ವಸಾಹತೋತ್ತರ ಆಫ್ರಿಕಾ:
ಅವನತಿ
, ಭ್ರಮನಿರಸನ, ಕನಸು ಮತ್ತು ನವವ್ಯಕ್ತಿತ್ವ ನಿರ್ಮಾಣ

ಆಫ್ರಿಕಾ ಖಂಡದ ಕೆಲವು ದೇಶಗಳಲ್ಲಿ ವಸಾಹತುಶಾಹಿಯ ನಿರ್ಗಮನದ ನಂತರ ಕಂಡುಬಂದ ವಿವಿಧ ಬಗೆಯ ಬೆಳವಣಿಗೆಗಳನ್ನು ಚಿನುವ ಅಚೀಬೆಯ ‘ಎ ಮ್ಯಾನ್ ಆಫ್ ದಿ ಪೀಪಲ್’, ‘ಆ್ಯಂಟ್‌ಹಿಲ್ಸ್ ಆಫ್ ದಿ ಸವನ್ನಾ’ ಹಾಗೂ ವೊಲೆ ಶೋಯಿಂಕಾನ ‘ದಿ ಇಂಟರ್‌ಪ್ರಿಟರ್ಸ್’ ‘ಸೀಸನ್ ಆಫ್ ಅನೋಮಿ’  ಕಾದಂಬರಿ ಗಳು ಶೋಧಿಸಲೆತ್ನಿಸುತ್ತವೆ. ಈ ಕಾದಂಬರಿಗಳಲ್ಲಿ ಕಾಣಬರುವ ವಸಾಹತೋತ್ತರ ಆಫ್ರಿಕಾದ ಚಿತ್ರಗಳು ಇವು:

ದೇಶೀ ಜಗತ್ತುಗಳಲ್ಲಿ ವಿಕಾಸಗೊಳ್ಳದೆ, ಹೇರಲಾದ ಸಂಸ್ಥೆಗಳು ಮತ್ತು ಜೀವನ ಕ್ರಮಗಳು, ಬಹುಸಂಖ್ಯಾತರಿಗೆ ಪರಕೀಯವಾಗಿ, ಅವರ ಮೇಲೆ ಸವಾರಿ ಮಾಡುವ ಪ್ರಭುತ್ವ, ರಾಷ್ಟ್ರೀಯ ಹೋರಾಟದ ಮುಂಚೂಣಿಯಲ್ಲಿದ್ದ ಬೂರ್ಜ್ವಾವರ್ಗ ಹಾಗೂ ಆಧುನಿಕ ವಿದ್ಯಾಭ್ಯಾಸ ಪಡೆದ ವರ್ಗಗಳು ಅಧಿಕಾರ ಸೂತ್ರ ಹಿಡಿದ ನಂತರ ನಿರ್ಮಾಣವಾದ ಭ್ರಷ್ಟ ರಾಜಕೀಯ ಸನ್ನಿವೇಶ, ಅಲ್ಲಿ ಬಲಿಯಾಗುವ ಆದರ್ಶವಾದಿಗಳು, ಮಾರುಕಟ್ಟೆ ಕೇಂದ್ರಿತ ಆರ್ಥಿಕ ವ್ಯವಸ್ಥೆ, ವ್ಯವಸ್ಥೆಯ ಮೇಲೆ ತಮ್ಮ ನಿಯಂತ್ರಣವನ್ನು ಕಳೆದುಕೊಂಡ ಬಹುಸಂಖ್ಯಾತ ಸಾಮಾನ್ಯರನ್ನು ಮುತ್ತುವ ನಿರಾಶೆ, ಸಿನಿಕತನ, ಪ್ರಭುತ್ವದ ಹಿಂಸೆಯ ಹಲವು ಮುಖಗಳು, ಹೆಚ್ಚತೊಡಗಿದ ಸಾಮಾಜಿಕ ಅಸಮಾನತೆಯ ನಡುವೆಯೇ ಸಮಾನತೆಗಾಗಿ ನಡೆವ ಹೋರಾಟಗಳು, ಬುದ್ದಿಜೀವಿಗಳ ಕನಸು, ಹತಾಶೆ, ದಿವಾಳಿತನ; ದಂಗೆ, ಮಿಲಿಟರಿ ದಂಗೆಗಳು, ಪ್ರಾಂತೀಯ ಹಾಗೂ ಬುಡಕಟ್ಟು ಹೋರಾಟಗಳು; ಹೊಸ ಪ್ರಾಂತೀಯ ಅಸ್ತಿತ್ವಗಳು, ವ್ಯವಸ್ಥೆಯ ವಿರುದ್ಧ ಹೋರಾಟ ರೂಪಿಸುವ ವರ್ಗಗಳು, ತೀವ್ರ ಭ್ರಮ ನಿರಸನದ ಸ್ಥಿತಿಯಲ್ಲೂ ಹೊಸ ಚಿಗುರಿನ, ಹೊಸ ಚಲನೆಗಳ ಆಸೆಗಳು.

ವಸಾಹತೋತ್ತರ ಪಶ್ಚಿಮ ಆಫ್ರಿಕಾದ ಕೆಲವು ದೇಶಗಳಲ್ಲಿ ವಸಾಹತುಕಾರನಿಂದ ಮುಂದುವರಿದ ರಾಜಕೀಯ ಅಥವಾ ಆರ್ಥಿಕ ಚೌಕಟ್ಟುಗಳಿಂದ ಈ ಸಮಾಜಗಳು ತಪ್ಪಿಸಿಕೊಳ್ಳುವುದು ವಸಾಹತುಕಾರನನ್ನು ನಿರ್ಗಮಿಸುವಂತೆ ಮಾಡಿದಷ್ಟು ಸುಲಭವಿರಲಿಲ್ಲ. ಇಡೀ ಆಡಳಿತ ವ್ಯವಸ್ಥೆಯಲ್ಲಿ ವಸಾಹತು ಮಾದರಿಗಳು ಉಳಿದೇಬಿಟ್ಟವು. ‘ಮಾಜಿ ವಸಾಹತುಗಳು ಮತ್ತೆ ವಸಾಹತುವಾದೀ ದೇಶಗಳನ್ನೇ ಅವಲಂಬಿಸುವ ಸ್ಥಿತಿಯನ್ನು ವಸಾಹತುಶಾಹಿಯು ನಿರ್ಮಾಣ ಮಾಡಿರುವುದರಿಂದ ಸ್ವಾತಂತ್ರ್ಯ ದೇವತೆಯ ಪ್ರತಿಷ್ಠಾಪನೆಯೇ ಶಾಪವಾಗಿ ಕಾಡಲಾರಂಭಿಸುತ್ತದೆ. ವಸಾಹತುವಾದಿ ಪ್ರಭುತ್ವ ಹಾಕಿಕೊಟ್ಟ ಮಾರ್ಗಗಳನ್ನು ತೊರೆದರೆ ಪತನಗೊಂಡೇವೆಂಬ ಭಯ ಈ ದೇಶಗಳನ್ನು ಸದಾ ಕಾಡುತ್ತಿರುತ್ತದೆ’ ಎನ್ನುತ್ತಾನೆ ಫ್ಯಾನನ್. ‘ರಾಷ್ಟ್ರೀಯ ಪಕ್ಷಗಳ ನಿರ್ವಸಾಹತೀಕರಣ ಹೋರಾಟ ಯಾವಾಗಲೂ ವಸಾಹತುವಾದದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ’ ಎಂದು ವಸಾಹತೋತ್ತರ ಸಮಾಜಗಳ ಅವನತಿಗೆ ನಿರ್ವಸಾಹತೀಕರಣ ನಿಜವಾದ ಅರ್ಥದಲ್ಲಿ ನಡೆಯದಿರುವುದೇ ಮುಖ್ಯ ಕಾರಣವೆಂದು ಫ್ಯಾನನ್ ಸೂಚಿಸುತ್ತಾನೆ. ವಸಾಹತು ಮೂಲ ದಿಂದ ಬಂದ ‘ಆಧುನಿಕ ಸಂಸ್ಥೆಗಳು ಕೇವಲ ದಕ್ಷತೆಯ ಮಾತಾಡುತ್ತವೆಯೇ ಹೊರತು ವೈಯಕ್ತಿಕ ನೈತಿಕತೆಯ ಮಾತಾಡುವುದಿಲ್ಲ’ ಎಂಬ ಗಾಂಧೀಜಿಯವರ ಅನುಮಾನದಲ್ಲೂ ವಸಾಹತುಮೂಲದ ಸಂಸ್ಥೆಗಳನ್ನು, ರಚನೆಗಳನ್ನು ಹಾಗೂ ಆಡಳಿತ ಮಾರ್ಗಗಳನ್ನು ಒಪ್ಪಿ ಕೊಳ್ಳಹೊರಟ ದೇಶಗಳಿಗೆ ತಗುಲಲಿರುವ ರೋಗಗಳ ಸೂಚನೆಯಿತ್ತು. ಈ ದೃಷ್ಟಿಯಿಂದ ನೋಡಿದಾಗ ಆಫ್ರಿಕನ್  ಕಾದಂಬರಿಗಳು ಪಶ್ಚಿಮದ ಸಂಸ್ಥೆಗಳು ಸೃಷ್ಟಿಸಿದ ವಿಘಟನೆಯ ಕತೆಯನ್ನೂ ಹೇಳುತ್ತವೆ. ಹಾಗೆಯೇ ಪಶ್ಚಿಮದಿಂದ ಬಂದ ಸಂಸ್ಥೆಗಳ ಹಾಗೂ ರಚನೆಗಳ ದಕ್ಷತೆಯೂ, ನೈತಿಕತೆಯೂ ಏಕಕಾಲಕ್ಕೆ ವಸಾಹತೋತ್ತರದಲ್ಲಿ ಮಾಯವಾದ ಸ್ಥಿತಿಯಿಂದಾಗಿ ಹುಟ್ಟಿದ ಅವನತಿಯ ಕತೆಯನ್ನೂ ಹೇಳುತ್ತವೆ. ವಸಾಹತೋತ್ತರವೆಂದರೆ, ಪಾರಂಪರಿಕ ಸ್ಮೃತಿ ಹಾಗೂ ವಸಾಹತು ಸ್ಮೃತಿಗಳೆರಡೂ ಒಂದನ್ನೊಂದು ಘರ್ಷಿಸುವ ಘಟ್ಟ. ಇದು ವಸಾಹತುವಾದೀ ರಚನೆಗಳು, ಮೌಲ್ಯಗಳು ಸೃಷ್ಟಿಸುವ ವಿಘಟನೆಯ ಜೊತೆಜೊತೆಗೇ ಪಾರಂಪರಿಕ ಸಮಾಜಗಳ ವಿಕೃತ ಮೌಲ್ಯಗಳು ಹಲವು ರೂಪಗಳಲ್ಲಿ ಪ್ರತ್ಯಕ್ಷವಾಗುವ ಘಟ್ಟವೂ ಹೌದು. ನಯಪಾಲ್ ಹೇಳುವಂತೆ, ‘ಇದು (ಪಶ್ಚಿಮದ) ಅನುಕರಣೆ ಹಾಗೂ ಸಂಶ್ಲೇಷಣೆಗಳು ಸೃಷ್ಟಿಸುವ ಗೊಂದಲ ಹಾಗೂ ದುರಂತಮಯ ಸನ್ನಿವೇಶವೂ ಹೌದು.’

