ಹೇಳಿದರ ಕತಿಗಿತಿ ಅಂದೀರಿ ದೇವರೂ
ಶಾಸ್ತ್ರ ಸಂಪದನೀತ, ನಮ್ಮ ನಿಮ್ಮಂಥ
ಪೋಸ್ಟಿನ ವಿಳಾಸವಂತ, ಮತಿವಂತ, ಹಾಗಂತ
ಅರಸಿಕನಲ್ಲ, ಕಿಟ್ವಲ್ಕೋಶವಿನಾ ಹಳಗನ್ನಡ
ಪದಾರ್ಥ ಮಾಡಬಲ್ಲ; ಹೊಸೆಯ ಬಲ್ಲ
ಚುಟುಕಗಿಟಕ ಮುಕ್ತಕ, ಹೇಳಬಲ್ಲ ಸಂಸ್ಕೃತದಲ್ಲಿ
ಮಾರುದ್ದದ ಸಮಸ್ತಪದಗಳ ಪ್ರಾಸಾನುಪ್ರಾಸಗಳ
ಪನ್ನು ಜೋಕುಗಳ ಕಟ್ಟಬಲ್ಲ.
ಹೇಳಿದರ ಕತಿಗಿತಿ ಅಂದೀರಿ ದೇವರೂ
ಕಿವಿಗೊಟ್ಟು ಕೇಳಿರಿ ಹೇಳುವೆಗೀತನ ೧೦
ನಿವಳ ಹಕೀಕತ್ತ
ನವ್ಯ ಕಾವ್ಯದ ಹೊರಗೆ ಕೂತ ಸರಸ್ವತೀ
ಕೊಡು ನನಗೆ ತಾಕತ್ತ.
ವಿಳಾಸವಂತ ಎಂದೆನಲ್ಲ – ಮನೆಯಿದೆ ಅವನಿಗೂ ಊರಿನ ಕೇರಿಯ ರಸ್ತೆಯ ಪಕ್ಕದಲ್ಲಿ,-
ಎಲ್ಲಿ ಊರಿನ ಮೂರು ರಸ್ತೆಯ ವಕ್ರಕೂಟದ ಮಾಟವೋ
ಎಲ್ಲಿ ಮುದಿ ಎತ್ತೊಂದು ಮಲಗಿದೆ ಮೈಗೆ ಸಾವಿರ ನೊಣಗಳೋ
ಎಲ್ಲಿ ಎತ್ತಿನ ತುದಿಯ ಬಾಲನು ಕಣ್ಣಿಗೊತ್ತುವ ಜನಗಳೋ
ಎಲ್ಲಿ ಟ್ರಕ್ಕಿನ ಸರ್ಪನೆರಳಲಿ ಕಿರಚಿ ಓಡುವ ಸ್ಕೂಟರೋ
ಅಲ್ಲೆ ಅಲ್ಲೇ ಅವನ ಮನೆಯುಂಟು. ಅಲ್ಲಿಗೂ ಹೋಗುವರು ಜನ-ಜನಗಣತಿಯಧಿಕಾರಿ, ಚುನಾವಣೆ ಹುರಿಯಾಳು, ಅರಿಷಿಣಕುಂಕುಮದ ಗರತಿ, ಹಾಲಿನ ಗೌಳಿ, ತರಕಾರಿಯ ಥರಥರ ಮಂದಿ. ೨೦
ಅಕೋ ಬಂದ ಬಂದ! ಅವೆನೆಂಬಂಥ ಮತಿವಂತ ಕುಲಗೋತ್ರಗಳ ವಿಯ ನನಗೆ ಗೊತ್ತಿರದಂಥ, ರಹಿತಾದಿ ಮಧ್ಯಂತ, ಬಿರುದುಬಾವಲಿ ರಹಿತ ಕಥಾನಾಯಕ ಬಂದಂಥವನು ಎತ್ತಿನ ಬಾಲದ ತುದಿ ಮುಟ್ಟಿ ಕಣ್ಣಿಗೊತ್ತಿಕೊಂಡಂಥವನು ನಾಕೈದು ಸಲ ಪ್ರದಕ್ಷಿಣೆಹಾಕಿ ಮಹಮನೆಗೆ ಬಂದು ಬಾಗಿಲು ತಟ್ಟಿದಂಥವನಾದಾಗ-ಸುವಿಶಾಲವಾದ ಆಳೆತ್ತರ ಆಳಗಲದ ಒಂದು ಮೊಲೆ ಬಂದು ಬಾಗಿಲು ತೆರೆದು ಮಾಮೂಲಿನಂತದರ ತುದಿ ಅವನ ಕಿವಿ ತುರಿಸಿ ಮಾಮೂಲು ನಗೆ ನಕ್ಕು ಒಳಬಂದು ಬಾಗಿಲಿಕ್ಕಿಕೊಂಡು-
ತಾಳ್ರಿ-ನಿಮಗೆ ಈ ಮನೆಯ ವಿಚಾರ, ಹೊಸದಾಗಿ ಬಂದಿದ್ದೀರಲ್ಲ-ಹೇಳಬೇಕು. ನೋಡ್ರಿ ಇದೊಂದು ರುಮು, ರೂಮಿಗಂಟಿ ಬಾಕೀ ಮನೆ. ಬಾಕೀ ಮನೆ ವಿಚಾರ ಇತ್ತ ನಮಗೂ ಗೊತ್ತಿಲ್ಲ, ಅತ್ತ ನಾಯಕನಿಗೂ ಗೊತ್ತಿಲ್ಲ. ೩೦
ರೂಮಿನ ಮೂರು ಗೋಡೆ ಕಲ್ಲುಮಣ್ಣಿನದೆ. ನಾಲ್ಕನೇ ಕರಿಗೋಡೆಯಿದೆಯಲ್ಲಾ ಮೊಲೆಗೂ ಅವನಿಗೂ ಮದುವೆಯಾದಾಗ ಇರಲಿಲ್ಲ. ಅಥವಾ ಅಪಾರ್ಥವಾಗದಂತೆ ಹೇಳಬೇಕೆಂದರೆ ಅವನು ಮದುವೆಯಾದದ್ದು ಮೊಲೆಯನ್ನಲ್ಲ-ಹೆಂಗಸನ್ನೆ. ಸುಳ್ಳು ನಾ ಯಾಕೆ ಬೆರಸಲಿ? ಇಬ್ಬರೂ ಚೆಲುವರೆ. ಆದರೆ ಅಗ್ನಿ ಸಾಕ್ಷಿಯಾಗಿ ಸರ್ವಸಮಸ್ತರ ಎದುರು ಅವನು ಕಟ್ಟಿದ್ದ, ಆಕೆ ಕಟ್ಟಿಸಿಕೊಂಡಿದ್ದ ಕರಿಮಣಿ ತಾಳಿ ಅವರಿಬ್ಬರಿಗಿಂತ ಸುಂದರವಾಗಿತ್ತು ಚೆಲುವಾಗಿತ್ತು. ಅಷ್ಟೇ ಯಾಕೆ ಮದುವೆಗೆ ಬಂದಿದ್ದ
ಅಚ್ಚ ಮುತ್ತೈದೇರು ಮೆಚ್ಚಿ ಕೊಂಡಾಡಿದರು ೪೦
ಹೆಚ್ಚೀನ ತಾಳಿಯ ಹೊಗಳಿ
ದಾರಕೆ ಬೆಲೆಯಷ್ಟು ಕರಿಮಣಿಗೆ ಬೆಲೆಯೆಷ್ಟು
ಬಂಗಾರಕೆಷ್ಟು ಬೆಲೆ ಹೇಳಿ
ಎಲ್ಲಿ ಮಾಡಿಸಿದಿರಿನ್ನೆಲ್ಲಿಂದ ತಂದೀರಿ
ಎಷ್ಟೊಂದು ಹಣವ ತೆತ್ತೀರಿ
ಕರಕುಶಲ ಪತ್ತಾರ ಮೊದಲು ಹೇಳಿದ್ದೆಷ್ಟು
ನೀವು ಕೊಟ್ಟದ್ದೆಷ್ಟು ಹೇಳ್ರಿ.
