ಕಾದಂಬರಿ ಪ್ರಕಾರದ ರಾಜಕಾರಣ:
ಸ್ಥಾಪಿತ ಸತ್ಯಗಳು ಹಾಗೂ ಬಹುಧ್ವನಿಗಳ ನಡುವಣ ಸಂಘರ್ಷ

ಒಂದು ಸಾಹಿತ್ಯಕೃತಿಯ ಅದ್ಭುತ ಗುಣವೆಂದರೆ, ಅಲ್ಲಿ ಹಲವು ಸಲ ಕೃತಿಕಾರನ ಪೂರ್ವಗ್ರಹಗಳನ್ನೂ, ಸುಪ್ತ ಉದ್ದೇಶಗಳನ್ನೂ ಬುಡಮೇಲುಗೊಳಿಸುವ ರೂಪಕಗಳು ಹೇಗೋ ಹುಟ್ಟಿಬಿಟ್ಟಿರುತ್ತವೆ. ಕೃತಿಕಾರನ ದೃಷ್ಟಿಕೋನ, ಕೃತಿಕಾರನ ಉದ್ದೇಶ ಎಂಬ ಸಿದ್ಧ ವಿಮರ್ಶಾ ಪರಿಭಾಷೆಯನ್ನು ಬಿಟ್ಟು, ಒಂದು ಕಾದಂಬರಿಯಲ್ಲಿ ಬಹುಧ್ವನಿಗಳಿರುತ್ತವೆ ಎಂಬ ರಾಚನಿಕೋತ್ತರ ದೃಷ್ಟಿಕೋನದ ಆಧಾರದಿಂದ ಕೃತಿಗಳನ್ನು ಓದಿದರಂತೂ ಕಲಾವಿದನ ಉದ್ದೇಶಿತ ಹಾಗೂ ಘೋಷಿತ ಸತ್ಯವೇ ಬೇರೆ, ಕಲೆಯ ಸತ್ಯವೇ ಬೇರೆ ಎಂಬ ಅಂಶ ಮತ್ತೆ ಮತ್ತೆ ಸಿದ್ಧವಾಗುತ್ತಿರುತ್ತದೆ. ನಿರಚನಾವಾದೀ ಓದಿನ ಪ್ರಕಾರ ಕೃತಿಯಲ್ಲಿ ಖಾಯಂ ಅರ್ಥಗಳಿಲ್ಲ; ಅಲ್ಲಿ ಅರ್ಥಗಳು ನಿರಂತರವಾಗಿ ಮುಂದೂಡಲ್ಪಡುತ್ತಿರುತ್ತವೆ. ಉದಾಹರಣೆಗೆ, ನುಗುಗಿ ‘ಬ್ಲಡಿ ರೇಸಿಸ್ಟ್ ಕಾದಂಬರಿ’ ಎನ್ನುವ ರೈಡರ್ ಹ್ಯಾಗಾರ್ಡ್ ಎಂಬ ಬ್ರಿಟಿಷ್ ಕಾದಂಬರಿಕಾರನ ‘ಕಿಂಗ್ ಸಾಲೊಮನ್ಸ್ ಮೈನ್ಸ್’ ಕೃತಿಯಲ್ಲಿ ಭೀಕರವಾಗಿ ಕಾಣುವ ನೂರು ವರ್ಷ ದಾಟಿದ ಹಣ್ಣು ಹಣ್ಣು ಮುದುಕಿ ಗಗೂಲ್ ಪಾತ್ರವನ್ನು ಗಮನಿಸಬೇಕು. ಈ ಮುದುಕಿಯ ಚಿತ್ರ ಎಷ್ಟು ಭೀಕರವಾಗಿತ್ತೆಂದರೆ, ಆಫ್ರಿಕಾದ ಮುದುಕಿಯರನ್ನು ಕಂಡಾಗಲೆಲ್ಲ ಗಗೂಲ್ ಮುದುಕಿಯ ಭೀಕರ ಚಿತ್ರವೇ ಕಣ್ಣೆದುರು ಬಂದು ಭಯಭೀತಳಾಗುತ್ತಿದ್ದೆನೆಂದು ಲೇಖಕಿಯೊಬ್ಬಳು ಬರೆಯುತ್ತಾಳೆ. ಈ ಪ್ರಸಂಗವನ್ನು ನುಗುಗಿ ಒಂದೆಡೆ ನೆನೆಸಿಕೊಳ್ಳುತ್ತಾನೆ. ‘ಕಿಂಗ್ ಸಾಲೊಮನ್ಸ್ ಮೈನ್ಸ್’ ಕಾದಂಬರಿಯಲ್ಲಿ ಹಾವಿನಂತೆ ಸಿಂಬೆ ಸುತ್ತಿಕೊಂಡು ಬಿದ್ದುಕೊಂಡಿದ್ದು ಥಟ್ಟನೆ ಮೇಲೇಳುವ ಈ ಮುದುಕಿ ಬಿಳಿಯರ ಕಣ್ಣಲ್ಲಿಹಾಗೂ ಕಾದಂಬರಿಯ ಬಿಳಿಯ ನಿರೂಪಕನ ಕಣ್ಣಲ್ಲಿ ರಕ್ತ ಹೀರುವ ರಕ್ಕಸಿ. ಸಾಲೊಮನ್ ವಜ್ರದ ಗಣಿಗಳಿಗೆ ಬರುವ ಬಿಳಿಯರ ಕತ್ತು ಹಿಸುಕುವ ಪಿಶಾಚಿ. ಈ ‘ಭೀಕರ’ ಮುದುಕಿ ಆಫ್ರಿಕಾದ ಕುಕುವಾನಾ ನೆಲದಲ್ಲಿ ಬಿಳಿಯರನ್ನು ಕಂಡು ತನ್ನ ನಾಡಿನ ದೊರೆಗೆ ಹೇಳುವ ಎಚ್ಚರಿಕೆಯ ಮಾತುಗಳಿವು:

ಕೇಳು ದೊರೆಯೇ ಕೇಳು. ಕೇಳಿ ಪರ್ವತಗಳೇ, ನದಿಗಳೇ, ಬಯಲುಗಳೇ ಕೇಳಿ, ನಾನು ಭವಿಷ್ಯ ನುಡಿಯುತ್ತಿದ್ದೇನೆ…. ನೆತ್ತರು… ನೆತ್ತರು…. ಎಲ್ಲೆಡೆ ನೆತ್ತರು ಕಾಣಿಸುತ್ತಿದೆ ನನಗೆ… ನೆಲದ ತುಂಬಾ ನೆತ್ತರು…ಆಗಸದಿಂದ ಸುರಿಯುತ್ತಿದೆ ನೆತ್ತರು.  ….. ಹೆಜ್ಜೆಯ ಸಪ್ಪಳ! ಹೆಜ್ಜೆಯ ಸಪ್ಪಳ! ಹೆಜ್ಜೆಯ ಸಪ್ಪಳ! ದೂರದ ನಾಡಿಂದ ಬರುತ್ತಿರುವ ಬಿಳಿಯನ ಹೆಜ್ಜೆಯ ಸಪ್ಪಳ…. ಆದು ಭೂಮಿಯನ್ನು ನಡುಗಿಸುತ್ತಿದೆ. ಭೂಮಿ ತನ್ನ ಒಡೆಯನ ಎದುರು ಹೆದರಿ ನಡುಗುತ್ತಿದೆ….

ಗಗೂಲ್ ಮುದುಕಿಯ ಭವಿಷ್ಯವಾಣಿಯನ್ನು ಹ್ಯಾಗಾರ್ಡ್‌ನ ಕಾದಂಬರಿಯ ನಿರೂಪಕ ಪ್ರಜ್ಞೆ ಹಾಗೂ ಬಿಳಿಯ ಪಾತ್ರಗಳು ಗೇಲಿ ಮಾಡುತ್ತವೆ, ನಿಜ. ಆದರೂ ಇಲ್ಲೊಂದು ಸೂಕ್ಷ್ಮವಾದ ಅಂಶವಿದೆ. ಕುಕುವಾನದ ವಜ್ರಗಳನ್ನು ಕಾಯುವ ಜಾಣ ಮುದುಕಿಯನ್ನು ಪಿಶಾಚಿಯಂತೆ ಚಿತ್ರಿಸುವುದರ ಮೂಲಕ ಕಾದಂಬರಿ ಅವಳ ಸಾವನ್ನು ‘ಶಿಕ್ಷೆ’ಯೆಂದು ಸಮರ್ಥಿಸುತ್ತದೆ ಹಾಗೂ ಆಫ್ರಿಕಾದ ವಜ್ರಗಳನ್ನು ದೋಚುವ ಬಿಳಿಯರ ‘ಸಾಹಸ’ವನ್ನು ವೈಭವೀಕರಿಸುತ್ತದೆ. ಆದರೆ ಇಂಥ ಜನಾಂಗೀಯವಾದೀ ಕಾದಂಬರಿ ಕೂಡ ಬಿಳಿಯರು ಆಫ್ರಿಕಾದ ಮೇಲೆ ನಡೆಸಿದ ಆಕ್ರಮಣವನ್ನು ಸೂಕ್ಷ್ಮವಾಗಿ ಹಿಡಿದಿಟ್ಟಿರುವುದು ಕೃತಿಕಾರನ ಪೂರ್ವಗ್ರಹಗಳ ವಿರುದ್ಧ ರೂಪಕ ಸತ್ಯದ, ಅಂದರೆ ಕಲೆಯ ಅಂತಿಮ ಗೆಲುವು. ನಿರೂಪಣಾ ದೃಷ್ಟಿಕೋನದ ನಿರ್ದೇಶನವನ್ನಾಧರಿಸಿ ಕಾದಂಬರಿಯನ್ನು ಓದುವ ಓದುಗರ ಮೇಲೆ ಆ ದೃಷ್ಟಿಕೋನ ಬೀರುವ ಪರಿಣಾಮ ಗಮನಾರ್ಹವಾದುದೇನೋ ನಿಜ. ಆದರೆ, ನಿರೂಪಕ ಪ್ರಜ್ಞೆಯನ್ನೂ ಮೀರಿದ ಭಿನ್ನಮತಗಳ ಮೂಲಕ ಕಾದಂಬರಿ ಹೊಳೆಯಿಸಬಲ್ಲ ಸತ್ಯಗಳನ್ನೂ ಅಲ್ಲಗಳೆಯುವಂತಿಲ್ಲ. ಸ್ವತಃ ಆಫ್ರಿಕನ್ನರೇ ತಮ್ಮ ಕಾದಂಬರಿಯನ್ನು ಬರೆಯಲಾರಂಭಿಸಿದಾಗ ಈ ರೂಪಕಸತ್ಯವನ್ನೇ ಆಧರಿಸಿ, ಅಂದರೆ ಗಗೂಲ್ ಮುದುಕಿಯ ಭವಿಷ್ಯವಾಣಿಯಂತೆ, ಆಫ್ರಿಕಾದ ನದಿ, ಪರ್ವತ, ಬಯಲು ಹಾಗೂ ಮಾನವರು ಅನುಭವಿಸಿದ ಯಾತನೆಯ ಘಟ್ಟಗಳನ್ನೇ ನಿರೂಪಿಸಬೇಕಾಯಿತೆನ್ನುವುದು ಕುತೂಹಲಕರ.

