ಕಂಬಾರರ ತೂಕ ಕಟ್ಟುವುದು ನನಗೆ ಇಷ್ಟವಿರಲಿಲ್ಲ. ಈಗ ಪದ್ಯ ಬರೆಯುತ್ತಿರುವವರಲ್ಲಿ ತುಂಬ ಜೀವವುಳ್ಳ ಮತ್ತು ವಿಮರ್ಶೆಯ ಮರ್ಜಿಯನ್ನು ಅಷ್ಟಾಗಿ ಹಿಡಿಯದ ಕವಿ ಕಂಬಾರರು. ನನಗನ್ನಿಸುವಂತೆ ವಿಮರ್ಶೆ ನಿಜಕ್ಕೂ ಉಪಯುಕ್ತವಾಗುವುದು ಕಾವ್ಯದ ಚರ್ಚೆಯ ಮೂಲಕ ಸಮಾಜ, ಭಾಷೆಯ ಬಗ್ಗೆ ಕಲಿಯಲೆಳಸುವ ವಿದ್ಯಾರ್ಥಿಗಳಿಗೆ;  ಸ್ವತಃ ಕವಿಗೆ ಬೇಕಾಗುವುದು ನೇರ ಸಾಮಾಜಿಕ, ರಾಜಕೀಯ ಅಭ್ಯಾಸಗಳು. ಕಂಬಾರರಂಥ ಕವಿಗಳನ್ನು ಸಲ್ಲದ ತರ್ಕಕ್ಕೆ ಒಡ್ಡುವುದು ಅವರನ್ನು ಅನಗತ್ಯವಾಗಿ ಜೀವಮೂಲಗಳಿಂದ ಕಿತ್ತು ಇಟ್ಟಂತೆ.  ಅಲ್ಲದೆ ನಾನು ಅಂಥ ವಿಮರ್ಶಕನೇನಲ್ಲ. ಪದ್ಯಗಳನ್ನು ಅನಂತಮೂರ್ತಿ, ಶಿವರುದ್ರಪ್ಪ, ರಾಮಾನುಜನ್‌ ಮುಂತಾದವರಷ್ಟು ಸ್ಪಷ್ಟವಾಗಿಯೂ ಖಚಿತವಾಗಿಯೂ ವಿವರಿಸಿ ಹೇಳುವ ಶಕ್ತಿ ನನಗಿಲ್ಲ. ಇಷ್ಟೆಲ್ಲ ಸಕಾರಣ ವಿನಯವುಳ್ಳ ನನ್ನನ್ನು ಮುನ್ನುಡಿ ಬರೆಯಲು ಕಂಬಾರರು ಹೇಳಿದ್ದಾರೆ. ನಾನು ಕೂಡ ಕವಿಯೆಂದೂ ಸಹೃದಯನೆಂದೂ ಹೇಳಿದ್ದಾರೆ. ನನ್ನ ಪದ್ಯಗಳಿಂದ ಪ್ರಭಾವಿತರಾಗಿರುವುದಾಗಿ ಕೂಡ ಸೂಚಿಸಿದ್ದಾರೆ. ಇದೆಲ್ಲ ನನ್ನ ಹಿರಿಮೆಗೆ ಬದಲು ನನ್ನ ಬಗ್ಗೆ ಕಂಬಾರರಲ್ಲಿ ಮುಂದುವರಿಯುತ್ತಿರುವ ಪ್ರೀತಿಯ ಗುರುತೆಂದೇ ತಿಳಿಯುವೆ. ಒಂದು ಜನಾಂಗದ ಇಬ್ಬರು ಬರಹಗಾರರು ದಶಕಗಳ ಒಟ್ಟಿಗೇ ಬದುಕಿರುವುದು, ಬರೆದಿರುವುದು ಮತ್ತು ಋತು ಮಾಸಗಳಿಂದ ಹಿಡಿದು ರಾಜಕೀಯ ಸಾಂಸ್ಕೃತಿಕ ವಲಯಗಳಲ್ಲಿ ಪಾಲುಗೊಂಡಿರುವುದು ಸಣ್ಣ ಮಾತೇನಲ್ಲ. ನಾನು ಶಿವಮೊಗ್ಗೆಯಲ್ಲಿ ಅಧ್ಯಾಪಕನಾಗಿದ್ದಾಗ ಕಂಬಾರರು ಬಂದು ಒಂದೆಡೆ ದಿನ ನಮ್ಮ ಮನೆಯಲ್ಲಿದ್ದರು. ನಾನು ಬೆಂಗಳೂರಿಗೆ ಬಂದ ಮೇಲೆ ಅವರೂ ಇಲ್ಲಿಗೆ ಅಧ್ಯಾಪಕರಾಗಿ ಬಂದರು. ಇಬ್ಬರೂ ಇಲ್ಲಿ ನಮ್ಮ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿಯಬಲ್ಲ ನಾಟಕಗಳನ್ನು ಆಡಿಸಿದೆವು, ಪದ್ಯ ಓದಿದೆವು, ಅನೇಕ ವರ್ಷಗಳು ಚುನಾವಣೆ, ತುರ್ತುಪರಿಸ್ಥಿತಿ, ಕುಟುಂಬದ ಕಷ್ಟಸುಖದಲ್ಲಿ ಸಾಗಿ ಹೋದದ್ದು ನೋಡಿದೆವು. ಸಮಕಾಲೀನ ಲೇಖಕರ ಬಗ್ಗೆ ಬಹಳ ಕಾಲ ಉಳಿಯಬಲ್ಲಂಥ ವಿಮರ್ಶೆಯ ಮಾತಾಡುವುದು ಕಷ್ಟ.  ಮೆಚ್ಚುಗೆ, ಅಸೂಯೆ, ಉತ್ಪ್ರೇಕ್ಷೆ, ಸಾರ್ವಜನಿಕ ಮತ್ತು ಖಾಸಗಿ ಮಾತುಗಳು, ಅನ್ನಿಸಿಕೆಗಳು-ಎಲ್ಲ ಮಿಶ್ರಣಗೊಂಡು ವಿವೇಕಪೂರ್ಣ ತೀರ್ಮಾನ ಇಲ್ಲವಾಗುತ್ತದೆ. ವಿವೇಕಕ್ಕಾಗಿ ಮೇಲಿನ ಭಾವನೆಗಳನ್ನು ಬಿಡುವುದೂ ದಡ್ಡ ಬದುಕಾಗುತ್ತದೆ. ಆದಷ್ಟೂ ನಿಜಕ್ಕೆ ಹತ್ತಿರ ಹೋಗುವುದು ಮುಂದಿನ ಜನಾಂಗಕ್ಕೆ – ಅದಕ್ಕೆ ಕಾವ್ಯದಲ್ಲಿ ಕುತೂಹಲ ಉಳಿದಿದ್ದರೆ – ಉಪಯುಕ್ತವಾಗುತ್ತದೆ. ನಿಮಿಷದಿಂದ ನಿಮಿಷಕ್ಕೆ ಬದುಕಬೇಕಾಗಿರುವ ಮನುಷ್ಯನ ರಕ್ಷಣೆ ಈ “ಆದಷ್ಟೂ”.

