೧೧

ಅವಳ ಬಸುರಿನ ಸುದ್ದಿ ನಾ ಕೇಳಿ ನೀ ಕೇಳಿ
ಕೇಳಿ ಊರಂತೂರ ನಕ್ಕಾರರಿ.
ಹಸರ ಕುಪ್ಪಸ ತೊಟ್ಟು ಬಿಸಲೀಗೆ ತಲಿಬಿಟ್ಟು
ಹೊಳೆಸಾಲ ಹನಧಾಂಗ ನಿಂತಾಳರಿ.

ಕೆನ್ನೆ ಮಿರಿಮಿರಿ ಮಿಂಚಿ ಬಣ್ಣಗಳು ಉರದಾವು.
ಕಣ್ಣಾಗ ತೋರ್ಯಾವು ಎಳಿ ಚಿಗರ.
ಭೈರವಿಯ ವಂಕ ತೆರಿಗಳ ಹಾಂಗ ಅಂಗಾಂಗ
ಮುರಿದೆದ್ದು ಧರಿಸ್ಯಾವು ಹೊಸ ಹೊಗರಾ

ಚಂದ್ರಕಾಳಿಯ ಸೀರಿ ಚಂದsಕಕ ನೇಸ್ಯಾಳ
ಸೆಕಗಿನ್ಯಾಗ ತಗಸ್ಯಾಳ ಗಿಣಿಹಿಂಡಾ
ಆಲsದ ಎಲಿಗೋಳ ದಂಡಿಕಟ್ಟ ಬಿಗಿಸ್ಯಾಳ
ಹಿಡಿಗೇರ ನಾಚ್ಯಾರ ಇದ ಕಂಡಾ

ಒಂದಂಬೂ ತಿಂಗಳಿಗೆ ಒಂದೇನ ಬಯಸ್ಯಾಳ?
ತುಂಬ ಹುಣ್ಣಿಮಿ ರಾತ್ರಿ ಬೆಳದಿಂಗಳಾ;
ಇಂಬಾದ ಮಂಚದಲಿ ದಿಂಬೀಗೆ ಒರಗ್ಯಾಳು
ಕುಡಿವುದೆಕ ಕೇಳ್ಯಾಳ ಹುಲಿಹಾಲಾ !

ಮಗ ಬಂದು ಅಂತಾನ: ಬಂಕಿ ಬಂಕೀ ಒಳಗ
ಅಲ್ಲ ಸಲ್ಲದ ಬಂಕಿ ಅಲ್ಲತಗಿ.
ಸಿಡಿಮುಡಿಗಟ್ಯಾಳ ಮುಡಿಯನಲ್ಲಾಡ್ಯಾಳ
ಬಿದ್ದಾವ ಎಡವಿದರೆಂಟಮನಿ.

ಬರ | ಲಿಲ್ಲ ಏಟು ಕಕಲಾತಿ
ಮರ | ತಾಳ ರೀತಿ ಮತ್ತ ನಡತಿ
ಮರಿ | ಗ್ಯಾರ ಮಂದಿ ಮರಮರಾ
ಬದ | ಲಾಗಿದಾನ ಗೌಡ ಪೂರಾ

ಕುಂದನಾಡಿದಳೆಂದು ಆಂದ ಮಾತಿಗೆ ನೊಂದು
ಹೋಡುದಕ ತಯ್ಯಾರಿ ಮಾಡ್ಯಾನ
ಹೇಳತೇನ ಕೇಳ ಗೆಳೆಯಾ ನಿನ ಮುಂದ ಕತಿಯೊಂದ
ನನ ಮುಂದ ಕುಂಡ್ರ ಹಿಂಗ ತೆರದ ಮನಾ || ಗೀ ||

೧೨

ಸಿಂಗಾರ ಉಟ್ಟಾನ, ಸಿಂಗಾರ ತೊಟ್ಟಾನ.
ಸಿಂಗಾರ ಆದಾನ ತಲೀತನಕ.
ಜರ ತಗದ ರುಂಬಾಲ ದುಂಡಾಗಿ ಸುತ್ಯಾನ,
ಶಮನಾಸ ಬಿಟ್ಟಾನ ಹಿಂಬಡಕ,

ಅಂಗ್ಳಾ ಉಡುಗೋ ಹೊತ್ತು, ಗಂಗಾಳ ಬೆಳಗೋ ಹೊತ್ತು
ಬಂದಾನ ಜೋಡೆತ್ತ ಹೊಡಕೊಂಡ.
ಬಂಡೀಗಾಲಿಯ ಅಚ್ಚು ಸರಿದಿತ್ತು, ಹೆದರದ
ಹೊಂಟಾನ ಕುಡುಗೋಲ ಹಿಡಕೊಂಡಾ.

