ಸ್ವಂತ ಚಿತ್ರ ಬರೆಯೋದು ಕಷ್ಟವಲ್ಲ ಮಿತ್ರಾ:
ಚೂಪಂಚಿನ ಕುಂಚ ತಗೋ, ಬಳಿಯಿದ್ದಷ್ಟು ಬಣ್ಣ ತಗೋ,
ತಗೋ ಕಾಗದ ದಪ್ಪ, ಉತ್ತರಕ್ಕೆ ಮುಖಮಾಡಿ ಕೂತುಕೊ
ಕೆಳಗಿನೆರಡೂ ಮೂಲೆ ಹಸಿರು ನೀಲೀ ಬೆರಸಿ
ಸಾಗರದ ನೀರು ಬರೆ.
ಮಹಾಸಾಗರದ
ಕರಾವಳಿಗೆರಡು
ಮೇರೆಗಳ ಗೆರೆ ಗೆರೆ ಬರೆದರೆ
ಅದೇ ಜಂಬೂದ್ವೀಪ! ಹಾ ಭರತವರ್ಷ!
ತೆಂಕಣದ ಶ್ರೀರಾಮಕ್ಷೇತ್ರ ಬೊಡ್ಡಿ ಯಾಗೋ ಹಾಗೆ, ೧೦
ಮೇಲಿನ ಬಡಗಣ ಹಿಮಾಚಲ, ಎಡ ಬಲ ಕಾಗದ-
ದಂಚಿನ ತನಕ
ಟೊಂಗಿ ಟಿಸಿಲು ರೆಂಬೆ ಕೊಂಬೆ ದಾಂಗುಡಿಯಿಡಲಿ
ಪಾರಂಬಿಯಿಳಿಬಿದ್ದಿರಲಿ ನೇಣಿನ ಥರ
ಸಾವಿರ ವರ್ಷದ ಸನಾತನ ಮರವಯ್ಯಾ
ಹೆಸರಿನ ಗುಟ್ಟು ಗೊತ್ತಿಲ್ಲದೆ ಬೇರುಬಿಟ್ಟಿದೆ
ಕೆಳಗೆ ಪಾತಾಳಕ್ಕೆಧ!
ಮಧ್ಯದ ಅಯೋಧ್ಯೆಯೊಂದಿದೆಯಲ್ಲ-
ಅಲ್ಲೊಂದು ನರಮಂಡಲದ ತುದಿ ಮೊದಲು
ಹರಿಹರಿದು ಸೊರಗಿ ಮತ್ತೆ ಸೇರುವ ಹಾಗೆ; ೨೦
ಅದೊಂದು
ಬಗೆ ಕಾವ್ಯದ ಕೇಂದ್ರ ಪ್ರಜ್ಞೆಯ ಹಾಗೆ-
ಕರಿಗೆರಿಯ ಕಬ್ಬಿಣಸಳಿಯ ಪಂಜರ ಬರೆ, ಆದರೆ
ತಿಳಿದಿರಲಯ್ಯ ಗೆರೆಯ ಕರ್ವುಗಳಲ್ಲಿ
ಲಿರಿಸಿಜಂ ಇರಲಿ,
ಪಂಜರದ ಬಾಗಿಲು ತೆರೆದಿರಲಿ-
ಈಗ ಬರಬೇಕಷ್ಟೆ ಹಕ್ಕಿ; ಕಾದಿರು ಸ್ವಲ್ಪ-
ಈಗ, ಇಂದಿಲ್ಲ ನಾಳೆ, ಯಾವಾಗ ಬೇಕಾದಾಗ
ಬರಬಹುದಯ್ಯ ಹಕ್ಕಿ-
ಬರೆ ಮತ್ತೆ ಈಗಷ್ಟೆ ಸೂರ್ಯಾಸ್ತವಾಗಿ ೩೦
ಎಡಗಡೆ ಆಕಾಶಕ್ಕೆ ರಂಗೇರಿಸು ಒಂದಿಷ್ಟು:
ಹಕ್ಕಿ ಹಾರಿ ಬರುವ ಹೊತ್ತು.
ಹಕ್ಕಿ ಬರಬಹುದು, ಬರುತ್ತಲ್ಲ?-ಬಂದರೆ-
ತೆಪ್ಪಗಿರು, ಒಳ ಹೊಗಲಿ ಹಕ್ಕಿ, ಹೊಕ್ಕೊಡನೆ
ಅವಸರದಲ್ಲಿ ಒಂದೆರಡು ಕರಿಗೆರೆಯೆಳೆದು
ಪಂಜರದ ಬಾಗಿಲು ಮುಚ್ಚು.
ನೆಪ್ಪಿರಲಯ್ಯ, ಹಕ್ಕಿಗೆ ನಿನ್ನ ಕುಂಚ ತಾಗದ ಹಾಗೆ
ನೋಡಿಕೊ,
ಆ ಮೇಲೆ-
ಲಯದ ಒಂದು ಬಗೆ ಖುಶಿಯ ಒಂದು ಥರ ೪೦
ರಸಾನುಭಾವದ ಭಾವಾಭಿನಯದದೊಂದು ಬಗೆಯ
ತುಡಿವ ಮಿಡಿವ ಜೀವವರಸಾಯನ
ಪಂಜರದ ಸುತ್ತ, ಹಕ್ಕಿ ಆಶಿಸುವಂಥ:
ಬಣ್ಣದ ಹೆಸರಿಗೇನಂತೆ ಬರ? ಬರೆ ಹಾಡನುಕ್ಕಿಸುವಂತೆ
ಹಕ್ಕಿ-ಹಾಡಬಹುದು, ಹಾಡುತ್ತಲ್ಲ?-ಹಾಡಿದರೆ-
ಸರಿ ನಿನ್ನ ಹೆಸರು ಆಚಂದ್ರಾರ್ಕ! ಹಾಡದಿದ್ದರೆ ನೋಡು
ಕೆಂಪು ಬಣ್ಣದಲದ್ದಿ ಅದರ ಚುಂಚದ ನಡುವೆ
ಕುಂಚವಿಡು, ಬಾಯ್ಬಿಡಿಸು-
ಬಾಯ್ದೆರೆದರೆ ಹುಣ್ಣಿನ ಹಾಗೆ ಕಾಣಿಸುವುದು ಸಹಜ ೫೦
ಇಲ್ಲಾ ನಿನ್ನ ಕೈ ಅಲುಗಿ ಹುಣ್ಣಾಗಿರಬೇಕು.
ಈಗ ಹಕ್ಕಿಗೆ ಗೊತ್ತಾಗದಂತೆ ಮೆತ್ತಗೆ
ಬಾಯ ಹುರ್ಣಣಿನಲ್ಲಿ ಕುಂಚ ಅದ್ದಿ
ಚಿತ್ರದ ಬಲಗಡೆ ಕೆಳಗೆ ಮೂಲೆಗೆ
ನಿನ್ನ ಹೆಸರು ಬರೆ-
ಅಷ್ಟೆ.
Leave A Comment