ಮಳೆ ಬೀಳುತ್ತಿದೆ
ನೆಲದೆದೆಯ ತೀಡಿ ತಾಡನೆ ಕೊಟ್ಟು ಉಜ್ಜಿ ಕೆಳಗಾಳ-
ಆಳಕ್ಕೆ ನೀರಿಳಿಯುತ್ತಿದೆ.
ನಿಟ್ಟುಸಿರ ಉಗಿಮಾಡಿ ಬೆದೆಯವಾಸನೆ ಮೂಗಿನಿಡಿ ತುಂಬಿ
ಅರೆಗಣ್ಣ ತುದಿಗೆ ಬೆರಗಿನ ಲೋಕ ತೆರಕೊಂಡು
ಕೈಮಾಡಿ ಕರೆಯುತ್ತಿದೆ,
ಎಲ್ಲ ನೆನಪಾಗುತ್ತಿದೆ:

ಹೀಗೆಯೇ ಮಳೆ ಜಡಿಯುತಿತ್ತು ಆಗಲು ಕೂಡ
ಹನಿಗೊಂದು ಕುಣಿ ತೋಡಿ, ಕುಣಿಗೊಂದು ಕೆರೆ ಕಟ್ಟಿ,
ಬದಿಯ ಹಸಿರಿಗೆ ಹೂವಿನರಿಷಿಣ ಬಳಿದೆರೆದು   ೧೦
ತಲೆ ತೊಯ್ದು, ತುರುಬು ಸಡಿಲಾಗಿ ಬೆನ್ನಿಗೆ ಇಳಿದು,
ಅಂಕೆ ಮೀರಿದ ಕುರುಳು ಹಣೆಗೆ ಕೆನ್ನೆಗೆ ಅಂಟಿ,
ಕಣ್ಣ ಕಾಡಿಗೆ ಕೆನ್ನೆಗಿಳಿದು ಹೂವೆದೆ ಮುದುಡಿ,
ಉಬ್ಬಹಾ! ತಗ್ಗಹಾ! ಮಿದುವಹಾ!
ಸಿಂಪುದುಟಿ ಬೆಸೆದಾಡಿ ಮುತ್ತು ಗಳಸ್ವರವಾಗಿ
ಗರುಡನೆದೆ ತೊಡೆಗಳಲ್ಲಿ ತೊಡರಿ ರೇಗಿತು ಹಾವು
ಹೆಡೆ ಬಿಚ್ಚಿತು!

ಪುಟ್ಟ ಮುಖ ಇಷ್ಟೆ ತುಟಿ, ನನ್ನ ಚಿಟಗುಬ್ಬಿಯೇ,
ರುಚಿಯಾದ ಕ್ರೌರ್ಯವೇ,
ಮಣ್ಣ ಹದದಲ್ಲಿ ಬೆಳೆತ ಕಾಮಲತೆಯೇ,
ತೆರೆಕಣ್ಣು, ಇಕಾ ಹೌದಾ? ಉರಿಯತೊಡಗಿತು ಜ್ಯೋತಿ;            ೨೦
ರೋಮರೋಮವು ಹೊತ್ತಿ ಉರಿವ ಪಣತಿಯ ಬತ್ತಿ,
ಜ್ಯೋತಿರ್ಲಿಂಗ!
ಹೊರಗನ್ನು ಹುರಪಳಿಸಲೆಂದೆ ಬತ್ತಲೆಯಾಗಿ,
ಮತ್ತೆ ಕಪ್ಪುರವಾಗಿ, ಮತ್ತೆ ಹಸಿನುಲಿಯಾಗಿ ಹೂಣಿಹೊಕ್ಕೆ.
ಕಣ್ಣನೀ ಸೊನ್ನೆಗಳ ಶೂನ್ಯಸಿಂಹಾಸನದ ಸುತ್ತ
ಮಂಡಲ ಕೊರೆದು ಮಂಡಿಸಿದೆ.
ಅದ್ದುರಿಯ ದಿನದ ಐಸಿರಿಯ ಕೊಳ್ಳೇ ಹೊಡೆದು
ಗದ್ದಿಗೆಯ ಮೇಲೆ ಝಣಝಣಿಸಿ ಎಣಿಸಿದೆ, ಮತ್ತು
ಪ್ರತಿಯೊಂದು ದುಡ್ಡನ್ನು ಅಂಗಾಂಗಕಂಟಿಸಿದೆ.             ೩೦
ಮೈತುಂಬ ಕಣ್ಣ ಹಾ!
ಬೆನ್ನು ಹುರಿ ಬಣ್ಣಗಳ ವೈಭವವ ತೆರೆದು
ಕೇಕೆಯ ಹಾಕಿ ನವಿಲಾಗಿ ಕುಣಿದಾಡಿದೆ!
ಎಲ್ಲಿ ಅವಿತಿದ್ದವೋ ಈ ಹೇಸಿ ನೆರಳುಗಳು,
ಸುತ್ತರಿದರೋ, ಸುತ್ತಿ ಮುತ್ತಿದ್ದರೋ,
ಮುತ್ತಿ ಮೆತ್ತಿದ್ದರೋ ಅಯ್ಯೊ
ಹಾಳು ರಂಡೇರೆಲ್ಲ ಮಿಂಡನನು ಕಂಡಂತೆ
ಹರಿತ ದೃಷ್ಟಿಗಳಿಂದ ಮೈತುಂಬ ಚುಚ್ಚಿದರು,
ಇಂದ್ರನಾದೆ!
ಶೂನ್ಯಸಿಂಹಾಸನಕೆ ಜಾರುಗುಂಡಿಯ ಏಣಿ,
ಜರಿದು ಬಿದ್ದೆ.       ೪೦
ಬಿರುಗಾಳಿ ಬಿಟ್ಟ ಮರದಂತೆ ಸುಮ್ಮನೆ ನಿಂತೆ,
ಕ್ಷಿತಿಜದಂಚಲಿ ನದರ ನೆಟ್ಟು ಕಿವಿಯಾಡಿಸುತ
ಒಳಲೊಟ್ಟೆ ಮೆಲುಕುತ್ತಿದೆ;
ಎಲ್ಲ ನೆನಪಾಗುತ್ತಿದೆ.

