ನನ್ನ ಹತ್ತಿರ
ಹಂದಿಯಂಥಾದ್ದೊಂದು ಅನಾಮಿಕ ಮಿಕವಿದೆ.
ಅದಕ್ಕೊಂದು ಹೊಟ್ಟೆಯಿದೆ. ಹೊಟ್ಟೆ ದೊಡ್ಡದೇ,
ಅಂದರೆ ನೀವು ಹೆದರಬೇಕಿಲ್ಲ;
ಸ್ಕೂಲಿನ ಗ್ಲೋಬಿನಷ್ಟೂ ಗೋಣಿಯ ಖಾಲಿಚೀಲದಷ್ಟೂ ಇಲ್ಲ,
ಬರೀ ಅಂಗೈಯಗಲ.

ಕಾಂಬ ಕಣ್ಣು ತಿಂಬ ಬಾಯಿ ಬಿಟ್ಟರೆ ಅದಕ್ಕೆ
ಬೇರೆ ಇಂದ್ರಿಯಗಳಿಲ್ಲ ನಿಜ.
ಆದರೂ ಮೂಸಲುಂಟು ಅದು ಮುಟ್ಟಲುಂಟು
ಹೊಟ್ಟೆಯಿಂದ.
ನೀವು ಜತೆ ಕೂತು ಸತ್ಯ ಶಿವ ಸುಂದರೂ                   ೧೦
ಅದು ಇದು ಎಂದರೂ
ಕೇಳುವುದುಂಟು ಹೊಟ್ಟೆಯಿಂದ.
ಅದಕ್ಕೊಂದು ಮನಸ್ಸಿದ ಹೊಟ್ಟೆಗಂಟಿಕೊಂಡೇ.
ಅಂದರಿಷ್ಟೇ ,-
ಅದು ಮೊದಲೇ ಹೊಟ್ಟೆ:

ನಿಮ್ಮ ನಗುಮುಖ ಮೋತಿ, ಗೋದಿಯ ಚಪಾತಿ;
ಶಿವಸತ್ಯದ ನುಡಿ, ಶಾವಿಗೆ ಪಾಯಸದ ಎಳಿ-
ಯಾಗಿ ಕಂಡರೆ ಆಶ್ಚರ್ಯವಿಲ್ಲ.

ಅದರ ನದರಿನಿರಿತಕ್ಕೆ, ಬಿಟ್ಟ ನಿಟ್ಟುಸಿರಿಗೆ        ೨೦
ನಿಮ್ಮೆದೆ ಗಾಯವಾದರೆ, ಪದ್ಯದ ಹಾಳೆ
ಹಾರಿ ಹೋದರೆ, ಅದರ ತಪ್ಪಲ್ಲ.

ಚಕಮಕಿಯ ಕಲ್ಲಿನಂತದರ ಕೋರೆಹಲ್ಲು-
ಹಲ್ಲಿಗೆ ಮಸೆದ ಸಪ್ಪಳ ಬಿಕ್ಕಿದಂತೆ, ಇಲ್ಲ
ನಕ್ಕಂತೆ ಕೇಳಿಸಿದರೆ ಅದರ ತಪ್ಪಲ್ಲ.

ಕಾಕು ಮಾಡಿ ಲೊಕಾಸುಲಿವ ಮಂದಿ
ಇದು ಹಸಿವೆಗೆ ಕೈಕಾಲು ಕಟ್ಟಿ ಹೇಳಿದ ಹರಿಕಥೆಯೆಂದಾರು.
ಭಾವುಕ ಮಂದಿ,
ಆಹಾಹಾ ಈ ಮಿಕದ ಮುಖಕ್ಕೇನು ಕಳೆಯೆಂದು
ವರಾಹಾವತಾರದ ಕಾರಣಿಕ ನುಡಿದಾರು.      ೩೦

ಅತಿಶಯ ಸುಲಿದ ಮೇಲೆ ನಿಲ್ಲುವ
ಮಿಕದಳತೆಯ ನಿಜ ಹೇಳಲೇ?

ಚಕಮಕಿಯ ಹಲ್ಲಿಂದ ಹಾರಿದ ಕಿಡಿ
ಉರಿಯಾಗಿ ಧಗಧಗ ಭುಗಿಲಿಗೆ
ಮಹಲುಗಳು ಭವನಗಳು ಸೌಧಗಳು ಸದನಗಳು
ಸಿಟಿಗಳು ಛಿಳಿಛಿಟಿಲೆಂದು ಒಣ ಸೌದೆಯಾಗಿ
ಹುರಿದು ಹುರಪಳಿಸಿ ಬೆಂಕಿಯ ಉಂಡೆ
ಮೊದಲಿನಂತೆ ಮತ್ತೆ ಸೂರ್ಯನ ಸುತ್ತ
ತಿರುಗುತ್ತಾ ತಿರುಗುತ್ತಾ……

ಸಚರಾಚರದ ರಚನೆಗೆ ತೊಡಗಬೇಕಿಲ್ಲ,-                               ೪೦
ಆ ಮಿಕ ನೀವೇ, ನಿಮ್ಮದೇ ಮೈಯೆಂಬರಿವು
ಈಗಲೇ ಈಕ್ಷಣವೆ ಮೂಡಿದರೆ;
ಇಲ್ಲದಿದ್ದರೆ…..