ಆಂಟಿಕ್‌ ಶಾಪಿನ ತುಂಟ ಮುದುಕ
ಕಟ್ಟಿಸಿದ ಬಿಳೇ ಹಲ್ಲಿನಲ್ಲೇ ಬಿನಾಕಾ ನಗುವಾತ
ಆ ನಗೆ ಅಥೆಂಟಿಕೆನುವಾತ

ಬಗೆ ಬಗೆಯ ದೇವರು ಹಳೆ ಹಳೇ ಫರ್ನಿಚರು
ಫ್ರೇಮು ಕನ್ನಡಿಯ, ದಿಂಬು ರೇಶಿಮೆಯ,
ಮಾಸಿದ ಕಸೂತಿಯ ಹೊದಿಕೆ-ಈ ಸರಕೇ
ಈ ಶಾಪಿನ ಹೆಗ್ಗಳಿಕೆ.

ಶಾಪು ತೆರೆದೊಡನೆ ಮೊದಲೊಂದು ನಗೆ ಬೀರುವ,
ಬೀಗಿ ಇತಿಹಾಸದ ಶಬ್ದಗಳನ್ನ ಹೆಕ್ಕಿ
ಪಳೆಯುಳಿಕೆಗಳನ್ನ ತಿಕ್ಕಿ
ಸಂಗೀತದಲ್ಲದ್ದುವ,
ಹಾಗದ್ದಿ ಹೀಗೆತ್ತಿದರೆ ಅರೆ ಅರೆ!
ಥತ್ತೇರಿ,-
ಗೋರಿಗಂಟಿದ್ದೆಲ್ಲ ಓರಿಯಂಟಲ್ಲಾಗಿ
ಬದುಕಾಗಿ, ಬದುಕು ಕಲೆಯಾಗಿ ಮಾರ್ಪಡುವ
ಪವಾಡ
ಈ ಮುದುಕನ ಕೈವಾಡ!

ಈಗ ಸುರು ವ್ಯವಹಾರ
ಇತಿಹಾಸದ ವ್ಯಾಪಾರ:

ನಿಮ್ಮಂಥ ಗಿರಾಕಿ ಕುತೂಹಲ ತಾಳಿದ
ಪಳೆಯುಳಿಕೆಯನ್ನ, ಉದಾ: ದೇವತೆಯನ್ನ
ತಕ್ಕೊಂಡು, ಭೂತಕಾಲದ ಒಂದು ಅವಧಿಗೆ

ಮೊಳೆ ಹೊಡೆದು ಅಂಟಿಸುವ-
ಇತಿಹಾಸದ ಅತಿರೇಕದ ಹಿತಕಾರಿ ಮಾತುಗಳ
ಮೂರ್ತಿಗೆ ಅಭಿಷೇಕ ಮಾಡಿಸುವ
ಈಗ ಕಂಡಿರೋ?-
ಮರದ ದೇವರು ಮೃದುವಾಗಿ,
ಬೇರಿಳಿದು ಹೆಮ್ಮರವಗಿ ಬೆಳೆವ ಪರಿಯ?
ಆಲದ ಆಯಾಲದಗುಂಟ ಕೆಳಕ್ಕಿಳಿದರೆ ಅಲ್ಲಿ
ಥರಾವರಿ ಅರೆಬತ್ತಲೆಯ,
ಅರ್ಥವಾಗದ ಮಾತಾಡುವ ಮಂದಿಯ?
ಯಾಗದ ಹೊಗೆಯಲ್ಲಿ ತೇಲಾಡುವ
ದೇವರ ಕಂಡಿರಾ?
ನೀವಾಯ್ದ ಮೂರ್ತಿ ಅವನೇ ಎಂದು ಗುರುತಿಸಿದಿರಾ?
ಭಲಾಭೇಶ್‌! ಖೇಲ್‌ ಖಲಾಸ್‌!
ಕಕ್ಕಿರಿ ಸ್ವಾಮಿ ರೊಕ್ಕ.
ಆ ಮೂರ್ತಿಗೆ, ಸಂಸ್ಕೃತಿಯ ತುಂಡಿಗೆ
ಪ್ರಾಚೀನದ ಪ್ರತಿನಿಧಿಗೆ.

ಆದರೆ ಈ ತುಂಟ ಮುದುಕನೂ ಹೆದರುವುದುಂಟು
ಮೂಡುವ ನೆರಳಿಗೆ,
ತನ್ನ ನೆರಳಿಗೆ,
ಪಳೆಯುಳಿಕೆಯ ನೆರಳಿಗೆ.

ಗೊತ್ತಿದೆ ಇವನಿಗೆ,
ಉಜ್ಜಬಹುದೆಲ್ಲ, ಆದರೆ ನೆರಳನ್ನಲ್ಲ.
ಮರಮರ ಉಜ್ಜಿದರೆ ಕಿಡಿ ಹಾರಬಹುದಲ್ಲದೆ
ನೆರಳು ನೆರಳುಜ್ಜಿದರೆ ಕಿಡಿ ಹಾರುವುದಿಲ್ಲ,
ನೆರಳು ಹೊಳೆಯುವುದಿಲ್ಲ, ಬಿನಾಕಾ ನಗುವುದಿಲ್ಲ.
ಲೈಟಾರಿದೊಡನೆ-
ಒಂದಾಗುವುದೆಲ್ಲಾ
ಸೇರಿ ಒಂದಾಗಿ ಕತ್ತಲಾಗಿ, ಕತ್ತಲೆ ಕರಿನೀರಾಗಿ
ಇಡೀ ಶಾಪು ಹಳೆ ಬಾವಿಯಾಗಿ
ಕೊಳೆ ನಾರತೊಡಗುತ್ತದೆ!
ಇತಿಹಾಸದ ಹಿತಲಕಾರಿ ಮಾತು ಬೆರಳಿನಿಂದ
ಒಂದೊಂದೆ ಸೋರುತ್ತವೆ.
ಸೋರುತ್ತಾ ಸೋರುತ್ತಾ ಕರಿನೀರಿನ ಜೊತೆ
ವಾದಿಸುತ್ತ, ಸಂವಾದಿಸುತ್ತ, ಕಿರಿಚಿ
ಜಗಳಾಡುತ್ತ ಕರಗುತ್ತವೆ,-
ನಾಳೆ ಬೆಳಕಾಗುವವರೆಗೆ.