ಕೆಂಪಾನ ಕೆಂಪುಗುಡ್ಡ, ಬೆಳ್ಳಾನ ಬಿಳಿಗುಡ್ಡ ಒಡಮುರಿದು ಕೂಡಿದ
ಒಡ್ಡಿನಲ್ಲೇ ನಮ್ಮೂರ ಕೆರೆ; ಹೆಸರು ಗಂಗಾಮಾಯಿ.
ಮೂರು ಬದಿ ಮರಗಿಡ ಕಂಟಿ ಸಸ್ಯಕೋಟಿಯ, ಹೊಕ್ಕವನು
ಹೊರಬರದ ಏಳುಸುತ್ತಿನ ಕೋಟೆ. ಒಳಗಡೆಯಲ್ಲಿ ನಾಯಿ ನರಿ
ಹಂದಿ ಶುಕಪಿಕಾದಿಯ ಚೌರ್ಯಾಂಸಿ ಲಕ್ಷ ಕೀಚು ಕಿರಚು.
ಅದಕದಕ್ಕೆ ಅದರದರ ಪಾಲಿನ ಗಾಳಿ ಮಳೆ ಬೆಳಕು, ಮೆಳೆ
ಪೊದೆ ಹಸಿರು ಆಹಾರ ಭಯ ನಿದ್ರೆ ಮೈಥುನಾದಿಗಳು.
ದಡದ ಗಿಡಗಳ ನೆತ್ತಿ ಜೋತ ಬಾವಲಿಹಿಂಡು
ನೀರಿನೆದೆಯಲ್ಲದರ ವಕ ನೆರಳು.
ತಲೆತಲಾಂತರದ ಹೊಲಿತೆಪ್ಪ ನೊಣ ನೊರಜು ಕೀಟಗಳ ಸದಾ ೧೦
ಸಂಚಾರ, ಕೊಡುಕೊಲ್ಲು ವ್ಯವಹಾರ, ದರ, ನಿರಾಂತಕ.
ತಂಗಾಳಿ ಸುಳಿಯದ, ದೊಡ್ಡ ತೆರೆ ಮೂಡಿ ಮುಳುಗದ,
ಹರಿಯುವುದಕ್ಕೆ ದಿಕ್ಕಿಲ್ಲದ ನೀರು ಹಳೆಮರದ ಬೇರುಗಳಲ್ಲಿ, ಊರಿನ ಗಟಾರು ಮೋರಿಗಳಲ್ಲಿ,
ಏಡಿಮಣ್ಣಿನ ಗೋಲ ಬಿಳಿಗುದ್ದಿನಲ್ಲಿ ಪಿಸುನುಡಿಯುವದು.

ಮೂಡಣದ ಮುದಿಕುರುವೊಡೆದು ನೆತ್ತರು ಕೀವು ಸೋರಿತೋ,-
ಸುರುವಾಯ್ತಿಲ್ಲಿ ಚಲನೆ: ತೆರೆಯ ಮಿಡಿನಾಗರಗಳೆದ್ದು
ಮುರಿದಾಡಿ, ಮಣಿದು, ಹೊಡಮರಳಿ, ತಳಕು ಬಿದ್ದಾಡಿ ಮೂಡಿದ್ದ
ಬಾವಲಿಹಿಂಡು ಗೆರೆಗೆರೆಯಾಗಿ ಹಂಚಿ, ಹೊಲವಾರಾಗಿ, ಸುಕ್ಕುಗಟ್ಟಿ