ಆಫ್ರಿಕನ್ ಕಾದಂಬರಿಗಳು ವಸಾಹತೋತ್ತರ ಸಮಾಜಗಳ ಅವನತಿಗೆ ವಿವಿಧ ಕಾರಣಗಳನ್ನು ಸೂಚಿಸುತ್ತವೆ : ಚಿನುವ ಅಚೀಬೆಯ ‘ಎ ಮ್ಯಾನ್ ಆಫ್ ದಿ ಪೀಪಲ್’, ‘ನೋ ಲಾಂಗರ್ ಅಟ್ ಈಸ್’(ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ ಕೃತಿಯಾದರೂ) ಆಧುನಿಕ ಆಫ್ರಿಕನ್ ಸಮಾಜದ ಆತ್ಮಕೇಂದ್ರಿತ ಆಧುನಿಕವರ್ಗ, ಪಾರಂಪರಿಕ ಸಾಮುದಾಯಿಕ ಪ್ರಜ್ಞೆಯ ನಾಶ, ಸಾಮುದಾಯಿಕ ನಿಯಂತ್ರಣದ ನಿರ್ನಾಮ, ಹಾಗೂ ವಸಾಹತುವಾದೀ ಶಕ್ತಿಗಳು, ಸಂಸ್ಥೆಗಳನ್ನು ಅವನತಿಯ ಮುಖ್ಯ ಕಾರಣಗಳೆಂದು ಪ್ರಧಾನವಾಗಿ ಸೂಚಿಸುತ್ತವೆ. ‘ಭ್ರಮನಿರಸನದ ಕಾದಂಬರಿಗಳು’ ಎಂದು ಆಫ್ರಿಕನ್ ವಿಮರ್ಶಕ ರ್ಯಾವಿನ್‌ಸ್ಕ್ರಾಫ್ಟ್ ಹೆಸರಿಸುವ ಅಚೀಬೆ, ಷೋಯಿಂಕಾ, ಅರ್ಮಾರ ವಸಾಹತೋತ್ತರ ಕಾದಂಬರಿಗಳಲ್ಲಿ ಅವನತಿಯ ಹಿನ್ನೆಲೆಯಲ್ಲಿರುವ ಆಂತರಿಕ ಹಾಗೂ ವಸಾಹತು ಶಕ್ತಿಗಳೆರಡಕ್ಕೂ ಸಮಾನ ಒತ್ತಿದೆ.

ವಸಾಹತೋತ್ತರ ಆಫ್ರಿಕಾ: ವಸಾಹತುಶಾಹಿ ಸೃಷ್ಟಿಸಿದ ಗೊಂದಲ

‘ಹೊಸ ರಾಷ್ಟ್ರದಲ್ಲಿ ಲೇಖಕನ ಪಾತ್ರ’ ಎಂಬ ತನ್ನ ಪ್ರಬಂಧದಲ್ಲಿ ಅಚೀಬೆ ವಸಾಹತೋತ್ತರ ಆಫ್ರಿಕಾದ ಭ್ರಷ್ಟಾಚಾರವನ್ನು ಕುರಿತು ಚರ್ಚಿಸುತ್ತಾ, ‘ಆಫ್ರಿಕನ್ ಪಾರಂಪರಿಕ ಸಮಾಜ ಲೌಕಿಕ ಸುಖಕ್ಕೆ ಒತ್ತುಕೊಡುವ ಗುಣಗಳನ್ನು ಮೊದಲಿನಿಂದಲೂ ಉಳಿಸಿಕೊಂಡು ಬಂದಿದ್ದರೂ….. ಆ ಸಮಾಜದಲ್ಲಿ ಯಾರೂ ಸಮುದಾಯವನ್ನು ಮುಳುಗಿಸಿ, ಸರ್ಕಾರದ ಹಣವನ್ನು ಕದ್ದು ಶ್ರೀಮಂತರಾಗಲು ಸಾಧ್ಯವಿರಲಿಲ್ಲ’ ಎಂದು ವಾದಿಸುತ್ತಾನೆ. ಯೂಸ್ಟೇಸ್ ಪಾಮರ್ ಕೂಡ ಈ ಅಂಶವನ್ನು ಉಲ್ಲೇಖಿಸುತ್ತಾ ‘ಈ ಬಗೆಯ ಭ್ರಷ್ಟಾಚಾರ ಆರಂಭವಾದದ್ದೇ ಬ್ರಿಟಿಷ್ ಆಡಳಿತ ಆರಂಭಿಸಿದ ಧನಾಧಾರಿತ (cash-based) ಆರ್ಥಿಕ ವ್ಯವಸ್ಥೆಯ ಮೂಲಕ; ಈ ಹೊಸ ವ್ಯವಸ್ಥೆಯ ಜೊತೆಗೇ ಅಧಿಕಾರಶಾಹಿಯ ಭಾಗವಾದ ಕೋರ್ಟ್ ಮೆಸೆಂಜರುಗಳು, ಪರೋಕ್ಷ ಆಡಳಿತದ ಮುಖ್ಯಸ್ಥರು ಮುಂತಾದವರು ಪಾರಂಪರಿಕ ಸಮಾಜದ ನೀತಿನಿಯಮಗಳಿಗೆ ಬದ್ಧರಾಗದಂಥ ಹಾಗೂ ತಮ್ಮ ಅಧಿಕಾರ ಸ್ಥಾನಗಳನ್ನು ಬೇಕಾದಂತೆ ಬಳಸಿಕೊಳ್ಳುವಂಥ ಅವಕಾಶಗಳನ್ನು ವಸಾಹತು ಆಡಳಿತ ಸೃಷ್ಟಿಸಿತು’ ಎನ್ನುತ್ತಾನೆ. ‘ಆರೋ ಆಫ್ ಗಾಡ್’ ಕಾದಂಬರಿಯಲ್ಲಿ ಕೋರ್ಟಿನ ಪ್ರತಿನಿಧಿ ಎಝೆಲುವನ್ನು ಬಂಧಿಸಲು ಬಂದಾಗ ಹೇಳುವ ಮಾತಿದು: ‘ಮುಖವಾಡದ ಭೂತ (ಆಫ್ರಿಕನ್ ಸಂಪ್ರದಾಯಸ್ಥರು ಪೂಜಿಸುವ ಭೂತಗಳಲ್ಲೊಂದು) ಮನೆಗೆ ಬಂದಾಗ ಅದರ ಪಾದಕ್ಕೆ ಕಾಣಿಕೆಯನ್ನೊಪ್ಪಿಸಬೇಕಾದ್ದು ನಿಯಮ. ಇವತ್ತಿನ ಮುಖವಾಡದ ಭೂತವೆಂದರೆ ಬಿಳಿಯ ಮನುಷ್ಯ’.