ಎಂದ ಮುಟ್ಟಿಮುಟ್ಟಿ ನೋಡಿ ತಟ್ಟಿತಟ್ಟಿ ಕೇಳಿದರೆ ಅದ ಕೇಳಿಕೇಳಿ ಅವನಿಗೆ ಹೆಮ್ಮೆಯಾದದ್ದು ನಿಜ. ಅಷ್ಟೇ ಅಲ್ಲ, ಅಷ್ಟೇ ಆಗಿದ್ದರೆ ನಿಮ್ಮೆದುರಿಗೆ ಇದೆಲ್ಲಾ ಯಾಕೆ ಹೇಳುತ್ತಿದ್ದೆ-ಆ ದಿನ ಹಿರಿಯರೆಲ್ಲ ಅವರಿಬ್ಬರನ್ನು ಬಿಟ್ಟು ಆ ತಾಳಿಗೇ ಆಶೀರ್ವದಿಸಿದರು. ಅದಕ್ಕೆ ಆಯುರಾರೋಗ್ಯ ಅಷ್ಟಪುತ್ರ ಸುಖ ಸೌಭಾಗ್ಯ ಹಾರೈಸಿದರು. ಅವರ ತುಟಿಯಂಚಿನ ಐರನಿ ಗುರುತಿಸಿ ಅವನು ಹಾಗೆಂದು ಹೇಳಿದರೆ ‘ಕೆಟ್ಟ ಅಭಿರುಚಿ’ಯೆಂದರು.
ಹೇಳಿದರ ಕತಿಗಿತಿ ಅಂದೀರಿ ದೇವರೂ, ಅಂದಿನಿಂದ ಅವನೂ ಒಬ್ಬ ಮನುಷ್ಯನಾದ. ಈಗ ಜನ ಅವನ ನಂಬುತ್ತಾರೆ. ಮದುವೆ ಮುಂಜಿ ವಿಧಿ ಆಚರಣೆಗಳಿಗೆ ಆಮಂತ್ರಿಸುತ್ತಾರೆ. ಬೆಳೆದ ಹುಡುಗಿಯರ ತಂದೆಯರು, ಸುಂದರಿಯರ ಗಂಡಂದಿರು, ರೋಟರಿ ಕ್ಲಬ್ಬು ಅಕ್ಕಪಕ್ಕ ನೆರೆಹೊರೆ ಅಂಗಡಿ ಶೆಟ್ಟಿ ವಿಶ್ವಾಸದಿಂದ ಇರುತ್ತಾರೆ. ಸ್ವಲ್ಪ ಹಿಂದುಮುಂದಾಯಿತು ಕ್ಷಮಿಸಿರಿ. ಹೀಗೆ ಹೇಳಬೇಕಿತ್ತು-ತಾಳಿಯಿತ್ತಲ್ಲ ಇಬ್ಬರಿಗೂ ಅಚ್ಚುಮೆಚ್ಚಿನದಾಯಿತು. ನೀವು ಪ್ರೀತಿಯಿಂದ ಏನನ್ನಾದರೂ ನೋಡತೊಡಗಿದರೆ ಅದು ಬೆಳೆಯತೊಡಗುತ್ತದೆಂದು ನಂಬಿಕೆಯಿದೆ ಗೊತ್ತಾ? ಮೊದ ಮೊದಲು ಅದರೊಂದಿಗೆ ಹೊಂದಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಹೌದು. ಆಮೇಲೆ ಭಾರೀ ಸರಳ. ತಾಳಿಯಿತ್ತಲ್ಲ, ಅವರಿಬ್ಬರ ಪ್ರೀತಿಯಿಂದಿರಬೇಕು-ಬೆಳೆಯತೊಡಗಿತು, ಹೀಗೆ: ೬೦
ಪ್ರಸ್ತದ ದಿವಸ
ಮನೆತುಂಬಿದ ನೆಂಟರ ಕಣ್ಣಲ್ಲಿ
ಅಶ್ಲೀಲ ಹನಿಮೂನೊಂದು ಹೊಳೆಯುವುದ ನೋಡಿ
ಕುಲುಕುಲು ನಕ್ಕು ಖುಶಿಖುಶೀ ಪಡುವಾಗ
ಹಾ-
ಮೈವಾಡದ ನೆನಪಾಯಿತು!
ಸ್ವಲ್ಪ ವಿಷಯಾಂತರವಾಗುತ್ತದೆ ಕ್ಷಮಿಸಬೇಕು. ಆದರೂ ಮಹತ್ವದ ಮಾತು ಬಿತ್ತು. ಅದಕ್ಕೇ ಹೇಳುತ್ತೇನೆ: ಅವನಜ್ಜ ಸಾಯುವಾಗೊಂದು ಕೋತಿಯ ಮೈಚರ್ಮ ಕೊಟ್ಟಿದ್ದ: ೭೦
ತಗೊ ಮಗಾ
ಸಿಕ್ಕಿದೆಯಂತ ಸಿಕ್ಕಸಿಕ್ಕಲ್ಲಿ ಬಿಚ್ಚಬೇಡ ,
ಹಡಬಿಯರ ಹರಿತ ಬೆರಳಿಗೆಚ್ಚರ ತಪ್ಪಬೇಡ
ಟೊಂಕದ ಬೆದೆಯ ಹದವರಿತು ತೋರಿಸು ನಿನ್ನ
ಹನುಮಂತನವತಾರ, ಮರೆಯಬೇಡ ನೀನು
ಕೋತಿಗೆ ಕುಮಾರ.
ಆಗಲೆಂದನು ಅವನು | ೮೦
ಮೈವಾಡವೆಂದು ಹೊಸ |
ಹೆಸರು ಕೊಟ್ಟನು ಅವನು |
ಧರಿಸಿಕೊಂಡನು ಮೈಗೆ |
ಮರವೇರಿದನು ಹೊಂಗೆ |
ಹುಣಸೆ ಮಾಮರೆ ಅತ್ತಿ |
ಹರಿದು ತಿಂದನು ಹತ್ತಿ |
ಸರಿಕರೆದುರಿಗೆ ಹಾಕಿ |
ಮೆರೆದಾಡಿದನು ಶೋಕಿ |
ಸ್ಕೂಲು ಕಾಲೇಜುಗಳ |
ವಾರ್ಷಿಕೋತ್ಸವ ನಿವಳ |
ಅವಕಾಶಗಳಲೆಲ್ಲ |
ಬಲ್ಲವರ ನಗಿಸಿದ | ೯೦
ಕಾಲೇಜಿನಲ್ಲಿರಲು |
ಫುಟ್ಬಾಲ್ ಖಯಾಲಿ ಬಲು |
ಗೋಲು ಏಟಿಗೆ ನಾಲ್ಕು |
ಹೊಡೆದ ಹೊಡೆದಯ್ ಅವನ್ |
ಹುಡಿಗಿಯರ ಅರೆಡಜನ್ |
ತೊಡೆಯ ಬೆವರಿಸಿದ |
ಆ ಪೈಕಿ ಇಬ್ಬರಿಗೆ |
ಅವನ ಚಂಡಿಕೆಯೊಳಗೆ |
ಬೆರಳನಾಡಿಸಿದಂತೆ |
ಹಿಡಿದು ಎಳೆಎಳೆದಂತೆ | ೧೦೦
ಕನಸಾಯಿತಂತೆ |
ಬಂತಂತೆ ಕರುಣೆ ಆ ಬಾಲೆಯರ ಕಣ್ಣ ಕನಸಿಗೆ ಮೈಯ ಹಸಿವೆಗೆ. ಅಂಗಾಂಗಗಳ ಸಂದುಗೊಂದಿಯ ಚಡಪಡಿಕೆಗೆ ಕೋತಿಯ ಮೈವಾಡ ತೊಟ್ಟು ರೂಮಿನಲ್ಲಿ ಫುಟ್ ಬಾಲವಾಡಿದ್ದನಂತೆ! ಅಂತೆ ಇದು ಹಳೆಯ ಕತೆ.
