ಮುಂಗೋಳಿ ಕೂಗ್ಯಾವು ಮೂಡsಣ ಬೆಳಗಿ
ತಂಗಾಳಿ ಬೀಸ್ಯಾವು ತವರಿ ಹೂವರಳಿ
ಹೂಹೂವಿನೊಳಗೊಂದು ಕೈಲಾಸವರಳ್ಯಾವು
ಕೈಲಾಸ ಕೈಮುಗಿದು ಭೂಲೋಕಕಿಳಿದಾವು
ಸಾವಿರದ ಶರಣವ್ವ ಕರಿಮಾಯಿ ತಾಯೆ ||

ಬಂಡಾರ ಮೈಯವಳೆ ಬಂಗಾರ ಮುಖದವಳೆ
ಸೂಸುನಗೆಯಲಿ ಜಗದೆ ಲೇಸ ತುಳುಕಿಸಿದವಳೆ
ಒಲದ ಕೂಡಿದಿ ತಾಯಿ ಕುಲದಾಚೆಯವನ
ಬಸರಾಗಿ ಎದುರಿಸಿದಿ ದೇವ ದಾನವರನ್ನ
ಈರೇಳು ಭುಜದವರ ಏಳೇಳು ಶಿರ ತರಿದು    ೧೦
ಕೊರಳೀಗಿ ಹೂಹಾರ ಧರಿಸಿಕೊಂಡವಳೇ
ಸಾವಿರದ ಶರಣವ್ವ ಕರಿಮಾಯಿ ತಾಯೇ||

ಮೂರೂ ಲೋಕಕ ಅಧಿಕ ನಿನ್ನ ಕಾರಣಿಕ
ಮುಖ್ಯರ ಶಿಖಿ ಹಿಡಿದು ಹಾಕೀದಿ ನೆಲಕ
ಗುಂಡ ತೇಲಿಸಿದೆವ್ವ ಬೆಂಡ ಮುಳುಗಿಸಿದಿ
ಗಂಡಗಂಡರನೆಲ್ಲ ಹೆಂಡಿರ ಮಾಡಿ
ಹೆಂಡೀರ ಭಂಡಾಟಕೆದುರಾಗಿ ನಿಲ್ಲsದೆ
ರಂಡೀ ಹುಣಿವೀ ದಿನ ಮಿಂಡ್ಯಾದೆ ತಾಯೇ
ಸಾವಿರದ ಶರಣವ್ವ ಕರಿಮಾಯಿ ತಾಯೇ ||

ಬಾಗೀದ ಭಕ್ತರಿಗಿ ಬೇಡಿದ್ದ ಕೊಟ್ಟವಳೆ
ಗೆಜ್ಜೀಕಾಲಿನ ಮಗನ ಬಂಜೀ ಉಡಿಗಿಟ್ಟವಳೆ
ಕಲ್ಲೀನ ಎದೆಯೊಳಗ ಹುಲ್ಲು ಚಿಗರಿಸಿದವಳೆ
ಬೇಲೀಯ ಮುಳ್ಳೀಗೆ ನೀಲೀ ಹೂ ಕೊಟ್ಟವಳೆ
ಬೆಣ್ಣಿ ಸುಣ್ಣದ ಗುರುತ ತೋರೀಸಿ ಕೊಟ್ಟವಳೆ
ಸುಣ್ಣsದ ನೀರಾಗ ಜೀವಾ ಕೊಟ್ಟವಳೆ
ಸಾವಿರದ ಶರಣವ್ವ ಕರಿಮಾಯಿ ತಾಯೇ||