(ಕ್ರಿ. ಶ. ೧೭೨೨-೧೮೦೯) (ಸದ್ದು ಆಧಾರಿತ ರೋಗಪರೀಕ್ಷಾ ವಿಧಾನ)

ಜೋಸೆಫ್ ಲಿಯೊಪಾಲ್ಡ್ ಆಯೆನ್‌ಬ್ರಗರ್ ೧೭೨೨ರಲ್ಲಿ ಆಸ್ಟ್ರಿಯದ ಗ್ರಾಜ್‌ ಎಂಬ ಗ್ರಾಮದಲ್ಲಿ ಸಾರಾಯಿ ಅಂಗಡಿಯೊಂದರ ಮಾಲೀಕನ ಮಗನಾಗಿ ಜನಿಸಿದರು. ಕಿರು ವಯಸ್ಸಿನಲ್ಲೇ ಆಯೆನ್ ಬ್ರಗರ‍್ ಅಪಾರ ಪ್ರತಿಭಾ ಶಕ್ರಿಯುಳ್ಳವನಾಗಿದ್ದ. ಈತ ಶಬ್ದ ಮತ್ತು ಧ್ವನಿಗಳ ವ್ಯತ್ಯಾಸಗಳನ್ನು ಗುರುತಿಸುವುದರಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದ. ಸಂಗೀತ ಆತನಿಗೆ ತುಂಬ ಹಿಡಿಸುತ್ತಿತ್ತು. ಮದ್ಯದಂಗಡಿಯಲ್ಲಿ ತನ್ನ ತಂದೆ ದ್ರಾಕ್ಷರಸದ ಪೀಪಾಯಿಗಳನ್ನು ಬಡಿದು ನೋಡುತ್ತಿದ್ದುದನ್ನು ಈತ ಆಗಾಗ್ಗೆ ಗಮನಿಸಿದ್ದ. ತಂದೆ ಪೀಪಾಯಿ ಏಕೆ ಬಡಿದು ನೋಡುತ್ತಿದ್ದ ಎಂಬ ಸಮಸ್ಯೆ ಹುಡುಗನ ತಲೆ ಕೊರೆಯತೊಡಗಿತ್ತು.

ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ ವೈದ್ಯಶಾಸ್ತ್ರದ ವ್ಯಾಸಂಗ ಮಾಡಿ ಪದವಿ ಪಡೆದ ತರುವಾಯ ಆಯೆನ್ ಬ್ರಗರ‍್ ವಿಯೆನ್ನಾದಲ್ಲೇ ಇದ್ದ ಸ್ಪಾನಿಶ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆಗೆ ತೊಡಗಿದರು. ರೋಗಿಯನ್ನು ಸ್ಪರ್ಶಿಸಿ, ಬೆರಳು ಮತ್ತು ಕಿವಿಯನ್ನು ಬಳಸಿ ರೋಗಿಯ ಪರೀಕ್ಷೆ ಮಾಡುವ ವಿಧಾನಗಳು ಬಹಳ ಕಾಲದಿಂದ ಬಳಕೆಯಲ್ಲಿದ್ದವು. ಈ ವಿಧಾನಗಳನ್ನು ಬಳಸುವ ಸಮಯದಲ್ಲಿ ಆಯೆನ್ ಬ್ರಗರ್ ಗೆ ತನ್ನ ತಂದೆ ಮದ್ಯದ ಪೀಪಾಯಿಗಳನ್ನು ಬೆರಳುಗಳಿಂದ ಬಡಿದು ಪರೀಕ್ಷಿಸುವುದು ಜ್ಞಾಪಕಕ್ಕೆ ಬಂತು. ಆರೋಗ್ಯವಂತ ಮನುಷ್ಯನ ಶರೀರದ ಅಂಗಾಂಗಗಳನ್ನು ತಟ್ಟಿದರೆ ಅಸ್ವಸ್ಥ ಮನುಷ್ಯನನ್ನು ತಟ್ಟಿ ಪರೀಕ್ಷಿಸಿದಾಗ ಬರುವುದಕ್ಕಿಂತಲೂ ಭಿನ್ನವಾದ ಸದ್ದು ಬರಬಹುದೆಂಬ ಕಲ್ಪನೆ ಅವರಿಗೆ ಹೊಳೆಯಿತು. ಕೂಡಲೇ ಆ ನಿಟ್ಟಿನಲ್ಲಿ ಕಾರ್ಯತತ್ಪರರಾದರು. ರೋಗಿಗಳ ಎದೆ, ಹೊಟ್ಟೆ ಮುಂತಾದ ಅಂಗಗಳನ್ನು ಬೆರಳುಗಳಿಂದ ಬಡಿದು ಬರುವ ಸದ್ದನ್ನೂ ಆರೋಗ್ಯವಂತರ ಅಂಗಾಂಗಗಳನ್ನು ಬಡಿದಾಗ ಬರುವ ಸದ್ದನ್ನೂ ಮನಸ್ಸಿನಲ್ಲೇ ತುಲನೆ ಮಾಡಿ ನೋಡಿದರು. ಒಂದೊಂದು ರೋಗಕ್ಕೆ ಒಂದೊಂದು ಬಗೆಯ ಸದ್ದು ಬರುವುದನ್ನು ಗುರುತಿಸಿದರು. ಈ ರೀತಿ ರೋಗ ಪರೀಕ್ಷಿಸುವ ಕ್ರಮವನ್ನು “ಪರ್ಕಷನ್ ವಿಧಾನ” ಎನ್ನುತ್ತಾರೆ.

ಆದರೆ ಆತನ ಜೀವಿತ ಕಾಲದಲ್ಲಿ ಆತನ ವಿಧಾನಕ್ಕೆ ಸಾರ್ವತ್ರಿಕ ಮನ್ನಣೆ ದೊರಕಲಿಲ್ಲ. ಆಯೆನ್‌ಬ್ರಗರ್ ೧೮೦೯ರಲ್ಲಿ ಮೃತರಾದರು. ಆತ ತಾನು ಕಂಡುಹಿಡಿದ ವಿಧಾನಗಳನ್ನು ಲ್ಯಾಟಿನ್ ಭಾಷೆಯಲ್ಲಿ ಬರೆದಿದ್ದ ತನ್ನ ಪುಸ್ತಕದಲ್ಲಿ ವಿವರಿಸಿದ್ದರು. ಅದನ್ನು ನೆಪೋಲಿಯನ್ನನ ವೈದ್ಯ ಕೊರ್ವಿನಾರ್ಟ್ ಫ್ರೆಂಚ್ ಭಾಷೆಗೆ ಅನುವಾದಿಸಿದರು. ಆದರೆ ಆ ಕೃತಿ ೧೮೨೪ರಲ್ಲಿ ಇಂಗ್ಲಿಷಿಗೆ ಭಾಷಾಂತರಿಸಲ್ಪಟ್ಟಾಗಷ್ಟೆ ರೋಗಿಯನ್ನು ತಟ್ಟಿ ಪರೀಕ್ಷಿಸುವ ಕ್ರಮಕ್ಕೆ ಸಾರ್ವತ್ರಿಕ ಮನ್ನಣೆ ದೊರಕಿತು.