ಜಗತ್ತಿನ ಏಳು ಖಂಡಗಳಲ್ಲಿ ಆಫ್ರಿಕಾ ಅತ್ಯಂತ ದೊಡ್ಡದಾದ ಎರಡನೆಯ ಖಂಡ. ಭೌಗೋಳಿಕ ಹಾಗೂ ಜನಾಂಗೀಯ ವೈವಿಧ್ಯತೆ ಇಲ್ಲಿನ ಇತಿಹಾಸದ ಮೇಲೆ ಪ್ರಭಾವ ಬೀರಿದೆ. ಇಲ್ಲಿನ ಜನರು ಬಹಳಷ್ಟು ನೀಗ್ರೋಯಿಡ್ ಮಾದರಿಯವರು. ಆಫ್ರಿಕಾ ಖಂಡದ ಬಗ್ಗೆ ಅತ್ಯಲ್ಪ ತಿಳಿದಿದ್ದ ಕಾರಣ ಅದನ್ನು ಕಗ್ಗತ್ತಲೆಯ ಭೂಭಾಗವೆಂದು ಕರೆಯಲಾಗುತ್ತಿತ್ತು. ಆದರೆ ಆಫ್ರಿಕಾಖಂಡವು ತನ್ನದೇ ಆದ ದೀರ್ಘವಾದ ಹಾಗೂ ಕುತೂಹಲವಾದ ಇತಿಹಾಸವನ್ನು ಹೊಂದಿದೆ. ಇಲ್ಲಿನ ಇತಿಹಾಸವು ಈಜಿಪ್ಟ್‌ನ ಪ್ರೌಢನಾಗರಿಕತೆಯ ಉಗಮದೊಂದಿಗೆ ಆರಂಭವಾಗುತ್ತದೆ. ಈಜಿಪ್ಟಿನ ನಾಗರೀಕತೆಯು ಪ್ರಾಚೀನವಾದುದು ಹಾಗೂ ಉನ್ನತವಾದುದು. ಇದು ಕ್ರಿ.ಪೂ.೪೦೦೦ ವರ್ಷಗಳಷ್ಟು ಹಿಂದಿನದು. ಇತಿಹಾಸಪೂರ್ವ ಮಾನವನ ಎಲುಬುಗಳು ಪಳೆಯುಳಿಕೆಗಳಾಗಿ ಕಾಣಸಿಗುವುದು ದಕ್ಷಿಣ ಹಾಗೂ ಪೂರ್ವ ಆಫ್ರಿಕಾದಲ್ಲೇ. ಆಫ್ರಿಕಾದ ಉಳಿದೆಡೆಯಲ್ಲೂ ವೈವಿಧ್ಯಮಯವಾದ ಇತಿಹಾಸದ ಬೆಳವಣಿಗೆಗಳನ್ನು ಕಾಣಬಹುದು.

ಈಜಿಪ್ಟಿನ ಮಧ್ಯದಲ್ಲಿ ಹರಿಯುವ ನೈಲ್ ನದಿ ಅದರ ನಾಗರಿಕತೆಯ ಜೀವಾಳ. ಈ ನದಿಯು ಪ್ರತಿವರ್ಷವೂ ನಿಯಮಿತವಾಗಿ ತರುವ ಮೆಕ್ಕಲು ಮಣ್ಣಿನಿಂದ ಕೃಷಿ ಸಮೃದ್ಧವಾಯಿತು. ಕೃಷಿಯೊಂದಿಗೆ ಇಲ್ಲಿನ ನಾಗರಿಕತೆ ಹಂತಹಂತವಾಗಿ ಬೆಳವಣಿಗೆಯನ್ನು ಸಾಧಿಸಿತು. ಇತಿಹಾಸದ ಪಿತಾಮಹ ಹೆರಡೋಟಸ್ ಹೇಳುವಂತೆ ಈಜಿಪ್ಟ್ ನಾಗರಿಕತೆ ನೈಲ್ ನದಿಯ ಕೊಡುಗೆ.

ಈಜಿಪ್ಟಿನ ನಾಗರಿಕತೆಯ ಇತಿಹಾಸವನ್ನು ಸಾಮಾನ್ಯವಾಗಿ ಆರು ಕಾಲಗಳಲ್ಲಿ ವಿಂಗಡಿಸಬಹುದು. ೧. ಆರಂಭಿಕ ಯುಗ, ೨. ಪುರಾತನ ಅರಸೊತ್ತಿಗೆಯ ಯುಗ, ೩. ಮೊದಲ ಮಧ್ಯಂತರ ಯುಗ, ೪. ಮಧ್ಯಮ ಅರಸೊತ್ತಿಗೆಯ ಯುಗ, ೫. ಎರಡನೆಯ ಮಧ್ಯಂತರೊಯುಗ, ೬. ನೂತನೊಅರಸೊತ್ತಿಗೆಯೊಯುಗ. ಆರಂಭಿಕೊಯುಗೊಪ್ರಾರಂಭವಾಗುವ ಮೊದಲೇ ಈಜಿಪ್ಟರು ನಾಗರಿಕತೆಯ ನಿರ್ಮಾಣಕ್ಕೆ ಪ್ರಯತ್ನಗಳನ್ನು ಕೈಗೊಂಡಿದ್ದರು. ನೀರಾವರಿ ಮತ್ತು ನಾಲೆ ವ್ಯವಸ್ಥೆ ನಿರೂಪಣೆಯಲ್ಲಿ ನಿರತರಾಗಿದ್ದರು. ಇಲ್ಲಿನ ಸಾಧನೋಪಕರಣಗಳ ಬದಲು ತಾಮ್ರದಿಂದ ಮಾಡಿದ ಉಪಕರಣಗಳನ್ನು ಪ್ರಯೋಗ ಮಾಡಲು ಕಲಿತಿದ್ದರು.

ಈಜಿಪ್ಟಿನ ಇತಿಹಾಸದಲ್ಲಿ ಎರಡು ಮಹತ್ತರವಾದ ಸಾಧನೆಗಳನ್ನು ಕ್ರಿ.ಪೂ.೩೧೦೦ರ ವೇಳೆಗೆ ರೂಪಿಸಲಾಯಿತು. ಒಂದು-ಈಜಿಪ್ಟನ್ನು ಒಂದುಗೂಡಿಸಿದ್ದು, ಎರಡು- ಬರವಣಿಗೆ ಯನ್ನು ಕಲಿತಿದ್ದು. ಮೊದಲಿಗೆ ಮೇಲಣ ಈಜಿಪ್ಟ್(ದಕ್ಷಿಣ) ಮತ್ತು ಕೆಳಗಣ ಈಜಿಪ್ಟ್ (ಉತ್ತರ) ಪ್ರಾಂತ್ಯಗಳಲ್ಲಿ ಪ್ರತ್ಯೇಕ ಆಳ್ವಿಕೆಗಳಿದ್ದವು. ನೈಲ್ ನದಿಯ ಉದ್ದಕ್ಕೂ ಏಕೀಕೃತ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ಹಾಗೂ ನಾಡಿನ ಸಮಗ್ರ ಅಭಿವೃದ್ದಿಗೆ ಒಂದೇ ಆಡಳಿತ ವ್ಯವಸ್ಥೆ ಅಗತ್ಯವಾಗಿತ್ತು. ಸಾಂಪ್ರದಾಯಿಕ ನಂಬಿಕೆಯಂತೆ ಈ ರಾಜ್ಯಗಳನ್ನು ಒಂದುಗೂಡಿಸಿದವನು(ಗ್ರೀಕರು ಹೇಳುವಂತೆ) ಮೀನ್ಸ್ ಅಥವಾ (ಈಜಿಪ್ಟರು ಹೇಳುವಂತೆ) ನಾರ್ಮರ್. ಆದರೆ ಈ ಪ್ರಗತಿಯು ಹಲವಾರು ತಲೆಮಾರುಗಳ ಸಂಯುಕ್ತ ಸಾಧನೆಯ ಫಲ-ಎನ್ನುವುದು ಆಧುನಿಕ ಇತಿಹಾಸಕಾರರ ಅಭಿಪ್ರಾಯ. ಅದೇನೇ ಇರಲಿ, ಈಜಿಪ್ಟಿನ ಮೊದಲ ರಾಜವಂಶದ ಅರಸರ ಕಾಲದ್ದು ಈಜಿಪ್ಟ್ ಒಂದುಗೂಡಿತು. ಇದೇ ವೇಳೆಗೆ ಬರವಣಿಗೆಯನ್ನು ಕಂಡುಹಿಡಿಯಲಾಯಿತು. ಇದು ಕಾಕತಾಳೀಯವೆನಿಸಿದರೂ ಹೊಸ ಸರ್ಕಾರದ ಲೆಕ್ಕಪತ್ರಗಳನ್ನು ಇಡಲು ಅಗತ್ಯವೂ ಆಗಿತ್ತು.

