ ಓಡಿಲಿ ಸಾಮುಲು, ಮ್ಯಾಕ್ಸ್‌ರಂಥವರು ಚುನಾವಣೆಯ ಮೂಲಕವೇ ವ್ಯವಸ್ಥೆಯನ್ನು ಸರಿಯಾದ ಹಾದಿಗೆ ಒಯ್ಯಬಹುದೆಂದು ನಂಬಿ ಹೊರಡುತ್ತಾರೆ. ಈ ದಿಕ್ಕಿನಲ್ಲಿ ಮತ್ತೊಂದು ಬಗೆಯ ಪ್ರಯತ್ನ ‘ಆ್ಯಂಟ್‌ಹಿಲ್ಸ್ ಆಫ್ ದಿ ಸವನ್ನಾ’ದಲ್ಲೂ ಇದೆ. ಇದೇ ಕಾದಂಬರಿಯ ಇಕೆಮ್, ಕ್ರಿಸ್ಟೊಫರ್‌ರಂತೆ, ‘ಸೀಸನ್ ಆಫ್ ಅನೋಮಿ’ಯ ಒಫೇಯಿ ಕೂಡ ಏಕಾಂಗಿ ಹೋರಾಟಗಳಿಂದ ಸಾಮೂಹಿಕ ಹೋರಾಟಗಳತ್ತ ತೆರಳುವ ಅನಿವಾರ್ಯತೆಯನ್ನು ಗ್ರಹಿಸುತ್ತಾನೆ. ಇವೆಲ್ಲದರ ನಡುವೆ ಆಫ್ರಿಕನ್ ಸಮಾಜದ ಈ ಅವನತಿಯನ್ನು ಕೊನೆಗೊಳಿಸಲು ಹಿಂಸಾಮಾರ್ಗವೇ ಉತ್ತರ ಎಂಬಂಥ ನಂಬಿಕೆಗಳೂ ಹುಟ್ಟಲಾರಂಭಿಸುತ್ತವೆ. ‘ಎ ಮ್ಯಾನ್ ಆಫ್ ದಿ ಪೀಪಲ್’ನ ಯೂನಿಸ್, ‘ಸೀಸನ್ ಆಫ್ ಅನೋಮಿ’ಯ ಡೆಂಟಿಸ್ಟ್ ಮತ್ತು ಒಫೇಯಿಯಂಥವರಲ್ಲಿ  ಇಂಥ ಹಿಂಸಾ ಮಾರ್ಗ ಕುರಿತ ಸಿದ್ಧಾಂತಗಳು ಕ್ರಿಯೆಯಾಗಿ ರೂಪುಗೊಳ್ಳಲಾರಂಭಿಸುತ್ತವೆ. ‘ಎ ಮ್ಯಾನ್ ಆಫ್ ದಿ ಪೀಪಲ್’ ಕಾದಂಬರಿಯ ಕೊನೆಯ ಭಾಗದಲ್ಲಿ ಚೀಫ್ ಕೊಕೋನೆದುರು ಚುನಾವಣೆಗೆ ನಿಂತ ಮ್ಯಾಕ್ಸ್‌ನ ಮೇಲೆ ಕೊಕೋನ ಜೀಪು ನುಗ್ಗಿ ಕೊಲ್ಲು ವುದನ್ನು ಕಣ್ಣೆದುರೇ ಕಾಣುವ ಯೂನಿಸ್‌ಗೆ ಕೊಕೋನ ಮೇಲೆ ಗುಂಡು ಹಾರಿಸುವುದನ್ನು ಬಿಟ್ಟು ಬೇರೆ ಮಾರ್ಗವೇ ಕಾಣದಂತಿರುವುದು ಸಹಜ. ‘ಅದು ಗೆಳೆಯನ ಸಾವಿನ ವಿರುದ್ಧ ಸೇಡು ತೀರಿಸಿಕೊಳ್ಳುವ ಏಕೈಕ ಮಾರ್ಗವಾಗಿತ್ತು’ ಎಂದು ಕಾದಂಬರಿಯ ನಿರೂಪಕ ಯೂನಿಸ್‌ಳ ಸ್ಫೋಟವನ್ನು ಸಮರ್ಥಿಸುತ್ತಾನೆ.