ಇಲ್ಲಿ ಸಾಬೀತಾಗುವ ಬಹುಮುಖ್ಯ ಅಂಶ ಇದು: ಕಾದಂಬರೀ ಪ್ರಕಾರವನ್ನು ತನ್ನ ಸಾಂಸ್ಕೃತಿಕ ರಾಜಕಾರಣದ ಪ್ರಧಾನ ಸಾಧನಗಳಲ್ಲೊಂದಾಗಿ  ಪಶ್ಚಿಮ ಬಳಸಿಕೊಳ್ಳುತ್ತಿರುವಾಗ, ಕಾದಂಬರೀ ಪ್ರಕಾರವೇ ಇನ್ನೊಂದು ದಿಕ್ಕಿನಿಂದ ತನ್ನ ಸ್ವಾಯತ್ತ ಅಧಿಕಾರವನ್ನು ಪ್ರತಿಪಾದಿಸುತ್ತಿತ್ತು; ಜೊತೆಗೆ ಪಶ್ಚಿಮದ ಕಾದಂಬರೀ ರಾಜಕಾರಣದ ವಿರುದ್ಧ ಭಿನ್ನಮತೀಯ ಸಾಂಸ್ಕೃತಿಕ ರಾಜಕಾರಣವನ್ನು ಕಾದಂಬರೀ ಪ್ರಕಾರವೇ ಉದ್ಘಾಟಿಸಲೆತ್ನಿಸುತ್ತಿತ್ತು. ಡೇವಿಡ್ ಕ್ಯಾರೊಲ್, ಅಚೀಬೆ ಹಾಗೂ ರಾಸ್ಕಿನ್ ವಾದಿಸುವಂತೆ ಕಾನ್ರಾಡ್‌ನ ‘ಹಾರ್ಟ್ ಆಫ್ ಡಾರ್ಕ್‌ನೆಸ್’ ಕೃತಿ ಒಂದು ವೇಳೆ ಯುರೋಪಿಯನ್ ಸಾಮ್ರಾಜ್ಯವಾದೀ ಪೂರ್ವಗ್ರಹಗಳ ನೆಲೆಯಿಂದಲೇ ಸೃಷ್ಟಿಯಾಗಿರಬಹುದು. ಆದರೂ, ಅದು ಸಾಮ್ರಾಜ್ಯವಾದೀ ಮನಸ್ಸಿನ ಕ್ರೌರ್ಯವನ್ನು ವಿಮರ್ಶಿಸುತ್ತಿರುವುದನ್ನೂ, ‘ಮಿಸ್ಟರ್ ಜಾನ್ಸನ್’ ಕೃತಿ ಆಫ್ರಿಕನ್ ಸಮಾಜದ ವಿಘಟನೆಗೆ ಕಾರಣವಾಗುವ ಪಶ್ಚಿಮದ ಮೌಲ್ಯಗಳನ್ನು ಗುರುತಿಸುವುದನ್ನೂ ಈ ಕಾದಂಬರಿಗಳ ನಿಕಟ ಓದು ತೋರಿಸಿಕೊಡುತ್ತದೆ. ಆಫ್ರಿಕನ್ ಕಾದಂಬರಿಕಾರರ ಕಣ್ಣಿಗೆ (ಸಕಾರಣವಾಗಿಯೇ) ಜನಾಂಗೀಯವಾದೀ  ಕಾದಂಬರಿಗಳಂತೆ ಕಂಡ ‘ಕಿಂಗ್ ಸಾಲೊಮನ್ಸ್ ಮೈನ್ಸ್’, ‘ಮಿಸ್ಟರ್ ಜಾನ್ಸನ್’ ಅಥವಾ ‘ಹಾರ್ಟ್ ಆಫ್ ಡಾರ್ಕ್‌ನೆಸ್’ ಕೃತಿಗಳು ಸೂಕ್ಷ್ಮವಾಗಿ ಅಥವಾ ಸ್ಥೂಲವಾಗಿ ಯುರೋಪಿಯನ್ ಕ್ರೌರ್ಯವನ್ನು ಕೂಡ ಚಿತ್ರಿಸುತ್ತವೆಂಬ ಅಂಶವೇ ಸ್ಥಾಪಿತ ಸತ್ಯಗಳ ವಿರುದ್ಧ ಕಾದಂಬರೀ ಪ್ರಕಾರದ ಬಹುಧ್ವನಿಗಳು ನಡೆಸುವ ಬುಡಮೇಲು ಕೃತ್ಯಕ್ಕೆ ಸಾಕ್ಷಿ. ಈ ಕಾದಂಬರೀ ಪ್ರಕಾರವೇ ಆಫ್ರಿಕನ್ ಲೇಖಕರಿಗೂ ವಸಾಹತು ವಿರೋಧೀ ಸಂಕಥನ ಸೃಷ್ಟಿಯ ಹಾಗೂ ಅಥೆಂಟಿಕ್ ಆಫ್ರಿಕಾದ ಸೃಷ್ಟಿಯ ಮಾಧ್ಯಮವಾದದ್ದನ್ನು ಸಾಹಿತ್ಯ ಪ್ರಕಾರಗಳ ಸಾಂಸ್ಕೃತಿಕ ರಾಜಕಾರಣದ ಮುಂದುವರಿಕೆ ಯನ್ನಾಗಿಯೂ ನೋಡಬಹುದು.

ಆದರೆ, ಪಶ್ಚಿಮ ಸೃಷ್ಟಿಸಿದ ಆಫ್ರಿಕಾದ ಚಿತ್ರಕ್ಕೆ ಪ್ರತಿಯಾದ ಅಧಿಕೃತ ಆಫ್ರಿಕಾದ ಸೃಷ್ಟಿಯನ್ನು ಆರಂಭದ ಆಫ್ರಿಕನ್ ಕಾದಂಬರಿಗಳು ಕೈಗೆತ್ತಿಕೊಂಡವೆಂಬ ಮಾತ್ರಕ್ಕೆ ಈ ಕಾದಂಬರಿಗಳು (ಇಲ್ಲಿ ಮಾನವಶಾಸ್ತ್ರೀಯ ಅಂಶಗಳು ಹೆಚ್ಚಿಗೆ ಇದ್ದರೂ) ಸಂಸ್ಕೃತಿ ಪ್ರತಿಪಾದನೆಯ ದಾಖಲಾತ್ಮಕ ಚಿತ್ರಗಳಲ್ಲ. ಅದರಲ್ಲೂ ಕಾದಂಬರಿಯಂಥ ಪ್ರಕಾರದಲ್ಲಿ ಒಂದು ಸಮುದಾಯದ ಅಧಿಕೃತತೆಯ ಪ್ರಶ್ನೆ ಅದರ ಆಂತರಿಕ ವಿಮರ್ಶೆಯನ್ನು ಒಳಗೊಂಡೇ ಇರುತ್ತದೆ. ಅದರ ಜೊತೆಗೇ ಅನ್ಯ ಸಂಸ್ಕೃತಿಯಿಂದ ಪರಿಚಯಿಸಲ್ಪಟ್ಟ ಕಾದಂಬರೀ ಪ್ರಕಾರದಲ್ಲೇ ಅಂತರ್ಗತವಾಗಿರುವ ಭಿನ್ನಮತೀಯ ದೃಷ್ಟಿಕೋನಗಳು ಕೂಡ ಅಥೆಂಟಿಕ್ ಆಫ್ರಿಕಾದ ಸೃಷ್ಟಿಯ ಉದ್ದೇಶವನ್ನು ಹಲವು ಬಗೆಯಲ್ಲಿ ನಿಯಂತ್ರಿಸುತ್ತಿರುತ್ತವೆ.

ಈ ಹಿನ್ನೆಲೆಯಲ್ಲಿಯೇ ಸಮಕಾಲೀನ ಸಮಾಜದ ವಿಮರ್ಶೆಯನ್ನು ತನ್ನ ಮೂಲ ಧರ್ಮವನ್ನಾಗಿಟ್ಟುಕೊಂಡು ಬೆಳೆದ ಪ್ರಕಾರವಾದ ಕಾದಂಬರಿಯ ಮೂಲಕ ಆಫ್ರಿಕನ್ ಲೇಖಕರು ಆರಂಭಿಸಿದ ಅಥೆಂಟಿಕ್ ಆಫ್ರಿಕಾದ ಸೃಷ್ಟಿಯ ನಿರ್ದಿಷ್ಟ ಸ್ವರೂಪದ ಪ್ರಶ್ನೆ ಎದುರಾಗುವುದು. ಅಥೆಂಟಿಕ್ ಆಫ್ರಿಕಾದ ಸೃಷ್ಟಿಯೆಂದರೆ ರೈಡರ್ ಹ್ಯಾಗಾರ್ಡ್ ಅಥವಾ ಜಾಯ್ಸಕ್ಯಾರಿಯಂಥವರ ಪ್ರತಿಮೆಗಳಿಗಿಂತ ಭಿನ್ನವಾದ ಪ್ರತಿ-ಪ್ರತಿಮೆಗಳ ಸೃಷ್ಟಿ ಮಾತ್ರವೆ? ಆಫ್ರಿಕಾ ಕುರಿತಂತೆ ಯುರೋಪಿನ ವಿಕೃತ ಕಲ್ಪನೆಗಳನ್ನು ತಿದ್ದುವ ಶಿಕ್ಷಕನ ಹಾಗೂ ಸಾಂಸ್ಕೃತಿಕ ರಾಯಭಾರಿಯ ಪಾತ್ರದಲ್ಲಿ ಆಫ್ರಿಕನ್ ಕಾದಂಬರಿ ಯಶಸ್ವಿಯಾಯಿತೆ?

ಸುಮಾರು ಐವತ್ತು, ಅರವತ್ತು  ವರ್ಷಗಳ ತನ್ನ ಚರಿತ್ರೆಯಲ್ಲಿ ಆಫ್ರಿಕನ್ ಕಾದಂಬರಿ ದೇಶೀ ಸಂಸ್ಕೃತಿ ಕುರಿತಂತೆ ಪರಕೀಯರ ಪೂರ್ವಗ್ರಹಗಳನ್ನು ನಿವಾರಿಸುವ ಹಾಗೂ ತನ್ನ ವಿಶಿಷ್ಟ ವ್ಯಕ್ತಿತ್ವವನ್ನು  ಪ್ರತಿಪಾದಿಸುವ ಸಾಂಸ್ಕೃತಿಕ ರಾಯಭಾರವನ್ನು ನಿರ್ವಹಿಸಿದೆ. ಆದರೆ ಅದರ ಜೊತೆಗೇ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ, ಆಫ್ರಿಕನ್ ಪಾರಂಪರಿಕ ಸಮಾಜದ ‘ಬರ್ಬರತೆ’ ಕುರಿತಂತೆ ಪರಕೀಯ ಲೇಖಕರು ಎತ್ತಿದ ಪ್ರಶ್ನೆಗಳನ್ನು ಆಫ್ರಿಕನ್ ಕಾದಂಬರಿಯೂ ಒಂದಲ್ಲ ಒಂದು ಬಗೆಯಲ್ಲಿ ಎತ್ತಲೇಬೇಕಾಯಿತೆನ್ನುವುದು. ಆಫ್ರಿಕಾದ ಗೊಂದಲ, ಪತನ ಕುರಿತಂತೆ ಚಿನುವ ಅಚೀಬೆಯ ‘ನೋ ಲಾಂಗರ್ ಅಟ್ ಈಸ್’ನ ಒಬಿ ಒಕಾಂಕೋ ಎತ್ತುವ ಪ್ರಶ್ನೆಗಳಿಗೂ ‘ಹಾರ್ಟ್ ಆಫ್ ಡಾರ್ಕ್‌ನೆಸ್’ ಕೃತಿಯ ಕರ್ಟ್ಜ್ ಎತ್ತುವ ಪ್ರಶ್ನೆಗಳಿಗೂ ಇರುವ ಸಾಮ್ಯವನ್ನು ಲೆವಿಸ್ ನಕೋಸಿ ಗುರುತಿಸುತ್ತಾನೆ. ಆಫ್ರಿಕನ್ ಭ್ರಷ್ಟತೆ ಕುರಿತಂತೆ ‘ನೋ ಲಾಂಗರ್ ಅಟ್ ಈಸ್’ ಕಾದಂಬರಿಯ ವಸಾಹತು ಅಧಿಕಾರಿ ಗ್ರೀನ್ ಮಾಡುವ ವ್ಯಾಖ್ಯಾನಗಳನ್ನೇ ‘ದಿ ಇಂಟರ್‌ಪ್ರಿಟರ್ಸ್’ ಅಥವಾ ‘ಬ್ಯೂಟಿಫುಲ್ ಒನ್ಸ್ ಆರ್ ನಾಟ್ ಯೆಟ್ ಬಾರ್ನ್‌’ ಕೃತಿಗಳೂ ಮಾಡಲೆತ್ನಿಸುತ್ತವೆ.

