ವಸಾಹತೋತ್ತರೊಆಫ್ರಿಕಾ:
ನಾಗರಿಕ ಸಮಾಜದಿಂದೊರಾಜಕೀಯೊಸಮಾಜದತ್ತ

ಇಂಥ ವಸಾಹತೋತ್ತರ ಆಫ್ರಿಕನ್ ಸಮಾಜದ ಸಂಪೂರ್ಣ ಭ್ರಮನಿರಸನದ ಸ್ಥಿತಿಯ ತಾರ್ಕಿಕ ಕೊನೆಯೆಂಬಂತೆ ಅಚೀಬೆಯ ‘ಎ ಮ್ಯಾನ್ ಆಫ್ ದಿ ಪೀಪಲ್’ ಕಾದಂಬರಿಯ ಕೊನೆಯ ಭಾಗ ಮಿಲಿಟರಿ ದಂಗೆಯ ಭವಿಷ್ಯ ನುಡಿದದ್ದು ನೈಜೀರಿಯಾದ ಸಂದರ್ಭದಲ್ಲಿ ನಿಜವಾಗಿಬಿಟ್ಟಿತು. ವಸಾಹತೋತ್ತರ ನೈಜೀರಿಯಾ ಮಿಲಿಟರಿ ಆಡಳಿತಕ್ಕೂ ಒಳಗಾಯಿತು. ಈ ಘಟ್ಟದ ನೈಜೀರಿಯಾದ ಕತೆಯನ್ನು ‘ಆ್ಯಂಟ್‌ಹಿಲ್ಸ್ ಆಫ್ ದಿ ಸವನ್ನಾ’ (ಸವನ್ನಾದ ಹುತ್ತಗಳು) ಹೇಳುತ್ತದೆ. ಆಫ್ರಿಕಾದ ಕೆಲವು ಸ್ವತಂತ್ರ ರಾಷ್ಟ್ರಗಳಲ್ಲಿ ನಡೆದ ದಂಗೆ, ಪ್ರತಿದಂಗೆ, ಅವು ಸೃಷ್ಟಿಸಿದ ಸರ್ವಾಧಿಕಾರಿಗಳು ಹಾಗೂ ರೂಪುಗೊಂಡ ಹೊಸ ದಮನಕಾರಿ ಶಕ್ತಿಗಳು ಮತ್ತು ಜನತೆಯ ಹೋರಾಟಗಳನ್ನು ಕುರಿತ ರೂಪಕ ‘ಆ್ಯಂಟ್‌ಹಿಲ್ಸ್ ಆಫ್ ದಿ ಸವನ್ನಾ’. ಎಪ್ಪತ್ತು-ಎಂಭತ್ತರ ದಶಕದ ಆಫ್ರಿಕಾದ ಕೆಲವು ರಾಷ್ಟ್ರಗಳ ಪ್ರತಿರೂಪದಂತೆ ಕಾಣುವ ಕಂಗನ್ ದೇಶದ ಮೂಲಕ ನಾಗರಿಕ (ಸಿವಿಲ್) ಸಮಾಜದಿಂದ ರಾಜಕೀಯ (ಪೊಲಿಟಿಕಲ್) ಸಮಾಜದತ್ತ ಆಫ್ರಿಕಾದ ದುರಂತಮಯ ಚಲನೆಯನ್ನು ಕಾದಂಬರಿ ಶೋಧಿಸುತ್ತದೆ. ಗ್ರಾಮ್‌ಷಿಯ ಪ್ರಕಾರ, ನಾಗರಿಕ ಹಾಗೂ ರಾಜಕೀಯ ಸಮಾಜಗಳ ನಡುವಣ ವ್ಯತ್ಯಾಸ ಇದು: ‘ನಾಗರಿಕ ಸಮಾಜವನ್ನು ಮೂಲತಃ ವೈಚಾರಿಕವಾದ ಹಾಗೂ ದಮನಕಾರಿಯಲ್ಲದ ಸಂಸ್ಥೆಗಳಾದ ಶಾಲೆ, ಕುಟುಂಬ, ಯೂನಿಯನ್‌ಗಳಂಥ ಸಂಸ್ಥೆಗಳು ರೂಪಿಸಿದರೆ, ಪೊಲಿಟಿಕಲ್ ಸಮಾಜವನ್ನು ದಬ್ಬಾಳಿಕೆಯನ್ನೇ ಗುರಿಯನ್ನಾಗಿರಿಸಿಕೊಂಡ ಪ್ರಭುತ್ವದ ಸಂಸ್ಥೆಗಳು-ಸೈನ್ಯ, ಪೊಲೀಸ್, ಅಧಿಕಾರಶಾಹಿ-ರೂಪಿಸಿರುತ್ತವೆ.’

‘ಆ್ಯಂಟ್‌ಹಿಲ್ಸ್ ಆಫ್ ದಿ ಸವನ್ನಾ’ದ ಕಂಗನ್ ರಾಜ್ಯ ಹೆಚ್ಚೂಕಡಿಮೆ ಇಂಥ ರಾಜಕೀಯ ಸಮಾಜವಾಗಿ ಕಾಣುತ್ತದೆ. ವಸಾಹತೋತ್ತರ ಆಫ್ರಿಕಾದ ಘಾನಾ, ಉಗಾಂಡಾ, ರೊಡೇಷಿಯಾ, ನೈಜೀರಿಯಾಗಳ ಪ್ರತಿರೂಪ ಕಂಗನ್. ಕಂಗನ್ ರಾಜ್ಯದ ಸರ್ವಾಧಿಕಾರಿ ಸ್ಯಾಮ್ ‘ನಾನು ರಾಜಕಾರಣಿಯಲ್ಲ, ಸೈನಿಕ’ ಎಂದು ತಾನು ದೇಶದಲ್ಲಿ ತರಲೆತ್ನಿಸುವ ಶಿಸ್ತನ್ನು ಸಮರ್ಥಿಸಿಕೊಳ್ಳಲೆತ್ನಿಸುತ್ತಾನೆ. ಅಚೀಬೆ ತನ್ನ ‘ದಿ ಟ್ರಬಲ್ ವಿತ್ ನೈಜೀರಿಯಾ’ ಪುಸ್ತಕದಲ್ಲಿ ಹೇಳುವಂತೆ’

ಮಿಲಿಟರಿ ಆಡಳಿತ ಜಾರಿಗೆ ಬಂದ ತಕ್ಷಣ ಇಡೀ ಆಧುನಿಕ ನೈಜೀರಿಯಾ ಶಿಸ್ತಿನಿಂದ ವರ್ತಿಸತೊಡಗುತ್ತಿರುವಂತೆ ಕಾಣುತ್ತದೆ. ಕಚೇರಿಗಳ ಕೆಲಸ ಚುರುಕಾದಂತೆ, ರಸ್ತೆಗಳು ತಮ್ಮ ಅಸ್ತವ್ಯಸ್ತ ವಾಹನ ಸಂಚಾರವನ್ನು ಕಳೆದುಕೊಂಡಂತೆ, ಎಲ್ಲವೂ ನೆಟ್ಟಗಾದಂತೆ ಕಾಣತೊಡಗುತ್ತದೆ.

ಅಂದರೆ, ವಸಾಹತೋತ್ತರ ನೈಜೀರಿಯಾದಲ್ಲಿ ದಿಕ್ಕೆಟ್ಟ ಜನತೆಗೆ ಮಿಲಿಟರಿ ಸರ್ವಾಧಿಕಾರವೂ ಹೊಸ ಪರ್ಯಾಯವೆಂಬ ಭ್ರಮೆ ಹುಟ್ಟಿಸುತ್ತದೆ. ಸ್ವತಃ ಕಂಗನ್‌ನ ಸರ್ವಾಧಿಕಾರಿ ಸ್ಯಾಮ್ ಕೂಡ ಅಂಥ ನಂಬಿಕೆಯಿಂದಲೇ ಹೊರಡುತ್ತಾನೆ. ಆದರೆ ಕಡೆಯ ಪಕ್ಷ ‘ಎ ಮ್ಯಾನ್ ಆಫ್ ದಿ ಪೀಪಲ್’ನ ಭ್ರಷ್ಟನಂಗಾನಂಥವರ ರೀತಿಯಲ್ಲಾದರೂ ಜನತೆಯ ಸಂಪರ್ಕವಿಲ್ಲದ ಈ ಬಗೆಯ ಪ್ರಭುತ್ವ ಕೊನೆಗೆ ಜನತೆಯ ಬೇಟೆಯನ್ನಾರಂಭಿಸುತ್ತದೆ. ಸರ್ವಾಧಿಕಾರಿ ಸ್ಯಾಮ್‌ನ ಆರಾಧನೆಯನ್ನೇ ತಮ್ಮ ಏಕಮಾತ್ರ ಗುರಿಯಾಗಿರಿಸಿಕೊಂಡ ಮಂತ್ರಿಗಳು(ಇದನ್ನೇ ಕಾದಂಬರಿಯ ಕವಿ-ಪತ್ರಕರ್ತ ಇಕೆಮ್ ‘ಆಸ್ಥಾನ ವಿದೂಷಕರು ಕಟ್ಟಿದ ಗೋಡೆ’ ಎನ್ನುತ್ತಾನೆ.) ಸರಕಾರ ಹೇಳಿದ್ದನ್ನೇ ಪ್ರತಿಧ್ವನಿಸುವ ರೇಡಿಯೋ, ಟೆಲಿವಿಷನ್, ಪ್ರಭುತ್ವವು ನಿಯಂತ್ರಿಸಲೆತ್ನಿಸುವ ಪತ್ರಿಕೆಗಳು-ಇವೆಲ್ಲದರ ಮೂಲಕ ‘ಆಫ್ರಿಕನ್ ಸಮಾಜದ ಕೆನೆ (cream) ಮತ್ತು ಕಪ್ಪು ಜನಾಂಗದ ಆಶಾಕಿರಣ’ವಾದ ಅಲ್ಪಸಂಖ್ಯಾತ ವಿದ್ಯಾವಂತ ವರ್ಗ ಸ್ವಾತಂತ್ರ್ಯೋತ್ತರ ಆಫ್ರಿಕಾವನ್ನು ಸೆರೆಮನೆಯಾಗಿಸತೊಡಗುತ್ತದೆ.

