೧
ಕೇಳೀರೇನರಿ ಕತಿಯ ಕೇಳೀರೇನು|
ಕುದರೀ ಸಿದ್ಧನ ಕತಿಯ ಕೇಳೀರೇನು||
ಒಂದಾನೊಂದೂರಾಗ ಸರದಾರ ಇದ್ದಾ
ಅವನ ನಾಮಾಂಕಿತ ಕುದರೀ ಸಿದ್ದಾ
ಕಣ್ಣಾಗ ಮಿಂಚೀನ ಚೂರಿ ಇಟಗೊಂಡಿದ್ದ
ಎದೆಯಾಗಿನ ದಯಮಾಯ ಒಣಗಿಸಿದ್ದ.
ಲೋಕಾ ಕಾಕು ಮಾಡಿ ಕೈ ತಟ್ಟುತಿದ್ದ
ಮೋಡ ಗುಡುಗಿದ ಹಾಂಗ ಮಾತಾಡತಿದ್ದ
ಚಿಗರ ಚಿವುಟುತಿದ್ದ ಹಸರ ತುಳಿಯುತಿದ್ದ
ಬರಸಿಡಿಲು ಜಡಧಾಂಗ ನಗತಿದ್ದ. ೧೦
ಆಡೋ ಕಂದಮ್ಮಗಳ ಓಡ್ಯೋಡಿ ಒದ್ದಾಡಿ
ಚಂಡಾಟ ಚಿಕ್ಕಂದವಾಡಿದ್ದ
ಮುಳ್ಳಾಗಿ ಮಂದೀಗೆ ಕಲ್ಲಾಗಿ ಕರುಣೆಗೆ
ಕೈಮೀರಿ ಸೈಯಳತೆ ದಾಟಿದ್ದ.
ಮಿತಿಮೀರಿದತಿಶಯ ತಾಳsದ ಜನ ತಗಿ
ಛೇ ಬ್ಯಾಡ ನಮಗವನ ತಂಟೆ
ಯಾಕಂತ ಕೇಳಿದರ ಹೇಳ್ಯಾರು ಹಣೆಕುಟ್ಟಿ
ರಾಜನ ಮಗಳಿಂದ ಹಿಂಗಾಯಿತೆ.
ಕಾಡೀನ ರಾಜsನ ಮಗಳಿವನ ಮೆಚ್ಚಿದಳು
ಪ್ರೀತಿ ಮಾಡೋಣು ಬಾರೊ ಪೋರ ೨೦
ಏ ರಂಭೆ ನೀ ನನಗ ಸಹಚರಿsಯಾಗೆಂಬೆ
ನಂಬಿದೆನೇ ನಿನ್ನ ಪೂರ.
ರಚನೆಯ ವಚನsವ ಆಡಿಕೊಂಡಾಡುತ
ಸೂರೆಗೊಂಡಳು ಸುಖದ ಸಾರ
ಕಡಿಕೊಮ್ಮೆ ಕಪಟವ ಪ್ರಕಟಿಸಿ ಓಡಿದಳು
ಛೀ ಸರಿಯೊ ಬೇಬರಿಸಿ ದೂರ.
ಅಂದಿನಿಂದಲಿ ಸಿದ್ಧ ಹಿಂಗs ಒರಟಾಗಿದ್ದ
ಮುಂದಿನ ಗತಿ ಶಿವನೆ ಬಲ್ಲ
ಹಿಂಘs ಸಾಗಿರಲಾಗಿ ಮುಂದೀನ ಕತಿ ಕೇಳ್ರಿ
ತಿಳಿಯsದು ದೈವದ ಗೂಢ || ೩೦
೨
ಮಂದೀಯ ಮೈತ್ರೀಘೆ ಎರವಾಗಿ ಒಂದಿನ
ಒಬ್ಬಂಟಿ ಕಾಡಿನಾಗಿದ್ದ
ಸದ್ದಿಲ್ಲ ಸರಿರಾತ್ರಿ ನಿದ್ದಿ ಬಂದಿರಲಿಲ್ಲ
ಕುದರಿ ಸದ್ದಿಗಿ ಬೆಚ್ಚಿ ಬಿದ್ದ.
ಗಡಬಡಿಸಿ ನಿಂತ ಸುತ್ತ ಕಣ್ಣಾಡಿಸಿದ
ಗುಡ್ಡsದ ತುದಿ ನೋಡ ಹೊಯ್ಕ!