ಕಂಬಾರರ ಕಾವ್ಯ ಜಗತ್ತು ನಮ್ಮಲ್ಲಿ ಬಹಳ ಜನರ ಜಗತ್ತಿಗಿಂತ ಬೇರೆಯಾದದ್ದು. ಶಿಷ್ಟರಾದ ಕವಿಗಳು ನಮ್ಮ ಸುತ್ತಣ ಬದುಕನ್ನು ತಾತ್ಸಾರ ಬೆರೆತ ವ್ಯಂಗ್ಯದಿಂದ ನೋಡುತ್ತ ತಮ್ಮ ಸೂಕ್ಷ್ಮ ಮನೋಭೂಮಿಯನ್ನು ತಾವೇ ಮೆಚ್ಚಿಕೊಳ್ಳುತ್ತಾರೆ. ಇವರ ಸ್ವಾಭಿಮಾನವೇ ಇವರ ಸ್ವಪ್ರೇಮವಾಗಿ ಇವಿರು ನೋಡುವ ಯಾವುದಕ್ಕೂ ಸ್ವಂತ ಜೀವವಾಗಲಿ, ವೈಚಿತ್ಯ್ರವಾಗಲಿ ಇರುವುದಿಲ್ಲ. ಕಂಬಾರರು ತಮ್ಮನ್ನು ತಾವು ಹಾಡಿನ ಮಟ್ಟುಗಳಿಗೆ ಮತ್ತು ಜನರ ನುಡಿಕಟ್ಟು ಮತ್ತು ಸ್ಪಂದನಸ್ತರಗಳಿಗೆ ಒಪ್ಪಿಸಿಕೊಳ್ಳುವುದರಿಂದ ಈ ಅಪಾಯದಿಂದ ಬಹಳ ಸಲ ಪಾರಾಗುತ್ತಾರೆ. ಇವರು ಉತ್ತಮ ಪುರುಷ ಏಕವಚನದಲ್ಲಿ ಬರೆದಾಗ ಕೂಡ ಜನತೆಯ ದೃಷ್ಟಿಯಿಂದ ಜೀವನವನ್ನು ನೋಡುವಂತೆ ಕಂಡುಬರುತ್ತಾರೆ. ಈ ದೃಷ್ಟಿಯಿಂದ ನಮ್ಮ ಬೂರ್ಶ್ವಾ ಅಲ್ಲದ ಕವಿ ಕಂಬಾರರು. ಮೇಲು ವರ್ಗದ ಹಮ್ಮಾಗಲಿ, ಮಧ್ಯಮ ವರ್ಗದ ತೀವ್ರತೆಗಾಗಿ ರೂಢಿಸಿಕೊಂಡ ಸಿನಿಕತನವಾಗಲಿ ಇವರಲ್ಲಿ ಕಾಣಸಿಗುವುದಿಲ್ಲ. ಈ ಮಾತಿಗೆ ಬೆಂಬಲ ಇವರ “ನಾಯಕ ಅಥವ ಡೊಳ್ಳಿನ ಹಾಡು” ಎಂಬ ಅಷ್ಟೇನೂ ಪ್ರಸಿದ್ಧವಲ್ಲದ ಕವನದಲ್ಲಿದೆ. ಇದು ಶುರುವಾಗುವುದು ನಾಯಕನೊಬ್ಬನನ್ನು ಗೌರವದಿಂದ ಬರಮಾಡಿಕೊಳ್ಳುವ ಧಾಟಿಯಲ್ಲಿ. “ಸ್ವಾಮಿ ನಮ್ಮಯ್‌ ದೇವರ ಬಂದಾವ ಬನ್ನಿರೇ” ಎಂದು ಹೊರಟು ಮುಸುಕಿನಲ್ಲಿ ಗುದ್ದ ತೊಡಗುತ್ತಾರೆ: “ಬಿಳಿಯ ಗೊಂಗಡಿಯ ಬಗಲ ಚೀಲದ ಹಗಲ ದೀಪದ ನಾಯಕನೋ” ಎಂದು ವ್ಯಂಗ್ಯಮಾಡಿ “ಬಾಲವಿಲ್ಲದೆ ಬದುಕಬಹುದಂತ ಕುರಿಗೊಳ ಬಾಲ ಕಳಚ್ಯಾನ” ಎಂಬ ಟೀಕೆಯಲ್ಲಿ ನಾಯಕನ ಮತ್ತು ಜನತೆಯ ಸಂಬಂಧ ಎಣಿಸಿ “ಕುಡಗೋಲ ನಿಂದೋ ಕಂಬಳ ನಿಂದೋ ಹೆಂಗರೆ ಹೆರಚಂತಂದೇವ”  ಎಂದು ಪದ್ಯ ಕೊನೆ ತಲುಪುತ್ತದೆ. ಜನಗಳ ಕುರಿಗಳ ಸ್ಥಿತಿಯೂ ಅವರ ಮುಗ್ಧ ಆರಾಧನೆಯೂ ನಾಯಕನಿಂದಾಗುವ ಶೋಷಣೆಯೂ ನಮ್ಮ ಇತರೆ ನವ್ಯಕವಿಗಳಲ್ಲಿ ಬಹಳ ಬಂದಿವೆ. ಆದರೆ ಅಲ್ಲಿ ವಾಕ್ಚಾತುರ್ಯ ಮತ್ತು ವಾಕ್ಪಟುತ್ವದಿಂದಾಗಿ ಕೊಂಕು ಅಥವಾ ಭಾವೋದ್ವೇಗದ ಫಸಲು ದೊರಕಿದೆ; ಈ ಸಂಬಂಧವನ್ನು ಗುರುತಿಸಿದ ನಾಗರಿಕನ ಗತ್ತು ಮತ್ತು ಹೆಮ್ಮೆ ಇದೆ. ಆದರೆ ಕಂಬಾರರಲ್ಲಿ ಜನರು ಮುಗ್ಧತೆ ಕಳೆದುಕೊಳ್ಳದೆ ನೋವು ಹೇಳುತ್ತ ಕವಿಯ ಅಹಂಕಾರವನ್ನು ಹಿಂದಕ್ಕಟ್ಟಿದ್ದಾರೆ. ಬಹುಕಾಲದಿಂದ ಮೋಸ ಹೋದ ಸರಳ ಜನ ತಮಾಷೆ ಮಾಡತೊಡಗಿದರೆ ಹೇಗಿರಬಹುದೋ ಹಾಗಿದೆ. ಕವಿಯ ಈ ಆತ್ಮನಿಗ್ರಹ ಮತ್ತು ಆರೋಗ್ಯವಂತ ನಿಲುವನ್ನು ಇವರ ರಮ್ಯ ತುಣುಕುಗಳಾದ ‘ನೀನು-ನಾನು’ ಮುಂತಾದ ಕವನಗಳಲ್ಲಿ ಕೂಡ ಕಾಣಬಹುದು. “ಗೀಸಿ ಅಗಲಿಸಿದ ತುಟಿ, ಅದರೊಳಚ್ಛೇರು ಬೆಳದಿಂಗಳನು ಸುರಿವ ಹುಸಿ ನಗೆಯು ನೀನು, ಎರಡು ಕಣ್ಣುಳ್ಳ ಬಿಕನೇಸಿ ನಾನು” ಎಂದು ಹೇಳುತ್ತಾರೆ. (ಹದಿನೆಂಟು ವರ್ಷದ ತರುವಾಯ ಕೂಡ ಈ ಸಾಲು ನನ್ನ ಎದೆಬಡಿತ ಹೆಚ್ಚಿಸುತ್ತದೆ.) ತಾನೊಬ್ಬ ಸಾಮಾನ್ಯ ಮನುಷ್ಯನೆಂದು ಹೇಳಿಕೊಳ್ಳುವುದು ಮಾತ್ರವಲ್ಲ.  ಸಾಮಾನ್ಯನಂತೆ ತುಡಿಯುವ, ಮಾತಾಡುವ ಗೈರತ್ತು ಈ ಸಾಲು ಬರೆದ ಕವಿಗಿದೆ. ಕಂಬಾರರ ಈ ಜನಸಮುದಾಯವನ್ನು ಒಳಗೊಂಡು ಅವರ ಮೂಲಕ ನೋಡುವ ಧೋರಣೆ ಅವರನ್ನು ನಿಜಕ್ಕೂ ಜಾನಪದ ಕವಿ ಮಾತ್ರವಲ್ಲ. ನಮ್ಮ ಸಾಮಾನ್ಯನಿಗೆ ಹತ್ತಿರದ ಕವಿಯಾಗಿ ಮಾಡುತ್ತದೆ.