ಪಟ್ಟೇದ ಕುದರೀಯ ಏರ್ಯಾನ ರಾಮಗೊಂಡ
ಬೆನ್ನ ಚಪ್ಪರಿಸ್ಯಾನ ಮೆಲ್ಲsಕ.
ಹಾಡಿ ಹರಸುವರಿಲ್ಲ, ನೋಡಿ ಮರುಗುವರಿಲ್ಲ,
ಹಿಂದ ಮುಂದ ಯಾರಿಲ್ಲ ಎಡಬಲಕ.

ಅಗಸೀ ಹೊರಗ ಬಂದ, ಏನಂದ ರಾಮಗೊಂಡ?
ಪಾರಂಬಿ ಕರ್ರೆ‍ವ್ವ ನಮ ಶರಣಾ;
ತಿರುಗಿ ಬಂದರ ನಾವು ಆರ ಸೊಲಗಿಯ ಹುಗ್ಗಿ
ಹಾಕ್ಸೇವ, ಕೊಟ್ಟೇವ ಸೀರೀಖಣಾ

ಹಳ್ಳದ ಹಂತೇಲಿ ಬಂದೇನ ಅಂದಾನ?
ಗುಡ್ಡದ ನಿರವಾಣಿ ನಮ ಶರಣಾ;
ತಿರುಗಿ ಬಂದರ ನಾವು ದೀಡ ನಮಸ್ಕಾರ
ಹಾಕೇವ, ಕೋಟ್ಟೇವ ಬೆಳ್ಳೀಕಣ್ಣಾ

ಬಂ | ದಾವ ಇದಿರು ಬರಿ ಬುಟ್ಟಿ
ಹೊಡೆ | ದಾನ ಕುದsರಿಯನು ಮೆಟ್ಟಿ
ಹಿರಿ | ಯರ ಪುಣ್ಯ ನಮ ಮ್ಯಾಲಾ
ಸುರಿ | ತಿರಲಿ ಹರಿಯೆ ಅನುಗಾಲಾ

ಪಾರಂಬಿ ಕರ್ರೆ‍ವ್ವ, ಗುಡ್ಡದ ನಿರವಾಣಿ
ಈ ಊರ ಕಡೆಗಿರಲಿ ನಿಮಧ್ಯಾನಾ.
ಹೇಳತೇನ ಕೇಳ ಗೆಳೆಯಾ ನಿನ ಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರೆದ ಮನಾ || ಗೀ ||

೧೩

ಕಾ ಅಂಬೊ ಕಾಗಿಲ್ಲ, ಗೂ ಅಂಬೊ ಗೂಗಿಲ್ಲ
ಯಾರ್ಯಾರ ಸುಳಿವಿಲ್ಲ ಅಡಿವ್ಯಾಗ
ಏರ್ಯಾನ , ಇಳದಾನ ಇದ್ದ ಬಿದ್ದ ತಗ್ಗಾದಿನ್ನಿ;
ಹುಯ್ಲ ಹೊಡೆದ ಹುಡಿಕ್ಯಾನ ಗವಿಯೊಳಗ.

ಹೊತ್ತು ನೆತ್ತಿಗೆ ಏರಿ, ಹುಳುಹುಪಡಿ ಹುರಪಳಿಸಿ,
ತಳುವ್ಯಾನ ಗವಿಯೊಳಗ ತುಸು ಹೊತ್ತ.
ಚುಚ್ಚಿದರ ಬೆರಳು ಸಿಗಬೀಳುವಂಥಾ ತಂಪು,
ಮೈಗೆ ಮನಸಿಗೆ ಆಹ ಎಂಥಾ ಸುಖ!

ಮನ್ನಿ ರಾತ್ರೀ ಶ್ಯಾರಿ ಕದ್ದ ಮುಚ್ಚಿ ಬಂದವಳು;
ಆಗಿತ್ತು ಇದ ನಮನಿ ಹ್ವಾದಮ್ಯಾಲ.
ಬೆಳಕೀನ ಬಿಳಿಸುಟ್ಟು ಬೂದಿ ಬಣ್ಣಕೆ ತಿರುಗಿ,
ನೆರಳೆಲ್ಲ ಕರಕಾಗಿ ಗಾಲಮೇಲಾ.

