ಕನ್ನಡ ವಿಶ್ವವಿದ್ಯಾಲಯದ ಮುಖ್ಯ ಉದ್ದೇಶ ವಿದ್ಯೆಯನ್ನು ಕಲಿಯಲು ಅನುವು ಮಾಡಿಕೊಡುವುದೇ ಹೊರತುೊಅದುೊವಿದ್ಯೆಯನ್ನು ಕಲಿಸುವ ಸಂಸ್ಥೆಯಲ್ಲ ಎನ್ನುವ ಸಂಸ್ಥಾಪನ ಕುಲಪತಿಗಳಾದ ಡಾ.ಚಂದ್ರಶೇಖರ ಕಂಬಾರ ಆಶಯದಂತೆ ಸಂಸ್ಥೆಯು ಇದುವರೆಗೆ ಕನ್ನಡದ ಜೊತೆ ಅಂತಾರಾಷ್ಟ್ರೀಯ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ ಗಟ್ಟಿಗೊಳಿಸುವ ಹರಡುವ ಕಾರ್ಯವನ್ನು ಕಳೆದ ಹತ್ತೊಂಬತ್ತು ವರ್ಷಗಳಿಂದ ಕೈಗೊಳ್ಳುತ್ತ ಬರುತ್ತಿದೆ. ಈ ಕಾರ್ಯದಲ್ಲಿ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗ ತನ್ನದೆಯಾದ ಛಾಪು ಮೂಡಿಸಿದೆ. ವಿಭಾಗದ ಪ್ರಾಧ್ಯಾಪಕರಾದ ಪ್ರೊ.ತಂಬಂಡ ವಿಜಯ್ ಪೂಣ್ಣಚ್ಚ ಅವರ ಸಂಪಾದಕತ್ವದಲ್ಲಿ ಹಾಗೂ ಡಾ.ಸಿ.ಆರ್.ಗೋವಿಂದರಾಜು, ಡಾ.ಕೆ.ಮೋಹನ್‌ಕೃಷ್ಣ ರೈ ಹಾಗೂ ಡಾ.ಎನ್. ಚಿನ್ನಸ್ವಾಮಿ ಸೋಸಲೆ ಅವರ ಸಹ ಸಂಪಾದಕತ್ವದಲ್ಲಿಹೊರಬಂದ ಚರಿತ್ರೆ ವಿಶ್ವಕೋಶ ಈ ದೃಷ್ಟಿಯಲ್ಲಿ ಒಂದು ಮಹತ್ವದ ಕೃತಿ. ಈ ಕೃತಿ ಕರ್ನಾಟಕದ ವಿವಿಧ ಸಂಶೋಧಕರು ಹಾಗೂ ಅಧ್ಯಯನ, ಅಧ್ಯಾಪಕರಿಗೆ ಒಂದು ಮಹತ್ವದ ಸಂಶೋಧನಾ ಕೃತಿಯಾಗಿ ಮೂಡಿತು. ಮುಖ್ಯವಾಗಿ ಈ ಕೃತಿ ಚರಿತ್ರೆ ಎಂದರೆ ಕೇವಲ ಮಾಹಿತಿಯನ್ನು ಸಂಗ್ರಹಿಸುವುದೇ ಅಲ್ಲ, ಸಂಗ್ರಹಿಸಿದ ಮಾಹಿತಿಯನ್ನು ಲೋರ್ಕಾಪಣೆ ಮಾಡಿ ಆ ಮೂಲಕ ಜನಮುಖಿ ಚರಿತ್ರೆಯನ್ನು ಬಹು ವಿಸ್ತೃತವಾಗಿ ನೋಡುವ ವಿಧಾನವನ್ನು ಮನಗಾಣಿಸಿತು.