ಅರನಿದ್ದಿಯೊಳಗೆದ್ದು ಕಾಡು ಕಣ್ದೆರಧಾಂಗ
ಶಿಖರದ ನೆತ್ಯಾಗ ಬೆಳಕ!
ಕರಿಯ ಕುದರಿಯನೇರಿ ಭಾರದಿಂದ ಬರತಿದ್ದ
ಕಾವೀಯ ಧರಿಸಿದ್ದ ಬಾವಾ ೪೦
ಕತ್ತsಲ ಬೆನ್ನೇರಿ ಹೋ ಬಂದ ಬೆಳಕೇನ
ಇಳಧಾಂಗ ಮುಗಿಲೀನ ದೈವಾ!
ಕಾಡನ್ನೆ ಮಡಿಮಾಡಿ ಮುಡಿಸಿ ಸುತ್ತಿದ ಹಾಂಗ
ಹೆಡಿಗಿ ರುಂಬಾಲೇನ ಹಸರಾ
ಕತ್ತೀಗಿ ಶಮನಾಸ ಸುತ್ತ್ಯಾನ ನೆತ್ತ್ಯಾಗ
ಹಾರ್ಯಾಡೊ ಚುಂಗsದ ದಿಗರಾ
ಬರೆದ ಕಾಡಿಗಿಯೊಳಗ ಹರದಾಡೊ ಮಿಂಚುಗಳ
ಸೆರೆಹಿಡಿದ ಕಣ್ಣೀನ ಗತ್ತಾ
ಮಾರುದ್ದ ಜಡೆಯಿತ್ತು ಮೊಳದುದ್ದ ಬಿಳಿಗಡ್ಡ
ಗುದ್ದಿ ಮೊಳದಷ್ಟುದ್ದ ನಗತಾ. ೫೦
ಗುಡ್ಡsದ ಮ್ಯಾಗಿಂದ ಕೆಂಡsದ ಉಂಡೀಯ
ಉರುಳೀಸಿಧಾಂಗೋಡಿ ಬಂದಾ
ಹೆಜ್ಜಿಹೆಜ್ಜಿಗಿ ಒಮ್ಮೆ ಉದ್ಗಾರವೆತ್ತೂತ
ಹೈ ಅಂತ ಹಯವೇರಿ ಬಂದಾ.
ಕಲ್ಲುಬಂಡೆಯ ಗುಟ್ಟ ಬಲ್ಲಂಥ ಬಾವಾ
ಕಲ್ಲಿನಂಥವನೆದುರು ಬಂದಾ
ದೊಡ್ಡ ಬೆರಗುಗಳನ್ನು ಉಂಡಂಥ ಮುಖವೇನ
ಸಣ್ಣ ಸಿದ್ಧನ ಮುಂದ ಬಂದಾ.
ಬಂದಾ ಬಂದಾ ಮುಂದsನ ನಿಂದಾ
ಬಾರೊ ಸಿದ್ದ್ಯಾ ಮಗನ ಅಂದಾ
ಸಲಿಗೀಲೆ ಹೆಗಲೀಗಿ ಕೈ ಹಾಕಿ ಚಿಲಮೀಗಿ ೬೦
ಗಾಂಜಿ ಐತೇನಲೆ ಅಂದಾ.
ಇಲ್ಲಂತ ಹೇಳಿದರ ಜೊಲ್ಲುಕ್ಕಿ ನಕ್ಕಾನ
ಜೋಳಿಗ್ಯಾನ ಗಾಂಜಿಯ ತಗದಾ
ಕುಡಿಹುಬ್ಬ ಹಾರೀಸಿ ಹೆಣ್ಣಂದರೇನಂದಿ?
ಹೆಣ್ಣ ಕುದರಿಗಿ ಸಮನಂದಾ,
ಹುಡುಗೇರ ಮೈಚಂದ ತುಳುಕುವ ಹರೆ ಚಂದ
ಹರೆಯ ಮಾರುವ ನಗೆಯ ಚಂದ
ಸೊಂಟsದ ಬೆಂಕೀಗೆ ಬಿಡುಮುಡಿಯ ಹೊಗಿ ಚಂದ
ಜೋಲಾಡೊ ಜ್ವಾಲೀಯ ಅಂದ. ೭೦
ಮುದುಕನ ಹುಡಕಾಟಕೆದುರು ಆಡದ ಹುಡುಗ
ತೆರಬಾಯಿ ತೆರಕೊಂಡೆ ಇದ್ದಾ
ಸೇದೂವೆಯೇನಂತ ಕೇಳ್ಯಾನ ಮುದುಕ
ಒಲ್ಲೆಂತ ಹೇಳ್ಯಾನ ಸಿದ್ಧಾ.