ದೂರ ತಾರೆಯ ಹಾಂಗ ಮಿಣಕ್ಯಾವೆರಡು ಕೆಂಡ,
ಬರಬರತ ಹೊಳೆದಾವು ಬೆಂಕೀ ಕೊಳ್ಳಿ.
ಮನ ಸುಟ್ಟು ಛಟ್ಟನೆ ಎದ್ದಾನ; ಬಿಗಿಯಾಗಿ
ಹಿಡಿದಾನ ಕುಡುಗೋಲ ಬೆಳ್ಳೀಹಿಡಿ.

ಯೋಳ ಪಟ್ಟಿಯ ಹೆಣ್ಣ ಹುಲಿ ಬಂದು ನಿಂತೀತ;
ಧೈರ್ಯದಿಂದ ಕೇಳ್ಯಾನ: ಕೊಡ ಹಾಲ.
ಹುಲಿಯು ತಾಲಿಯ ತುಂಬ ಮಲಿಹಾಲ ಕೊಟ್ಟ ಈತ,
ನೆನ ನೆನದ ನಗತsದ ಕಲಲಲಲಾ!

ಕೊ | ಟ್ಟೀರಿ ಹಾಲ ಭರಪೂರಾ
ಮಾ | ಡಿದಿರಿ ನಮಗ ಉಪಕಾರಾ
ನಗ | ತೇರಿ ಯಾಕ ಕಲಕಲಾ
ಆ | ತೇನು ನಿಮಗ ಖುಶಿ ಬಾಳಾ

ಹೊಟ್ಟಿತುಂಬಾ ಉಂದು ಹನ್ನೆರಡು ವರುಷಾತು,
ಈಗ ಬಂದಿ ಬಾಳಾ ಕೂಡಿ ಬಂತ ದಿನಾ!
ಹೇಳತೇನ ಕೇಳ ಗೆಳೆಯಾ ನಿನ ಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರೆದ ಮನಾ || ಗೀ ||

೧೪

ಕಣ್ಣಾಗ ಕತ್ತಲಿ ಕೂಡಿ ಬಿದ್ಧಾಂಗಾಗಿ
ಕೋಲ್ಮಿಂಚ ಕುಡುಗೋಲ ಝಳಪಿಸಿದಾ.
ಬೆನ್ನಾಗ ಸಿಗಬಿದ್ದು ಹುಲಿ ಒದರಿ, ದವಡಾಸಿ,
ಹಿಂದ ಹಿಂದ ಅಟ್ಯಾನ ಬೆನ್ನಿಗಿ ಬಿದ್ದಾ.

ಹೊಕ್ಕಲ್ಲಿ ಹೊಕ್ಕಾನ, ಜಿಗಿದಲ್ಲಿ ಜಿಗಿದಾನ,
ಹಾರಿದಲ್ಲಿಗೆ ಹಾರಿ ಗಾಳೀಹಂಗಾ.
ಮೆಳಿಯೊಳಗ ಸರಬುರುಕ, ಹೊದರೊಳಗ ಸರಬುರುಕ,
ಜೋಡ ಸರಬುರುಕಣ್ಣ ಹುಲ್ಲಾಗ.

ಮಾಡsದ ಚಿಮಣಿ ಮ್ಯಾಗ ಕಾಡೀಗಿ ಕಡಕೊಂಡ
ಬಿದ್ಧಾಂಗ ಹೊತ್ತಾರಿ ಕತ್ತಲಿಸಿತ.
ಹುಲಿ ಗಪ್ಪಗಾರಾಗಿ, ಕುದರಿ ಮಟಾಮಾಯಾಗಿ;;
ತಾಲಿಹಿಡದ ಹೊಂಟಾನ ಊರತ್ತ.

ಮುಂದಮುಂದ ಬಂದಾನ ಸರಿರಾತ್ರಿ, ಉಲುವಿಲ್ಲ;
ಇದರೀಗಿ ಕಂಡಾನ ವಿಚಿತ್ತರಾ.
ಜಕ್ಕಜಲದೇರ ಜೋಡಿ ಜತ್ತಗಿ ಹೊಂಟೀತ
ಮೆತ್ತsಗ ಅಡಗ್ಯಾನ ಭಯಂಕರಾ.

ನೀರಹನಿ ಹೆಣೆಧಾಂಗ ಮೈತುಂಬ ಆಭರಣ;
ಹನಿಗೊಂದು ತಾರಕ್ಕಿ ಚಂದ್ರಾಮರಾ.
ಮಿಂಚ ಕರಗಿಸಿ ಎರಕ ಹೊಯ್ಧಾಂಗ ಮೈಹೊಗರ,
ನಕ್ಕಾಗ ಕಂಡಾವು ಮುತ್ತಿನ ಸರಾ.

