ಕಾಮವೆಂಬುವುದೇನೊ ಪ್ರೇಮವೆಂಬುವುದೇನೊ
ಶಬ್ದಸೂತಕ ಬಾಯಿಬಿಟ್ಟುದಕ್ಕೆ
ಮಿತಿಮೀರಿ, ಅತಿಮೀರಿ, ಹತ್ತು ಅಂಗುಲ ಹಬ್ಬಿ
ನಿಂತ ಚೇತನಕೆಲ್ಲಿ ಯಾ ಹೋಲಿಕೆ?

ಕಾಮ ಸುಡುಸುಡು ಬೆಂಕಿ; ಬೆಂಕಿಗುರುವಲು ಒಡಲು;
ಬೀಸುವವು ನಿಟ್ಟುಸಿರ ಗಾಳಿ.
ಸುಡುವ ವೇದನೆಯಲ್ಲಿ ಸುಖಪಡುವ ಪರಿ ನೋಡೊ
ಇರುವುದರ ಮೇಲೆಲ್ಲ ದಾಳಿ.

ಸುಡುಸುಡುತ ಆಸೆಗಳ, ಹುಸಿ ಖುಶಿಯ ಕನಸುಗಳ,                ೧೦
ಮೈಯ ನರಮಂಡಲದ ಹುರಿಗೊಳಿಸುತ,-
ನಿಜ ಧಸಕ್ಕನೆ ಕುಸಿದು ಇದ್ದುದಿಲ್ಲೆನಿಸುವುದು;
ಈಗ ಉಳಿವುದು ಒಂದು ಸೊನ್ನೆ ಮಾತ್ರ.

ಪ್ರೇಮ ಬೆಂಕಿಯ ಬೆಳಕು, ಸೊನ್ನೆಯನು ತುಂಬುವದು
ಶಬ್ದ ಪಾತ್ರೆಗೆ ಅರ್ಥ ತುಂಬಿದಂತೆ.
ಇಡಿಲೋಕ ಬೆಳಕಿನಲಿ, ಬೆರಗಿನಲಿ, ಬೆಳಗುವುದು
ಈಗಷ್ಟೆ ಕಣ್ದೆರೆದ ಕೂಸಿನಂತೆ.