ಖೊಕ್ಕಂತ ನಕ್ಕಾ ತಗದಿಟ್ಟ ಹುಕ್ಕಾ
ಮಕ್ಕಾಕ ಹೊಂಟೇನೋ ಮಗನ
ಮೂರತಿಂಗಳು ಮೂರಮಾಸೀಗಿ ಬರತೇನ
ಆ ತನಕ ಈ ಕುದರಿ ನಿನಗs
ಮೇಸಿ ಸಾಕಿದ್ದಕ್ಕ ಕೈತುಂಬ ರೊಕ್ಕಾ
ಈ ಮಾತು ಪಕ್ಕಾ ಕೊಡೊ ಮಾತು ಹುಡುಗಾ ೮೦
ಮೈದಡವಿ ತಲೆಸವರಿ ಎದ್ದಾನ ಕತ್ತsಲ
ಮಸಿಯೊಳಗ ತಾ ಮಾಯಾವಾದ.
೩
ಹತ್ತ್ಯಾನ ಕುದರಿ ಬಂದಾನ ಊರೀಗಿ
ಮಂದಿ ಕರೆದರು ಕುದರಿ ಸಿದ್ದಾ
ಕುದರಿ ಒಡನಾಟಕ್ಕ ಹುಡುಗ ಬದಲಾಗ್ಯಾನ
ಎಲ್ಲಾರ ಬಾಯಾಗು ಸಿದ್ದಾ.
ಏನಂಬೊ ಕುದರಿ ಕಣ್ಣಾಗ ಚೂರಿ
ಹುಡುಗನ ಮನದಾಗ ಆಡ್ಯಾವರಿ
ಸಾಣೆ ಹಿಡಿದುಕ್ಕೀನ ಹಾಂಗ ಮಿರಿ ಮಿರಿ ಮಿಂಚಿ
ಝಳಪಿಸುವ ಖಡ್ಗಧಾಂಗಿದ್ದಾವರಿ. ೯೦
ಒಡೆಯನ ದನಿ ಕೇಳಿ ಒಡ್ಯೋಡಿ ಬರತೈತಿ
ಮಾಡಿಕೊಂಡ ಮಡದೀಯ ಹಾಂಗ
ಬೆನ್ನೇರಿ ಕತ್ತ ಈನ ಕೂದsಲ ಹಿಡಿದರ
ಕರಿಯ ಹುಡಗಿಯ ಕೂಡಿಧಾಂಗ.
ಹಿಂಗಾಲ ಮ್ಯಾಲ್ನಿಂತು ಸೊಂಟ ಬುಗುರಿಯನೆತ್ತಿ
ಒಡೆಯಾನ ತೊಡಿಗೊತ್ತಿ ಒತ್ತಿ
ಜೋರಾಗಿ ಓಡಿದರ ಬೆನ್ನ ಮ್ಯಾಲಿನ ಹುಡುಗ
ಹೌಹಾರಿ ಹಾ ಅಂದ ಬೆವರಿ.
ಗೆದ್ದಾನ ಯುದ್ಧಾ ಹೈ ಅಂತ ಸಿದ್ಧಾ
ಊರೀನ ರಕ್ಷಣೆ ಮಾಡಿ
ಹೊಳೆಯೊ ಮಾತುಗಳಿಂದ ಹೊಗಳ್ಯಾರ ಮಂದಿ ೧೦೦
ಸಿದ್ಧsನನ ಕುದರಿಯ ನೋಡಿ
ಹಾರದೆತ್ತರವಿಲ್ಲ ಜಿಗಿಯದ ತಗ್ಗಿಲ್ಲ
ಮುಟ್ಟsದ ಗುರಿ ಉಳಿಯಲಿಲ್ಲ
ಲಹರಿ ಲಲಹರಿಯೊಳಗ ಕುದರಿ ಹರಿದಾಡಿದರ
ಕಂಡಲ್ಲಿ ಹಸಿರೊಡೆದವಲ್ಲ.
