ಹೊತ್ತಾಯಿತು ಮಲಗು ಮರಿ.
ಬಿಸಾಕು ನಿನ್ನ ಪ್ರಶ್ನೆಯ ಕೊಕ್ಕೆ, ವ್ಯವಹಾರಕ್ಕೆ ಸಲ್ಲದ
ಅಜ್ಜೀಕಥೆ, ಸತ್ಯ ಸುಳ್ಳಿನ ವ್ಯಥೆ.

ಬೊಗಳುವ ನಾಯಿ, ನಿನ್ನ ತಾಯಿ, ಅಕ್ಕ ಅಜ್ಜಿ ತಂಗಿ
ಮನೆ ಮನೆ ಮಂದಿ, ಈ ರಸ್ತೆಯ ಸಂದಿಗೊಂದಿ
ಕುಂಡದ ಬಳ್ಳಿ ಸಹ ಮಲಗಿವೆ ಹೌದ?

ಮಲಗು ಮತ್ತೆ;
ಆಗಲೇ ಕರಿ ಘೂರ್ಕ ಕೋಲು ಕುಟ್ಟೋ ಹೊತ್ತು
ಕನಸಿನಲ್ಲಿ ನೀನು ಕುಂಡದ ಬಳ್ಳಿಗೆ ಹೂವ ಕಂಡರಿಸಿ
ಕನವರಿಸುವ ಹೊತ್ತು; ಗೊತ್ತಲ್ಲ ಗುಮ್ಮ?
ಗುಡು ಗುಡು ಗುಮ್ಮ ಹೊರಡೋ ಹೊತ್ತು!     ೧೦

ಹೇಳಿದರೆ ಅಂಜಬೇಡ. ಹೇಳಲೇ?
ಅಲ್ಲಲಿ ಅಂಗೈಯಗಲ ಬೆಳಕಿನಲ್ಲಿ ಭೂತಾಕಾರ ನೆರಳ
ನಿಭಾಯಿಸುವ ದೀಪದ ಕಂಬ ಕಂಡೆಯಾ?
ಆದರಡಿ ನನ್ನ ನೆಗೆಟಿವ್‌ ಥರದ
ಬತ್ತಲೆಗೆ ಬತ್ತಲ ಮೊತ್ತ ಕಂಡೆಯಾ?
ಅಲ್ಲೆ ನಿಂತಿದೆ ನೋಡು ಸುಮ್ಮನೆ ಬಿಮ್ಮಗೆ ಅದೇ
ಗುಡು ಗುಡು ಗುಮ್ಮ. ರೋಡ್‌ ರೋಲರ್ ಅಂತ
ಅಥವಾ ಇನ್ನೆಂಥದೋ ಸರ್ಕಾರಿ ಹೆಸರಿದೆ ಅದಕ್ಕೆ.

ನೋಡುವುದಕ್ಕೆ ಇಷ್ಟಿದೆಯಲ್ಲ-ನೋಡುತ್ತಿರು ಕೆಳಗೆ       ೨೦
ಆಳಕ್ಕೆ, ಮೇಲೆ ಎತ್ತರಕ್ಕೆ ಬೆಳೆಯುತ್ತದೆ.
ಬೆಳೆಯುತ್ತದೆ ನನಗಿಂತ, ಮನೆಗಿಂತ, ಗುಡ್ಡಬೆಟ್ಟಕ್ಕಿಂತ
ದೊಡ್ಡದಾಗಿ ಅಡ್ಡಡ್ಡ ಉದ್ದೋ ಉದ್ದ ನೆಲಮುಗಿಲಿಗೇಕಾಗಿ,
ನಿನ್ನಜ್ಜೀ ಕಥೆಯ ರಾಕ್ಷಸನಂತೆ.
ಬೆಳೆಯುತ್ತವೆ ಅದಕ್ಕೆ ಬಿಳಿಯ ಕೋರೆಹಲ್ಲು, ಕೆಂಪು
ನಾಲಗೆಯೇನು, ನೆತ್ತಿಯ ಕೊಂಬು, ಕಾಂಬ ಕಣ್ಣು.

ಕಾರಿನ ಝಗ್ಗಂತ ಲೈಟಿನಲ್ಲಿ ಮುಚ್ಚಿದ ರಸ್ತೆ ಮುರಿದು
ತಂತಾನೆ ಅಣಕಿಸಿಕೊಂಡಿತ?
ಹಾಗಿದ್ದರದು ಬೆಳೆಯುತ್ತಿರಬೇಕು ಮರಿ,
ಬೆಳೆಯುತ್ತಿರಬೇಕು.          ೩೦

ಅಸ್ಪಷ್ಟ ಹೆಜ್ಜೆಗಳು, ಮುರಿದ ಪಿಸುದನಿ ಸಿಳ್ಳು
ತುಟಿ ಕಚ್ಚ ಇದ ಗೋಳು ಕೇಳಿಸಿತ?
ಹಾಗಿದ್ದರದು ಬರುತ್ತಿರಬೇಕು ಮರಿ,
ಬರುತ್ತಿರಬೇಕು-ಕೋರೆಹಲ್ಲು  ಮಸೆಯುತ್ತ
ನಾಲಗೆ ಚಾಚುತ್ತ , ಕಣ್ಣಿನಲ್ಲಿ ಕಿಡಿ ಕಾರುತ್ತ
ಕಾ-ಹೌದಾ?
ಕಿಟಕಿಯ ಗಾಜು ಒಡೆಯುತ್ತಿವೆ, ಮುರಿಯುತ್ತಿವೆ
ಬಾಗಿಲು, ಗೋಡೆ ಬಿರಿಯುತ್ತ ಇವೆ ಬರುತ್ತಿದೆ
ಮನೆಯಲ್ಲೇ ನಮ್ಮ ಸದರಿನಲ್ಲೇ ಗುಮ್ಮ
ನುಗ್ಗುತ್ತಿದೆ! ಮನೆಯಲ್ಲೇ ಹಾಯುತ್ತಿದೆ
ಮನೆಯನ್ನೆಲ್ಲ ರಸ್ತೆ ಮಾಡುತ್ತದೆ. ಹೆಮ್ಮೆಪಡುತ್ತದೆ.       ೪೦
ಗುಮ್ಮ ಮನೆಯನ್ನೆಲ್ಲ ನಮ್ಮ
ನಾಳೆ ಬೆಳಿಗ್ಗೆ ನೀ, ನಿನ್ನಕ್ಕ ತಂಗಿ ತಾಯಿ ನಾಯಿ ಅಜ್ಜಿ ಎಲ್ಲ
ನೀವೆಲ್ಲ ರಸ್ತೆಯಲ್ಲೇ ಮಲಗಿರುತ್ತೀರ.
ನಾಯಿ ಬೊಗಳುತ್ತದೆ, ಅಕ್ಕ ಹಾಲು ಕೇಳುತ್ತದೆ
ನೀ ಕುಂಡದ ಹೂ ಬಳ್ಳಿ ಕೇಳುತ್ತಿ. ತಾಯಿ ತುಟಿ ಕಚ್ಚ ಇ
ಅಳುತ್ತದೆ.
ನಾನು?

ಕಸದ ಗುಂಡಿಯ್ಲಿ ಕಳಕೊಂಡ ವಿಳಾಸದ
ಚೀಟಿ ಹುಡುಕುತ್ತ              ೫೦
ಹುಡುಕುತ್ತ
ಹುಡುಕುತ್ತಾ ಅಲೆದಾಡುತ್ತೇನೆ.