ನಡೆಯಿನ್ನು. ನೆರಳ ಕಳಚಿ ಬತ್ತಲಾಗು.
ಕೆದರು ಎದುರಿನ ಎರೆಯ ಮಣ್ಣ; ಸಿಕ್ಕುವದೊಂದು ಸ್ವರ್ಣಗುಡಿ,
ಅಲ್ಲ; ಸ್ವರ್ಣದ ಕಳಸ. ಬಂಗಾರದಿಟ್ಟಿಗೆಯ ಗೋಡೆ,
ಮೂಡಣ ಬದಿಗೆ ಮುಚ್ಚಿರುವ ಬಾಗಿಲು. ಕೈ
ಇಲ್ಲದಿದ್ದರೊದೆ, ಕುವ್ವತ್ತಿದ್ದರೆ ಮುರಿ.  ಮುಂದೆ ಹತ್ತಡಿತನಕ                     ೫೦
ಕತ್ತಲಿದೆ, ಆಮೇಲೆ ಹೊಳೆಯುವುದು ಮಾಣಿಕ್ಯದಂಥಾದ್ದೊಂದು
ದೀಪ್ತಿ, ಆಗ ಭೂಮಿಗೆ ಲಂಬವಾಗಿ ನೆಟ್ಟಗೆ ನಿಂತು
ಮೂಗ ತುದಿಯಲ್ಲಿ ನದರ ನೆಟ್ಟು, ಅನಂತರವೆ
ತುಂಬು ಇಡಿ ಗುಡಿಯನ್ನು, ಇಡಿಯಾಗಿ ಆವರಿಸು, ಆಮೇಲೆ
ಅದಮೀರಿ ಹತ್ತಂಗುಲಕ್ಕೆ ಹಬ್ಬು. ಸುಸ್ವಾಗತ.

ಕಾಲಿಟ್ಟ ಕಡೆಗೆ ಹಾವಸೆ ಬೆಳೆದ ಜವುಗುನೆಲ.
ನನ್ನ ನೆರಳುಗಳೆಲ್ಲ ಗೂಢ ಕತ್ತಲೆಯಾಗಿ ತಗ್ಗು
ಕಂದಕಗಳನು ನೀರು ಎಂತೋ ಅಂತೆ ತುಂಬಿರುವವಿಡಿ ಮನೆಯ.
ಕಾರಣಕ್ಕೊಗ್ಗಲಾರದೆ ರೂಪದಿತಿಮಿತಿಯ ತೆಕ್ಕೆಯಲಿ
ಸಿಕ್ಕಲಾರದೆ ಸುತ್ತಮುತ್ತ ಅಡ್ಡಾಡುವವು, ಢಿಕ್ಕಿ ಹೊಡೆದಾಡುವವು             ೬೦
ಮುದ್ದೆ ಮುದ್ದೆ. ಕಟ್ಟುವವು ಮುಕ್ಕಟ್ಟು ಕೊರೆಬೇಲಿಯಾಗಿ,
ರೋಮ ರೋಮದ ಕಣ್ಣಿ ಬೇರು ಬಿಳಲುಗಳನ್ನು
ಜಗ್ಗಿ ಎಳೆದಾಡುವವು ಅತ್ತಿತ್ತ.
ಎಳದಲ್ಲ ಸೆಳೆತಗಳ ತೆಕ್ಕೆಯೊಳಗಡೆ ಸಿಲುಕಿ
ಹರಳುಪ್ಪಿನಂತೆನ್ನ ಕ್ರೀಯೆವರ್ತನೆಗಳನು ನೀರಿಗರ್ಪಿಸಿ ನಿಂತೆ.