ಏಕೀಕೃತ ಈಜಿಪ್ಪಿನ ಮೊದಲ ಎರಡು ರಾಜವಂಶಗಳ ಆಳ್ವಿಕೆ ಕ್ರಿ.ಪೂ.೨೭೭೦ರಲ್ಲಿ ಕೊನೆಗೊಂಡು ಮೂರನೇ ರಾಜವಂಶ ಅಧಿಕಾರಕ್ಕೆ ಬಂದಿತು. ಜ್ಯೂಸರ್ ಅದರ ಮೊದಲ ಅರಸ. ಪುರಾತನ ಅರಸೊತ್ತಿಗೆಯ ಯುಗವನ್ನು  ಆರಂಭಿಸಿದ ಜ್ಯೂಸರ್‌ನು ನಿರಂಕುಶ ಪ್ರಭುತ್ವವನ್ನು ಜಾರಿಗೆ ತಂದ. ಅದರ ಸಂಕೇತವಾಗಿ ಮೊದಲ ಪಿರಮಿಡ್‌ನ ನಿರ್ಮಾಣವನ್ನು ಆರಂಭಿಸಿದ. ಈಜಿಪ್ಟಿನ ಅರಸರನ್ನು ಫೆರೋವರೆಂದು ಕರೆಯಲಾಗುತ್ತಿತ್ತು. ಈ ಕಾಲದಲ್ಲಿ ಫೆರೋವರ ಅಧಿಕಾರ ಅಪರಿಮಿತವಾಯಿತು. ಇವನನ್ನು ಸೂರ್ಯದೇವನ ಮಗನೆಂದು ತಿಳಿಯಲಾಯಿತು. ರಾಜವಂಶದ ಧರ್ಮಗಳಲ್ಲಿ ಹರಿಯುವ ನೆತ್ತರವನ್ನು ಅಪವಿತ್ರ ಗೊಳಿಸಲಿಚ್ಛಿಸದೆ, ಫೆರೋವನು ತನ್ನ ಸೋದರಿಯಲ್ಲಿ ಒಬ್ಬಳನ್ನು ಅಥವಾ ಹಲವರನ್ನು ಮದುವೆಯಾಗುತ್ತಿದ್ದನು. ಪುರೋಹಿತರು ಅರಸರ ಅಧೀನ ಅಧಿಕಾರಿಗಳಾಗಿರುತ್ತಿದ್ದರು. ಅರಸನೇ ಪ್ರಧಾನ ಪುರೋಹಿತನಾಗಿರುತ್ತಿದ್ದ. ಪುರಾತನ ಅರಸೊತ್ತಿಗೆಯ ಆಳ್ವಿಕೆಯು ಕಾಂತಿ ಅನಾಕ್ರಮಣಕಾರಿ ನೀತಿಗಳಿಂದ ಕೂಡಿತ್ತು. ಈ ಸೃಷ್ಟಿಯಿಂದ ಈ ಕಾಲದ ಆಡಳಿತ ವ್ಯವಸ್ಥೆ ಉನ್ನತವಾದುದೇ. ಫೆರೋವನು ತನ್ನದೇ ಆದ ಸೈನ್ಯ ಅಥವಾ ಸೈನ್ಯಿಕ ವ್ಯವಸ್ಥೆಯನ್ನು ಹೊಂದಿರಲಿಲ್ಲ. ಪ್ರತಿಯೊಂದು ಸ್ಥಳೀಯ ಆಡಳಿತ ಘಟಕವು ಸೈನ್ಯವನ್ನು  ಹೊಂದಿತ್ತು. ಸ್ಥಳೀಯ ಆಡಳಿತಾಧಿಕಾರಿಗಳು ಸೇನಾಧಿಕಾರಿಗಳೇ ಆಗಿದ್ದರು. ಸಾರ್ವಜನಿಕ ಕೆಲಸ ನಿರ್ವಹಣೆಾಗಲಿ ಅಥವಾ ಹೊರಗಿನ ದಾಳಿಯ ಕಾಲದಲ್ಲಾಗಲಿ ಈ ಸೇನೆಗಳು ಫೆರೋವನ ನೆರವಿಗೆ ಧಾವಿಸುತ್ತಿದ್ದವು. ಅವರಲ್ಲೊಬ್ಬ ಅಧಿಕಾರಿ ಸಮಗ್ರ ಸೇನೆಯ ನೇತಾರನಾಗುತ್ತಿದ್ದ. ಸರ್ಕಾರಕ್ಕೆ ತನ್ನದೇ ಆದ ರಾಷ್ಟ್ರೀಯ ಸೇನೆ ಎಂಬುದಿರಲಿಲ್ಲ. ಇದಕ್ಕೆ ನೈಸರ್ಗಿಕ ಪರಿಸರವೇ ಕಾರಣವಿರಬೇಕು. ಪೂರ್ವ ಮತ್ತು ಉತ್ತರದಲ್ಲಿ ಕಡಲು, ಪಶ್ಟಿಮದಲ್ಲಿ ದುರ್ಗಮವಾದ ವಿಶಾಲವಾದ ಮರುಳುಗಾಡು ನಾಡನ್ನು ಸುತ್ತುವರೆದು ಅಂತಹ ರಕ್ಷಣೆಯನ್ನು ಒದಗಿಸಿದ್ದವು. ನಾಡಿನ ಬತ್ತದ ಫಲವತ್ತತೆ, ಉತ್ಪಾದನೆ ಶೋಷಣೆಯಿಂದ ನಡೆಯದೆ ಪರಸ್ಪರ ಸಹಕಾರದಿಂದ ಅವಲಂಬಿತವಾದದ್ದು ಕಾರಣವಿರಬೇಕು. ಇದರಿಂದ ರಾಷ್ಟ್ರರಕ್ಷಣೆಯ ಬಗ್ಗೆ ನಿರ್ಲಿಪ್ತತೆ ಬೆಳೆಯಿತು.