ಈ ಮಾತಿಗೆ ಅಸಹಾಯಕತೆಯಿಂದ ತಲೆದೂಗುತ್ತಾ ಎಝೆಲುವಿನ ಮಗ ಹೇಳುವ ಮಾತಿದು: ‘ಬಿಳಿಯ ಮನುಷ್ಯ ಹಾಗೂ ಅವನ ಸಂದೇಶ ತಂದವರೂ ಮುಖವಾಡದ ಭೂತಗಳೇ’. ಹೊಸ ಪ್ರಭುತ್ವ ತನ್ನ ಭ್ರಷ್ಟತೆಗೆ ಧಾರ್ಮಿಕ ಆಯಾಮವನ್ನೂ, ಧಾರ್ಮಿಕ ನ್ಯಾಯಬದ್ಧತೆಯನ್ನೂ ಸೃಷ್ಟಿಸಿಕೊಳ್ಳುವ ಕ್ರಮ ಇದು. ಈ ಕಾದಂಬರಿಯ ಕೊನೆಯಲ್ಲಿ ಚರ್ಚಿನ ಮೂಲಕವೂ ಪಾದ್ರಿ ಜಾನ್ ಗುಡ್‌ಕಂಟ್ರಿ ಇಂಥ ಪ್ರಯತ್ನವನ್ನಾರಂಭಿಸುತ್ತಾನೆ. ಇಬೋ ದೇಶೀ ಸಮುದಾಯದಲ್ಲಿ ಸುಗ್ಗಿ ಶುರುವಾಗುವ ಮೊದಲು ಒಂದೊಂದು ಗೆಣಸನ್ನು ಉಲು ದೇವತೆಗೆ ಕೊಡುವುದು ವಾಡಿಕೆ. ಆದರೆ ವಸಾಹತುಶಾಹಿ ಸೃಷ್ಟಿಸಿರುವ ಬಿಕ್ಕಟ್ಟಿನಿಂದ, ಧರ್ಮಗುರು ಎಝೆಲುವಿನ ಹಾಗೂ ಪರಂಪರೆಯ ಜಿಗುಟುತನದಿಂದ ಬೇಸತ್ತ ಜನ, ಆ ಸಲದ ಸುಗ್ಗಿಯನ್ನಾರಂಭಿಸಲು ಸಾಂಕೇತಿಕವಾಗಿ ಒಂದೊಂದು ಗೆಣಸನ್ನು ಅರ್ಪಿಸುವ ತಮ್ಮ ಎಂದಿನ ಆಚರಣೆಯನ್ನು ಅನಿವಾರ್ಯವಾಗಿ ಚರ್ಚಿನಲ್ಲಿ ನಡೆಸಬೇಕಾಗುತ್ತದೆ. ಆ ಘಟ್ಟದಲ್ಲಿ ಪಾದ್ರಿಯ ಪ್ರತಿಕ್ರಿಯೆ ಇದು: ‘ಕೇವಲ ಒಂದೊಂದೇ ಗೆಣಸಲ್ಲ, ಆ ದೇವರು (ಕ್ರಿಶ್ಚಿಯನ್ ದೇವರು) ಕೊಟ್ಟ ಗೆಣಸನ್ನು ಎಷ್ಟಾದರೂ ತಂದು (ಚರ್ಚಿಗೆ) ಸಲ್ಲಿಸಬಹುದು. ಬರೀ ಗೆಣಸಲ್ಲ, ಯಾವ ಬೆಳೆಯನ್ನಾದರೂ, ಯಾವುದೇ ವಸ್ತುಗಳನ್ನಾದರೂ, ಹಣವನ್ನು ಬೇಕಾದರೂ ಸಲ್ಲಿಸಬಹುದು…’ ಸಾಂಕೇತಿಕವಾದ ದೇಶೀ ಧಾರ್ಮಿಕ ಆಚರಣೆಯೊಂದಕ್ಕೆ ಆರ್ಥಿಕ ಸ್ಪರ್ಶವಾದ ತಕ್ಷಣ ಆರಂಭವಾಗುವ ಭ್ರಷ್ಟತೆಯನ್ನು ಈ ಪ್ರಸಂಗ ಸೂಕ್ಷ್ಮವಾಗಿ ಸೂಚಿಸುತ್ತದೆ.

ಆಫ್ರಿಕಾದಲ್ಲಿ ವಸಾಹತು ಆಡಳಿತ ಆರಂಭಿಸಿದ ಪರೋಕ್ಷ ಆಡಳಿತದ ಹೊಸ ವ್ಯವಸ್ಥೆ ಅರೆ-ಆಧುನಿಕರಾದ ವರ್ಗವೊಂದನ್ನು ಸೃಷ್ಟಿಸಿತು. ಮುಂದೆ ಸ್ವಾತಂತ್ರ್ಯೋತ್ತರ ಆಫ್ರಿಕಾದ ಆಳುವ ವರ್ಗವಾದವರೂ ಇವರೇ. ಚರ್ಚಿನ ಶಿಕ್ಷಣ ಪಡೆದ ಈ ‘ವಾರಂಟ್ ಚೀಫ್’ಗಳು ವಸಾಹತು ಸರಕಾರಕ್ಕಾಗಿ ತೆರಿಗೆ ಸಂಗ್ರಹಿಸುವ ಹಾಗೂ ಹಳ್ಳಿಗಳನ್ನು ನಿಯಂತ್ರಿಸುವ ಕೆಲಸವನ್ನು ಮಾಡುವುದರ ಜೊತೆಗೇ ತಾವೂ ಶ್ರೀಮಂತರಾಗುವ ಸುಲಭ ಮಾರ್ಗ ಹುಡುಕಿಕೊಂಡರು. ದೇಶೀ ಸಮುದಾಯದ ನಿಯಮಗಳನ್ನು ಮೀರಿದ ಶಕ್ತಿಯೊಂದು (ಅಂದರೆ, ವಸಾಹತು ಶಕ್ತಿ) ಅವರ ಬೆನ್ನಿಗಿದ್ದುದರಿಂದ ಅವರನ್ನು ಸಮುದಾಯ ನಿಯಂತ್ರಿಸುವಂತಿರಲಿಲ್ಲ. ‘ಆರೋ ಆಫ್ ಗಾಡ್’ನ ಜೇಮ್ಸ್ ಇಕೆಡಿಯ ಪ್ರಸಂಗ ಇದನ್ನು ಸೂಚಿಸುತ್ತದೆ. ಜೇಮ್ಸ್‌ನನ್ನು ವಸಾಹತುಶಾಹಿ ಆಡಳಿತ ‘ಬುದ್ದಿವಂತ’ನೆಂದು ಗುರುತಿಸಿ ಊರಿನ ಮುಖ್ಯಸ್ಥನನ್ನಾಗಿ ನೇಮಿಸಿದರೆ, ಆತ ಹಳ್ಳಿಗರನ್ನು ಹೆದರಿಸಲು ತನ್ನದೇ ಆದ ಜೈಲು, ಕೋರ್ಟುಗಳನ್ನು ಸ್ಥಾಪಿಸಿಕೊಳ್ಳುತ್ತಾನೆ. ಕಂಡ ಕಂಡ ಹೆಣ್ಣುಗಳನ್ನು ವಶವಾಗಿಸಿಕೊಳ್ಳಲೆತ್ನಿಸು ತ್ತಾನೆ. ರಸ್ತೆಯ ನಿರ್ಮಾಣದ ಘಟ್ಟದಲ್ಲಿ ತನಗೆ ಹಣ ಕೊಡದಿದ್ದವರ ಮನೆಯ ಮೇಲೇ ರಸ್ತೆ ಹೋಗುವಂತೆ ಮಾಡುತ್ತೇನೆಂದು ಹೆದರಿಸುತ್ತಾನೆ. ಜಾಯ್ಸ ಕ್ಯಾರಿಯ ‘ಮಿಸ್ಟರ್ ಜಾನ್ಸನ್’ ಕಾದಂಬರಿಯ ರಸ್ತೆ ಅಚೀಬೆಯ ಕಾದಂಬರಿಯಲ್ಲೂ ರೂಪಕವಾಗುತ್ತದೆ. ಜೇಮ್ಸ್‌ನ ಭ್ರಷ್ಟತೆಗೆ ವಸಾಹತು ಪ್ರಭುತ್ವ ಕಾರಣವೆಂದು ಜನರಿಗೆ ಅನಿಸತೊಡಗಿದರೆ, ಇದೇ ಭ್ರಷ್ಟತೆ ಕುರಿತು ವಸಾಹತು ಅಧಿಕಾರಿ ಕ್ಯಾಪ್ಟನ್ ವಿಂಟರ್‌ಬಾಟಮ್‌ಗೆ ಹೊಳೆಯುವ ಕಾರಣ ಇದು: ‘ಕೇವಲ ಆಫ್ರಿಕಾ ಮಾತ್ರ ಸೃಷ್ಟಿಸಲು ಸಾಧ್ಯವಾಗುವ ಕ್ರೌರ್ಯದ ಮಾದರಿ ಇದೆಂದು ಕ್ಯಾಪ್ಟನ್ ವಿಂಟರ್‌ಬಾಟಮ್ ಅಂದುಕೊಂಡ. ಆಫ್ರಿಕನ್ ಮನೋಸ್ಥಿತಿಯ ಆಳದಲ್ಲಿದ್ದ ಈ ಕ್ರೌರ್ಯವನ್ನು ಯುರೋಪಿಯನ್ನರು ಅರ್ಥ ಮಾಡಿಕೊಳ್ಳುವುದು  ದುಃಸಾಧ್ಯ ವಾಗಿತ್ತು.’

ಇದೇ ಅಂಶ ಕುರಿತು ವಿಂಟರ್‌ಬಾಟಮ್‌ನ ಸಹಾಯಕ ಅಧಿಕಾರಿ ಕ್ಲಾರ್ಕ್ ಕೂಡ ಹೇಳುತ್ತಾನೆ:

ಕೋರ್ಟ್ ಕ್ಲರ್ಕುಗಳು, ಕೋರ್ಟಿನ ಅಮೀನರು ಎಲ್ಲರದೂ ಇದೇ ಗುಣ. ಅವರು ತಮ್ಮ ಜನಗಳನ್ನೇ ತುಳಿಯುವ ಪುಟ್ಟಪುಟ್ಟ ಸರ್ವಾಧಿಕಾರಿಗಳಾಗಿ ರೂಪುಗೊಳ್ಳುತ್ತಿದ್ದಾರೆ. ಅದು ನೀಗ್ರೋಗಳ ವ್ಯಕ್ತಿತ್ವದಲ್ಲೇ ಇರುವ ಗುಣ ವಿರಬೇಕು. ನೋ ಲಾಂಗರ್ ಅಟ್ ಈಸ್ ಕಾದಂಬರಿಯ ವಸಾಹತು ಅಧಿಕಾರಿ ಗ್ರೀನ್‌ನ ಅಭಿಪ್ರಾಯ ಕೂಡ ಹೆಚ್ಚೂ ಕಡಿಮೆ ಇದೇ: ಈ ಆಫ್ರಿಕನ್ನರು ಹುಟ್ಟಾಭ್ರಷ್ಟರು. ಶತಶತಮಾನಗಳಿಂದ ಆಫ್ರಿಕನ್ನರು ಕ್ರೂರ ವಾತಾವರಣದ ಹಾಗೂ ಭಯಂಕರ ಹವಾಮಾನ ಹಾಗೂ ಭೀಕರ ರೋಗಗಳ ಬಲಿಪಶುಗಳು… ನಿಜ. ಆದರೆ ಅವರಿಗೆ ಪಶ್ಚಿಮದ ಶಿಕ್ಷಣ ನೀಡಿದ್ದೇವೆ. ಆದರೂ ಅದರಿಂದೇನು ಪ್ರಯೋಜನ?