ಅವನ ಮಾತಿನ ಶೈಲಿ, ಇವನ ನಡಿಗೆಯ ಶೈಲಿ
ಅವನಿವನ ಧ್ವನಿ ಮತ್ತು ಕಣ್ಣು ಹೊಳಪುಗಳೆನಗೆ
ಇದ್ದಿದ್ದರೆಷ್ಟೊಂದು ಚೆನ್ನಾಗುತಿತ್ತು!

ತಿರಸುಗಣ್ಣಿಲೆ ನೋಡಿ ಮೂಡಿದ್ದ ಮುದ್ದೆಗಳ
ದಾರದಾಧಾರದಲಿ ಪವಣಿಸಲೆ? ಧರಿಸಲೆ?
ತೆವಿಯ ಮಸಿಯಿಂದ ಮೈತುಂಬ ಕಣ್ಣನು ಬರೆದು
ಅಲಾಬಿ ಹುಲಿಯಾಗಿ ಕುಣಿಯಲೆ?
ಬಚ್ಚಲದ ತೂತನ್ನು ಮುಚ್ಚಿ ನೀರನು ತುಂಬಿ
ಅಕ್ಷಿಯಂಥಾ ಮೀನ ಬಿಟ್ಟು ಗಾಳಾ ಹಾಕಿ ಹಿಡಿಯಲೆ?
ಒಡೆದ ಹರವಿಗೆ ನೂರು ತೂತುಗಳ ಮಾಡಿ
ತೂತಿನಲ್ಲೊಂದೊಂದು ರೋಮಾಂಚನವ ನೆಟ್ಟು
ಸುತ್ತಲು ಪ್ರದಕ್ಷಿಣೆ ಹಾಕಲೆ?
ಧರಿಸಲೇ? ಕುಣಿಯಲೇ? ಹಿಡಿಯಲೇ? ಹಾಕಲೇ?-

ಲೇ ಲೇ ಎಲೇ ನಿನ್ನ ಉಗುರು
ಬಂದೆರಗುವವು, ಒ”ಳಗ ಗದಬಡಿಸುವವು, ಬಡ್ಡಿಬೇರುಗಳನ್ನು                 ೮೦
ಹಿಡಿದು ಅಲುಗಾಡುವವು, ಮೇಲೆ ಸುತ್ತಾಡುವವು

ತಟ್ಟಿದಾಗೊಮ್ಮೆಮ್ಮೆ ಪಾತಾಳ ಗರುಡ
ಝಮ್ಮುದಟ್ಟುವುದೆನಗೆ. ಮೈ ತೊಯ್ದು ಒದ್ದೆ,
ಅಪರೂಪ ಕ್ಷಣಗಳನು ಕಾಸುವಾಸೆ, ಕಾಸಿ ಸುಡುವ ಆಸೆ,
ಸುಟ್ಟು ಬೇಯುವಾಸೆ.
ಕಾರಹುಣ್ಣಿಮೆ ಹೋರಿ, ಹಾರು, ಮೀರು, ಕಾಲ್ಕೆದರು.
ಆಕಾಶದೆಳಬಿಸಿಲ ಮೈಸೋಂಕಿನಲ್ಲಿ ಧೂಳಿಕಣವೂ ಬಂಗಾರ!
ಮಣ್ಣ ಬಿಟ್ಟಿನ್ನೆಲ್ಲಿ ಹೊನ್ನು ಅಡಗಿದ್ದೀತು? ಅದಮೀರಿ,
ಹತ್ತಂಗುಲದ ಹಬ್ಬು ಆನಂತರ.                                            ೮೯