ಆದರೆ, ಅಚೀಬೆಯ ಕಾದಂಬರಿಯ ಈ ವ್ಯಗ್ರ ನಿಲುವಿಗೂ ಷೋಯಿಂಕಾನ ‘ಸೀಸನ್ ಆಫ್ ಅನೋಮಿ’ ಖಚಿತ ತಾತ್ವಿಕ ನೆಲೆಗಟ್ಟಿನ ಮೂಲಕ ಪ್ರತಿಪಾದಿಸುವ ‘ಪ್ರತಿಹಿಂಸೆ’ಗೂ ವ್ಯತ್ಯಾಸವಿದೆ. ನಿರ್ವಸಾಹತೀಕರಣ ಘಟ್ಟದಲ್ಲಿ ಫ್ಯಾನನ್ ಅಥವಾ ಸಾರ್ತರ್ ಹೇಳುವ ‘ಹೊಸ ಸೃಷ್ಟಿಯ ಹಿಂಸೆ’ಯ (regenarative violence) ಮಾದರಿ ಇದು. ಎಡಪಂಥೀಯ ಉಗ್ರಗಾಮಿ ಪಂಥಗಳು ಹಾಗೂ ಲೆನಿನ್ ಪ್ರತಿಪಾದಿಸಿದ ಮಾದರಿಯ ‘ಸೃಜನಶೀಲ ಹಿಂಸೆ’ಯ ಬಳಕೆಯನ್ನು ‘ಸೀಸನ್ ಆಫ್ ಅನೋಮಿ’ ಕಾದಂಬರಿಯಲ್ಲಿ ‘ಡೆಂಟಿಸ್ಟ್’ ಎಂದೇ ಕರೆಯಲಾಗುವ ಡೆಮಾಕಿನ್ ಪ್ರತಿಪಾದಿಸುತ್ತಾನೆ. ಅವನ ಪ್ರಕಾರ, ಕೊಳೆತ ಹಲ್ಲೊಂದು ಇಡೀ ದಂತ ಪಂಕ್ತಿಯನ್ನೇ ಕೊಳೆಯುವಂತೆ ಮಾಡುತ್ತದೆ. ಅಂದರೆ ವ್ಯವಸ್ಥೆಯ ಒಂದು ಅಂಗಕ್ಕೆ ತಗುಲಿದ ರೋಗ ಅದರ ಉಳಿದ ಅಂಗಗಳನ್ನೂ ಭ್ರಷ್ಟಗೊಳಿಸುತ್ತದೆ. ಆದ್ದರಿಂದ ‘Extraction before infection’ (ಸೋಂಕಿನ ಮುನ್ನ ಕೀಳುವುದು) -ಇದು ಅವನ ತರ್ಕ. ಬಹುರಾಷ್ಟ್ರೀಯ ಕಂಪನಿಯಾದ ಕಾರ್ಟೆಲ್‌ನ ದಮನಕ್ಕೆ ಪ್ರತಿಯಾದ ‘ರಕ್ಷಣಾತ್ಮಕ ಹಿಂಸೆ’ ಇದು ಎನ್ನುವ ‘ಡೆಂಟಿಸ್ಟ್’ ಕೊಲ್ಲುವ ಮಾದರಿಯೊಂದನ್ನು ಸಿದ್ಧಪಡಿಸುತ್ತಾನೆ: ‘ಕೊಲೆ ಮಾಡುವ ಕರಾರುವಾಕ್ಕಾದ ಮಾದರಿಯೊಂದನ್ನು ನಾವೀಗ ಹುಟ್ಟು ಹಾಕಬೇಕು. ನಿಜವಾದ ಖದೀಮರು ಯಾರೆಂಬುದನ್ನು ಕಂಡು ಹಿಡಿದು ಅವರನ್ನು ಮುಗಿಸಬೇಕು. ಇದು ತೀರ ಸರಳವಾದ ಕೆಲಸ. ಹಾವನ್ನು ನಿರುಪದ್ರವಿಯನ್ನಾಗಿ ಮಾಡಲು ಅದರ ತಲೆಯ ಮೇಲೆ ಬಾರಿಸುವುದೊಂದೇ ಮಾರ್ಗ… ಕೊಲ್ಲುವ ಕಲೆಯಲ್ಲಿ ತರಬೇತಿ ಪಡೆದವನು ನಾನು; ಆ ಕಲೆಯನ್ನು ಸಮಾಜದ ಪರವಾಗಿ ಬಳಸಿಕೊಳ್ಳುತ್ತಿದ್ದೇನಷ್ಟೇ’.