ಪುರಾತನ ಅರಸೊತ್ತಿಗೆಯ ಹಲವು ಶತಕಗಳು ಸೌಹಾರ್ದತೆ ಮತ್ತು ಸಮೃದ್ಧತೆಯಿಂದ ಕೂಡಿತ್ತು. ಕ್ರಿ.ಪೂ.೨೨೦೦ರ ವೇಳೆಗೆ ಆರನೇ ರಾಜವಂಶರೊಂದಿಗೆ ಇದು ಕೊನೆಗೊಂಡಿತು. ಇದಕ್ಕೆ ಕಾರಣಗಳು ಹಲವಾರು. ಅಪಾರ ಹಣ ವೆಚ್ಚವಾಗುವ ಪಿರಮಿಡ್‌ನಂತಹ ಬೃಹತ್ ಯೋಜನೆಯ ನಿರ್ಮಿತಿಯಲ್ಲಿ ತೊಡಗಿದರು. ಇದರಿಂದ ಸರ್ಕಾರದ ಬೊಕ್ಕಸ ಬರಿದಾಯಿತು. ನೈಸರ್ಗಿಕ ವಿಕೋಪ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು. ಹವಾಮಾನದ ವೈಪರೀತ್ಯದಿಂದಾಗಿ ಕೃಷಿ ಬೆಳೆ ನಿರಂತರವಾಗಿ ವಿಫಲವಾಯಿತು. ಈ ನಡುವೆ ಪ್ರಾಂತೀಯ ಉನ್ನತಾಧಿಕಾರಿಗಳು ಪ್ರಬಲರಾದರು. ಕೇಂದ್ರೀಯ ಆಡಳಿತ ವ್ಯವಸ್ಥೆ ದುರ್ಬಲವಾಯಿತು. ಈ ಕಾಲದಲ್ಲೇ ಮೊದಲ ಮಧ್ಯಾಂತರ ಯುಗ ಪ್ರಾರಂಭವಾಯಿತು. ಎಲ್ಲೆಲ್ಲೂ ಅರಾಜಕತೆ ಹಬ್ಬಿತು. ಪ್ರಾಂತೀಯ ಸರದಾರರು ತಮ್ಮದೇ ಆದ ರಾಜ್ಯಗಳನ್ನು ಸ್ಥಾಪಿಸಿ ಪರಸ್ಪರ ಕಿತ್ತಾಟದಲ್ಲಿ ತೊಡಗಿದ್ದುಂಟು. ಆಂತರಿಕ ದರೋಡೆಕೋರರ ದಾಳಿಗಳು, ಮರುಗಾಡಿನ ಬುಡಕಟ್ಟು ಜನಾಂಗದವರ ಆಕ್ರಮಣಗಳು ಹದಗೆಟ್ಟ ರಾಜಕೀಯ ಪರಿಸ್ಥಿತಿಯನ್ನು ಮತ್ತಷ್ಟು ಅತಂತ್ರಗೊಳಿಸಿದವು. ಕ್ರಿ.ಪೂ.೨೦೫೦ರ ವೇಳೆಗೆ ಅಧಿಕಾರಕ್ಕೆ ಬಂದ ಹನ್ನೊಂದನೇ ರಾಜವಂಶ ಈ ಅರಾಜಕತೆಯನ್ನು ಕೊನೆಗೊಳಿಸಿತು. ಇದನ್ನೇ ಈಜಿಪ್ಟಿನ ಇತಿಹಾಸದಲ್ಲಿ ‘ಮಧ್ಯಮ ಅರಸೊತ್ತಿಗೆಯ ಯುಗ’ ಎಂದು ಕರೆಯಲಾಗುತ್ತದೆ.

ಮಧ್ಯಮ ಅರಸೊತ್ತಿಗೆಯ ಕಾಲಾವಧಿಯಲ್ಲಿ ಸರ್ಕಾರವು ಪುರಾತನ ಅರಸೊತ್ತಿಗೆಯ ಯುಗಕ್ಕಿಂತಲೂ ಹೆಚ್ಚಿನ ಬದ್ಧತೆಯನ್ನು ಹೊಂದಿತ್ತು. ಪ್ರಾಂತೀಯ ಸರ್ಕಾರದ ಉಪಟಳವನ್ನು ಎದುರಿಸುವುದು ಹನ್ನೊಂದನೇ ರಾಜವಂಶಕ್ಕೆ ಕಷ್ಟವೇ ಆಯಿತು. ಕ್ರಿ.ಪೂ.೧೭೮೬ರ ಅವಧಿಯಲ್ಲಿ ಆಳಿದ ಹನ್ನೆರಡನೇ ರಾಜವಂಶ ಮಧ್ಯಮ ವರ್ಗದವರ ನೆರವು ಸಹಕಾರಗಳಿಂದ ಸಮಸ್ಯೆಗಳನ್ನು ಎದುರಿಸಿ, ಸಮರ್ಥವಾದ ಆಡಳಿತವನ್ನು ನೀಡಿತು. ಈ ಮಧ್ಯಮ ವರ್ಗದಲ್ಲಿ ಅಧಿಕಾರಿಗಳು, ವರ್ತಕರು, ಕಲಾಕಾರರು ಮತ್ತು ಕುಶಲಕರ್ಮಿಗಳು ಹಾಗೂ ರೈತರು ಸೇರ್ಪಡೆಯಾಗಿದ್ದರು. ಇದರಿಂದ ಸರಕಾರದ ಪ್ರಾಬಲ್ಯ ತಗ್ಗಿ, ನಾಡಿನ ಅಗಾಧ ಅಭಿವೃದ್ದಿಗೆ ಚಾಲನೆ ದೊರೆಯಿತು. ಸಾಮಾಜಿಕ ನ್ಯಾಯವಿತರಣೆ ಮತ್ತು ಬೌದ್ದಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಯಿತು. ಸಾರ್ವತ್ರಿಕವಾಗಿ ಉಪಯೋಗವಿಲ್ಲದ ಪಿರಮಿಡ್ಡುಗಳ ನಿರ್ಮಾಣವನ್ನು ಕೈಬಿಟ್ಟು ಜನಸಮೂಹಕ್ಕೆ ಅನುಕೂಲವಾದ ನೀರಾವರಿ ಮತ್ತು ಕಾಲುವೆಗಳ ನಿರ್ಮಾಣ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಯಿತು. ಧಾರ್ಮಿಕವಾಗಿ ಜನರಿಗೆ ಸ್ವಾತಂತ್ರ್ಯವನ್ನು ನೀಡಲಾಯಿತು. ಹಣದ ಅಗತ್ಯಕ್ಕೆ ಒಳಗಾಗಿದ್ದ ಧಾರ್ಮಿಕ ವಿಧಿ ಆಚರಣೆಗಳನ್ನು ಕೈಬಿಟ್ಟು ಧರ್ಮವೆಂದರೆ ಸನ್ನಡತೆಯ ಸನ್ಮಾರ್ಗವೆಂಬ ಭಾವನೆಯನ್ನು ಎಲ್ಲೆಡೆಯೂ ರೂಪಿಸಲಾಯಿತು. ಈಗ  ಎಲ್ಲ ಕಾರಣಗಳಿಂದ ಹನ್ನೆರಡನೇ ರಾಜವಂಶದ ಆಳ್ವಿಕೆಯನ್ನು ಈಜಿಪ್ಟಿನ ಚಿನ್ನದ ಕಾಲವೆಂದು ಕರೆಯಬಹುದು.