೪
ರಾಜನ ಜೋಡಿ ಮಾಡಿ ಸವಾರಿ
ಜಿದಿಲೆ ಗೆದ್ದಾನ ಗುರಿಯ
ಈ ವಾಜಿ ತೇಜಿಯ ಮುಂದೆಲ್ಲ ಮಂದ
ಯಾರು ಬಲ್ಲರು ಇದರ ಪರಿಯ. ೧೧೦
ಗಂಡಗಂಡರ ರಾಜ ಮಂಡಿಯೂರುತ ಬಂದ
ತಗೊ ಮಗಳ ಕೊಡೊ ಕುದರಿ ಅಂದ
ಹೆಂಡೀರ ಕೊಟ್ಟsರು ಕೊಡೆನೆಂದ ಸಿದ್ಧ
ಛೇ ರಾಜ ಮುಖ ಮುಚ್ಚಿಕೊಂಡ.
ಬಡನಡುವಿನೊಯ್ಯಾರಿ ಅವಳೆ ರಾಜಕುಮಾರಿ
ಸಿದ್ಧsನ ಬಳಿಬಂದು ಖುದ್ದ
ಏನೊ ಕುದರೀಜಾಣ ಎಲ್ಲೇತ್ಯೊ ನಿನ ಗ್ಯಾನ
ಎದಿಯೊಳಗ ಹೊಕ್ಕೀಯೋ ಕದ್ದ.
ಕುದರೀಯ ಕಾಣುತ ಚೆದುರಿ ಚಪ್ಪಾಳಿಕ್ಕಿ
ಮಧುರ ನುಡಿದಳು ಹಲವು ಅಂದ ೧೨೦
ಕುದುರೀಯ ವೃತ್ತಾಂತ ಕೆದಕೆದರಿ ಕೇಳಿದಳು
ಒಂದು ಬಿಡದಲೆ ಹೇಳು ಚಂದ.
ಅರಸsನ ಮಗಳೆ ನೀ ಅರಶೀನ ಸೀರೆವಳೆ
ಐವತ್ತು ನೆರಿಗೆಯ ಹಾಸಿ
ಹೊಳ್ಳ್ಯಾಡಿ ಬತ್ತsಲೆ ನೆತ್ತsರು ಕಾರಿದರು
ದಕ್ಕsದು ನಿನಗಂಥ ಕುದರಿ.
ಸಿದ್ಧsನ ಸೊಕ್ಕಾಯ್ತು ಹಮ್ಮು ಬಿಮ್ಮುಗಳಾಯ್ತು
ಸರ್ವಸ್ವವಾಗಿತ್ತು ಕುದುರಿ.
ಜಗದ ಸವಾರರ ಹೊಟ್ಟೀಗಿ ಕಿಚ್ಚಾಯ್ತು
ಕಣ್ಣ ಕಣ್ಣೀರಾಯ್ತು ಕುದರಿ. ೧೩೦
*
ಹಿಂಗs ಸಾಗಿರಲಾಗಿ ಮುಂದೀನ ಕತಿ ಕೇಳ್ರಿ
ತಿಳಿಯsದು ದೈವದ ಗೂಢ
ಸೊಕ್ಕ್ಯಾವ ಕುದರಿ ಸೊರಗ್ಯಾನ ಹುಡುಗಾ
ಕರಗ್ಯಾನ ಚಿಂತೀಯ ಒಳಗ.
ಮೂರು ತಿಂಗಳು ಮೂರಮಾಸೀಯ ಅವಧಿ
ಹಾ ಬಂತೊ ಇನ್ನೊಂದ ದಿನಕ
ಬಂಗಾರದಂಥಾ ಈ ಸಿಂಗಾರ ಕುದರೀಯ
ಹೆಂಗಾರೆ ಬಿಟ್ಟಿರಲಿ ಅಂದಾ
ಅಪ್ಪಾ ಏ ಗುರುಸ್ವಾಮಿ ಒಪ್ಪುಳ್ಳ ದೇವರೊ
ಭೂಮೀಗೂ ಆರೊರಸ ಹಿರಿಯಾ ೧೪೦
ದಿಂಡರಿಕಿ ಉರುಳೇನೊ ದಾರೀಗೆ ಬರಬ್ಯಾಡೊ
ಕುದರಿ ಬಿಟ್ಟಿರಲಾರೆನಯ್ಯಾ.
ಯಾರಿಲ್ಲದಲ್ಲೀಗೆ ಬಂದಾನೊ ಮೆಲ್ಲsಗ
ಚಂಚಲವಾದವು ಚಿತ್ತ
ಹಾ ಬಂದ ಹೋ ಬಂದ ಬಂದs ಬಿಟ್ಟನು ಬಾವಾ
ಗಾಳ್ಯಾಗ ಬಗವಾ ಹಾರಿಸುತ.