ಆದರೆ, ವ್ಯವಸ್ಥೆಯ ಅಸ್ತ್ರಗಳ ಮೂಲಕವೇ ಅದನ್ನು ಬುಡಮೇಲುಗೊಳಿಸಬಯಸುವ, ಕಾರ್ಟೆಲ್ಲಿನ ಪ್ರಚಾರಕ್ಕಾಗಿ ರಚಿಸುವ ಜಾಹಿರಾತಿನ ಹಾಡುಗಳನ್ನು ಅದರ ವಿರುದ್ಧವೇ ತಿರುಗುವಂತೆ ಮಾಡಹೊರಡುವ ‘ಕಪ್ಪು ಆರ್ಫಿಯಸ್’ (ಆರ್ಫಿಯಸ್: ಗ್ರೀಕ್ ಪುರಾಣಗಳಲ್ಲಿ ಬರುವ ಕವಿ-ಸಂಗೀತಗಾರ.) ಒಫೇಯಿಗೆ ಡೆಂಟಿಸ್ಟನ ಮಾರ್ಗ ಕುರಿತು ಹಲವು ಅನುಮಾನಗಳಿವೆ. ಆದರೂ, ಅವನು ವ್ಯವಸ್ಥೆಯ ಹಿಂಸೆಯ ಭೀಕರ ಸ್ವರೂಪವನ್ನರಿಯುತ್ತಾ ಹೋದಂತೆ, ಡೆಂಟಿಸ್ಟ್ ಸೂಚಿಸುವ ಮಾರ್ಗವೇ ಬಿಡುಗಡೆಯ ಏಕೈಕ ಮಾರ್ಗವಾಗಿ ಕಾಣುತ್ತದೆ. ಆದ್ದರಿಂದಲೇ ಏಷಿಯಾದ ಅನುಭಾವಿ ತೈಲಾಳ ವಿಧಿವಾದ, ಪರವಶತೆ, ಶಾಂತಿಮಾರ್ಗ ಕುರಿತು ಒಫೇಯಿಗೆ ಅದಮ್ಯ ಆಕರ್ಷಣೆ ಇದ್ದರೂ, ಹಿಂಸೆಯೂ ರೋಗವನ್ನು ಗುಣಪಡಿಸುವ ಸಾಧನವಾಗಬಲ್ಲದು ಎಂಬುದು ಅವನಿಗೆ ಖಾತ್ರಿಯಾಗ ತೊಡಗುತ್ತದೆ. ಅಯೇರೋದ ಹಿರಿಯ ಪಾಅಹಿಮೆಗೆ ಹಿಂಸೆಯ ಅನಿವಾರ್ಯತೆ ಕುರಿತು ಒಫೇಯಿ ಹೇಳುತ್ತಾನೆ: ‘ಈ ಕಾಲದಲ್ಲಿ ಒಂದು ತತ್ತ್ವವನ್ನು ಬಿತ್ತಲು ಹೊರಡುವವರು ಸಸಿಯನ್ನು ರಕ್ಷಿಸುವ ಜವಾಬ್ದಾರಿಯನ್ನೂ ಹೊರಬೇಕು. ಹಾಗೆ ಸಸಿಯನ್ನು ರಕ್ಷಿಸಲು ಹಿಂಸಾಮಾರ್ಗ ಬಳಸಿದರೂ ತಪ್ಪಿಲ್ಲ’. ಆದರೆ ಈ ಮಾರ್ಗ ಕುರಿತು ಅನುಮಾನಗಳನ್ನುಳ್ಳ ಪಾ ಅಹಿಮೆ ಒಫೇಯಿಯನ್ನು ಎಚ್ಚರಿಸುತ್ತಾನೆ: ‘ಹೊಸ ತತ್ತ್ವವನ್ನು ಬಿತ್ತುವ ಮುನ್ನ, ‘ಗಾಳಿಯನ್ನು ಬಿತ್ತಿ ಬಿರುಗಾಳಿಯನ್ನು ಬೆಳೆದಂತೆ’ ಎಂಬ ಗಾದೆ ನಿನ್ನ ನೆನಪಲ್ಲಿರಲಿ’. ಈ ಮಾತಿಗೆ ಒಫೇಯಿಯ ಪ್ರತಿಕ್ರಿಯೆ ಇದು: ‘ಬಿರುಗಾಳಿಯನ್ನು ಬಿತ್ತಿದ್ದು ಕಾರ್ಟೆಲ್. ಆ ಬಿರುಗಾಳಿ ಅದರ ವಿರುದ್ಧವೇ ತಿರುಗುವಂತೆ ಮಾಡದಿದ್ದರೆ ನಮ್ಮ ಕತೆ ಮುಗಿದಂತೆಯೇ’.