ಸಣ್ಣಪುಟ್ಟ ಭಿನ್ನಮತಗಳನ್ನೂ ತನಗೆ, ತನ್ನ ಪ್ರಭುತ್ವಕ್ಕೆ, ತನ್ನ ದೇಶಕ್ಕೆ ಗಂಡಾಂತರವೆಂಬಂತೆ ಕಾಣುವ ಅಧ್ಯಕ್ಷ ಸ್ಯಾಮ್, ಕಂಗನ್ ರಾಜ್ಯದಲ್ಲಿ ಉಸಿರು ಕಟ್ಟಿಸುವ ಸ್ಥಿತಿ ಸೃಷ್ಟಿಸುತ್ತಾನೆ. ‘ತಲೆಯಿಂದ ಪಾದದವರೆಗೂ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡ ಈ ಮಿಲಿಟರಿ ನಾಯಕ ಜನರನ್ನು, ಶಾಂತಿಯುತ ಮೆರವಣಿಗೆಗಳನ್ನು ಕಂಡರೂ ಹೆದರುತ್ತಾನೆ’. ಅಧ್ಯಕ್ಷ ಸ್ಯಾಮ್‌ಗೆ ಆಜೀವಪರ‌್ಯಂತ ಅಧ್ಯಕ್ಷಗಿರಿಯ ಹುಚ್ಚು ಹತ್ತಿದ ನಂತರ ಮಿಲಿಟರಿ ಸರಕಾರದ ಹಲ್ಲುಗಳು ಮೊನಚಾಗತೊಡಗುತ್ತವೆ. ಈ ಹುಚ್ಚಿಗೆ ಮತ ನೀಡದ ಅಬಜಾನ್ ಪ್ರದೇಶವನ್ನು ಸವಲತ್ತುಗಳಿಲ್ಲದೆ ಕೊಳೆಸುವುದರಲ್ಲಿ ವ್ಯಕ್ತವಾಗುವ ಸ್ಯಾಮ್‌ನ ಕ್ರೌರ್ಯ ಆಫ್ರಿಕನ್ ದೇಶಗಳಲ್ಲಿ ಸರ್ವಾಧಿಕಾರ ಸೃಷ್ಟಿಸಿದ ನರಕದ ರೂಪಕ. ಅಬಜಾನ್‌ನ ನಿಯೋಗದೊಂದಿಗೆ ಬಂದ ಅದ್ಭುತ ಮಾತುಗಾರನಾದ ಹಿರಿಯ ಹೇಳುವಂತೆ,

ನಾವು ಸೂರ್ಯನ ಕೆಂಗಣ್ಣಿಗೆ ತುತ್ತಾಗಿದ್ದೇವೆ. ತನ್ನ ಆಜೀವಪರ‌್ಯಂತ ಅಧ್ಯಕ್ಷಗಿರಿಗೆ ನಡೆದ ಮತದಾನದಲ್ಲಿ ಹೂಂ ಎನ್ನದ ನಮ್ಮ ಪ್ರದೇಶದ ಬೋರ್‌ವೆಲ್‌ಗಳನ್ನು ಅಧ್ಯಕ್ಷ ಮುಚ್ಚಿಸಿದ್ದಾನೆ.

ಆದ್ದರಿಂದ ನೂರಾರು ಮೈಲಿ ದೂರದ ರಾಜಧಾನಿಗೆ ಬಂದಿಳಿದ ಈ ನಿಯೋಗದ ಸ್ಥಿತಿ ಹೊಸ ರಾಷ್ಟ್ರದ ಕೇಂದ್ರೀಕೃತ ವ್ಯವಸ್ಥೆ ಆಫ್ರಿಕನ್ ಗ್ರಾಮಸಮಾಜದ ಬೆನ್ನೆಲುಬನ್ನು ಮುರಿದಿದ್ದನ್ನೂ ಸಂಕೇತಿಸುತ್ತದೆ. ‘ನಾವೀಗ ಹೊಸ ಮಾರ್ಗಗಳನ್ನು ಕಲಿತು, ಹಳೆಯ ನಿರುಪಯುಕ್ತ ಮಾರ್ಗಗಳನ್ನು ಬಿಟ್ಟು ಬಿಡಬೇಕೆಂದಿದ್ದೇವೆ’ ಎನ್ನುವ ನಿಯೋಗದ ನಾಯಕತ್ವ ವಹಿಸಿದ ಮುದುಕನ ವಿಷಾದಕರ ಮಾತಿನಲ್ಲಿ ವ್ಯಕ್ತವಾಗುತ್ತಿರುವುದು ರಾಷ್ಟ್ರ ಪ್ರಭುತ್ವದಲ್ಲಿ ಗ್ರಾಮಗಳು ಅನುಭವಿಸುವ ಆಳದ ಅಸಹಾಯಕತೆಯೂ ಹೌದು. ವಸಾಹತುವಾದೀ ಸರಕಾರಗಳ ಪಡಿಯಚ್ಚಿನಂತೆ ದೇಶೀ ಸರಕಾರಗಳೂ ಜನತೆಯ ಆತ್ಮವಿಶ್ವಾಸವನ್ನು ನಿರ್ನಾಮ ಮಾಡುವ ಕೆಲಸವನ್ನೇ ಮುಂದುವರಿಸುವುದರ ಸೂಚನೆಯಿದು. ಅಬಜಾನ್‌ನಿಂದ ಬಂದ ನಿಯೋಗದ ನಾಯಕನಾದ ಹಿರಿಯನನ್ನು- ಕತೆ, ಉಪಕತೆಗಳ ಮೂಲಕ ಆಕರ್ಷಕವಾಗಿ ತನ್ನ ಪ್ರದೇಶದ ಅಭಿಪ್ರಾಯವನ್ನು ಮಂಡಿಸುವ ಮುದುಕನನ್ನು- ಅತಿಭದ್ರತೆಯ ಸೆರೆಮನೆಯಲ್ಲಿ ಬಂಧನದಲ್ಲಿಡುವುದನ್ನು ಕುರಿತು ಪತ್ರಕರ್ತ ಇಕೆಮ್ ಹೇಳುತ್ತಾನೆ: ‘ಏಕೆಂದರೆ ಕತೆಗಾರರು ಯಾವಾಗಲೂ ಅಪಾಯಕಾರಿ ವ್ಯಕ್ತಿಗಳು. ಮಾನವನನ್ನು ಆಳಬಯಸುವ ಹಾಗೂ ನಿಯಂತ್ರಿಸಬಯಸುವವರಿಗೆಲ್ಲ ಅವರನ್ನು ಕಂಡರೆ ಭಯ. ಮಾನವನ ಸ್ವಾತಂತ್ರ್ಯದ ಹಕ್ಕನ್ನು ಹತ್ತಿಕ್ಕುವ ಪ್ರಭುತ್ವ, ಚರ್ಚು, ಮಸೀದಿ, ರಾಜಕೀಯ ಪಕ್ಷಗಳು ಹಾಗೂ ವಿಶ್ವವಿದ್ಯಾಲಯಗಳಿಗೂ ಕತೆಗಾರರನ್ನು ಕಂಡರೆ ಭಯ.’