೫
ಎದ್ದೋಡಿ ಎದುರಾಗಿ ಪೊಡಮಟ್ಟ ಪಾದಕ್ಕ
ಹಣಿಯೊಳಗ ಮೂಡ್ಯಾವ ತಿಲಕ
ಏ ವಚನವಂತಾ ಘನಮಾನವಂತಾ
ಕೊಡೊ ಕುದರಿ ನಮಗ ಸನಮಂತಾ ೧೫೦
ಏನ ಹೇಳಲಿ ಗುರುವೆ ಊನವಾದವು ಮಾತು
ಯಾ ಮಾಯಾವಾದವು ಕುದರಿ
ಹುಲ್ಲು ಮೇಯಲು ಹೋಗಿ ಎಲ್ಲೂ ಕಾಣಲೆ ಇಲ್ಲ
ಹೋದಾವು ಕಾವsಲ ಮೀರಿ.
ಸುಳ್ಳು ಹೇಳಲಿ ಬ್ಯಾಡ ಒಳ್ಳೇದಲ್ಲೊ ತಮ್ಮಾ
ಖರೆ ಕೊಸರಿ ಬಂದಾವೊ ಹೊರಗ
ಸುಳ್ಳ್ಯಾಕೆ ಹೇಳೇನು ಒಳ್ಳೆಯ ಗುರುವ ಈಗೆ
ಉಳದಾವೆ ಖರೆ ಸೆರೆಯ ಒಳಗ?
ತಪ್ಪು ಮಾಡಿದ್ದುಂಟು ದಂಡ ತಪ್ಪಿಗೆ ಉಂಟು
ಕಳೆದ ಕುದರಿಯನೊಂದ ಬಿಟ್ಟು ೧೬೦
ಬೇಕಾದ್ದ ಕೇಳಿರಿ ಸಾಕಷ್ಟು ಕೊಟ್ಟೇನು
ನನ್ನ ಜೀವಾ ಒಂದ ಬಿಟ್ಟು.
ಮಾತನ್ನೆ ಮರೆತವನು ಮತ್ತೇನ ಕೊಟ್ಟೀಯೋ?
ನಡಿ ನೋಡತೇನಂದ ಬಾವಾ
ಗುರುವಿನ ಕರಕೊಂಡು ಒಳಬಂದ ಒಳಗೊಳಗ
ಮುಳು ಮುಳು ಅಂದಾವ ಜೀವಾ.
ಎಲ್ಲ ಬಲ್ಲವರಿಗೆ ಬದಲೆಂಗ ಹೇಳೇನು?
ತಗಲಾಡಬೇಡೆಲವೋ ಮಗನೆ
ಸುಣ್ಣ ಬೆಣ್ಣಿಯ ಗುರತ ಹಿಡಿದು ನುಡಿಯಿರಿ ಸ್ವಾಮಿ
ಯಾತಕೆನ್ನಲಿ ಕೋಪ ನಿಮಗೆ? ೧೭೦
ಸುಣ್ಣ ಬೆಣ್ಣೆಯ ಬಲ್ಲೆ ಬಿಳಿದು ಕರಿದನು ಬಲ್ಲೆ
ಮನದಾನ ಅಭಿಮತ ಬಲ್ಲೆ.
ಸಮಯಕ್ಕೆ ಹೇಳುವ ಸಲ್ಲಲಿತ ವಚನದಲಿ
ಸುಳ್ಳು ಬೆರಸಿದ್ದನ್ನ ಬಲ್ಲೆ.
ಪರಿಪರಿ ಕೇಳಿದರು ಬಚ್ಚಿಟ್ಟ ಬಾತಮಿಯ
ಬಿಚ್ಚಿ ಹೇಳಲೆ ಇಲ್ಲ ಸಿದ್ಧ.
ಮಗನ್ಹಾಂಗ ರಮಿಸಿದರು ಗದರಿದರು ಕುದರಿಯ
ಕದ್ದೆನೆನ್ನಲೆ ಇಲ್ಲ ಸಿದ್ಧ.
ಹಿಡಿ ಹಿಡಿ ಹಿಡಿ ಅಂತ ಜೋಳಿಗ್ಯಾನ ಹಿಡಿಬೂದಿ
ಹಾರಿಸಿ ಹೋದಾನ ಬಾವಾ
ಹುದುಗಿದ್ದ ದಿಗಿಲುಗಳು ಭುಗಿಲೆದ್ದು ಹೋದಾವು ೧೮೦
ಕಣ್ಮರೆಯಾದಾವು ಬಗವಾ.