ಒಫೇಯಿಯ ಹಿಂಸೆಯ ಹಿಂದೆ ನಿರ್ದಿಷ್ಟ ರೀತಿಯ ಸಮತಾ ಸಮಾಜವೊಂದರ ಸೃಷ್ಟಿಯ ಹಂಬಲವಿದೆ. ವಿವಿಧ ವಸಾಹತೋತ್ತರ ದೇಶಗಳಲ್ಲಿ ಸಂಘಟಿತ ಹಿಂಸೆಯ ಪರವಾಗಿರುವ ಅನೇಕ ಗುಂಪುಗಳ ನಂಬಿಕೆ ಇದು. ಹಿಂಸೆಯ ಮೂಲಕ ದಮನಕಾರಿ ಶಕ್ತಿಗಳನ್ನು ನಿರ್ನಾಮ ಗೊಳಿಸಿದ ಬಳಿಕ ಆಧುನಿಕಪೂರ್ವ ಆಫ್ರಿಕಾದ ಕೆಲವು ಮುಖ್ಯ ಮೌಲ್ಯಗಳನ್ನೊಳಗೊಂಡ ಅಯೇರೋ ಪ್ರತಿನಿಧಿಸುವ ಸಮಾಜವಾದೀ ಸಮಾಜದ ನಿರ್ಮಾಣದ ಹಂಬಲವನ್ನು ‘ಸೀಸನ್ ಆಫ್ ಅನೋಮಿ’ ಮಂಡಿಸುತ್ತದೆ. ವಿಮರ್ಶಕ ಚಿಡಿ  ಅಮೂಟ ಹೇಳುವಂತೆ, ‘ಒಫೇಯಿಯ ಕ್ರಾಂತಿಕಾರಕ ಚಟುವಟಿಕೆಗಳು ಅಯೇರೋ ಸಮಾಜದ ನೆಲೆಗಳನ್ನು ಮರಳಿ ಶೋಧಿಸಲೆತ್ನಿಸುತ್ತವೆ ಹಾಗೂ ಅವನ್ನು ಸಮಕಾಲೀನ ಆಫ್ರಿಕಾದ ‘ಅರಾಜಕ  ಋತು’ವಿಗೆ ಉತ್ತರವೆಂಬಂತೆ ಕಾಣುತ್ತವೆ.’ ಒಫೇಯಿ ಯೊರೂಬಾ ಪುರಾಣಗಳ ಓಗುನ್ ದೇವತೆಯ ಮಾನವ ರೂಪ. ಷೋಯಿಂಕಾನ ಪ್ರಕಾರ, ‘ಓಗುನ್ ಕೇವಲ ಯುದ್ಧಾಕಾಂಕ್ಷಿ ದೇವತೆಯಲ್ಲ; ಅವನು ಆಧುನಿಕ ಅರ್ಥದಲ್ಲೂ ಕ್ರಾಂತಿಕಾರಿ ದೇವತೆ.’ ಓಗುನ್ ದೇವತೆಯ ಒಂದು ಮುಖ ಪ್ರತಿನಿಧಿಸುವ ಹಿಂಸೆಯನ್ನು ಒಫೇಯಿ-ಡೆಂಟಿಸ್ಟರ ಜೋಡಿ ಬದಲಾವಣೆಗೆ ಅತ್ಯಗತ್ಯವಾದ ಸಿದ್ಧಾಂತವನ್ನಾಗಿ ಸ್ವೀಕರಿಸುತ್ತದೆ. ಓಗುನ್ ದೇವತೆಯಂತೆ ಈ ಜೋಡಿ ಕೂಡ ಹಿಂಸೆ, ರಕ್ತಪಾತಗಳನ್ನು ಹೊಸ ಸೃಷ್ಟಿಯೊಂದರ ಆರಂಭದ ಘಟ್ಟವೆಂಬಂತೆ ಕಾಣುತ್ತದೆ. ಆದರೆ, ಓಗುನ್ ದೇವತೆಯ ಪ್ರೇರಣೆ ಇಲ್ಲಿರುವಂತೆ ಕಂಡರೂ ಇದು