ಬೌದ್ದಿಕ ಸಾಧನೆಗಳು

ಪ್ರಾಚೀನ ಈಜಿಪ್ಟಿನ ಪಾರಮಾರ್ಥಿಕ ಬದುಕು ನೈತಿಕ ಹಾಗೂ ರಾಜಕೀಯ ಅಂಶಗಳಿಂದ ಆಧರಿತವಾಗಿತ್ತು. ಮನಸು ಅಥವಾ ಜ್ಞಾನ ವಿಶ್ವವನ್ನು ನಿಯಂತ್ರಿಸುತ್ತದೆ ಎಂಬ ಭಾವನೆ ಕಾಲದಿಂದ ಕಾಲಕ್ಕೆ ಮುಂದುವರೆಯುತ್ತ ಬಂದಿತು. ಅದರ ಉಲ್ಲೇಖವನ್ನು ಪುರೋಹಿತರ ಬರವಣಿಗೆಗಳಲ್ಲಿ ಕಾಣುತ್ತೇವೆ. ನಿರಂತರವಾಗಿರುವ ವಿಶ್ವ, ನಿರಂತರವಾಗಿ ಸಂಭವಿಸುವ ಘಟನೆಗಳು, ನೈಸರ್ಗಿಕ ಕಾರಣ ಮತ್ತು ಪರಿಣಾಮಗಳಿಗೆ ಸಿದ್ಧಾಂತ. ಇವೇ ವಿಷಯಗಳು ಅವರ ಅಲೌಕಿಕ ವಿವರಣೆಗಳಲ್ಲಿ ಅಡಕವಾಗಿವೆ. ಶುದ್ಧದಾರ್ಶನಿಕ ಅಂಶಗಳನ್ನು ಅವರ ಬರವಣಿಗೆಗಳಲ್ಲಿ ಕಾಣಲಾಗುವುದಿಲ್ಲ. ಅವು ಮೂಲಭೂತವಾಗಿ ಮತಾಚರಣೆ, ವೈಯಕ್ತಿಕವಾಗಿ ಕಾಡುವ ಸಮಸ್ಯೆಗಳು ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದೆ.

ಈಜಿಪ್ಟರ ಪ್ರಾರಂಭದ ಧಾರ್ಮಿಕ ವಿಧಿವಿಧಾನಗಳು ಓಲ್ಡ್‌ಟೆಸ್ಟ್‌ಮೆಂಟ್‌ನಲ್ಲಿರುವ ಗಾಥೆಗಳ ಪುಸ್ತಕದಂತಿದೆ. ಇವು ನಿತ್ಯಾವಶ್ಯಕ ಜ್ಞಾನಕ್ಕಿಂತ ಭಿನ್ನವಾಗಿದ್ದರೂ ಸಹಿಷ್ಣುತೆಯನ್ನೂ, ಚಿಕಿತ್ಸಕ ಮನೋಭಾವವನ್ನು, ನ್ಯಾಯವನ್ನೂ ಒಳಗೊಂಡಿತ್ತು. ರಾಜಕೀಯ ಚಿಂತನೆಯಲ್ಲಿ ಇವರು ಸುಖೀರಾಜ್ಯದ ಭಾವನೆಯನ್ನು ಹಾಗೂ ವ್ಯವಸ್ಥೆಯನ್ನು ರೂಪಿಸಿದ್ದರು. ಈ ವ್ಯವಸ್ಥೆಯಲ್ಲಿ ಅರಸರು ಪ್ರಜೆಗಳ ಮುಖಂಡನಾಗಿದ್ದನು. ಜನತೆಯ ಕ್ಷೇಮ ಮತ್ತು ಅಭಿವೃದ್ದಿಗಾಗಿ ದುಡಿಯಲು ಬದ್ಧನಾಗಿದ್ದನು. ಅವನು ತಬ್ಬಲಿಗಳಿಗೆ ತಂದೆಯಂತೆ, ವಿಧವೆಯರಿಗೆ ರಕ್ಷಕನಂತೆ, ವರ್ಜಿತರಾದವರಿಗೆ ಸೋದರನಂತೆ ದುಡಿಯಬೇಕೆಂದು ಈಜಿಪ್ಟನ ಬರಹಗಳು ತಿಳಿಸುತ್ತವೆ. ಅವನು ನ್ಯಾಯಪಕ್ಷಪಾತಿಯಾಗಿ ತಪ್ಪಿತಸ್ಥರನ್ನು ದುಡಿಸಬೇಕಾಗಿತ್ತು. ಸಾಮರಸ್ಯ ಮತ್ತು ಅಭಿವೃದ್ದಿಗಾಗಿ ದುಡಿದು ಮಾನವನ ಮೂಲಭೂತ ಅವಶ್ಯಗಳಿಂದ ತಮ್ಮ ಪ್ರಜೆಗಳು ವಂಚಿತರಾಗದಂತೆ ನೋಡಿಕೊಳ್ಳುವುದು ಅವನ ಉದ್ದೇಶ.

ಖಗೋಳಶಾಸ್ತ್ರ, ಗಣಿತ ಮತ್ತು ಔಷಧ ವಿಜ್ಞಾನ ಇವೇ ಮೊದಲಾದ ವೈಜ್ಞಾನಿಕ ವಿಷಯಗಳು ಅವರ ಆಸಕ್ತಿಯನ್ನು ಕೆರಳಿಸಿದ್ದವು ಹಾಗು ಇವುಗಳಲ್ಲಿ ವ್ಯಾವಹಾರಿಕ ಉದ್ದೇಶದಿಂದ ಬೆಳವಣಿಗೆಗಳನ್ನು ಸಾಧಿಸಲಾಗಿತ್ತು. ನೈಲ್ ನದಿಯ ಪ್ರವಾಹಗಳನ್ನು ನಿರ್ಧರಿಸುವುದಕ್ಕೆ ಖಗೋಳ ಶಾಸ್ತ್ರವನ್ನೂ, ಕಟ್ಟಡ ನಿರ್ಮಾಣಕ್ಕೆ ಗಣಿತವನ್ನೂ, ರೋಗ ನಿವಾರಣೆಗಾಗಿ ಔಷಧಶಾಸ್ತ್ರವನ್ನೂ ಅಭಿವೃದ್ದಿಪಡಿಸಿದರು. ನೈಲ್ ನದಿಯ ಪ್ರವಾಹವು ಲುಬ್ಧಿಕ ನಕ್ಷತ್ರದ ವಾರ್ಷಿಕ ಉದಯದೊಂದಿಗೆ ಸಮ್ಮಿಳಿತವಾಗಿತ್ತು. ಧಾರ್ಮಿಕ, ಆಚರಣೆಗಳಿಗಾಗಿ ಚಾಂದ್ರಮಾನ ಪಂಚಾಂಗವನ್ನು ಅವರು ಜಾರಿಗೆ ತಂದಿದ್ದರು. ಗಣಿತಶಾಸ್ತ್ರ ಉನ್ನತವಾಗಿ ಬೆಳೆದಿತ್ತು. ಅಂಕಗಣಿತ ಮತ್ತು ಜ್ಯಾಮಿತಿ ಶಾಸ್ತ್ರಗಳ ಬೆಳವಣಿಗೆಗೆ ಈಜಿಪ್ಟರು ಅಡಿಪಾಯವನ್ನು ಹಾಕಿದ್ದರು. ಅಂಕಗಣಿತದಲ್ಲಿ ಕೂಡುವುದು, ಕಳೆಯುವುದು ಮತ್ತು ಭಾಗಿಸುವುದನ್ನು ಅವರು ಕಲಿತಿದ್ದರು. ಆದರೆ ಅವರಿಗೆ ಗುಣಾಕಾರದ ಮೊತ್ತವನ್ನು ಪಡೆಯುತ್ತಿದ್ದರು. ಅವರು ದಶಾಂಶ ಪದ್ಧತಿಯನ್ನೂ ತಿಳಿದಿದ್ದರು. ಈಜಿಪ್ಟರಿಗೆ ಶೂನ್ಯದ ಚಿಹ್ನೆ ಗೊತ್ತಿರಲಿಲ್ಲ. ತ್ರಿಕೋನ, ಚತುಷ್ಕೋನ ಮತ್ತು ಷಟ್ಕೋನಗಳನ್ನು ಅಂಕಗಣಿತದಲ್ಲಿ ನಿಖರವಾಗಿ ಲೆಕ್ಕ ಹಾಕುತ್ತಿದ್ದರು. ವೃತ್ತದ ಪರಿಧಿ ಮತ್ತು ಅದರ ವ್ಯಾಸ ಪ್ರಮಾಣವನ್ನು ಅವರು ಲೆಕ್ಕ ಹಾಕುತ್ತಿದ್ದರು. ಪಿರಮಿಡ್, ಅರ್ಧಗೋಳ, ಉರುಳೆ ಆಕಾರಗಳನ್ನು ಲೆಕ್ಕ ಹಾಕಲು ಕಲಿತಿದ್ದರು.

