ಮುಗಿಲ ಮುತ್ತುಗಳನ್ನು ಕರಿಮೋಡ ಚಾಣಿಸಿತು,
ನೆಲದ ಚಿಪ್ಪೊಳು ಬಿತ್ತು , ಅಲ್ಲಿ ಇಲ್ಲಿ.
ಧರೆಯೆದ್ದು ಹಸಿರ ಕಣ್ಣರಳಿಸಿತು ಬಯಲಿನಲಿ,
ಬೀಳು, ಆ ಈ ಕಂಟಿ, ಟೊಂಗೆಗಳಲಿ.

ಮನೆಯ ಕೈತೋಟದಲಿ ನಂದನವು ತೊದಲಿತೋ
ಮಳೆಬಿಲ್ಲು ಅರಳಿದುವು ಬೇಲಿಯಲ್ಲಿ.
ಹಸಿರೆಲೆಯ ತುದಿಗೆ ಹೂಬಣ್ಣ,  ಬತ್ತಿಯ ಬೆಳಕು;
ಜೋಕಾಲಿ ಜೀಕಿತೋ ದೀಪಾವಳಿ.

ತೊಯ್ದ ಗದ್ದೆಯ ತಲೆಯ ಬಾಚಿ ಹೆಣೆಯಿತು ಗಾಳಿ,
ಕುಣಿದಾಡಿತೋ ಬಿದಿರ ಮೈಯ ತುಂಬಿ.        ೧೦
ಹರೆಬಂತು ಝರಿತೊರೆಗು, ಹರಿಗೂ, ಚರಂಡಿಗೂ ,
ಬಿಳಿಮೋಡ ನಕ್ಕವೋ ಬುರುಗು ತುಂಬಿ.

ಗುಳ್ಳವ್ವ ಉರುಳಾಡಿ ಊರೊಳಗೆ ಬಂದಳೋ:
ಹುಲುಸು ಕನವರಿಸಿಹುದು ಹೊಲವ ತೂಗಿ.
ಒರಟು ಮೂಗನು ತಿರುವಿ ರಂಗೋಲಿ ಬಿಡಿಸಿತೋ
ಚದುರಂಗಿ ಅಲ್ಲಲ್ಲಿ ಕೆಂಪು ಹಳದಿ.

ಬದಿಯ ಗುಡಿಸಲಿನಲ್ಲಿ ಅಳುವ ತೊಟ್ಟಿಲವೇಕೊ
ಚಿಗುರುನಗೆ ನಕ್ಕು ಚಿಲಿಪಿಲಿಸಿತಂದ.
ಮೊಲೆಯೂಡಿ ಅಂಗಾಲ ತೊಳೆದ ತಾಯೆದೆಯೊಲವು
ಜೋಗುಳವ ಹಾಡಿತ್ತು: ಕುಡಿಯೊ ಕಂದ!        ೨೦