ಸುತ್ತುವವು. ರಾಡಿ ಗಿಜಿಗಿಜಿ ಕೆಸರು ನೀರಿನಲ್ಲಿ ಅಂಗಾತಾಗಿ
ತೇಲುವ ಚಿಳಿಮಿಳಿ ಮೀನ ಹಕ್ಕಿ ತಿನ್ನುತ್ತ ತಿರುಗುವವು                           ೨೦
ಒಂಟಿಗಾಲಿನ ನೂರೆಂಟು ಬಕ. ತೊಡಗುವರು ಮಂದಿ ಈ
ನೀರ ಬಳಸುವುದಕ್ಕೆ: ಕುಡಿಯುವುದಕ್ಕೆ, ಮೀಯಲಿಕ್ಕೆ, ದನದ
ಸೆಗಣಿ ಮೈಗಂಜಳ ತೊಳೆಯಲಿಕ್ಕೆ, ನಮ್ಮಪ್ಪ ಬೀರಪ್ಪನ ಪಾದ
ಪಡಕೊಳ್ಳಲಿಕ್ಕೆ, ಹಡದವ್ವ ಕರ್ರೆ‍ವ್ವನ ಕರಿಮೈ ಎರೆಯಲಿಕ್ಕೆ ,
ಹೊರಕಡೆಗೆ , ಹೇಲುಚ್ಚೆಗೆ , ಬೋಳಿಯರ ಮಡಿ ಒದ್ದೆಗೆ,
ಭಟ್ಟರಾಚಮನಕ್ಕೆ, ಅದಕ್ಕೆ ಇದಕ್ಕೆ ಎದಕ್ಕು.
ಒಟ್ಟು ಖರ್ಚಾದ ಕೆರೆನೀರು ಬಚ್ಚಲ ದಿಳಿಜಾರಿನಗುಂಟ ಹರಿದು
ಕೆರೆಗೇ ಸೇರುವ ದಿನನಿತ್ಯದ ವ್ಯವಹಾರ, ಈ ಕೆರೆಯ ಚಮತ್ಕಾರ.

ಇದಕ್ಕೂ ಇವೆ ಹಳ್ಳಿಹಾರುವರು ಚಂಡಿಕೆಯಂತೆ ಹೊಸೆದ
ಗಂಗಾಷ್ಟಕ, ಶತಕ , ಲಹರಿ, ಸಹಸ್ರನಾಮಾವಳಿ, ಸ್ಥಳಪುರಾಣಗಳು:
ಹಳೇದೇವರ ಜಡೆಯ ಜಿಡ್ಡು, ಮುನಿತೊಡೆಯ ಕಿಲುಬು,
ಕಿವಿಯ ಪಿಸುರು ತೊಳೆದು ಮಡುಗೊಂಡವಳೀ ಗಂಗಾಮಾಯಿ.
ಅಂತೆಯೇ ಬರುವಾಗ ಉಡಿತುಂಬ ತಂದಳು ತಾಯಿ: ಆ
ಸೀಮೆಯ ಪವಿತ್ರ ಕೆಸರುಸುಕು ರೋಗಾಣು,
ಹಗ್ಗಕ್ಕೆ ಹಾವೆಂಬ ಭಯ,
ಕಾಂಬ ಕಣ್ಣಿಗೆ ಮಾಯದ ಕನ್ನಡಿಯ.

ಘನಮಹಿಮಳು ತಾಯಿ,-ತಾಮ್ರದ ದುಡ್ಡನದ್ದಿದ ತಕ್ಷಣವೆ
ಕಿಲುಬಿಸುವಾಕೆ; ಬೆಳಗಿದರೆ ಬಂಗಾರ ಇಲ್ಲವೆ ಅಂಥ ಭ್ರಮೆಯ
ಹುಟ್ಟಿಸುವಾಕೆ. ಬಂಗಾಲದ ಜಾದುಗಾರರಿಗೆ ಬಾಣಂತಿಯ ಕೈ
ಒದಗಿಸಿದಾಕೆ; ಮೂರೇ ಗುಟುಕಿಗೆ ಬಂಜೆಯರ ಗರ್ಭ ಗಟ್ಟಿಗಿಳಿಸಿದಾಕೆ.                 ೪೦
ಕಲಿವ ಹುಡುಗರನ್ನು ಸೈಕಲ್‌ಸಮೇತ ಹೊಟ್ಟೆಯೊಳಗೆ
ಅಟ್ಟಿಸಿಕೊಂಡಾಕೆ. ‘ಏಸು ನಡೆದದ್ದು ಇದೇ ನೀರಿನ ಮೇಲೆ’ಂದ
ಪಾದ್ರಿಗೆ ಹೊಲತಿಯ ಮೈತುಂಬಿ ಹೌದೆಂದಾಕೆ.