ಔಷಧಿ ಕ್ಷೇತ್ರದಲ್ಲೂ ಈಜಿಪ್ಟರು ಅಗಾಧ ಸಾಧನೆಗಳನ್ನು ಮಾಡಿದ್ದರು. ಆರಂಭಿಕ ವೈದ್ಯಕೀಯ ಅಭ್ಯಾಸ ಸಾಂಪ್ರದಾಯಿಕವಾಗಿದ್ದು, ಈಜಿಪ್ಟಿನ ಮೂಢನಂಬಿಕೆಗಳಿಂದ ತುಂಬಿಹೋಗಿತ್ತು. ಕ್ರಿ.ಪೂ.೧೭೦೦ರಿಂದೀಚೆಗೆ ವೈದ್ಯಕೀಯ ಪದ್ಧತಿಯು ವೈಜ್ಞಾನಿಕ ವಿಶ್ಲೇಷಣೆ ಮತ್ತು ಚಿಕಿತ್ಸೆಯಿಂದ ಕೂಡಿದ್ದನ್ನು ಅಂದಿನ ಬರಹಗಳು ತಿಳಿಸುತ್ತವೆ. ಈಜಿಪ್ಟಿನ ವೈದ್ಯರು ಕಣ್ಣು ದಂತ ಮತ್ತು ಹೊಟ್ಟೆಯ ಕಾಯಿಲೆಗಳ ನಿವಾರಣೆ ಹಾಗೂ ಶಸ್ತ್ರಚಿಕಿತ್ಸೆ ಮುಂತಾದ ವಿಭಾಗಗಳಲ್ಲಿ ಪರಿಣತರಾಗಿದ್ದರು. ಅವರು ತಮ್ಮ ವೈದ್ಯಪದ್ಧತಿಯ ನಿರ್ವಹಣೆಯ ದೀರ್ಘಕಾಲದಲ್ಲಿ ಅದ್ಭುತವಾದ ಶೋಧನೆಗಳನ್ನು ನಡೆಸಿದ್ದುಂಟು. ಅವರು ಹೃದಯ ಹಾಗೂ ನಾಡಿಬಡಿತದ ಪ್ರಾಮುಖ್ಯವನ್ನು ಮನಗಂಡಿದ್ದರು. ಮೂಳೆ ಮುರಿತದ ಚಿಕಿತ್ಸೆಯಲ್ಲೂ ಅವರು ಪ್ರಗತಿ ಸಾಧಿಸಿದ್ದುಂಟು. ಔಷಧಿಗಳ ಗುಣಮಟ್ಟವನ್ನು ವಿವರಿಸಿ ಪಟ್ಟಿ ಮಾಡಿದ್ದರು. ಅವರ ಹಲವು ಚಿಕಿತ್ಸಾ ವಿಧಾನಗಳನ್ನು ಗ್ರೀಕರು ಮುಂದೆ ಯುರೋಪಿನಲ್ಲಿ ಪ್ರಚಾರ ಮಾಡಿದರು. ಈಗಲೂ ಆಫ್ರಿಕಾದ ದೂರದ ವಿವಿಧ ಪ್ರದೇಶಗಳ ರೈತರು ಆ ವಿಧಾನಗಳನ್ನೇ ಅನುಸರಿಸುತ್ತಿರುವುದುಂಟು. ಭೌತಶಾಸ್ತ್ರದ ಬಗ್ಗೆ ಅವರು ಗಳಿಸಿದ ಜ್ಞಾನ ಅತ್ಯಲ್ಪವೇ. ಲೋಹಗಾರಿಕೆಯಲ್ಲಿ ಸಾಕಷ್ಟು ಜ್ಞಾನವನ್ನು ಸಂಪಾದಿಸಿದ್ದರು. ಸೂರ್ಯಗಡಿಯಾರ, ಪ್ಯಾಪಿರಸ್ ಕಾಗದ ಮತ್ತು ಗಾಜುಗಳ ತಯಾರಿಕೆಯನ್ನು ಕಲಿತಿದ್ದರು. ಅವರ ಕೆಲ ಕೊರತೆಗೇನೇ ಇರಲಿ, ಅಂದಿನ ಆ ಕಾಲಕ್ಕೆ ವೈಜ್ಞಾನಿಕವಾಗಿ ಅವರು ಅಪಾರವಾದ ಸಾಧನೆಗಳನ್ನು ಮಾಡಿದ್ದರು.

ಕ್ರಿ.ಪೂ.೩೧೦೦ರ ಸುಮಾರಿಗೆ ಈಜಿಪ್ಟ್ ಒಂದುಗೂಡಿದ ಕಾಲಕ್ಕೆ ಬರವಣಿಗೆಯನ್ನು ಅಭಿವೃದ್ದಿಪಡಿಸಲಾಗಿತ್ತು. ಈ ಬರವಣಿಗೆಯನ್ನು ಹೈಅರಗ್ಲಿಪ್ ಎಂದು ಕರೆಯಲಾಗುವ  ಗ್ರೀಕ್ ಪದಗಳ ಜೋಡಣೆ. ಅವುಗಳ ಅರ್ಥ ಪವಿತ್ರ ಕೆತ್ತನೆ ಎಂದು. ಇದರ ಕೆಲ ಚಿಹ್ನೆಗಳನ್ನು ರೂಢೀಕರಿಸಿ ಅಮೂರ್ತ ಭಾವನೆಗಳನ್ನು ಅಭಿವ್ಯಕ್ತಿಸಲಾಯಿತು. ಅಕ್ಷರಮಾಲೆಯ ಅದು ಚಿತ್ರಕಾರವೇ ಇರಲಿ, ವ್ಯವಸ್ಥೆಯನ್ನು ಮೊದಲಿಗೆ ರೂಪಿಸಿದ ಕೀರ್ತಿ ಇವರದು. ಸಾವಿರಾರು ವರುಷಗಳ ನಂತರ ಫಿನೀಷಿಯನ್ನರು ಅವರನ್ನು ಅನುಸರಿಸಿ ತಮ್ಮದೇ ಅದ ಬರವಣಿಗೆ ವ್ಯವಸ್ಥೆಯನ್ನು ಜಾರಿಗೆ ತಂದರು ಹಾಗೂ ಸುತ್ತಮುತ್ತಣ ರಾಜ್ಯಗಳಿಗೆ ಪ್ರಚಾರ ಮಾಡಿದರು. ಪಾಶ್ಚಾತ್ಯ ಜಗತ್ತಿನಲ್ಲಿ ವಿಕಾಸವಾದ ಅಕ್ಷರ ವ್ಯವಸ್ಥೆಗೆ ಮೂಲ ಈಜಿಪ್ಟಿನ ಅಕ್ಷರ ನಿರೂಪಣೆಯೇ ಎಂಬುದು ಅಚ್ಚರಿಯಲ್ಲದ ವಿಷಯ.

