ಹಿಮದಾಚೆ ಸೀಮೆಯಿಂದೀಗ ತಾನೇ ಬಂದೆ
ತಂದೆ ಹಬ್ಬದ ಸುದ್ದಿ; ಶರಣು ಸ್ವಾಮಿ.
ಆ ಕಡೆಯ ಜನ ಕುಶಲ , ಕ್ಷೇಮ, ಮಳೆ ಬೆಳೆ ಚೆನ್ನ
ಇನ್ನು ಪರವಾಯಿಲ್ಲ; ಖುಶಿಯಿಂದಿರಿ.

ಅಲ್ಲಿರುವ ನೆಲ,‘ನೀರು ಹಳದಿ, ಮುಗಿಲೂ ಹಳದಿ,
ಜನ ನಕ್ಕರೂ ಹಳದಿ, ಏನು ಮಂದಿ!
ಸುಳ್ಯಾಕೆ ಹೇಳೇನು, ಅವರು ನಕ್ಕಾಗೊಮ್ಮೆ
ಕಣ್ಣು ತುಳುಕುವ ನೀರು, ಅದೂ ಹಳದಿ!

ಕಂಡೆ ಮಾವರ ಮಾವ ಮಾವೋತ್ಸೆ-ತುಂಗರನು
ಕ್ಯಾಲೆಂಡರಿನ ಶಿವನ ಹಾಗೆ ತೇಜ!               ೧೦
ತೆರೆದ ಪುಸ್ತಕದೊಳಗೆ ಮಲುಖ ಹುಗಿದು ಧ್ಯಾನಸ್ಥ;
ಹಿನ್ನೆಲೆಗೆ ಹಳದಿ ಪ್ರಭೆ-ಎಷ್ಟು ಸಹಜ!

ಹರಿದ ಹುಬ್ಬಿನ ಕೆಳಗೆ ಹೊಳೆವ ನೀಲೀ ಕಣ್ಣು;
ಒಂದು ನಕ್ಕರೆ, ಒಂದು ಸುಮ್ಮನಿತ್ತು.
ಕೆನ್ನೆಗಳ ವಿನ್ಯಾಸ , ಖರೆ ಹೇಳಲೇ ಸ್ವಾಮಿ?-
ನಮ್ಮ ಗ್ಲೋಬುಗಳೆಲ್ಲ ಯಃಕಶ್ಚಿತ!

ಮುಂದೊಡೆಯ ಮೇಲೊಂದು ಚೆಂದೊಳ್ಳೆ ಪಾರಿವಾಳ
ಬೆನ್ನಲಾಡುವ ದೊರೆಯ ಒರಟು ಬೆರಳು,
ಈಗಲೋ ಆಗಲೋ ಸೋ ಎನ್ನಲೋ, ಇಲ್ಲ
ಅದರ ಕಣ್ಣೊಳಗಿತ್ತು ನನ್ನ ನೆರಳು.                                        ೨೦

ತಲೆ ತುರಿಸಿ ಕಾಲಿಂದ ನೆಲ ಗೀಚಿ ಕೆಮ್ಮಿದೆನು
ಮೈಯೆಲ್ಲ ಕೈಯಾಗಿ ಮುಗಿದು ನಿಂತೆ.
ಏನೇವಚವೇದಗಾಂಧಿಕಸಂಸ್ಕೃತಿಅಂತ
ಭಾರತದ ಹರಿಕಥೆಯ ಹಾಡಿಬಿಟ್ಟೆ.

ಇಡೀ ಗ್ಲೋಬು ನಕ್ಕಂತೆ ನಗೆ ಸೂಸಿದರು ಸ್ವಾಮಿ
ಬಲಹುಬ್ಬು ಹಣೆಗೇರಿ ಗಂಟಾಯಿತು.
ಕೆನ್ನೆ ಮುಷ್ಟ ಇಯ ಮೇಲೆ ಊರಿದರು , ನೋಡುತ್ತ
ಇಡಿ ಏಶಿಯಾ ಖಂಡ ಮುದುಡಿಯಾಯ್ತು.

ಪಾರಿವಾಳದ ಮೈಯ ತಟ್ಟಿ ನಕ್ಕರು ಸ್ವಾಮಿ
ಹಿಕ್ಕೆ ಹಾಕಿತು ಒಂದು ಎರಡು ಮೂರು.                      ೩೦
ಇತ್ತ ಎಸೆದರು, ಸ್ವಾಮಿ ಹೈಹೈ ಹಸಾದವೆಂ-
ದುಡಿಯೊಡ್ಡಿ ಹಿಡಕೊಂಡೆ; ಹಿಕ್ಕೆಯೂ ಹಳದಿ!

ಹಿಕ್ಕೆ ಕೊಟ್ಟರು ನೋಡಿ; ಹೆಚ್ಚು ಬೆಳೆ ಗ್ಯಾರಂಟಿ
ಬೆಳ್ಳಿ ಬಟ್ಟಲ ಭಾಗ್ಯವುಂಡು ಖಾತ್ರಿ.
ತೂಗು ತೊಟ್ಟಿಲ ಭಾಗ್ಯ ಮ ಊರು ಮೀರುವುದುಂಟು
ಇನ್ನು ಪರವಾಯಿಲ್ಲ; ಖುಶಿಯಿಂದಿರಿ.