ಮರತೇನಂದರ ಮರೆಯಲಿ ಹೆಂಗಾ |
ಮಾವೊತ್ಸೆ ತುಂಗಾ ||
ಪಂಚಭೂತದಾಗ ವಂಚನೆ ಕಂಡಿ
ಕಣ್ಣಿನಂಚಿದಾಗ ಹೊಸ ಜಗ ಕಂಡಿ |
ಸೊನ್ನಿಗಿ ಆಕಾರ ಬರದೇನಂದಿ
ಬಯಲಿಗೆ ಗೋಡೆ ಕಟ್ಟೇನಂದಿ
ಸಚರಾಚರಗಳ ರಚನೆ ಮಾಡುದಕ
ಬೇರೊಬ್ಬ ಸೂರ್ಯನ ತರತೇನಂದೀ |
-ಮರತೇನಂದರ ಮರೆಯಲಿ ಹೆಂಗಾ ||

ಕಣ್ಣೀರಿನ ಹೊಳಿಗಡ್ಡ ಕಟ್ಟಿದಿ             ೧೦
ಹರಿವ ನೆತ್ತರಕ ಒಡ್ಡ ಕಟ್ಟಿದಿ |
ಮಡುವಿನ ನಡುವ ಕಾಲನೂರಿಕೊಂಡ
ಬತ್ತಿಯಾಗಿ ತಲೆ ಹೊತ್ತಿಸಿಕೊಂಡಿ |
ಮನಶೇರ ಮುರದಿ ತೇರ ಕಟ್ಟಿದಿ
ಹತ್ತವತಾರದ ಕುದರಿಯ ಜೋಡಿ
ಹತ್ತ ಕುದರಿಯ ಹಳದಿ ದೇವರೋ.
ಸ್ವಯಂ ಸೂರ್ಯ ನಾ ಬಂದೇನಂದಿ |
ಮರತೇನಂದರ ಮರೆಯಲಿ ಹೆಂಗಾ ||
ಬೆಂಕಿ ಹಚ್ಚಿದಿ ಬೇಲ್ಯಾಗ ನಿಂತಿ
ಸಿದ್ಧ ಪ್ರಸಿದ್ಧರ ಗುದ್ದ ಹೊಗಿಸಿದಿ        ೨೦
ಹಂಗ ಬಿಟ್ಟ ಹಂಗಾಮದ ಬೆದಿಗಿ
ಕೈಯ ಬೀಸಿ ಕೈಲಾಸವ ಕರದಿ
ಹಳದಿ ಬಿತ್ತಿದಿ ಹಳದಿಯ ಬೆಳದಿ
ಮುಳ್ಳ ಬೇಲಿಗೂ ಬದಲು ಮಾಡಿದಿ
ಕಣ್ಣ ಕಾಮಾಲೆ ತಿಳಿಯದೆ ಹೋದಿ |
ಮರತೇನಂದರ ಮರೆಯಲಿ ಹೆಂಗಾ ||

ಹರಕ ಹುಬ್ಬಿನ ತಿರುಕರ ಅರಸಾ
ಡೊಳ್ಳ ಹೊಟ್ಟೆಯ ಹಸಿದವರರಸಾ
ದಿನಾ ಹುಟ್ಟಿದಿ ದಿನಕೊಮ್ಮಿ ಸತ್ತಿ
ಸುದ್ದಿಯ ಕಣ್ಣ ಒದ್ದಿ ಮಾಡಿದಿ
ಗ್ಲೋಬಿನರ್ಧಕ ಸಾಯೋದ ಕಲಿಸಿ
ಸ್ವಥಾ ಸಾಯಲಿಕೆ ಬಾರದೆ ಹೋದಿ
ಕಟ್ಟಿದ ಗೋಡೆಗೆ ಕಳಸವೇರಿತೊ
ಬುದುಕಿದ ಜೀವ ಕಥೆಯಾಗಿತ್ತೊ
ಬಟಾ ಬಯಲಿನಾಗ ಮಟಾ ಮಾಯಾಗಿ
ಬೆಂಕಿ ಆರಿ ಬರಿ ಬೆಳಕುಳಿದಿತ್ತೊ |
ಮರತೇನಂದರ ಮರೆಯಲಿ ಹೆಂಗಾ |
ಮಾವೊತ್ಸೆ ತುಂಗಾ ||