ಹನ್ನೆರಡನೆಯ ರಾಜವಂಶದ ಆಳ್ವಿಕೆಯ ನಂತರ ಈಜಿಪ್ಟಿನಲ್ಲಿ ಎರಡನೇ ಮಧ್ಯಾಂತರ ಯುಗ ಪ್ರಾರಂಭವಾಯಿತು. ಇದು ಆಂತರಿಕ ಗುದ್ದಾಟ ಮತ್ತು ವಿದೇಶಿಯರ ದಾಳಿಗಳ ಕಾಲ. ಈ ಪ್ರಕ್ಷುಬ್ಧ ಪರಿಸ್ಥಿತಿ ಕ್ರಿ.ಪೂ.೧೭೮೬ರಿಂದ ಕ್ರಿ.ಪೂ.೧೫೬೦ರವರೆಗೆ ಎರಡು ಶತಕಗಳ ಕಾಲ ಮುಂದುವರೆಯಿತು. ಇದರ ಬಗ್ಗೆ ದೊರೆಯುವ ಬರವಣಿಗೆಗಳು ಅತ್ಯಲ್ಪ. ಇವು ಪ್ರತಿಗಾಮಿ ಸರದಾರರ ದಂಗೆಗಳೇ ಕಾರಣವೆನ್ನುವುದನ್ನು ತಿಳಿಸುತ್ತವೆ. ಫೆರೋವರು ತಮಗಿದ್ದ ಅಗಾಧ ಅಧಿಕಾರದಿಂದ ವಂಚಿತರಾದರು. ಹನ್ನೆರಡನೇ ರಾಜವಂಶದ ಸಾಮಾಜಿಕ ಹಾಗೂ ಜನಹಿತ ಸಾಧನೆಗಳು ಮಣ್ಣುಪಾಲಾದವು. ಕ್ರಿ.ಪೂ.೧೭೫೦ರ ಸುಮಾರಿಗೆ ಹೈಕ್ಸೋಸರ ದಾಳಿಗಳಿಗೆ ಈಜಿಪ್ಟ್ ಗುರಿಯಾಯಿತು. ಹೈಕ್ಸೋಸ್ ಎಂದರೆ ವಿದೇಶಿ ಅರಸನೆಂದರ್ಥ. ಇವರು ಏಷ್ಯಾ ಮೈನರ್ ಪ್ರಾಂತ್ಯದ ಮಿಶ್ರಿತ ಬುಡಕಟ್ಟು ಜನಾಂಗದವರು. ಇವರ ಸೇನೆಯಲ್ಲಿ ಕುದುರೆಗಳು ಮತ್ತು ರಥಗಳಿದ್ದುದರಿಂದ ಇವರು ಸುಲಭವಾಗಿ ಜಯ ಗಳಿಸಿ ಈಜಿಪ್ಟನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಇವರ ಆಳ್ವಿಕೆ ಈಜಿಪ್ಟಿನ ಇತಿಹಾಸದ ಮೇಲೆ ಅಪಾರವಾದ ಪ್ರಭಾವವನ್ನು ಬೀರಿದ್ದುಂಟು. ಇವರ ಸಂಪರ್ಕದಿಂದ ಈಜಿಪ್ಟಿನವರೆಗೆ ಹೊಸ ಯುದ್ಧತಂತ್ರಗಳ ಪರಿಚಯವಾಯಿತು.

ಕ್ರಿ.ಪೂ.ಹದಿನೇಳನೆಯ ಶತಮಾನದ ಅಂಚಿನಲ್ಲಿ ಮೇಲಣ ಈಜಿಪ್ಟ್(ದಕ್ಷಿಣ) ಜನರು ಹೈಕ್ಸೋಸರ ವಿರುದ್ಧ ಬಂಡಾಯವೆದ್ದರು. ಇದು ತಕ್ಷಣವೇ ಈಜಿಪ್ಟಿನ ಉದ್ದಗಲಕ್ಕೂ ಹರಡಿ, ದಾಳಿಕೋರರ ವಿರುದ್ಧ ಜನ ಒಂದಾದರು. ಹೋರಾಟ ಮುಂದುವರೆದು ನಾಡು ದಾಳಿಕೋರರಿಂದ ಮುಕ್ತವಾಯಿತು. ಈ ಜಯದ ನಾಯಕನಾದ ಅಹ್ಮೋಸನು ಹದಿನೆಂಟನೇ ರಾಜವಂಶವನ್ನು ಸ್ಥಾಪಿಸಿದ. ಇವನ ಆಳ್ವಿಕೆಯಲ್ಲಿ ಪ್ರಬಲವಾದ ಕೇಂದ್ರೀಯ ಆಡಳಿತ ವ್ಯವಸ್ಥೆಯನ್ನು ಹೈಕ್ಸೋಸರ ವಿರುದ್ಧ ಹೋರಾಡಿದ್ದರಿಂದ ಸರದಾರರು ಹಾಗೂ ಸ್ಥಳೀಯರ ಮುಖಾಂತರ ಪ್ರಾಬಲ್ಯ ಕಣ್ಮರೆಯಾಯಿತು.

ಅಹ್ಮೋಸ್‌ನ-ಆಗಮನದಿಂದ ಆರಂಭವಾದ ಕಾಲವನ್ನು ಈಜಿಪ್ಪಿನ ಸಾಮ್ರಾಜ್ಯದ ‘ನೂತನ ಅರಸೊತ್ತಿಗೆಯ ಯುಗ’ ಎಂದು ಕರೆಯುತ್ತೇವೆ. ಇದು ಕ್ರಿ.ಪೂ.೧೫೬೦ರಲ್ಲಿ ಪ್ರಾರಂಭವಾಗಿ ಕ್ರಿ.ಪೂ.೧೯೮೭ರಲ್ಲಿ ಕೊನೆಗೊಂಡಿತು. ಈ ಕಾಲದಲ್ಲಿ ಹದಿನೆಂಟು, ಹತ್ತೊಂಬತ್ತು ಮತ್ತು ಇಪ್ಪತ್ತನೇ ರಾಜವಂಶಗಳು ಆಳಿದವು. ಈ ಸಮಯದಲ್ಲಿ ಸೌಹಾರ್ದ ಆಡಳಿತ ನೀತಿಯನ್ನು ಕಡೆಗಣಿಸಿ, ಆಕ್ರಮಣಶೀಲ ಹಾಗೂ ಸಾಮ್ರಾಜ್ಯಶಾಹಿ ನೀತಿ ರಾಷ್ಟ್ರದ ಧ್ಯೇಯವಾಯಿತು. ಸೈನ್ಯವನ್ನು ನೂತನವಾಗಿ ಸಂಘಟಿಸಲಾಯಿತು. ಹೈಕ್ಸೋಸ್‌ರನ್ನು ಹೊರಹಾಕಿದ ವಿಜಯದ ಗುಂಗಿನಲ್ಲೇ ಈಜಿಪ್ಟರು ಮತ್ತಷ್ಟು ಹೋರಾಟ ನಡೆಸಿ ಗೆಲುವು ಪಡೆಯಲು ಮುಂದಾದರು. ಅಹ್ಮೋಲನ ಉತ್ತರಾಧಿಕಾರಿಗಳು ಪೆಲೆಸ್ತೈನ್ ಮೇಲೆ ದಾಳಿ ನಡೆಸಿ ಸಿರಿಯವನ್ನು ಗೆದ್ದುಕೊಂಡರು. ಹೊಸ ಫೆರೋವರು ದಾಳಿ ನಡೆಸಿದ ರಾಜ್ಯಗಳ ಪ್ರತಿರೋಧವನ್ನು ಭೀಕರವಾಗಿ ದಮನ ಮಾಡಿ, ರಾಜ್ಯವನ್ನು ನೈಲ್ ನದಿಯಿಂದ ಯೂಫ್ರಟಿಸ್ ನದಿಯವರೆಗೂ ವಿಸ್ತರಿಸಿದರು. ಇದರಿಂದ ಗೆದ್ದ ಪ್ರದೇಶಗಳ ಜನರ ಪ್ರೀತಿಯನ್ನು ಗಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಿರಿಯನ್ನರೂ ಕೂಡ ನಿರಂತರವಾಗಿ ದಂಗೆಯೆದ್ದರು. ಗೆದ್ದ ಪ್ರದೇಶಗಳ ಪ್ರತಿರೋಧವನ್ನು ಅಡಗಿಸುತ್ತ ಫೆರೋವರು ಆಳಿದರೂ, ಅಂತಿಮ ದುರಂತವನ್ನು ಅವರು ತಡೆಯಲಾಗಲಿಲ್ಲ. ಅಕ್ರಮಿಸಿದ ನಾಡುಗಳ ಸಂಪತ್ತು ಈಜಿಪ್ಟಿಗೆ ಅವ್ಯಾಹತವಾಗಿ ಹರಿದು ಬಂದಿದ್ದುಂಟು. ಇದರಿಂದ ಭ್ರಷ್ಟತೆ ಹೆಚ್ಚಿತು ಹಾಗೂ ಭೋಗ ಜೀವನಕ್ಕೆ ಜನತೆ ಜೋತು ಬಿದ್ದರು. ರಾಷ್ಟ್ರದ ಅಂತಃಸತ್ವದಲ್ಲಿ ಚಾಳಿಯುಂಟಾಯಿತು. ಅಧೀನ ರಾಜ್ಯಗಳ ನಿರಂತರ ದಂಗೆಗಳಿಂದ ರಾಷ್ಟ್ರದ ಶಕ್ತಿ ಉಡುಗಿ ಹೋಯಿತು. ಕ್ರಿ.ಪೂ.ಹನ್ನೆರಡನೇ ಶತಮಾನದ ಸುಮಾರಿಗೆ ಗೆದ್ದ ರಾಜ್ಯಗಳು ಶಾಶ್ವತವಾಗಿ ಕೈಬಿಟ್ಟು ಹೋದುವು.