ವಸಾಹತುಕಾರನ ಈ ದೃಷ್ಟಿಕೋನವನ್ನೂ ಆಫ್ರಿಕನ್ ವಾಸ್ತವವನ್ನೂ ಒಂದಕ್ಕೊಂದು ಎದುರಾಗಿಸಲೆತ್ನಿಸುತ್ತಾ, ಅಚೀಬೆ ಆಧುನಿಕ ಆಫ್ರಿಕಾದ ಅವನತಿಯ ಹಿಂದಿರುವ ಶಕ್ತಿಗಳನ್ನು ಶೋಧಿಸಲೆತ್ನಿಸುತ್ತಾನೆ. ಈ ಮೂವರೂ ವಸಾಹತು ಅಧಿಕಾರಿಗಳ ಧೋರಣೆಯಲ್ಲಿ ಎದ್ದು ಕಾಣುವ ಸಾಮಾನ್ಯ ಅಂಶವೆಂದರೆ, ಭ್ರಷ್ಟತೆಯ ಕಾರಣಗಳನ್ನು ಆಫ್ರಿಕನ್ ವ್ಯಕ್ತಿತ್ವದಲ್ಲಿಯೇ ಅವರು ಹುಡುಕುತ್ತಿರುವುದು. ಆದರೆ ‘ನೋ ಲಾಂಗರ್ ಅಟ್ ಈಸ್’, ‘ಎ ಮ್ಯಾನ್ ಆಫ್ ದಿ ಪೀಪಲ್’ ಹಾಗೂ ‘ದಿ ಇಂಟರ್‌ಪ್ರಿಟರ್ಸ್‌’ನಂಥ ಕಾದಂಬರಿಗಳು ಮುಖ್ಯವಾಗಿ ಆಧುನಿಕ ಸಂಸ್ಥೆಗಳು ಹಾಗೂ ವಸಾಹತುವಾದೀ ರಚನೆಗಳೇ ಬಿತ್ತುವ ಭ್ರಷ್ಟತೆಯ ಬೀಜಗಳನ್ನು, ಆಧುನಿಕ ಶಿಕ್ಷಣ ಪಡೆದ ವರ್ಗದ ಭ್ರಷ್ಟತೆಯನ್ನು ಹಾಗೂ ಅದು ಆಫ್ರಿಕನ್ ಸಮಾಜಕ್ಕೆ ತರುತ್ತಿರುವ ವಿಪತ್ತನ್ನು ಸೂಚಿಸುತ್ತವೆ. ‘ನೋ ಲಾಂಗರ್ ಅಟ್ ಈಸ್’ ಕಾದಂಬರಿಯ ಲಾಗೋಸ್ ನಗರದ ಆಧುನಿಕರಿಗೆ-ವಿದ್ಯಾವಂತ ವರ್ಗಕ್ಕೆ-ಭ್ರಷ್ಟತೆ ಕುರಿತು ದಿಗ್ಭ್ರಮೆಯೇ ಇಲ್ಲ. ಒಬಿ ಲಂಚ ಪಡೆದು ಸಿಕ್ಕಿಬಿದ್ದಾಗ ಉಮೋಫಿಯಾ ಸಂಘದ ಅಧ್ಯಕ್ಷನ ಪ್ರತಿಕ್ರಿಯೆ ಇದು:

ಸೀನಿಯರ್ ಸರ್ವೀಸ್ ಹುದ್ದೆಯಲ್ಲಿರುವ ಮನುಷ್ಯನೊಬ್ಬ ಇಪ್ಪತ್ತು ಪೌಂಡಿಗಾಗಿ ಜೈಲಿಗೆ ಹೋಗುವುದು ನಾಚಿಕೆಗೇಡಿನ ವಿಚಾರ ಎಂದು ಹೇಳಿದ ಉಮೋಫಿಯಾ ಸಂಘದ ಅಧ್ಯಕ್ಷರು, ಇಪ್ಪತ್ತು ಪೌಂಡುಗಳಿಗೆ ಎಂಬ ಪದವನ್ನು ಒತ್ತಿ ಒತ್ತಿ ಹೇಳಿದರು.

ಆಧುನಿಕ ಸಮಾಜದ ಕಲ್ಪನೆ, ಹಾಗೂ ‘ಹೇಗಾದರೂ ಮಾಡಿ ‘ಪ್ರಗತಿ’ ಹೊಂದುವ’ ಕಲ್ಪನೆಗಳೆರಡೂ ಜೊತೆಜೊತೆಗೇ ಹುಟ್ಟಿರುವುದನ್ನು ಕಾದಂಬರಿ ಸೂಚಿಸುತ್ತದೆ. ‘ಎ ಮ್ಯಾನ್ ಆಫ್ ದಿ ಪೀಪಲ್’ ಕಾದಂಬರಿಯ ಹೊತ್ತಿಗೆ ಆಫ್ರಿಕನ್ ಸಮಾಜ ಎಂಥ ಸ್ಥಿತಿ ತಲುಪಿದೆಯೆಂದರೆ, ಗ್ರಾಮೀಣ ಸಮಾಜ ಕೂಡ ಇಂಥ ನೈತಿಕ ಪತನವನ್ನು ಗಂಭೀರವಾಗಿ ಪರಿಗಣಿಸಲಾರದಂಥ ಮಂಕು ಕವಿದುಕೊಂಡಿದೆ. ಕಾದಂಬರಿಯ ನಿರೂಪಕ ಓಡಿಲಿ ಸಾಮುಲುವಿಗೆ ತನ್ನ ಊರು ಭ್ರಷ್ಟ ಮಂತ್ರಿ ನಂಗಾನನ್ನು ಸ್ವಾಗತಿಸಲು ಹರ್ಷದಿಂದ ಕುಣಿಯುತ್ತಿದ್ದಾಗ, ಇಡೀ ಸಮುದಾಯಕ್ಕೆ ನಂಗಾನ ನಿಜಸ್ವರೂಪ ಕುರಿತು ಹೇಳಬೇಕೆನಿಸುತ್ತದೆ. ಆದರೆ,ಅದರ ಜೊತೆಗೇ ಅವನನ್ನು ಮುತ್ತುವ ನಿರಾಶೆ ಇದು: ‘ಆದರೆ ಅದರಿಂದೇನೂ ಫಲವಿಲ್ಲ. ಜನ ಬರೀ ದಡ್ಡರಷ್ಟೇ ಅಲ್ಲ, ಸಿನಿಕರೂ ಆಗಿಬಿಟ್ಟಿದ್ದಾರೆ. ತನ್ನ ಸ್ಥಾನವನ್ನು ಬಳಸಿಕೊಂಡು ಈ ಮಂತ್ರಿ ಶ್ರೀಮಂತನಾಗಿದ್ದಾನೆ ಎಂದು ಅವರಿಗೆ ಹೇಳಿದರೆ ಅವರಿಂದ ಬರುವ ಉತ್ತರ ಇದು: ‘ಅದೃಷ್ಟವಶಾತ್ ಬಾಯೊಳಕ್ಕೇ ಯಾರಾದರೂ ಸಿಹಿಯಾದ ತುತ್ತಿಟ್ಟರೆ ಯಾವ ಜಾಣನೂ ಆಚೆ ಉಗಿಯುವುದಿಲ್ಲ.’

ಇದೇ ಕಾದಂಬರಿಯ ಕೊನೆಯಲ್ಲಿ ಆಫ್ರಿಕನ್ ರಾಜಕಾರಣಿಗಳ ಭ್ರಷ್ಟತೆ ಕುರಿತು ಜನಸಾಮಾನ್ಯರ ಪ್ರತಿಕ್ರಿಯೆ ಇದು:

ಬಿಳಿಯರು ತಿಂದಂತೆ ಇವರೂ ತಿನ್ನಲಿ ಬಿಡಿ. ಬಿಳಿಯರು ಎಲ್ಲಾ ತಿನ್ನುತ್ತಿದ್ದಾಗ ನಾವೇನು ಆತ್ಮಹತ್ಯೆ ಮಾಡಿಕೊಂಡೆವೆ? ಈಗ ಬಿಳಿಯ ಎಲ್ಲಿದ್ದಾನೆ? ಅವನುೊಬಂದ, ತಿಂದ, ಹೊರಟ. ಆದರೆ ನಾವು ಇಲ್ಲೇ ಬದುಕಿದ್ದೇವೆ. ಯಾರಿಗೆ ಗೊತ್ತು, ನಾಳೆ ನಿನ್ನ ಸರದಿಯೂ ಬರಬಹುದು. ನಿನ್ನ ಮಗನೂ ನಿನ್ನ ಪಾಲು ತರಬಹುದು.