ಹೇಳಿದರ ಕತಿಗಿತಿ ಅಂದೀರಿ, ನೆನಪಾಯಿತು: ಪ್ರಸ್ತದ ದಿವಸ ಈ ಮೈವಾಡದ ನೆನಪಾಯಿತು. ತೊಟ್ಟ. ಹಾಸಿಗೆಯ ಮೇಲಿನ ಹೆಣ್ಣು ಹುಣಸೇ ಹಣ್ಣಿನ ಹಾಗೆ ಕಂಡು
ಅಕಾ ಅಕಾ ಅಂದು ೧೧೦
ಗಪಾಗಪಾ ತಿಂದ.
ಪಿತ್ತನೆತ್ತಿಗೆ ಏರಿ
ಹಾಸಿಗೆಗೆ ಬೆಂಕೀ ಹಚ್ಚಿ,
ಹಚ್ಚಿದ ಕಿಚ್ಚಿನಲ್ಲಿ ಫುಟ್ಬಾಲನಾಡತೊಡಗಿದಾಗ-
ಸಂದುಸಂದುಗಳಲ್ಲಿ ಬೆಂಕಿಯ ಜಳ
ಬುಗ್ಗೆಂದು ಹೊತ್ತಿದಾಗ-ಘಮಘಮ ಗಾಳಿ ತುಂಬಿದ
ಬಿದಿರು ಮೆಳೆಯಂತೆ
ಅದುರಿ ಚೆದುರಿ ಚೆಲ್ಲಾ ಪಿಲ್ಲಿ ಒಡಮುರಿದು ಒಟ್ಟಾದಾಗ-
ಕುಡಿವರಿದ ತೋಳತೀಟೆಗೆ ಕೈಕಟ್ಟಿ
ಹುರಿಮಾಡಿ ಹೊಸೆವಾಗ
ಕಣ್ಣಿನ ತುಂಬ ಹಂಬಲವಿಂಬಾಗಿ ಸೂಸಾಡುವಾಗ
ಯಾರೋ ಓಡಿಬಂದು ಜಿಗಿದಾಡುವ ಕೋತಿಯನ್ನು ಹಿಡಿದು ಚೆನ್ನಾಗಿ ಬೆನ್ನು ಬಾರಿಸಿ ಕಿತ್ತಾಡಿದರು. ಕತ್ತಿಗೆ ಕೈಹಾಕಿ ಹಿಂದಕ್ಕೆಳೆದರು. ಏನು ಎಂತಂತ ಅನ್ನೋದರಲ್ಲಿ ಕೆನ್ನೆಗೆರಡೇಟು ಬಿಗಿದು ಮೈವಾಡ ಹಿಡಿದು- ೧೨೦
ಯಾರೊ: ಏ ಕೋತಿ, ಸ್ವಲ್ಪ ಕಿರುಚೊ.
ಅವನು: ಯಾಕಲೇ ಮಗನ ಬಾಯಿಗಿಬಂಧಾಂಗ ಆಡತಿ? ತಲಿಗಿಲಿ ನೆಟ್ಟಗಿಲ್ಲಾ?
ನೀ ಯಾರು ಏನಂತ ಹೇಳ್ತೀಯೊ ಇಲ್ಲಾ ಪೋಲೀಸಿರಿಗಿ ಹೇಳಲೊ?
ಯಾರೊ : ಏ ಇನ್ನಷ್ಟ ಜೋರಿನಿಂದ ಒದರು.
ಅವನು: (ಇನ್ನೂ ಜೋರಿನಿಂದ) ಮತ್ತ ಅದನ್ನೇ ಅಂತಾನಲ್ಲೊ! ಯಾಕ ಬಾಯಾಗ ಹಲ್ಲ ಇದ್ದದ್ದ ಸಮ ಆಗವೊಲ್ದೇನ? ಸುಮ್ಮನ ಹೊರ ಬೀಳ್ತಿಯೊ, ಹಲ್ಲ ಕೀಳಂತೀಯೊ?
ಯಾರೊ: ಇನ್ನ ಸಾ ಕು ಸುಮ್ಮನ ಬಿದ್ದಕೊ. ೧೩೦
ಮೈವಾಡ ಸುಮ್ಮನೆ ಕೆಳಗೆ ಬಿತ್ತು. ಮೊದಲಿನ ಕೆಲನಿಮಿಷ ಕೈಕಾಳು ಅಲುಗಿಸಲಿಕ್ಕೂ ಭಯ. ಎದ್ದು ಲೈಟ್ಹಚ್ಚಿದ. ಆಮೇಲಾಮೇಲೆ ನೋಡಿದರೆ ತನ್ನ ಮೈಕಪ್ಪಿನೊಂದಿಗೆ ಹೆಣ್ಣಿನ ಮೈ ಬಿಳಿ ವ್ಯತ್ಯಾಸಗೊಂಡಿತ್ತು. ಕಾಣದ ಅಂಗಾಂಗಳ ಕಲ್ಪಿಸಿ ಇಬ್ಬರಿಗೂ ಅಂಟಿಸಿಕೊಂಡು ಇಡಿಯಾಗಬಯಸಿದ. ತನ್ನಂತೇ ಕೈಬಾಯಿ ತನ್ನಂಥೆ ಕಿವಿ ಮೂಗು ತನ್ನಂತೆಯೇ ಅಂತ ಅಂತೆವೋಲ್ ಹಾಗೆಗಳ ಚಾಚಿ ಒಂದಾಗಬಯಸಿದ. ಎಚ್ಚೆತ್ತ ಅವಳು ‘ನೋಡಬಾರದೆ ಮೊಲೆಯೆಷ್ಟು ಊದಿಕೊಂಡಿದೆ’ ಅಂದಳು. ‘ನಿನಗೆ ದಣಿವಾಗಿಲ್ಲವೆ’ ಅಂದ. ಮಲಗಿದ. ಮಣಮುಕ್ಕ ಹಾವಿನ ನೆನಪಾಯಿತು”
ಮಣಮುಕ್ಕ ಹಾವಿಗೆ ಎರಡೂಕಡೆ ಎರಡು ತಲೆ ೧೪೦
ಮೈತುಂಬ ಕಾಲು ತಿನ್ನುವುದು ಮಣ್ಣ
ಸ್ವಂತಕ್ಕೆ ಹುತ್ತಿಲ್ಲ ಅದೂ ಸಾಲದ್ದಕ್ಕೆ
ಕಣ್ಣಿಲ್ಲ, ಗೊತ್ತಿಲ್ಲ ಸ್ವಂತ ಬಣ್ಣ.
ಅವರಿವರ ಹುತ್ತದಲಿ ನುಗ್ಗಿ ಐಷಾರಾಮ
ಐಹಿಕದ ಬಗೆಗಷ್ಟು ಯೋಚಿಸೋಣ
ಕಾಣದೊಡೆಯರ ಏಟು ಒದೆ ತಿವಿತ ಮೂದಲಿಕೆ
ಲೋಕವೇ ಇಂತೆಂಬ ಮುಸಾಫಿರ ತೀರ್ಮಾನ.
ಇದ್ದೆರಡು ತಲೆಯಲ್ಲಿ ಬಾಲ ಯಾವುದು ಎಂದು
ಎರಡಕ್ಕು ಕೊನೆಯಿರದ ಪರದಾಟವೆ.