ಸಾಮಾಜಿಕ ಮತ್ತು ಆರ್ಥಿಕ ಬದುಕು

ಈಜಿಪ್ಟಿನ ಜನಸಮುದಾಯವನ್ನು ಸಾಮಾಜಿಕವಾಗಿ ಐದು ಶ್ರೇಣೀಕೃತ ವರ್ಗಗಳನ್ನಾಗಿ ಮಾಡಲಾಗಿತ್ತು. ರಾಜಮನೆತನದವರು, ಶ್ರೀಮಂತರು, ಮಧ್ಯಮವರ್ಗ(ಲೇಖಕರು, ವರ್ಣಿಕರು, ಕುಶಲಕರ್ಣಿಗಳು)ದವರು ಮತ್ತು ಶ್ರೀಮಂತ ಕೃಷಿಕರು ಇವೇ ಆ ಐದು ವರ್ಗಗಳು. ನೂತನ ಅರಸೊತ್ತಿಗೆಯ ಕಾಲದಲ್ಲಿ ವೃತ್ತಿನಿರತ ಸೈನಿಕರನ್ನು ಒಳಗೊಂಡ ಆರನೇ ವರ್ಗ ಅಸ್ತಿತ್ವಕ್ಕೆ ಬಂದಿತು. ಇವರು ಸಾಮಾಜಿಕ ಶ್ರೇಣಿಯಲ್ಲಿ ಶ್ರೀಮಂತರ ನಂತರದ ಸ್ಥಾನವನ್ನು ಪಡೆದಿದ್ದರು. ಸಾವಿರಾರು ಗುಲಾಮರನ್ನು ಈ ಕಾಲದಲ್ಲಿ ಸೆರೆ ಹಿಡಿಯಲಾಯಿತು. ಇವರನ್ನು ಏಳನೇ ವರ್ಗವಾಗಿ  ಪರಿಗಣಿಸಲಾಯಿತು. ಎಲ್ಲರಿಂದಲೂ ನಿಕೃಷ್ಟಕ್ಕೆ ಗುರಿಯಾದ ಇವರು ಸರ್ಕಾರಿ ಕಾಮಗಾರಿಗಳಿಂದ ಬಂಡೆಗಳನ್ನು ಕೊರೆಯುವಲ್ಲಿ ಹಾಗೂ ದೇಗುಲಗಳ ನಿರ್ಮಾಣದಲ್ಲಿ ಕಡ್ಡಾಯವಾಗಿ ದುಡಿಯಬೇಕಿತ್ತು. ಕಾಲಾನಂತರದಲ್ಲಿ ಸೈನದಲ್ಲಿ ದುಡಿಯಲು ಅವರನ್ನು ಸೇರಿಸಿಕೊಳ್ಳಲಾಗುತ್ತಿತ್ತು ಹಾಗೂ ಫೆರೋವರ ವೈಯಕ್ತಿಕ ಸೇವೆಗೆ ಅವಕಾಶ ಕೊಡಲಾಗುತ್ತಿತ್ತು. ಇದರಿಂದ ಅವರು ಸಮಾಜದಲ್ಲಿ ತಮ್ಮ ವರ್ಗದಿಂದ ಉನ್ನತವರ್ಗಕ್ಕೆ ಮುಂಬಡ್ತಿ ಪಡೆಯುತ್ತಿದ್ದುದುಂಟು. ವಿವಿಧ ವರ್ಗಗಳ ಸ್ಥಾನಮಾನಗಳು ದೀರ್ಘಕಾಲಾವಧಿ ಯಲ್ಲಿ ಬದಲಾವಣೆ ಆಗಿರುವುದು ಕಂಡುಬರುತ್ತದೆ. ಪುರಾತನ ಅರಸೊತ್ತಿಗೆಯ ಕಾಲದಲ್ಲಿ ಶ್ರೀಮಂತರು ಮತ್ತು ಪುರೋಹಿತರು ಸಮಾಜದಲ್ಲಿ ಅತ್ಯುನ್ನತ ವರ್ಗದಲ್ಲಿದ್ದರು. ಮಧ್ಯಮ ರಾಜ್ಯದ ಕಾಲದಲ್ಲಿ ವರ್ಣಿಕರು ಮತ್ತು ಕುಶಲ ಕರ್ಮಿಗಳು ಸರ್ಕಾರದಿಂದ ಹಲವು ರಿಯಾಯಿತಿಗಳನ್ನು ಪಡೆದಿದ್ದರು ಹಾಗೂ ಜನಸಮೂಹದ ಬದುಕಿನಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ್ದರು. ಈಜಪ್ಟಿನ ಸಾಮ್ರಾಜ್ಯ ಸ್ಥಾಪನೆಯಾದಂತೆ ಅಧಿಕಾರಿಗಳನ್ನು ಒಳಗೊಂಡ ಹೊಸ ಶ್ರೀಮಂತವರ್ಗ ಹುಟ್ಟಿಕೊಂಡಿತು. ಮಂತ್ರತಂತ್ರಗಳು ಮತ್ತು ಮತಕ್ರಿಯೆಗಳು ಬೆಳವಣಿಗೆ ಆದಂತೆ ಪುರೋಹಿತ ವರ್ಗವು ಪ್ರಾಮುಖ್ಯ ಗಳಿಸಿಕೊಂಡಿತು.

ವರ್ಗಗಳ ನಡುವೆ ಶ್ರೀಮಂತಿಕೆಯ ಅಂತರ ಅಗಾಧವಾಗಿತ್ತು. ಶ್ರೀಮಂತರು ಸುವಾಸನೆಯಿಂದ ಕೂಡಿದ ಉದ್ಯಾನವನಗಳ ನಡುವೆ ವೈಭವಪೂರ್ಣವಾದ ಮನೆಗಳಲ್ಲಿ ವಾಸ ಮಾಡುತ್ತಿದ್ದರು. ಅವರು ಸಮೃದ್ಧವಾದ ಆಹಾರಗಳನ್ನು ಸೇವಿಸುತ್ತಿದ್ದರು. ಅವರ ಅಹಾರವು ವಿವಿಧ ಬಗೆಯ ಮಾಂಸಭಕ್ಷ್ಯಗಳು, ಹಣ್ಣುಗಳು, ಸಿಹಿತಿಂಡಿಗಳು ಮತ್ತು ಮಧುರಸವನ್ನು ಒಳಗೊಂಡಿತ್ತು. ಚಿನ್ನ ಬೆಳ್ಳಿ ಹಾಲುಗಲ್ಲು ಅಥವಾ ಪಾರದರ್ಶಕ ಕಲ್ಲುಗಳ ಪಾತ್ರೆಗಳಲ್ಲಿ ಊಟ ಮಾಡುತ್ತಿದ್ದರು. ಶ್ರೀಮಂತರು ದುಬಾರಿ ಉಡುಪುಗಳನ್ನು ಹಾಗೂ ಆಭರಣಗಳನ್ನು ಧರಿಸುತ್ತಿದ್ದರು. ಇವಕ್ಕೆ ಪ್ರತಿಯಾಗಿ ಬಡವರ ಬದುಕು ದುಸ್ತರವಾಗಿತ್ತು. ಮಣ್ಣಿನ ಗೋಡೆಗಳಲ್ಲಿ ಕಟ್ಟಿದ ಚಿಕ್ಕಚಿಕ್ಕ ಮನೆಗಳಲ್ಲಿ ನಿರ್ಲಕ್ಷ್ಯಕ್ಕೆ ಗುರಿಯಾದ ಜಾಗದಲ್ಲಿ ವಾಸಿಸುತ್ತಿದ್ದರು. ಸ್ಟೂಲ್, ಸಣ್ಣಸಣ್ಣ ಪೆಟ್ಟಿಗೆ ಮತ್ತು ಮಣ್ಣಿನ ಕುಡಿಕೆಗಳೇ ಅವರ ಮನೆಯಲ್ಲಿದ್ದ ಪರಿಕರಗಳು. ರೈತರು ವಿಶಾಲವಾದ ಜಮೀನಿನ ನಡುವೆ ವಾಸಿಸುತ್ತಿದ್ದರೂ, ಅವರದು ಸಮೃದ್ಧ ಬದುಕಾಗಿರಲಿಲ್ಲ.

ಸಮಾಜದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದ್ದರೂ, ಏಕಪತ್ನಿ ಕುಟುಂಬ ಸಮಾಜದ ಮೂಲ ಘಟಕವಾಗಿತ್ತು. ಫೆರೋವನು ಉಪಪತ್ನಿಯರ ಜಾಲವನ್ನೇ ಇಟ್ಟುಕೊಂಡಿದ್ದರೂ, ಒಬ್ಬಳೇ ಒಬ್ಬಳು ಪ್ರಮುಖ ರಾಣಿ ಇರುತ್ತಿದ್ದಳು. ಉಳಿದ ಪ್ರಾಚೀನ ಸಮಾಜದ  ಸ್ತ್ರೀಯರಿಗೆ ಹೋಲಿಸಿದರೆ, ಈಜಿಪ್ಟಿನ ಸ್ತ್ರೀಯರು ಪೂರ್ಣವಾಗಿ ಪುರುಷರಿಗೆ ಅಧೀನವಾಗಿರ ಲಿಲ್ಲ. ಪತ್ನಿಯರು ತೆರೆಯ ಹಿಂದೆ ಇರಬೇಕಿರಲಿಲ್ಲ. ಪೂರ್ವಿಕರ ಅಸ್ತಿಯನ್ನು ಪಡೆದು ಸಿಂಹಾಸನಕ್ಕೆ ಬಂದಿದ್ದು ಕೇವಲ ಈಜಿಪ್ಟ್ ರಾಷ್ಟ್ರ ಒಂದರಲ್ಲೇ. ಹನ್ನೆರಡನೇ ವಂಶದ ರಾಣಿ ಸೊಬೆಕ್ನೊಪ್ಪು, ಹದಿನೆಂಟನೇ ವಂಶದ ರಾಣಿ ಹಟ್‌ಷೆಫುಟ್ ಆಡಳಿತ ನಡೆಸಿದ್ದರು.

ಈಜಿಪ್ಟಿನ ಆರ್ಥಿಕ ವ್ಯವಸ್ಥೆ ಮೂಲತಃ ಕೃಷಿ ಆಧರಿತವಾಗಿತ್ತು. ಕೃಷಿ ವೈವಿಧ್ಯಮಯ ವಾಗಿತ್ತು ಹಾಗೂ ಅತ್ಯಂತ ಪ್ರಗತಿದಾಯಕವಾಗಿತ್ತು. ಗೋಧಿ, ಜವೆ, ಕಾಳುಕಡ್ಡಿಗಳು, ತರಕಾರಿಗಳು, ಹಣ್ಣುಗಳು, ಅಗಸೆನಾರು ಮತ್ತು ಹತ್ತಿಯನ್ನು ಬೆಳೆಯುತ್ತಿದ್ದರು. ನಾಡಿನ ಎಲ್ಲ ಭೂಮಿಗೂ ಫೆರೋವನೇ ಒಡೆಯನಾಗಿದ್ದರೂ, ಅವನು ಬಹು ಹಿಂದೆಯೇ ತನ್ನ ಪ್ರಜೆಗಳಿಗೆ ಹಂಚಿದ್ದರಿಂದ ಅವರು ವೈಯಕ್ತಿಕವಾಗಿ ತಮ್ಮ ಅಧೀನದಲ್ಲೇ ಭೂಮಿಯನ್ನು ಇಟ್ಟುಕೊಂಡಿದ್ದರು. ವ್ಯಾಪಾರ ಕ್ರಿ.ಪೂ.೨೦೦೦ರ ವೇಳೆಗೆ ಪ್ರಾಮುಖ್ಯ ಗಳಿಸಿಕೊಂಡಿತು. ಈಜಿಪ್ಟ್ ದೇಶವು ಕ್ರೀಟ್ ದ್ವೀಪ, ಫಿನಿಷೀಯ, ಪ್ಯಾಲೆಸ್ತೈನ್ ಮತ್ತು ಸಿರಿಯ ದೇಶಗಳೊಂದಿಗೆ ಸಮೃದ್ಧವಾಗಿ ವ್ಯಾಪಾರ ನಡೆಸುತ್ತಿತ್ತು. ಇಲ್ಲಿನ ವರ್ತಕರು ಚಿನ್ನ, ಗೋಧಿ ಮತ್ತು ಹತ್ತಿ ಬಟ್ಟೆಗಳನ್ನು ರಫ್ತು ಮಾಡುತ್ತಿದ್ದರು ಹಾಗೂ ಬೆಳ್ಳಿ, ದಂತ ಮತ್ತು ಮರದ ದಿಮ್ಮಿಗಳನ್ನು ತರಿಸಿಕೊಳ್ಳುತ್ತಿದ್ದರು. ಕೈಗಾರಿಕಾ ಉತ್ಪನ್ನಗಳು ವ್ಯಾಪಾರದ ಪ್ರಮುಖ ವಹಿವಾಟು ಸರಕುಗಳಾಗಿದ್ದವು. ಕ್ರಿ.ಪೂ.೩೦೦೦ರ ವೇಳೆಗೆ ಹೆಚ್ಚಿನ ಸಂಖ್ಯೆಯ ಜನರು ಕುಶಲ ಕೈಗಾರಿಕೆಯಲ್ಲಿ ನಿರತರಾಗಿದ್ದರು. ಅನಂತರದ ಕಾಲದಲ್ಲಿ ಕಾರ್ಖಾನೆಗಳು ಸ್ಥಾಪನೆಯಾದವು. ಒಂದೇ ಘಟಕದಲ್ಲಿ ಇಪ್ಪತ್ತಕ್ಕೂ ಹೆಚ್ಚ ಜನರು ದುಡಿಯುತ್ತಿದ್ದರು. ಕಲ್ಲು ಒಡೆಯುವುದು, ಹಡಗು ನಿರ್ಮಾಣ, ಕುಂಭ, ಗಾಜು ಮತ್ತು ಹತ್ತಿಬಟ್ಟೆಗಳ ತಯಾರಿಕೆಗಳು ಆ ಕಾಲದ ಪ್ರಮುಖ ಕೈಗಾರಿಕೆಗಳಾಗಿದ್ದವು. ವ್ಯಾಪಾರದ ಲೆಕ್ಕ ಪತ್ರ ಮತ್ತು ಜಮಾ ಖರ್ಚಿನ ವ್ಯವಹಾರವನ್ನು ಇಡುವುದರಲ್ಲಿ ಈಜಿಪ್ಟಿನ ಜನರು ಪ್ರಗತಿಯನ್ನು ಸಾಧಿಸಿದ್ದರು. ವರ್ತಕರು ಕ್ರಯ ಮತ್ತು ವಿಕ್ರಯಕ್ಕೆ ರಸೀದಿಯನ್ನು ಇಡುತ್ತಿದ್ದರು. ಕರಾರುಪತ್ರ, ಲಿಖಿತ ಒಪ್ಪಂದ, ಉಯಿಲು ಪತ್ರಗಳನ್ನು ಈಜಿಪ್ಟರು ಕಂಡುಕೊಂಡಿದ್ದರು. ಅವರಲ್ಲಿ ನಾಣ್ಯವ್ಯವಸ್ಥೆ ಇಲ್ಲದಿದ್ದರೂ ಹಣವ್ಯವಸ್ಥೆ ಇತ್ತು. ನಿಗದಿತ ತೂಕದ ಚಿನ್ನ ಮತ್ತು ತಾಮ್ರದ ಉಂಗುರಗಳನ್ನು ವಿನಿಮಯದ ಮಾಧ್ಯಮವಾಗಿ ಉಪಯೋಗಿಸಲಾಗು ತ್ತಿತ್ತು. ನಾಗರಿಕತೆಯ ಇತಿಹಾಸದಲ್ಲಿ ಈಜಿಪ್ಟಿನ ಉಂಗುರ ಹಣವು ಅತ್ಯಂತ ಪ್ರಾಚೀನತಮ ನಾಣ್ಯಚಲಾವಣೆ ವ್ಯವಸ್ಥೆಯಾಗಿತ್ತು ಎನ್ನುವುದನ್ನು ಮರೆಯುವಂತಿಲ್ಲ. ರೈತರು ಮತ್ತು ಬಡವರ್ಗದವರು ವಸ್ತುವಿನಿಮಯ ಪದ್ಧತಿಯನ್ನೇ ಮುಂದುವರೆಸುತ್ತಿದ್ದರು.