ಇದು ವಸಾಹತೋತ್ತರ ಆಫ್ರಿಕಾದ ಕಂಗನ್‌ನ ಸರ್ವಾಧಿಕಾರೀ ಪ್ರಭುತ್ವದ ಒಂದು ಮುಖ. ‘ಆಫ್ರಿಕಾದ ಇಂದಿನ ಆಡಳಿತಗಾರರು ಮಧ್ಯಯುಗದ ಸರ್ವಾಧಿಕಾರಿಗಳ ಪ್ರತಿ ರೂಪಗಳು’ ಎನ್ನುತ್ತಾನೆ ಇಕೆಮ್. ಸುಮಾರು ಇಪ್ಪತ್ತೈದು ವರ್ಷಗಳಿಂದ ಪರಸ್ಪರರನ್ನು ಬಲ್ಲ ಇಕೆಮ್ ಒಸೋಡಿ (ಕವಿ, ಪತ್ರಕರ್ತ, ಕಾದಂಬರಿಕಾರ)’ ಸ್ಯಾಮ್ (ಕಂಗನ್‌ನ ಅಧ್ಯಕ್ಷ), ಕ್ರಿಸ್ಟೊಫರ್ (ಕ್ರಿಸ್ ಎಂದು ಕರೆಯಲಾಗುವ ಈತ ಇದೇ ಸರಕಾರದ ವಾರ್ತಾ ಮಂತ್ರಿ) ಈ ಮೂವರು ಗೆಳೆಯರು ಇಂಗ್ಲೆಂಡಿನಲ್ಲಿ ಓದಿ ಆಫ್ರಿಕಾಕ್ಕೆ ಹಿಂದಿರುಗಿ ಬಂದವರು.

ಒಮ್ಮೆ ಈ ಮೂವರನ್ನೂ ಕುರಿತು ಕ್ರಿಸ್‌ನ ಗೆಳತಿ ಬೀಟ್ರಿಸ್ ‘ನಿಮ್ಮ ಮೂವರ ಕತೆಯೇ ಈ ದೇಶದ ಕತೆಯೆಂದು ನೀವು ತಿಳಿದಂತಿದೆ’, ಎಂದು ಹಾಸ್ಯದಿಂದ ಹೇಳುವುದು ಒಂದರ್ಥದಲ್ಲಿ ನಿಜ ಕೂಡ. ಒಂದು ಮಟ್ಟದ ಬದ್ಧತೆಯಿಂದಲೇ ಅಧಿಕಾರವನ್ನು ಕೈಗೆತ್ತಿ ಕೊಳ್ಳುವ ಸ್ಯಾಮ್‌ನನ್ನು ಕೇಂದ್ರೀಕೃತ ಅಧಿಕಾರ ಭ್ರಷ್ಟಗೊಳಿಸುತ್ತದೆ. ಇಕೆಮ್ ಪತ್ರಿಕೆಯ ಮೂಲಕ ಎತ್ತುವ ನ್ಯಾಯಬದ್ಧ ಪ್ರಶ್ನೆಗಳೂ ತನ್ನ ಸರಕಾರಕ್ಕೆ ಗಂಡಾಂತರಗಳೆಂಬಂತೆ ಕಾಣುತ್ತವೆ. ಇಕೆಮ್ ಅಬಜಾನ್‌ನ ಹಿರಿಯರ ಜೊತೆ ನಡೆಸುವ ಸಂವಾದ ವಿದೇಶೀ ಸಂಚಿನಂತೆ  ಕಾಣಿಸುತ್ತದೆ. ಇಕೆಮ್‌ನನ್ನು ಪತ್ರಿಕೆಯಿಂದ ಹೊರಗಟ್ಟಲಾಗುತ್ತದೆ. ಆ ನಂತರ ಇಕೆಮ್‌ನ ಭಾಷಣದ ವರದಿ ಅವನ ಬಂಧನಕ್ಕೂ ನಂತರ ಹುಸಿ ಎನ್‌ಕೌಂಟರಿನಲ್ಲಿ ಕೊಲೆಗೂ ಕಾರಣವಾಗುತ್ತದೆ. ಅವನ ಬಂಧನಕ್ಕೆ ಕಾರಣವಾದ ವರದಿಯ ಹಿನ್ನೆಲೆ ಇದು: ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಸಭಿಕನೊಬ್ಬ ಕಂಗನ್ ರಾಜ್ಯದ ಹಾಲೀ ಅಧ್ಯಕ್ಷರ ತಲೆಯನ್ನು ನೋಟುಗಳ ಮೇಲೆ ಛಾಪಿಸುವ ಸುದ್ದಿ ಕುರಿತು ಇಕೆಮ್‌ನ ಪ್ರತಿಕ್ರಿಯೆ ಕೇಳುತ್ತಾನೆ. ಇಕೆಮ್‌ನ ಉತ್ತರ ಇದು: ‘… ನನಗೇನನ್ನಿಸುತ್ತೇ ಅಂದರೆ, ಯಾವುದೇ ಹಾಲಿ ರಾಷ್ಟ್ರಪತಿ ನಾಣ್ಯದ ಮೇಲೆ ತನ್ನ ತಲೇನ ಹಾಕುವಷ್ಟು ಮೂರ್ಖನಾಗಿದ್ದರೆ, ಅದನ್ನ, ಅಂದರೆ ಆ ತಲೇನ, ತೆಗೀಲಿ ಅಂತ ಜನರನ್ನ ತಾನು ಪ್ರಚೋದಿಸ್ತಾ ಇದ್ದಾನೆ ಅನ್ನೋದಾದರೂ ಅವನಿಗೆ ಗೊತ್ತಿರಬೇಕು.’

ಈ ಲಘುಧಾಟಿಯ ಮಾತಿನ ವರದಿಯನ್ನು ಇಕೆಮ್‌ನ ಬಂಧನಕ್ಕೆ ಪೂರ್ವಭಾವಿಯಾಗಿ ಸರಕಾರಿ ಪತ್ರಿಕೆ ಪ್ರಕಟಿಸುವ ಬಗೆ ಇದು: ‘ರಾಜಹತ್ಯೆಗೆ ಮಾಜಿ ಸಂಪಾದಕನ ಕರೆ!’ ಇದನ್ನೇ ನೆಪವಾಗಿಟ್ಟುಕೊಂಡು ಸಂಪಾದಕ ಇಕೆಮ್‌ನನ್ನು ಕೊಲೆ ಮಾಡಿಸಲಾಗುತ್ತದೆ. ಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟ ಕ್ರಿಸ್ ಭೂಗತನಾಗುತ್ತಾನೆ. ಪ್ರಭುತ್ವ ಕ್ರೂರವಾಗತೊಡಗುತ್ತದೆ. ಸ್ಟೇಟ್ ರಿಸರ್ಚ್ ಕೌನ್ಸಿಲ್ ಎಂಬ ಪೊಲೀಸ್ ಸಂಸ್ಥೆ ದಮನದ ಹೊಸ ಮಾರ್ಗಗಳನ್ನು ಸಂಶೋಧಿಸಲಾರಂಭಿಸುತ್ತದೆ. ಪ್ರಜೆಗಳ ಮಲಗುವ ಕೋಣೆಗೆ ಪ್ರಭುತ್ವದ ‘ತುರಿ ನೆರಳು’ ಬೀಳುವುದನ್ನು, ಪ್ರಭುತ್ವ ಅಕ್ಷರಶಃ ಅಲ್ಲಿಗೆ ಕಾಲಿಕ್ಕುವುದನ್ನು ಕ್ರಿಸ್‌ನ ಗೆಳತಿ ಬೀಟ್ರಿಸ್‌ಳ ಮನೆಯ ನಡುರಾತ್ರಿಯ ಶೋಧ ದಾಖಲಿಸುತ್ತದೆ:

ಎಲ್ಲೋ ಕನಸಿನಲ್ಲೆಂಬಂತೆ ಕಾರಿನ ಬೆಳಕು ಕಂಡ ಬೀಟ್ರಿಸ್ ಎಚ್ಚೆತ್ತರೆ, ಜೀಪಿನ ಟೈರುಗಳು ಉಜ್ಜಿದ ಸದ್ದು. ಅವಳು ಥಟ್ಟನೆ ಮೇಲೆದ್ದಳು. ಕಿಟಕಿಯ ಗಾಜಿನ ಮೂಲಕ ಕಂಡದ್ದು ಹೆಡ್‌ಲೈಟು ಹಚ್ಚಿ ನಿಂತ ಮೂರು ಜೀಪುಗಳು. ಎದೆ ಹೊಡೆದುಕೊಳ್ಳತೊಡಗಿತು. ಜೀನ್ಸ್ ತೊಟ್ಟು ಗೌನು ಹಾಕಿಕೊಂಡಳು…

ಬಾಗಿಲು ಬಡಿವ ಭಯಂಕರ ಸದ್ದು.

ಮಿಸ್ ಒಕೋ. ಇದು ಸ್ಟೇಟ್ ಸೆಕ್ಯುರಿಟಿ. ಹೂಂ, ಬಾಗಿಲು ತೆಗಿ!

