ಹಡೆಯಬೇಕಿದ್ದವಳು ಹಲಿವುಳ್ದ ಸುದ್ದಿ
ಕಾರುಕಾರಿಗೆ ಡಿಕ್ಕಿ ಮಣ್ಣಾಡುವ ಸಣ್ಣ ಕಂದನ ಸಾವು
ಈಹೇಗು ಮಲ್ಲ್ಯಾನ ತಲ್ಲಾಖನಾಮಾ ಸಹಿ
ಮಲಪುರಿಯ ಮಹಾಪೂರದಲ್ಲಿ ಮೈನೆರೆದೆ ಬಾಲೆಯ ಶವ
ಬೆಳಗಾಂವ್‌ ಜಿಲ್ಲಾ ಕೊಣ್ಣೂರ ಮೋಜೆ ದ್ಯಾಮನಿಗೆ
ದನ ಸಿಕ್ಕಿವೆ ಖೂನಾ ಗುರುತಾ ಹೇಳಿ ಒಯ್ಯಬೇಕು
ಗೋಕಾಂವಿ ಸಿದನಿಂಗನ ಮಠದಲ್ಲಿ ಕಳವು
ವಜ್ರದ ಮೂರ್ತಿ ನಾಪತ್ತೆ ಪೂಜಾರಿಯ ಪರಾರಿ
ನಿಮಗೊಪ್ಪುವ ಹೊಸ ಗಡಿಯಾರ ಬೇಕೆ?

ಕಂಬಕ್ಕೆ ಕಟ್ಟಿ ಹದಿನೆಂಟು ಹರಿಜನರ ಕೊಲೆ    ೧೦
ಏಸುವಿನ ಹೊಸಬರವು ಬೈಬಲಿನ ಎಕ್ಕೋನ್ಸೆ
ಅಡಸಟ್ಟರ ಹೊಸ ಮುದ್ರಣ ಅರಗಿನ
ಮನೆಗೆ ಬೆಂಕಿ ಆರ್ವರ ಸಾವು ಹೆಣ ಗುರುತಿಲ್ಲ
ಹೋರಿ ಕಳೆದಿದೆ ಬಕ್ಕತಲೆ ಹಂಡ ಹಣಚಿಕ್ಕು
ತಂದವರಿಗೆ ಬಹುಮಾನ ಸಮೇತ ಗಾಡೀಖರ್ಚು
ಕೊನೆಯಚ್ಚು:
ಆಗಸ್ಟ್‌ ೧೫ ರಿಂದ ಎಲ್ಲರೂ ಗಹಗಹಿಸಿ
ನಗಬೇಕೆಂದು ರಾಷ್ಟ್ರಪತಿಗಳ ಸುಗ್ರೀವಾಜ್ಞೆ
ಸಂಪಾದಕಸ್ವಾಮೀ ನಮ್ಮೂರಲ್ಲಿ ಹುಚ್ಚುನಾಯಿ ಹೆಚ್ಚಾಗಿವೆ
ಯೋಗ್ಯಕ್ರಮ ಕೈಕೊಳ್ಳುವಿರಾ                                             ೨೦
ಸೂಚನೆ: ಸಂಪಾದಕರು ವೈಕುಂಠವಾಸಿಗಳಾದ್ದರಿಂದ

ಪತ್ರಿಕೆಗೆ ನಾಳೆ ಬಿಡುವು.