ಅಂದರೆ, ಅಥೆಂಟಿಕ್ ಆಫ್ರಿಕಾದ ತಾತ್ತ್ವಿಕ ನೆಲೆಯನ್ನು ಪ್ರಧಾನವಾಗಿಟ್ಟುಕೊಂಡ ಆಫ್ರಿಕನ್ ಕಾದಂಬರಿ ವಸಾಹತು ವಿರೋಧದ ಸಾಧನವೂ ಆಗಬೇಕಾಯಿತು; ವಸಾಹತುವಾದ ಎತ್ತಿದ ಪ್ರಶ್ನೆಗಳನ್ನು ತನ್ನ ಚೌಕಟ್ಟಿನಲ್ಲಿ ಪರಿಶೀಲಿಸುವ ವಿಮರ್ಶಕನೂ ಆಗಬೇಕಾಯಿತು. ಕಾದಂಬರೀ ಪ್ರಕಾರ ಆಫ್ರಿಕನ್ ಸಂದರ್ಭದಲ್ಲಿ ಕೂಡ ಅಂತಿಮವಾಗಿ ಸಮಕಾಲೀನ ಸಮಾಜದ ವಿಮರ್ಶೆಯ ಸಾಧನವೇ ಆಗಿ ತನ್ನ ಮೂಲ ಧರ್ಮವನ್ನೇ ಉಳಿಸಿಕೊಂಡು ಬಿಟ್ಟಿತೆಂದು ಈ ಅಂಶಗಳು ಸೂಚಿಸುತ್ತವೆ.

ಆಫ್ರಿಕನ್ ಕಾದಂಬರಿ ಕಂಡ ವಸಾಹತೀಕರಣದ ರೂಪಕಗಳು

ವಸಾಹತುವಾದ, ವಸಾಹತುಶಾಹಿ ಹಾಗೂ ಅದರ ಜೊತೆಗೇ ಬಂದ ವಿವಿಧ ಶಕ್ತಿಗಳು ಆಫ್ರಿಕಾದ ದೇಶೀ ಸಮಾಜದಲ್ಲಿ ತಂದ ವಿವಿಧ ರೀತಿಯ ಚಲನೆ, ವಿಘಟನೆ ಹಾಗೂ ಪ್ರಗತಿಗಳ ಸಂಕೀರ್ಣ ಚಿತ್ರವನ್ನು ನೈಜೀರಿಯಾದ ಕಾದಂಬರಿಕಾರ ಚಿನುವ ಅಚೀಬೆಯವರ ‘ಥಿಂಗ್ಸ್ ಫಾಲ್ ಅಪಾರ್ಟ್’ ಹಾಗೂ ‘ಆರೋ ಆಫ್ ಗಾಡ್’ ಕಾದಂಬರಿಗಳು ಕೊಡುತ್ತವೆ. ಆಫ್ರಿಕಾದ ಪ್ರಮುಖ ಬುಡಕಟ್ಟುಗಳಲ್ಲೊಂದಾದ ಇಬೊ ಬುಡಕಟ್ಟು ನೆಲೆಸಿರುವ ಉಮೋಫಿಯಾ ಎಂಬ ಊರಿಗೆ ವಸಾಹತುಶಾಹಿ ಪ್ರವೇಶದ ಮೊದಲ ಘಟ್ಟದ ಕತೆಯನ್ನು ‘ಥಿಂಗ್ಸ್ ಫಾಲ್ ಅಪಾರ್ಟ್’ ಹೇಳುತ್ತದೆ. ಈ ಕಾದಂಬರಿಯ ಚೌಕಟ್ಟನ್ನು ಹೀಗೆ ಗ್ರಹಿಸಬಹುದು.

ತನ್ನದೇ ಆದ ವಿಶಿಷ್ಟ ಜೀವನಕ್ರಮಗಳು, ಆಚರಣೆಗಳು, ನಂಬಿಕೆಗಳು ಹಾಗೂ ಮೌಲ್ಯಗಳ ಲೋಕದಲ್ಲಿ ಸಾವಿರಾರು ವರ್ಷಗಳ ಕಾಲ ಬದುಕಿದ್ದ ಉಮೋಫಿಯಾದ ಇಬೋ ಸಮುದಾಯದ ಹೆಮ್ಮೆಯ ಮಗ ಒಕಾಂಕೋ ಒಬ್ಬ ಕುಸ್ತಿಪಟು. ಕಾದಂಬರಿಯ ನಿರೂಪಕನ ವರ್ಣನೆಯಲ್ಲಿ ಮೂಡುವ ಕಾದಂಬರಿಯ ಕೇಂದ್ರ ಪಾತ್ರ ಒಕಾಂಕೋನ ಚಿತ್ರ ಹೀಗಿದೆ:

ಒಕಾಂಕೋ ಛಲದಿಂದ ಮುನ್ನುಗ್ಗುವ ಮನುಷ್ಯನಾಗಿ ಬೆಳೆದ. ಕಾಳಗಕ್ಕಂತೂ ಹೇಳಿ ಮಾಡಿಸಿದ ವ್ಯಕ್ತಿಯಾಗಿದ್ದ. ಅವನು ತನ್ನ ಅಪ್ಪನಂತೆ ನೆತ್ತರು ಕಂಡು ಹೆದರಿದವನಲ್ಲ. ಉಮೋಫಿಯಾದ ಈಚಿನ ಕಾಳಗದಲ್ಲಿ ಮೊದಲ ಮಾನವ ತಲೆಯನ್ನು ಮನೆಗೆ ತಂದವನು ಕೂಡ ಅವನೇ. ಅದು ಅವನು ಗಳಿಸಿದ ಐದನೆಯ ತಲೆ. ತನ್ನ ಸಮುದಾಯಕ್ಕೆ ಸೇರಿದ ಹಿರೀಕರ ಸಂಸ್ಕಾರದ ದಿನದಂದು ತಾನು ಗಳಿಸಿದ ಮೊದಲ ಮಾನವನ ಬುರುಡೆ ಯನ್ನು ಅವನು ಸುರೆ ಕುಡಿಯಲು ಬಳಸುತ್ತಿದ್ದ.

ಇಂಥ ಒಕಾಂಕೋ ತನ್ನ ಎದುರಾಳಿಯನ್ನು ಕುಸ್ತಿಯಲ್ಲಿ ಸೋಲಿಸಿ ಊರಿನ ನಾಯಕ ನಾಗುವ ಪ್ರಸಂಗದೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಆದರೆ ಮುಂದೊಮ್ಮೆ ಈ ಕುಸ್ತಿಪಟು ತನ್ನ ಅರಿವಿಗೆ ಮೀರಿದ ವಸಾಹತುಶಾಹಿ ಶಕ್ತಿಗಳನ್ನು ಗ್ರಹಿಸಲಾರದೆ, ಎದುರಿಸಲಾರದೆ ನೇಣು ಹಾಕಿಕೊಳ್ಳುವುದರೊಂದಿಗೆ ಕಾದಂಬರಿ ಮುಗಿಯುತ್ತದೆ.

ಒಕಾಂಕೋ ಪ್ರತಿನಿಧಿಸುತ್ತಿರುವ ಪುರುಷತ್ವದ ಮೌಲ್ಯಗಳು ಅವನ ಸಮಾಜದ ಮೌಲ್ಯಗಳೂ ಹೌದು. ಹೀಗಾಗಿ ಅವನ ದೌರ್ಬಲ್ಯಗಳು ಅವನ ಸಮಾಜದ ಮೌಲ್ಯಗಳೂ ಹೌದು. ಒಂದು ಸಂದರ್ಭದಲ್ಲಿ ಅವನು ಅರಿಯದೇ ಮಾಡಿದ ತಪ್ಪಿನಿಂದಾಗಿ ಏಳು ವರ್ಷಗಳ ಕಾಲ ಉಮೋಫಿಯಾದಿಂದ ಹೊರಗೆ ತನ್ನ ತಾಯಿಯ ಊರಾದ ಮಬಾಂತದಲ್ಲಿ ನೆಲೆಸಬೇಕಾಗುತ್ತದೆ. ಅವನು ಅಲ್ಲಿರುವಾಗ ಮಬಾಂತದ ಸುತ್ತಮುತ್ತ ವಸಾಹತುಶಾಹಿ ಆಕ್ರಮಣ ಆರಂಭವಾಗುತ್ತದೆ. ಅವನು ಮರಳಿ ಬರುವ ಹೊತ್ತಿಗೆ ಆಫ್ರಿಕಾದ ಇತರ ಭಾಗಗಳಿಗೆ ಅಡಿಯಿಟ್ಟಿದ್ದ ವಸಾಹತುಶಾಹಿ ಶಕ್ತಿಗಳು ಅವನ ಊರಾದ ಉಮೋಫಿಯಾಕ್ಕೂ ಆಡಿಯಿಟ್ಟಿವೆ.

ಕಾದಂಬರಿಯ ವಿವಿಧ ಘಟ್ಟಗಳಲ್ಲಿ ವಸಾಹತುಶಾಹಿ, ಚರ್ಚು, ಆಧುನಿಕತೆಗಳು ದೇಶೀ ಸಮಾಜದೊಂದಿಗೆ ನಡೆಸುವ ಮುಖಾಮುಖಿಯ ರೂಪಕಗಳಿವೆ. ಅವುಗಳಲ್ಲಿ ಕೆಲವನ್ನು ಮುಂದೆ ನೋಡಬಹುದು:

ಆಧುನಿಕತೆ ಹಾಗೂ ಪರಂಪರೆಗಳ ಮುಖಾಮುಖಿಯ ಮೊದಲ ಘಟ್ಟದಲ್ಲಿಯೇ ಅಷ್ಟು ತೀವ್ರವಾದ ಸಂಘರ್ಷಗಳು ಹುಟ್ಟುವುದಿಲ್ಲವೆಂಬುದರ ಸೂಚನೆ ‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯಲ್ಲಿದೆ. ಪಾರಂಪರಿಕ ಸಂಸ್ಕೃತಿಯ ರಕ್ಷಣೆಯನ್ನುಳ್ಳ ಜನಾಂಗವೊಂದು ಹೊಸ ಶಕ್ತಿಯ ಆಗಮನವನ್ನು ತೀವ್ರ ಅಪಾಯವೆಂಬಂತೆ ಪರಿಗಣಿಸದೆ, ತನ್ನ ಎಂದಿನ ಆತ್ಮವಿಶ್ವಾಸದಿಂದಲೇ ಹೊಸ ಅನುಭವಗಳನ್ನು ಅರಿಯಲೆತ್ನಿಸುತ್ತದೆ. ‘ಥಿಂಗ್ಸ್ ಫಾಲ್ ಅಪಾರ್ಟ್’ನ ಉಮೋಫಿಯಾದ ಜನ ಬಿಳಿಯರ ಆಗಮನದ ಮೊದಲ ಘಟ್ಟದಲ್ಲಿ ಬಿಳಿಯರನ್ನು ಕುಷ್ಠರೋಗದವರೆಂದು ಗೇಲಿ ಮಾಡುತ್ತಾರೆ ಹಾಗೂ ಮಬಾಂತಕ್ಕೆ ಬಿಳಿಯ ಮಿಷನರಿಗಳು ನೀಡುವ ಮೊದಲ ಭೇಟಿಲ್ಲಿ ಧರ್ಮಪ್ರಚಾರಕನ ಭಾಷೆ, ಅವನ ಸಂದೇಶ ಎಲ್ಲವೂ ನಗೆಪಾಟಲಾಗುತ್ತವೆ. ಇವೆಲ್ಲವೂ ಪರಂಪರೆಯ ಆತ್ಮವಿಶ್ವಾಸದ ಸೂಚನೆಗಳೇ. ಜೊತೆಗೆ ಇಬೋ ಸಮುದಾಯ ಕಂಡ ಮೊದಲ ಮತಾಂತರಗಳು ಕೂಡ ಸಮುದಾಯದಲ್ಲಿ ಅಂಥ ದಿಗ್ಭ್ರಮೆಯನ್ನೇನೂ ಹುಟ್ಟು ಹಾಕುವುದಿಲ್ಲ. ಕಾರಣ, ಆ ಮತಾಂತರಿಗಳೆಲ್ಲ ಸಮುದಾಯದಲ್ಲಿ ನಿಷ್ಪ್ರಯೋಜಕರೆನಿಸಿಕೊಂಡವರು, ಯಾವ ಬಿರುದುಗಳನ್ನೂ ಸ್ಥಾನವನ್ನೂ ಪಡೆಯದವರು. ಸಮುದಾಯದ ಸಭೆಗಳಲ್ಲಿ ಇಂಥವರ ಮಾತಿಗೆ ಯಾವ ಬೆಲೆಯೂ ಇರುತ್ತಿರಲಿಲ್ಲ. ಇಂಥವರನ್ನೂ ಸಮುದಾಯ ‘ಖಾಲಿಜನ’ ಎಂದು ಕರೆಯುತ್ತಿತ್ತು. ಅಗ್ಬಾಲ ದೇವತೆಯ ಅರ್ಚಕಿ ಚೀಲೋ ಮತಾಂತರಿಗಳನ್ನು ‘ತಮ್ಮ ಸಮಾಜದ ಮಲ ಹಾಗೂ ಹೊಸ ಧರ್ಮವೆಂದರೆ ಆ ಮಲವನ್ನು ತಿನ್ನಲು ಬಂದಿರುವ ಹುಚ್ಚುನಾಯಿ’ ಎನ್ನುತ್ತಾಳೆ.