ಮೇಲಿನ ಪುಟ್ಟ ಉದಾಹರಣೆಗಳು ನಮ್ಮನ್ನು ಕಂಬಾರರ ಮಾವೋ ಕವನಗಳ ಚರ್ಚೆಗೆ ಒಯ್ಯಬೇಕು. ನನಗೆ ಇವತ್ತಿಗೂ ಇವರ ಮುಂಚಿನ ಕವನ “ಮಾವೋತ್ಸೆ ತುಂಗನಿಗೆ” ಈಚಿನ “ಮರತೇನಂದರ ಮರೆಯಲಿ ಹೆಂಗಾ”  ಎಂಬುದಕ್ಕಿಂತ ಪ್ರಿಯ. ಮುಂಚಿನ ಪದ್ಯ ನೇರವಾಗಿ ಹೇಳದೆ ಮಾಡುವ ಕೆಲಸ ಇದರಲ್ಲಿಲ್ಲ. “ದುಷ್ಟಾ, ಕೆತ್ತಿಸಿ ಬಡದೇನು ಗೂಟಾ” ಎಂದು ನಾಟಕೀಯವಾಗಿ ಮೊದಲಾಗುವ ಈ “ಮೊವೋತ್ಸೆ ತುಂಗನಿಗೆ” ಪದ್ಯ ಒಂದು ಬಗೆಯಲ್ಲಿ ದೇಶಭಕ್ತಿ ಗೀತ.

“ನಮ್ಮ ಭಾರತಾಂಬಿ, ರೂಪಾಯಗಲ ಕುಂಕುಮದಾಕಿ,
ಕೈತುಂಬ ಹಸಿರು ಬಳೆ ಕುಪ್ಪಸದಾಕಿ
ಒಬ್ಬರ ಕೈಬೆರಳಿಗೆ ಗುರಿಯಾಗದೆ ಮರ್ಯಾದೆಯೊಳಗೆ
ಬಾಳಿದಾಕಿ…..”

ಎಂಬುದು ತೀವ್ರ ದೇಶಭಕ್ತಿಯ ಆದರೆ ಚರಿತ್ರೆ ಗೊತ್ತಿಲ್ಲದ ಕುಕವಿಯೊಬ್ಬ ತನ್ನ ಮಾತಿನ ಸುಳ್ಳನ್ನು ಹೇಳಿಕೆಯ ಉತ್ಪ್ರೇಕ್ಷೆಯಲ್ಲಿ ಮುಚ್ಚಿಹಾಕಲು ಯತ್ನಿಸುತ್ತ ಬರೆದಂತಿದೆ.  ಮತ್ತೆ ಅದೇ ತರಹೆ ಮಾತಿದೆ:

ಗರತಿಯ ಬಯಸಿದ ದುರುಳ ಕೀಚಕ
ಏನಾದ ಏನಾದ ಏನಾದನೊ?

ಎಂಬ ಹುಸಿಪ್ರಶ್ನೆಯ ನಂತರ

ಮೂಢಾ , ಗೊತ್ತಿದ್ದರ ಬಾಯ ಬಿಡತಿ;
ಇಲದಿರಕ ಹೇಳು, ಕಳಿಸುವೆನು
ಸಪ್ರೇಮ ಕಾಣಿಕೆಯಾಗಿ ಭಾರತದ ಕ್ಯಾಲಿಕೊ ಪ್ರತಿ.”

ಎನ್ನುತ್ತಾರೆ.  ಇಷ್ಟರಲ್ಲಾಗಲೇ ಈ ದೇಶಭಕ್ತಿಯ ಇನ್ನೊಂದು ಮುಖ ನಮಗೆ ತೆರೆದುಕೊಳ್ಳತೊಡಗಿದೆ. ಈ ದೇಶವನ್ನು ಗೆದ್ದು ಮಾನಗೆಡಿಸಿದ್ದರ ಇತಿಹಾಸವನ್ನು ಸೂಚಿಸುತ್ತ ಈ ದೇಶದ ಬಗೆಗಿನ ಭಾವೋದ್ವೇಗಗಳ ಗ್ರಹಿಕೆಯನ್ನು ಕೂಡ ಒಟ್ಟಿಗೇ ಕೊಡುತ್ತಾ ಹೋಗಿ ಕೇವಲ ದಟ್ಟತನವನ್ನು ಸಾಧಿಸದೆ ಈ ರಾಷ್ಟ್ರ ಕುರಿತ ಕಾವ್ಯಾತ್ಮಕ ವಿಮರ್ಶೆ ಕೊಡುವುದು ಈ ಪದ್ಯದ ಸಾಧನೆ. ದೇಶಪ್ರೇಮಿಗಳ ಲಬೊಲಬೋ ಪ್ರದರ್ಶನಗಳ ಹಿಂದಿನ ಈ ದೇಶ ಕುರಿತ ಸತ್ಯ ನಮ್ಮನ್ನು ಕಣ್ಣಿಟ್ಟು ನೋಡುತ್ತದೆ. ದೇಶಭಕ್ತಿ ಗೀತೆಯಂಥ ಒಂದು ಪ್ರಚುರ ಪ್ರಕಾರ ಹಿಡಿದುಕೊಂಡು ಅದಕ್ಕೆ ಮೀರಿದ್ದನ್ನು ರೂಢಿಸಿಕೊಳ್ಳುವುದು ಕಂಬಾರರ ರೀತಿಯನ್ನು ತೋರುತ್ತದೆ.

“ಮರತೇನಂದರ ಮರೆಯಲಿ ಹೆಂಗಾ” ಕವನ ನೇರವಾಗಿ ಮಾವೋನ ಶಕ್ತಿ ಮತ್ತು ದುಷ್ಟತನವನ್ನು ವರ್ಣಿಸುತ್ತದೆ. ಕಂಬಾರರು ಮತ್ತೆ ಮತ್ತೆ ಮಾವೋ ಕಡೆಗೆ ವಾಲುವುದು,  ಅವನ ಬಗ್ಗೆ ಬರೆಯುವುದು ವಿಚಿತ್ರ.  ಮೋಸ ಮಾಡಿ ಹೋದ ತಮ್ಮ ದೊಡ್ಡ ನಾಯಕನೋ ಎಂಬಂತೆ ಅವನ ಶಕ್ತಿ, ಯುಕ್ತಿಯ ನ್ನು ಕುರಿತು ಹಾಡುತ್ತಾರೆ. “ಸಚರಾಚರಗಳ ರಚನೆ ಮಾಡುದಕ ಬೇರೊಬ್ಬ ಸೂರ್ಯನ ತರತೇನಂದಿ” ಎಂದೂ “ಕಣ್ಣೀರಿನ ಹೊಳಿಗಡ್ಡಕಟ್ಟಿದಿ, ಹರಿವ ನೆತ್ತರಕ ಒಡ್ಡ ಕಟ್ಟಿದಿ” ಎಂದೂ “ಸ್ವಯಂ ಸೂರ್ಯ ನಾ ಬಂದೇನಂದಿ” ಎಂದೂ ಹೇಳುವಾಗ ಹೊಮ್ಮುವ ಮಾವೋ ಪ್ರತಿಭೆಯ, ಒಳ್ಳೆಯತನ, ಕೆಟ್ಟತನದ ಮಿಶ್ರಣದ, ಅಹಂಕಾರದ ದ್ವಂದಮಯ ಚಿತ್ರಣ ಗಮನಿಸಿಬಹುದು. ಕೇವಲ  ಓದಿಸಿಕೊಳ್ಳುವ ಕವನವಾಗಿದ್ದರೆ ಉಂಟಾಗಬಹುದಾಗಿದ್ದ ಕ್ಷುಲ್ಲಕ ಜಾಣತನ ಇಲ್ಲಿ ಒಂದು ದ್ವಿಮುಖ ಶಕ್ತಿಯ ವರ್ಣನೆಯಾಗುವುದು ಲಾವಣಿಯ ಧಾಟಿಯಿಂದ.