ಈಜಿಪ್ಟಿನ ಅರ್ಥವ್ಯವಸ್ಥೆ ಸಾಮೂಹಿಕ ಸಾಧನೆಯಾಗಿ ಪ್ರಾರಂಭದಿಂದಲೂ ಜನರ ಸಾಮರ್ಥ್ಯವು ಅವರನ್ನು ಸಮಾಜದ ವಿವಿಧ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಿತ್ತು. ವ್ಯಕ್ತಿಯ ಅಭಿರುಚಿ ಮತ್ತು ಸಮಾಜದ ಸದಾಶಯಗಳನ್ನು ಸಮವೆಂದು ಪರಿಗಣಿಸಲಾಗಿತ್ತು. ರಾಷ್ಟ್ರದ ಪೂರ್ಣ ಉತ್ಪಾದನಾ ಚಟುವಟಿಕೆಗಳು ರಾಜ್ಯದ ಬೃಹತ್ ಉದ್ಯಮವಾಗಿತ್ತು. ಈ ಸಮಷ್ಟಿತ್ವವು ಎಲ್ಲ ಉತ್ಪಾದನೆಗಳನ್ನು ಒಳಗೊಂಡಿರಲಿಲ್ಲ. ಖಾಸಗಿ ಉತ್ಪಾದನೆಗೂ ಅವಕಾಶವಿತ್ತು. ವರ್ತಕರು ತಮ್ಮದೇ ಆದ ವ್ಯಾಪಾರವನ್ನು ಮಾಡುತ್ತಿದ್ದರು. ಕುಶಲಕರ್ಮಿಗಳು ತಮ್ಮದೇ ಅಂಗಡಿಗಳನ್ನು ಇಟ್ಟಿದ್ದರು. ಪಿರಮಿಡ್ ಮತ್ತು ದೇವಾಲಯಗಳ ನಿರ್ಮಾಣ, ರಾಜಪರಿವಾರದವರ ತೋಟಗಳಲ್ಲಿ ದುಡಿಯಲು ಸರ್ಕಾರ ಸಾಮೂಹಿಕವಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿತ್ತು.

ಸಮಾಜದಲ್ಲಿ ಸರ್ಕಾರದ ಅತಿಯಾದ ನಿಯಂತ್ರಣ ಪ್ರಾರಂಭವಾದುದು ನೂತನ ಅರಸೊತ್ತಿಗೆಯು ಅಸ್ತಿತ್ವಕ್ಕೆ ಬಂದ ನಂತರ. ಅರಸರ ನಿರಂಕುಶಾಧಿಕಾರದ ಬೆಳವಣಿಗೆ, ಅನ್ಯರಾಷ್ಟ್ರಗಳ ಆಕ್ರಮಣ ಸರ್ಕಾರದ ಆದಾಯವನ್ನು ಗಳಿಸಿದವು ಹಾಗೂ ಅಗಾಧ ಸಂಖ್ಯೆಯಲ್ಲಿ ವಸ್ತುಗಳ ಉತ್ಪಾದನೆಯು ಆಗಬೇಕಾಯಿತು. ಈ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಸರ್ಕಾರವು ಆರ್ಥಿಕ ಕ್ಷೇತ್ರದ ಮೇಲೆ ಹತೋಟಿಯನ್ನು ಸ್ಥಾಪಿಸಿತು. ವೈಭವಪೂರ್ಣವಾದ ದೇವಾಲಯಗಳನ್ನು ನಿರ್ಮಿಸಲು ಹಾಗು ಯುದ್ದೋಪಕರಣಗಳನ್ನು ತಯಾರುಮಾಡಲು ಜನರು ಒತ್ತಾಯದ ಸೇವೆಯನ್ನು ಸಲ್ಲಿಸಬೇಕಾಗಿತ್ತು. ವಿದೇಶಿ ವ್ಯಾಪಾರ ಸರ್ಕಾರದ ಸ್ವಾಮ್ಯತೆಗೆ ಒಳಪಟ್ಟಿತ್ತು. ನೂತನ ಅರಸೊತ್ತಿಗೆಯು ಪತನದ ಹಾದಿ ಹಿಡಿದಂತೆ ಸರ್ಕಾರವು ಜನರ ಆರ್ಥಿಕ ಚಟುವಟಿಕೆಗಳನ್ನು ಮತ್ತಷ್ಟು ನಿಯಂತ್ರಿಸ ತೊಡಗಿತ್ತು.

ಕಲಾ ಸಾಧನೆ

ಈಜಿಪ್ಟಿನ ಕಲೆಯ ಅಂತರಾರ್ಥವನ್ನು ವಿವರಿಸುವುದು ಕಷ್ಟ. ಇದು ರಾಷ್ಟ್ರೀಯ ಬದುಕಿನ ಸಮೂಹದ ಆಸೆ ಆಕಾಂಕ್ಷೆಯ ಅಭಿವ್ಯಕ್ತಿಯಾಗಿದೆ. ಇದು ಕಲೆಗಾಗಿ ಹುಟ್ಟಿಕೊಂಡ ಕಲೆಯಲ್ಲ. ನಿಸರ್ಗದ ವ್ಯಾಪಾರದ ನೈಜಚಿತ್ರವನ್ನೂ ಅಲ್ಲಿ ಕಾಣಲಾಗುವುದಿಲ್ಲ. ಸರ್ಕಾರಿ ಬಿಗಿ ಸೂತ್ರಗಳ ನಿರೂಪಣೆಯಲ್ಲಿ ನೈಸರ್ಗಿಕ ಅಂಶ ಅಲ್ಲಲ್ಲಿ ಮೈದಳೆದಿರುವುದುಂಟು. ಸ್ತಂಭಗಳನ್ನು ತಾಳೇಮರದ ಕಾಂಡದಂತೆ, ಶೀರ್ಷಿಕೆಗಳನ್ನು ಅರಳಿದ ಕಮಲದಂತೆ ನಿರ್ಮಿಸಿರುವುದರಲ್ಲಿ ಆ ಅಂಶಗಳು ಗೋಚರಿಸುತ್ತವೆ. ಫೆರೋವರ ಪ್ರತಿಮೆಗಳು ಶೈಲೀಕೃತ ಮಾದರಿಗಳಾಗಿರದೆ ವೈಯಕ್ತಿಕ ನೈಜಚಿತ್ರಣವೇ ಆಗಿವೆ.

ಎಲ್ಲ ನಾಗರಿಕತೆಗಳಲ್ಲೂ ವಾಸ್ತು ಅತ್ಯಂತ ಪ್ರಗತಿದಾಯಕ ಹಾಗೂ ಆಕರ್ಷಕ ಕಲೆಯೆನಿಸಿದೆ. ಈಜಿಪ್ಟಿನ ನಾಗರಿಕತೆಯಲ್ಲಿ ಈ ಅಂಶವನ್ನು ಪೂರ್ಣ ಪ್ರಮಾಣದಲ್ಲಿ ಕಾಣಬಹುದು. ಈ ಕಾಲಾವದಿಯಲ್ಲಿ ಮಾಡಿದ ಕಟ್ಟಡ ನಿರ್ಮಾಣವು ಅಂದಿನ ಸಮಾಜದ ಭಾವನೆಗಳೂ ಜನರ ಆಸೆ ಅಕಾಂಕ್ಷೆಗಳ ಮತ್ತು ಪ್ರತಿಭಾಪೂರ್ಣ ಕಲಾವಿದರ ಮೂರ್ತ ಸ್ವರೂಪದ ಮಾಧ್ಯಮವಾಗಿದೆ. ಶಿಲ್ಪ ಮತ್ತು ಚಿತ್ರಕಲೆಗಳನ್ನು ಕಡೆಗಣಿಸಿರಲಿಲ್ಲ. ಅವು ದೇವಾಲಯಗಳ ಸುಂದರ ವಿನ್ಯಾಸಕ್ಕೆ ಅವಕಾಶಗಳನ್ನು ಕಲ್ಪಿಸಿದವು. ಇವು ಕೆಲಕಾಲ ಸ್ವತಂತ್ರ ಹಾಗೂ ಪರಿಪೂರ್ಣ ಕಲೆಯಾಗಿ ಹೊರಹೊಮ್ಮಿದ್ದುಂಟು.