ಮುಂದೆ, ಹೊರಟದ್ದೆ ತಲೆ ಹಿಂದೆ ಇದ್ದುದೆ ಬಾಲ
ಹಿಂದುಮುಂದುಗಳ ನಿರ್ಧರಿಸಬಹುದೆ?
ಹುತ್ತದಲಿ ತಲೆಯೊಂದು ಹೊಕ್ಕು ಗುದ್ದುತ್ತಿರಲು ೧೫೦
ಇನ್ನೊಂದು ಕೂರುವುದು ಯೋಚಿಸುತ್ತ
ಕಲೆ ಗಣಿತ ಜ್ಯಾಮಿತಿಯ ಪರಿಮಿತಿಯ ಪರಿಘಕ್ಕೆ
ಸುತ್ತಿ ಬರೆವುದು ಸೊನ್ನೆ ತನ್ನ ಸುತ್ತ.
ಸೊನ್ನೆ ಯಂಚಿನಗುಂಟ ಬಣ್ಣಬಣ್ಣದ ಭ್ರಾಂತಿ-
ಬಾ ರಾಜಾ ಏನು ಸುಖ ತಾಜಾ ತಾಜಾ
ಎಲ್ಲೋಡಿ ಅಡಗಿದರು ಅಲ್ಲಿಂದ ಎಳೆಯುವುದು
ಮಣ್ಣೊಳಡಗಿದ ತಲೆಗೆ ಮಣ್ಣಿನ ಮಜ.
ಅತ್ತ ಎಳೆಯುವುದದು ಇತ್ತ ಇದು ಎಳೆಯುವುದು
ಎಳೆತದಲ್ಲಿದ್ದೀತೆ ಸುಖದ ನೋವು?
ನರನರಕವಾಗುತ್ತ ಅದಕಿದೂ ಇದಕದೂ
ಸಂಶಯವೆ ನಾಚಿಕೆಯ ಶೇಷವೇನು? ೧೬೦
ಬೆಳಿಗ್ಗೆದ್ದಾಗ ಮೊಲೆಯೂದಿ ಕೊಡದಷ್ಟಾಗಿತ್ತು ಸ್ವಾಮೀ ಕೊಡದಷ್ಟಾಗಿತ್ತು. ತಾಳಿಯಿತ್ತಲ್ಲ ತಾಳಿ – ಅದರ ಕರಿಮಣಿಗಳು ಪೇಪರ್ ವೇಟ್ದಷ್ಟು ದೊಡ್ಡ ಕರೀಕರೀ ಗುಂಡುಗಳಾಗಿದ್ದವು ಸ್ವಾಮೀ ಗುಂಡುಗಳಾಗಿದ್ದವು. ಅದರ ಮಾರನೇ ದಿನ ಇನ್ನೂ ಇಷ್ಟು ದೊಡ್ಡದಾಗಿ ಕಟ್ಟಿದ ಕಟ್ಟಿಯಾಗಿ ನಿಂತ ಗೋಡೆಯಾಗಿ ಬೆಳೆಬೆಳೆದು ಮನೆಯಲ್ಲೊಂದು ಕೋಣೆ ಖರ್ಚಿಲ್ಲದೆ ಹೆಚ್ಚಾಯಿತು ಸ್ವಾಮೀ ಕೋಣೆ ಹೆಚ್ಚಾಯಿತು. ಗೋಡೆಯಾಚೆಗೆ ಅವಳ ಮುಖ, ಈಚೆ ಮೊಲೆ! ಮುಖವಿರುವ ಕೋಣೆಯಲ್ಲಿ ಏನಿದೆಯಂತ ಅತ್ತ ಅವನಿಗೂ ಗೊತ್ತಿಲ್ಲ, ಇತ್ತ ನಮಗೂ ಗೊತ್ತಿಲ್ಲ.
ಏನಿರಬಹುದು?
ಐಲೆಂಡಿರಬಹುದು, ೧೭೦
ಭೂಗೋಳ ಇತಿಹಾಸ ಕುದುರೆಸವಾರ ಕೈಕಾಲಾಳು ಚೇಟಿ ಚಾರ ಮೊಳಕಾಲ ನೂರಿದ ರಾಜಕುಮಾರ ಪರಿಪರಿಯುಪಚಾರ ಪರಿಚಾರ… ಕನವರಿಕೆಯಂತೆ ಆಗ ಈಗ ಅಲ್ಲಿಂದ ಮಾತು ಕೇಳಿಸುವುದುಂಟು. ಬರೀ ಪ್ರತ್ಯಯಗಳು. ಅವನ ಗೊರಕೆ ಹೆಚ್ಚಾದಂತೆ ಅಲ್ಲಿಯ ನಗು ಕೇಕೆ ಗದ್ದಲ ಗಲಾಟೆ ಹೆಚ್ಚುತ್ತದೆ; ಗೊರಕೆ ಬಿಟ್ಟನೋ ಮೊಲೆಗೆ ನವಿರೆದ್ದು ಒದ್ದೆಯಾಗಿ ಸುಸೂಕ್ಷ್ಮ ಆಕುಂಚನ ಪ್ರಸರಣ ಉಕ್ಕುಸೊಕಿಕು ಗರ್ದೀಗಮ್ಮತ್ತಾಗಿ
ಅಬಬನಾ ಕಾ ಅಲ್ಲಿ ಕಾ ಇಲ್ಲಿ
ಎಲ್ಲಿ ನೋಡಿದರಲ್ಲಿ ಚಿಗುರಿರುತ್ತದೆ.
ಯಾಕೆ ವಿಷಯಾಂತರವಾಯಿತೆಂದು ಗೊತ್ತಾಯಿತಲ್ಲ. ಕಾವ್ಯದ ಆರಂಭದಲ್ಲಿ ಮಾಮೂಲು ಬಾಗಿಲು ತಟ್ಟಿದನಲ್ಲ, ಮಾಮೂಲು ಮೊಲೆಬಂದು ಬಾಗಿಲು ತೆರೆಯಿತಲ್ಲ – ಮಾಮೂಲಿನಂತದರ ತುದಿ ಅವನ ಕಿವಿ ತುರಿಸಿ ಮಾಮೂಲು ನಗೆನಕ್ಕು ಮಾಮೂಲು ಒಳಬಂದು ಮಾಮೂಲು ಬಾಗಿಲಿಕ್ಕಿಕೊಂಡ.
ಮಾಮೂಲುಗಳಾಗಿ ರಾತ್ರಿಯಾಗಿ ಮೊಲೆ ಗುಡುಗಿತು: ಕರಿದೇವರೆಲ್ಲಿ? (ಕರಿ ದೇವರೆಂದರೆ ಆ ಕುಟುಂಬದ ಉಪಭಾಷೆಯಲ್ಲಿ ಮೈವಾಡ ತೊಟ್ಟಾಗಿನ ಅವನು ಎಂದರ್ಥ). ಮನಸ್ಸಿರಲಿಲ್ಲ. ಸುಮ್ಮನಾಗಿ ಕೂತು ಮಾಮೂಲಿನಂತೆ ಅಲ್ಲಲ್ಲಿ ಹರಿದ ಮೈವಾಡ ಹೊಲಿದು ರಿಪೇರಿ ಮಾಡತೊಡಗಿದ. ಮೊಲೆ ಮತ್ತೆ ಮತ್ತೆ ಗುಡುಗಿ ಪೀಡಿಸತೊಡಗಿತು. ಎದ್ದುಬಂದು ಮೈವಾಡ ತೊಡಿಸಿತು. ಮೇಲೆ ಕೂತು ನಿಧನಿಧಾ ನ ಹುಪ್ಪಾಹುಮ್ಮಾ ಜೈಬಜರಂಗಾ ಸುರುಮಾಡಿದ.