ಇದು ‘ರಾಷ್ಟ್ರ’ದ ಕಲ್ಪನೆ ಸೃಷ್ಟಿಸಿದ ಸಂಬಂಧರಹಿತ ಸ್ಥಿತಿಯಿಂದ ಹುಟ್ಟಿದ ಧೋರಣೆ ಕೂಡ. ಅಚೀಬೆಯ ‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯ ಉಮೋಫಿಯಾ ಹಳ್ಳಿಯಂತೆ, ‘ರಾಷ್ಟ್ರ’ವೆನ್ನುವುದು ತಮ್ಮದು ಹಾಗೂ ಅದನ್ನು ಕಾಯ್ದುಕೊಳ್ಳಬೇಕಾದವರೂ ತಾವೇ ಎಂಬ ಕಲ್ಪನೆಯೂ ಇಲ್ಲಿ ಸುಳಿಯಲಾರದು. ಇಂಥ ಸ್ಥಿತಿಯಲ್ಲಿ ನಂಗಾನಂಥ ‘ಜನತೆಯ ಮನುಷ್ಯ’ರು ಹುಟ್ಟುತ್ತಾರೆ. ಇಲ್ಲಿ ‘ಜನತೆಯ ಮನುಷ್ಯ’ ಎಂಬುದನ್ನು ಅಚೀಬೆ ವ್ಯಂಗಾತ್ಮಕವಾಗಿ ಬಳಸಿದ್ದಾನೆ. ಹೇಗಾದರೂ ಮಾಡಿ ಚುನಾವಣೆ ಗೆಲ್ಲುವುದೊಂದೇ ಮುಖ್ಯವಾದ ಈ ಬಗೆಯ ‘ಜನತೆಯ ಮನುಷ್ಯರು,’ ‘ಸಾಮುದಾಯಿಕ ಪ್ರಜ್ಞೆ’ಯ ಮಾತಾಡುವುದೇ ಬುಡಕಟ್ಟುಗಳ ನಡುವೆ ಯುದ್ಧಗಳನ್ನು ಪ್ರೇರೇಪಿಸಲು. ತಮ್ಮನ್ನು ಬೆಂಬಲಿಸದ ಹಳ್ಳಿಗಳಿಗೆ ಮೀಸಲಾದ ವಿದ್ಯುತ್ ಕಂಬಗಳನ್ನು, ಕೊಳಾಯಿಗಳನ್ನು ಅವರು ರಾತ್ರೋರಾತ್ರಿ ಹಿಂತೆಗೆದುಕೊಳ್ಳಬಲ್ಲರು. ಅವರು ರಸ್ತೆಗಳನ್ನು ನಿರ್ಮಿಸುವುದೇ ಆ ಬಾಬಿನಿಂದ ಬಂದ ಹಣದಲ್ಲಿ ಕೊಂಡ ಬಸ್ಸುಗಳನ್ನು ಅಲ್ಲಿ ಓಡಿಸಿ ಇನ್ನಷ್ಟು ಹಣ ಗಳಿಸುವ ಉದ್ದೇಶದಿಂದ. ಸಿ.ಪಿ.ಸಿ. ಪಕ್ಷದ ನಾಯಕ ಮ್ಯಾಕ್ಸ್ ಹೇಳುವಂತೆ ‘ಹೆಂಗಸರು, ಕಾರುಗಳು, ಆಸ್ತಿ, ಇಷ್ಟೇ ಅವರ ಆಸಕ್ತಿ!’ ತನ್ನ ಜನತೆಯನ್ನೇ ನಾಶಮಾಡುವ ಇಂಥ ಧೋರಣೆಯನ್ನು ನಿರ್ವಸಾಹತೀಕರಣ ಹೋರಾಟದ ಮುಂಚೂಣಿಯಲ್ಲಿದ್ದ ದೇಶೀ ವರ್ಗಗಳು ವಸಾಹತು ಕಾರನಿಂದಲೂ ಕಲಿಯುತ್ತವೆಂಬುದನ್ನು ಗ್ರಹಿಸುವ ಫ್ಯಾನನ್, ‘ವಸಾಹತುವಾದೀ ಬೂರ್ಜ್ವಾಗಳ ಪ್ರಭಾವದಿಂದ ಕಲಿತ ಹಲವು ಪಾಠಗಳಿಂದಲೂ ದಿಕ್ಕು ತಪ್ಪಿದ ಈ ವರ್ಗ ಹೊಸ ರಾಷ್ಟ್ರೀಯ ಸರಕಾರಗಳ ಮುಂಚೂಣಿಯಲ್ಲಿ ನಿಂತು ದೇಶದ ಸಂಪತ್ತಿನ ಲೂಟಿಯನ್ನಾರಂಭಿಸುತ್ತದೆ’ ಎನ್ನುತ್ತಾನೆ.

ಕಡೆಯಪಕ್ಷ ವಸಾಹತುವಾದಕ್ಕಿದ್ದ ‘ನಾಗರೀಕರಣ’ದ ಹಾಗೂ ‘ಅಭಿವೃದ್ದಿ’ಯ ಕಲ್ಪನೆಯನ್ನಾದರೂ ಗಂಭೀರವಾಗಿ ಸ್ವೀಕರಿಸದ ದೇಶೀವರ್ಗವೊಂದು ಉದ್ಘಾಟಿಸುವ ಬೆಳವಣಿಗೆ ಇದು. ಈ ವರ್ಗ ಹೇಳುವ ‘ದೇಶೀವಾದ’ ಎಷ್ಟು ವಿಕೃತ ಎನ್ನುವುದು ಎಲ್ಲ ವಸಾಹತೋತ್ತರ ಸಮಾಜಗಳಿಗೂ ಪರಿಚಿತ. ಕುಡಿಯುವ ಕಾಫಿಯಿಂದ ಹಿಡಿದು ಎಲ್ಲದರಲ್ಲೂ ಪಶ್ಚಿಮದಿಂದ ಬಂದ ವಸ್ತುಗಳನ್ನೇ ಬಯಸುವ ಈ ವರ್ಗ, ದೇಶೀವಾದದ ಮಾತಾಡುವುದು ಕೂಡ ತನ್ನ ಭ್ರಷ್ಟತೆಯನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಎಂಬುದಕ್ಕೆ ಕಾದಂಬರಿಯ ನಿರೂಪಕ ಓಡಿಲಿ ಸಾಮುಲು ಪ್ರಸಂಗವೊಂದನ್ನು ಉಲ್ಲೇಖಿಸುತ್ತಾನೆ. ಈ ಪ್ರಸಂಗದಲ್ಲಿ ‘ದೇಶೀವಾದ’ಕ್ಕೆ ಬಲಿಯಾಗುವವನು ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಅರ್ಥಮಂತ್ರಿ. ಕಾಫಿ ಮಾರುಕಟ್ಟೆಯ ದೊಡ್ಡ ಬಿಕ್ಕಟ್ಟನ್ನೆದುರಿಸಲು ‘ಈ ಮಂತ್ರಿ ಹಾಕಿಕೊಟ್ಟ ಯೋಜನೆಗೆ ಪ್ರಧಾನಮಂತ್ರಿ ಅಸಮ್ಮತಿ ಸೂಚಿಸಿದರು. ಅದೂ ಚುನಾವಣೆಯ ಸಮಯ ದಲ್ಲಿ ಕಾಫಿ ಪ್ಲಾಂಟರುಗಳಿಗೆ ಕೊಡುವ ಬೆಲೆಯನ್ನು ಕಡಿತಗೊಳಿಸುವುದರಿಂದ ಹುಟ್ಟುವ ಅಪಾಯವನ್ನೆದುರಿಸಲು ಅವರು ಸಿದ್ಧರಿರಲಿಲ್ಲ. ತಕ್ಷಣ ನ್ಯಾಷನಲ್ ಬ್ಯಾಂಕು ಹದಿನೈದು ಮಿಲಿಯನ್ ಪೌಂಡುಗಳನ್ನು ಅಚ್ಚುಹಾಕಬೇಕೆಂಬ ಅವರ ತೀರ್ಮಾನವನ್ನು ಮಂತ್ರಿಮಂಡಲದ ಬಹುತೇಕರು ಒಪ್ಪಿದರು. ಒಪ್ಪದವರನ್ನು ಮಂತ್ರಿಮಂಡಲದಿಂದ ಹೊರ ಹಾಕಲಾಯಿತು. ಅವರು ವಿದೇಶೀ ಶಕ್ತಿಗಳ ಜೊತೆಗೂಡಿ ಹೊಸ ರಾಷ್ಟ್ರವನ್ನು ಉರುಳಿಸುವ ಸಂಚಿನಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಯಿತು.’ ಈ ಬಗೆಯ ‘ರಾಷ್ಟ್ರಭಕ್ತಿ’ಯನ್ನು ಸಮರ್ಥಿಸಿ ಪಾರ್ಟಿಯ ಅಧಿಕೃತ ಪತ್ರಿಕೆ ಬರೆಯುವ ಸಂಪಾದಕೀಯ ಇದು:  ‘ನಾವು ಆಫ್ರಿಕನ್ನರೆಂದು ಹೆಮ್ಮೆಯಿಂದ ಹೇಳಿಕೊಳ್ಳೋಣ. ಆಕ್ಸ್‌ಫರ್ಡ್, ಕೇಂಬ್ರಿಡ್ಜ್ ಅಥವಾ ಹಾರ್ವರ್ಡಿನ ಡಿಗ್ರಿ ಪಡೆದವರು ನಮ್ಮ ನಿಜವಾದ ಜನ ನಾಯಕರಲ್ಲ. ನಮ್ಮ ಜನನಾಯಕ ರೆಂದರೆ ಜನತೆಯ ಭಾಷೆಯಲ್ಲಿ ಮಾತಾಡುವವರು. ಆಫ್ರಿಕಾದ ಮಹಾನ್ ಸಂಸ್ಕೃತಿಯಿಂದ ಆಫ್ರಿಕನ್ನರನ್ನು ಬೇರ್ಪಡಿಸುವ ಯೂನಿವರ್ಸಿಟಿ ಶಿಕ್ಷಣಕ್ಕೆ ಧಿಕ್ಕಾರವಿರಲಿ.’