ಇಂದು ಚರಿತ್ರೆಯು ಮನುಷ್ಯನ ಮೂಲಕ ಹುಟ್ಟಿ ಅವನ ಮೂಲಕವೇ ಎಲ್ಲ ಸ್ಥಿತಿ ಸತ್ಯಗಳ ವಿವರಗಳ ಗ್ರಹಿಕೆಯಿಂದ ನಿರಂತರ ವಿಕಾಸವಾಗುತ್ತಲೇ ನಾಳಿನ ಎಚ್ಚರಗಳನ್ನೂ, ನಿನ್ನೆಯ ನೆನಪುಗಳನ್ನು ಸದ್ಯದ ಸಾಮಾಜಿಕ ಸತ್ಯಗಳನ್ನು ನಿರೂಪಿಸುವ ಸಮಷ್ಟಿಯಾದ ಕಾಲ ದೇಶ ಸಮುದಾಯಗಳ ಒಂದು ವಿಸ್ತಾರ ಕಥನವೆನ್ನಿಸಿಕೊಳ್ಳುತ್ತದೆ. ಏಕೆಂದರೆ ಈ ನಿರ್ವಚನ ಕಥನವು ತನ್ನ ಕಾಲಕ್ಕನುಗುಣವಾಗಿ ಮನುಷ್ಯನ ಎಲ್ಲ ಜೀವಂತ ಮಾಹಿತಿಯನ್ನು ನೆನೆಯುವುದರ ಜೊತೆಗೆ ಸಂಯೋಜಿಸುತ್ತ ತನ್ನ ಅಗತ್ಯಗಳನ್ನು ಚರಿತ್ರೆಯಲ್ಲಿ ಪುನರ್ ಸೃಷ್ಟಿಸಿಕೊಳ್ಳುತ್ತದೆ. ಒಂದರ್ಥದಲ್ಲಿ ಆಧುನಿಕ ಜಗತ್ತಿನ ಇತಿಹಾಸವೆಂದರೆ ಇದೇ. ಆಫ್ರಿಕಾದ ಚರಿತ್ರೆಯ ವಿವಿಧ ಆಯಾಮಗಳ ಸಂದರ್ಭದಲ್ಲಿ ಇಂಥ ಅಧ್ಯಯನಗಳು ಹೆಚ್ಚಾಗಿ ನಡೆಯಬೇಕಾಗಿದೆ. ಈ ದೃಷ್ಟಿಯಿಂದ ಕೆಲವು ಆಯ್ದ ಮಹತ್ವದ ವಿಷಯಗಳನ್ನು ಕೇಂದ್ರೀಕರಿಸಿ ಈ ಕೃತಿಯನ್ನು ಹೊರತರಲಾಗಿದೆ. ಆಫ್ರಿಕಾದ ಚರಿತ್ರೆ ಬಗ್ಗೆ ತಿಳಿಯ ಬಯಸುವ ಕನ್ನಡ ಓದುಗರಿಗೆ ಅದರಲ್ಲಿಯೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗ ಬಹುದೆಂದು ಭಾವಿಸಲಾಗಿದೆ.

ಪ್ರಸ್ತುತ ಸಂಪುಟವು ಈ ಸಂಕಲನ ಕೃತಿಯು ಚರಿತ್ರೆ ಹಾಗೂ ಸಮಕಾಲೀನ ಆಯಾಮಗಳ ಕುರಿತು ಒಂದು ಮಹದ್ದರ್ಶನವನ್ನು ಕಟ್ಟಿಕೊಡುತ್ತದೆ. ಇಲ್ಲಿಯ ಈಜಿಪ್ಪಿನ ನಾಗರಿಕತೆ, ಪ್ರಾಚೀನ ಕಾಲದಿಂದ ಯುರೋಪಿಯನ್ನರ ಆಗಮನದವರೆಗೆ ಸಂಸ್ಕೃತಿ ಮತ್ತು ನಾಗರಿಕತೆ, ಆಫ್ರಿಕಾ ಸಾಂಸ್ಕೃತಿಕ ದ್ವಂದ್ವ, ಆಫ್ರಿಕಕ್ಕಾಗಿ ಕಿತ್ತಾಟ, ವಸಹಾತುಶಾಹಿತ್ವ ಮತ್ತು ರಾಷ್ಟ್ರೀಯ ಚಳವಳಿ, ಎರಡನೇ ಮಹಾಯುದ್ಧದ ನಂತರ ಆಫ್ರಿಕಾ ಹಾಗೂ ಸಮಕಾಲೀನ ಆಫ್ರಿಕಾ ಎಂಬ ಮಹತ್ವದ ವಿಷಯಗಳಿಗೆ ಸಂಬಂಧಿಸಿದ ಐತಿಹಾಸಿಕ ಹಾಗೂ ಚಾರಿತ್ರಿಕ ಅಂಶಗಳನ್ನು ಹೊರಚೆಲ್ಲುವ ಲೇಖನಗಳು ಓದುಗರ ಹಾಗೂ ಸಂಶೋಧಕರ ಕುತೂಹಲ ಹಾಗೂ ಆಫ್ರಿಕಾದ ಸಮಾಜವನ್ನು ಪರಿಭಾವಿಸುವ ಕ್ರಮಗಳ ಜೊತೆಗೆ, ಸಂಭ್ರಮ ಆಶ್ಚರ್ಯಗಳನ್ನು ನೀಡುತ್ತವೆ. ಈ ದೃಷ್ಟಿಯಿಂದ ಇವು ಮಹತ್ವದ ಲೇಖನಗಳಾಗಿವೆ.