ಮೇಲಿನದು ಕಂಬಾರರ ಗ್ರಹಿಕೆಯ ವೈಶಿಷ್ಟ್ಯವನ್ನು ಕೂಡ ತೋರುತ್ತದೆ. ಕವಿ ತಾನು ಜಗತ್ತನ್ನು ತನ್ನ ಬುದ್ಧಿಯಿಂದ ಅಳೆಯುತ್ತಲೆ ಆದ ಅನುಭವವನ್ನು ಕಾವ್ಯವಾಗಿ ಕಂಡರಿಸಬಲ್ಲ ಮೂಲಭೂತನಾಗಿ ನೈತಿಕ ಪ್ರಜ್ಞೆಯುಳ್ಳ ಮನುಷ್ಯನೋ ಅಥವಾ ತನ್ನ ಭಾವನೆಗಳ ತುಯ್ದಾಟದಲ್ಲಿ ಸಿಕ್ಕು ಈ ಡೋಲಾಯಮಾನದ ವೈಚಿತ್ಯ್ರ ಮಂಡಿಸುತ್ತ ನೀತಿಯ ಗೆರೆ ಮೀರಿ ಗೂಢಗಳನ್ನು ಕಾಣಬಲ್ಲವನೋ-ಎಂದು ನಿರ್ಧರಿಸಿಕೊಳ್ಳಬೇಕಾಗುತ್ತದೆ. ಲೇಡಿ ಮ್ಯಾಕ್‌ಬೆತಳನ್ನು ಆರಾಧಿಸುವ ಬೋದಿಲೇರ್, ಸೇಟನ್ನನ ಗೋಪ್ಯಕ್ಕೆ ಈಡಾಗುವ ಮಿಲ್ಟನ್‌, ಕ್ರೇಜಿ ಜೇನ್‌ಳ ಹುಚ್ಚಿಗೆ ಮರುಳಾಗುವ ಏಟ್ಸ್‌ ಒಂದನೆಯ ಗುಂಪನ್ನು ಪ್ರತಿನಿಧಿಸಿದರೆ ಸ್ಪಷ್ಟ ಕಾಣ್ಕೆಗಾಗಿ ಶೋಧಿಸುವ ವರ್ಡ್ಸ್‌ವರ್ತ ಮತ್ತು ಎಲಿಯಟ್‌ ಎರಡನೆಯ ತಂಡವನ್ನು ಪ್ರತಿನಿಧಿಸುತ್ತಾರೆ. ಕಂಬಾರ ಗಾಂಧೀಜಿ ಕುರಿತು ಬರೆಯುವುದು ಕಷ್ಟ. ಅವರಿಗೆ ಮಾವೋನ ಸೇಟನಿಕ್‌ ಶಕ್ತಿ ಬೇಕು. ತಣ್ಣಗೆ ಹುಡುಕುತ್ತ ಹೋಗುವುದಕ್ಕೆ ಬದಲು ಹಾಡುತ್ತ,  ಕುಣಿಯುತ್ತ, ಒಗಟುಗಳಲ್ಲಿ ಮಾತಾಡುತ್ತ ಹೋಗುವ ಶೈಲಿ ಬೇಕು. ಹೀಗೆ ನೋಡಿದರೆ ಕಂಬಾರರು ನಮ್ಮ ಅಕ್ಷರಸ್ಥ ಮಧ್ಯಮ ವರ್ಗಕ್ಕೆ ಬಂದು ಭಾವನೆಗಳ ಹುಚ್ಚು ಅಲೆಯನ್ನು ಎಬ್ಬಿಸಲು ಸಾಧ್ಯವಾದದ್ದು ದೊಡ್ಡ ಸಾಹಸದ ಕೆಲಸ. ಪಶ್ಚಿಮದ ಮಧ್ಯಮ ವರ್ಗಕ್ಕೆ ಸುಮಾರು ನಾನೂರು ವರ್ಷದ ಚರಿತ್ರೆ ಇದೆ. ಆ ವರ್ಗದ ಶೂನ್ಯತೆ, ಭಾವರಾಹಿತ್ಯ ಮತ್ತು ಬೇಸರವನ್ನು ಹೋಗಲಾಡಿಸಲು ನಡೆದ ಸಾಹಿತ್ಯ ಮತ್ತು ಬೇಸರವನ್ನು ಹೋಗಲಾಡಿಸಲು ನಡೆದ ಸಾಹಿತ್ಯ ಮತ್ತು ಸಾಹಿತ್ಯೇತರ ಪ್ರಯತ್ನಗಳಿವೆ. ಆದರೆ ನಮ್ಮಲ್ಲಿ ಕೆಲವೇ ದಶಕಗಳ ಈ ಮಧ್ಯಮ ವರ್ಗ ತನ್ನ ನಿಷ್ಕ್ರಿಯೆಯ ತೆಳು ಸ್ಥಿತಿಯಿಂದಲೇ ನಾಶವಾಗುವ ಸಾಧ್ಯತೆಯಿದೆ. ಈ ಸಸ್ಯಾಹಾರ – ಸಿನಿಮಾ – ವಾಕ್‌ಗಳ ಸಮಾಜಕ್ಕೆ ಕಂಬಾರರು ತಮ್ಮ ಉತ್ಪ್ರೇಕ್ಷೆಯಿಂದ, ತುಂಬು ಗಂಟಲ ಅಭಿವ್ಯಕ್ತಿಯಿಂದ ಈ ಬದುಕಿನಾಳದ ಅಥವಾ ನೆನಪಿನಲ್ಲುಳಿದ ಶಕ್ತಿಗಳ ಆರಾಧನೆಯಿಂದ ತೀವ್ರತೆ ಕಲ್ಪಿಸಿಕೊಡುತ್ತಾರೆ.

ಇವರ ಸಮೂಹಧೋರಣೆ ಮತ್ತು ಜನಸಾಮಾನ್ಯರ ಸ್ತರದ ಗ್ರಹಿಕೆಯ ಬಗ್ಗೆ ಆಗಲೇ ಹೇಳಿದ್ದೇನೆ. ಮೇಲಿನ ಮೂರನ್ನೂ ಒಟ್ಟಿಗಿಟ್ಟು ನೋಡುವಾಗ ಕಂಬಾರರು ತಮ್ಮ ‘ಹೋರಿ’ ರಾಮಾಯಣವೂ ಗೋದೂ ತಾಯಿಯೂ’ ಮುಂತಾದ ಕವನಗಳಲ್ಲಿ ಕಾವ್ಯತ್ವ ಹೊಮ್ಮಿಸುವ ಬಗೆ ನೋಡಬೇಕು. ಕಂಬಾರರಲ್ಲಿ ಬಹಳಸಲ ಹೋರಿ ಮತ್ತು ಕುದುರೆಯ ಸಂಕೇತ ಕಾಣಿಸಿಕೊಂಡಿವೆ. ಹೋರಿ ಯೌವನದ ಹತೋಟಿ ಮೀರಿದ ಶೌರ್ಯವನ್ನು ತೋರಿದರೆ ಕುದುರೆ ನೇರವಾಗಿ ಶಕ್ತಿ ಮತ್ತು ಸ್ತ್ರೀಯಾಗಿ ಕಾಣಿಸಿಕೊಳ್ಳುತ್ತದೆ. “ಕಟ್ಟಿರುವ ಕಣ್ಣಂಇ ಹರಕೊಂಡು, ಡುರಕೀ ಹೊಡೆದು ಹಿಡಿಯ ಬಂದಣ್ಣಗಳ ಕೊಸರಿ ಕೈಮೀರಿ” ಹೋಗುವ ಈ ಹೋರಿಯ ಚಿತ್ರಣ ಮೊದಲ ಭಾಗದ್ದು. ಇದರ “ಬೆಂಕಿ ಮೈ ಮೈತುಂಬ ಬಾಯಿ” ಸಿಕ್ಕಷ್ಟನ್ನು ಸಿಕ್ಕಲ್ಲಿ ಗಪಗಪಾ ತಿಂಬಾಸೆ” ಮುಂತಾದುವನ್ನು ಹೇಳಿದ ಮೇಲೆ ಮನುಷ್ಯನ ಚಿತ್ರಣಕ್ಕೆ (ಎರಡನೆ ಭಾಗದಲ್ಲಿ) ಬರುತ್ತಾರೆ. ಯೌವನದ ಎಲ್ಲ ಬಣ್ಣ, ಬೆರಗು ಇಲ್ಲಿ ಹುಚ್ಚುಚ್ಚಾಗಿ ರೂಪ ತಾಳಿವೆ. “ಸೀರೆ ಉಟ್ಟದ್ದೆಲ್ಲ ಜೀವಂತ ಉದ್ರೇಕ”ವಾಗಿ ಮುಗಿದಮೇಲೆ ಈ ಎಲ್ಲದರ ಫಲಿತಾಂಶವಾಗಿ ಪ್ರಕೃತಿಯನ್ನು ಹಿನ್ನೆಲೆಗಿಟ್ಟುಕೊಂಡು ಸಮಾಧಾನದ ತೀರ್ಮಾನಗಳಿಗೆ ಬರುತ್ತಾರೆ: “ಸಾವುಗಳ ಸತ್ತ ಬೆರಗಿನಲಿ ಹಸುರಿನನಂತ, ಲೀಲೆಯದು ಹುಡುಗಿ ಬಾ ಒಡೆದೆನೊಡಪ”.