ಇತ್ತ ಇನ್ನೊಂದು ತಲೆ ಸಿಗರೇಟು ಹೊತ್ತಿಸಿ ಯೋಚಿಸತೊಡಗಿತು:
ಈ ಸಿಗರೇಟು ತಾನು ಯಾವಾಗಲೋ ಸೇದಿದ್ದೆನಲ್ಲಾ! ನಿನ್ನೆ-ಮೊನ್ನೆ- ಬಹುಶಃ ಚಿಕ್ಕವನಾಗಿದ್ದಾಗ-ತನ್ನಜ್ಜ ಮುತ್ತಜ್ಜ-ಹೊಗೆ ಕೂಡ ದಿನನಿತ್ಯದಂತೇ ಹಾರಿ ಇಂಗಿಹೋಯ್ತು. ತನಗೆ ಸಾವಿರಾರು ವರ್ಷ ವಯಸ್ಸಾಗಿರಬೇಕೆನ್ನಿಸಿತು. ತನ್ನ ಮೀಸೆ ಥೇಟು ತನ್ನಪ್ಪನಂತೆ ಅವನ ಮೀಸೆ ಅವನಪ್ಪನಂತೆ ಅವನಪ್ಪನ ಮೀಸೆ ಅವನಪ್ಪನಂತೆ-ಬಹುಶಃ ಈ ಮೀಸೆಯಗುಂಟ ಇಳಿದರೆ ಮೈತುಂಬ ಮೀಶೆಯ ಮೈವಾಡದಂಥ ವ್ಯಕ್ತಿ ಸಿಕ್ಕಬಹುದು. ಆತ ಹೇಳಬಹುದು: ಹೇಗಿದ್ದಿ? ಮದುವೆಯಾಯ್ತ? ಮಕ್ಕಳು ವಂಶೋದ್ಧಾರಕರು? ನಾನೊಂದು ಪಡಿಯಚ್ಚು ಕೊಟ್ಟಿದ್ದೆನಲ್ಲ, ಅದಿನ್ನೂ ಇದೆಯಾ? ಜೋಪಾನವಾಗಿ ಮುಂದುವರಿಸು. ಇರಲಿ ಗೌರವ ಹಿರಿಯರ ಬಗ್ಗೆ ನನ್ನ ಬಗ್ಗೆ ಕುಲದ ಬಗ್ಗೆ ಪರಂಪರೆಯ ಬಗ್ಗೆ-ಹೀಗನ್ನ ಬಹುದಾತ. ಅದಕ್ಕೇ ಅನಿಸುತ್ತದೆ: ತನ್ನ ಕಣ್ಣಿಗೆ ಮೂಗು ನಾಲಗೆಗೆ ಚರ್ಮ ಮನಸ್ಸಿಗೆ ಸಾವಿರಾರು ವರ್ಷ ವಯಸ್ಸು. ಇನ್ನು ಮೇಲೆ ಇತಿಹಾಸ ಬೆಳೆಯುವುದಿಲ್ಲ, ಡಿಕ್ಸನರಿ ಬೆಳೆಯುವುದಿಲ್ಲ. ಅಕ್ಷರಗಳ ಸಂಖ್ಯೆಯೆಲ್ಲಿ ಬೆಳೆದಿದೆ? ಥತ್.
ಕುಟುಂಬ ದೇಶ ಸಮಾಜ ದೇವರು ಹೆಣ್ಣು-ಛೇಛೇ ಈ ಪದಗಳ ಅರ್ಥವೇನು? ಡಿಕ್ಸನರಿಯಲ್ಲಿದೆ ಅಲ್ಲವೆ ? ಜನಗಳೆಲ್ಲ ಡಿಕ್ಸನರಿಯ ಶಬ್ದಗಳ ಹಾಗೆ ಕಾಣುತ್ತಾರೆ. ಡಿಕ್ಸನರಿಯೇ ಇದ್ದ ಮೇಲೆ ಈ ಜನಗಳೇಕೆ ಇರಬೇಕು? ಅಥವಾ ಈ ಜನಗಳಿದ್ದರೆ ಡಿಕ್ಸನರಿಯೇಕೆ ಬೇಕು? ಅಥವಾ ಅವರಿಗೆ ಡಿಕ್ಸನರಿಯ ಅರ್ಥ ಬೇರೆ ಇರಬಹುದೆ? ಅಥವಾ ಇವರಿಗೆ ಲೋಕದಲ್ಲಿ ಮತ್ತು ಡಿಕ್ಸನರಿಯಲ್ಲಿ-ಹೀಗೆ ಎರಡೆರಡು ಅಸ್ತಿತ್ವಗಳಿವೆಯೆ? ಓಹ್ ಡಿಕ್ಸನರಿಯ ಅರ್ಥಕ್ಕೆ ಹುಟ್ಟಿದ ಮನುಷ್ಯರೆಷ್ಟು ಬೋರ್ ಮಾಡುತ್ತಾರಂತ. ಅಥವಾ ಮನುಷ್ಯ ಅಂದರೇನು-
ಸಣ್ಣ ಸೊನ್ನೆಯ ಮೇಲೆ ಥರಥರ ನಮೂನೆ ಬಣ್ಣ
ಬಳಿದು ಊದಿ ಉಬ್ಬಿಸಿ, ಆಮೇಲೆ ಬೇಕಾದರೆ ೨೧೦
ಕೈ ಮೈ ಕಾಲು ಬರೆದು ಕಣ್ಣು ಮೂಗು ಕೊರೆದು
ಶೀತೋಷ್ಣ ಇಲಾಸ್ಟಿಕ್ ಪ್ರಸರಣ ಆಕುಂಚನ
ಚುಂಬನ ಘರ್ಷಣ ಆತನೀತನವಳಿವಳ ಹೆಸರಿಟ್ಟು
ಸಾಮಾಜಿಕವಾಗಿಸಿದರೆ
ಒಪ್ಪಿಕೊಳ್ಳುತ್ತೇವೆ, ಪರರ ಒಪ್ಪಿಸುತ್ತೇವೆ.
ಇದೂ ಡಿಕ್ಸನರಿಗೆ ಹುಟ್ಟಿದ ಅರ್ಥವಲ್ಲವೆ?