೬
ಅಕ್ಕಕ್ಕು ಕರಿಗುದರಿ ತನಗs ದಕ್ಕಿತು ಎಂದು
ಓಡೋಡಿ ನೆಲಮನೆ ಹೊಕ್ಕ.
ಚಿತ್ರಚಮತ್ಕಾರವಾಗಿತ್ತು ತುದಿಬುಡ
ತಪ್ಪಿಹೋಗಿದೆ ಎಲ್ಲ ಲೆಕ್ಕ.
ಹಾ ಕುದರಿ ಇರಲಿಲ್ಲ ಹಾ ಎಂದು ಕುಸಿದಾನೊ
ಯಾಸಿ ತಿರುಗ್ಯಾವಣ್ಣ ಮೋಸ.
ಅಚ್ಚುಮೆಚ್ಚಿನ ಕುದರಿ ಎತ್ತ ಹೋದಾವೆಂದು
ಹುಡುಕ್ಯಾನು ಹೊಕ್ಕು ವನವಾಸ. ೧೯೦
ಕಂಡ ದೇವರಿಗೆಲ್ಲ ದಿಂಡಿರಿಕಿ ಉರುಳ್ಯಾನು
ಹರಕೀಗಿ ತೋರಿಸಿರಿ ಕುದರಿ
ಎಲ್ಲಿ ಹೋದಾವೆಂದು ಎಲ್ಲಾ ಕಡೆ ಹುಡಿಕ್ಯಾನು
ಎಲ್ಲಿಯೂ ಸಿಗಲಿಲ್ಲ ಕುದರಿ.
ಕಂಡೀರೇನರಿ ನೀವು ಮಂಡ ಬಾವಾನೆಂದು
ಕಂಡವರ ಅಂಗಲಾಚ್ಯಾನು.
ಆ ಪಾಪಿ ಮುಂಗೋಪಿ ಶಾಪೀಸಿ ಹೋದಾಣು
ಕಂಡರೆ ಹೇಳಿರೆಂದಾನು.
ರಾಜsದ ಪಾಗಾದ ಒಳಹೊರಗ ಹುಡಿಕ್ಯಾನು
ಕಾಡೀನ ತುದಿಬುಡ ತದಕಿ.
ದಿಕ್ಕುದಿಕ್ಕೆಂದರೆ ದಿಕ್ಕೇನ ದೊಡ್ಡsದೊ ೨೦೦
ಹುಡಿಕ್ಯಾನ ಬುಡ ಗದಬಡಿಸಿ.
೭
ಹಿಂಗs ಸಾಗಿರಲಾಗಿ ಮುಂದೀನ ಕತಿ ಕೇಳ್ರಿ
ತಿಳಿಯsದು ದೈವದ ಗೂಢ.
ಕಡಿಕೊಮ್ಮೆ ಕಂಡಾನು ದೂರsದ ಊರಿನ
ಸಂತ್ಯಾಗ ಕುದರಿಯ ಹಿಂಡ.
ಸಾಲು ಕುದರಿಯ ಒಳಗ ಜೋಲು ಮಾರಿಯ ಮಾಡಿ
ಕರಿಗುದರಿ ನಿಂತಿದ್ದ ಕಂಡಾ
ಹೋ ಒಂದ ಉಸಿರಿನಲ್ಲಿ ದೌಡಾಸಿ ಬಂದಾನ
ಕುದರಿಯ ಬಾಚಿ ಹಿಡಕೊಂಡಾ.
ತಿಕ್ಯಾನ ತೀಡ್ಯಾನ ತೆರೆಮುಕ್ಕಿ ಬಿದ್ದಾನ
ಮೂಸಿ ಮುತ್ತಿಟ್ಟಾನ ಕುದರಿ.
ಕುದುರೆ ಕುದುರೇ ಅಂತ ಮುದಕೇರ ಹಾಂಗತ್ತ
ಕಣ್ಣೀರ ಸುರಿಸ್ಯಾನ ಧಾರಿ.
ಸಾಬಣ್ಣ ಈ ಕುದುರಿ ಹೆಂಗ ಸಿಕ್ಕಿತು ನಿಮಗ
ಹೇಳಬೇಕಂದಾನ ಸಿದ್ಧಾ.
ಸೇರ ಬಂಗಾರಕ್ಕ ಮಾರಿ ಹೋದಾನೊಬ್ಬ
ಮಾರು ಜಡೆ ದಾಡಿಯ ಬಾವ.
ಸೇರಿಗಿ ಸವ್ವಾಸೇರ ಬಂಗಾರ ಕೊಟ್ಟಾನ
ಹಿಂದಿರುಗಿ ಹೊಡಕೊಂಡು ಬಂದಾ.
ಸುಣ್ಣಬೆಣ್ಣಿಯ ಗುರುತ ಹಿಡಿಯಲಾರದ ಹುಡುಗ ೨೨೦
ಕುದರೀಯ ನಗಿ ನಕ್ಕಲು ಬಂದಾ.
೮
ಒಡೆಯ ಕರೆದರೆ ಕುದುರೆ ಓಡೋಡಿ ಬರಲಿಲ್ಲ
ನಿದಿ ಮಾಡುತಲಿತ್ತು ಜಾಸ್ತಿ.
ಕಣ್ಣು ಸಣ್ಣವು ಚೂರಿ ಇರಲಿಲ್ಲ, ಯಾವತ್ತು
ನೆತ್ತಿಗೇರಿದ ಹಾಂಗ ಮಸ್ತಿ.
ಮೊದಲಿನ ಕುದುರಿ ಇದಲ್ಲsವೆ ಅಲ್ಲಂತ
ತಲಿಚೆಲ್ಲಿ ಹುಲ್ಲೂ ನಂತಾದ.
ಅದಕಿದಕೆ ಎಲ್ಲೀಯ ಹೋಲಿಕೆ ಅಲ್ಲ ತಗಿ
ಇದೆ ಬ್ಯಾರೆ ಕುದರಿ ಎನುತಿದ್ದ. ೨೩೦
ಏರಿದ್ದ ಶಿಖರಗಳ ಮತ್ತೇರ ಹೋದರ
ಹಿಂದಿರುಗಿ ನಿಂತಾವು ಕುದರಿ
ಹಾರಿದ್ದ ತಗ್ಗುಗಳ ಹಾರಹೋದರ ಮತ್ತ
ಹಿಂದಕ್ಕ ನೆಗದಾವು ಕುದರಿ.
ಯಾರಿಲ್ಲದಲ್ಲಿಗೆ ಕುದರಿಯ ಕರೆದೊಯ್ದು
ವಿವರವ ಪರಿಕಿಸುತ್ತಿದ್ದ
ಅಲ್ಲಂತ ಹೌದಂತ ಹಣಗಲಕ ಬಿದ್ದಾಗ
ತಂತಾನೆ ವಾದಿಸುತಿದ್ದ.
ಕೊಂದ ಒಗಿಬೇಕಂತ ಬಂದೂಕ ತರತಿದ್ದ
ಕೊಲ್ಲsದ ಹಿಂದಿರುಗುತಿದ್ದ. ೨೪೦
ಘಾತ ಬಾವಾ ಬಂದು ಬೇತ ಮಾಡ್ಯಾನಯ್ಯೊ
ಇದs ಬ್ಯಾರೆ ಜಾತಿ ಎನುತಿದ್ದ.
ಕಂದೀದ ಮಾರಿಯ ಮಂದಿಗೆ ತೋರsದೆ
ಒಳೊಗೊಳಗ ಮುಳು ಮುಳು ಅತ್ತ,
ರಾಜsನ ಜೋಡಿ ಮಾಡಿ ಸವಾರಿ
ಗುರಿಯ ಗೆಲ್ಲಲು ಹೋಗಿ ಸೋತ.
ಮೊದಲಿsನ ಕುದರಿಯನ್ಯಾರಿಗೆ ಮಾರಿದೆ
ಎನ್ನುsತ ರಾಜನು ಹೋದಾ.
ಆ ಕ್ಷಣವೆ ಸಿದ್ಧಾ ಮನಸು ಮಾಡೆದ್ದಾ
ಅನುಮಾನವಿನ್ನ್ಯಾತಕೆಂದಾ. ೨೫೦
*
ಸಿದ್ಧಾ ಸಿದ್ಧಾ ಸಾವಳಗಿ ಶಿವನಿಂಗ
ಸ್ವಾಮೀಗೆ ಶರಣಂದ ಸಿದ್ದಾ
ಬಿಳುಪೇರಿ ಬೆಳಕೀನ ರೂಪಾದ ಭೂಸನೂರ
ಮಠದಯ್ನ ಪಾದಾ ಪಡಕೊಂಡಿದ್ದ.