ಇದರಾಳ ನಿರಾಳ ಅತಳವಿತಳ ಪಾತಾಳ ರಸಾತಳದ
ಒಳಗಿನೊಳಗಿನ ತಳ. ಕಲ್ಲುಮಣ್ಣಲ್ಲ-ಹಾಗಂದವನ ಬಾಯಿಗೆ
ಬುಚು ಬುಚು ಹುಳ ಬೀಳ-ಮುತ್ತುರತ್ನದ ಹೇರಳರಾಶಿ
ಇದರ ತಳ. ಅಲ್ಲಿಗೂ ಇಳಿದವರು, ನಾಗಿನಿಯರ ಬಳಸಿದವರೆಂಬ
ಖ್ಯಾತಿಯವರು, ನಾಕೈದಾರು ಜನ,  ನಮ್ಮೂರವರೆ, ಕಲ್ಲುದೇವರಾಗಿ
ಲಾವಣಿಗೆ ಕಥೆಯಾಗಿ, ಹಬ್ಬಹುಣ್ಣಿಮೆಗೊಮ್ಮೆ ಪೂಜೆಗೊಳ್ಳುತ್ತಾರೆ.
ಕಂಠಮಟ ಮುತ್ತುರತ್ನಾದಿಗಳನೊತ್ತೊತ್ತಿ ತಿಂದ ಪಾಪ                         ೫೦
ಚಿಳಿಮಿಳಿ ಮೀನು, ದಕ್ಕಲಾರದೆ ಸತ್ತು ತೇಲುತ್ತವಂತೆ.
ಅಂತೆಯೇ ಒಂಟಿಗಾಲಿನ ಬಕವಾಗಿ , ಬಕದ ಬಾಯಾಗಿ,
ಬಾಯ ಜೊಲ್ಲಾಗಿ ಸುರಿಯುತ್ತಾರೆ ಜನ ಹಗಲು ರಾತ್ರಿ.

ಸದ್ಯ ಹಾದರದ ಕೂಸುಕರ್ಣರಿಗೆ, ಅದನೊಪ್ಪದ ಪುಕ್ಕರಿಗಿದು
ಆಶ್ರೆಯಸ್ಥಾನ.  ಇಮ ಖರೆ. ಇಂಥಾ ಮಂದಿ, ಇರುತ್ತಾರಲ್ಲ
ಗೋರಿಗೆ ದಿಕ್ಕಿರದವರು, ಬೆಂಕಿಯ ರಿಣವಿರದವರು
ಮಕೂರು ಹಗಲು, ಮೂರು ರಾತ್ರಿ ಕೆರೆಯಲ್ಲಿ ತೇಲಿದ ಮೇಲೆ
ಗಂಗಾಮಾಯಿ ಕಣ್ಣು ತೆರೆಯುತ್ತಾಳೆ. ಆಮೇಲೆ
ಸದರಿಯವರ ದೇಹ ಜಲಚರಗಳಿಗೆ,  ಆತ್ಮ ಗಿಡಗಳಿಗೇರಿ,
ಜೋತು ಬಾವಲಿಯಾಗಿ ಮುತ್ತುರತ್ನಗಳ  ಕಾಯುವ                 ೬೦
ಗಂಗವ್ವನ ಖಾಸಾಪೋಲೀಸು ಪಡೆಗೆ ಸೇರುತ್ತಾರಂತೆ.
ಈ ಮಾತಿಗೆ ಭಟ್ಟರ ಪುಸ್ತಕದಲ್ಲಿ, ಕುರುಬರ ಹಾಡಿನಲ್ಲಿ
ಆಧಾರವಿಲ್ಲ ಹೌದು; ಆದರೆ ಭಟ್ಟರು ತೋಂಡಿಯಲ್ಲಿ
ಹೀಗೆಂದು ಅಪ್ಪಣೆ ಕೊಡಿಸಿದ್ದುಂಟು.                                       ೬೪