ನೂತನ ಅರಸೊತ್ತಿಗೆಯ ಕಾಲದ ಸರ್ಕಾರವು ಪುರಾತನ ರಾಜ್ಯಾಡಳಿತ ವ್ಯವಸ್ಥೆಯನ್ನು ಎಲ್ಲ ರೀತಿಯಲ್ಲೂ ಹೋಲುತ್ತಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹೊಸ ಸರ್ಕಾರವು ಹೆಚ್ಚಾಗಿ ನಿರಂಕುಶ ಮನೋಭಾವವನ್ನು ಮೈಗೂಡಿಸಿಕೊಂಡಿತ್ತು. ಸೈನ್ಯಶಕ್ತಿಯು ಫೆರೋವರ ಆಡಳಿತದ ಮೂಲ ಸೆಲೆಯಾಗಿತ್ತು. ಈಜಿಪ್ಟಿನ ಜನರನ್ನು ಭಯಗೊಳಿಸಿ, ಬಲಾತ್ಕಾರದ ಬೆಂಬಲ ಪಡೆಯಲು ಫೆರೋವರ ಪ್ರಬಲ ಪಡೆ ಸದಾ ಸನ್ನದ್ದಾಗಿತ್ತು. ಬಂಡಾಯದ ಪ್ರವೃತ್ತಿಯ ಬಹುತೇಕ ಪ್ರಾಂತೀಯ ಸರದಾರರು ಅರಸನ ವಿಧೇಯ ಆಸ್ಥಾನಿಕರಾದರು. ಹೀಗೆ ಫೆರೋವನೇ ಸರ್ವೋಚ್ಚ ವ್ಯಕ್ತಿಯಾದ.

ಕಟ್ಟಕಡೆಯ ಫೆರೋವರಲ್ಲಿ ಪ್ರಸಿದ್ಧನಾದವನು ಮೂರನೇ ರಾಮ್‌ಸೇಸನು (ಕ್ರಿ.ಪೂ.೧೧೮೨-೧೧೫೧). ಅವನ ನಂತರ ಅನೇಕ ಅರಸರು ಅವನ ಹೆಸರಿನಲ್ಲೇ ಬಂದರೂ ಅವನ ದಕ್ಷತೆಯನ್ನು ಮೈಗೂಡಿಸಿಕೊಂಡಿರಲಿಲ್ಲ. ಕ್ರಿ.ಪೂ.ಹನ್ನೆರಡನೇ ಶತಮಾನದ ವೇಳೆಗೆ ಈಜಿಪ್ಟ್ ಅನಾಗರಿಕ ಬುಡಕಟ್ಟು ಜನರ ದಾಳಿಗೆ ಗುರಿಯಾಯಿತು. ಸಾಮಾಜಿಕವಾಗಿ ಪತನದ ಹಾದಿನ್ನಿಡಿಯಿತು. ಇದೇ ವೇಳೆಗೆ ಈಜಿಪ್ಟರು ತಮ್ಮ ಸೃಜನಾತ್ಮಕ ಪ್ರತಿಭೆಯನ್ನು ಕಳೆದುಕೊಂಡಿದ್ದರು. ಅಮರತ್ವವನ್ನು ಗಳಿಸಲು ಸಮಾಜದ ಎಲ್ಲ ವರ್ಗಗಳ ಜನತೆ ವಾಮಾಚಾರದ ಮಾರ್ಗವನ್ನು ಹಿಡಿದಿದ್ದುಂಟು. ಪುರೋಹಿತ ವರ್ಗದ ಅಧಿಕಾರ ಅಧಿಕವಾದಂತೆ, ರಾಷ್ಟ್ರದ ಪತನ ಸನ್ನಿಹಿತವಾಯಿತು. ಪುರೋಹಿತವರ್ಗವು ಸಮಾಜದಲ್ಲಿ ವಿಶೇಷಾಧಿಕಾರವನ್ನು ಪಡೆದು, ಫೆರೋವರ ಮೇಲೂ ತಮ್ಮ ಔನ್ನತ್ಯವನ್ನು ಛಾಪಿಸತೊಡಗಿದರು.

ಕ್ರಿ.ಪೂ.ಹತ್ತನೆಯ ಶತಮಾನದ ಮಧ್ಯಭಾಗದಿಂದ ಎಂಟನೇ ಶತಮಾನದ ಕೊನೆಯವರೆಗೂ ಲಿಬಿಯಾದ ಅನಾಗರಿಕ ರಾಜವಂಶವು ಫೆರೋವರ ಸಿಂಹಾಸನವನ್ನು ಆಕ್ರಮಿಸಿತು. ಲಿಬಿಯನ್ನರ ನಂತರ ಪಶ್ಚಿಮದ ಮರುಳುಗಾಡಿನ ನುಬಿಯ(ಇಥಿಯೋಪಿಯನ್ನರು) ಮೇಲಣ ಈಜಿಪ್ಟನ್ನು ಅಕ್ರಮಿಸಿದರು. ಕ್ರಿ.ಪೂ.೬೭೦ರಲ್ಲಿ ಈಜಿಪ್ಟ್ ಅಸ್ಸೀರಿಯನ್ನರ ಅಕ್ರಮಣಕ್ಕೆ ಗುರಿಯಾದರೂ, ಅವರ ಆಳ್ವಿಕೆ ಎಂಟೇ ವರ್ಷಗಳಲ್ಲಿ ಕೊನೆಗೊಂಡಿತು. ಅನಂತರ ರಾಷ್ಟ್ರ ಸ್ವಾತಂತ್ರವನ್ನು ಪಡೆದು ಪ್ರತಿಭಾಪೂರ್ಣ, ಸಾಂಸ್ಕೃತಿಕ ಪುನರುಜ್ಜೀವನವನ್ನು ಆರಂಭಿಸಿದರೂ, ಅದು ಕ್ಷಣಿಕವಾಗಿತ್ತು. ಕ್ರಿ.ಪೂ.೫೨೫ರಲ್ಲಿ ಈಜಿಪ್ಟ್ ಪರ್ಶಿಯನ್ನರ ದಾಳಿಗೆ ಗುರಿಯಾಯಿತು. ಈಜಿಪ್ಟಿನ ಮಹತ್ತರವಾದ ನಾಗರಿಕತೆ ಮತ್ತೆಂದೂ ಚೇತರಿಸಿಕೊಳ್ಳಲೇ ಇಲ್ಲ. ಇತಿಹಾಸದ ಕಾಲಗರ್ಭದಲ್ಲಿ ಅದರ ವೈಭವ ಅಡಗಿ ಹೋಯಿತು.