ಬುದ್ಧಿವಂತಿಕೆ – ಎಂಥ ಚಿತ್ರಹಿಂಸೆ ಕೊಡುತ್ತದಂತ! ಗಾಯಗಳಿದ್ದಲ್ಲೆಲ್ಲ ಜ್ಞಾಣದ ತಂತು ಹರಿದಾಡುವಂತೆ ಮಾಡುತ್ತದೆ. ಕಾಣಬಾರದಲ್ಲಿ ಗಾಯಗಳು ಕಾಣತೊಡಗುತ್ತವೆ. ನೋಡನೋಡುವುದರಲ್ಲಿ ಅವು ಹುಣ್ಣಾಗಿ ಒಡೆದು ಕೀವು ರಕ್ತ ಬಸಿಯತೊಡಗುತ್ತದೆ. ನಿಜ ಹೇಳಬೇಕೆಂದರೆ ಹುಣ್ಣು ಉಸಿರಾಡುತ್ತದೆ, ಮಾತಾಡುತ್ತದೆ, ತಿನ್ನುತ್ತದೆ, ನಗಬಲ್ಲದು ಕೂಡ ತನ್ನ ಲನೋಡಿ, ಮನೆ ಮಾರಾ ರಸ್ತೆ ಪೇಟೆ ಪುಸ್ತಕ ಜನ ಡಿಕ್ಸನರಿ ನೋಡಿ. ಅದು ಹ್ಯಾಗೆ ಇಷ್ಟೊಂದು ಡುಪ್ಲಿಕೇಟ್ ಪ್ರತಿ ಸಾಧ್ಯವಾಯ್ತು? ಜನಾಂಗಜನಾಂಗ ಹೋಗಲಿ, ದೇಶದೇಶ ಹೋಗಲಿ, ಭಾಷೆಭಾಷೆಗಳಲ್ಲಿ ಕೂಡ ವ್ಯತ್ಯಾಸ ಉಳಿಯದಿದ್ದರೆ ಹೇಗೆ? ಇಂಗ್ಲಿಷ್ ಮಾತಾಡಿದರೆ ಕನ್ನಡದ ಹಾಗೆ ಕೇಳಿಸುತ್ತದೆ. ಕನ್ನಡ ಇಂಗ್ಲಿಷ್ದಂತೆ ಸಂಸ್ಕೃತದಂತೆ ಜರ್ಮನ್ ಚೀನಾದಂತೆ…….. ೨೨೦
ಸಿಗರೇಟು ಸುಟ್ಟು ಬೂದಿಯಾಗಿ ಕೆಳಗೆ ಬಿತ್ತು, ಕೈ ಸುಡಲಿಲ್ಲ. ಯಾಕೆಂದರೆ ಸುಟ್ಟು ಸುಟ್ಟು ಕೈ ದಡ್ಡು ಬಿದ್ದಿತ್ತು. ಮೈವಾಡದ ಕಡೆ ನೋಡಿದ:
ಮೊಲೆಯ ಚೂಪುತುದಿ ಬಾಯೊಳಗಿತ್ತು
ಕೈಯಿಂದ ಕಾಲಿಂದ ತಬ್ಬಿಕೊಂಡಿತ್ತು
ಗಿರಗಿರ ತಿರುಗುತ ಏರುತ ಇಳಿಯುತ
ಜಾರಿ ತೂರಿ ಹಾರ್ಯಾಡಿ ಕುಣಿಯುತ
ತೇಪೆಯ ತೊಗಲಿನ ಬಾಲಿಲ್ಲದ ಕಲಪಿ ೨೩೦
ಮೊಲೆಯ ಸುತ್ತುತಿತ್ತು-ಸೀಪುತ
ಮೊಲೆಯ ಸುತ್ತುತಿತ್ತು ||
ಇದೆಲ್ಲದರ ಅರ್ಥ ಕಂಡುಹಿಡಿಯಲೇಬೇಕೆಂದು ಎದ್ದ. ಹೋಗಿ ಕುಣಿಯುವ ಕೋತಿಯ ಮೈವಾಡ ಕಳಚಿದ. ಮುದ್ದೀ ಮಾಡಿದ. ಬಗಲಲ್ಲಿ ಹಿಡಿದ. ಮಧ್ಯರಾತ್ರಿಯಾಗಿತ್ತು ಹೊರವಂಟ. ಮೊಲೆ ಗುರ್ ಎಂದಿತು. ದಾದು ಮಾಡದೆ ಹೊಂಟ. ಸಿಕ್ಕಾಪಟ್ಟೆ ಕಿರುಚುತ್ತ ಬೆನ್ನುಹತ್ತಿತು. ಓಡಿದ. ರಸ್ತೆಯಲ್ಲಿ ನಿಂತಿದ್ದ ಎತ್ತಿನ ಬದಿ ಅಡಗಿದ. ಎತ್ತು ಓಡತೊಡಗಿತು, ಅದರೊಂದಿಗೆ ಇವನೂ ಓಡಿದ. ಓಡಿದಲ್ಲೆಲ್ಲ ಗೋಡೆಯಿತ್ತು. ಗೊಡೆಯೆಂದಮೇಲೆ ಅದಕ್ಕೊಂದು ಬಾಗಿಲಿರಲೇಬೇಕು. ಎಲ್ಲಿ ಬಾಗಿಲು? ಮುಂದಿರಬಹುದು. ಓಡಿದ. ಆ ಮುಂದಿರಬಹುದು, ಓಡಿದ ಓಡಿದ ಓಡಿದ. ಅದೋ ತುದಿ ಮೊದಲಿಲ್ಲದ ಭಯಂಕರ ಗೋಡೆ. ಈ ಗೋಡೆಯನ್ನು ಈ ಮೊದಲು ಗಮನಿಸಲೇ ಇಲ್ಲವಲ್ಲ! ಓಡುತ್ತೋಡುತ್ತ ಗೋಡೆ ಒಡೆಯುವುದು ಸಾಧ್ಯವೇ ಎಂದು ತಲೆಯಿಂದ ಹಾದ. ನೋವಾಯಿತಷ್ಟೆ. ಮತ್ತೆ ಓಡಿದ. ಓಡಿ ಓಡಿ ಬೆಳಗಾಯಿತು. ನೋಡಿದರೆ ಎಲ್ಲಿದ್ದರೋ? ಅಲ್ಲೇ, ಮನೆ ಮುಂದೇ ಇದ್ದರು. “ಹಾಗಿದ್ದರೆ ಬೆಳತನಕ ಓಡಿದ್ದು ಸುಳ್ಳೆ? ಏನಿದರ ರಹಸ್ಯ?” ಎಂದ- ೨೪೦
ಹೇಳಿದರ ಕತಿಗಿತಿ ಅಂದೀರಿ ದೇವರೂ,
ಹೇಳಲೆ?-ನಾ ಬಲ್ಲೆ-
ನೀವು ಹೊಗಳುವ ಕೀರ್ತಿಗೆ ಅವಾರ್ಡಿಗೆ
ಹೊದಿಸುವ ಶಾಲಿಗೆ ಅಂಟಿಸುವ ಪದ್ಮಶ್ರೀಗೆ
ತಕ್ಕ ಹಾಗೆ ಸ್ವಾಮೀ ಈ ತನಕ ಬದುಕಿನ ೨೫೦
ಮೈಮ್ ಮಾಡಿದ್ದೇನೆ.
ನನ್ನ ನಗೆ ಜೋಕು ಮಾತು ಸಂಸ್ಕೃತಿ ನಾಗರೀಕತೆ
ಎಸ್ನೋಗಳನ್ನೆಲ್ಲ ಸಾಮಾಜಿಕವಾಗಿಸಿದ್ದೇನೆ,
ನಿಮ್ಮ ಸಣ್ಣ ಜೋಕಿಗೆಷ್ಟೊಂದು ನಗೆ ನಕ್ಕುಕ
ಸಕ್ಕರೆಯ ಭ್ರಾಂತಿಗಳನುಂಡುಂಡು ತೇಗಿದ್ದೇನೆ,
ಕುಣಿದಿದ್ದೇನೆ ಬಣ್ಣ ಬಳದತ್ತಿದ್ದೇನೆ-
ಸಾಕು
ನಾನೀಗ ನನ್ನ ಖಾಸಗಿಯನ್ನು ಕಾಣಬೇಕು.
ಮಾತಾಡಬೇಕು ಅದರೊಂದಿಗೆ ನಿಜ ನೋಡಬೇಕು. ೨೬೦
ಶಬ್ದವೇ ನನ್ನ ಶಬ್ದವೇ
ತೋರು ನಿಜವನ್ನ
ನನ್ನಳತೆಯ, ಮನುಷ್ಯನಳತೆಯ ಸತ್ಯವನ್ನ.
ಓಡಿದ್ದರ ರಹಸ್ಯ ಕೇಳಿದ್ದನಲ್ಲ-ಎತ್ತು ಹೇಳಿತು:
“ಏನ ಹೇಳಲಿ ಸಾಬರs ಹೆಂಗ ಹೇಳಲಿ? ಅತ್ತರ ಅಗ್ಗ, ನಕ್ಕರ ನಗ್ಗೇಡ, ನಗೋವಾಗೆಲ್ಲ ಕಣ್ಣಾಗ ನೀರ ತುಂಬತಾವ, ಏನ ಹೇಳಲಿ ಸಾಬರs ಹೆಂಗ ಹೇಳಲಿ?
