ದುಷ್ಟಾ,
ನಿನಗ ಕೆತ್ತಿಸಿ ಬಡದೇನು ಗೂಟಾ.
ನಮ್ಮ ಭಾರತಾಂಬಿ, ರೂಪಾಯಗಲ ಕುಂಕುಮದಾಕಿ,
ಕೈತುಂಬ ಹಸಿರುಬಳೆ ಕುಪ್ಪಸದಾಕಿ,
ಒಬ್ಬರ ಕೈಬೆರಳಿಗೆ ಗುರಿಯಾಗದೆ ಮರ್ಯಾದೆಯೊಳಗೆ ಬಾಳಿದಾಕಿ,
ಮುಖದಗಲ ಪುರಾಣಗರತಿಯ  ಸೆರಗು ತೂಗಿ ಕಣ್ಣು ಕಾಣಿಸದಾಕಿ,
ಎದೆಮಟಾ ಬೆಳೆದ ಮೀಸೆಮಿಂಡಾಳ ಕೋಟಿ ಕೋಟಿ
ಹೊಟ್ಟೆಗಳಿಂದ ಅವ್ವಾ ಅನ್ನಿಸಿಕೊಂಬಾಕಿ,
ಗಂಗೆ ಗೌರಿಗೆ ಅಕ್ಕ ಇಲ್ಲವೆ ತಂಗಿ,
ಬೆಂಕಿಗೆ ಖಾಸಾಪುತ್ರಿ
ಯ ಮೇಲೆ ಕಣ್ಣು ಹಾಕಿ ಬಾಯೀ ಅಂದಿ.
ಬಂದಿ.
ಕುಂತಿ.
ಆಸುಪಾಸು ನೋಡಿ ಮುಸಿಮುಸೀ ನಕ್ಕಿ; ಮೀಸೆಯ
ಧಿಮಾಕಿನಲ್ಲಿ ದೇಶಕಾಣದೆ ಕೈಮಾಡಿ, ಹಾಡಾಹಗಲೆ
ಮೈಮ್ಯಾಲೆ ಏರಿಬಂದಿ.
ಖಾಸಾ ಗಂಧರ್ವಪತಿಗಳ ಸಿದ್ಧಿಪ್ರಸಿದ್ಧಿ ಮಿಂಡಭಂಡತನಗಳ
ಮರತಿ.
ಗರತಿಯ ಬಯಸಿದ ದುರುಳ ಕೀಚಕ
ಏನಾದ ಏನಾದ ಏನಾದನೋ?
ಮೂಢಾ, ಗೊತ್ತಿದ್ದರ ಬಾಯಿ ಬಿಡತಿ;
ಇಲದಿರಕ ಹೇಳು, ಕಳಿಸುವೆನು
ಸಪ್ರೇಮ ಕಾಣಿಕೆಯಾಗಿ ಭಾರತದ ಕ್ಯಾಲಿಕೊ ಪ್ರತಿ.

ತಡಿ, ಬರಲಿ ಬಿಳಿಗೋಧಿ ವೃಕೋದರ ತುಂಬಿ
ಮಾಡುತ್ತೇನೆ ಮದಿವಿ.
ನಿನ್ನದೊಂದು ಮೂವೀ ಮಾಡಿ, ಜರಿರುಮಾಲು ಧಡಿ
ದೋತರ, ಮುಂಗೈಗೆ ಮಲ್ಲಿಗೆ ಮಾಲೆ ಸುತ್ತಿ,
ಖಳವಿಟನಾಗಿಸಿ, ಸೂಳೆಗೇರಿಯ ಹೋಳಿಹುಣ್ಣಿಮೆಯಲ್ಲಿ
ನಿಂದ, ನೆರೆದ, ಬಂದ, ಬರುವ ಗರತಿಯರ ಮುಂಗೈಗೆ
ನಿನ್ನ ಮಸಡಿಯನೊಡ್ಡಿಸಿದರೇ ಹೌದೆನ್ನು.                               ೩೦