ಧರ್ಮ

ಧರ್ಮ ಪ್ರಾಚೀನ ಈಜಿಪ್ಟಿನ ಬದುಕಿನ, ಎಲ್ಲ ಸ್ತರಗಳ ಮೇಲೂ ಮಹತ್ತರವಾದ ಪಾತ್ರವನ್ನು ವಹಿಸಿತ್ತು. ಕಲೆ ಧರ್ಮದ ಮಾಧ್ಯಮವಾಗಿ ಅಭಿವ್ಯಕ್ತಿ ಪಡೆದುಕೊಂಡಿತ್ತು. ಧಾರ‌್ಮಿಕ ಬೋಧನೆಗಳಿಂದ ಸಾಹಿತ್ಯ ಮತ್ತು ದರ್ಶನಶಾಸ್ತ್ರಗಳು ಸಮೃದ್ಧವಾದವು. ಪುರಾತನ ಅರಸೊತ್ತಿಗೆಯ ಕಾಲದಲ್ಲಿ ಸರ್ಕಾರವು ದೇವರ ಪ್ರತಿನಿಧಿ ಎನಿಸಿದ ಪುರೋಹಿತನ ಪಾತ್ರವನ್ನು ವಹಿಸಿತ್ತು. ಮುಂದಿನ ಫೆರೋವರು ದೇವರ ಹೆಸರಿನಲ್ಲಿ ಆಳಿದರು. ನಾಡಿನ ಅಪಾರ ಸಂಪತ್ತು ಭವ್ಯವಾದ ಸಮಾಧಿಮಂದಿರಗಳ ನಿರ್ಮಾಣಕ್ಕೆ ಹಾಗೂ ಪುರೋಹಿತರ ಬಲವರ್ಧನೆಗೆ ಅವಕಾಶಗಳನ್ನು ಕಲ್ಪಿಸಿದವು. ಈಜಿಪ್ಟರ ಧರ್ಮವು ಬಹುದೇವತಾರಾಧನೆಯಿಂದ ಏಕದೇವತಾರಾಧನೆಯ ವಿವಿಧ ಹಂತಗಳಲ್ಲಿ ರೂಪಾಂತರ ಹೊಂದುತ್ತು ಹೋಯಿತು. ಪ್ರತಿಯೊಂದು ಊರು ಅಥವಾ ಜಿಲ್ಲೆ ತನ್ನದೇ ಆದ ಸ್ಥಳೀಯ ದೇವರನ್ನು ಹೊಂದಿತ್ತು. ಇವು ಆ ಊರಿನ ಪ್ರೇಕ್ಷಕರಾಗಿ ಇಲ್ಲವೇ ನಿಸರ್ಗದ ಪ್ರತಿನಿಧಿಯಾಗಿದ್ದವು. ಸಮಗ್ರ ಈಜಿಪ್ಟನ್ನು ಒಂದುಗೂಡಿಸಿದ್ದರಿಂದ ಬಹುದೇವತಾರಾಧನೆಯ ಬದಲು ಏಕದೇವತಾರಾಧನೆ ಜಾರಿಗೆ ಬಂದಿತು. ವ್ಯಾಪಕವಾಗಿ ಸೂರ್ಯಾರಾಧನೆಯೂ ಬಳಕೆಗೆ ಬಂದಿತು. ಸೂರ್ಯನನ್ನು ‘ರಾ’ ಎಂದು ಕರೆಯಲಾಗುತ್ತಿತ್ತು. ಮಧ್ಯಮ ಅರಸೊತ್ತಿಗೆಯ ಥೇಬ್ಸ್ ರಾಜವಂಶದ ಕಾಲದಲ್ಲಿ ಸೂರ್ಯಪೂಜೆ ಮತ್ತಷ್ಟು ಪ್ರಾಮುಖ್ಯ ಪಡೆದುಕೊಂಡಿತು. ಸೂರ್ಯದೇವ ಥೇಬ್ಸ್ ಪ್ರಮುಖ ದೇವರಾಗಿ ಅಮೊನ್ ಅಥವಾ ಅಮೊನ್ ‘ರಾ’ ಎಂಬ ಹೆಸರಿನಲ್ಲಿ ಪ್ರಸಿದ್ಧನಾದ. ನೈಲ್ ನದಿಯನ್ನು ಔಸಿರಿಸ್ ಹೆಸರಿನಲ್ಲಿ ಪೂಜಿಸಲಾಯಿತು. ಈ ಎರಡು ದೇವರು ವಿಶ್ವವನ್ನು ನಿಯಂತ್ರಿಸುತ್ತಿದ್ದಾರೆಂದು ಈಜಿಪ್ಟಿನ ಜನರು ತಿಳಿದಿದ್ದರು. ಇವರಲ್ಲದೆ ಇನ್ನೂ ಹಲವು ದೇವರಿದ್ದರೂ ಅವು ಕಿರಿಯ ಸ್ಥಾನವನ್ನು ಪಡೆದಿದ್ದವು. ಪುರಾತನ ಅರಸೊತ್ತಿಗೆಯ ಸೌರವ್ಯವಸ್ಥೆಯನ್ನು ಅದರಲ್ಲಿ ವಿಶೇಷವಾಗಿ ರಾನನ್ನು ಪೂಜಿಸುತ್ತಿದ್ದರು. ಇದರಿಂದ ಈಜಿಪ್ಟಿನ ಜನರಿಗೆ ಅಮರತ್ವ ಪ್ರಾಪ್ತವಾಗುವುದೆಂದು ಅವರ ನಂಬಿಕೆ. ಫೆರೋವ ‘ರಾ’ನ ಪ್ರತಿನಿಧಿಯಾಗಿ ಈಜಿಪ್ಟನ್ನು ಆಳುತ್ತಿದ್ದ. ‘ರಾ’ ಈಜಿಪ್ಟನ್ನು  ರಕ್ಷಿಸುವವನಲ್ಲದೆ, ಸನ್ನಡತೆ, ನ್ಯಾಯಪಾಲನೆ ಮತ್ತು ಸತ್ಯಾಚಾರವನ್ನು ನೋಡಿಕೊಳ್ಳುವ ದೇವರಾಗಿದ್ದು, ಜಗತ್ತಿನ ನೈತಿಕಮಟ್ಟವನ್ನು ನಿರೂಪಿಸುವವನೂ ಆಗಿದ್ದ. ಜನರಿಗೆ ಸುಖವನ್ನು ನೀಡುವವನೂ ಹೌದು, ಸನ್ಮಾರ್ಗ ಪ್ರೇಕ್ಷಕನೂ ಹೌದು.

