ಹಸಿರು ಕೈಕೊಟ್ಟ ವಟವೃಕ್ಷ ನಮ್ಮಜ್ಜ
ಮುಂದೆ ಅಂಗಳತುಂಬ, ಹಿಂದೆ ಹಿತ್ತಲತುಂಬ
ಮೈ ಕೈ ನೆರಳ ಚೆಲ್ಲಿ ಕೂರುತ್ತಾನೆ.

ಬಲಿತ ಗಾಯದ,  ರೆಕ್ಕೆ ಬಲಿಯಲಾರದ ಹಕ್ಕಿ
ಅಲ್ಲಿ ಟೊಂಗೆಯ ಮೇಲೆ ಇಲ್ಲಿ ಟಿಸಿಲಿನ ಮೇಲೆ
ಹಾ ನರಳಿ ಕಿರಚುತ್ತವೆ.

ಏನಿಲ್ಲವೆಂದರೂ ಮೂರು ಬಾಣಂತಿಯರ ಸುಡಬಹುದಾದ
ಟೊಂಗೆ ಟೊಂಗೆಯ ತುಂಬ , ಪಂಚಮಿಯ ಜೋಕಾಲಿ
ತೂಗಿ ನಗಿಯೆಳೆಸೋಗೆ ಕುಕಿಲುತ್ತವೆ.
ಅರ್ಥವಾಗದ ವಿಧಿಯ ಹಾಗೆ ಇವ ನಕ್ಕಾಗ                              ೧೦
ಉತ್ತರವೆ ಗೊತ್ತಿರವ ಬೆರಳ ಮೂಗಿನ ಧಡ್ಢ ಮಗು
ತೊದಲುತ್ತದೆ.
ಯಾ ಕೀಟವಾದರೂ ಭ್ರಮರವಾಗದೆ ದಾಟಿ ಬರದ ಬೇಲಿ!

ನಾ ಬಲ್ಲೆ,- ಇವನ ತಿಥಿ ಎಂದೊ ಮಾಡಿದ್ದೇನೆ,
ನೀರು ಬಿಟ್ಟಿದ್ದೇನೆ,
ಹಳೆಗನ್ನಡ ಅಥವಾ ವಿಶ್ವಕೋಶದಲ್ಲಿವನ ಕಂಡದ್ದೇನೆ,
ಅದಕ್ಕೇ ನಾನೆಂದೂ ಹೋಗ-
ಲಾರದ ಬಾರದ ಕೂಡದ
ದೇಶದಲ್ಲಿವನಿದ್ದಂತೆ ಕಲ್ಪಿಸಿ ಮನೆ ಹೊಕ್ಕರೆ, ಅರೆ
ಹಿತ್ತಲದ ಹಳೆಬಾವಿಯೊಳಗೆಲ್ಲ ಬೇರುಗಳು,
ಕೆಳಗೆ ನೀರಿನ ತುಂಬ ಹಸಿರುಬಿಂಬ !            ೨೦

ಮೈತುಂಬಾ ಕೂದಲುಂಟು ಕಪಿಯಲ್ಲದ,
ಕಪ್ಪಗುಂಟು ಕರಡಿಯಲ್ಲದ,
ಥೇಟು ಮಾನವರಂತೆ-ಖಂಡಿತಾ ನಾ
ನೀ ಅಲ್ಲದ ಪಶುವ ತಂದು
ಥೂ ಉಗುಳಿ, ಛೂಬಿಟ್ಟು,
ಮೋಜು ಮಾಡಿ ಖಖ್ಖಖ್ಖಾ ಖಳ ನಕ್ಕಿದ್ದೇನೆ; ಅಥವಾ
ಹಸುಳೆಗಳ ಬಾಯ್ತುಂಬ ಬಾಂಬು ಘೋಷಣೆ ತುಂಬಿ,
ಬೆಂಕೀ ಹಚ್ಚಿ ಹಸಿರ ಛಟಪಟಿಸಿ ಪಟಾಕಿನಗೆ ನಕ್ಕಿದ್ದೇನೆ; ಅಥವಾ
ಸುಳ್ಳೇಕೆ? ಮನೆಯಲ್ಲೆ ಮಾದರಿ ಗೋರಿಯನ್ನಗೆದು                   ೩೦
ತರತರದಂಗಿಗಳಿಂದ ಶೃಂಗರಿಸಿ,
ನಾನಾ ನಮೂನೆ ಭಂಗಿಗಳಲ್ಲಿ, (ಅವನ ಭಂಗಿಯಲ್ಲಿ ಸಹ)
ಮಲಗಿ ಅಣಕಿಸಿ ನಕ್ಕಿದ್ದೇನೆ. ಆದರೂ

ಅವನೊಮ್ಮೆಯೂ
ತಪ್ಪಿಯೂ
ಮರೆತು ಸಹ ಕನಿಷ್ಟಪಕ್ಷ ಅಳಲಿಲ್ಲ.
ಕಬ್ಬಿಣದ ಭಾವಭಂಗಿಗಳ ಬದಲಿಸಲಿಲ್ಲ. ಅಥವಾ…       ೩೭