ಈ ಸರ್ಕಾರಿ ಸಂಪಾದಕೀಯದಲ್ಲಿ ‘ದೇಶೀ’ ‘ವಿದೇಶೀ’ ಎಂಬ ಕಲ್ಪನೆಗಳು ಎಷ್ಟು ಉಪಾಯದಿಂದ ಬಳಕೆಯಾಗಿವೆ! ಈ ಸಂಪಾದಕೀಯವೂ ನಿರ್ವಸಾಹತೀಕರಣ ಸಿದ್ಧಾಂತಗಳ ಪರಿಭಾಷೆಯನ್ನೇ ಬಳಸುತ್ತಾ ದೇಶೀವಾದವನ್ನು ವಿಕೃತಗೊಳಿಸುವುದನ್ನು ಅಚೀಬೆ ಸೂಕ್ಷ್ಮ ವಾಗಿ ಸೂಚಿಸುತ್ತಾನೆ. ಪರಕೀಯ ಮೌಲ್ಯಗಳ ವಿರೋಧವೇ ದೇಶೀ ಭ್ರಷ್ಟತೆಯ ಸಮರ್ಥನೆ ಯಾಗಿಬಿಡುವ ಈ ಘಟ್ಟದಲ್ಲಿ ಪ್ರಧಾನಮಂತ್ರಿಯವರ ಪ್ರಖ್ಯಾತ ಘೋಷಣೆಯೂ ಮೊಳಗುತ್ತದೆ:

ನಾವು ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯವನ್ನು ನಾವೀಗ ಹುಮ್ಮಸ್ಸಿನಿಂದ ಮುನ್ನುಗ್ಗಿ ರಕ್ಷಿಸಿಕೊಳ್ಳಬೇಕಾಗಿದೆ. ಆಫ್ರಿಕಾ ಹಾಗೂ ಆಫ್ರಿಕನ್ ಜನತೆಯ ಹಣೆಬರಹವನ್ನು ನಿರ್ಧರಿಸುವ ಅವಕಾಶವನ್ನು ಎಂದೂ ಈ ಪಶ್ಚಿಮದ ಶಿಕ್ಷಣ ಪಡೆದ, ತಮ್ಮ ಸುಖಕ್ಕಾಗಿ ತಮ್ಮ ತಾಯಂದಿರನ್ನೇ ಮಾರಬಲ್ಲ, ದುರಹಂಕಾರಿಬುದ್ದಿಜೀವಿಗಳ ಕೈಗೆ ಮಾತ್ರ ಕೊಡಬಾರದು.

ಕಾದಂಬರಿಯ ಕೇಂದ್ರ ಪಾತ್ರ ನಂಗಾ-ಈ ಪ್ರಕರಣ ನಡೆಯುವಾಗ ಹಿಂದಿನ ಬೆಂಚಿನಲ್ಲಿ ಕೂತು ‘ದೇಶವಿರೋಧಿ’ ಮಂತ್ರಿಗಳ ಮೇಲೆ ಅಬ್ಬರವೆಬ್ಬಿಸುವ ನಂಗಾ-ಸರಕಾರದಲ್ಲಿ ಆಯಕಟ್ಟಿನ ಸ್ಥಾನಗಳಿಸುವುದು, ಸಂಸ್ಕೃತಿ ಸಚಿವನಾಗುವುದು ಈ ಘಟ್ಟದಲ್ಲೇ. ಕಾದಂಬರಿಯ ನಿರೂಪಕ ಓಡಿಲಿ ಸಾಮುಲುವಿಗೆ ಒಮ್ಮೆ ಉಪಾಧ್ಯಾಯನಾಗಿದ್ದ ನಂಗಾ ಓಡಿಲಿಯ ವಿರೋಧಿಯಾಗುವುದು ಒಂದು ವಿಚಿತ್ರ ಸನ್ನಿವೇಶದಲ್ಲಿ. ನಂಗಾನ ಆಹ್ವಾನದಂತೆ ವಿದೇಶೀ ಸ್ಕಾಲರ್‌ಶಿಪ್ಪಿನ ಆಸೆಯಿಂದ ರಾಜಧಾನಿಗೆ ಬಂದು ನಂಗಾನ ಮನೆಯಲ್ಲಿದ್ದು, ಕ್ರಮೇಣ ತಾನು ಒಮ್ಮೆ ತೀವ್ರವಾಗಿ ದ್ವೇಷಿಸುತ್ತಿದ್ದ ಐಷಾರಾಮವನ್ನು ಅನುಭವಿಸಲಾರಂಭಿಸುವ ಓಡಿಲಿಸಾಮುಲು ನಂಗಾನ ವಿರೋಧಿಯಾಗುವುದು ತನ್ನ ಗೆಳತಿ ಎಲ್ಸಿಯನ್ನು ನಂಗಾ ಒಂದು ರಾತ್ರಿ ತನ್ನ ಕಣ್ಮುಂದೆಯೇ ಹಾರಿಸಿಕೊಂಡು ಹೋದಾಗ. ಆ ನಂತರ ಮ್ಯಾಕ್ಸ್ ಎಂಬ ತನ್ನ ಎಡಪಂಥೀಯ ಗೆಳೆಯನ ಸಿ.ಪಿ.ಸಿ.(ಕಾಮನ್ ಪೀಪಲ್ಸ್ ಕನ್ವೆನ್ಷನ್)  ಪಾರ್ಟಿೊ ಸೇರಿದೊ ಓಡಿಲಿೊಭ್ರಷ್ಟಾಚಾರದ ವಿರುದ್ಧ ಹೋರಾಟವನ್ನಾರಂಭಿಸುತ್ತಾನೆ. ಆದರೆ, ವಿಮರ್ಶಕೊಡೇವಿಡ್ ಕ್ಯಾರೊಲ್ ಸೂಚಿಸುವಂತೆ, ಆಧುನಿಕ ಆಫ್ರಿಕನ್ ರಾಜಕಾರಣದ ನೈತಿಕ ಕೇಂದ್ರದಲ್ಲಿರುವ ಎರಡು ಮುಖ್ಯ ಸಮಸ್ಯೆಗಳನ್ನು ನಂಗಾ ಹಾಗೂ ಓಡಿಲಿ ಪ್ರತಿನಿಧಿಸುತ್ತಾರೆ: ‘ಯುರೋಪಿಯನ್ ಮಾದರಿಯ ಶಿಕ್ಷಣ ಪಡೆದ ಓಡಿಲಿ ಸಾಮುಲು ಸಾರ್ವಜನಿಕ ನೈತಿಕತೆ ಕುರಿತಂತೆ ಕಟುವಾದ ಹಾಗೂ ಸೈದ್ಧಾಂತಿಕ ನಿಲುವನ್ನು ತಳೆದವನು ಹಾಗೂ ದೇಶದ ರಾಜಕೀಯ ಸ್ಥಿತಿ ಕುರಿತು ಭ್ರಮನಿರಸನಗೊಂಡವನು. ಆದರೆ, ಹಳ್ಳಿಗರ ರಾಜಕಾರಣದ ಹಲವು ಮುಖಗಳನ್ನು ಗ್ರಹಿಸಲಾರದೆ ಅವನ್ನು‘ಆದಿವಾಸಿ ನಂಟುಗಳು’ಎಂದು ಕರೆದವನು. ಆದ್ದರಿಂದಲೇ ಅವನು ತನ್ನ ವಸ್ತುನಿಷ್ಠವಾದ ದೃಷ್ಟಿಕೋನದಿಂದ, ಜನತೆಯಿಂದ ದೂರವಾದ ನೆಲೆಯಲ್ಲಿ ನಿಂತು ಭ್ರಷ್ಟಾಚಾರವನ್ನು ಖಂಡಿಸುತ್ತಾನಾದರೂ ಎಲ್ಲರಿಂದಲೂ ದೂರ ಉಳಿಯುತ್ತಾನೆ. ಆದರೆ, ಇವನಿಗೆ ತದ್ವಿರುದ್ಧವಾಗಿರುವ ನಂಗಾ ತನ್ನ ಮತದಾರರಿಗೆ ಏನು ಬೇಕೆಂದು ಅರಿತವನು. ತಾನು ಪ್ರತಿನಿಧಿಸುವ ಜನರೊಂದಿಗೆ ಸಂಬಂಧವಿಟ್ಟುಕೊಂಡವನು. ಜನರ ‘ಪ್ರಿಮಿಟಿವ್’ ನಂಟುಗಳನ್ನು ಅವನು ಧಿಕ್ಕರಿಸುವುದಿಲ್ಲ.