ಪುರಾತನ ಅರಸೊತ್ತಿಗೆಯ ಕಾಲದ ಪ್ರಮುಖ ವಾಸ್ತುಕೃತಿಯೆಂದರೆ ಪಿರಮಿಡ್‌ಗಳು. ಈ ಕಾಲದ ಮೊದಲ ಪಿರಮಿಡ್ಡನ್ನು ಕ್ರಿ.ಪೂ.೨೭೭೦ರಲ್ಲಿ ಕಟ್ಟಲಾಯಿತು. ಅಪಾರವಾದ ಮಾನವ ಶ್ರಮ ಮತ್ತು ಕೌಶಲ್ಯವನ್ನು ಆಶ್ಚರ್ಯಕರವಾದ ರೀತಿಯಲ್ಲಿ ಅದರಲ್ಲಿ ಬಳಸಿಕೊಳ್ಳಲಾಗಿದೆ. ಗ್ರೀಕ್ ಇತಿಹಾಸಕಾರ ಹೆರೊಡೊಟಸ್‌ನ ಗಿಜೆಯಲ್ಲಿರುವ ಖುಫ್ರು ಅಥವಾ ಸಿಯೋಪ್ಸ್ ಪಿರಮಿಡ್‌ವೊಂದರ ನಿರ್ಮಾಣಕ್ಕೆ ಒಂದು ಲಕ್ಷ ಕಾರ್ಮಿಕರು ಇಪ್ಪತ್ತು ವರ್ಷಗಳ ಕಾಲ ದುಡಿದಿದ್ದಾರೆಂದು ಅಂದಾಜು ಮಾಡಿದ್ದಾನೆ. ೪೮೧ ಅಡಿ ಎತ್ತರವಿರುವ ಈ ದೈತ್ಯಕಟ್ಟಡದಲ್ಲಿ ಎರಡು ದಶಲಕ್ಷ ದೊಡ್ಡದೊಡ್ಡದಾದ ಸೈಜುಗಲ್ಲುಗಳನ್ನು ಉಪಯೋಗಿ ಸಲಾಗಿದೆ. ಪ್ರತಿಯೊಂದು ಕಲ್ಲು ೨.೫ರಿಂದ ೧೫ ಟನ್ ತೂಗುತ್ತದೆ. ಅವುಗಳ ಏಣು ಬಹು ನಿಖರವಾಗಿದ್ದು ಆಧುನಿಕ ಕೆಲಸಗಾರರು ಅವುಗಳನ್ನು ಪ್ರತಿಕರಿಸಲಾರರು. ಚಕ್ರಗಳ ಉಪಯೋಗ ತಿಳಿಯದಿದ್ದ ಕಾಲದಲ್ಲಿ ಪೂರ್ವದ ಕಡೆಯಿಂದ ಅವುಗಳನ್ನು ಎಳೆದುತಂದು ಪಿರಮಿಡ್‌ನಲ್ಲಿ ಜೋಡಿಸಲಾಗಿದೆ.

ಪಿರಮಿಡ್‌ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವಾರು ವಿವರಣೆಗಳನ್ನು ಪ್ರತಿಪಾದಿಸಲಾಗಿದೆ. ಜನಸಂಖ್ಯೆ ಮಿತಿಮೀರಿದಂತೆ ಕೃಷಿ, ಗಣಿಗಾರಿಕೆ, ಕೈಗಾರಿಕೆ ಮತ್ತು ವಾಣಿಜ್ಯ ಇವುಗಳಿಂದ ಬರುವ ಅದಾಯದಿಂದ ಜನರ ಬದುಕು ನಡೆಸುವುದು ದುಸ್ತರವಾದಂತೆ, ಅವರಿಗೆ ಉದ್ಯೋಗ ನೀಡುವ ಆರ್ಥಿಕ ದೃಷ್ಟಿಯಿಂದ ಅವುಗಳ ನಿರ್ಮಾಣ ಕಾರ್ಯ ಆರಂಭವಾಗಿರಬೇಕು. ಈ ವಿವರಣೆಯಲ್ಲಿ ಸ್ವಲ್ಪ ಸತ್ಯಾಂಶವಿರುವಂತೆ ಕಂಡರೂ, ಅವು ಧಾರ್ಮಿಕ ಮತ್ತು ಸಾಮಾಜಿಕ ಪ್ರಾಮುಖ್ಯವನ್ನು ಈಜಿಪ್ಟಿನ ಅರಸರಿಗೆ ನೀಡಿದ್ದನ್ನು ಕಡೆಗಣಿಸುವಂತಿಲ್ಲ. ಪಿರಮಿಡ್‌ಗಳು ಫೆರೋವರ ಸಮಾಧಿ ವಾಸ್ತುಗಳಾಗಿದ್ದವು. ಪಿರಮಿಡ್‌ಗಳು ಈಜಿಪ್ಟಿನ ರಾಜಕೀಯ ವೈಭವದ ಹಾಗೂ ಅಲ್ಲಿನ ಅರಸರ ಮರಣಾತೀತ ಶಕ್ತಿಯ ಸಾಕ್ಷಿಗಳಾಗಿವೆ. ಸುಮಾರು ಎಂಬತ್ತು ಪಿರಮಿಡ್‌ಗಳನ್ನು ಈಜಿಪ್ಟಿನಲ್ಲಿ ಇಂದಿಗೂ ಕಾಣಬಹುದು.

ವೈಯಕ್ತಿಕ ಆತ್ಮ ವಿಮೋಚನೆಯ ಗೀಳು ಈಜಿಪ್ಟಿನ ಅರಸರಲ್ಲಿ ಪ್ರಾಧಾನ್ಯ ಗಳಿಸಿದಾಗ ಪಿರಮಿಡ್‌ಗಳ ಬದಲು ದೇಗುಲಗಳು ಪ್ರಮುಖ ವಾಸ್ತು ಪ್ರಕಾರಗಳಾದವು. ಕಾರ್ನಾಕ್, ಲಕ್ಸೋರ್‌ಗಳಲ್ಲಿ ಬಹುದೊಡ್ಡದಾದ ಹಾಗು ಪ್ರಸಿದ್ಧವಾದ ದೇಗುಲಗಳು ನೂತನ ಅರಸೊತ್ತಿಗೆಯ ಕಾಲಾವಧಿಯಲ್ಲಿ ನಿರ್ಮಾಣವಾದುವು. ಅವುಗಳ ಬೃಹದಾಕಾರದ ಸುಂದರ ವಿನ್ಯಾಸಗಳ ಕೆತ್ತನೆಯಿಂದ ಕೂಡಿದ ಸ್ತಂಭಗಳು ಅಪೂರ್ವ ಹಾಗೂ ಸಮೃದ್ಧ ವಾಸ್ತು ಪ್ರತಿಭೆಯ ಮೂಕಸಾಕ್ಷಿಗಳಾಗಿ ನಿಂತಿವೆ. ಈಜಿಪ್ಟಿನ ದೇವಾಲಯಗಳು ಬೃಹದಾಕೃತಿಗೆ ಹೆಸರಾದವು. ಕಾರ್ನಾಕಿನ ದೇವಾಲಯವು ೧೩೦ ಅಡಿ ಉದ್ದವಿದ್ದು, ಜಗತ್ತಿನ ಯಾವುದೇ ದೊಡ್ಡ ಧಾರ್ಮಿಕ ಕಟ್ಟಡಕ್ಕಿಂತ ವಿಶಾಲವಾಗಿದೆ. ಅದರ ನಡುವಣ ಅಂಗಳವೇ ನಮ್ಮ ನಾಡಿನ ಯಾವುದೇ ದೊಡ್ಡ ದೇವಾಲಯಕ್ಕಿಂತ ವಿಶಾಲವಾಗಿದೆ. ಇದರ ಸ್ತಂಭಗಳು ಬಹು ಎತ್ತರವಾಗಿವೆ. ಇವು ಎಪ್ಪತ್ತಡಿ ಎತ್ತರ ಹಾಗೂ ಇಪ್ಪತ್ತಡಿಗೂ ಹೆಚ್ಚಿನ ವ್ಯಾಸವನ್ನು ಹೊಂದಿವೆ. ಇದರ ಮೇಲಿನ ಬೋದಿಗೆ ಸುಮಾರು ಮೂರು ಜನರು ನಿಲ್ಲುವಷ್ಟು ಕೊಠಡಿಗೆ ಅವಕಾಶವನ್ನು ಒದಗಿಸಬಲ್ಲದು.