ಅಂದಕೊಂಡಿದ್ದೆ: ನಾ ಗಾಣದೆತ್ತು, ನನ್ನ ಯಾರೋ ಹೂಡ್ಯಾರ, ಕಣ್ಣ ಕಟ್ಯಾರ, ಸುಳ್ಳಲ್ಲ ಖರೆಖರೆ ನಂಬಿ ತಿರುಗಿದೆ, ತಿರುಗಿದೆ, ತಿರುಗೇ ತಿರುಗಿ ಗುದಮುರಿಗಿ ಹಾಕಿದೆ. ಅಂದಕೊಂಡಿದ್ದೆ: ತಿರುಗೋದಕ್ಕೊಂದ ಗುರಿ, ಗೊತ್ತ ಐತಿ. ನಾವು ರಾತ್ರಿ ನೋಡಿದಿವಲ್ಲ; ಆ ಗೋಡೆಯಾಚೆ ನನ್ನ ಹೂಡಿದ ಗಾಣಿಗ್ಯಾ ಇದ್ದಾನ. ಆದs ನನ್ನ ಗುರಿ, ಅಲ್ಲಿ ಬರೀ ಹಸುರು ಅಥವಾ ಎಲ್ಲಾ ಪ್ರಶ್ನದ ಉತ್ತರ ಅವ. ಈಗ ನನ್ನ ಮೈಮ್ಯಾಲ ನೊಣ ಕೂರತಾವ ನೋಡ್ರಿ ಆ ನೊಣಕ್ಕ ಅಲ್ಲಿ ಜಾಗಾನs ಇಲ್ಲ. ಅಥವಾ ನೊಣ ಇರಬಹುದೋ? ನೊಣಂ ಇದ್ದರ ಹುದಲ ಖಾತ್ರಿ. ಗಾಣಿಗ್ಯಾನ ಏಟ ಸಹಿಸಬಹುದು; ಈ ನೊಣ ಮಾತ್ರ ಸಹಿಸೋದು ಸಾಧ್ಯs ಇಲ್ಲ ತಗೀರಿ. ನೊಣ ಅಂದರ ಅಂತಿಂಥ ನೊಣ ಏನ್ರಿ? ಅವುಗಳ ಮೋತಿಗೆ ಕನಿಷ್ಠ ಪಕ್ಷ ಜೋಡ ಸೂಜಿ ಇರಬೇಕು. ಇವೆಂಥಾ ಜಾಣ ನೊಣ ಗೊತ್ತೇನ್ರಿ? ಮೊದಮೊದಲು ಸಣ್ಣಾಗಿ ಚುಚಿ ಚುಚ್ಚಿ ಸಣ್ಣ ಅಕ್ಕೀಕಾಳಿನಷ್ಟು, ಆಮ್ಯಾಲ ತಾವs ಹೊಕ್ಕ ಹೊರಬರೋವಷ್ಟು ಹುಣ್ಣ ಮಾಡಿ ಹಾರ್ಯಾಡತಾವ. ಮಾಡಿದ ತೂತನ್ನ ಸ್ವಂತಕ್ಕೆ ಮನಿಮಾಡಿಕೊಂಡು ಮರಿಹಾಕಿ ಮೂರು ಸಾಕಲು ಎರಡು ಬೇಕಿನ ಚಿಕ್ಕ ಚೊಕ್ಕ ಸಂಸಾರ ಮಾಡಿಕೊಂಡು ಬದಕತಾವ. ನಾನೇನೂ ಸುಮ್ಮನಿರೋಣಿಲ್ಲರಿ ಮತ್ತ; ಬಾಲದಿಂದ ಹೊಡಿತೀನಿ. ಹೊಡದಾಗೊಮ್ಮಿ ಸಾಯತಾವ, ಹಾರ್ಯಾಡತಾವ ಮತ್ತ ಬರತಾವ-ಛೇಛೇ ಈ ಸಂಸಾರಗಳಿಂದ, ನೋಡ್ರಿ ಸಾಹೇಬರ ನನ್ನ ಮೈಚರ್ಮ ಈಗ ಗೋಣೀ ಚೀಲಧಾಂಗ-ಒಣಗಹಾಕಿದ ಮೀನ ಬಲೀ ಹಾಂಗ ಆಗೇತಿ ನೋಡರಿ. ಬೇಕಾದರ ಜಿದ್ದ ಕಟ್ಟಿರಿ, ನನ್ನ ಮೈಮ್ಯಾಲ ಸಾವಿರ ಸಂಸಾರ ಅವs ನೋಡ್ರಿ. ಯಾಕಂದರ ನಡೀಲಿ, ಓಡಲಿ ಕನಿಷ್ಠ ಒಂದ ಸಾವಿರ ಕಡೆ ನನ್ನ ಮೈ ನೋಯತೈತಿ! ೨೮೦
ಇದಕ್ಕಲ್ಲರಿ ನನಗೆ ಸಿಟ್ಟ ಬರೋದು-ನನ್ನ ಮೈಮ್ಯಾಲ ಕೂರತಾವ, ಕೂರಲಿ; ನನ್ನ ಮಾಂಸ ತಿಂತಾವ, ತಿನ್ನಲಿ-ಆದರ ಅಸಹ್ಯ ಕಿರಚತಾವ ನೋಡ್ರಿ-ಛೇಛೇ ಶಾಸ್ತ್ರೀಯ ಸಂಗೀತಕ್ಕ, ಸುಬ್ಬಲಕ್ಷ್ಮೀ ಪೂರ್ವಿ, ಛಾಯೋನಟದ ಜೋಶಿ, ಮನ್ಸೂರರ ಭೈರವಿ, ಖಾನರ ಗುಣಕಲಿಗೆ ತಲಿಹಾಕಿದ ಮಗಾ ನಾನು ಅಂದರ ನಾ ಹೇಳೋದಿಷ್ಟು ಸಾಹೇಬರ: ನೋವಿಗೇನೂ ಅರ್ಥ ಇಲ್ಲಂತೀರೇನು? ೨೯೦
ನಿನ್ನಿ ಮತ್ತ ಕಾಡಿಗೆ ಹೋಗಿದ್ದೆ: ಇಲ್ಲೆ ಸನೇದಾಗೊಂದ ಕಾಡ ಐತಿ, ಸಡವಾದಾಗ ನೀವೂ ಒಮ್ಮಿ ಹೋಗಿ ಬರ್ರಿ ಬೇಕಾದರ. ನೀವು ಭಾಳಂದರ ಟ್ರೇನಿನಾಗ ಕೂತಾಗ ಕಾಡ ನೋಡಿದವರು. ನೆಹರೂ ಕೋಟಿನ ಮ್ಯಾಲ ಮಾತ್ರ ಹೂ ನೋಡಿದವರು. ನೀವು ಹೆಂಗಸರಿಗೆ ಹೋಲಿಸೋ ಬಳ್ಳಿ, ಅವೆಲ್ಲ-ಈ ಕಾಡಿನಲ್ಲಿ ಅಲ್ಪ. ನೆನಪಿನಾಗಿಡರಿ: ಮರ ನುಂಗೋ ಬಳ್ಳಿ, ಹುಲಿ ತಿಂಬೋ ನವಿಲು, ಅಯ್ಯೋ ಇರವೀಯಂಥಾ ಇರಿವಿಗೆ ಸಿಟ್ಟ ಬರತೈತ್ರಿ-ಈ ಕಾಡಿನಾಗ!