ಕೇಡಿನ ಪ್ರತಿರೂಪದಂತೆ ಕಾಣುವ ನಂಗಾನ ಗೆಲುವನ್ನೂ, ಜನತೆಗೆ ಓಡಿಲಿಯಂಥವರಿಗಿಂತ ನಂಗಾನಂಥವರೇ ಏಕೆ ಪ್ರಿಯವೆಂಬುದನ್ನೂ ಈ ಅಂಶಗಳು ಸೂಚಿಸುತ್ತವೆ. ಆದರೆ, ನಂಗಾನಂಥವರು ಪ್ರತಿನಿಧಿಸುವ ಕೊಳಕು ರಾಜಕಾರಣ ಎಂಥ ಸಿನಿಕತೆಯನ್ನೂ, ನಿರ್ಲಕ್ಷ್ಯ ವನ್ನೂ ಜನತೆಯಲ್ಲಿ ಸೃಷ್ಟಿಸಿದೆಯೆಂದರೆ, ಈ ಸ್ಥಿತಿಯೇ ಸಹಜವೆಂಬಂತೆ ಒಪ್ಪಿಕೊಂಡುಬಿಡುವ ಹಂತವನ್ನೂ ಜನ ತಲುಪಿದ್ದಾರೆ. ಇಂಥ ನಿರಾಶಾದಾಯಕ ಸ್ಥಿತಿಯಲ್ಲಿ ಹೊಸ ಪಕ್ಷ ವನ್ನಾರಂಭಿಸುವ ಮ್ಯಾಕ್ಸ್, ಚುನಾವಣಾ ಪ್ರಚಾರದಲ್ಲಿ ಹಾಲೀ ಸರಕಾರದ ಭ್ರಷ್ಟತೆ ಕುರಿತು ಜನತೆಗೆ ಹೇಳುತ್ತಿದ್ದರೆ, ಜನತೆಯ ಸಿನಿಕ ಪ್ರತಿಕ್ರಿಯೆ ಇದು: ‘ಕೇವಲ ಐದು ವರ್ಷದ ಹಿಂದೆ ತಿನ್ನಲು ಗತಿಯಿಲ್ಲದವರಂತಿದ್ದ ನಮ್ಮ ನಾಯಕರು ನಮ್ಮ ಕಣ್ಮುಂದೆಯೇ ಕೋಟ್ಯಾಧಿಪತಿ ಗಳಾಗಿದ್ದನ್ನು ಕುರಿತು ಮ್ಯಾಕ್ಸ್ ಒಂದರ ಮೇಲೊಂದು ಉದಾಹರಣೆ ಕೊಡುತ್ತಿದ್ದರೆ, ಜನ ನಗುತ್ತಿದ್ದರು. ತಮ್ಮ ಹಾಲೀ ಸ್ಥಿತಿಯನ್ನು ಸುಮ್ಮನೆ ಒಪ್ಪಿಕೊಂಡವರ ನಗು ಅದು. ಅಲ್ಲಿ ನೆರೆದಿದ್ದ ಒಬ್ಬನಲ್ಲಾದರೂ ಸಿಟ್ಟಿನ ಅಥವಾ ಹೋರಾಟದ ಸೂಚನೆ ಕಾಣಲಿಲ್ಲ.’

ಇಂಥ ಸನ್ನಿವೇಶದಲ್ಲಿ ಕಡೆಯಪಕ್ಷ ಒಂದು ಮಟ್ಟದ ಆದರ್ಶವನ್ನೂ ಬದ್ಧತೆಯನ್ನೂ ತೋರುವ ಓಡಿಲಿ ಸಾಮುಲು, ನಂಗಾನೆದುರು ಚುನಾವಣೆಗೆ ನಿಂತಾಗ ಮುದುಕಿಯೊಬ್ಬಳ ಪ್ರತಿಕ್ರಿಯೆ ಇದು: ‘ಅವರಿಬ್ಬರೂ ಬಿಳಿಯ ಮನುಷ್ಯನ ಕಡೆಯವರೇ. ಅವರಿಬ್ಬರ ನಡುವೆ ಏನೇನು ಒಪ್ಪಂದವಾಗಿದೆಯೋ ನಮಗೇನು ಗೊತ್ತು?  ‘ಇಂಥ ಸಿನಿಕತೆ ಅಸಹಾಯಕತೆಯಿಂದಲೂ ಹುಟ್ಟಿರಬಹುದೆಂಬುದನ್ನು ಓಡಿಲಿಸಾಮುಲು ಕಂಡುಕೊಳ್ಳುವುದು ಜೋಸಯ್ಯ ಎಂಬ ವರ್ತಕನನ್ನು ಕುರಿತ ಊರಿನ ಪ್ರತಿಕ್ರಿಯೆಯ ಸಂದರ್ಭದಲ್ಲಿ. ಊರಿನ ಅಂಗಡಿಯ ಮಾಲಿಕ ಜೋಸಯ್ಯ ಒಮ್ಮೆ ಕುರುಡು ಭಿಕ್ಷುಕನೊಬ್ಬನ ಕೋಲು ಕದಿಯುತ್ತಾನೆ. ಊರ ಹೆಂಗಸೊಬ್ಬಳು ಹೇಳುವಂತೆ’

ಅವನ ಅಂಗಡಿಯ ಸಾಮಾನುಗಳನ್ನು ನಾವೆಲ್ಲಾ ಕಣ್ಣು ಮುಚ್ಚಿಕೊಂಡು ಕೊಂಡುಕೊಳ್ಳುವಂತೆ ಮಾಡಬಲ್ಲ ಮದ್ದು ತಯಾರಿಸಲು ಅವನು ಆ ಕೋಲು ಕದ್ದಿದ್ದ. ಜೋಸಯ್ಯನ ಅನೈತಿಕ ಮಾರ್ಗ ಕಂಡು ಸಿಟ್ಟಾದ ಜನ ಅವನ ಅಂಗಡಿಯನ್ನು ಬಹಿಷ್ಕರಿಸುತ್ತಾರೆ. ಒಂದೇ ವಾರದಲ್ಲಿ ಅವನು ದಿವಾಳಿಯಾಗುತ್ತಾನೆ. ಜೋಸಯ್ಯ ಎಷ್ಟೊಂದನ್ನು ತೆಗೆದುಕೊಂಡುಬಿಟ್ಟಿದ್ದಾ ನೆಂದರೆ, ಅದು ಒಡೆಯನಿಗೂ ಗೊತ್ತಾಗುವಂತಿತ್ತು

-ಎಂದು ಜನ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ಗಾದೆ ಸೂಚಿಸುತ್ತಿರುವ ‘ಒಡೆಯ’ನೆಂದರೆ ಸಮುದಾಯದ ಅಂತಃಸಾಕ್ಷಿ ಅಥವಾ ಇಚ್ಛಾಶಕ್ತಿ(will). ಡೇವಿಡ್ ಕ್ಯಾರೊಲ್ ಹೇಳುವಂತೆ, ಕಾದಂಬರಿಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ

ಒಡೆಯನೂ ಗುರುತಿಸುವಷ್ಟನ್ನು ಅವನು ಕದ್ದುಬಿಟ್ಟಿದ್ದಾನೆ ಎಂಬ ಗಾದೆ ಈ ಸಮಾಜ ಕಳೆದುಕೊಂಡುಬಿಟ್ಟಿರುವ ಶಕ್ತಿಯೊಂದರ ಕಡೆಗೆ ನಮ್ಮ ಗಮನ ಸೆಳೆಯುತ್ತದೆ. ಜೋಸಯ್ಯನ ಪ್ರಸಂಗದಲ್ಲಿ ಪ್ರತಿಕ್ರಿಯಿಸಿದಷ್ಟು ತೀವ್ರವಾಗಿ ನಂಗಾನ ವಿಚಾರದಲ್ಲೂ ಪ್ರತಿಕ್ರಿಯಿಸುವ ಶಕ್ತಿಯನ್ನು ದೇಶೀ ಸಮಾಜ ಕಳೆದುಕೊಂಡಿದೆ. ಅಂದರೆ, ಜನತೆಯ ಇಚ್ಛಾಶಕ್ತಿ ವರ್ತಮಾನದ ರಾಜಕಾರಣ ಸೃಷ್ಟಿಸುವ ಸಮಸ್ಯೆಗಳನ್ನು ಎದುರಿಸುವ, ನಿಯಂತ್ರಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಆಧುನಿಕ ರಾಜಕಾರಣದಲ್ಲಿ ದೇಶೀ ಜನರ ನಿಯಂತ್ರಣ ಸೀಮಿತವಾಗತೊಡಗಿದ್ದನ್ನು ಇದು ತೋರಿಸುತ್ತದೆ. ಪಾರಂಪರಿಕ ಆಫ್ರಿಕಾದ ಉಮೋಫಿಯಾ, ಉಮುವಾರೋಗಳಂತೆ ಈ ಸಮಾಜ ತನ್ನ ಸಾಮುದಾಯಿಕ ಇಚ್ಛಾಶಕ್ತಿ ಹಾಗೂ ನೈತಿಕ ಕಟ್ಟುಗಳಿಗೆ ಎಲ್ಲರನ್ನೂ ಬದ್ಧರನ್ನಾಗಿಸುವ ಹಕ್ಕನ್ನು ಕಳೆದುಕೊಂಡಿದೆ. ಜೋಸಯ್ಯನ ಪ್ರಸಂಗದಲ್ಲಿ ಕಾಣುವ ಸಾಮುದಾಯಿಕ ತೀರ್ಮಾನದ ಅನುಷ್ಠಾನ ಆಫ್ರಿಕನ್ ಸಾಮಾಜಿಕ ಬದುಕಿನಲ್ಲಿ ಇನ್ನೂ ಉಳಿದಿರಬಹುದಾದ ಪಾರಂಪರಿಕ ಆಫ್ರಿಕಾದ ಶಕ್ತಿಯ ಅವಶೇಷ ಮಾತ್ರ

ಡೇವಿಡ್ ಕ್ಯಾರೋಲ್, ವಸಾಹತೋತ್ತರ ಆಫ್ರಿಕಾದಲ್ಲಿ ಸಾಮುದಾಯಿಕ ಅಂತಃಸಾಕ್ಷಿಯೂ ವಿಕೃತಗೊಂಡಿರುವುದನ್ನು ಗುರುತಿಸುತ್ತಾನೆ: ‘ಜೋಸಯ್ಯನನ್ನು ಶಿಕ್ಷಿಸಿದ ಸಮುದಾಯವೇ ಮಂತ್ರಿ ನಂಗಾನನ್ನು ಆದರಿಸುತ್ತದೆ. ತನ್ನ ಸಮಾಜದ ಪಾರಂಪರಿಕ ಮೌಲ್ಯಗಳ ನೆಲೆಗಟ್ಟನ್ನೂ, ಆಧುನಿಕ ಪ್ರಭುತ್ವ ಸೃಷ್ಟಿಸಿರುವ ಗೊಂದಲಮಯ ಸ್ಥಿತಿಯಲ್ಲಿ ಪಾರಂಪರಿಕ ಸಮಾಜದ ಏಕಮಾತ್ರ ಮಾರ್ಗದರ್ಶಿಯಾದ ಮೌಲ್ಯಜಗತ್ತನ್ನೂ ನಂಗಾ ಕದ್ದೊಯ್ದಿದ್ದಾನೆ. ಈಗ ಜನ ತಮ್ಮ ಉಳಿವಿಗಾಗಿ ಅವನನ್ನೇ ಅವಲಂಬಿಸುವಂಥ ಸನ್ನಿ ವೇಶವನ್ನೂ ಅವನು ನಿರ್ಮಿಸಿದ್ದಾನೆ.