ಎಡಪಂಥೀಯ ರಾಜಕಾರಣದಲ್ಲಿ ಕಾಣಬರುವ ಸೃಷ್ಟಿಶೀಲ ಹಿಂಸೆಯ ಪ್ರತಿಪಾದನೆಯ ಒಂದು ಮಾದರಿ ಎಂಬುದನ್ನು ಮರೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಪಶ್ಚಿಮ ಆಫ್ರಿಕಾದ ವಸಾಹತೋತ್ತರ ಘಟ್ಟದಲ್ಲಿ ಅಚೀಬೆ ಹಾಗೂ ಷೋಯಿಂಕಾರ ಎರಡು ಕೃತಿಗಳಲ್ಲಿ (ಅನುಕ್ರಮವಾಗಿ ‘ಎ ಮ್ಯಾನ್ ಆಫ್ ದಿ ಪೀಪಲ್’, ‘ಸೀಸನ್ ಆಫ್ ಅನೋಮಿ’ ಕಾದಂಬರಿಗಳಲ್ಲಿ) ಪ್ರಭುತ್ವದ ಹಿಂಸೆಗೆ ಪ್ರತಿಹಿಂಸೆಯೇ ಅನಿವಾರ್ಯ ಉತ್ತರವೆಂಬಂತೆ ಕಂಡಿರುವುದು ಗಮನಾರ್ಹ. ಹೀಗೆ ಸೃಜನಶೀಲ ಹಿಂಸೆ, ಇಕೆಮ್ ಹಾಗೂ ಕ್ರಿಸ್ಟೊಫರ್‌ರಂಥವರು ಆರಂಭಿಸಲೆತ್ನಿಸುವ ಸಾಮೂಹಿಕ ಸಂಘಟನೆ, ಮ್ಯಾಕ್ಸ್‌ನ ಚುನಾವಣಾ ರಾಜಕಾರಣ ಮೊದಲಾದ ಅಂಶಗಳ ಮೂಲಕ ವಸಾಹತೋತ್ತರ ಆಫ್ರಿಕನ್ ಸಮಾಜಗಳು ತಮ್ಮ ಅವನತಿಯಿಂದ ಪಾರಾಗಲು ಕೆಲವು ಮಾರ್ಗಗಳನ್ನು ಕಂಡುಕೊಳ್ಳುತ್ತವೆ. ಈ ಉತ್ತರಗಳಂತೆಯೇ, ಎಗ್ಬೋ ಅಥವಾ ಕೋಲಾ ಮುಂತಾದವರ ಅನುಭಾವೀ ಮಾರ್ಗಗಳೂ-ಅವು ವಸಾಹತೋತ್ತರ ಅವನತಿಗೆ ತತ್‌ಕ್ಷಣದ ಉತ್ತರಗಳಲ್ಲದಿದ್ದರೂ-ಆಕರ್ಷಕವಾಗಿ ಕಾಣುತ್ತವೆ. ಎಗ್ಬೋ ಹಾಗೂ ಕೋಲಾ ಇಬ್ಬರಲ್ಲೂ ಕಾಣುವ ಪೌರಾಣಿಕ ಹಾಗೂ ಆಧ್ಯಾತ್ಮಿಕ ಆಫ್ರಿಕಾಕ್ಕೆ ಮರಳುವ ಪ್ರಯತ್ನಗಳು, ‘ಸೀಸನ್ ಆಫ್ ಅನೋಮಿ’ಯ ಒಫೇಯಿಗೆ ತೈಲಾಳ ಅನುಭಾವ ಕುರಿತ ಸೆಳೆತಗಳು ಕೂಡ ಒಂದು ದೃಷ್ಟಿಯಿಂದ ‘ಇರುವ’ ಸ್ಥಿತಿಯನ್ನು ಮೀರಿ, ‘ಆಗುವ’, ‘ರೂಪುಗೊಳ್ಳುವ’ ಪ್ರಯತ್ನಗಳು.