ಈ ಯೌವನ ಮತ್ತು ಈ ಬೆರಗು ಇವರ ಕುದುರೆಯ ಸಂಕೇತಗಳಲ್ಲೂ ಬರುತ್ತದೆ. “ಕಾಡ ಕುದರಿ ಓಡಿ ಬಂದಿತ್ತs” ಎಂಬುದು ನಿಸರ್ಗದಿಂದ ಎದ್ದು ಬಂದ ಶಕ್ತಿ ಹೇಗೆ ಮಾನವ ಕಟ್ಟಿಕೊಂಡ ಸಮಾಜದಲ್ಲಿ ಮುಗಿಯದ ಅಲೆಗಳನ್ನು ಎಬ್ಬಿಸಬಹುದು ಎಂಬುದನ್ನು ವರ್ಣಿಸುತ್ತದೆ. “ಹೊತ್ತಿ ಉರಿಯೋ ಕೇಶರಾಶಿ ಕತ್ತಿನಾಗ ಕುಣೀತಿ”ದ್ದರೆ “ಮೈಯ ಬೆಂಕಿ ಮಿರಗತಿತ್ತು”. ಇಂಥದೊಂದು ಕುದುರೆಯ ಕತೆಯನ್ನು ಜಾನಪದ ನೀತಿಕತೆಯಾಗಿ ‘ಕುದರೀಸಿದ್ದ’ದಲ್ಲಿ ಹೇಳಿದ್ದಾರೆ. ದೇವರು ಕೊಟ್ಟ ಶಕ್ತಿಯ ಬಗ್ಗೆ ದುರಾಶೆ ಹೊಂದಿದ ಸಿದ್ಧ ಪಟ್ಟ ಪಾಡು ಈ ಕತೆಯಲ್ಲಿದೆ. ಇದರಲ್ಲಿ ಕುದುರೆ ಕೊಟ್ಟು ಹೋದ ಬಾವಾನ ವರ್ಣನೆ (“ಕಾಡನ್ನೆ ಮಡಿಮಾಡಿ ಮುಡಿಗಿ ಸುತ್ತಿದ ಹಾಂಗ ಹೆಡಿಗಿ ರುಂಬಾಲೇನ ಹಸರಾ’) ಮತ್ತು ಕುದುರೆಯನ್ನು ಬಾವಾ ಹೆಣ್ಣಿಗೆ ಹೋಲಿಸುವುದು (“ಕುಡಿಹುಬ್ಬ ಹಾರೀಸಿ ಹೆಣ್ಣೆಂದರೇನಂದಿ? ಹೆಣ್ಣ ಕುದಿರಿಗಿ ಸಮನಂದಾ”)

ಹುಡಿಗೇರ ಮೈಚಂದ ತುಳುಕುವ ಹರೆ ಚಂದ
ಹರೆಯ ಮಾರುವ ನಗೆ ಚಂದ
ಸೊಂಟsದ ಬೆಂಕೀಗಿ ಬಿಡುಮುಡಿಯ ಹೊಗಿ ಚಂದ
ಜೋಲಾಡೊ ಜ್ವಾಲೀಯ ಚಂದ”

ಎನ್ನುವ ಮುದುಕನ ಮಾತುಗಳು ಚೆನ್ನಾಗಿವೆ. ಆದರೆ ಒಟ್ಟಾರೆ ಕವನ ಆಡಿದ ಮಾತಿಗೆ ತಪ್ಪಬಾರದು ಮತ್ತು ದೇವರು ಕೊಟ್ಟದ್ದರ ಬಗ್ಗೆ ದುರಾಶೆ ಪಡಬಾರದು ಎಂಬುದನ್ನಷ್ಟೇ ಪರಸರಕ್ಕೆ ಹೇಳುವಂತೆ ಕಾಣುತ್ತದೆ.

ಇವರು ನಗರ ಜೀವನದ ಬಗ್ಗೆ ಬರೆದ ಪದ್ಯಗಳ ಕ್ರಿಯೆಯನ್ನು ಮೇಲಿನ ಶಕ್ತಿಗಳ ಆರಾಧನೆಯಿಂದ ಊಹಿಸಬಹುದು. ಮೂಲತಃ ತೆಳುವಾಗಿಯೂ ವಾಸ್ತವ ಸ್ವಪ್ನರಹಿತ ದೇಹವುಳ್ಳನೂ ಆದ ಪೇಟೆಯ ಅನುಭವ ಇವರ ಕಾಡುಕುದುರೆಯ ಪ್ರವೇಶ ಮಾತ್ರದಿಂದಲೇ ಛಿದ್ರಗೊಂಡು ಅಸಂಗತವಾಗುವ ಮೂಲಕ ತಮ್ಮ ಕಾವ್ಯಕರ್ತವ್ಯ ನಿರ್ವಹಿಸುತ್ತವೆ. ಕೆಲವು ಸಂಗತಿಗಳಲ್ಲಿ “ಏಳು ಸುತ್ತಿನ ಕೋಟೆ” ನೆನಪಿಗೆ ತರುವ ‘ದೇವರ ಬಂಗಾರದ ಕುದುರೆ’ ತರುಣ ಅಧ್ಯಾಪಕನೊಬ್ಬನ ದೃಷ್ಟಿಯಿಂದ ಹೆಣ್ಣಿನೊಂದಿಗಿನ ಪ್ರಣಯದ ಘಟ್ಟಗಳನ್ನು ಬಣ್ಣಿಸುವುದಕ್ಕೆ ಜನ್ನನ ಭವಾವಳಿಗಳ ಆಸರೆ ಪಡೆಯುತ್ತದೆ. ಕುದುರೆಯಾದ ಹೆಣ್ಣಿನೊಂದಿಗೆ ಅನುಭವಗಳ ಮಜಲುಗಳನ್ನು ಆಕ್ರಮಿಸುತ್ತ ಹೋಗುವ ಗಂಡು ಇಲ್ಲಿ ತನ್ನ ಮಟ್ಗಟಿನ ಪ್ರಯಾಣ ಹೇಳುತ್ತಾನೆ. “ರಾವ್‌ ಹೇಳಿದ್ದು” ನಮ್ಮ ಜನಪದ ಕವಿ ಚಪ್ಪಲಿ, ಬೂಟಿನಂಥ ವಿಷಯ ಎತ್ತಿಕೊಂಡು ಹೇಗೆ ಹಾವು ಮತ್ತು ಹಗ್ಗದಂಥ ಆಟ ಆಡಬಲ್ಲರೆಂಬುದನ್ನು ತೋರುತ್ತದೆ. “ರಾಮಾಯಣವೂ ಗೋದೂ ತಾಯಿಯೂ” ಪದ್ಯ ಮಧ್ಯಮ ವರ್ಗದ ಅಪ್ರಾಮಾಣಿಕತೆ ಎಂಥ ಅನೈಸರ್ಗಿಕ ರಾಕ್ಷಸತ್ವ ಮುಟ್ಟಬಲ್ಲದು ಎಂಬುದನ್ನು ತೋರುತ್ತದೆ. ‘ಸ್ವಲ್ಪ ವಿಸ್ತಾರ ಬಾಯಿ’ಯ ಗೋದೂ ತಾಯಿಗೆ ಅಕ್ಷರ ಜ್ಞಾನವಿಲ್ಲ – ಆದರೆ ರಾಮಾಯಣದಿಂದ ನೀತಿ ಹೊರಡಿಸುವ ಈಕೆ ಅದೇ ರಾಮಾಯಣದ ಪ್ರತಿಯಲ್ಲಿ ನಿರೋಧ್‌ ಇಟ್ಟುಕೊಂಡಿದ್ದಾಳೆ. ಅವರ ಪ್ರೇಮಿಗಳಾರು ಎಂಬುದು ಸ್ಪಷ್ಟವಾಗದಿದ್ದರೂ ಮಗ ಮತ್ತು ಅವನ ಹೆಂಡತಿಯ ನಡುವೆ ಭೂತಾಕಾರವಾಗಿ ನಿಲ್ಲುತ್ತಾಳೆ, ಸೊಸೆಯ ಬಲಿ ತೆಗೆದುಕೊಳ್ಳುತ್ತಾಳೆ. ನಮ್ಮ ನಾಗರಿಕ ಸಮಾಜದ ಹುಸಿ ನೈತಿಕತೆಯ ಬಗ್ಗೆ ಕಂಬಾರರ ಭಾಷ್ಯ ಈ ಕವನ. ಈ ಹ ಹುಸಿನೈತಿಕತೆಯನ್ನು ಸ್ಥಾಪಿಸುವುದೂ ಅನ್ನಿಸಿಕೆ, ಹೋಲಿಕೆಗಳ absurdityಯನ್ನು ಚಾಚಿಡುವುದರ ಮೂಲಕ. “ಇಬ್ಬರ ತಕರಾರಿಗೆ ಹುಟ್ಟಿ ಹಲವರ ತಕರಾರಿನಲ್ಲಿ ಬೆಳೆದವರ ಬಗ್ಗೆ ಇರುವ ‘ತಕರಾರಿನವರು’ ಪದ್ಯ ಹಂದರಕ್ಕೆ ಈ absurdityಯನ್ನು ಬಳಸುತ್ತದೆ.

