ಸ್ವಾಮಿ ನಮ್ಮಯ್‌ ದೇವsರ ಬಂದಾವ ಬನ್ನಿರೇ
ಸ್ವಾಮಿ ನಮ್ಮಯ್‌ ದೇವsರ ಬಂದಾವ ಬನ್ನಿರೇ

ದೇವ ದೇವರ ನಮ್ಮವನಯ್ಯಾ
ಹಾಡಿಗೆ ಮೊದಲೋ ನಮ್ಮಯ್‌ನೋ |
ಶುಂಭ ನಿಶುಂಭರ ತಿಂದ ಸಾಂಬಗುರು
ಮೇಲನಾಡಿನಿಂದ ಬಂದವನೊ ||

ದಡ್ಡ್ಯಾಗ ನಮದೇವ ದೊಡ್ಡವನಯ್ಯಾ
ಕುರ್ಯಾಗ ಹಿರಿಯಾಂವ ನಮ್ಮಯನೋ |
ಬೆಳಿಗೋಳ ಕೀಲ ಬಲ್ಲವನಯ್ಯಾ
ಮಳೆಯ ಸೂತರಾ ತಿಳಿದವನೋ || ೧೦

ಹುಲಿಮೀಸಿ, ಮೈತುಂಬ ಬಂಡಾರ ಬಡಕೊಂಡ
ಹಸುವಿನ ಹೆಜ್ಜ್ಯಾಗ ನಡೆದವನೋ |
ಬೀಸಿದ ಹೊಸಗಾಳಿಗೊಂದೊಂದ ಪರಿಯಾಗಿ
ಸೂಸುವ ನಗಿಗಳ ತುಟಿಯವನೋ ||

ಬಿಳಿಯ ಗೊಂಗಡಿಯ ಬಗಲ ಚೀಲದ
ಹಗಲುದೀಪದ ನಾಯಕನೋ!
ಚಿನ್ನದ ಕಡೆಯಿಂದ ಚೆನ್ನಾದ ಕೈಗೋಳ
ಇಕ್ಕಳಧಾಂಗ ಮುಗಿದವನೋ ||

ಇಂಥಾಸ್ವಾಮಿಯ ಹಂತ್ಯಾಕಪ್ಪಾ
ದುಡುದುಡು ಓಡ್ಯಾವ ಕುರಿಗೋಳ | ೨೦
ಕುರಿಗೋಳಂದರ ಕುರಿಗೋಳಪ್ಪಾ
ಮಾತನಾಡುವ ಕುರಿಗೋಳ ||

ಸುತ್ತುಗಟ್ಟಿ ಮುಕ್ಕಟ್ಟ ಕಟ್ಟಿದಾವ
ಜಯ ಜಯವೆಂದಾವ ಕುರಿಗೋಳ |
ಆಂದ ಆಡಿದ್ದಕೆಲ್ಲ ಹೌದ್ಹಾದೆನ್ನುತ
ಕಣ್ಣೀರ ಕರದಾವ ಕುರಿಗೋಳ ||

ಮೇಲನಾಡಿನ ಚೆಲುವ ನಾಯಕಾ
ತಾವೊಂದ ಏನ ಆಡಿದನೋ |
ವರದ ಹಸ್ತವ ಮುಂದಮುಂದ ಚಾಚುತ
ಒಳ್ಳೆದ ಒಳ್ಳೆದ ಅಂದಾನ ||                         ೩೦

ಬಾಲವಿಲ್ಲದೆಯೆ ಬದುಕಬಹುದಂತ
ಕುರಿಗೋಳ ಬಾಲ ಕಳಚ್ಯಾನ |
ಹೊಕ್ಕ ಹೊರಗ ಬರಧಾಂಗ ಕಟ್ಟಿದಾನ
ತೋಳಿನ ಬೇಲಿಯ ಒಳಹೊರಗ ||

ಗಾಣದೆತ್ತಿನ್ಹಾಂಗ ಕಣ್ಣ ಕಟ್ಟಿಸಿಕೊಂಡು
ಕಾಶಿಗೆ ಬಂದೇವಂದಾವ |
ತುಟಿಗೆ ಸವರಿದ ಎಣ್ಣಿಯ ನೆಕ್ಕುತ
ತುಪ್ಪದ ಢರಕಿಯ ತೇಗ್ಯಾವ ||

ಬತಗೆಟ್ಟ ಕುರಿಗೋಳ ಬಲ್ಹಾಂಗ ಕುಣದಾವ
ಸ್ವರ್ಗಕ ಕಣ್ಣ ಕಿಸದಾವ |
ಉಂಡದ್ದ ಉಟ್ಟದ್ದ ತಿಂದದ್ದ ತಿರುಗಿದ್ದ ೪೦
ಹಂದಿಯ ನಾಟಕವಾಡ್ಯಾವ ||

ನೆತ್ತ್ಯಾಗ ಕಣ್ಣ ನದರ ಮುಗಿಲಿನಲಿ
ತ್ರಿಪುರ ಕನಸುಗಳ ತೋರ್ಯಾನ |
ಮಾತಿನ ಏಣಿಯ ಗಟ್ಟಿಮುಟ್ಟ ಅಂಟಿಸಿ
ತೋರುದಕೇರೇರಿ ಇಳದಾನ ||

ಬಾರೊ ಬಾರೊ ನಮ್ಮಯ್ಯಾ ಎದಿ
ಕದಗೋಳ ತೆರದೇವ ಕರದೇವ |
ಹಾಲದ ಬಳ್ಳಿ ಹಾದಿಗುಂಟ ಹಬ್ಬಿಸೇವ
ಬಾಡಧಾಂಗ ಬಾ ಸ್ವಾಮಿ ಅಂದೇವ ||                       ೫೦

ಹೆಜ್ಜಿಗಿ ಏಳೇಳ ಎಳಿ ದೀಪ ಹಚ್ಚೇವ
ಕಳೀಧಾಂಗ ಬಾ ಸ್ವಾಮಿ ಮೆಲ್ಲಕರೆ |
ನಂಬುಗೆಯೆಂಬೋ ರತ್ನಗಂಬಳಿ
ಗದ್ದಿಗಿ ಮಾದೇವ ಕುಂದ್ರಾಕರೆ ||

ಕೆಂಚಕೆಂಚೇರು ಕೂಡ್ಯಾರಯ್ಯಾ
ಕಂಚಿನ ಆರುತಿ ಮಾಡ್ಯಾರೇ |
ಮುತ್ತಮುತ್ತೈದೇರು ಸೇರ್ಯಾರಯ್ಯಾ
ಮುತ್ತಿನ ಆರುತಿ ಬೆಳಗ್ಯಾರೇ ||

ಕುಡುಗೋಲ ನಿಂದೋ ಕುಂಬಳ ನಿಂದೋ
ಹೆಂಗರೆ ಹೆರಚಂತಂದೇವ  |
ಘೋಡಗೇರಿ ಹುಡುಗೋರು ಡೊಳ್ಳಿನ ಮ್ಯಾಳದವರು    ೬೦
ಬಾಗಿ ನಮೋನಮೋ ಅಂದೇವ  ||

ಇಲ್ಲಿಗಿ ಒಂದ ಸಂಧೇಳೋ
ಹಾಡಿದರ ಪದ ಮುಂದೇಳೋ |
ಸ್ವಾಮಿ ನಮ್ಮಯ ದೇವsರ ಬಂದಾವ ಬನ್ನಿರೇ ||