ವಸಾಹತೋತ್ತರ ಅವನತಿಯ ಘಟ್ಟದಲ್ಲಿ ಆಫ್ರಿಕನ್ ಕಾದಂಬರಿಗಳ ಪಾತ್ರಗಳು ತಮ್ಮ ಅನಾಧುನಿಕ ಅಥವಾ ದೇಶೀ ಸಮಾಜದ ಮೌಲ್ಯಗಳತ್ತ ಆಸೆಗಣ್ಣಿನಿಂದ ತಿರುಗಿ ನೋಡುತ್ತಲೂ ಇರುತ್ತವೆ. ಜೊತೆಗೆ, ಆಫ್ರಿಕನ್  ಕಾದಂಬರಿಗಳು ವಸಾಹತೋತ್ತರದಲ್ಲಿ ಹೊಸ ಆಕಾರ ಪಡೆಯುತ್ತಿರುವ, ಹೊಸ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಸ್ತ್ರೀಶಕ್ತಿಯ ಸಾಧ್ಯತೆಗಳನ್ನು ಕೂಡ ಚರ್ಚಿಸುತ್ತವೆ. ‘ಆ್ಯಂಟ್‌ಹಿಲ್ಸ್ ಆಫ್ ದಿ ಸವನ್ನಾ’ದ ಎಲಿವಾಳಂಥ ಅನಕ್ಷರಸ್ಥ ಮಹಿಳೆಯರ ಸ್ಥೈರ್ಯ; ಬೀಟ್ರಿಸ್, ಯೂನಿಸ್, ಇರಿಯಿಸೆ ರೀತಿಯ ಅಕ್ಷರಸ್ಥ ಹೆಣ್ಣುಗಳು ತಂತಮ್ಮ ಸಮಾಜಗಳ ಬಿಕ್ಕಟ್ಟಿನ ಗಳಿಗೆಗಳಲ್ಲಿ ಇಡುವ ದೃಢ ಹೆಜ್ಜೆಗಳು ವಸಾಹತೋತ್ತರ ಆಫ್ರಿಕನ್ ಸಮಾಜಗಳು ರೂಪುಗೊಳ್ಳುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ ಗಳು. ‘ಆ್ಯಂಟ್‌ಹಿಲ್ಸ್ ಆಫ್ ದಿ ಸವನ್ನಾ’ ಕಾದಂಬರಿಯ ಕೊನೆಯ ಭಾಗದಲ್ಲಿ, ಕಂಗನ್ ದೇಶವನ್ನು ಬದಲಿಸುವ ಕನಸು ಹೊತ್ತು ಮಡಿದ ಇಕೆಮ್ ಹಾಗೂ ಕ್ರಿಸ್ಟೊಫರರ ಹೋರಾಟ ವನ್ನು ಮುಂದುವರಿಸುವ ಜವಾಬ್ದಾರಿಯನ್ನು ಹೊರಬೇಕಾದವರು ಎಲಿವಾ ಹಾಗೂ ಬೀಟ್ರಿಸ್ ಎಂಬ ಇಬ್ಬರು ಹೆಣ್ಣುಮಕ್ಕಳು ಎಂಬುದು ಅತ್ಯಂತ ಸಾಂಕೇತಿಕ. ತಮ್ಮ ಪ್ರಿಯಕರರನ್ನು ಕಳೆದುಕೊಂಡ ಎಲಿವಾ ಹಾಗೂ ಬೀಟ್ರಿಸ್ ಅಂಥ ಕತ್ತಲಿನಲ್ಲೂ ಕ್ರಿಯಾಶೀಲ ಚಿಂತಕ ಇಕೆಮ್‌ನ ಮಗುವಿಗೆ- ‘ಬದುಕಿ ಉಳಿದ ಇಕೆಮ್‌ನ ತುಣುಕಿಗೆ’- ಇಡುವ ಹೆಸರು ‘ಅಮೆಚಿನಾ’: ಅಂದರೆ, ‘ಹಾದಿ ಎಂದೆಂದಿಗೂ ಮುಗಿಯದಿರಲಿ.’