“ತಕರಾರನುಟ್ಟು ತಕರಾರ ತೊಟ್ಟು
ಮಸಡಿಗೆ ತೆರೆಗಣ್ಣು, ಕಿಸಬಾಯಿ
ಜೋಡಿಸಿ ನಕ್ಕು
ಪುರಾಣದ ಹರಾಮತನದ
ಮನುವಿನ ಕಟ್ಟಡದ ಮೈಸಿರಿಗೆ…
ತಕರಾರು ತೆಗೆದವರು”

ಎಂದಿರುವ ಈ ಕವನದ ಜೋಡಣೆ ಮತ್ತು ಅನ್ನಿಸಿಕೆಯ ವಿರೋಧ ಸೃಷ್ಟಿಸುವ ವಿನೋದ ನೋಡಬಹುದು. ಪ್ರತಿಮೆ ಮತ್ತು ಮಾತುಗಳ ಮಿತಿಯುಳ್ಳ ಈ ಲೋಕದ ಅನೇಕ ಅನ್ನಿಸಿಕೆಗಳು ಕೇವಲ ದುರಂತ ಅಥವಾ ಕೇವಲ ತಮಾಷೆಯ ಶೈಲಿಯಲ್ಲಿ ಹೇಳಲು ಸಾಧ್ಯವಾಗದಿದ್ದಾಗ ಉಂಟಾಗುವ absurdity ಇದು. ಅಥವಾ ಶ್ರೀಮಂತವೂ ಸ್ಥಿರವೂ ಆದ ಬದುಕು ಅಭಿವ್ಯಕ್ತಿಯ ಬೆರಗುಗಣ್ಣಿನ ಮುಗ್ಧ ಕವಿಯನ್ನು ನಾಗರಿಕ ಜಗತ್ತಿನ ವಿರೋಧಾಭಾಸಗಳಿಗೆ ಒಡ್ಡಿದಾಗ ಬರುವ absurdity ಇರಬಹುದು. ಕಂಬಾರರ ಎಲ್ಲ ನಗರ ಜೀವನ ಕುರಿತ ಕವನಗಳಲ್ಲೂ ಈ ವಾಸ್ತವತೆ ಮೀರಿದ ಕಾವ್ಯಕ್ರಿಯೆ ಮತ್ತು ರೂಪಿಸುವಿಕೆ ಕಂಡುಬರುತ್ತದೆ.