ಈಜಿಪ್ಟಿನ ಶಿಲ್ಪ ಮತ್ತು ಚಿತ್ರಕಲೆಗಳು ವಾಸ್ತುವಿನ ಚೆಲುವನ್ನು ಹೆಚ್ಚಿಸಲು ಪೂರಕವಾಗಿದ್ದವು. ಫೆರೋವರ ಪ್ರತಿಮೆಗಳು ಸಾಮಾನ್ಯವಾಗಿ ಬೃಹದಾಕಾರವಾಗಿದ್ದವು. ನೂತನ ರಾಜ್ಯಾಡಳಿತದ ಕಾಲದಲ್ಲಿ ನಿರ್ಮಾಣವಾದ ಶಿಲ್ಪಗಳು ಎಪ್ಪತ್ತೈದು ಅಡಿಗಳಿಂದ ತೊಂಬತ್ತು ಅಡಿಗಳವರೆಗೂ ಎತ್ತರವಾಗಿದ್ದವು. ಕೆಲವೊಮ್ಮೆ ಅವುಗಳಿಗೆ ಬಣ್ಣವನ್ನು ತುಂಬಿ ನೈಜತೆಯನ್ನು ತೋರಿಸಲಾಗುತ್ತಿತ್ತು. ಬಣ್ಣದ ಶಿಲಾಸ್ಫಟಿಕಗಳಿಂದ ಕಣ್ಣುಗಳ ಆಕೃತಿಗಳನ್ನು ಮಾಡಿ, ಶಿಲ್ಪಗಳ ಕಣ್ಣಿನ ಭಾಗಗಳಲ್ಲಿ ಹುದುಗಿಸಿದ್ದಾರೆ. ಇದರಿಂದ ನೈಜವೆನ್ನುವ ಭ್ರಮೆ ತುಂಬಿಬರುತ್ತವೆ. ಮುಖಭಾವವನ್ನು ನಿರ್ವಿಕಾರವಾಗಿ ಹಾಗೂ ಭಾವೋದ್ವೇಗರಹಿತವಾಗಿ ರೂಪಿಸಲಾಗಿದೆ. ಶರೀರ ರಚನಾಭಾಗವನ್ನು ಯಥಾರ್ಥವಾಗಿ ಮಾಡಿಲ್ಲದಿರುವುದನ್ನೂ ಕಾಣಬಹುದು. ತೊಡೆಯ ಉದ್ದವನ್ನು ಇರಬೇಕಾಗಿದ್ದಕ್ಕಿಂತ ಹೆಚ್ಚು ಉದ್ದವಾಗಿ ತೋರಿಸಿರುವುದುಂಟು. ಹೆಗಲಿನ ಚೌಕವನ್ನು ಹೆಚ್ಚು ಮಾಡಿರುವುದು ಹಾಗೂ ಬೆರಳುಗಳನ್ನು ಸಮಾನ ಉದ್ದವಾಗಿ ರೂಪಿಸಿರುವುದನ್ನು ಕಾಣಬಹುದು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ನೈಜರಹಿತವಾದ ಸ್ಪಿಂಕ್ಸ್ ಶಿಲ್ಪ. ಈ ಶಿಲ್ಪ ಈಜಿಪ್ಟಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ದೊರೆಯುತ್ತವೆ. ಗಿಜೆಯಲ್ಲಿರುವ ಸ್ಪಿಂಕ್ಸ್‌ನ ಮಹಾನ್ ಶಿಲ್ಪ ಪ್ರಸಿದ್ಧವಾದುದು. ಇದರಲ್ಲಿ ಫೆರೋವನ ಶಿರವನ್ನು ಸಿಂಹದ ದೇಹಕ್ಕೆ ಜೋಡಿಸಲಾಗಿದೆ. ಫೆರೋವ ಸಿಂಹದ ಧೈರ್ಯ ಮತ್ತು ಬಲವನ್ನು ಪಡೆದಿದ್ದಾನೆಂದು ಸಾಂಕೇತಿಕವಾಗಿ ತೋರಿಸುವುದೇ ಈ ಶಿಲ್ಪದ ಉದ್ದೇಶ.

ಈಜಿಪ್ಟಿನ ಶಿಲ್ಪಗಳ ಅರ್ಥವನ್ನು ಗ್ರಹಿಸುವುದು ಕಷ್ಟವೇನಲ್ಲ. ಫೆರೋವರ ಬೃಹತ್‌ಶಿಲ್ಪಗಳು ಅವರ ಮತ್ತು ಅವರ ರಾಜ್ಯದ ಬಲವನ್ನು ಪ್ರತಿನಿಧಿಸುತ್ತದೆ. ಅವರ ಸಾಮ್ರಾಜ್ಯ ವಿಸ್ತರಣೆ ಆದಂತೆ ಹಾಗೂ ನಿರಂಕುಶಾಧಿಕಾರ ಬಲವಾದಂತೆ ಶಿಲ್ಪಗಳ ಗಾತ್ರದಲ್ಲಿ ಹೆಚ್ಚಳ ಉಂಟಾಯಿತು. ಸಂಪ್ರದಾಯಬದ್ಧ ಮತ್ತು ನಿರುದ್ವಿಗ್ನ ನಿರೂಪಣೆಯನ್ನು ರಾಷ್ಟ್ರೀಯ ಬದುಕಿನ ಭದ್ರತೆಯನ್ನು ಮತ್ತು ಕಾಲಾತೀತತೆಯನ್ನು ಧ್ವನಿಸುತ್ತವೆ. ಯಾವುದೇ ಅದೃಷ್ಟದ ಏರಿಳಿತದಲ್ಲಿ ಛಿದ್ರವಾಗದ ಹಾಗೂ ನಾಶವಾಗದ ನಂಬಿಕೆಯನ್ನು ಈ ಶಿಲ್ಪಗಳು ತಿಳಿಸುತ್ತವೆ. ಗಣ್ಯ ವ್ಯಕ್ತಿಗಳ ಪ್ರತಿಕೃತಿಗಳೂ ಕೂಡ ಕಾತುರ, ಭಯ ಮತ್ತು ವಿಜಯೋತ್ಸವದ ಸಂಭ್ರಮವನ್ನು ಚಿತ್ರಿಸದೆ ನಿರಂತರ ಪ್ರಶಾಂತತೆಯನ್ನು ಉಳಿಸಿಕೊಂಡಿವೆ.  ಕೆಲರಾಷ್ಟ್ರೀಯ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಉದ್ದೇಶದಿಂದಲೇ ಶಾರೀರಿಕ ಅಂಗ ಗಳನ್ನು ವರ್ಗೀಕರಿಸಿರುವುದು ಕಂಡುಬರುತ್ತದೆ.