ಇಂಥ ನಿರಂತರ ಕನಸುಗಾರರು ಮಾತ್ರ ವಸಾಹತೋತ್ತರ ಸಮಾಜಗಳ ಅವನತಿಯ ನಡುವೆಯೂ ಭರವಸೆಯ ಎಳೆಗಳನ್ನು ಹೆಕ್ಕಿಕೊಳ್ಳುತ್ತಾ ಮುನ್ನಡೆಯುತ್ತಿರುತ್ತಾರೆ. ‘ಸೀಸನ್ ಆಫ್ ಅನೋಮಿ’ ಕಾದಂಬರಿಯಲ್ಲಿ ವ್ಯವಸ್ಥೆಯ ಭೀಕರ ಹಿಂಸೆಯನ್ನೆದುರಿಸಿ ಕೊನೆಗೂ ತಾನು ರಕ್ಷಿಸುವ ಗೆಳತಿ ಮೇಲ್ನೋಟಕ್ಕೆ ನಿರ್ಜೀವ ಕೋಕೋ ಬೀಜದಂತೆ ಕಂಡರೂ ಒಳಗೇ ಚಿಗುರಲು ಹಾತೊರೆಯುತ್ತಿರುವ ಮೊಳಕೆಯಂತೆ ಒಫೇಯಿಗೆ ಗೋಚರಿಸುತ್ತಾಳೆ.

ಇವೆಲ್ಲ ಕನಸುಗಳು ಹಾಗೂ ಕಾಣ್ಕೆಗಳು ಆಫ್ರಿಕಾದ ವಸಾಹತೋತ್ತರ ಸಮಾಜಗಳು ತಮ್ಮ ದಿಕ್ಕೆಟ್ಟ ಸ್ಥಿತಿಗಳ ನಡುವೆ ಹುಡುಕುತ್ತಿರುವ ಹೊಸ ಮಾರ್ಗಗಳನ್ನು ಪ್ರತಿನಿಧಿಸುತ್ತವೆ. ಈ ಕನಸಿನ ‘ಹಾದಿ ಎಂದೆಂದಿಗೂ ಮುಗಿಯದಿರಲಿ’ ಎಂಬ ಷೋಯಿಂಕಾನ ಕಾದಂಬರಿಯ ನಿರೀಕ್ಷೆಯನ್ನು ಆಫ್ರಿಕನ್ ಸಮಾಜಗಳ ಬುದ್ದಿಜೀವಿಗಳು, ಸೂಕ್ಷ್ಮ ಮನಸ್ಸಿನ ನಾಯಕರು, ಸಾಮಾನ್ಯರು ನಿರಂತರವಾಗಿ ಹೊತ್ತೊಯ್ಯುವಂತೆ ತೋರುತ್ತದೆ.

(ಟಿಪ್ಪಣಿ: ಈ ಸುದೀರ್ಘ ಬರಹದಲ್ಲಿ ಬಳಸಿರುವ ನೂರಾರು ಉಲ್ಲೇಖಗಳ ವಿವರಗಳನ್ನು ಸ್ಥಳಾಭಾವ ದಿಂದ ಇಲ್ಲಿ ಕೊಡಲಾಗಿಲ್ಲ. ಈ ಉಲ್ಲೇಖಗಳನ್ನು ಕುರಿತ ಕೊನೆ ಟಿಪ್ಪಣಿಗಳಿಗಾಗಿ ಆಸಕ್ತ ಓದುಗರು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ಇದೇ ಲೇಖಕರ ‘ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ಪುಸ್ತಕದಲ್ಲಿ ಕ್ರಮವಾಗಿ ಪು.ಸಂ. ೩೮-೪೦; ೧೦೯-೧೧೧; ೧೫೫-೧೫೭; ೧೮೭-೧೮೯; ೨೧೪-೨೧೫; ೨೭೫-೨೭೬ ಇವುಗಳನ್ನು ಗಮನಿಸಬಹುದು. ಇಲ್ಲಿ ಬಳಸಲಾದ ಕಾದಂಬರಿಗಳ ಹಾಗೂ ವಿವಿಧ ಸಿದ್ಧಾಂತಗಳ ಉಲ್ಲೇಖಗಳನ್ನು ಈ ಬರಹದ ಲೇಖಕರು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿಕೊಂಡಿದ್ದಾರೆ.)