ಹುಸಿಸಮಾಜವಾದಿಗಳು ಕಂಬಾರರಲ್ಲಿ ಸಾಕಷ್ಟು ಸಾಮಾಜಿಕಪ್ರಜ್ಞೆ ಇಲ್ಲವೆಂದೂ ನಾಸ್ಟಾಲ್ಜಿಯಾ ಮಾತ್ರ ಇದೆಯೆಂದೂ ಹೇಳುವುದನ್ನು ಕೇಳಿದ್ದೇನೆ, ನಿಜ. ‘ಕರಿಮಾಯಿ’ ಕಾದಂಬರಿಯಂತೆಯೇ ‘ಹೇಳತೇನ ಕೇಳ’ ಪದ್ಯ ಕೂಡ ಕಣ್ಮರೆಯಾದ ಒಂದು ಸ್ಥಿರ ಜಗತ್ತನ್ನೂ, ಸ್ಥಿರ ಸಂಬಂಧಗಳನ್ನೂ ತೋರುತ್ತದೆ. ಆಧುನಿಕ ಚಟುವಟಿಕೆಗಳಿಂದಾಗಿ ಕದಡಿಹೋದ ಸುಂದರ ಲೋಕವನ್ನು ನೆನೆಸುತ್ತದೆ. ಕವಿಗಳು ಯಾವಾಗಲೂ ಸಂಪ್ರದಾಯಪ್ರಿಯರು ಎನ್ನುವುದನ್ನು ಮರೆಯದಿರೋಣ. ನಾಲ್ಕನೆಯ ಆಯಾಮ ಬರತೊಡಗಿದೊಡನೆ ಕವಿ ವಾಸ್ಗತವದ ಬಾಹ್ಯ ಪರಿವರ್ತನೆಯ ಸ್ತರ ಬಿಡತೊಡಗುತ್ತಾನೆ. ಎರಡನೆಯದಾಗಿ ಈ ‘ಸಾಮಾಜಿಕ ಪ್ರಜ್ಞೆ’ ತೋರುವಲ್ಲಿ ಕವಿಗೆ ಹಲವು ವಿಧಾನಗಳಿವೆ. ಆತ ನಾಗರಿಕವಾಗಿ ಉದ್ದೇಶಪೂರ್ವಕವಾಗಿ ಹೇಳಿದ್ದಕ್ಕೆ ವ್ಯತಿರಿಕ್ತವಾದ ಆತನನ್ನು ಮೀರಿದ ಕ್ರಿಯೆ ಕೆಲಸ ಮಾಡತೊಡಗುತ್ತದೆ. ಕಾದಂಬರಿಗಳಲ್ಲಿ ಕೂಡ ಇದು ಹೀಗೇ ಇದೆ. ಕಾನ್‌ಗ್ರೀವನ ಸುಸಂಸ್ಕೃತ ಕಥಾ ವಸ್ತುಗಳ ಕೃತಿಗಳೂ ಬಾಲ್ಜಾಕನ ಮೇಲ್ವರ್ಗವನ್ನು ಆರಾಧಿಸುವ ಪುಸ್ತಕಗಳೂ ಉಚ್ಚವರ್ಗವನ್ನು ಎಷ್ಟು ಹಚ್ಚಿಕೊಂಡಂತೆ ಕಾಣಿಸುತ್ತವೆಂದರೆ ಆ ವರ್ಗಗಳ ಪತನ ಅವರಿಗೆ ಗೋಚರಿಸದಂತೆಯೇ ಆಗಿರುತ್ತದೆ. ಆ ವರ್ಗವನ್ನು ಅವರು ಪ್ರೀತಿಸುವುದರಿಂದಲೇ ಅವುಗಳಲ್ಲಡಗಿದ ವಿಘಟನಾ ಬೀಜಗಳನ್ನು ಕೂಡ ಅವರ ಮನಸ್ಸು ನಮಗತೆ ತೋರಿಸುತ್ತದೆ. ಆದ್ದರಿಂದಲೇ ಎಂಗಲ್ಸ್‌ ಒಂದು ಸಲ ಕಮ್ಯುನಿಸ್ಟರು ಜೋಲಾನಂಥ ಎಡಪಂಥೀಯ ವಾಸ್ತವವಾದಿಗೆ ಬದಲು ಶ್ರೀಮಂತ ಜಗತ್ತಿನ ಸೋಲು ಗೆಲುವ ತೋರುವ ಬಾಲ್ಜಾಕನ ಕೃತಿಗಳನ್ನು ಓದಬೇಕು ಎಂದು ಹೇಳಿದ. ನಮ್ಮ ಕಂಬಾರರಲ್ಲೂ ಅಷ್ಟೆ. ಅವರು ಪ್ರೀತಿಸುವುದು ಸುಂದರ, ಸುಖದ “ಹಸಿರು ಸತ್ಯ”ದ ಜಗತ್ತು ಮತ್ತು ಹಳ್ಳಿಯ ತಲತಲಾಂತರದ ಬದಲಾವಣೆ ಕಾಣದ ಬದುಕು. ಗೌಡ , ಗೌಡತಿ, ಅವರ ಮಗ ರಾಮಗೊಂಡ ಮತ್ತು ಹಳ್ಳಿಯ ಜನಸಾಮಾನ್ಯರು ಎಷ್ಟು ಸುಂದರವೂ ಪ್ರಕೃತಿನಿಯಮಬದ್ಧವೂ ಆಗಿ ಬದುಕುತ್ತಿದ್ದಾರೆಂದರೆ ನಿಜಕ್ಕೂ ಮನುಷ್ಯ ಮನುಷ್ಯನೇ ಆಗಿದ್ದರೆ ಈ ಸೌಖ್ಯದಲ್ಲೇ ಅದರ ಅಳಿವು ಕೂಡ ಇರುವುದು ತಿಳಿಯುತ್ತದೆ. ಅಂದರೆ ಎಲ್ಲ ಬದುಕಿನ ಧರ್ಮ ಬದಲಾವಣೆ-ಈ ಬದಲಾವಣೆಯನ್ನು ಕವಿ ಇಷ್ಟಪಡದೆ ಇರುವಾಗ ಸಹ.  ಬೇಟೆಗೆ ಹೋದ ಗೌಡ ರಾಕ್ಷಸನಾಗಿ ಹಿಂದಿರುಗುವ ಮುಂಚೆ ಬರುವ ಶಕುನಗಳು ಗೌಡನಲ್ಲಾಗುವ ಬದಲಾವಣೆ ಸೂಚಿ.  ಆತ ಬಂದು ಹಳ್ಳಿಯಲ್ಲಿ ಮಾಡುವ ಸುಧಾರಣೆ ಒಂದು ಕಡೆ ಸುಖಕ್ಕೆ, ಇನ್ನೊಂದು ಕಡೆ ಅನೈಸರ್ಗಿಕತೆಗೆ ಸೂಚಿ. ಸ್ಥಗಿತ ಕೇಂದ್ರದಿಂದ ಕವಿ ಎಲ್ಲವನ್ನೂ ನೋಡುತ್ತಿರುವುದರಿಂದ ಈ ಪರಿವರ್ತನೆಯಲ್ಲಿ, ಎಲ್ಲ ಬದಲಾವಣೆಯಲ್ಲಿರುವಂತೆ, ನೋವು ಮತ್ತು ದುರಂತವಿದೆ. ಇನ್ನೊಂದು ದೃಷ್ಟಿಯಿಂದ ನಾವು ನೋಡಿದರೆ ಈ ಕವನದ ನಿಗೂಢತೆಯ ಆಳದಲ್ಲಿ ಎಲ್ಲ ಬೆಳೆವ ಸಮಾಜ ತೋರುವ ಪ್ರಗತಿ ಇದೆ. ಕಂಬಾರರ ಸಾಮಾಜಿಕ ಪ್ರಜ್ಞೆ ನೋಡಬಯಸುವವರು ಇಲ್ಲಿ ರಾಜಕೀಯ ಧೋರಣೆ, ಸ್ಲೋಗನ್‌ಗಳಿಗಾಗಿಯಾಗಲಿ ಆಧುನಿಕ ಸಲಕರಣೆಗಳಿಗಾಗಿಯಾಗಲಿ ಹುಡುಕಿದರೆ ನಿರಾಶರಾಗುತ್ತಾರೆ. ಕವಿಯ ಜಗತ್ತು ಸದಾ ಪರಂಪರೆಯನ್ನು ಆರಾಧಿಸುವ ಜಗತ್ತಾಗಿರುವಂತೆಯೇ ಕಳೆದ ಮುಗ್ಧತೆಗಾಗಿ ಅರಸುವ ಕ್ರಿಯೆ ಕೂಡ ಹೌದು. ಈತ ಕೆಲವು ವೇಳೆ ಕಂಡ ಅಥವಾ ಕಂಡೆನೆಂದು ತಿಳಿದ ಆದರ್ಶಲೋಕ ಕೊನೆಗೂ ದೊರೆಯುವುದು ಈತನ ಕಲ್ಪನೆಯಲ್ಲೆ. ಆದ್ದರಿಂದಲೇ ಈತ ವಾಸ್ತವಕ್ಕೆ ಢುರಕೀ ಹೊಡೆದಂತೆಲ್ಲ ಕಳೆದ ಆ ಸೌಷ್ವವದ ಲೋಕದ ಬಗ್ಗೆ ದುಃಖಿಯಾಗುತ್ತಾನೆ. ಇನ್ನೊಂದರ್ಥದಲ್ಲಿ ವೈಯಕ್ತಿಕವಾಗಿ ಸೌಷ್ಟವದ ಲೋಕ ಕಳೆದದ್ದರ ಬಗ್ಗೆ ದುಃಖಿಯಾಗುತ್ತಾನೆ.  ಈ ವಾಸ್ತವ, ಆದರ್ಶದ ನಡುವಿನ ಕೇಂದ್ರದಲ್ಲಿ ಕಂಬಾರರ ಸಾಮಾಜಿಕ ಪ್ರಜ್ಞೆ ದೊರೆಯುವುದು. ಇವರು ಈ ಪ್ರಜ್ಞೆಯನ್ನು ವಿಮರ್ಶಿಸಲು ಇವರೆಲ್ಲ ಜಾನಪದ, ನಾಗರಿಕ ಕವನಗಳನ್ನು ಒಟ್ಟಾಗಿಯೇ ನೋಡಬೇಕು.

ಬೇಂದ್ರೆಯವರ ದಾರಿಯಲ್ಲಿಯೇ ಒಮ್ಮೆ ಬರೆಯುತ್ತಿದ್ದ ಕಂಬಾರರು ಭಾಷೆ, ವಸ್ತು, ಆಸಕ್ತಿ-ಎಲ್ಲದರ ದೃಷ್ಟಿಯಿಂದ ಅವರಿಗಿಂತ ಮುಂದೆ ಹೋಗಿದ್ದಾರೆ. ಬೇಂದ್ರೆಯವರ ತರುವಾಯ ಬಂದ ಕವಿಗಳ ಸ್ನೇಹವನ್ನು ಅರಗಿಸಿಕೊಂಡಿದ್ದಾರೆ. ನನ್ನ ಸಮಕಾಲೀನರಲ್ಲಿ ಈ ವ್ಯಕ್ತಿಯಷ್ಟು ತೀವ್ರವಾಗಿ ತಮ್ಮ ಕಾಣ್ಕೆಯಲ್ಲಿ ವಿಶ್ವಾಸವಿಟ್ಟು ಕವನ ಕಟ್ಟುವ ವ್ಯಕ್ತಿ ಇನ್ನೊಬ್ಬನಿಲ್ಲ. ಬೇರೆಯವರು ಕವನ ಬರೆಯುವುದು ಹಾಬಿ ಅಥವಾ ಯಾರನ್ನೋ ಮೆಚ್ಚಿಸುವ ಕ್ರಿಯೆ ಎನ್ನುವಂತಹ ರಚನೆ ಕೊಡುತ್ತಿದ್ದರೆ ಕಂಬಾರರು ಕಾವ್ಯ ಬರೆಯುವುದು ತಮ್ಮ ವ್ಯಕ್ತಿತ್ವಕ್ಕೆ ಮತ್ತು ಪರಿಸರಕ್ಕೆ ಅರ್ಥವತ್ತಾಗಬಲ್ಲ ಕಸಬು ಎಂದು ತಿಳಿದು ಬರೆಯುತ್ತಿದ್ದಾರೆ.