ಈಜಿಪ್ಟಿನ ಕಲಾಪರಂಪರೆಯ ಪ್ರಗತಿಯ ಪ್ರಮುಖ ಮಜಲನ್ನು ಕಾಣುವುದು ಅಖೆನಾಟನ್‌ನ ಆಳ್ವಿಕೆಯ ಕಾಲದಲ್ಲಿ. ಕಲೆಯನ್ನೂ ಒಳಗೊಂಡಂತೆ ಈಜಿಪ್ಟಿನ ಧಾರ್ಮಿಕ ಪರಂಪರೆಯನ್ನು ತೊರೆದು ಭಿನ್ನವಾಗಿ ನಡೆದ ಇವನು ಅಂದಿನ ಕಲಾಕ್ರಾಂತಿಗೆ ಮೂಲಪುರುಷನಾದ. ಹೊಸ ಕಲಾಶೈಲಿಯು ನೈಜಾತ್ಮಕವಾಗಿತ್ತು. ಈ ಹೊಸ ಫೆರೋವ ನಿಸರ್ಗವನ್ನು ಪ್ರೀತಿಸಿದ್ದರಿಂದ ಅಂತಹ ವ್ಯವಸ್ಥೆ ಜಾರಿಗೆ ಬರಲು ಕಾರಣವಾಯಿತು. ಅವನ ಮತ್ತು ಅವನ ಮಡದಿಯ ನೆಫರ್‌ಟಿಟಿಯರ ವ್ಯಕ್ತಿಶಿಲ್ಪಗಳಲ್ಲಿ ಹಿಂದಿನ ನಿರುದ್ವಿಗ್ನ ಬೃಹದಾಕಾರವನ್ನು ಕೈಬಿಟ್ಟು, ನೈಜ ವಿವರಣೆಗಳಿಗೆ ಆದ್ಯತೆ ಕೊಡಲಾಯಿತು. ತದೇಕ ಚಿತ್ತದಿಂದ ನೋಡುವ ಹಾಗೂ ಸ್ತ್ರೀ ಸಹಜ ಲಾವಣ್ಯದಿಂದ ಕೂಡಿದ ನೆಫರ್‌ಟಿಟಿಯರ ಮೂರ್ತಿ ಕಲಾ ಇತಿಹಾಸದಲ್ಲೇ ಅಪೂರ್ವ ಸಾಧನೆ. ಇವೇ ಕಾರಣದಿಂದ ಅಖೆನಾಟನ್‌ನ ಆಶ್ರಯದಲ್ಲಿ ರೂಪಗೊಂಡ ಚಿತ್ರಗಳೂ ಕೂಡ ಅತ್ಯುನ್ನತ, ಭಾವಗರ್ಭಿತ ಕಲಾ ಮಾಧ್ಯಮಗಳಾಗಿವೆ. ಈ ಕಾಲದ ಭಿತ್ತಿಚಿತ್ರಗಳು ಕ್ರಿಯಾಶೀಲತೆಗೆ ಹೆಸರಾಗಿವೆ. ಅಖೆನಾಟನ್‌ನ ಧರ್ಮ ಸುಧಾರಣೆಗಳು ದೀರ್ಘಕಾಲ ಹೇಗೆ ಉಳಿಯಲಿಲ್ಲವೋ, ಅದೇ ರೀತಿ ಕಲೆಯೂ ಉಳಿಯಲಿಲ್ಲ.

ಉಪಸಂಹಾರ

ನಾಗರಿಕ ಔನ್ನತ್ಯದಲ್ಲಿ ಈಜಿಪ್ಪಿನ ಸಾಧನೆಗಳನ್ನು ಸರಿಗಟ್ಟುವ ರಾಷ್ಟ್ರ ಮತ್ತೊಂದಿಲ್ಲ. ವಿಜ್ಞಾನ ಮತ್ತು ಗಣಿತದ ಕೆಲವೊಂದು ಪ್ರಮುಖ ಅಂಶಗಳು ಹುಟ್ಟಿಕೊಂಡಿದ್ದು ನೈಲ್ ನದಿಯ ಬಯಲಿನಲ್ಲಿ. ನೀರಾವರಿ, ಮಡಿಕೆ ಮತ್ತು ಗಾಜನ್ನು ತಯಾರು ಮಾಡುವಿಕೆ ಮುಂತಾದ ವಿಷಯಗಳಲ್ಲಿ ಕರಾರುವಕ್ಕಾದ ತಂತ್ರವನ್ನು ಅವರು ಅರಿತಿದ್ದರು. ಕಲೆಯ ಬಗ್ಗೆ ಸ್ಪಷ್ಟವಾದ ಜ್ಞಾನವನ್ನು ಜಗತ್ತಿನ ಇತಿಹಾಸದಲ್ಲಿ ಮೊದಲಿಗೆ ಪಡೆದಿದ್ದರು. ಈಜಿಪ್ಟರು ವಾಸ್ತುವಿದ್ಯೆಯ ತತ್ವಗಳನ್ನು ನಿಖರವಾಗಿ ಅರಿತಿದ್ದರು.

ಧಾರ್ಮಿಕ ಮತ್ತು ನೈತಿಕ ಭಾವನೆಗಳ ಬಗ್ಗೆಯೂ ಖಚಿತವಾದ ತಿಳುವಳಿಕೆಯನ್ನು ಪಡೆದಿದ್ದರು. ಪರ್ಶಿಯನ್ನರನ್ನು ಹೊರತು ಪಡಿಸಿದರೆ, ರಾಷ್ಟ್ರೀಯ ಧರ್ಮವನ್ನು ರೂಪಿಸಿದ್ದವರು ಇವರೇ. ವೈಯಕ್ತಿಕ ಅಮರತ್ವದ ನೆಲೆಯಲ್ಲಿ ಸಾವಿನ ನಂತರ ನಾಕ ನರಕಗಳ ಭಾವನೆಯನ್ನು ಈಜಿಪ್ಟರು ನಿರೂಪಿಸಿದ್ದರು. ಏಕದೈವೋಪಾಸನೆಯನ್ನು ಅಟೊನ್‌ನ ಆರಾಧನೆಯಲ್ಲಿ ಈಜಿಪ್ಟಿನ ನೈತಿಕ ವಿಧಿವಿಧಾನಗಳಲ್ಲಿ ಕಳವು ಕೊಲೆ ಮುಂತಾದ ಅಪರಾಧಗಳು ನಿಷಿದ್ಧವೆಂದು ಪರಿಗಣಿಸಲಾಗಿತ್ತು ಹಾಗೂ ಉದಾತ್ತ ಭಾವನೆಗಳೆನಿಸಿದ್ದ ನ್ಯಾಯ, ಪ್ರಗತಿಪರತೆ, ಸಮಾನಹಕ್ಕು ಮುಂತಾದ ತತ್ವಗಳು ಸೇರ್ಪಡೆಯಾಗಿದ್ದವು. ಈಜಿಪ್ಟಿನ ನಾಗರಿಕತೆಯು ಮಹತ್ತರ ಸಾಧನೆಯ ಆಗರವೆನಿಸಿದೆ.

 

ಪರಾಮರ್ಶನ ಗ್ರಂಥ

೧. ಆಫ್ರಿಕಾ ಇನ್ ದಿ ಟ್ವೆಂಟಿ ಫಸ್ಟ್ ಸೆಂಚುರಿ ಎ ಫ್ಯೂಚರಿಸ್ಟಿಕ್ ಎಕ್ಸರ್‌ಸೈಜ್

೨. ಬೆಸಿಲ್ ಡೇವಿಡ್ಸನ್, ೧೯೭೩. ವಿಚ್ ವೇ ಆಫ್ರಿಕಾ?,  ಮೂರನೆಯ ಮುದ್ರಣ, ಲಂಡನ್: ಪೆಂಗ್ವಿನ್ ಬುಕ್ಸ್.

೩. ಡಾರ್ಲಿನ್ ಮಿಲ್ಲರ್ ಮತ್ತು ಗ್ರೆಗ್, ೨೦೦೧. ದಿ ಸೌತ್ ಆಫ್ರಿಕನ್ ವರ್ಕಿಂಗ್ ಕ್ಲಾಸ್ ಪ್ರೊಡಕ್ಷನ್, ರಿಪ್ರೊಡಕ್ಷನ್ ಅಂಡ್ ಪಾಲಿಟಿಕ್ಸ್ ಪ್ಯಾಬ್ರಿಕ್ ಬಾಂಡ್, ರಾಯಟರ್ಸ್‌ಸೋಷಿಯಲಿಸ್ಟ್ ರಿಜಿಸ್ಟರ್.