ಹೊಳೆ ಹೊಳೆವ ನಿನ್ನ ಕಣ್ಣ ಕಂಡಾಗ
ಬೆಳಗಿನ ಇಬ್ಬನಿಯ ನೆನಪು ನನಗ;

ಇಬ್ಬನಿಯ ಹನಿಗಳ ಹಿಡಿದು ಅಂಗೈಯೊಳಗ
ನೋಡಿದರ; ಕಾ ನೋಡು ಈ ಕಾಡು
ಹೆಂಗ ತಲಿಕೆಳಗಾಗಿ,
ಮೂಡೇತಿ ಮೋಡಿಯಾಗಿ!

ನನ್ನ ಒಂಟಿತನದೆದುರು ಈ ಕಾಡಿನ
ಮೂಡಿದ ಮೋಡಿಯ ಹಾಡುತ್ತ ಹಾಡುತ್ತ
ವರ್ಣಿಸಿದರೆ,-ಹಸಿರೇರುತ್ತದೆ ಕಾಡಿಗೆ:
ಗೂಡುಗಾಲಿನ ಒಳಗೆ ಗೋಣಿಟ್ಟು ಕೂತ
ಬಂಡೆಯ ಬುಡದಲ್ಲಿ ಝರಿ ಹರಿದು
ತಿರುಗಣಿಯಾಗಿ, ಬುಗುರಿ ತಿರುಗಿದರೆ,
ಪಕ್ಕದ ಮೆದೆಪೊದೆಯ ಗವಿಯ
ಮೆತ್ತಾನ ಮೌನಕ್ಕೆ ಬಾಯಿ ಬಂತೆಂಬಾಗ,
ಸದ್ದಿಲ್ಲದೆ ಒಳಗೊಳಗೆ ಕುದಿವ
ಹೆಸರಿಲ್ಲದೆ ಹಾಯೆಂದು ನೋಯುವ,
ಅತ್ತಾಗ ಆಕಾರಗೊಂಬ ನೋವಿಗೆ
ಬಣ್ಣ ಬಣ್ಣದ ಬಾಯಿ ಬಂತೆಂಬಾಗ

ಕೆನೆವ ಕುದುರೆಯ ಥರದ ಬಿರುಗಾಳಿ ಬೀಸಿ
ಅಂಗೈಯೊಳಗಿನ ಇಬ್ಬನಿ ಹನಿಗಳನ್ನ
ಹಕ್ಕಿಯ ಹಾಗೆ ಆರಿಸಿ ಹಾರಿಸಿಕೊಂಡು
ಹೋಗುತ್ತದೆ.
ನಾನು?
ಬರಿಗೈ ಅನಾಥ ಬಾಯ್ದೆರೆದು ಕೂರುತ್ತೇನೆ.