ನಿನ್ನ ಪ್ರತಿಮೆಯ ಮಾಡಿ
ಕತ್ತೆಯ ಬಾಲಕ್ಕೆ ಡಬಡಬ ಡಬ್ಬಿ
ಗೆ ನಿನ್ನ ಕಟ್ಟಿ ನಾವು ಹುಡುಗರು ಯೂನಿಫಾರ್ಮಿನಲ್ಲಿ
ಧಿಕ್ಕಾರ ಮೆರವಣಿಗೆ ಹೊರಟು, ಲಬೊಲಬೋ ಹೊಯ್ಕೊಂಡು
ಊರು ಕೇರೀ ತಿರುಗಿ, ಹೊಲಗೇರಿಯಲ್ಲಿ ಸುಟ್ಟು, ಬೂದಿಯ
ನದಿಗೆರಚಿ, ಈ ದೇಶದ ನೀರು ನೆಲ ಹಳದಿಯಾಗಿಸಿದರೇ ಹೌದೆನ್ನೋ
ಮೂಢಾ –
ನನಗಿಂತ ಧಡ್ಡಾ.

ಕುಶಲದ ನಾಲ್ಕು ಮಳೆಬೆಳೆ ಮಾತಿವೆ ನನಗು ನಿನಗು.
ಕೈಕೈ ಮಿಲಾಯಿಸಿ ಇಕಾ ಮಾತು ಕೊಟ್ಟಿದ್ದೇನೆ ನಂಬು: ೪೦
ಇದ್ದಾರೆ ನಮ್ಮಲ್ಲೂ ಹಾಲುಮತದ ಹುಂಬರು.
ನಿನ್ನ ನಾಮದ ಬಲದಿಂದಲೇ ತಗ್ಗುದಿನ್ನೆಗಳ ಪಿಡಬ್ಲ್ಯೂಡಿ ಮಾಡಿ
ಹಾಲು ಹರಿಸಿ ಸಮನಾಗಿಸೇವೆಂಬ ನಂಬಿಕೆಯವರು.
ಸಮನಾದರೆ ಬರುವ ಮಳೆ ಬಂದಾವು ಹೆಂಗ?
ಹಸಿರು ಬೆಳೆದಾವು ಹೆಂಗ?
ಸರ್ಕಾರಿಕೋಗಿಲೆ ಹಾಡ್ಯಾವು ಹೆಂಗ?
ಈ ಹೆಂಗದ ಹಂಗಿರಲಯ್ಯ-
ಛತ್ತೀಸಕೋಟಿ ದೇವರು ತಿಣುಕಿ ಬಾರದ ಬಲ ನಿನ್ನ
ನಾಮಕ್ಕಿದೆಯೇ? ಅದಕ್ಕೇ ಹೇಳುತ್ತೇನೆ ಬಚ್ಚಾ
ನೀ ಇನ್ನೂ ಅಕ್ಕಲ್‌ಕಾ ಕಚ್ಚಾ                                   ೫೦

ನೀ ಬರುವ ಮೊದಲೇ ಠರಾವು ಪಾಸುಮಾಡಿ
ತೆಗೆದುಹಾಕಿದ್ದೇವೆ ಊರುಹೊಲಗೇರಿಗಳ ನಡುವಿನಂತರ.
ಪತ್ರಿಕೆಯಲಿ ಸುಪ್ರಸಿದ್ಧವಾಗಿದೆ ಹೊಲಗೇರಿ ಗುಡಿಸುವ ನನ್ನ ಚಿತ್ರ,
ನನ್ನ ಉರ್ಫ್‌ನಾಮೆಯೇ ಸಮನ್ವಯಸಿದ್ದ.
ಇಷ್ಟೆಲ್ಲಾ ಯಾಕೆಲಾ? ಹೊಲ ನೋಡು:
ಬೆಳೆದಿದೆ ಭರ್ತಿ ಗರಿಗರಿಹಾರಿ ಹೈಬ್ರಿಡ್‌ಜೋಳ!
ಹುಡುಕಿದರೆ ಗ್ಯಾರಂಟಿ ಸಿಕ್ಕುವವು ನಿನ್ನ ಬೀಜಕ್ಕೂ ಬೆಳೆದ ಕಾಳು.
ದಿನನಿತ್ಯ ಕಸಿಮಾಡಿ, ಹುಟ್ಟುವವಿಲ್ಲಿ ಅಸಲುಕಲಮಿನ
ತಾಜಾತಳಿ: ಏಕಕ್ಕೆ ಅನೇಕ, ಅನೇಕಕ್ಕೆ ಏಕ;
ಭಾವಾನುಭಾವ ಸಂಚಾರಿ ವಿಭಾವಾದಿಗಳ ಭಾವೈಕ್ಯ; ಮಿಸಳಬಾಜಿ.                   ೬೦
ಈಗಾದರು ತಿಳಿಯಿತಿಲ್ಲೋ ಏ,
ಹಳಸಿದ ಮಿಸಳಿಗೆ ಮೂಗಮುರಿಯುವ ಚೆದುರಾ,
ನನ್ನ ಹೆಸರಲ್ಲಿರುವ ನಿನ್ನ
ಹೆಸರಿನಕ್ಷರ ಗುರುತಿಸದ ನಿರಕ್ಷರಾ.