ಆದರೆ, ಇಂಥ ಆತ್ಮವಿಶ್ವಾಸದ ತಳಹದಿ ಅಲುಗಾಡತೊಡಗುವುದು ವ್ಯಕ್ತಿಗಳ ಮೂಲಕ ಪ್ರವೇಶಿಸುವ ಚಾರಿತ್ರಿಕ ಶಕ್ತಿಗಳು ಹಾಗೂ ನೋಟಕ್ರಮಗಳು ಒಡ್ಡುವ ಸವಾಲುಗಳು ಪಾರಂಪರಿಕ ಗ್ರಹಿಕೆಗಳನ್ನು ಮೀರಿ ಬೆಳೆದು ನಿಂತಾಗ. ಇಂಥದೊಂದು ಉದಾಹರಣೆ ಮಬಾಂತದ ಮಿಷನರಿಗಳು ಚರ್ಚುಕಟ್ಟುವ ಪ್ರಸಂಗದಲ್ಲಿದೆ. ಮಬಾಂತದ ಜನ, ಮಿಷನರಿಗಳು ಕ್ರಿಶ್ಚಿಯನ್ ದೇವರನ್ನು ಸ್ಥಾಪಿಸುವುದನ್ನು ಬುಡಮೇಲುಗೊಳಿಸಲೆಂದು ‘ಕೇಡಿನ ಕಾಡು’ ಎಂದು ಕರೆಯಲಾಗುವ ಜಾಗವನ್ನು ಚರ್ಚು ಕಟ್ಟಲು ಬಿಳಿಯರಿಗೆ ಬಿಟ್ಟುಕೊಡುತ್ತಾರೆ. ಕೇಡಿನ ಖಾಯಿಲೆಗಳಿಂದ ಸತ್ತವರನ್ನೂ ಅತೀಂದ್ರಿಯ ಶಕ್ತಿಗಳ ಆರಾಧಕರನ್ನೂ ಹೂಳುವ ಜಾಗ ಅದು. ಕಾಳರಾತ್ರಿಯ ಭೀಕರ ಶಕ್ತಿಗಳ ಆ ನೆಲದಲ್ಲಿ ಚರ್ಚು ಕಟ್ಟಿದ ಬಿಳಿಯರು ನಾಲ್ಕೇ ದಿನಗಳಲ್ಲಿ ನಾಶವಾಗುವರೆಂದು ನಿರೀಕ್ಷಿಸುವ ಸ್ಥಳೀಯರಿಗೆ, ಬಿಳಿಯರೂ ಅವರ ಚರ್ಚೂ ಸ್ಥಿರವಾಗಿ ನಿಂತಾಗ ದಿಗ್ಭ್ರಮೆಯಾಗುತ್ತದೆ:

…ಮೊದಲ ದಿನ ಕಳೆಯಿತು. ಎರಡು, ಮೂರು, ನಾಲ್ಕನೆಯ ದಿನವೂ ಬಂದೇ ಬಿಟ್ಟಿತು. ಆದರೆ ಆ ಬಿಳಿಯರಲ್ಲಿ ಒಬ್ಬನೂ ಸಾಯಲಿಲ್ಲ. ಎಲ್ಲರಿಗೂ ಅಚ್ಚರಿ. ಆನಂತರ ಬಿಳಿಯರ ದೇವರಿಗೆ ಅಸಾಧಾರಣವಾದ ಶಕ್ತಿಯಿದೆಯೆಂದು ಎಲ್ಲ ಕಡೆ ಸುದ್ದಿ ಹಬ್ಬತೊಡಗಿತು. ಕಣ್ಣುಗಳ ಮೇಲೆ ಗಾಜಿಟ್ಟುಕೊಂಡ ಬಿಳಿಯನು ಭೂತಪ್ರೇತಗಳನ್ನು ಕಾಣಬಲ್ಲನೆಂದೂ ಅವುಗಳ ಜೊತೆ ಮಾತನಾಡಬಲ್ಲನೆಂದೂ ಜನ ಮಾತಾಡಿಕೊಳ್ಳುತ್ತಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವನು ಮೂರು ಜನರನ್ನು ಮತಾಂತರಿಸು ವಲ್ಲಿಯೂ ಯಶಸ್ವಿಯಾಗಿಬಿಟ್ಟನು.

ಪಾರಂಪರಿಕ ನೆಲೆಯನ್ನೇ ಅಲುಗಾಡಿಸುತ್ತಾ ನೆಲೆಯೂರುವ ಆಧುನಿಕ ಶಕ್ತಿಗಳನ್ನು ಕುರಿತ ಅರ್ಥಪೂರ್ಣ ರೂಪಕ ಇದು. ಮಧ್ಯಯುಗದ ಯುರೋಪಿನಲ್ಲಿ ವೈಜ್ಞಾನಿಕ ವಿಚಾರವಾದವನ್ನೂ ವಿಜ್ಞಾನವನ್ನೂ ವಿರೋಧಿಸುತ್ತಿದ್ದ ಚರ್ಚು ‘ಥಿಂಗ್ಸ್ ಫಾಲ್ ಅಪಾರ್ಟ್’ ಹಾಗೂ ‘ಆರೋ ಆಫ್ ಗಾಡ್’ ಕಾದಂಬರಿಗಳಲ್ಲಿ ಕಲ್ಲು ದೇವತೆಗಳ ವಿರುದ್ಧ ವೈಜ್ಞಾನಿಕ ವಿಚಾರವಾದದ ಅಸ್ತ್ರವನ್ನೇ ಬಳಸುತ್ತದೆ.

‘ಚರಿತ್ರೆ ಕೆಲವು ಸಲ ನಿದ್ರಾಸಂಚಾರಿಯಂತೆ ವರ್ತಿಸುತ್ತದೆ’ ಎಂದು ಅಚೀಬೆ ಆಫ್ರಿಕನ್ ಸಮುದಾಯದ ದುರಂತವನ್ನು ವಿವರಿಸುತ್ತಾ ಹೇಳುತ್ತಾನೆ. ‘ಥಿಂಗ್ಸ್ ಫಾಲ್ ಅಪಾರ್ಟ್’ನ ಉಮೋಫಿಯಾಕ್ಕೆ ಚರ್ಚಿನ ಪ್ರವೇಶದಿಂದಾಗಿ, ಪಾರಂಪರಿಕ ಸಮಾಜದಲ್ಲಿ ದಮನಕ್ಕೊಳ ಗಾಗಿದ್ದ ವರ್ಗಗಳು ಬಿಡುಗಡೆ ಕಂಡರೂ ಚರ್ಚು ಆಫ್ರಿಕನ್ ಸಮಾಜವನ್ನು ಪ್ರವೇಶಿಸಿದ್ದೇ ವಿಘಟನೆಯ ಸಾಧನವಾಗಿ ಎಂದು ‘ಥಿಂಗ್ಸ್ ಪಾಲ್ ಅಪಾರ್ಟ್’ ಹಾಗೂ ‘ಆರೋ ಆಫ್ ಗಾಡ್’ಗಳೆರಡೂ ಸೂಚಿಸುತ್ತವೆ. ಫ್ಯಾನನ್ ಹೇಳುವಂತೆ ‘ವಸಾಹತುಗಳಲ್ಲಿ ಚರ್ಚು ಎಂದರೆ ಬಿಳಿಯನ, ವಿದೇಶಿಯನ ಚರ್ಚು ಎಂದೇ ಅರ್ಥ. ಚರ್ಚು ಸ್ಥಳೀಯರನ್ನು ಕರೆಯುವುದು ದೇವರ ಮಾರ್ಗದ ಕಡೆಗಲ್ಲ; ಬದಲಿಗೆ ಬಿಳಿಯನ, ಒಡೆಯನ, ದಮನಕಾರನ ರೀತಿಯನ್ನು ಒಪ್ಪಿಕೊಳ್ಳುವಂತೆ ಅದು ಕರೆ ನೀಡುತ್ತದೆ. ಆಫ್ರಿಕಾದಲ್ಲಿ ವಸಾಹತುವಾದ ದೇಶೀ ಮಾದರಿಗಳನ್ನು ಕನಿಷ್ಟವಾಗಿಸುವಂತೆ, ಚರ್ಚು ಕೂಡ ದೇಶೀ ಧರ್ಮವನ್ನು ತಿರಸ್ಕಾರದಿಂದ ನೋಡಲಾರಂಭಿಸುತ್ತದೆ.’

ಆಫ್ರಿಕನ್ ಕಾದಂಬರಿ ಹಾಗೂ ನಾಟಕಗಳ ಪಾರಂಪರಿಕ ಹಿಂಸೆಯ ಪ್ರತಿಮೆಗಳು ಸೂಚಿಸುವಂತೆ ಆಫ್ರಿಕಾದ ಹಲವಾರು ಬಗೆಯ ಕ್ರೌರ್ಯಗಳ ಹಿಂದೆ ದೇವರು ಹಾಗೂ ಮಾನವಾತೀತ ಶಕ್ತಿಗಳನ್ನು ಕುರಿತ ಭಯವಿದೆ. ಆದರೆ ವಸಾಹತುಶಾಹಿ ಹಾಗೂ ಆಧುನಿಕತೆಯ ಪ್ರವೇಶಕ್ಕೆ ಮುನ್ನವೇ ದೇಶೀ ಸಮಾಜದ ಈ ಆಚರಣೆಗಳನ್ನು ಹಾಗೂ ಈ ಸಮಾಜದ ಹಿಂಸೆಯ ಮುಖಗಳನ್ನು ಕುರಿತ ಅಸಹನೆಗಳು ಆಗಲೇ ಗರಿಗಟ್ಟಿಕೊಳ್ಳ ತೊಡಗಿದ್ದವು. ಲೆವಿಸ್ ನಕೊಸಿ ಗುರುತಿಸುವಂತೆ, ಈ ಸಮಾಜ ಅದೆಷ್ಟೇ ಹೊಂದಾಣಿಕೆಯ ನೆಲೆಯಲ್ಲಿ ನಿಂತಿರುವಂತೆ ಕಂಡರೂ ಅದು ಒಳಗೊಳಗೇ ಕುದಿದು ಸ್ಫೋಟಿಸುವ ಹಂತ ತಲುಪಿತ್ತೆಂಬುದನ್ನು ‘ಥಿಂಗ್ಸ್ ಫಾಲ್ ಅಪಾರ್ಟ್’ ಸೂಚಿಸುತ್ತದೆ. ಜೊತೆಗೆ, ಆಫ್ರಿಕನ್ ಸಮಾಜದ ಎಷ್ಟೋ ಆಚರಣೆಗಳು ಎಷ್ಟು ಯಾಂತ್ರಿಕ ಹಾಗೂ ಕ್ರೂರವಾದ ಹಂತ ತಲುಪಿಬಿಟ್ಟಿದ್ದವೆಂದರೆ, ಬದಲಾವಣೆಗಾಗಿ ಆಂತರಿಕ ಕ್ರಾಂತಿ ಅಥವಾ ಪರಕೀಯ ಶಕ್ತಿಗಳ ಆಗಮನವಾಗಲೇಬೇಕಾದ ಅನಿವಾರ್ಯತೆಯನ್ನು ಅವು ಸೃಷ್ಟಿಸಿದ್ದವು.