ಜಗತ್ತಿನ ಏಳು ಖಂಡಗಳಲ್ಲಿ ಆಫ್ರಿಕಾ ಅತ್ಯಂತ ದೊಡ್ಡದಾದ ಎರಡನೆಯ ಖಂಡ. ಭೌಗೋಳಿಕ ಹಾಗೂ ಜನಾಂಗೀಯ ವೈವಿಧ್ಯತೆ ಇಲ್ಲಿನ ಇತಿಹಾಸದ ಮೇಲೆ ಪ್ರಭಾವ ಬೀರಿದೆ. ಇಲ್ಲಿನ ಜನರು ಬಹಳಷ್ಟು ನೀಗ್ರೋಯಿಡ್ ಮಾದರಿಯವರಾಗಿದ್ದಾರೆ. ಆಫ್ರಿಕಾ ಖಂಡದ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದ ಕಾರಣ ಇದನ್ನು ಕಗ್ಗತ್ತಲೆಯ ಭೂಭಾಗವೆಂದು ಚರಿತ್ರೆಯಲ್ಲಿ ಕರೆಯಲಾಗಿತ್ತು. ಆದರೆ ಆಫ್ರಿಕಾ ಖಂಡವು ತನ್ನದೇ ಆದ ದೀರ್ಘವಾದ ಹಾಗೂ ಕುತೂಹಲಕರವಾದ ಇತಿಹಾಸವನ್ನು ಹೊಂದಿರುವುದು ನಂತರದ ದಿನಗಳಲ್ಲಿ ತಿಳಿಯಿತು. ಇಲ್ಲಿನ ಇತಿಹಾಸವು ಈಜಿಪ್ಪಿನ ಪ್ರೌಢನಾಗರಿಕತೆಯ ಉಗಮದೊಂದಿಗೆ ಆರಂಭವಾಗುತ್ತದೆ. ಕ್ರಿ.ಪೂ.೪೦೦೦ ವರ್ಷಗಳಷ್ಟು ಹಿಂದಿನದು. ಇತಿಹಾಸಪೂರ್ವ ಮಾನವನ ಎಲುಬುಗಳು ಪಳೆಯುಳಿಕೆಗಳಾಗಿ ಕಾಣಿಸುವುದು ದಕ್ಷಿಣ ಹಾಗೂ ಪೂರ್ವ ಆಫ್ರಿಕಾದಲ್ಲಿಯೇ. ಆಫ್ರಿಕಾ ಖಂಡದ ಉಳಿದೆಡೆಯಲ್ಲೂ ವೈವಿಧ್ಯಮಯವಾದ ಇತಿಹಾಸದ ಬೆಳವಣಿಗೆಗಳನ್ನು ಕಾಣಬಹುದು. ಆಫ್ರಿಕಾ ಖಂಡದಲ್ಲಿ ವಿವಿಧ ಬಗೆಯ ಜನರು, ಭಾಷೆಗಳು ಮತ್ತು ಸಂಸ್ಕೃತಿಗಳು ಕಾಣಸಿಗುತ್ತವೆ. ಹೊಮಿನಿಡೆಯ ಅಂದರೆ ಮಾನವ ಕಾಲದ ತೊಟ್ಟಿಲು ಆಫ್ರಿಕಾ ಎಂಬುದು ಈಗ ಎಲ್ಲೆಡೆ ಮಾನ್ಯವಾಗಿದೆ. ಇಂಥ ನೈಸರ್ಗಿಕವಾಗಿ ಸಂಪತ್ ಭರಿತವಾದ ಖಂಡದಲ್ಲಿ ಬಂಡವಾಳ ಹೂಡಿಕೆಯ ಅವಕಾಶವಿರುವ ಪ್ರದೇಶಗಳಲ್ಲಿ ನಿಯಂತ್ರಣ ಸಾಧಿಸಲು ಮತ್ತು ಅವುಗಳ ಏಕಸ್ವಾಮ್ಯಕ್ಕಾಗಿ ಯೂರೋಪಿನ ಬಲಿಷ್ಟ ದೇಶಗಳು ಸ್ಪರ್ಧೆ ನಡೆಸಿದವು. ಆಫ್ರಿಕಾದಲ್ಲಿ ಯಥೇಚ್ಚವಾಗಿ ದೊರೆಯುತ್ತಿದ್ದ ಚಿನ್ನ, ದಂತ, ವಜ್ರ, ಗುಲಾಮರು ಮುಂತಾದ ಕಣ್ಣು ಕೋರೈಸುವ ಸಂಪತ್ತನ್ನು ದೋಚಲು ವ್ಯಾಪಾರದ ಸೋಗು ಹಾಕಿಕೊಂಡು ಪೋರ್ಚುಗೀಸರು, ಡಚ್ಚರು ಮತ್ತು ಫ್ರೆಂಚರು ಈ ಭೂಖಂಡಕ್ಕೆ ಬಂದಿಳಿದರು. ಆಫ್ರಿಕಾದ ವಿವಿಧ ಜನಾಂಗದ ಮತ್ತು ಬುಡಕಟ್ಟುಗಳ ನಡುವಿನ ವೈರುಧ್ಯ, ವೈಮನಸ್ಸುಗಳನ್ನು ಬಳಸಿಕೊಂಡು ಮಿಲಿಟರಿ ಬಲದಿಂದ ತಮ್ಮ ಯಜಮಾನಿಕೆಯನ್ನು ಹೇರುವಲ್ಲಿ ಯಶಸ್ವಿಯಾದರು. ಕಾಲಕ್ರಮೇಣ ವಸಾಹತುಗಳಾಗಿ ಪರಿವರ್ತಿತಗೊಂಡ ಈ ಭೂಭಾಗದಲ್ಲಿ ಪೋರ್ಚುಗೀಸರು ಪಶ್ಚಿಮ ಆಫ್ರಿಕಾದ ಕರಾವಳಿ ಪ್ರದೇಶದಲ್ಲಿ, ಫ್ರೆಂಚರು ವಾಯುವ್ಯ ಪ್ರದೇಶದಲ್ಲಿ ಬ್ರಿಟೀಷರು, ಪೂರ್ವದಲ್ಲಿ ಡಚ್ಚರು, ದಕ್ಷಿಣದಲ್ಲಿ ಬೆಲ್ಜಿಯನ್ನರು, ಮಧ್ಯ ಆಫ್ರಿಕಾದಲ್ಲಿ ಇಟಾಲಿಯನ್ನರು, ಉತ್ತರ ಆಫ್ರಿಕಾ ಪ್ರದೇಶಗಳನ್ನು ತಮ್ಮ ತೆಕ್ಕೆಯಲ್ಲಿ ಹಿಡಿದುಕೊಂಡು ಶತಶತಮಾನಗಳ ಕಾಲ ಆಳ್ವಿಕೆ ಮಾಡಿದರು. ಈ ಸಂದರ್ಭದಲ್ಲಿ ಆಫ್ರಿಕಾದ ಜನತೆಯು ತನ್ನ ರಾಷ್ಟ್ರದೊಂದಿಗೆ ತನಗಿರುವ ಪರಂಪರೆಯ ಸಮಾನಾಂಶಗಳನ್ನು ಯುಗಯುಗದ ತನ್ನದೆಯಾದ ಪರಂಪರೆಗೆ ತನ್ನ ವಿನಮ್ರವಾದ ಕಾಣಿಕೆ ಏನೆಂಬುದನ್ನೂ ಅವಶ್ಯಕವಾಗಿ ತಿಳಿದುಕೊಳ್ಳಬೇಕಾಗಿದೆ. ಆಫ್ರಿಕಾವು ಕಳೆದ ದಶಕಗಳಿಂದ ರಾಜಕೀಯ ಭಾಗ್ಯ, ದೌರ್ಭಾಗ್ಯ ಹಾಗೂ ಏಳು ಬೀಳುಗಳನ್ನು ಕಂಡಿದೆ. ಆದರೂ ಈ ಎಲ್ಲ ಏಳು ಬೀಳಿನ ನಡುವೆಯೂ ನಿರಂತರವಾದ ಸಾಂಸ್ಕೃತಿಕ ಪಂರಪರೆಯನ್ನು, ಭಾಷೆ, ಸಾಹಿತ್ಯ ಹಾಗೂ ಜನಮುಖಿಯಾದ ಹೋರಾಟದ ಬೆಳವಣಿಗೆಯನ್ನು ಪ್ರಪಂಚದೊಂದಿಗೆ ಹೊಂದಾಣಿಕೆ ಯಿರುವಂತ ವ್ಯಕ್ತಿತ್ವದ ನೆಲೆಯಲ್ಲಿ ಬೆಳೆಸಿಕೊಂಡು ಬಂದಿದೆ.

ಪ್ರಸ್ತುತ ಕೃತಿಯ ಲೇಖನಗಳು ಆಫ್ರಿಕಾ ಖಂಡದ ವಿವಿಧ ರಾಷ್ಟ್ರಗಳು ಆಧುನಿಕ ರಾಜ್ಯದ ಚೌಕಟ್ಟಿನೊಳಗಿನ ಸಂದರ್ಭದಲ್ಲಿ ಎದುರಿಸಿದ ಸವಾಲುಗಳ ಸ್ಥೂಲವಾದ ನಿರೂಪಣೆಯನ್ನು ನೀಡುತ್ತದೆ. ರಾಜಕೀಯ ಚರಿತ್ರೆಯಂತೂ ಬಹುಮುಖ್ಯವೆಂಬುದರಲ್ಲಿ ಸಂದೇಹವಿಲ್ಲ. ಆದರೆ ಅದಕ್ಕಿಂತ ಮಿಗಿಲಾದದ್ದು ಇಲ್ಲಿನ ಜನಜೀವನ, ಧಾರ್ಮಿಕ ಶ್ರದ್ಧೆಗಳು, ಅವರ ತಾತ್ತ್ವಿಕ ನೆಲೆಗಟ್ಟು, ನೈತಿಕ ನಿಯಮಗಳು, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು, ಅವರ ಸಂಸ್ಕೃತಿ ಮತ್ತು ಕಲೆಗಳು. ಆದಕಾರಣ ಈ ಕೃತಿಯಲ್ಲಿ ಈ ವಿಷಯಗಳಿಗೆ ತಕ್ಕಷ್ಟು ವಿಷಯ ಸಂಗ್ರಹಮಾಡಿ ನಿರೂಪಿಸಲು ವಿಶೇಷ ಪ್ರಯತ್ನ ಮಾಡಲಾಗಿದೆ. ಅಂತರರಾಷ್ಟ್ರೀಯ ಮಹತ್ವವನ್ನುಳ್ಳ ಈ ವಿಚಾರದ ಬಗ್ಗೆ ವಿಶೇಷ ಗಮನ ಕೊಡಬೇಕಾದ ಸಂದರ್ಭ ಈಗ ಬಂದಿದೆ.

