ಒಂದನೆಯ ಚೌಕ:
ಒಂದಾನೊಂದು ಕಾಲದಾಗ ಏಸೊಂದ ಮುದವಿತ್ತ
ಏಸೊಂದ ಮುದವಿತ್ತ
ಮುದಕೊಂದ ಹದವಿತ್ತ
ಹದಕ ಹಂಗಾಮಿತ್ತ| ಅದಕೊಂದ
ಶಿವನ ಲಗಾಮಿತ್ತ||
ಏ ಒಂದಕೆಂಠ ಸಂಭವಿಸುತಿದ್ದವೋ
ಕುರುಹುಗೊಂಡವೆಲ್ಲ ಹೆಸರಗೊಂಡವೋ
ಆಳದ ಹಳಿಗವಿ ಬೆಳಕನುಟ್ಟವೋ
ಹಾಳ ಬಾವಿಗೂ ಕಣ್ಣ ಬಂದವೋ
ಬೇಲಿಯ ಮ್ಯಾಲೆ ನೀಲಿಯ ಹೂವೋ ೧೦
ಬೀಳುನೆಲದ ಎದಿ ಕಲ್ಲ ಕರಗಿ ಸೆಲಿ
ಚಿಲ್ಲನೆ ಚಿಮ್ಮಿತ್ತ|
ಬೆಲ್ಲದ ಕೆಸರಿಗಿ ಸಕ್ಕರಿ ಮಳಲಯ್ಯ
ಹಾಲಿನ ಹೊಳಿಯಿತ್ತ! ಹೊಳಿ ನೋಡ
ಭರ್ತಿ ಹರಿಯತಿತ್ತ||
ಎರಡನೆಯ ಚೌಕ:
ಏಸs ಹೇಳಲಿ ಕಾಲದ ಮಹಿಮಾ ತಪ್ಪಿದಾವ ತಾಳ
ಗಾಳಿಗಿ ಬೆದಿ ಬಂದ ಬೀಸ್ಯಾವ ಬಿರುಗಾಳಿ
ಉಸರ ಹಾಕತಾಳ | ಕೇಳವ
ರಿಲ್ಲ ನೆಲದ ಗೋಳಾ || ೨೦
ಇದ್ದುದೆಲ್ಲ ಹೋಗಿ ಇತ್ತೊ ಇಲ್ಲೊ ಆಗಿ
ಕುರುಹುಗೆಟ್ಟುದರ ಹೆಸರೇನಿಟ್ಟಿ?
ಸೀಮೆಯ ಕಲ್ಲಿಗಿ ಬೇಲಿಯ ಸಾಕ್ಷಿ
ಬೇಲಿ ಹೂವಿನಾಗ ಹನಿಹನಿ ಇಬ್ಬನಿ
ರಗತ ತಟಕತಾವ ಇಬ್ಬನಿ ಹನಿಗಿ
ಸಂಜಿ ಮುಂಜಾನೆ ಮಂಜು ಮೂಡಿದರ
ಮಂಜು ಕೆಂಪಗಿತ್ತು |
ಹಾಲಿನ ಹೊಳಿಗಿ ರಗತ ಬೆರಸಿದರ
ಎಳಿ ಮೀನಿಗಿ ಕುತ್ತು | ಹದ್ದಿನ
ನೆರಳು ಸುಳಿಯುತಿತ್ತು ||
ಮೂರನೆಯ ಚೌಕ:
ಏನಕೇನ ಸಂಭವಿಸಿದವಯ್ಯಾ ತಿಳಿಯಲಿಲ್ಲ ಮಾಯಾ ೩೦
ಎಲ್ಲಿ ನೋಡಿದಿಲ್ಲಿ ವೀರಗಲ್ಲುಗಳು
ಕಲ್ಲಿಗೊಂದು ಕಥೆಯ | ಹೇಳ್ಯಾವ
ನೆನಪಿನ ಲಾವಣಿಯಾ ||
ಒಂದ ಹೋಗಿ ಮತ್ತೊಂದ ಆದುವೋ
ಗುರುತಿನ ಹೆಸರು ಬದಲಿಯಾದವೋ
ಕಾರಮೋಡಗಳು ಕಿಡಿಸುರದಾವೋ
ಹಸನು ಮಾಡಿ ಹರಗಿದ್ದ ಹೊಲದಾಗ
ಬಗಸಿಲೆ ಬಿತ್ತಿ ಸನಿಲಕಿಲೆ ಎಳದಾರ
ಎಲುವಿನ ಫಲರಾಶಿ |
ಹರಿಯುವ ಹೊಳಿಯಾಗ ವಿಷ ಹರಿಯತಾವ ೪೦
ಜೀವರಸದ ಬದಲಿ | ಕಣ್ಣಾಗ
ಬಸದಾವ ರಗತ ಹನಿ||
Leave A Comment