ಘೋಡಗೇರಿ ಬಸ್ಸಪ್ಪ ಅವರ ಮಗ ಚಂದ್ರಪ್ಪ
ಪದಾ ಮಾಡಿ ಹಾಡಿದ್ದ ಸಿದ್ಧ
ಕೇಳೀರೇನರಿ ಕತಿಯ ಕೇಳೀರೇನು
ಕುದರೀ ಸಿದ್ಧನ ಕತಿಯ ಕೇಳೀರೇನ ಉ?
೯
ಹೈ ಅಂತ ಕುದರಿಯನೇರ್ಯಾನ ಸಿದ್ಧಾ
ಸೈ ಅಂತ ಹಿಡದಾನ ಮರ್ಮ, ೨೬೦
ಕತ್ತೀನ ಕೂದಲಿಗಿ ಕೈಹಾಕಿ ಜಗ್ಗ್ಯಾನ
ಜೋರೀಗಿ ಜೋತಾವ ಚರ್ಮ.
ಹಿಂಗಾಲ ಮ್ಯಾಲ್ನಿಂತು ಹಿಂಭಾರ ಹಾಕಿದರ
ಮದ್ದು ಸ್ಫೋಟಿಸಿಧಾಂಗ ಓಡಿ
ನೋಡುವ ಮಂದಿಗೆ ಕಾಣುತಲಿದ್ದರು
ವೈರಿಗಳಿಬ್ಬರ ಜೋಡಿ.
ಸಿದ್ಧ ಸವಾರನಂತಿರಲಿಲ್ಲ ಆ ಕುದರಿ
ಕುದರಿಯ ಹಾಂಗಿರಲಿಲ್ಲ.
ಕುಸ್ತೀ ಹಿಡಿದಿಬ್ಬರು ಒಬ್ಬರನೊಬ್ಬsರು
ಘಾತಿಸುವಂತಿದ್ದರಲ್ಲ. ೨೭೦
ನಂಬಿಸಿ ಓಡಿಸಿ ಹಾರಿಸಿ ಕೊಳ್ಳದಲಿ
ಕೆಡವಿ ಕೊಂದೇನೆಂಬ ಸಿದ್ಧಾ
ಓಡ್ಯೋಡಿ ಹೌಹಾರಿ ಕೊಳ್ಳಕೀತನ ತೂರಿ
ತೀರಿಸುವೆನೆಂಬುsವ ಕುದರಿ.
ಕಾಡಿನಲ್ಲಿಬ್ಬsರು ಕಣ್ಮರೆಯಾದರು
ಗೊರಸಿನ ದನಿ ದಿಕ್ಕ ತುಂಬಿ
ಕಾಣಕಾಣುತ ಆಹಾ ಕಾಣದಾಯಿತು ಜೋಡಿ
ಮಂದಿ ನಿಂತರು ಕಣ್ಣ ತುಂಬಿ.
*
ಹೋದವರು ಹಿಂದಿರುಗಿ ಬರಲಿಲ್ಲ ಯಾರ್ಯಾರ
ಕಣ್ನೀಗು ಬೀಳಲಿಲ್ಲವರು. ೨೮೦
ಆಗೀಗ ಗೊರಸಿsನ ದನಿ ಕೇಳಿಸುವುದುಂಟು
ಜನರಾಗ ಬೆಚ್ಚಿ ಬೀಳುವರು.
ಒಮ್ಮೆ ರಾತ್ರಿಯಲಿ ಕಟ್ಟೀದಿಟ್ಟಿಗೆ ಬಿದ್ದು
ಅಡಕಲ ಗಡಿಗೆ,
ಆಳಾಧಾರ ತಪ್ಪಿದರ, ಬಿಚ್ಚಿದರ
ಸಲಿಗೆಯ ಬೆಸುಗೆ
ಸಿದ್ಧರ ಜೋಡಿ ತುಳಿದಾಡಿ ಹೋಯ್ತೆಂದು
ನೋಡಿಕೊಳ್ಳುವರು ಮಂದಿ
ಎಡಿಮಾಡಿ ನೈವೇದ್ಯ ನೀಡುವರು ೨೯೦
ಸಿದ್ಧರ ಕತಿಯ ಹಾಡಿ ||
Leave A Comment