ಔಸಿರಿಸ್ ದೇವತಾರಾಧನೆ ಆರಂಭದಲ್ಲಿ ನಿಸರ್ಗಧರ್ಮವಾಗಿ ತಲೆಯೆತ್ತಿತ್ತು. ಕೃಷಿಯ ಬೆಳವಣಿಗೆ ಹಾಗು ಬದುಕಿಗೆ ನೆರವಾಗುವ ನೈಲ್ ನದಿಯನ್ನು ಪೂಜಿಸುವ ವ್ಯವಸ್ಥೆಯೇ ಇದು. ಔಸಿರಿಸ್‌ನ ಬದುಕು ವಿಸ್ತೃತವಾದ ಕಥಾನಕವನ್ನು ಒಳಗೊಂಡಿದೆ. ಐತಿಹ್ಯದ ಪ್ರಕಾರ, ಅತಿ ಪೂರ್ವದಲ್ಲಿ ಔಸಿರಿಸ್ ದೇವನು ಜನಹಿತ ರಾಜನಾಗಿದ್ದು ಜನರಿಗೆ ಕೃಷಿ ಮಾಡುವುದನ್ನು, ಕಲಾವಸ್ತುಗಳನ್ನು ನಿರ್ಮಾಣ ಮಾಡುವುದನ್ನು ಕಲಿಸಿದ ಹಾಗೂ ಅವರಿಗೆ ಕಾನೂನು ಕಟ್ಟಳೆಗಳನ್ನು ನೀಡಿದ. ಕೆಲಕಾಲದ ನಂತರ ಅವನ ತಮ್ಮ ಕ್ರೂರಿಯಾದ ಸೆಟ್‌ನು ಅವನನ್ನು ಕೊಲೆ ಮಾಡಿ, ಅವನ ದೇಹವನ್ನು ಛಿದ್ರಛಿದ್ರಗೊಳಿಸಿದ. ಅವನ ಸೋದರಿಯೇ ಆಗಿದ್ದ ಅವನ ಹೆಂಡತಿ ಐಸಿಸ್‌ಳು ಛಿದ್ರವಾದ ತನ್ನ ಗಂಡನ ದೇಹದ ತುಣುಕುಗಳನ್ನು ಒಂದುಗೂಡಿಸಿದಾಗ ಪವಾಡ ಸದೃಶ ರೀತಿಯಲ್ಲಿ ಜೀವ ಮರು ಸ್ಥಾಪನೆಯಾಯಿತು. ದೇಹಧಾರಣೆ ಮಾಡಿದ ಔಸಿರಿಸ್‌ನು ರಾಜ್ಯವನ್ನು ತಮ್ಮನಿಂದ ಪಡೆದು ಪ್ರಜಾಹಿತ ಆಡಳಿತವನ್ನು ಮುಂದುವರಿಸಿದ. ಅನಂತರ ಮೇಲುಲೋಕಕ್ಕೆ ಹೋಗಿ ಗತಿಸಿದವರ ಪಾಪ ಪುಣ್ಯಗಳ ತುಲನೆ ಮಾಡುವ ನ್ಯಾಯದೇವತೆಯಾದ ಅನಂತರ ಹುಟ್ಟಿದ ಅವನ ಮಗ ಹೊರಸ್‌ನು ತನ್ನ ತಂದೆಯ ಸಾವಿಗೆ ಕಾರಣವಾದ ಸೆಟ್‌ನನ್ನು ಕೊಂದು ಹಗೆ ತೀರಿಸಿಕೊಂಡ. ಮೂಲತಃ ಈ ಕಥೆ ನಿಸರ್ಗದ ರಹಸ್ಯವನ್ನು ಒಳಗೊಂಡಂತೆ ಕಾಣಿಸಿದರೂ, ನೈಲ್ ನದಿಯ ಏರಿಳಿತಗಳ್ನು ಸೂಚಿಸುತ್ತದೆ. ಔಸಿರಿಸ್‌ನ ಸಾವು ಮತ್ತು ಮರುಜೀವ ಧಾರಣೆ ನೈಲ್ ನದಿಯು ಚಳಿಗಾಲದಲ್ಲಿ ಸೊರಗುವುದನ್ನು, ವಸಂತಕಾಲದಲ್ಲಿ ಪ್ರವಾಹ ಪಡೆಯುದನ್ನು ಸಂಕೇತಿಸುತ್ತದೆ. ಅವನ ಸಾವು ಮತ್ತು ಪುನಶ್ಚೇತನ ಈಜಿಪ್ಟಿನ ಜನತೆಗೆ ವೈಯಕ್ತಿಕವಾಗಿ ಅಮರತ್ವ ಸಾರುವ ಸಂದೇಶ. ಸಾವನ್ನು ಗೆದ್ದ ಈ ದೇವನನ್ನು ಆರಾಧಿಸುವವರು ಶಾಶ್ವತವಾದ ಬದುಕನ್ನು ಪಡೆಯುವರೆನ್ನುವುದು ಜನರ ನಂಬಿಕೆ. ಅಂತಿಮವಾಗಿ ಹೊರಸ್‌ನು ಸೆಟ್‌ನನ್ನು ಜಯಿಸುವುದು ಕೆಡುಕಿನ ಮೇಲೆ ಒಳಿತು ಸಾಧಿಸಿದ ಗೆಲವು ಆಗಿದೆ.

ಈಜಿಪ್ಟಿನ ನಾಕ-ನರಕಗಳ ಭಾವನೆಗಳು ಪೂರ್ಣವಾಗಿ ಬೆಳವಣಿಗೆ ಆದದ್ದು ಮಧ್ಯಮ ಅರಸೊತ್ತಿಗೆಯ ಅನಂತರದ ಕಾಲದಲ್ಲಿ. ಈ ಕಾಲದಲ್ಲೇ ಬೌದ್ದಿಕ ದೇಹವನ್ನು ಕಾಯ್ದಿಡುವ ಪರಿಪಾಟ ಹೆಚ್ಚಾಯಿತು. ಕಳೇಬರವನ್ನು ಮಮ್ಮಿಕೃತಗೊಳಿಸಲಾಯಿತು. ಇದಲ್ಲದೆ ಮಮ್ಮಿಗಳಿಗೆ ಬೇಕಾದ ಆಹಾರ ಮತ್ತು ವಸ್ತುಗಳಿಗಾಗಿ ಶ್ರೀಮಂತರು ಅಪಾರ ಹಣವನ್ನು ತೆತ್ತರು. ಈಜಿಪ್ಟಿನ ಜನರ ಧರ್ಮ ಪ್ರೌಢತೆ ಗಳಿಸಿದಂತೆ ಅನಂತರ ಬದುಕಿನ ಭಾವನೆಗಳು ಜಟಿಲವಾದವು. ಗತಿಸಿದವರು ಮೇಲುಲೋಕದಲ್ಲಿ ಔಸಿರಿಸ್‌ನ ಮುಂದೆ ಅನುಸಾರವಾಗಿ ಅವನು ಅವರ ಮರಣೋತ್ತರ ಬದುಕನ್ನು ನಿರ್ಧರಿಸುತ್ತಿದ್ದ. ಅನಂತರ ಅವರು ಸಂತೋಷವನ್ನೊ, ಭೋಗವನ್ನೊ, ನರಕವನ್ನೊ, ಪಡೆಯುವರೆನ್ನುವುದು ಜನರ ನಂಬಿಕೆಯಾಗಿತ್ತು. ದೇವರು ವಾಸಮಾಡುವ ಸ್ಥಳ ಅಮೊನ್ ಆಗಿತ್ತು. ಪುಣ್ಯಶಾಲಿಗಳು ಅಲ್ಲಿ ಔಸಿರಿಸ್‌ನ ಜೊತೆಯಲ್ಲಿ ಬದುಕಬಹುದಿತ್ತು.

ಈಜಿಪ್ಟಿನ ಸಾಮ್ರಾಜ್ಯ ಬೆಳೆದಂತೆ ಅವರ ಧಾರ್ಮಿಕ ಆಚಾರದಲ್ಲೂ ಮಾರ್ಪಾಡಾಯಿತು. ಇದರಲ್ಲಿ ನೈತಿಕ ಅಂಶ ಮರವೇ ಆಗಿ ಕೇವಲ ಅಂಧ ನಂಬಿಕೆ ಮತ್ತು ಮಾಟಮಂತ್ರಗಳು ಮೇಲ್ಮೈ ಆದವು. ಇದೇ ಕಾಲದಲ್ಲಿ ನಡೆದ ಹೈಕ್ಸೋಸರ ದಾಳಿಗಳು ಮತ್ತು ಅವರನ್ನು ಹೊರಹಾಕಲು ಈಜಿಪ್ಟಿನ ಜನರು ನಡೆಸಿದ ಪ್ರತಿ ಹೋರಾಟಗಳು ಕಾರಣ. ಈ ಬೆಳವಣಿಗೆಗಳಿಂದ ಇವರ ಬೌದ್ದಿಕಶಕ್ತಿ ಕುಗ್ಗಿತ್ತು. ಪುರೋಹಿತರ ಅಧಿಕಾರ ಹೆಚ್ಚಿತು. ಅವರು ತಮ್ಮ ಉತ್ಕರ್ಷಣೆಯನ್ನು ಸಾಧಿಸುವುದಕ್ಕೆ ಜನರಲ್ಲಿ ಭಯವನ್ನು ಬಿತ್ತಿದರು ಹಾಗೂ ಶೋಷಣೆಯನ್ನು ಆರಂಭಿಸಿದರು. ಇವರು ಸತ್ತವರ ಜೀವವನ್ನು ಮಾಟ ಮಂತ್ರಗಳಿಂದ ರಕ್ಷಿಸಲು ಪ್ರಾರಂಭಿಸಿದರು. ಇದಕ್ಕಾಗಿ ಹಣದ ಶೋಷಣೆ ನಡೆಯಿತು. ಹಣ ಪಡೆದು ಸತ್ತವರನ್ನು ಸ್ವರ್ಗಕ್ಕೆ ಕಳುಹಿಸಲು ಪುರೋಹಿತರು ಮುಂದಾದರು. ಈ ವಿವರಣೆಗಳನ್ನು ಸಮಾಧಿ ಭವನದ ಪೆಪಿರಸ್‌ನ ಸುರುಳಿಗಳ  ಮೇಲೆ ಬರೆಯಲಾಗಿದೆ. ಇದಕ್ಕೆ ಸಂಬಂಧಿಸಿದ ವಿಧಿವಿಧಾನಗಳು ಹುಟ್ಟಿಕೊಂಡವು. ಇವೆಲ್ಲವನ್ನು ‘ಗತಿಸಿದವರ ಪುಸ್ತಕ’ದಲ್ಲಿ ವಿವರಿಸಲಾಗಿದೆ. ಇವು ಈಜಿಪ್ಪಿನ ಧರ್ಮಗ್ರಂಥಗಳಲ್ಲ, ಶವಸಂಸ್ಕಾರದ ವಿಧಿ ವಿಧಾನಗಳ ಸಂಗ್ರಹಗಳು.