……….

ಮಿಸ್ ಒಕೋ…ಕೊನೇ ಎಚ್ಚರಿಕೆ. ಹೂಂ, ಬಾಗಿಲು ತೆಗಿ; ಸ್ಟೇಟ್ ಸೆಕ್ಯುರಿಟಿ.

ಬರ್ತಿದೀನಿ.

ಹೂಂ, ಬೇಗ

…..ನಡುಗುವ ಕೈಗಳು ಬೀಗ ತೆಗೆಯುತ್ತವೆ…ಭಾರೀ ಗಾತ್ರದ ಸೈನಿಕನೊಬ್ಬ ಇಬ್ಬರು ಹೆಂಗಸರನ್ನೂ ತನ್ನೆರಡೂ ಕೈಗಳಿಂದಲೂ ಬದಿಗೆ ತಳ್ಳಿದ ರಭಸಕ್ಕೆ ಎಲಿವಾ ನೆಲದ ಮೇಲುರುಳುತ್ತಾಳೆ…..

ಕೆಂಡಗಣ್ಣಿನ ಸಾರ್ಜೆಂಟ್ ಬೀಟ್ರಿಸ್‌ಳ ಬೆಡ್‌ರೂಮ್ ಪ್ರವೇಶಿಸಿದವನು ಹಾಸಿಗೆಯ ಬೆಡ್‌ಶೀಟ್‌ಗಳನ್ನು ತೆಗೆತೆಗೆದು ಒಗೆದ. ಕ್ರೂರವಾಗಿ ಒಂದೊಂದೇ ವಸ್ತುವನ್ನು ದಿಟ್ಟಿಸುತ್ತಾ ಇನ್ನೊಂದಕ್ಕೆ ಹೋಗುತ್ತಿದ್ದ. ಸೂಟ್‌ಕೇಸಿನಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ನೆಲದ ಮೇಲೆೊಬಿದ್ದವು.

ಕಳೆದುಹೋದ ಕುದುರೆಗಾಗಿ ಎಲ್ಲೆಡೆ ಹುಡುಕಿದ ಅವನು ಬೀಟ್ರಿಸ್‌ಳ  ನಿದ್ದೆ ಕೆಡಿಸಿದ್ದಕ್ಕೆ ಸಾರಿ ಎಂದ. ಸೆಲ್ಯೂಟ್ ಹೊಡೆದ. ಹೊರಟ.

ಡೇವಿಡ್ ಕ್ಯಾರೋಲ್ ಹೇಳುವಂತೆ, ‘ಮನೆಮನೆಗಳ ಶೋಧನೆ, ನಡುರಾತ್ರಿಯ ಬಂಧನಗಳು, ಸುಳ್ಳುಸುದ್ದಿಗಳನ್ನು ಸಾರುವ ಸರಕಾರಿ ಮಾಧ್ಯಮಗಳು ಹಾಗೂ ಗಾಳಿ ಸುದ್ದಿಗಳು ರೂಪಿಸುತ್ತಿರುವ ಸ್ವಾತಂತ್ರ್ಯೋತ್ತರ ಪಶ್ಚಿಮ ಆಫ್ರಿಕಾದ ಪ್ರತಿರೂಪವಾಗಿ ಕಂಗನ್ ಕಾಣುತ್ತದೆ.’ ‘ಎಲ್ಲ ಬಗೆಯ ಅಧೋಗತಿಗೂ ಸಾಮ್ರಾಜ್ಯಶಾಹಿಯನ್ನು ದೂರು ವುದು ಈಗ ಅಸಂಗತ’ ಎನ್ನುವ ಕಾದಂಬರಿಯ ಕೇಂದ್ರ ಪಾತ್ರವಾದ ಪತ್ರಕರ್ತ ಇಕೆಮ್ ವಸಾಹತೋತ್ತರ ಆಫ್ರಿಕಾದ ವಿಘಟನೆಯ ಮೂಲವೆಲ್ಲಿದೆಯೆಂದು ಹುಡುಕುತ್ತಾನೆ. ದೇಶವನ್ನು ಮುತ್ತಿರುವ ಭ್ರಷ್ಟಾಚಾರ, ವಿದೇಶೀ ಶಕ್ತಿಗಳೆದುರು ಆಫ್ರಿಕಾದ ಗುಲಾಮಗಿರಿ, ಬಂಡವಾಳಶಾಹಿ ವ್ಯವಸ್ಥೆ, ಕೆಲಸ ಮಾಡದ ಕಾರ್ಮಿಕರು, ಯೂನಿಯನ್ನುಗಳು, ರಾಜಕಾರಣಿಗಳ ತದ್ರೂಪಾಗಿರುವ ವಿದ್ಯಾರ್ಥಿಗಳು-ಹೀಗೆ ಹಲವು ಕಾರಣಗಳು ಇಕೆಮ್‌ಗೆ ಗೋಚರಿಸತೊಡಗುತ್ತವೆ. ಆದರೆ, ಇವೆಲ್ಲಕ್ಕಿಂತ ಮುಖ್ಯವಾಗಿ ಆಫ್ರಿಕಾದ ಸೋಲು ಎಂದರೆ ‘ಬಡವರು ಹಾಗೂ ನಿರ್ಗತಿಕರ ಜೊತೆ ದಿವ್ಯವಾದ, ಆಳವಾದ ಸಂಬಂಧಗಳನ್ನು ಮರುಸ್ಥಾಪಿಸಲಾಗದ, ದೇಶದ ಅಂತರಾಳದಲ್ಲಿ ನೋವಿನಿಂದ ನರಳುವ ಗಾಯಗೊಂಡ ಹೃದಯಗಳ ಜೊತೆ ಸಂವಾದಿಸಲಾಗದ ನಮ್ಮ ನಾಯಕರ ಸೋಲು’ ಎನಿಸುತ್ತದೆ. ಈ ಮಾತುಗಳು ಭಾರತದ ಸ್ವಾತಂತ್ರ್ಯೋತ್ತರ ರಾಜಕಾರಣ ಕುರಿತ ವ್ಯಾಖ್ಯಾನದಂತೆಯೇ ಕೇಳಿಸುತ್ತವೆ. ‘ಆ್ಯಂಟ್‌ಹಿಲ್ಸ್ ಆಫ್ ದಿ ಸವನ್ನಾ’ ಕಾದಂಬರಿಯಲ್ಲಿ ಆಫ್ರಿಕಾದಲ್ಲಿ ದೇಶೀ ಸ್ವತಂತ್ರ ಸರ್ಕಾರಗಳು ಸೃಷ್ಟಿಸಿದ ಗೊಂದಲ ಕಂಡ ಆಫ್ರಿಕನ್ ಜನಸಾಮಾನ್ಯನೊಬ್ಬ ನಗುತ್ತಾ ಇನ್ನೊಬ್ಬನಿಗೆ ಹೇಳುತ್ತಾನೆೊ: ಗಂಡಸರು, ಹೆಂಗಸರು, ಮಕ್ಕಳು ಇನ್ನೂ ಹುಟ್ಟದೇ ಇರುವ ಕಂದಗಳು ಎಲ್ಲರಿಂದಲೂ ತಲಾ ಇಪ್ಪತ್ತು ಮನಿಲಾ(ಪೈಸೆ) ಚಂದಾ ಎತ್ತಿಕೊಂಡು ಬಾರಯ್ಯ. ಅದನ್ನು ನಾನು ಇಂಗ್ಲೆಂಡಿಗೆ ತಗೊಂಡು ಹೋಗಿ ಐ.ಎಂ.ಎಫ್. ಜೊತೆ ಒಪ್ಪಂದ ಮಾಡಿಕೊಂಡು ಬಿಳಿಯ ಮನುಷ್ಯನ್ನ ಮತ್ತೆ ನಮ್ಮ ಕಂಗನ್ ದೇಶಕ್ಕೆ ಕರಕೊಂಡು ಬರ‌್ತೀನಿ’. ಇದು ಆಫ್ರಿಕನ್ ವಸಾಹತೋತ್ತರ ಸಮಾಜದ ದುರಂತ. ಮೇಲಿನ ಮಾತುಗಳಲ್ಲಿ ಕಾಣುವ ವಸಾಹತುಕಾರನ ಆರಾಧನೆಯ ಮೂಲ ದೇಶೀ ಸರ್ಕಾರಗಳ ಹಾಗೂ ದೇಶೀ ವ್ಯವಸ್ಥೆಯ ವೈಫಲ್ಯಗಳಲ್ಲಿದೆ. ‘ದಮನಕ್ಕೊಳಗಾದವನೂ ದಮನಕಾರನ ಸದ್ಗುಣಗಳನ್ನು ಕುರಿತು ಹಾಡ ತೊಡಗುವುದು ದಮನಕಾರಿ ವ್ಯವಸ್ಥೆಯ ಅಂತಿಮ ಗೆಲುವು’ ಎನ್ನುತ್ತಾನೆ ಆಫ್ರಿಕನ್ ಚಿಂತಕ ನುಗುಗಿ.