ಇಂಥದೊಂದು ಮಹತ್ವದ ಕೃತಿ ಪ್ರಕಟವಾಗುವಾಗ ಸಂಪಾದಕ ಸಮಿತಿಯ ಸದಸ್ಯರ ಬಗ್ಗೆ ನೆನೆದುಕೊಳ್ಳುವುದು ಸಂತೋಷದ ಸಂಗತಿ. ಚರಿತ್ರೆ ವಿಶ್ವಕೋಶದಂತಹ ಮಹತ್ವದ ಕೃತಿಯನ್ನು ಪ್ರಕಟಿಸುವಾಗಿನಿಂದ ಇಂದಿನ ಸಂದರ್ಭದವರೆಗೂ ಬೌದ್ದಿಕ ಶಿಸ್ತಿನೊಂದಿಗೆ ಕಾರ್ಯನಿರ್ವಹಿಸಿ, ನಮ್ಮನ್ನು ಈ ದಿಸೆಯಲ್ಲಿ ಕಾರ್ಯಮಗ್ನರಾಗಲು ತೊಡಗಿಸಿದ  ಪ್ರಾಧ್ಯಾಪಕರಾದ ಡಾ.ತಂಬಂಡ ವಿಜಯ್ ಪೂಣಚ್ಚ ಅವರನ್ನು ಕೃತಜ್ಞತೆಯಿಂದ ನೆನೆಯಲೇಬೇಕು. ಈ ಕೆಲಸದ ಪ್ರತಿ ಹಂತದಲ್ಲಿಯೂ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ ವಿಷಯ ತಜ್ಞರಾದ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಸ್.ಎ.ಬಾರಿ ಅವರಿಗೆ ಹಾಗೂ ಪ್ರಾಧ್ಯಾಪಕರಾದ ಡಾ.ರಾಜಾರಾಮ ಹೆಗಡೆ ಅವರಿಗೆ ವಂದನೆಗಳು. ಸಹೋದ್ಯೋಗಿ ಮಿತ್ರರಾದ ಡಾ.ಸಿ.ಆರ್.ಗೋವಿಂದರಾಜು, ಡಾ.ಕೆ. ಮೋಹನ್‌ಕೃಷ್ಣ ರೈ, ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರ ನೆರವು ಗಣನೀಯವಾದದ್ದು. ಈ ಕೃತಿಗೆ ವಿಶ್ವವಿದ್ಯಾಲಯದ ಒಳಗಿನ ಹಾಗೂ ಹೊರಗಿನ ವಿದ್ವಾಂಸರು ಮಹತ್ವದ ಲೇಖನಗಳನ್ನು ಒದಗಿಸಿದ್ದಾರೆ ಇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಈ ಕೃತಿಯು ಹೊರಬರಲು ಒಪ್ಪಿಗೆ ನೀಡಿದ ನಮ್ಮ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಎ.ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ.ಮಂಜುನಾಥ ಬೇವಿನಕಟ್ಟಿ ಹಾಗೂ ಪ್ರಸಾರಾಂಗದ ಹಿಂದಿನ ನಿರ್ದೇಶಕರಾದ ಡಾ.ಮೋಹನ ಕುಂಟಾರ್ ಅವರಿಗೆ ಕೃತಜ್ಞತೆಗಳು.

ಈ ಕೃತಿಯ ವಿಷಯ ಸೂಚಿಯನ್ನು ಸಿದ್ಧಪಡಿಸಲು ನೆರವಾದ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಾದ ಹಿರಿಬೀದ್ರಿ ಹೋಳಿಬಸಪ್ಪ, ಎಸ್.ಮುನಿರಾಜು, ಅಮರೇಶ ಆಲ್ಕೋಡ್,  ಕೆ.ವೆಂಕಟೇಶ್, ಬಿ.ಎಚ್.ಸಂತೋಷಕುಮಾರ್ ಹಾಗೂ ಜಿ.ವಿಜಯಲಕ್ಷ್ಮಮ್ಮ ಅವರನ್ನು ಆತ್ಮೀಯವಾಗಿ ನೆನೆಯುತ್ತೇನೆ.

ಸಂಪುಟದ ಪುಟ ವಿನ್ಯಾಸ ಮಾಡಿದ ಶ್ರೀ ಬಿ.ಸುಜ್ಞಾನಮೂರ್ತಿ ಅವರಿಗೆ, ಮುಖಪುಟ ವಿನ್ಯಾಸವನ್ನು ಮಾಡಿದ  ಶ್ರೀ ಯು.ಟಿ.ಸುರೇಶ ಅವರಿಗೆ ಹಾಗೂ ಅಕ್ಷರ ಸಂಯೋಜನೆ ಮಾಡಿದ ಶ್ರೀಮತಿ ಬಿ.ರಶ್ಮಿೊಕೃಪಾಶಂಕರ್ ಅವರಿಗೆ ಕೃತಜ್ಞತೆಗಳು.