ಅದೇ ಆಗ ಹೊಸಶಕ್ತಿಗಳ ಪ್ರವೇಶವಾಗಿರುವ ‘ಥಿಂಗ್ಸ್ ಫಾಲ್ ಅಪಾರ್ಟ್’ನ ಉಮೋಫಿಯಾದಲ್ಲಿ ಹೊಸ ತಲೆಮಾರಿಗೆ ಸೇರಿದ ನೋಯೆಗೆ ತನ್ನ ಸಮಾಜ ಕುರಿತ ಅಸಹನೆ ಇಕೆಮೆಫುನಾನ ಬಲಿಯ ನಂತರ ಮತ್ತಷ್ಟು ಗಾಢವಾಗತೊಡಗುತ್ತದೆ. ಈ ಇಕೆಮೆಫುನಾ ಪಕ್ಕದ ಊರೊಂದು ಮಾಡಿದ ತಪ್ಪಿನ ಫಲವಾಗಿ ತಲೆದಂಡವಾಗಿ ಉಮೋಫಿಯಾಕ್ಕೆ ಒಪ್ಪಿಸಲಾದ ಮುಗ್ಧ ಹುಡುಗ. ಅವನ ಬಲಿಯಲ್ಲಿ ತಂದೆ ಪಾಲ್ಗೊಂಡಿದ್ದು ಮಗ ನೋಯೆಯಲ್ಲಿ ಆಳವಾದ ದಿಗ್ಭ್ರಮೆಯನ್ನಂಟು ಮಾಡುತ್ತದೆ. ಈ ಮನಸ್ಥಿತಿಯಲ್ಲಿರುವ ನೋಯೆಗೆ, ಬಿಳಿಯ ಪಾದ್ರಿಯೊಬ್ಬ ನಿಮ್ಮ ದೇವರುಗಳು ‘ನಿಮ್ಮ ಜನರನ್ನೂ ಮುಗ್ಧ ಮಕ್ಕಳನ್ನೂ ಕೊಲ್ಲಲೆಂದೇ ಇರುವ ಮೋಸಗಾರ ದೇವರುಗಳು’ ಎಂದಾಗ ಅದು ಅವನ ಆಳಕ್ಕಿಳಿಯುತ್ತದೆ. ಜೊತೆಗೇ ಅವರ ಹಾಡೂ ಅವನನ್ನು ಸೆಳೆಯತೊಡಗುತ್ತದೆ. ಈ ಅಂಶ ಹೊಸ ಸಾಂಸ್ಕೃತಿಕ ಪರ್ಯಾಯಗಳ ಭಾಷೆ, ಧೋರಣೆ, ಪ್ರತಿಮೆಗಳು ಅನ್ಯ ಸಂಸ್ಕೃತಿಗಳನ್ನು ಪ್ರವೇಶಿಸುವ ಬಗೆಯೊಂದನ್ನು ಸಂಕೇತಿಸುತ್ತದೆ:

ಅವನನ್ನು ಸೆಳೆದದ್ದು ಚರ್ಚಿನ ಹುಚ್ಚು ತರ್ಕವಲ್ಲ, ಅದೇನೆಂದು ಅವನಿಗೆ ಅರ್ಥವಾಗಲೂ ಇಲ್ಲ. ಆದರೆ ಅವನನ್ನು ಸೆಳೆದದ್ದು, ಆಳವಾಗಿ ಕಲಕಿದ್ದು ಹೊಸ ಧರ್ಮದ ಕಾವ್ಯ. ಕತ್ತಲಲ್ಲಿ ಕೂತ ಸೋದರರನ್ನು ಕುರಿತ ಆ ಹಾಡಿನಲ್ಲಿ ಅವನ ಎದೆಯಲ್ಲಿ ಸದಾ ಅನುರಣಿಸುತ್ತಿದ್ದ ಹಲವು ಪ್ರಶ್ನೆಗಳಿಗೆ, ಇಕೆಮೆಫುನಾನ ಕೊಲೆ ಹಾಗೂ ಕಾಡಲ್ಲಿ ಆಳುವ ಕಂದಮ್ಮಗಳ ಕಣ್ಣೀರನ್ನು ಕುರಿತ ಪ್ರಶ್ನೆಗಳಿಗೆ ಉತ್ತರವಿದ್ದಂತಿತ್ತು. ಆ ಹಾಡಿನ ಶಬ್ದ ಗಳು ಒಂದೊಂದಾಗಿ ಅವನೊಳಗಿಳಿಯುತ್ತಾ, ಕಾದು ಬಿರುಬಿಟ್ಟ ನೆಲಕ್ಕೆ ತಂಪೆರೆಯುವ ಮಳೆಹನಿಯಂತೆ ಅವನ ಘಾಸಿಗೊಂಡ ಆತ್ಮಕ್ಕೆ ಅವ್ಯಕ್ತ ನೆಮ್ಮದಿಯನ್ನು ನೀಡಲಾರಂಭಿಸಿದವು. ನೋಯೆಯ ಎಳೆಯ ಮನಸ್ಸು ಈ ವಿಚಿತ್ರಕ್ಕೆ ಬೆರಗಾಗತೊಡಗಿತು.

ಡೇವಿಡ್ ಕ್ಯಾರೊಲ್ ಗುರುತಿಸುವಂತೆ, ‘ಕ್ರಿಶ್ಚಿಯನ್ ದೇವರು ಇಬೋ ಸಮಾಜವ ನ್ನಾಳುತ್ತಿರುವ ಚುಕ್ವು ದೇವತೆಯ ಜೊತೆ ಸ್ಪರ್ಧಿಸಲಾರ. ಆದರೆ ತನ್ನ ಪ್ರೇಮದ ಭಾಷೆಯ ಮೂಲಕ, ಆತ್ಮೀಯತೆಯ ಮೂಲಕ ಉಮೋಫಿಯಾದ ಅವ್ಯಕ್ತ ಭಯಗಳನ್ನು ಈ ಹೊಸ ದೇವರು ನಿವಾರಿಸಲಾರಂಭಿಸುತ್ತಾನೆ. ನೋಯೆಯನ್ನು ಸೆಳೆಯುವುದು ಇಂಥ ಪ್ರೀತಿಯ ದೇವರು. ಈ ಬೆಳವಣಿಗೆಯನ್ನು ಮನಃಶಾಸ್ತ್ರೀಯ ದೃಷ್ಟಿಕೋನದಿಂದ ನೋಡಿದರೆ, ತನ್ನ ಸರ್ವಾಧಿಕಾರಿ ತಂದೆ ಹಾಗೂ ತನ್ನ ಸಮುದಾಯದ ದೇವರುಗಳೆರಡೂ ನೋಯೆಗೆ ಒಂದೇ ಥರ ಕಾಣಿಸಿದ್ದರೂ ಆಶ್ಚರ್ಯವಿಲ್ಲ. ಆದ್ದರಿಂದಲೇ ತನ್ನ ಮನೆ ಹಾಗೂ ಸಮುದಾಯ ಗಳೆರಡನ್ನೂ ತೊರೆದ ನೋಯೆ ಚರ್ಚು ಹಾಗೂ ಚರ್ಚಿನ ಶಾಲೆ ಸೇರುತ್ತಾನೆ.

ನೋಯೆಯಂತೆ, ಇಬೋಸಮಾಜದ ಒಸು*{*ಇಬೋ ಸಮುದಾಯದಲ್ಲಿ ದೇವರಿಗೆ ಬಿಡಲಾದ ಗಂಡು, ಹೆಣ್ಣುಗಳನ್ನು ಒಸು ಎಂದು ಕರೆಯುತ್ತಿದ್ದರು. ಒಸುಗಳು ಊರ ಹೊರಗೆ ವಾಸಿಸಬೇಕಾಗಿತ್ತು. ಅವರನ್ನು ಗುರುತಿಸಲು ಅವರ ಕಿವಿ ಅಥವಾ ಬೆರಳಿನ ಭಾಗವನ್ನು ಕತ್ತರಿಸುತ್ತಿದ್ದರು. ಇಬೊ ಸಮುದಾಯ ಅವರನ್ನು ಅಸ್ಪೃಶ್ಯರಂತೆ ಕಾಣುತ್ತಿತ್ತು. ಒಸುಗಳ ಅಸ್ಪೃಶ್ಯತೆ ವಂಶಪಾರಂಪರ್ಯವಾಗಿ ಮುಂದುವರಿಯುತ್ತಿತ್ತು.} ಎಂಬ ಅಸ್ಪೃಶ್ಯವರ್ಗಕ್ಕೂ ಚರ್ಚು ಬಿಡುಗಡೆಯ ಹಾದಿಯಾಗಿ ಕಾಣುತ್ತದೆ.

…ಎಲ್ಲರಂತೆ ನೀವು ಕೂಡ ಮನುಷ್ಯರೇ, ನಿಮ್ಮನ್ನು ಕುಷ್ಠರೋಗ ಬಂದವರಂತೆ ಸಮಾಜ ಬಹಿಷ್ಕರಿಸಿಬಿಟ್ಟಿದೆ. ಇದು ತನ್ನನ್ನು ನಂಬಿದ ಎಲ್ಲರೂ ಬದುಕಲೆಂದು ಹಾರೈಸುವ ದೇವರ ಮನಸ್ಸಿಗೆ ವಿರುದ್ಧವಾದದ್ದು

ಎನ್ನುವ ಪಾದ್ರಿಯ ಮಾತು ಈ ಒಸುಗಳಿಗೆ ಹೊಸ ಆತ್ಮವಿಶ್ವಾಸವನ್ನು ಕೊಡುತ್ತದೆ. ಹೀಗೆ ಮತಾಂತರಗೊಂಡ ಒಸುಗಳಲ್ಲೊಬ್ಬ ಇಬೋ ಸಮುದಾಯ ಪೂಜಿಸುವ ದೈವೀ ಹೆಬ್ಬಾವನ್ನು ಕೊಂದು, ಅದುವರೆಗೂ ತನಗೊಂದು ವ್ಯಕ್ತಿತ್ವವೇ ಇಲ್ಲದಂತೆ ಮಾಡಿದ್ದ ಪರಂಪರೆಯ ವಿರುದ್ಧ ಪ್ರತಿಭಟನೆಯನ್ನೂ ವ್ಯಕ್ತಪಡಿಸುತ್ತಾನೆ. ಪಾರಂಪರಿಕ ಸಮಾಜದ ಹಿಂಸೆಯನ್ನು ಆ ಸಮಾಜದೊಳಗೇ ಇದ್ದು ಅನುಭವಿಸಿರುವವರಿಗೆ ಈ ಬಗೆಯಲ್ಲಿ ಪರಂಪರೆಯನ್ನು ಸ್ಫೋಟಿಸುವ ಹಂಬಲ ಹಾಗೂ ಆಧುನಿಕ ಮೌಲ್ಯಗಳನ್ನು ಕುರಿತ ಅತಿಯಾದ ಶ್ರದ್ಧೆ ಹುಟ್ಟುವುದು ಸಹಜ. ಹೀಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಮೊದಲ ತಲೆಮಾರಿನ ಈ ಬಗೆಯ ಸ್ಫೋಟದ ಹಂಬಲ ಕುರಿತು ಬರೆಯುತ್ತಾ, ‘ತಮ್ಮ ಘನತೆಯನ್ನೂ ತಾವು ಮನುಷ್ಯರೆಂಬುದನ್ನೂ ಏಕಾಏಕಿ ಅರಿತುಕೊಂಡ ಶೋಷಿತರ ಮೊದಲ ಪ್ರತಿಕ್ರಿಯೆಯೇ ಭೂತದಲ್ಲಿ ತಮ್ಮನ್ನು ತುಳಿದ ವ್ಯವಸ್ಥೆಯನ್ನು ಛಿದ್ರಗೊಳಿಸುವ ಹಂಬಲ’ ಎನ್ನುತ್ತಾನೆ ಒಬಿಚೀನಾ.