ನನಗೆ ಹಿತವಚನ ಹೇಳಿ ಅಭ್ಯಾಸವಿಲ್ಲ-ಹೇಳಿದಾಗಲೆಲ್ಲ ಅವು ನನಗೇ ನಾನು ಹೇಳಿಕೊಂಡಂತಿರುತ್ತವೆ. ಆದರೂ ಇಲ್ಲಿ ಕೆಲವು ಅಂಶಗಳನ್ನು ಕಾಣಿಸದಿದ್ದರೆ ತಪ್ಪಾಗುತ್ತದೆ. ಕಂಬಾರರು ತಮ್ಮನ್ನು ತಾವು ಹೊರ ಅನುಭವವೊಂದಕ್ಕೆ , ಪ್ರಕಾರಕ್ಕೆ, ಹಾಡಿನ ಮಟ್ಟಿಗೆ, ಜನತೆಯ ಜೀವನ ವಿಧಾನಕ್ಕೆ ಕೊಟ್ಟುಕೊಳ್ಳುವುದು ನಿಜ. ಆದರೆ ಕೊಟ್ಟುಕೊಳ್ಳಬಲ್ಲ ಯಾವನಾದರೂ ಈ ತರಹದ ಪದ್ಯ ಬರೆಯಬಹುದು ಅನ್ನಿಸದಂತೆ ಕಂಬಾರರ ಅಚ್ಚು ಇವರ ಕೃತಿಗಳ ಮೇಲೆ ಸ್ಪಷ್ಟವಾಗಿ ಬೀಳಬೇಕಾಗಿದೆ. ಅಂದರೆ ಈ ಕೊಡಸಾದ, ದಟ್ಟವಾದ ಆಧುನಿಕ ಪ್ರಪಂಚದ ಅನುಭವವನ್ನು ಸರಿಯಾಗಿ ಹೇಳಬೇಕಾದರೆ ಅದನ್ನು ಅರಗಿಸಿಕೊಳ್ಳಬಲ್ಲಂಥ ಸಾಂಧ್ರ ವ್ಯಕ್ತಿತ್ವ ಬೇಕು, ಬೌದ್ಧಿಕತೆಯ ಪ್ರತಿಭೆ ಬೇಕು. ಇದು ಪೌಂಡ್‌ , ಎಲಿಯಟ್‌ ಅಂಥವರಿಗೆ ಸಾಧ್ಯವಾಗುವಂಥದು. ಆದರೆ ಕಾವ್ಯದಲ್ಲೂ ಗೆರಿಲ್ಲಾ ಕ್ರಮವೊಂದಿದೆ: ತಿಳಿದದ್ದನ್ನು ತನ್ನ ವ್ಯಕ್ತಿತ್ವದ ಮಿತಿಗೆ ಹೊಂದಿಸಿ ಜನಸಾಮಾನ್ಯರಿಗೆ ಹೇಳುವುದು. ಇದು ಏಟ್ಸ್‌, ನೆರೂಡ ಮಾರ್ಗ. ಇದು ಕಂಬಾರರಿಗೆ ಹತ್ತಿರವಾಗಬಲ್ಲ ಮಾರ್ಗವೆಂದು ನಾನು ಸುಮ್ಮನೆ ಸೂಚಿಸಬಯಸುತ್ತೇನೆ. ಕಂಬಾರರ ವಯಸ್ಸಿನಲ್ಲಿ ಏಟ್ಸ್‌ `Never give all the Hearts” `under the moon’  ಥರದ ರಮ್ಯತೆಯೇ ಮೈವೆತ್ತಂತೆ ಬರೆಯುತ್ತಿದ್ದ. ತನ್ನ ಮನೋಧರ್ಮ ಮೀರಿ ಹೋಗಲು ಹೆದರುತ್ತಿದ್ದ. `A prayer for my daughter’ ಬರೆವ ಹೊತ್ತಿಗೆ ಬದುಕಿನ ಹೋರಾಟ, ದುರಂತ, ನಿರಾಸೆಯನ್ನೆಲ್ಲ ಪಡೆದಿದ್ದ. ಆಗಲೂ ತನ್ನ ಮಿತಿಯಲ್ಲಿಯೇ ಇದ್ದ.

ಇನ್ನೊಂದು ಸೂಚನೆ: ಏನೇ ಆದರೂ ಸದಾ ಪರಿವರ್ತನೆಯ ರೂಪದಲ್ಲಿರುವ ಬದುಕನ್ನು ಕವಿ ಕೂಡ ತುಂಬ ಎಚ್ಚರದಿಂದ, ವಿಮರ್ಶಕ ದೃಷ್ಟಿಯಿಂದ ನೋಡಬೇಕು. ಇದನ್ನು ಸಮತಾವಾದಿ ಲೇಖಕರು combative perception ಅನ್ನುತ್ತಾರೆ.  ಭಾರತದಂತಹ ಕಡೆ ಇದರ ಅಗತ್ಯ ಇನ್ನೂ ಹೆಚ್ಚು. ಬದುಕನ್ನು ಚೆನ್ನಾಗಿ ಬಲ್ಲವನ ಕನಸುಗಳಿಗೂ ಅರಿಯದವನ ಕನಸುಗಳಿಗೂ ವ್ಯತ್ಯಾಸವಿದೆ. ಜಾನಪದ ಪ್ರಜ್ಞೆಯ ಕವಿಯ ಉದ್ದೇಶ ಕೂಡ ಸೂಕ್ಷ್ಮಜ್ಞತೆ ಮತ್ತು ಅಪರೂಪದ ತಿಳಿವು ಕೊಡುವುದೇ ಆಗಿರುವುದರಿಂದ ಹಳ್ಳಿಗತನ ಬೆಳೆಸಿಕೊಳ್ಳುವುದು ಅಂಥ ಕಲ್ಯಾಣಗುಣವೇನಲ್ಲ.

ಈ ಎರಡು ಮಾತು ಹೇಳುವಾಗ ನನಗೆ ಆತಂಕವಿದೆ. ಅವರೆಲ್ಲ ಮಹತ್ವದ ಕವನಗಳ ಬಗ್ಗೆ ನಾನು ಮಾತಾಡಿಲ್ಲ. ನನಗಿಷ್ಟವಾದ ಹಾಡುಗಳ ಬಗ್ಗೆಯೂ ಹೇಳಿಲ್ಲ. ಅವರ ಮುಖ್ಯ ಆಸಕ್ತಿಗಳನ್ನು ಈ ಮೂಲಕ ಗುರುತಿಸಬಹುದೆಂದು ಅಂದುಕೊಂಡಿದ್ದೇವೆ. ಅಪ್ಪಟ ಕವಿಯಾದ ಕಂಬಾರರಂಥವರು ತಮ್ಮ ಧ್ವನಿಯಿಂದ ಮತ್ತು ಮನಸ್ಸಿನಾಳಕ್ಕೆ ಹೋಗುವ ಅನುಭವಗಳಿಂದ ಜನಸಾಮಾನ್ಯರನ್ನು ವಿನೀತರಾಗಿಸುತ್ತಾರೆ, ಕೃತಜ್ಞರನ್ನಾಗಿಸುತ್ತಾರೆ. ಕಾವ್ಯದ ಈ ಶಕ್ತಿ ಅಧ್ಯಾತ್ಮ ಅನುಭವದಲ್ಲಿ, ಸಂಭೋಗದಲ್ಲಿದೆಯೆಂದು ಬಲ್ಲವರು ಹೇಳುತ್ತಾರೆ. ಅದನ್ನೆಲ್ಲ ಮರೆತು ಕಂಬಾರರ ಯಾರೂ ಅರಿಯದ ಓದುಗ ಅಥವಾ ಕೇಳುಗ ಆಗುವುದರಲ್ಲಿ ನನಗೆ ತೃಪ್ತಿಯೆಂದು ಕೃತಜ್ಞತೆಯಿಂದ ಕಾಣಿಸಬಯಸುತ್ತೇನೆ.

– ಪಿ. ಲಂಕೇಶ್‌