ಪುರೋಹಿತ ವಾಮಾಚಾರಿಗಳ ಆಟ್ಟಹಾಸ ಅಧಿಕವಾದಾಗ, ಧರ್ಮ ಅವನತಿಯ ಹಾದಿಯನ್ನು ಹಿಡಿಯಿತು. ಆಗ ಧಾರ್ಮಿಕ ಉತ್ಕ್ರಾಂತಿಯ ಅಗತ್ಯವಾಯಿತು. ಈ ಕ್ರಿಯೆಯ ದ್ರಷ್ಟಾರ ಫೆರೋವ ನಾಲ್ಕನೇ ಅಮೆನ್ ಹೊಟೆಪ್. ಇವನು ಕ್ರಿ.ಪೂ.೧೩೭೫ರ ಸುಮಾರಿಗೆ ಅಧಿಕಾರಕ್ಕೆ ಬಂದು ಹದಿನೈದು ವರ್ಷಗಳು ರಾಜ್ಯವಾಳಿದ. ಕೊನೆಯಲ್ಲಿ ಕೊಲೆಗೀಡಾಗಿರ ಬೇಕು. ಸುಧಾರಣೆಯ ಪ್ರಥಮ ಪ್ರಯತ್ನಗಳು ವಿಫಲವಾದಾಗ ನಿರ್ದಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಯಿತು. ದೇವಾಲಯಗಳಿಂದ ಪುರೋಹಿತರನ್ನು ಓಡಿಸಿದ ಹಾಗು ಅಲ್ಲಿದ್ದ ಸಾಂಪ್ರದಾಯಕ ದೇವರುಗಳನ್ನು ಕಿತ್ತು ಹಾಕಿದ. ಸಾರ್ವಜನಿಕ ಕಟ್ಟಡಗಳಲ್ಲಿದ್ದ ದೇವರ ಹೆಸರುಗಳನ್ನು ತೆಗೆದು ಹಾಕಿದ. ಹೊಸ ದೇವರಾದ ಅಟೋನ್‌ನ ಪೂಜೆಯನ್ನು ಜಾರಿಗೆ ತಂದ. ಆಕಾಶದಲ್ಲಿ ನಿರಂತರವಾಗಿ ಬೆಳಗುವವನೇ ಹೊಸದೇವರಾದ ಅಟೋನ್. ಇವನು ಸೂರ್ಯದೇವ. ಇವನು ತನ್ನ ಹೆಸರನ್ನು ಅಮೆನ್ ಹೊಟೆಪ್‌ನಿಂದ ಅಖೆನಟನ್ ಎಂದು ಬದಲಾಯಿಸಿಕೊಂಡ. ಇವರರ್ಥ ಅಟೋನ್ ತೃಪ್ತನಾದ ಎಂದು. ಅವನ ರಾಣಿ ನೆಫಿರ್‌ಟೇಟಿ ತನ್ನನ್ನು ನೆಪಿರ್ ನೆಫ್ರು ಅಟೋನ್ ಎಂದು ಕರೆದುಕೊಂಡಳು. ಲಾವಣ್ಯವು ಸೊಗಸಾದ ಅಟೋನ್ ಎಂದು ಆಕೆಯ ಹೆಸರಿನ ಅರ್ಥ. ಅಖೆನಟನ್ ಎಲ್ ಅಮರ‌್ನ ಎಂಬ ಹೊಸರಾಜಧಾನಿಯನ್ನು ಕಟ್ಟಿಸಿ, ತನ್ನ ನೂತನ ದೇವರಿಗೆ ಅರ್ಪಿಸಿದ.

ಅರಸರು ಹೊಸಧರ್ಮವನ್ನು ವಿಧಿವಿಧಾನಗಳನ್ನೂ ಸಿದ್ಧಾಂತವನ್ನೂ ರೂಪಿಸಿದ. ಏಕದೇವತಾ ಉಪಾಸನೆಯನ್ನು ಜಾರಿಗೆ ತಂದಿದ್ದು ಅವನ ಮಹತ್ತರ ಸಾಧನೆ. ಅಟೊನ್ ಮತ್ತು ಅಖೆನಟನ್ ಇಬ್ಬರೇ ಎದುರಿಗಿರುವ ದೇವತೆಗಳು. ಹಿಂದಿನ ದೇವತೆಗಳಂತೆ ಅಟೋನ್‌ನನ್ನು ಮಾನವ ಅಥವಾ ಪ್ರಾಣಿಗಳ ರೂಪದಲ್ಲಿ ಚಿತ್ರಿಸಲಿಲ್ಲ. ಅದರ ಬದಲು ಪ್ರಾಣದಾಯಕ ಉಲ್ಲಾಸಿತ ಬೆಳಕಿನ ಕಿರಣಗಳನ್ನು ಕೊಡುವ ಪ್ರಾಣೋಜ್ಜೀವಕ ಹಾಗೂ ಚೈತನ್ಯದಾಯಕ ಸೂರ್ಯನಂತೆ ಚಿತ್ರಿಸಲಾಯಿತು. ಸೃಷ್ಟಿಕರ್ತನಾದ ಇವನು ಕೇವಲ ಈಜಿಪ್ಟಿಗಷ್ಟೇ ಅಲ್ಲ ಸಮಗ್ರ ವಿಶ್ವಕ್ಕೆ ದೇವನಾಗಿದ್ದ. ಅಖೆನಟನ್ ತನ್ನನ್ನು ಅಟೋನ್‌ನ ಪ್ರತಿನಿಧಿಯೆಂದು ಘೋಷಿಸಿಕೊಂಡನು. ಅಟೋನ್‌ನನ್ನು ಅರಸ, ಅವನ ಪತ್ನಿ ಮತ್ತು ಮಕ್ಕಳು ಪೂಜಿಸಿದರೆ, ಜನರು ಅವನನ್ನು ಆರಾಧಿಸಬೇಕಿತ್ತು. ಅಟೋನನು ಜಗತ್ತಿನ ಜನರ ನೈತಿಕತೆಯನ್ನು ರೂಪಿಸುವ, ಹೃದಯ ಪರಿಶುದ್ಧತೆಗೆ ಪ್ರಾಮುಖ್ಯ ನೀಡುವವನೆಂದು ಸಾರಿದ ಅರಸನು ಈಜಿಪ್ಟಿನ ಧಾರ‌್ಮಿಕ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನು ಯಶಸ್ವಿಯಾಗಿ ಜಾರಿಗೆ ತಂದ.