ಪಾರಂಪರಿಕ ನೆಲೆಗಳ ಸ್ಥಿತ್ಯಂತರಕ್ಕೆ, ಆಧುನಿಕತೆ ಬಳಸಬಲ್ಲ ಹಿಂಸಾಮಾರ್ಗ ಅಥವಾ ಅದು ಎತ್ತುವ ಹಲವು ನ್ಯಾಯಬದ್ಧ ಪ್ರಶ್ನೆಗಳಂತೆಯೇ ಆಧುನಿಕತೆಯ ಆರ್ಥಿಕ ಆಯಾಮದ ಆಕರ್ಷಣೆಗಳೂ ಮುಖ್ಯವಾಗಿರುವುದನ್ನು ‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯ ಮುಂದಿನ ಭಾಗಗಳು ಗ್ರಹಿಸುತ್ತವೆ. ದೇಶೀ ಹಾಗೂ ವಿದೇಶೀ ಶಕ್ತಿಗಳ ಮುಖಾಮುಖಿಯ ಮೊದಲ ಘಟ್ಟದ ನಂತರ ಸಾಮಾಜಿಕ ಹಾಗೂ ಆರ್ಥಿಕ ಅಂಶಗಳು ಮಹತ್ವ ಪಡೆಯ ತೊಡಗುತ್ತವೆ. ಆಫ್ರಿಕನ್ ಸಂದರ್ಭದಲ್ಲಿ ವಸಾಹತುಶಾಹಿ ಹಾಗೂ ಕ್ರಿಶ್ಚಿಯನ್ ಧರ್ಮ ದೇಶೀ ಧಾರ್ಮಿಕ ನೆಲೆಗಳ ಮೇಲೆ ದಾಳಿ ಮಾಡಿದ ನಂತರ ಶರವೇಗದಲ್ಲಿ ಬದಲಾವಣೆ ಗಳಾಗಲಾರಂಭಿಸಿದವು ಎಂಬುದನ್ನು ‘ಥಿಂಗ್ಸ್ ಫಾಲ್ ಅಪಾರ್ಟ್’ ಸೂಚಿಸುತ್ತದೆ. ಉಮೋಫಿಯಾದ ಎಷ್ಟೋ ಜನ ಗಂಡಸರು ಹಾಗೂ ಹೆಂಗಸರು ಈ ಹೊಸ ವಿಪತ್ತಿಗೆ ಒಕಾಂಕೋನಂತೆ ಉಗ್ರವಾಗಿ ಪ್ರತಿಕ್ರಿಯಿಸಲಿಲ್ಲ. ‘ಬಿಳಿಯರು ಹುಚ್ಚು ಧರ್ಮವೊಂದನ್ನು ತಮ್ಮೊಡನೆ ತಂದಿದ್ದರು. ನಿಜ. ಆದರೆ ಅವರು ಮಾರುಕಟ್ಟೆಯನ್ನೂ ಅಂಗಡಿಯನ್ನೂ ತಂದಿದ್ದರು. ಮೊದಲ ಬಾರಿಗೆ ತಾಳೆ ಎಣ್ಣೆ ಹಾಗೂ ಕೊಬ್ಬರಿಯ ಬೆಲೆ ಹಿಂದೆಂದೂ ಇಲ್ಲದಂತೆ ಏರತೊಡಗಿತು. ಉಮೋಫಿಯಾಕ್ಕೆ ಹಣ ಹರಿಯತೊಡಗಿತು.’

ಆಧುನಿಕ ಪ್ರಗತಿಯ ಕಲ್ಪನೆ ಕೂಡ ಉಮೋಫಿಯಾದ ಸಾಂಪ್ರದಾಯಿಕರನ್ನು ಆಕರ್ಷಿಸಲಾರಂಭಿಸಿದ್ದ ಈ ಘಟ್ಟದಲ್ಲಿ ಅಭಿವೃದ್ದಿ ಹಾಗೂ ಮಾರುಕಟ್ಟೆಯ ಮಂಪರು ದೇಶೀ ಸಮಾಜವನ್ನು ಕವಿಯತೊಡಗುತ್ತದೆ. ಹೀಗಾಗಿ ಏಳು ವರ್ಷ ಊರಿನಿಂದ ಹೊರಗಿದ್ದ ಉಮೋಫಿಯಾದ ಹೆಮ್ಮೆಯ ಮಗ ಒಕಾಂಕೋ ಮರಳಿ ಬಂದಾಗ ‘ಅವನು ಬಂದದ್ದು ಸುದ್ದಿಯೇ ಆಗಲಿಲ್ಲ. ಹೊಸ ಸರಕಾರ ಹಾಗೂ ಹೊಸ ಧರ್ಮದ ಮಾತೇ ಎಲ್ಲೆಲ್ಲೂ.’ ಹೊಸ ಜಗತ್ತು ದೇಶೀಯರಿಗೆ ಹಲವು ಬಗೆಯಲ್ಲಿ ಆಕರ್ಷಕವಾಗಿ ಕಾಣತೊಡಗುತ್ತದೆ. ಅದು ವಸಾಹತುಕಾರನಿಗೂ ಅಪಾರ ಲಾಭದ ಘಟ್ಟ. ವಸಾಹತೀಕರಣದ ಆರ್ಥಿಕ ಮುಖವನ್ನು ಶೇಕ್ಸ್‌ಪಿಯರ್‌ನ ‘ಟೆಂಪೆಸ್ಟ್’ ನಾಟಕದ ಮೂಲಕ ಚರ್ಚಿಸುತ್ತಾ ನುಗುಗಿ ಹೇಳುವಂತೆ, ಕ್ಯಾಲಿಬನ್‌ನ ದ್ವೀಪವನ್ನು ಬಿಟ್ಟು ಪ್ರಾಸ್ಟರೋ ಹೊರಡದಿರುವುದಕ್ಕೆ ಕ್ಯಾಲಿಬನ್‌ನ ಉಪಯುಕ್ತತೆಯ ಅರಿವು ಅವನಿಗಿರುವುದು ಮುಖ್ಯ ಕಾರಣ. ‘ಕ್ಯಾಲಿಬನ್ ನಮ್ಮ ಒಲೆ ಹೊತ್ತಿಸುತ್ತಾನೆ. ಕಟ್ಟಿಗೆ ತರುತ್ತಾನೆ. ನಮಗೆ ಲಾಭ ತರುವಂಥದ್ದನ್ನೆಲ್ಲ ಮಾಡುತ್ತಾನೆ’ ಎನ್ನುತ್ತಾನೆ ಶೇಕ್ಸ್‌ಪಿಯರ್‌ನ ‘ಟೆಂಪೆಸ್ಟ್’ ನಾಟಕದ ಪ್ರಾಸ್ಟರೋ. ‘ವಸಾಹತುಕಾರ’ನಿಗೆ ವಸಾಹತೀಕರಣಗೊಂಡವನಿಂದ ದಕ್ಕುವ ಲಾಭದ ಆಕರ್ಷಣೆಯಿದ್ದರೆ, ವಸಾಹತೀಕರಣಗೊಂಡವನಿಗೆ ವಸಾಹತುಕಾರ ತರುವ ಹೊಸ ಆರ್ಥಿಕ ಲೋಕದ ಸೆಳೆತವಿರುತ್ತದೆ. ಈ ಹೊಸ ಆರ್ಥಿಕ ಜಗತ್ತು ದೇಶೀ ಆರ್ಥಿಕತೆಯ ಬೆನ್ನು ಮೂಳೆಯನ್ನೇ ಮುರಿಯುವುದರಿಂದಾಗಿ ಶುರವಾಗುವ ಸಾಮೂಹಿಕ ಬಡತನ, ಹಸಿವು, ನಿರುದ್ಯೋಗಗಳು ಒಂದೆಡೆಯಿದ್ದರೆ, ಇನ್ನೊಂದೆಡೆ ಕೆಲವು ದೇಶೀವರ್ಗಗಳಿಗೆ ಹೊಸ ಗಳಿಕೆಯ ಸಾಧ್ಯತೆಗಳು ತೆರೆಯುತ್ತವೆ. ಈ ವರ್ಗ ವಸಾಹತುವಾದವನ್ನು ಬೆಂಬಲಿಸಿದ್ದರೆ ಆಶ್ಚರ್ಯವಲ್ಲ. ಚಿನುವ ಅಚೀಬೆಯ ‘ಆರೋ ಆಫ್ ಗಾಡ್’ ಕಾದಂಬರಿ ಕೂಡ ಸಂಪತ್ತು, ಹೊಸ ಜ್ಞಾನ, ಹೊಸ ಉದ್ಯೋಗಗಳು ಹಾಗೂ ಅಧಿಕಾರಗಳ ಮೂಲಕ ಆಧುನಿಕ ಲೋಕ ದೇಶೀಯರಿಗೆ ಆಕರ್ಷಕವಾಗಿ ಕಾಣುವುದನ್ನು ಚಿತ್ರಿಸುತ್ತದೆ. ಈ ಕಾದಂಬರಿಯ ನಾಯಕ ಎಝೆುಲುವಿನ ಮಗ ಒಡುಚೆಗೆ ತಾನು ‘ವೆಸ್ಟ್ ಇಂಡೀಸಿನ ಪಾದ್ರಿ ಬ್ಲಾಕೆಟ್‌ನ ಜ್ಞಾನದಲ್ಲಿ ಹತ್ತನೇ ಒಂದು ಭಾಗವನ್ನು ಪಡೆದರೂ ಸಾಕು, ಉಮುವಾರೋದಲ್ಲಿ ದೊಡ್ಡ ಮನುಷ್ಯನಾಗಬಲ್ಲೆ’ ಎಂಬುದೇ ಪ್ರಧಾನ ಆಕರ್ಷಣೆ. ಹಾಗೆಯೇ ‘ಥಿಂಗ್ಸ್ ಫಾಲ್ ಅಪಾರ್ಟ್’ನ ಉಮೋಫಿ ಯಾದಲ್ಲೂ ಹೊಸ ಶಾಲೆ ಹಾಗೂ ಆಸ್ಪತ್ರೆಗಳು ಜನರ ಕಣ್ಣಿಗೆ ಆಕರ್ಷಕವಾಗಿ, ಲಾಭದಾಯಕವಾಗಿ ಕಾಣತೊಡಗುತ್ತವೆ: ‘ಬರಬರುತ್ತಾ, ಬಿಳಿಯ ಮನುಷ್ಯ ಕೊಡುವ ಔಷಧಿ ಬಹಳ ಬೇಗ ಖಾಯಿಲೆಯನ್ನು ವಾಸಿ ಮಾಡುತ್ತದೆ ಎಂದು ಜನ ಮಾತಾಡಿಕೊಳ್ಳ ತೊಡಗಿದರು. ಬ್ರೌನ್ ನಡೆಸುತ್ತಿದ್ದ ಶಾಲೆ ಕೂಡ ಬಲು ಬೇಗ ಹೊಸ ಅವಕಾಶಗಳನ್ನು ತರತೊಡಗಿತು. ಆ ಶಾಲೆಯಲ್ಲಿ ಏಳೆಂಟು ತಿಂಗಳು ಕಲಿತವರೆಲ್ಲಾ ಕೋರ್ಟಿನ ಅಮೀನರಾದರು, ಅಷ್ಟೇ ಏಕೆ, ಕೋರ್ಟಿನ ಗುಮಾಸ್ತರೂ ಆಗತೊಡಗಿದರು. ಆ ಶಾಲೆ ಯಲ್ಲೇ ಹೆಚ್ಚು ವರ್ಷ ಉಳಿದುಕೊಂಡವರು ಉಪಾಧ್ಯಾಯರುಗಳಾಗಿಬಿಟ್ಟರು. ಉಮೋಫಿ ಯಾದ ಕೂಲಿಕಾರರು(ಕ್ರಿಶ್ಚಿಯನ್)ದೇವರ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡಲು ಹೋಗಲಾರಂಭಿಸಿದರು.’