ನಡ | ದಾವ ಭಾಳ ಗಂಭೀರಾ
ಬಿಡಿ | ಬಿಡಿಸಿ ಒಡಪನಾಡ್ಯಾವ
ಬಿ | ದ್ದಾವ ಹುಬ್ಬ ಅಗ್ಗಂಟಾ
ಮಾ | ತೊಂದ ಚಿಂತಿ ಯೋಳೆಂಟ

ಗಣದ ಮಾತ್ರೆಯ ಹಾಂಗ ದಿನಗೋ:ಎಣಿಸ್ಯಾವ;
ಹನ್ನೆರಡು ವರುಷಾತ ಈ ಹೊತ್ತನs.
ಹೇಳತೇನ ಕೇಳ ಗೆಳೆಯಾ ನಿನ್ನ ಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

೧೫

ಏನ ಕಾಣಲು ಬಂದು ಇನ್ನೇನ ಕಂಡೇವ!
ಹೆಣ್ಣೀಗಿ ದಿನಮಾನ ಅನುವಾದಾವ.
ಹಬ್ಬೀದ ಹಸರಾಗ ಹೆಬ್ಬುಲಿ ಒದರ್ರಾ‍ವು.
ತಬ್ಬಲಿ ಮಗ ಅತ್ತ ಕರದಾವ.

ಅಮ್ಮಾ ಎಂದವನನ್ನು ಗುಮ್ಮ್ಯಾಡಿ ಕೊಂದಾಳು,
ಹುಲಿಯೇರಿ ಎದ್ದಾಳಲು ಗುದ್ಯಾಡಲು.
ಹುಯ್ಯಾಲ ಬೊಬ್ಬೆಯೊ ಜಗವೆಲ್ಲ ತುಂಬಿದರು
ಒದರ್ಯಾಟ ಕೇಳಿಲ್ಲ ಯಾರ್ಯಾರಿಗು.

ಮರಿಯಾನಿ ಕರತಂದ ಕ್ವಾರಿಹಲ್ಲ  ಕೊರೆಕೊರೆದ
ಬಲಗೈಗೆ ಯೋಳ ಬಳಿ ಏನ ನಿವಳಾ!
ಹಚ್ಚೀ ಬಟ್ಟಚುಚ್ಚುದಕ ಹಸರ ಸಾಕಾಗಿಲ್ಲ,
ಚಿಗರೀಗಿ ಮಿದುಕೈಯ ಚಾಚ್ಯಾಳ.

ಬಣ್ಣದ ಅರಮನಿ ನಡುಗಂಬ ಬಿದ್ದೀತ;
ಬಣ್ಣಗಳ ಸುಟ್ಟಾಳ ಕೆನ್ನೀ ಒಳಗ.
ಯಾತ ತಿರುಗಿಸುವಂಥ ಭೂತ ದೇವರನೆಲ್ಲ
ಹುಗದಾಳ ಹಾಳಾದ ಬಾಂವ್ಯಾಗ.

ಇಷ್ಟಕೇಳಿ ರಾಮಗೊಂಡ ಹೊಟ್ಟೀ ಒಳಗ ಕಷ್ಟವಾಗಿ
ಬಂದ ನಿಂತ ಕಟ್ಟ್ಯಾನ ಮುಕ್ಕಟ್ಟ.
ಹೆಜ್ಜಿಯಿಡ ಒಡಪಾ ಒಡದ ಬಿಡಾಂವಲ್ಲ ದೇವೀ ನಿಮಗ
ಚಾಲಿವರದ ಕಾಡಿ ಬೇಡಿ ಎಲ್ಲಾ ಕಟ್ಟಾ.

ಹೌ | ಹಾರಿ ನೋಡ್ಯಾವ ಇಂವsನಾ
ಹಿಡ | ದಾವ ಗುರುತ ಖೂನ
ಇಂವ | ಇಂವs ಹೌದು ಅಂದಾವ
ದಿಕ್ಕು | ತಪ್ಪಿ ಓಡಿ ಹೋದಾವ

ನಿಮ್ಮ ಕೈ ಬಳಿಯಾಣಿ ರಾಮಗೊಂಡ ಕೇಳತೇನು
ಒಡದ ಹೋಗರಿ ನಿಮ್ಮ ಒಗಟಾನಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||