ನಡುನೀರಿನೊಳಗೆನ್ನ ಕೈಯ ಬಿಡಬೇಡ
ಆಮೇಲೆ ಮರುಗಬೇಡ ||

ಕಣ್ಣೊಳಗೆ ಬೆರಳಿಟ್ಟು ಸಂಸವಾಡುವರೇನ?
ಸೋತವನ ತಿರುತಿರುಗಿ ಇರಿವರೇನ?
ಹುಲ್ಲು ನೆತ್ತಿಯಲಿಟ್ಟು ಶರಣಾಗಿ ಬಂದವನ;
ಕಲ್ಲೆದೆಯ ಶೂಲದಲಿ ಕೊಲುವರೇನ?

ನೀನಿರದ ಹಾಸಿಗೆ ಸುಡುಸುಡುವ ಬೇಸಿಗೆ
ತಾಳಲಾರೆ, ಹುಡುಗಿ ಬಾಳಲಾರೆ.
ಕಿಚ್ಚಿನೊಳಗಿನ ಕೀಡೆ ಹುರಪಳಿಸಿ ಸಾಯುವೆ;
ಬೂದಿಯಾಗುವ ಮುನ್ನ ಒದಗಿ ಬಾರೆ.           ೧೦

ಜೀವಜೀವದ ಜೊತೆಗೆ ಅದು ಯಾವ ಸರಸವೇ?
ನಿಂತೆ ಜೀವದ ಆಸೆ ಹಂಗ ಹರಿದು
ಬದುಕಿಸಲು ಆಗದಿರೆ ಜೀವ ಬೇಕೆ? ತಗೊ:
ಸಾವಿನಲ್ಲೂ ನನಗೆ ನೀನೆ ಬೇಕು.