ಬಿಚ್ಚಗತ್ತಿಯ ಬಂಟನ ಕತಿಯ
ಬಲ್ಲಿರೇನ ಯಾರಾ?
ಸುತ್ತ ದೈವದಾಗ ನಿಂತ ಕೇಳಿದರ
ಆದಾರ ಬೇಖಬರಾ
ಹೆಂಗರೆ | ತಿಳಿದಾವು ಮಜಕೂರಾ ||

ಅಡಗೂಲಜ್ಜಿಗಳ ಹಿಡದ ಕೇಳಿದರ
ತುಟೀ ಬಿಕ್ಕನಮಲುಕಿ
ಹಾಕ್ಯಾರ | ಹುಬ್ಬಿನ ತುದಿ ಕುಣಿಕಿ
ಹರೇ ಅಂಬುವ ಹಾಲಿನ ಗಡಿಗಿ
ಒಡದನೇನೊ ಬೆರಿಕಿ         ೧೦
ಹೇಳಾಕ ಒಲ್ಲರವನ ಖ್ಯಾತಿ
ನೆನದರ | ಬಾಡತಾವ ಮೋತಿ ||

ಬಯಲಿನ ಕಣ್ಣಿಗಿ ಬಣ್ಣ ಬರೆದವನ
ಕತಿಗಿ ಸಾಕ್ಷಿ ಯಾರಾ?
ವೀರನ | ಕತಿಗಿ ಸಾಕ್ಷಿ ಯಾರಾ?
ಕದನವಾಡಿದ ಬಟಾಬಯಲಿನಾಗ
ಕಾಡ ಬೆಳೆದಿತಲ್ಲ
ಬಯಲಲಿನ | ಹೆಸರು ತಿಳಿಯದಲ್ಲಾ ||

ಕರುಳು ಇಲ್ಲದ ಕಲ್ಲೇನಬಲ್ಲುದೊ
ಕಲ್ಲಿಗಿ ಬಾಯಿಲ್ಲಾ
ಶಾಸನ | ಕಲ್ಲಿಗಿ ಬಾಯಿಲ್ಲಾ                        ೨೦
ಕಾಲನ ಕಾಲಿನ ತೊತ್ತಳದುಳಿತಕ
ಪುಡಿಪುಡಿಯಾಯ್ತಲ್ಲಾ
ಶಾಸನ | ಧೂಳಿಯಾಯಿತಲ್ಲಾ ||

ಹಾದಿಹೋಕರ ಹಾದೀ ತಿರುವಿನಾಗ
ಭೂತವಾಗಿ ಕಂಡ
ಬಂಟ | ಭೂತವಾಗಿ ಕಂಡ
ಅಳೋ ಮಕ್ಕಳ ಗದರಿಸಿ ಕರದಾರ
ಅವನ ಹೆಸರುಗೊಂಡಾ ||
ಮಂದಿ | ಅವನ ಹೆಸರುಗೊಂಡಾ ||               ೩೦

ಹಳೀ ಹೆಳವರ ಹರಕ ದಪ್ತರಾ
ಹಾಕತಾವ ಉಸರಾ:
ಬಿಚ್ಚಗತ್ತಿಯ ಬಂಟನ ಕತಿಯ
ಬಲ್ಲಿರೇನ ಯಾರಾ?
ಹೆಂಗರೆ | ತಿಳಿದಾವು ಮಜಕೂರಾ ||