ಆದರೆ, ಇಂಥ ರಾಜಕಾರಣಿ ನಂಗಾನನ್ನು ಜನ ಹದ್ದುಬಸ್ತಿನಲ್ಲಿಡಲಾರರು. ಇದನ್ನು ಕುರಿತು ಊರ ಜನ ಅಸಹಾಯಕತೆಯಿಂದ ಹೇಳುವುದಿಷ್ಟೆ: ‘ದೇಶದ ವ್ಯವಹಾರಗಳಲ್ಲಿ ಒಡೆಯ ಏನೂ ಮಾಡಲಾರ’. ಗ್ರಾಮದ ನಿಯಮಗಳೆಲ್ಲ ಹೀಗೆ ಹೊಸ ರಾಷ್ಟ್ರದಲ್ಲಿ ಬಲಹೀನವಾಗಿಬಿಟ್ಟಿವೆ. ಕಡೆಯಪಕ್ಷ ಪಾರಂಪರಿಕ ಜಗತ್ತು ಅನುಸರಿಸುತ್ತಿದ್ದ, ಬಹುಸಂಖ್ಯಾತರ ತೀರ್ಮಾನಕ್ಕೆ ಬದ್ಧವಾಗಿರಬೇಕಾದ, ಪ್ರಜಾಪ್ರಭುತ್ವದ ಮೊದಲ ಲಕ್ಷಣವನ್ನೇ ಆಧುನಿಕ ಪ್ರಜಾಪ್ರಭುತ್ವ ಗಾಳಿಗೆ ತೂರಿಬಿಟ್ಟಿದೆಯೆಂಬ ಅಂಶ ಚುನಾವಣೆಯ ದಿನಗಳ ಒಂದು ರಾತ್ರಿ ತಳವಾರ ಸಾರಿದ ಸುದ್ದಿ ಕೇಳಿದಾಗ ಓಡಿಲಿಗೆ ಹೊಳೆಯುತ್ತದೆ: ‘ಆ ರಾತ್ರಿ ತಮಟೆಯವನು ಸಾರುತ್ತಿದ್ದ ಸುದ್ದಿ ಎಂದಿನಂತಿರಲಿಲ್ಲ. ಮೊದಲೆಲ್ಲಾ ಯಾವುದಾದರೊಂದು ಗಂಭೀರ ಸಮಸ್ಯೆಯನ್ನು ಬಗೆಹರಿಸಬೇಕಾದಾಗ ಊರ ಸಭೆ ಕರೆಯುತ್ತಿದ್ದರು, ಮತ್ತು ಸಭೆಯ ತೀರ್ಮಾನವನ್ನು ನಂತರ ಸಾರಲಾಗುತ್ತಿತ್ತು. ಆದರೆ ಆ ರಾತ್ರಿ ಅವನು ಸಾರಿದ ರೀತಿ ಹೊಸದಾಗಿತ್ತು. ಈಗಾಗಲೇ ತೀರ್ಮಾನವಾದ ವಿಷಯವೊಂದನ್ನು-ಅಂದರೆ ಊರರೆಲ್ಲಾ ಮಂತ್ರಿ ನಂಗಾನಿಗೆ ಮತ ನೀಡಬೇಕೆಂಬ ತೀರ್ಮಾನವನ್ನು-ಅವನು ಸಾರುತ್ತಿದ್ದುದು ಕೇಳಿಸಿತು.’

ಹೀಗೆ ಪಾರಂಪರಿಕ ಆಫ್ರಿಕಾದ ಮೌಲ್ಯಗಳು ವಿಕೃತಗೊಳ್ಳುವುದರ ಜೊತೆಗೇ, ಪಾರಂಪರಿಕ ಸಮಾಜ ಪೂಜಿಸುತ್ತಿದ್ದ ಧಾರ್ಮಿಕ ಸಂಕೇತಗಳಾದ ಮುಖವಾಡದ ದೇವತೆಗಳು ಚುನಾವಣೆಯ ಸಂದರ್ಭದಲ್ಲಿ ತಮಾಷೆಯಾಗಿ ಕುಣಿಯಲು ಬರುವುದು ಈ ಸಮಾಜದ ಅವನತಿಯ ಇನ್ನೊಂದು ಮುಖವನ್ನು ಕಾಣಿಸುತ್ತದೆಂದು ಕಿಲ್ಲಮ್ ಗುರುತಿಸುತ್ತಾನೆ. ಇದು ತನ್ನ ಸಮಾಜದ ಎಲ್ಲ ಮುಖಗಳನ್ನೂ ಭ್ರಷ್ಟಗೊಳಿಸಿ ಚುನಾವಣೆಗಳನ್ನು ಗೆಲ್ಲಬಲ್ಲ ನಂಗಾನಂಥವರ ಆಫ್ರಿಕಾ. ನಂಗಾನಂಥ ರಾಜಕಾರಣಿ ತಮ್ಮೂರಿಗೆ ‘ಕೊಳವೆಯಲ್ಲಿ ನೀರು, ವಿದ್ಯುತ್ ಕಂಬಗಳನ್ನು ತರಬಲ್ಲ’ನೆಂದು, ಜನ ‘ಅವನೂ ತಿನ್ನಲಿ ಬಿಡಿ’ ಎನ್ನುತ್ತಾರೆ. ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಆಧುನೀಕರಣದ ತೀವ್ರ ಹಂಬಲದಲ್ಲಿ ಒಂದು ಸಮೂಹ ತನ್ನ ನೈತಿಕ ನೆಲೆಗಳನ್ನು ಪ್ರಜ್ಞಾಪೂರ್ವಕವಾಗಿಯೇ ನಿರ್ಲಕ್ಷಿಸಿ ಮುಂದು ವರಿಯಲು ಸಿದ್ಧವಾಗಿರುತ್ತದೆಂಬುದರ ಅರಿವಾಗುತ್ತದೆ.

ಇಂಥ ನಂಗಾನನ್ನು ವಿರೋಧಿಸುವ ಎಡಪಂಥೀಯ ನಾಯಕ ಮ್ಯಾಕ್ಸ್‌ನಂಥವರ ಪಕ್ಷವೂ ಹಾಲೀ ಸರಕಾರದ ಮಂತ್ರಿಯೊಬ್ಬನಿಂದ ಚುನಾವಣೆಗಾಗಿ ಹಣ ಪಡೆಯಬೇಕಾಗುತ್ತದೆ. ಇಲ್ಲಿ ಏಕಕಾಲಕ್ಕೆ ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ವೈಯಕ್ತಿಕ ನೈತಿಕತೆಯ ಪ್ರಶ್ನೆಗಳೆರಡರ ಸಮಸ್ಯೆಯೂ ಬೆರೆಯುತ್ತದೆ. ಮಾರ್ಕ್ಸ್‌ವಾದಿ ಮ್ಯಾಕ್ಸ್‌ನ ಪತನದ ಹಿನ್ನೆಲೆಯಲ್ಲಿರುವ ಶಕ್ತಿಗಳು ಹೊಸ ರಾಜಕೀಯ ವ್ಯವಸ್ಥೆಯಲ್ಲೇ ಇವೆ. ಇಂಥ ವ್ಯವಸ್ಥೆ ಎಂಥ ಆದರ್ಶವಾದಿಗಳನ್ನೂ ನುಂಗಿಬಿಡಬಲ್ಲದು. ಡೇವಿಡ್ ಕುಕ್ ಹೇಳುವಂತೆ, ‘ತನ್ನ ಭೂತದಿಂದ ಸಂಪೂರ್ಣವಾಗಿ ಕಡಿದುಕೊಳ್ಳಹೊರಟಿರುವ ಆಧುನಿಕ ಆಫ್ರಿಕನ್ ಪ್ರಭುತ್ವದ ಚಿತ್ರವನ್ನು ಅಚೀಬೆ ಇಲ್ಲಿ ಕೊಡುತ್ತಾನೆ. ಅದರ ಫಲವಾಗಿ ಏಕಾಂಗಿ ‘ವ್ಯಕ್ತಿಗಳು’ ಯಾಂತ್ರಿಕ ಆಡಳಿತ ವ್ಯವಸ್ಥೆಯನ್ನು ಮುಖಾಮುಖಿಯಾಗಬೇಕಾಗುತ್ತದೆ.’