ಅಚೀಬೆಯ ಕಾದಂಬರಿಗಳೆರಡೂ ಮಂಡಿಸುವ ವಸಾಹತು ಆಕೃತಿಗಳು ಹಾಗೂ ದೇಶೀ ವ್ಯಕ್ತಿತ್ವದ ಪತನಗಳಿಂದ ಸೃಷ್ಟಿಗೊಂಡ ಅಧಃಪತನದ ಇನ್ನೊಂದು ಮುಖದಲ್ಲಿ(ಷೋಯಿಂಕಾನ ಕಾದಂಬರಿಗಳು ಸೂಚಿಸುವಂತೆ) ಅಕ್ಷರಸ್ಥ ವರ್ಗದ ಅಧಃಪತನ ಹಾಗೂ ತನ್ನ ದೇಶೀ ಭೂತದೊಂದಿಗೆ ಸಂಪರ್ಕ ಕಡಿದುಕೊಳ್ಳಹೊರಟಿರುವ ಕಾರಣದಿಂದಾಗಿ ‘ಅನೈತಿಕ’ಗೊಳ್ಳ ತೊಡಗಿರುವ ವಸಾಹತೋತ್ತರ ಆಫ್ರಿಕಾವಿದೆ. ಆಧುನಿಕ ಆಫ್ರಿಕಾದ ಸೂತ್ರ ಹಿಡಿದ ಶಕ್ತಿಗಳಂತೆ, ಆಧುನಿಕ ಆಫ್ರಿಕಾವನ್ನು ರೂಪಿಸುತ್ತಿರುವ ಬುದ್ದಿಜೀವಿವರ್ಗದ ಒಂದು ಗುಂಪಿನ ಭ್ರಷ್ಟತೆ, ಇನ್ನೊಂದು ಬಗೆಯ ಬುದ್ದಿಜೀವಿ ಗುಂಪಿನ ಅಸಹಾಯಕತೆ-ಇವು ಕೂಡ ವಸಾಹತೋತ್ತರ ಅವನತಿಗೆ ಕಾರಣ. ಆಫ್ರಿಕಾವನ್ನು ಮರಳಿ ಕಟ್ಟಲು ಶಕ್ತಿಯಿರುವ ಸ್ಯಾಗೋ ಹಾಗೂ ಸೆಕೋನಿಯಂಥ ಆಧುನಿಕ ಆದರ್ಶವಾದಿಗಳು ತಮ್ಮ ಮೇಲೆ ಹೇರಲಾದ ಜೀವನ ಕ್ರಮದ ಬಲಿಪಶುಗಳಾಗಬೇಕಾಗುತ್ತದೆ. ಪತ್ರಕರ್ತನಾಗಲು ಸ್ಯಾಗೋ ಸಂದರ್ಶನಕ್ಕೆಂದು ಹೋದರೆ, ಅಲ್ಲಿರುವ ಸಂದರ್ಶನ ಸಮಿತಿಯ ಸದಸ್ಯರೆಲ್ಲ ‘ಚುನಾವಣೆ ಗೆಲ್ಲಲಾಗದವರು, ಮಂತ್ರಿಯಾಗದವರು, ಮಂತ್ರಿಗಳ ದಲ್ಲಾಳಿಗಳು’ ಹಾಗೂ ಕೆಲಸ ಕೊಡಲು ಲಂಚ ಕೇಳುವ ಸದಸ್ಯರು. ಹಣಕ್ಕಾಗಿ ಏನನ್ನಾದರೂ ಬರೆಯಲು ಸಿದ್ಧವಿರುವ ನ್ವಾಬುಜರ್‌ನಂಥವರು ಈ ಪತ್ರಿಕೆಯ ಸಂಪಾದಕರು. ಸ್ಯಾಗೋ ತನ್ನ ಸುತ್ತಲಿನ ಕೊಳಕನ್ನು ಕುರಿತು ಬರೆದ ವರದಿಯನ್ನು ‘ತಾಂತ್ರಿಕ’ ಕಾರಣಗಳಿಗೆ ತಿರಸ್ಕರಿಸುವ ಈ ಸಂಪಾದಕನ ಧ್ಯೇಯ ವಾಕ್ಯ ಇದು: ‘(ಪತ್ರಕರ್ತನ ಕೆಲಸ) ತೀರಾ ಸಿಂಪಲ್. ನೀನು ನಿನ್ನ ಬಾಯಿ ಮುಚ್ಚಿಕೊಂಡಿರು; ನಾನು ನನ್ನ ಬಾಯಿ ಮುಚ್ಚಿಕೊಂಡಿರುತ್ತೇನೆ.’

ಬುದ್ದಿಜೀವಿಗಳು ಹಾದಿತಪ್ಪಿದ ಅಥವಾ ಅಸಹಾಯಕರಾದ ಈ ಸಮಾಜದ ಅಧಿಕಾರ ಕೇಂದ್ರಗಳನ್ನು ಹಿಡಿಯುವವರು ಚೀಫ್ ವಿನ್ಸಾಲನಂಥ ಅವಕಾಶವಾದಿಗಳು. ಕಾದಂಬರಿಯ ಕೇಂದ್ರದಲ್ಲಿರುವ ಐದು ಜನ ಗೆಳೆಯರಲ್ಲಿ- ಆಧುನಿಕ ಆಫ್ರಿಕನ್ ಸಮಾಜದ ‘ವ್ಯಾಖ್ಯಾನ ಕಾರ’ರಲ್ಲಿ- ಕಾಣುವ ಸಿನಿಕತೆ, ಹತಾಶೆ ಹಾಗೂ ವ್ಯಗ್ರತೆ ಸುತ್ತಲಿನ ಸಮಾಜದ ಪ್ರತಿಬಿಂಬವೂ ಹೌದು. ಆರ್ಥರ್ ಶ್ಯಾಟ್ಟೋ ಗೋಕ್ವಂಡಿ ಹೇಳುವಂತೆ, ‘ಇಡೀ ಸಮಾಜ ಅಧಿಕಾರ ಸೂತ್ರ ಹಿಡಿದವರು ಸೃಷ್ಟಿಸಿದ ಕೊಳಕಿನಿಂದ ತುಂಬಿಹೋಗಿದೆ. ಕಾದಂಬರಿಯುದ್ದಕ್ಕೂ ಸ್ಯಾಗೋ ಹೇಳುವಂತೆ ಮಲ ಹಾಗೂ ಮಲ ತುಂಬಿದ ಬಕೆಟ್ಟುಗಳಿಂದ ಬರುವ ವಾಸನೆ ಈ ಸಮಾಜವನ್ನು ಆವರಿಸಿಕೊಂಡಿದೆ.’ ಸ್ಯಾಗೋ ಒಂದು ಸಂದರ್ಭದಲ್ಲಿ ಹೇಳುವ ಮಾತಿದು: ‘… ನಮ್ಮ ಈ ಪ್ರೀತಿಯ ದೇಶದಲ್ಲಿ ಸಾವನ್ನು ಬಿಟ್ಟರೆ ಅತ್ಯಂತ ದೇಶೀಯವಾದ ಅಂಶ ವೆಂದರೆ ಮಲ…’