ನಜರಿನ ಹುಜುರಿನಲ್ಲಿ ಎಲಿಯಡಿಕೆ ಹಿಡಿ , ಸೆಡ್ಡು ಹೊಡಿ,
ಕಾಲು ಕೆದರು; ವೀರರೊಪ್ಪೋ ಮಾತು, ಹೌದಂದೇನು.
ಅಡಿಕೆ ಹಿಡಿಯೋದು ಬಿಡೋದು ನನ್ನ ಜವಾಬ್ದಾರಿ.
ಏನು ಮಾಡೋದಪಾ, ಗುಂಡಿನೊಂದಿಗೆ ಸಂಭಾಷಿಸಿದವ.
ಕಲಿಕಾಲ, ಆಜ್ಞಾತವಾಸದ ಅವಧಿ,
ಬನ್ನೀಮರದ ಹೆಣದ ಕಾವಲಿನಲ್ಲಿ ಗದೆ ಭದ್ರವೆನ್ನಲೇ?
ಹೆಣವೆದದು ತಪ್ಪಿಸಿಕೊಂಡೋಡಿ, ಹಿಡಿದು ಕೊಟ್ಟವರಿಗೆ
ಬಹುಮಾನವೆಂದು ಜಾಹೀರಾತಿಸಿದರೆ, ಅದನೋಡಿ,
ಓದಿ ತಿಳಕೊಂಡವನು ನನ್ನ ಬಿಟ್ಟಿನ್ಯಾರಂದ ಇ?
ಮರೆತುಹೋಗಿದೆ ಮರದ ಗುರುತು. ಅಂತೆಯೇ
ಗುಬ್ಬೀಕಂಪನಿಯ ಗಂಧರ್ವನ ಹೆಸರು ಕದ್ದದ್ದು,
ಹೆಂಡರ ಮಿಂಡರಾಗುವುದಕ್ಕೆ ಕಲಿತದ್ದು, ಅದಕ್ಕೇ
‘ನಿಮ್ಮ ಹೆಂಗಸರ ಹಣೆಯ ಕುಂಕುಮದರ್ಥವೇನೆ’ಂದು
ಯಾ ವಿದೇಶಿ ,-ನೀ ಬಿಡು ನಮ್ಮ ಪೈಕಿ,-ಕೇಳಿದರೂ,
ನಾ ಯಾಕೆ-ಹುಡುಗರಿಗೂ ಸಿಟ್ಟು ಬಾರದೆ ಇದ್ದದ್ದು.

ಇದ ತಿಳಿದು ನೆರಳಿನೊಂದಿಗೆ ಹೋರುವ ಛಲ                         ೮೦
ಬಿಟ್ಟೆಯೋ-ಗೆದ್ದೆ.
ಇಲ್ಲವೋ ನಾ ಅಲ್ಲ; ನೀ ನೀನೆ ಮೂರು ಬರೆ ಕೆಟ್ಟೆ.