ಹೀಗೆ ಶಿಕ್ಷಣ, ಧಾರ್ಮಿಕ ಸಂಸ್ಥೆಗಳ ಜೊತೆಗೆ ಹೊಸ ಅಂತಸ್ತಿನ ಕಲ್ಪನೆಯ ಮೂಲಕವೂ ಆಧುನಿಕತೆ ಪಾರಂಪರಿಕ ಸಮಾಜದ ಆಳಕ್ಕಿಳಿಯಲು ಒಳದಾರಿಗಳನ್ನು ಹುಡುಕಿಕೊಳ್ಳುತ್ತದೆ. ಸಾಂಪ್ರದಾಯಿಕ ಉಮೋಫಿಯಾದ ನಿಷ್ಪ್ರಯೋಜಕರಿಗೆ ಹೊಸ ವ್ಯವಸ್ಥೆ ಪ್ರಾಮುಖ್ಯತೆ ತಂದುಕೊಟ್ಟದ್ದನ್ನು ಗಮನಿಸಿದರೆ, ಆಧುನಿಕತೆ ಆಕರ್ಷಣೆಯ ಅರಿವಾಗುತ್ತದೆ.

ಇಂಥ ಆಕರ್ಷಣೆಗಳು ಪರಂಪರೆಯ ವಿಘಟನೆಗೆ ಹಾದಿ ಮಾಡಿಕೊಡುವಂತೆ, ಆಧುನಿಕತೆ ಎತ್ತುವ ಕೆಲವು ಮುಖ್ಯ ಪ್ರಶ್ನೆಗಳನ್ನು ಅರಗಿಸಿಕೊಳ್ಳಲಾಗದ, ಗ್ರಹಿಸಲಾರದ ಪರಂಪರೆಯ ಅಸಾಮರ್ಥ್ಯ ಹಾಗೂ ಮೊಂಡುತನ ಕೂಡ ಪರಂಪರೆಯ ವಿಘಟನೆಗೆ ಹಾದಿ ಮಾಡಿಕೊಡು ತ್ತದೆ. ತನ್ನ ಬಗೆಗೆ ಅತಿಯಾದ ಆತ್ಮವಿಶ್ವಾಸವುಳ್ಳ ಈ ಸಮಾಜ ಆತ್ಮವಿಮರ್ಶೆಯ ಬಲವಿಲ್ಲದ ಕಾರಣದಿಂದಾಗಿಯೂ ಕುಸಿಯುತ್ತದೆ.

‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿ ಸೂಚಿಸುವ ಮತ್ತೊಂದು ಅಂಶವೆಂದರೆ, ಆಧುನಿಕ ಶಕ್ತಿಗಳ ಆಗಮನದ ಮಾರಕ ಪರಿಣಾಮದಿಂದ ಉಂಟಾಗುವ ಸಾಮುದಾಯಿಕ ಐಕ್ಯತೆಯ ಹಾಗೂ ಸಾಮುದಾಯಿಕ ದನಿಯ ನಿರ್ನಾಮ. ಈ ಬೆಳವಣಿಗೆಯನ್ನು ‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯ ಕೊನೆಯ ಭಾಗದಲ್ಲಿ ಒಬಿರಿಕಾ ವಿವರಿಸುತ್ತಾನೆ: ‘…ಆದರೆ ಅವನು(ಬಿಳಿಯ ಮನುಷ್ಯ) ಹೇಳುತ್ತಾನೆ-‘ನಮ್ಮ ಪದ್ಧತಿಗಳೆಲ್ಲ ಕೆಟ್ಟವು’ ಎಂದು. ಅವನ ಧರ್ಮಕ್ಕೆ ಸೇರಿದ ನಮ್ಮಣ್ಣ ತಮ್ಮಂದಿರು ಕೂಡ ನಮ್ಮ ಸಂಪ್ರದಾಯಗಳೆಲ್ಲ ಕೆಟ್ಟವೆಂದು ಹೇಳುತ್ತಾರೆ. ನಮ್ಮ ಅಣ್ಣತಮ್ಮಂದಿರೇ ನಮ್ಮ ವಿರುದ್ಧ ತಿರುಗಿಬಿದ್ದಿರುವಾಗ ನಾವು ಹೋರಾಡುವುದಾದರೂ ಹೇಗೆ? ಬಿಳಿಯ ಮನುಷ್ಯ ಬಲೇ ಜಾಣ. ಅವನು ಸದ್ದುಮಾಡದೆ, ಪ್ರಶಾಂತ ಮುಖ ಹೊತ್ತು ತನ್ನ ಧರ್ಮದೊಂದಿಗೆ ಬಂದ. ನಾವು ಅವನ ಮೂರ್ಖತನ ಕಂಡು ನಕ್ಕೆವು. ಇಲ್ಲೇ ಇರಲು ಬಿಟ್ಟೆವು. ಈಗ ಅವನು ನಮ್ಮಣ್ಣ ತಮ್ಮಂದಿರನ್ನು ಗೆದ್ದುಕೊಂಡಿದ್ದಾನೆ. ಇನ್ನು ನಮ್ಮ ಸಮುದಾಯ ಒಂದಾಗಿರುವುದು ಸಾಧ್ಯವೇ ಇಲ್ಲ. ನಮ್ಮನ್ನು ಒಂದಾಗಿ ಹಿಡಿದಿಟ್ಟಿದ್ದ ಕೊಂಡಿಗಳ ಮೇಲೆ ಅವನು ಚೂರಿ ಇಟ್ಟ. ನಾವು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದೇವೆ.’

‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯಲ್ಲಿ ಆರಂಭದ ಭಾಗಗಳಲ್ಲಿ ಕಾಣುವ ಸಮುದಾಯದ ಸಭೆಗಳಿಗೂ ಆನಂತರದ ಸಭೆಗಳಿಗೂ ಇರುವ ವ್ಯತ್ಯಾಸವನ್ನು ಗಮನಿಸಿದರೆ, ಆಧುನಿಕತೆಯ ಪ್ರವೇಶದ ನಂತರ ಈ ಸಮುದಾಯಗಳು ಪಾರಂಪರಿಕ ಅರ್ಥದಲ್ಲಿ ಸಮುದಾಯಗಳಾಗಿ ಉಳಿದಿಲ್ಲವೆಂಬುದರ ಅರಿವಾಗುತ್ತದೆ. ಆದ್ದರಿಂದಲೇ ಸಾಮುದಾಯಿಕ ಐಕ್ಯತೆಯ ನಿರ್ನಾಮ ಕುರಿತ ದಿಗ್ಭ್ರಮೆ ‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯಲ್ಲೂ ದಟ್ಟವಾಗಿದೆ. ಸಮುದಾಯದ ಹಿರಿಯನೊಬ್ಬ ಹೇಳುತ್ತಾನೆೊ:

ಒಕ್ಕೊರಲಿನಿಂದ ಮಾತಾಡುವುದೆಂದರೇನೆಂದು ಈ ಕಾಲದ ಹುಡುಗರಿಗೆ ಗೊತ್ತೇ ಇಲ್ಲ. ಇದರ ಪರಿಣಾಮವೇನೆಂದು ಗಮನಿಸಿದ್ದೀರಾ? ಹೇಸಿಗೆ ಹುಟ್ಟಿಸುವ ಧರ್ಮವೊಂದು ಬಂದು ನಿಮ್ಮ ನಡುವೆ ನೆಲೆಸಿಬಿಟ್ಟಿದೆ. ಹುಚ್ಚು ಹಿಡಿದ ಬೇಟೆನಾಯಿ ಬೇಟೆಗಾರನ ಮೇಲೇ ಎರಗುವಂತೆ ಮನುಷ್ಯ ಈಗ ತನ್ನ ತಂದೆಯನ್ನೂ ಅಣ್ಣತಮ್ಮಂದಿರನ್ನೂ ಬಿಟ್ಟು ಹೋಗಬಹುದು. ತನ್ನ ಹಿರೀಕರ ದೇವರುಗಳನ್ನೇ ಈಗ ಧಿಕ್ಕರಿಸಬಹುದಂತೆ. ನಿಮ್ಮ ಸ್ಥಿತಿ ಕಂಡು ನನಗೆ ಕಳವಳವಾಗುತ್ತಿದೆ. ಸಮುದಾಯದ ಸ್ಥಿತಿ ನೆನೆಸಿಕೊಂಡರೆ ನಡುಕ ಹುಟ್ಟುತ್ತದೆ.

ಉಮೋಫಿಯಾದ ಒಕ್ಕೊರಲಿನ ಧ್ವನಿ ಹಾಗೂ ಸಾಮುದಾಯಿಕ ಐಕ್ಯತೆ ಕಾದಂಬರಿಯ ಪೂರ್ವಾರ್ಧದಲ್ಲಿರುವಂತೆ ಉತ್ತರಾರ್ಧದಲ್ಲಿ ಇಲ್ಲದಿರುವುದು ನಿರೂಪಣಾ ಶೈಲಿಯಲ್ಲಿಯೂ ಸೂಚಿತವಾಗುವುದನ್ನು ಡೇವಿಡ್ ಕ್ಯಾರೊಲ್ ಗುರುತಿಸುತ್ತಾನೆ:

ಕ್ರಿಶ್ಚಿಯನ್ ಧರ್ಮದ ಆಗಮನದೊಂದಿಗೆ ಹಾಗೂ ಕ್ರಮೇಣ ಅದು ಇಬೋ ಸಮಾಜವನ್ನು ಆಕ್ರಮಿಸಿಕೊಳ್ಳುವುದರೊಂದಿಗೆ ಸಮುದಾಯದ ಸಭೆಗಳು ವಿರಳವಾಗುತ್ತಾ ಹೋಗುತ್ತವೆ. ನಡೆಯುವ ಸಭೆಗಳಲ್ಲಿ ಒಮ್ಮತದ ಅಭಿಪ್ರಾಯಗಳೂ ಕಡಿಮೆಯಾಗುತ್ತಾ ಹೋಗುತ್ತವೆ. ಉಮೋಫಿ ಯಾದ ಮೊದಲ ದಿನಗಳನ್ನು ಕುರಿತು ಅಧಿಕಾರವಾಣಿಯಿಂದ, ಆತ್ಮ ವಿಶ್ವಾಸದಿಂದ, ಸಹಾನುಭೂತಿಯಿಂದ ವರ್ಣಿಸುತ್ತಿದ್ದ ನಿರೂಪಕ ದನಿ ಬರುಬರುತ್ತಾ ಆತ್ಮವಿಶ್ವಾಸ ಕಳೆದುಕೊಂಡಂತೆ, ವಿಭಿನ್ನ ಗುಂಪುಗಳ ಅಭಿಪ್ರಾಯಗಳನ್ನು ಸುಮ್ಮನೆ ವರದಿ ಮಾಡಲಾರಂಭಿಸುತ್ತದೆ.

‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯ ಕೊನೆಯಲ್ಲಿ ವಸಾಹತು ಶಕ್ತಿಗಳ ವ್ಯಾಪಕ ನಿಯಂತ್ರಣದ ಸ್ವರೂಪವನ್ನು ಅರಿಯಲಾಗದ ಕಾದಂಬರಿಯ ನಾಯಕ ಒಕಾಂಕೋ ಅತಿ ಆತ್ಮವಿಶ್ವಾಸದಿಂದಾಗಿ ದುಡುಕುತ್ತಾನೆ. ಉಮೋಫಿಯಾ ಗ್ರಾಮದ ಸಭೆಯನ್ನು ನಿಲ್ಲಿಸುವಂತೆ ವಸಾಹತು ಕೋರ್ಟಿನ ಆದೇಶವನ್ನು ತಂದ ಓಲೆಕಾರನ ತಲೆಯನ್ನು ತನ್ನ ಕತ್ತಿಯಿಂದ ಕಡಿದು ಹಾಕುತ್ತಾನೆ. ತನ್ನ ಸಮುದಾಯ ತನ್ನ ಕ್ರಿಯೆಯನ್ನು ಬೆಂಬಲಿಸುತ್ತದೆ ಹಾಗೂ ವಸಾಹತು ಶಕ್ತಿಗಳ ವಿರುದ್ಧ ಯುದ್ಧ ಹೂಡುತ್ತದೆ ಎಂಬುದು ಒಕಾಂಕೋನ ನಿರೀಕ್ಷೆಯಾಗಿತ್ತು. ಆದರೆ ಒಕಾಂಕೋನ ನಿರೀಕ್ಷೆ ಹುಸಿಯಾಗುತ್ತದೆ. ಸಮುದಾಯ ತನ್ನ ಹೋರಾಟದ ಶಕ್ತಿಯನ್ನು ಕಳೆದುಕೊಂಡಿದೆ. ವಸಾಹತುವಾದಿ ಶಕ್ತಿಗಳ ವಿರುದ್ಧ ಹೋರಾಡುವಲ್ಲಿ ತನ್ನ ಬೆನ್ನಿಗೆ ನಿಲ್ಲಲು ಹಿಂಜರಿಯುವ ತನ್ನ ಸಮಾಜದ ಧೋರಣೆಯಿಂದ ಜಿಗುಪ್ಸೆಗೊಂಡು ಒಕಾಂಕೋ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಒಕಾಂಕೋನ ಸಾವನ್ನು ಕುರಿತು ಅವನ ಗೆಳೆಯ ಒಬಿರಿಕಾ, ಬಿಳಿಯ ಅಧಿಕಾರಿಗೆ ಹೇಳುವ ಮಾತಿದು:

ಈತ ಉಮೋಫಿಯಾದ ದೊಡ್ಡ ವ್ಯಕ್ತಿಗಳಲ್ಲೊಬ್ಬನಾಗಿದ್ದ. ನೀವು ಅವನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿಬಿಟ್ಟಿರಿ. ನಾವೀಗ ಅವನನ್ನು ನಾಯಿಯಂತೆ ಹೂಳಬೇಕಾಗಿದೆ.

ಯಾವ ಭೂತಾಯಿ ಹಾಗೂ ಸಮುದಾಯವನ್ನೂ ಅವುಗಳ ಮೌಲ್ಯಗಳನ್ನೂ ರಕ್ಷಿಸಲು ಒಕಾಂಕೋ ರಣೋತ್ಸಾಹದಿಂದ ಸದಾ ಮುನ್ನುಗ್ಗುತ್ತಿದ್ದನೋ ಅಂಥ ಭೂತಾಯಿ ಹಾಗೂ ಸಮುದಾಯಗಳೆರಡರಿಂದಲೂ ಆತ್ಮಹತ್ಯೆಯ ಕಳಂಕದಿಂದಾಗಿ ಇಂದು ಅವನು ತಿರಸ್ಕೃತನಾಗಿದ್ದಾನೆ. ಸಮುದಾಯದಿಂದ ಬಹಿಷ್ಕೃತರಾದವರನ್ನು ಹೂಳಲಾಗುವ ಕೇಡಿನ ಕಾಡಿನಲ್ಲಿ ಸಮುದಾಯದ ನಾಯಕನಾದ ಒಕಾಂಕೋನನ್ನು ಹೂಳಬೇಕಾದ ಅವಮಾನಕರ ಸ್ಥಿತಿಯನ್ನು ವಸಾಹತು ಶಕ್ತಿಗಳು ಸೃಷ್ಟಿಸಿಬಿಟ್ಟಿವೆ. ಆದರೆ, ಇಡೀ ಸಮುದಾಯದ ಈ ದಿಗ್ಭ್ರಮೆಯ ಅರಿವೇ ಇಲ್ಲದ ವಸಾಹತುಕಾರನ ನಿರ್ಲಿಪ್ತ ‘ಸಮಾಜಶಾಸ್ತ್ರೀಯ’ ದೃಷ್ಟಿ ಕೋನ ಬಿಂಬಿಸುವ ಕ್ರೌರ್ಯ ಕಾದಂಬರಿಯ ಕೊನೆಯಲ್ಲಿದೆ. ಒಬಿರಿಕಾ ಸೂಚಿಸುತ್ತಿರುವ ದುರಂತದ ಪ್ರಜ್ಞೆಯೇ ತಟ್ಟದ ಜಿಲ್ಲಾಧಿಕಾರಿ, ತೂಗಾಡುವ ಹೆಣವನ್ನಿಳಿಸಲು ತನ್ನ ಸೇವಕರಿಗೆ ಹೇಳಿ, ಹೆಣವನ್ನೂ ಅಲ್ಲಿರುವ ಜನರನ್ನೂ ಕೋರ್ಟಿಗೆ ಹಾಜರುಪಡಿಸಲು ಹೇಳುತ್ತಾನೆ. ಕಾದಂಬರಿಯ ಕೊನೆಯ ಕೆಲವು ಸಾಲುಗಳಿವು:

ಆಫ್ರಿಕಾಕ್ಕೆ ನಾಗರಿಕತೆ ತರಹೊರಟ ತನ್ನ ಹಲವು ವರ್ಷಗಳ ಸಾಹಸದಲ್ಲಿ(ಆ ಜಿಲ್ಲಾಧಿಕಾರಿ) ಹಲವು ಪಾಠಗಳನ್ನು ಕಲಿತಿದ್ದ. ಅದರಲ್ಲೊಂದೆಂದರೆ, ಮರಕ್ಕೆ ನೇಣುಹಾಕಿಕೊಂಡ ಮನುಷ್ಯರನ್ನು ಕೆಳಗಿಳಿಸುವಂಥ ಕ್ಷುಲ್ಲಕ ವಿಚಾರಗಳಿಗೆ ಜಿಲ್ಲಾಧಿಕಾರಿಯೊಬ್ಬ ತಲೆಹಾಕಬಾರದೆಂಬುದು. ಇಂಥ ವಿಚಾರಗಳಲ್ಲಿ ತಲೆ ಹಾಕುವುದೆಂದರೆ ಸ್ಥಳೀಯರ ದೃಷ್ಟಿಯಲ್ಲಿ ಅವನು ಕೆಳಗಿಳಿದಂತೆಯೇ. ತಾನು ಮುಂದೆ ಬರೆಯಲಿರುವ ಪುಸ್ತಕದಲ್ಲಿ ಈ ಅಂಶಕ್ಕೆ ಒತ್ತು ಕೊಡಬೇಕೆಂದುಕೊಂಡ. ಆವತ್ತು ಕೋರ್ಟಿಗೆ ಹೋಗುವ ದಾರಿಯಲ್ಲಿ, ತಲೆಯ ತುಂಬಾ ಆ ಪುಸ್ತಕದ ವಿಷಯವೇ. ಪ್ರತಿದಿನ ಒಂದಲ್ಲ ಒಂದು ಇಂಥ ಸರಕು ಸಿಗುತ್ತಲೇ ಇತ್ತು. ಸರಕಾರದ ಸಂದೇಶ ತಂದವನನ್ನು ಕೊಂದು ತಾನೂ ನೇಣು ಹಾಕಿಕೊಂಡ ಈ ಮನುಷ್ಯನ ಕತೆ ಓದಲು ರೋಚಕವಾಗಿರಬಲ್ಲದು. ಇದರ ಬಗೆಗೆ ಒಂದು ಅಧ್ಯಾಯವನ್ನೇ ಬರೆಯಬಹುದೇನೋ. ಇಲ್ಲ. ಪ್ರಾಯಶಃ ಒಂದು ಒಳ್ಳೆಯ ಪ್ಯಾರಾದಷ್ಟು ಸಾಕೇನೋ. ಹೀಗೇ ಬರೆಯುತ್ತಾ ಹೋದರೆ, ಏನೇನೆಲ್ಲಾ ವಿವರಗಳನ್ನು ಸೇರಿಸಬೇಕಾಗುತ್ತದೆ. ವಿವರಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಬೇಕು. ಅವನ ಮನಸ್ಸಿನಲ್ಲಾಗಲೇ ಪುಸ್ತಕದ ಶೀರ್ಷಿಕೆಯೂ ಸಿದ್ಧವಾಗಿಬಿಟ್ಟಿತ್ತು: ಕೆಳ ನೈಜಿರ್ ಪ್ರದೇಶದ ಆದಿವಾಸಿ ಬುಡಕಟ್ಟುಗಳನ್ನು ಪಳಗಿಸಿದ ಕತೆ.

ಈ ವ್ಯಂಗ್ಯಾತ್ಮಕ ಭಾಗದಲ್ಲಿ ಯುರೋಪು ಆಫ್ರಿಕಾವನ್ನು ಕಾದಂಬರೀಕರಿಸಿದ ಕ್ರಮವನ್ನೂೊಅಚೀಬೆೊಟೀಕಿಸುತ್ತಾನೆ. ಡೇವಿಡ್ ಕ್ಯಾರೊಲ್ ಗುರುತಿಸುವಂತೆ ಈ ಜಿಲ್ಲಾಧಿಕಾರಿ ಈಗಾಗಲೇ ಯುರೋಪಿಯನ್ ಕಾದಂಬರಿಗಳಲ್ಲಿ ಕಾಣಿಸಿಕೊಂಡಿದ್ದ ಇಂಗ್ಲಿಷ್ ಸಾಹಸಿಗಳು, ಆಡಳಿತಗಾರರು, ಮಿಷನರಿಗಳ ಪ್ರತಿರೂಪ. ಈ ವರ್ಗ ಆಫ್ರಿಕಾಕ್ಕೆ ಬಂದ ಮುಖ್ಯ ಉದ್ದೇಶಗಳಲ್ಲೊಂದೆಂದರೆ ತಮ್ಮ ಕಲ್ಪನೆಯಲ್ಲಿ ಚಿತ್ರಿತವಾಗಿದ್ದ ಆಫ್ರಿಕಾವನ್ನು ಕಾಣುವುದು. ಆದ್ದರಿಂದಲೇ ಈ ಆಧುನಿಕ ಕಣ್ಣಿಗೆ ಒಕಾಂಕೋನ ದುರಂತ ‘ಆದಿವಾಸಿಗಳು ಪಳಗುತ್ತಿರುವ’ ಸೂಚನೆಯಂತೆ ಕಾಣುತ್ತದೆ. ವಸಾಹತುವಾದ ದೇಶೀಯರನ್ನು ಮಾತ್ರವಲ್ಲದೆ, ವಸಾಹತು ಕಾರರನ್ನೂ ನಿರ್ಮಾನವೀಕರಣಗೊಳಿಸುವುದು ಹೀಗೆ. ಒಕಾಂಕೋನ ದುರಂತ ಹಾಗೂ ಆಫ್ರಿಕಾದ ಇಬೋ ಸಂಸ್ಕೃತಿಯ ದುರಂತ ಒಬ್ಬ ಬಿಳಿಯ ಜಿಲ್ಲಾಧಿಕಾರಿಗೆ ತನ್ನ ಪುಸ್ತಕಕ್ಕೊಂದು ಒಳ್ಳೆಯ ಪ್ಯಾರಾ ಆಗಿ ಕಾಣುವ ಈ ಧೋರಣೆಯಲ್ಲಿ ವಸಾಹತುಕಾರ ಆರಂಭಿಸಿದ ನಾಗರೀಕರಣದ ಯುದ್ಧ ಹೇಗೆ ವಸಾಹತುಕಾರನನ್ನೂ ನಿರ್ನಾಗರೀಕರಣ ಗೊಳಿಸಲಾರಂಭಿಸಿತ್ತು ಎಂಬುದರ ಸೂಚನೆಯಿದೆ.