ಸ್ಯಾಗೋನ ‘ಶೂನ್ಯವಾದ’ದ ಸಿನಿಕತೆಯ ಸಿದ್ಧಾಂತ ಹುಟ್ಟುವುದು ಈ ಘೋರ ನಿರಾಶಾದಾಯಕ ಸ್ಥಿತಿಯ ಫಲವಾಗಿ. ಅವನ ಕುಡುಕತನ, ಫ್ಯಾಂಟಸಿಗಳು ಕೂಡ ಈ ನಿರಾಶೆಯಿಂದ ತಪ್ಪಿಸಿಕೊಳ್ಳುವ ಕರುಣಾಜನಕ ಪ್ರಯತ್ನಗಳು. ಸ್ಯಾಗೋನಂತೆ ಕೋಲಾ ಅಥವಾ ಎಗ್ಬೋರ ವ್ಯಂಗ್ಯ ಕೂಡ ಆಳದ ಕಹಿಯಿಂದ ಹುಟ್ಟಿದ ಪ್ರತಿಕ್ರಿಯೆಯೇ. ಸ್ಯಾಗೋನಷ್ಟೇ ಸಾಮಾಜಿಕ ಬದ್ಧತೆಯುಳ್ಳ ಸೆಕೋನಿಯನ್ನು ಸಮಾಜದ ಕೊಳಕು ಇನ್ನೊಂದು ರೀತಿಯಲ್ಲಿ ಎದುರಾಗುತ್ತದೆ. ವಿದೇಶದಲ್ಲಿ ಎಂಜಿನಿಯರಿಂಗ್ ಕಲಿತು ಬಂದ ಸೆಕೋನಿಗೆ ಅತ್ಯಾಧುನಿಕ ವಿದ್ಯುತ್ ಕೇಂದ್ರಗಳು, ಸೇತುವೆಗಳು, ವಿಜ್ಞಾನಕೇಂದ್ರಗಳ ಮೂಲಕ ತನ್ನ ಸಮಾಜವನ್ನು ಹೊಸ ಜಗತ್ತಿಗೆ ಅಣಿಗೊಳಿಸುವ ಕನಸು. ಸೆಕೋನಿಯ ವೈಜ್ಞಾನಿಕ ಪ್ರಯೋಗಗಳಿಗೆ ಅಡ್ಡಿಯಾಗಿರುವುದು ಅಧಿಕಾರಶಾಹಿಯ ಭ್ರಷ್ಟತೆ ಹಾಗೂ ನಿರ್ಲಕ್ಷ್ಯ. ಇದರ ಫಲವಾಗಿ ಸೆಕೋನಿಯಂಥ ಪ್ರತಿಭಾವಂತರು ‘ಅರ್ಜಿಗೆ ಸಹಿ ಹಾಕುವ, ಗುಮಾಸ್ತರಿಗೆ ಬೈಸಿಕಲ್ ಮುಂಗಡ ಕೊಡುವ, ಮೀಟಿಂಗುಗಳಿಗೆ ಫೈಲು ಹೊತ್ತುಕೊಂಡು ಹೋಗಿ ಕಾಯುವ’ ಕೆಲಸ ಮಾಡಬೇಕಾಗುತ್ತದೆ. ಕಡೆಗೂ ಹೋರಾಡಿ, ಸೆಕೋನಿ ನಿರ್ಮಿಸುವ ಪ್ರಾಯೋಗಿಕ ವಿದ್ಯುತ್‌ಕೇಂದ್ರ, ಕಾಂಟ್ರಾಕ್ಟರು-ಎಂಜಿನಿಯರುಗಳ ಜಾಲದಿಂದಾಗಿ ‘ನಿರುಪಯುಕ್ತ’ವೆಂದು ಘೋಷಿಸಲ್ಪಡುತ್ತದೆ. ತನ್ನ ಕನಸಿನ ಕೂಸಾದ ಈ ಕೇಂದ್ರವನ್ನು ಪರೀಕ್ಷಿಸಲು ಹೊರಟ ಸೆಕೋನಿಯನ್ನು ಪೊಲೀಸರು ಬಂಧಿಸುವುದು, ನಂತರ ‘ಹುಚ್ಚು ಎಂಜಿನಿಯರ್’ ಎಂಬ ಹಣೆಪಟ್ಟಿಯೊಂದಿಗೆ ಅವನು ಮಾನಸಿಕ ರೋಗಿಗಳ ಆಸ್ಪತ್ರೆ ಸೇರಬೇಕಾಗಿ ಬರುವುದು ವಸಾಹತೋತ್ತರ ಆಫ್ರಿಕಾ ಖಾಯಂ ಚಿತ್ರದಂತಿದೆ.

ವಸಾಹತೋತ್ತರ ಆಫ್ರಿಕಾ:
ನವವಸಾಹತು ಪ್ರಭುಗಳ ಆಗಮನ

ಸ್ಯಾಗೋನನ್ನು ಸಿನಿಕನನ್ನಾಗಿಸುವ ಪತ್ರಿಕಾಲಯ, ಸೆಕೋನಿಯನ್ನು ಹುಚ್ಚನನ್ನಾಗಿಸುವ ಎಲೆಕ್ಟ್ರಿಸಿಟಿ ಬೋರ್ಡುಗಳಷ್ಟೇ ವಿಕೃತವಾಗಿ ಇಲ್ಲಿನ ವಿಶ್ವವಿದ್ಯಾಲಯಗಳು, ಇಲ್ಲಿನ ಅನುಕರಣಶೂರರು, ರಾತ್ರಿ ಪಾರ್ಟಿಗಳು ಹಾಗೂ ಗಾಳಿ ಸುದ್ದಿಗಳ ಲೋಕವಿದೆ. ಹೀಗೆ ದಿಕ್ಕೆಟ್ಟ ಸ್ವಾತಂತ್ರ್ಯೋತ್ತರ ಆಫ್ರಿಕನ್ ಸಮಾಜವನ್ನು ಸಹಜವಾಗಿಯೇ ನವ ವಸಾಹತುಶಾಹಿ ಶಕ್ತಿಗಳು ತಮ್ಮ ಪ್ರಯೋಗಭೂಮಿಯನ್ನಾಗಿ ಮಾಡಿಕೊಳ್ಳುತ್ತವೆ. ಈ ಘಟ್ಟದ ಬೆಳವಣಿಗೆ ಯನ್ನು ಷೋಯಿಂಕಾನ ಎರಡನೆಯ ಕಾದಂಬರಿ ‘ಸೀಸನ್ ಆಫ್ ಅನೋಮಿ’ ಶೋಧಿಸು ತ್ತದೆ. ಸ್ವಾತಂತ್ರ್ಯೋತ್ತರ ನೈಜೀರಿಯಾದ ತೀವ್ರ ಬಿಕ್ಕಟ್ಟಿನ ಘಟ್ಟದಲ್ಲಿ ಹುಟ್ಟಿದ ಈ ಕೃತಿಯಲ್ಲಿ ಆಫ್ರಿಕನ್ ಭೂತವನ್ನೂ, ಅನಾಧುನಿಕ ಆಫ್ರಿಕಾದ ಸಾಮುದಾಯಿಕ ಪ್ರಜ್ಞೆಯನ್ನೂ, ಜೀವನಕ್ರಮವನ್ನೂ ಪ್ರತಿನಿಧಿಸುವ ಅಯೇರೋ ಪ್ರದೇಶ ಹಾಗೂ ಆಧುನಿಕ ಕೇಂದ್ರೀಕೃತ ವ್ಯವಸ್ಥೆ ಹಾಗೂ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಸಹಜ ಫಲವಾದ ಕಾರ್ಟೆಲ್ ಸಂಸ್ಥೆಯ ನಡುವೆ ಸಂಘರ್ಷವಿದೆ. ಅಯೇರೋವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲೆತ್ನಿಸುವ ಹಾಗೂ ಅದರ ಮೇಲೆ ಪ್ರಭುತ್ವ ಸ್ಥಾಪಿಸಲೆತ್ನಿಸುವ ಕಾರ್ಟೆಲ್ ಸುತ್ತ ಹೆಣೆದ ಈ ಕತೆ ಸ್ವಾತಂತ್ರ್ಯೋತ್ತರ ಆಫ್ರಿಕಾದಲ್ಲಿ ಅನಾಧುನಿಕ ಆಫ್ರಿಕಾದ ದಿವ್ಯ ಜೀವನಕ್ರಮಗಳು ಒಂದೊಂದಾಗಿ ನಾಶವಾದ ಕತೆಯೂ ಹೌದು. ‘ಸ್ವತಂತ್ರ ಮಾನವಲೋಕದ ಪ್ರತೀಕ ಅಯೇರೋ; ನಮ್ಮ ಜೀವನಕ್ರಮಗಳು ಯುಗಯುಗಗಳಿಂದಲೂ ಮಾನವ ಕಾಣುತ್ತ ಬಂದ ಕನಸುಗಳು’ ಎನ್ನುವ ಕಾದಂಬರಿಯ ಕೇಂದ್ರಪಾತ್ರ ಒಫೇಯಿಯ ಮಾತು ಅಯೇರೋ ಪ್ರತಿನಿಧಿಸುವ ಆದರ್ಶ ಜಗತ್ತನ್ನು ಸೂಚಿಸುತ್ತದೆ. ಆದ್ದರಿಂದಲೇ, ಮಿಲಿಟರಿ ಸರ್ಕಾರ, ಹಣ ಹಾಗೂ ಪ್ರಚಾರಗಳ ಬಲದಿಂದ ದೇಶದ ಕೊಕೋ ಬೆಳೆಯ ಮೇಲೆ ಸ್ವಾಮ್ಯ ಸ್ಥಾಪಿಸಲೆತ್ನಿಸುವ ಕಾರ್ಟೆಲ್‌ಗೆ ಉತ್ತರವಾಗಿ ಒಫೇಯಿ ಅಯೇರೋವನ್ನು  ಅರಸುತ್ತಾ ಹೊರಡುತ್ತಾನೆ.