ನೀವು ಒಮ್ಮಿ ಹೊಕ್ಕಿರೋ ನಿಮಗ ಅನ್ನಸ್ತದ: ಈ ಕಾಡು ನನಗ ಮಾತ್ರ ತನ್ನ ರಹಸ್ಯ ತೋರಸ್ತದಲ್ಪ! ಅಂತ. ಆದರ ಅದಲ್ಲ, ಖರೇ ಅಂದರ ಅದು ಒಳಗೊಳಗs ಅಂದಕೊಳ್ಳತದ. ಮೂರ್ಖ, ನಾ ಜಗತ್ತಿನಾಗಿದ್ದದ್ದೆಲ್ಲಾ ಮುಟ್ಟಿದವಳು, ಅಪ್ಪಿಕೊಂಡವಳು. ಅವರಿವರೆನ್ನದೆ ಎಲ್ಲರಿಗೂ ತೆರೆದಿಟ್ಟುಕೊಂಡವಳು. ನೀ ಕಂಡು ಕೇಳರಿಯದ ಪಾಪ ಮಾಡಿದವಳು, ಪುಣ್ಯ ಮಾಡಿದವಳು-ಅಂತ. ಅಷ್ಟs ಅಲ್ಲರಿ=ತನ್ನ ಮೀಸಲ ಒಡಪದ ಅರ್ಥ ನಿಮಗ ಮಾತ್ರ ತೆರೆದಿಟ್ಟಾಂಗ, ನಿಮ್ಮನ್ನ ಬಿಟ್ಟ ಉಳದವರನ್ನೆಲ್ಲಾ ನೋಡಿ ಅಪಹಾಸ್ಯ ಮಾಡಿದಾಂಗ ನಾಟಕ ಮಾಡತೈತಿ. ನೀವು ಈ ನಾಟಕ ನಂಬಿದಿರೋ ಕಾಡಿನಾಚೆ ಇರೋದೆಲ್ಲ ಮಾಯೆ. ಎಲ್ಲಿ ತೊಂದರೆ ಅಂದರ-ನೀವೆಷ್ಟು ಆಳಕ್ಕಿಳಿದರೂ ಇದರ ತಳಿ ಮುಟ್ಟಿಲ್ಲ ಅಂತ ಅನ್ನಿಸಿ ಇಳಿಯೋ ಹಂಬಲ ಬರಬರತ ಜಾಸ್ತಿಯಾಗಿ ನೀವs ಕಾಡಾಗತೀರಿ, ಕಾಡs ನೀವಾಗತೀರಿ. ಆಯಿತಲ್ಲ, ನಿಮ್ಮನ್ನೀಗ ಕಾಡಿನಿಂದ ಬೇರ್ಪಡಿಸೋದಂದರ ನಿಮ್ಮನ್ನ ನೀವs ಖೂನಿ ಮಾಡಿಧಾಂಗ! ಏನಂತೀರಿ?
ಆದರ ಖರೋಖರಂದರ, ಸಾಹೇಬರ, ಈ ಕಾಡಿಗೆಷ್ಟು ಮಿತಿ ಅವಗೊತ್ತೇನ್ರಿ? ಒಂದ ದಿನಧಾಂಗ ಇನ್ನೊಂದ ದಿನಾ ಇರೋಲ್ಲಾಂತ ಅನ್ನಸ್ತದಲ್ಲ – ಅದೆಲ್ಲಾ ಸುಳ್ಳರಿ ಸಾಹೇಬರ ಸುಳ್ಳು. ಅದರ ಕಲರ ಕಾಂಬಿನೇಶನ್ ಭಾಳ ಕಮ್ಮಿ. ಅಷ್ಟಾಗಿ ಪ್ರಗತಿ, ಬದಲಾವಣೆ ಅಂತೀರಲ್ಲ-ಸಾಧ್ಯs ಇಲ್ಲ. ಸಸಾರ ಮಾಡಿ ಹೇಳಲ್ರಿ? ಮೂರು ಋತುಮಾನ ಅವ. ಈ ಕಾಡಿನ ಹತ್ತಿರ ಮೂರ ಬಣ್ಣ ಅವ. ಒಂದೊಂದು ಋತುಮಾನಕ ಒಂದೊಂದ ಬಣ್ಣ. ಒಮ್ಮೊಮ್ಮಿ ಅದಲಿ ಬದಲಿ, ಎರಡೆರಡು ಅಥವಾ ಹೆಚ್ಚು-ಒಟ್ಟು ಹದಿನೆಂಟು; ಅಷ್ಟ! ಹಿಂಗ್ಯಾಕಂದ್ರಿ? ಈ ಕಾಡಿಗೆ ರಿಪೀಟ್ ಮಾಡೋದs ಫ್ಯಾಶನ್ನರಿ!
ನನಗೆ ಚಿಂತಿ ಕಡಿಮಿ ಅಂತ ತಿಳೀಬ್ಯಾಡ್ರಿ. ಇಲ್ಲಿ ನೋಡ್ರಿ, ನನ್ನ ಕೊಂಬು ಯಾಕ ಮುರದಾವ ಹೇಳ್ರಿ? ಈ ಗೋಡೆಯಾಚೆ ಏನೋ ಇರಬೇಕಂತ ತಿರುಗಿದೆ ಬಾಗಲs ಸಿಗಲಿಲ್ಲ, ಸಿಟ್ಟಿಗೆದ್ದ ಗೋಡೆ ಒಡೆಯೋಣಾಂತ ಹಾದೆ ಹಾದೆ. ಬಂತೇನು? ಕೊಂಬು ಮುರಕೊಂಡೆ ಅಷ್ಟೆ. ಈ ಗೋಡೆಯಾಚೆ ಏನೈತಿ ಅಂತ ಗೊತ್ತೇನ್ರಿ? ಖಾಲಿ! ಆ ಖಾಲಿಗೆ ಸಾಂಪ್ರದಾಯಕವಾದ ಹೆಸರೇನು ಗೊತ್ತಾ? – ದೇವರು! ನನಗೆ ಈಗ ಅನಿಸೋದಂದರ ಇಷ್ಟ: ನಾನೂ ದೇವರs ಸಾಹೇಬರ, ಆದರ ನಿಮ್ಮರ್ಥದೊಳಗಲ್ಲ-ಹೋಗಲಿ, ನಿಮ್ಮ ದೇವರೂ ನಿಮ್ಮ ಡಿಕ್ಸನರಿ ಬುದ್ದಿಗಿ ಹುಟ್ಟಿದವನು! ಹೌದಂತೀರೋ? ಅಲ್ಲಂತೀರೋ?
ನಿನ್ನಿ ಓಡತ್ತಿದ್ದಿವಲ್ಲ-ಆಗ ನನಗೆಷ್ಟು ನಾಚಿಕಿ ಬಂತ ಗೊತ್ತೇನ್ರಿ? ಮೂಗ ಕಳಚಿ ಬಿದ್ದ ಬಿಟ್ಟಿತಲ್ಲಾ೧ ನೋಡ್ರಿ ಇನ್ನs ನೆತ್ತರ ಸೋರತೈತಿ! ಹೌದರಿ? ಏನ ಹೇಳಲಿ ಸಾಹೇಬರ, ಹೆಂಗ ಹೇಳಲೀ?”
ನಿಜ. ಎತ್ತಿಗೆ ಮೂಗಿರಲಿಲ್ಲ. ಮನೆಗೋಡಿ ಬಂದು ಕನ್ನಡಿ ನೋಡಿಕೊಂಡ. ಹೇಳಿದರ ಕತಿಗಿತಿ ಅಂದೀರಿ ದೇವರೂ ಅವನಿಗೂ ಮೂಗಿರಲಿಲ್ಲ! ಅದರ ಸ್ಥಳದಲ್ಲೊಂದು ಹುಣ್ಣಿತ್ತು. ಬಾಯೊಂದಿಗೆ ಅದೂ ಸೇರಿ ದೊಡ್ಡ ತೂತು ಬಿದ್ದಿತ್ತು! ಇನ್ನು ಮೇಲೆ ಹೊರಗಡೆ ಹೋಗೋದು ಹೇಗೆ?- ಎಂದು ಮೂಗಿನ ಮೇಲೆ ಕೈ ಇಟ್ಟುಕೊಂಡೇ ಹೊರಗಡೆ ನೋಡಿದ-ಅರೆ ಯಾರಿಗೂ ಮೂಗಿಲ್ಲ! ೩೩೦
Leave A Comment