ನವ ವಸಾಹತುಶಾಹಿ ಘಟ್ಟದ ಮಿಲಿಟರಿ ರಾಜ್ಯ ಹಾಗೂ ಬಹುರಾಷ್ಟ್ರೀಯವಾದಿ ಶಕ್ತಿಗಳು ಸ್ಥಾಪಿಸಲೆತ್ನಿಸುವ ಅಧಿಕಾರ ಕೇಂದ್ರದ ಪ್ರತಿನಿಧಿಯಾದ ಕಾರ್ಟೆಲ್ ಎಂಬ ಕಂಪನಿ ‘ಸಮಕಾಲೀನ ಮರುಭೂಮಿ; ಆಧುನಿಕ ಜಗತ್ತಿನ ದುಃಸ್ವಪ್ನ’. ‘ಕೇವಲ ಬೆರಳೆಣಿಕೆಯಷ್ಟು ಜನ ಇಡೀ ಭೂಮಂಡಲದ ದರೋಡೆಗೆ ಕಾರಣವಾಗುವುದರ ಪ್ರತೀಕವಾದ ಕಾರ್ಟೆಲ್ ಸಂಸ್ಥೆ ರಾಜಕೀಯ ಹಾಗೂ ಸಾಮಾಜಿಕ ದಮನ ಮತ್ತು ದಬ್ಬಾಳಿಕೆಯ ಸಂಕೇತ ಕೂಡ.’ ವಸಾಹತುವಾದೀ ಧೋರಣೆಗಳ ಫಲವಾಗಿ ಆಫ್ರಿಕನ್ ಚರಿತ್ರೆಯುದ್ದಕ್ಕೂ ನಡೆದ ಗುಲಾಮರ ಮಾರಾಟ ಹಾಗೂ ಗುಲಾಮ ಮಾರುಕಟ್ಟೆ ವಸಾಹತೋತ್ತರದ ಜಾಗತೀಕರಣ ಘಟ್ಟದಲ್ಲಿ ಇನ್ನೊಂದು ಬಗೆಯಲ್ಲಿ ಮುಂದುವರಿಯುತ್ತದೆ. ‘ದರೋಡೆ ಮತ್ತು ಕೊಲೆಗಳ ತನ್ನ ಮೇಲು ರಚನೆಯ ಮೂಲಕ ನಗರಗಳೆಂಬ ಮರುಭೂಮಿಗಳನ್ನು’ಸೃಷ್ಟಿಸುವ ಕಾರ್ಟೆಲ್, ಮ್ಯಾಮೊನ್ ಎಂಬ ರಕ್ತಪಿಪಾಸು ದೇವರನ್ನು ಪೂಜಿಸುತ್ತದೆ. ಅದು ‘ಭೂಮಿಯನ್ನು ಬಂಜೆಯಾಗಿಸುತ್ತಾ’ ‘ಮದ್ದು ಗುಂಡುಗಳ ಕಾಡನ್ನು ಬಿತ್ತುತ್ತಾ’ ‘ಮೊನಚಾದ ಹಲ್ಲುಗಳ ಸರ್ಪಗಳನ್ನು ಬೆಳೆಯುತ್ತದೆ.’ ಕಾದಂಬರಿಯ ನಿರೂಪಕ ಒಂದು ಸಂದರ್ಭದಲ್ಲಿ ಹೇಳುವಂತೆ, ಕಾರ್ಟೆಲ್ ‘ಹಸುವನ್ನು ಬಿತ್ತಿ ಸರ್ಪಗಳನ್ನು ಬೆಳೆಯುತ್ತದೆ.’ ಒಫೇಯಿ ಹೇಳುವಂತೆ, ‘ನಾಡು ಸಹಜವಾಗಿ ಬೆಳೆಯಲು ಬಿಡದ ರೋಗವಾಗಿರುವ ಕಾರ್ಟೆಲ್, ವಿಷ ಬೀಜಗಳನ್ನು ಬಿತ್ತುತ್ತದೆ.’ ಆಧುನಿಕ ಬಂಡವಾಳಶಾಹಿ ಹಾಗೂ ತಾಂತ್ರಿಕ ಪ್ರಗತಿಗಳೆರಡರ ವಿಚಿತ್ರ ಮಿಶ್ರಣವಾದ ಕಾರ್ಟೆಲ್‌ನ ಮುಖ್ಯಸ್ಥ ಬಟೋಕಿ ಹಾಗೂ ಅವನ ಐ.ಕ್ಯೂ (Intellectual Quota of his Directors) ತೈಲ ವ್ಯಾಪಾರ ಹಾಗೂ ಕೊಕೋವಾದ ನಿಯಂತ್ರಣದ ಮೂಲಕ ದೇಶದ ಮಾರುಕಟ್ಟೆಯನ್ನೂ, ಮಿಲಿಟರಿಯ ಮೂಲಕ ದೇಶದ ಜನತೆಯನ್ನೂ, ಪ್ರಚಾರದ ಮೂಲಕ ಜನರ ಪ್ರಜ್ಞೆಯನ್ನೂ ನಿಯಂತ್ರಿಸಲೆತ್ನಿಸುತ್ತದೆ. ಕಾರ್ಟೆಲ್‌ನ ಮೂಲಮಂತ್ರವೇ ಹಿಂಸೆ ಎಂಬುದನ್ನು ಕಾರ್ಟೆಲ್‌ನ ಮುಖ್ಯಸ್ಥ ಬಟೋಕಿ ಥಣ್ಣಗೆ ಹೇಳುವ ಮಾತು ಸೂಚಿಸುತ್ತದೆ: ‘ಒಂದಿಬ್ಬರನ್ನು ಕೊಂದು, ಹತ್ತು ಜನರನ್ನು ಕಂಬಿ ಹಿಂದೆ ತಳ್ಳಿದರೆ ಸಾಕು, ಉಳಿದವರು ಥಣ್ಣಗಾಗುತ್ತಾರೆ. ಆಗಲೂ ಆಗದಿದ್ದರೆ (ಆ ಹತ್ತಕ್ಕೆ) ಒಂದು ಸೊನ್ನೆ ಸೇರಿಸು. ಆಮೇಲೂ ಥಣ್ಣಗಾಗದಿದ್ದರೆ ಇನ್ನಷ್ಟು ಸಾವಿರ ಜನರನ್ನು ಮುಗಿಸಿದರಾಯಿತು.’

ಇಂಥ ಕಾರ್ಟೆಲ್, ಇರೆನ್.ಡಿ.ಅಲ್ಮೇರಾ ಹೇಳುವಂತೆ, ‘ಪೆನ್ನು ಮತ್ತು ಹಣದ ಥೈಲಿಯ ವಿಕೃತ ಸಂಬಂಧದ ಫಲ. ಅದು ರಾಜಕೀಯ ಅಧಿಕಾರದ ಕೇಂದ್ರ ಹಾಗೂ ಆರ್ಥಿಕತೆಯ ಸರ್ವಸ್ವಾಮ್ಯ ಹೊಂದಿದ ದಮನಕಾರೀ ಶಕ್ತಿ’.  ಕಾರ್ಟೆಲ್‌ನ ಬೆಂಬಲಕ್ಕಿರುವ ನ್ಯಾಯಾಂಗ, ಕಾರ್ಟೆಲ್‌ನ ಜೈಲು, ಅದು ಹಿಡಿದಿಟ್ಟಿರುವ ಅಸಹಾಯಕರು, ಕಡಿದುರುಳಿಸಿದ ತಲೆಗಳು… ಇವೆಲ್ಲಕ್ಕಿಂತ ಭೀಕರವಾದ ಅಂಶವೆಂದರೆ ‘ಜನತೆ ಬದುಕುವ ಶಕ್ತಿಯನ್ನೇ ನಿರ್ನಾಮ ಮಾಡುವ ಅದರ ಪ್ರಯತ್ನ’. ಕಾರ್ಟೆಲ್ ವಿರುದ್ಧ ಅಯೇರೋದ ಜನರನ್ನು ಸಂಘಟಿಸುವ ಒಫೇಯಿ ಕಾರ್ಟೆಲ್‌ನ ಪ್ರಚಾರಾಧಿಕಾರಿಯಾಗಿಯೇ ಕಾರ್ಟೆಲ್ ವಿರುದ್ಧ ಬುಡಮೇಲು ಕೃತ್ಯವನ್ನಾರಂಭಿಸುತ್ತಾನೆ. ಒಫೇಯಿ ಕಾರ್ಟೆಲ್‌ನ ಪ್ರಚಾರಕ್ಕಾಗಿ ಬರೆಯುವ ಹಾಡು ಸೂಕ್ಷ್ಮವಾಗಿ ಕಾರ್ಟೆಲ್‌ನ ಮಾರಕ ಗುಣಗಳನ್ನು ಬಯಲಿಗೆಳೆಯುತ್ತದೆ:

ಅವರು ಕೋಕೋ ಮರಗಳ ಹಾಲು ಕರೆದರು, ಅವರು ಜೇನುಕಿತ್ತರು ಹೊನ್ನು ದೋಚಿದರು, ಅವರು ಮರಗಳ ನೆತ್ತರು ಹರಿಸಿದರು. ಮುದಿ ಯಾದವು ಮರಗಳು ಬಿರಬಿರನೆ. ನಾಳೆಯ ನಾಡಿಗೆ ಹಸುರಿಲ್ಲ, ನಾಳೆಯ ನಾಡಿಗೆ ಹೊನ್ನಿಲ್ಲ…

ವಸಾಹತೋತ್ತರ ಆಫ್ರಿಕಾದ ದೇಶಗಳಲ್ಲಿ ಜಾಗತೀಕರಣದ ನವವಸಾಹತುಶಾಹಿ ಸಾಧನ ಗಳಾದ ಬಹುರಾಷ್ಟ್ರೀಯ ಕಂಪನಿಗಳ ರೂಪಕ ಈ ಕಾರ್ಟೆಲ್ ಸಂಸ್ಥೆ. ಎಲ್ಲ ರಂಗಗಳಿಗೂ ಚಾಚಿಕೊಳ್ಳಲಾರಂಭಿಸುವ ಕಾರ್ಟೆಲ್ ಎಂಬುದು ‘ವಿಷಮಯ ಗಾಯವೊಂದರ ಮೊಳಕೆ’ ಎಂಬುದು ಒಫೇಯಿಗೆ ಗೋಚರವಾಗುತ್ತಾ ಹೊಗುತ್ತದೆ. ‘ಅದು ಸೋಕಿದ ಮನುಷ್ಯನಿಗೆ ಸಾವು ಖಾತ್ರಿ… ಆದರೆ ಹೀಗೆ ಲೆಕ್ಕಕ್ಕೆ ಸಿಕ್ಕುವ ಸಾವುಗಳಿಗಿಂತ ಮುಖ್ಯವಾಗಿ ಭೂಮಿಯ ಆಳದಲ್ಲಿ ಅದು ಆರಂಭಿಸಿರುವ ನಿರ್ನಾಮದ ಪ್ರಕ್ರಿಯೆ, ಪರಿಸರ ಹಾಗೂ ಮಾನವ ಜೀವಿಗಳ ಮೇಲೆ ಅದು ನಡೆಸಿರುವ ಹಲ್ಲೆ ಮರಣಾಂತಿಕವಾದದ್ದು’. ಪರಿಸರದ ಮೇಲಿನ ಹಲ್ಲೆ ಒಂದು ಸಂಸ್ಕೃತಿಯ ವಿನಾಶಕ್ಕೆ ಕಾರಣವಾಗುವುದನ್ನು ಹಾಗೂ  ಮಾನವನ ಬದುಕಿಗೆ ತರುವ ದುರಂತಗಳನ್ನು ಷೋಯಿಂಕಾ ಸೂಚಿಸುತ್ತಿದ್ದಾನೆ. ಹೀಗೆ ಆಧುನಿಕ ಆಫ್ರಿಕಾದ ದಿಕ್ಕನ್ನು ನಿರ್ಧರಿಸುವ ಕಾರ್ಟೆಲ್ ಎಂಬ ವ್ಯವಸ್ಥೆಯ ಭೀಕರ ರೂಪ ಅದು ಅಯೇರೋದ ಮೇಲೆ ನಡೆಸುವ ದಾಳಿಯಲ್ಲಿ ಹಾಗೂ ಶೇಜ್ ಡ್ಯಾಮ್ ನರಮೇಧದಲ್ಲಿದೆ. ಅರವತ್ತರ ದಶಕದ ಕೊನೆಯಲ್ಲಿ ನೈಜೀರಿಯಾದ ಅಂತರ್ಯುದ್ಧದ ಸಮಯದಲ್ಲಿ ಸಹಸ್ರಾರು ಇಬೋ ಜನಾಂಗೀಯರ ಹತ್ಯೆ ಹಾಗೂ ಅದರ ಹಿಂದಿನ ನವವಸಾಹತುಶಾಹಿ ಶಕ್ತಿಗಳ ಕತೆಯನ್ನೂ ಈ ಭಾಗ ಹೇಳುತ್ತದೆ. ಇಂಥ ರಾಜ್ಯದಲ್ಲಿ ‘ತಾನು ಹುಚ್ಚುನಾಯಿಯಾಗಿ ಬಿಡುವ ದುಃಸ್ವಪ್ನವೊಂದು’ ಒಫೇಯಿಯನ್ನು ಸದಾ ಕಾಡುತ್ತಾ ಹೋಗುವುದು ‘ದಿ ಇಂಟರ್ ಪ್ರಿಟರ್ಸ್‌’ ಕಾದಂಬರಿಯ ಸೆಕೋನಿ ಹುಚ್ಚಾಸ್ಪತ್ರೆಗೆ ಸೇರುವುದರ ಇನ್ನೊಂದು ರೂಪದಂತೆಯೇ ಕಾಣುತ್ತದೆ. ಸೆಕೋನಿಯ ‘ಹುಚ್ಚು’ ವಸಾಹತೋತ್ತರ ಆಫ್ರಿಕನ್ ಸಮಾಜ ಅಸಹಾಯಕ ಸೂಕ್ಷ್ಮಜ್ಞರಲ್ಲಿ ಸೃಷ್ಟಿಸಿದ ರೋಗವೂ ಹೌದು.

ಅಚೀಬೆಯ ‘ಆ್ಯಂಟ್‌ಹಿಲ್ಸ್ ಆಫ್ ದಿ ಸವನ್ನಾ’ದ ಮಿಲಿಟರಿ ಸರ್ವಾಧಿಕಾರ ಸೃಷ್ಟಿಸುವ ಹಿಂಸೆಗಿಂತ ಭಿನ್ನವಾದ, ಅಗೋಚರವಾದ, ಅತಿ ಸೂಕ್ಷ್ಮವಾದ ಹಿಂಸೆಗಳನ್ನು ಕಾರ್ಟೆಲ್ ಎಂಬ ಬಹುರಾಷ್ಟ್ರೀಯ ಕಂಪನಿ ಸೃಷ್ಟಿಸುತ್ತದೆ. ಇದು ಕಾರ್ಟೆಲ್ ಬಂಧಿಸಿಟ್ಟ ತನ್ನ ಗೆಳತಿ ಇರಿಯಿಸೆಯನ್ನು ಹುಡುಕಿಕೊಂಡು ಒಫೇಯಿ ಹೋಗುವಾಗ ಕಾಣುವ ಜೈಲಿನ ಚಿತ್ರದಲ್ಲಿ ಎದ್ದು ಕಾಣುತ್ತದೆ. ಕಾರ್ಟೆಲ್‌ನ ಶಕ್ತಿ ಅದೆಷ್ಟು ಭಯಾನಕವಾದದ್ದೆಂದರೆ ಮಸೀದಿ, ಚರ್ಚು, ದೇವಸ್ಥಾನಗಳೆಲ್ಲದರ ಶಕ್ತಿಯನ್ನೂ ಅದು ಬಲಹೀನಗೊಳಿಸಿಬಿಟ್ಟಿದೆ. ಚರ್ಚೊಂದು ಜೈಲಾಗಿ ಪರಿವರ್ತಿತಗೊಳ್ಳುವ ದೃಶ್ಯ ಈ ದೃಷ್ಟಿಯಿಂದ ಪ್ರಾತಿನಿಧಿಕವಾದದ್ದು. ಇಂಥ ಹಿಂಸೆಯನ್ನು ಪ್ರತಿಹಿಂಸೆಯಿಂದ ಮಾತ್ರ ಮುಖಾಮುಖಿಯಾಗಬಹುದೆಂಬ ಕಾದಂಬರಿಯ ಎರಡು ಮುಖ್ಯ ಪಾತ್ರಗಳಾದ ಒಫೇಯಿ ಹಾಗೂ ಡೆಂಟಿಸ್ಟರ ಅಂತಿಮ ನಿಲುವು ಹಿಂಸೆಯ ಸಿಡಿಮದ್ದಿನ ಮೇಲೆ ನಿರ್ಮಿತವಾದ ಮಿಲಿಟರಿ ರಾಜ್ಯಗಳಲ್ಲಿ ಹುಟ್ಟುವ ತಾರ್ಕಿಕ ಕೊನೆ ಕೂಡ. ವಸಾಹತೋತ್ತರ ಸಮಾಜಗಳ ಅವನತಿಗೆ ಉತ್ತರವಾಗಿ ಕಂಡುಕೊಳ್ಳಲಾಗುವ ಹಲವು ಮಾರ್ಗಗಳಲ್ಲಿ ಈ ಪ್ರತಿಹಿಂಸೆಯ ಮಾರ್ಗ ಕುರಿತ ವಿಸ್ತೃತ ಚರ್ಚೆ ಮುಂದಿನ ಭಾಗದಲ್ಲಿದೆ.