೧೬

ಬೆಳದಿಂಗಳೊಳಗಿನ ತಿಳಿನೀರ ಝರಿ ಹಾಂಗ
ಭರಭರ ಹರಿದಾವ ಮುಂದ ಮುಂದಕ.
ಗುಡ್ಡsದ ಮ್ಯಾಗೀನ ಫಡಿ ಉರುಳಿ ಬಿದ್ದಾಂಗ
ಕೂಗ ಹೊಡದ ಓಡ್ಯಾನ ಹಿಂದ ಹಿಂದಕ.

ವಂಕ ದಾರೀ ಒಳಗ ಮಿಂಚ್ಯಾವ ಮರಕಂಟಿ,
ಕಲ್ಲಾಗ ಹಾರಗಾಲ ಬಿದ್ದಾವ.
ಕೆಟ್ಟದೇವರ ಆಣಿ ಹೆಜ್ಜೀಯನಿಟ್ಟೇರಿ
ಕೊಟ್ಟಹೋಗರಿ ನಮಗುತ್ತರವ.

ಸೊಂಡಿ ಸುಟ್ಟ ಬೆಕ್ಕಿನ್ಹಾಂಗ ಖಬರತಪ್ಪಿ ಓಡ್ಯಾವ
ಬಂದಾವ ಹಾಳಬಾಂವಿ ಸಮೀಪಕ.
ಅಮವಾಸಿ ದಿನ ಉಲ್ಕಿ ಉರುಳಿ ಬಿದ್ಧಾಂಗಾಗಿ
ಜಿಗದಾವ ಜೋಡಾಗಿ ಬಾಂವಿಯೊಳೀಕ.

ಮ್ಯಾಲಹಾರಿದ ಮೀನ ನೀರಿನೊಳು ಜರಿಧಾಂಗ
ಸೇರಿ ಒಂದಾದಾವ ನೀರ ನೀರಿಗಿ.
ತೆರೆಸುತ್ತಿ ಆಗಾಗ ತಾರಕ್ಕಿನಗೆ ನಕ್ಕು
ದಂಡೀಯನಡರ್ಯಾವು ತಿರುತಿರುಗಿ.

ಹಸುಗೂಸು ಎಳಿಎಳೀ ಕಳಲು ಅತ್ತಂಗಾತು
ತೆರಿಗೋಳ ಸಪ್ಪಳ ದಂಡ್ಯಾಗ.
ಕರಿಯ ಭ್ರಾಂತಿಯ ಮುದ್ದಿ, ಕಣ್ಣು ಮೂಗುಗಳಿಲ್ಲ
ಮೆತ್ತ್ಯಾವ ಮೂಲ್ಯಾಗ ಮೂಲ್ಯಾಗ

ತಿದಿ | ತೇಗಿ ಬಂದಾನ ರಾಮಾ
ಮೂ | ಡ್ಯಾನ ಆಗ ಚಂದ್ರಾಮ
ಒಳ | ಒಳಗ ಹಣಿಕಿ ಹಾಕ್ಯಾನ
ಪ್ರತಿ | ಬಿಂಬ ಕಂಡ ಸರದಾನ

ಅಡ್ಡಮಳಿ ಗುಡ್ಡಮೋಡ ತಿಕ್ಕಿ ಗರ್ಜಿಸಿಧಾಂಗ
ಹಾಳಬಾಂವಿ ನಕ್ಕೀತ ಒಂದಸವನಾ
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

೧೭

ಕಿವಿಯೊಳಗ ಘಜ್ಜಂತ ಗೂಟ ಜಡಿಧಾಂಗಾಗಿ
ಎಲ್ಲಿ ತೆಂಕಣ ಮೂಡ ಬಡಗಣಾ?
ತಾನೆಲ್ಲಿ ತನ್ನ ದೇಹಕ್ಕೆ ನೆರಳಿದೆ ಇಲ್ಲೊ?
ಕಾಲು ಊರಿವೆ ಹೌದು ನೆಲದಾಗನ.

ತನ್ನ ಒಳಗಿನ ರಾಮ ಚಪ್ಪಾಳಿ ಹೊಡಧಾಂಗ,
ಖೊಕ್ಕಂತ ನಕ್ಕಾಂಗ ಬಿಳೀನಗಿ.
ನಕ್ಕ ರಾಮನನೊಮ್ಮೆ ತೆಕ್ಕೆ ಹಾಯಲೆ ಓಡಿ?
ನಡುವಿನಂತರ ನೂರ ಹರದಾರಿ!

ತೆರಿಯೊಳಗ ಪ್ರತಿಬಿಂಬ ಕೊರಕೊರದ ಹಂಚ ಈತ
ತೆರಿನಿಂತ ಹೊರತಿಲ್ಲ ಆಕಾರವು.
ತೆರೆಯ ತಣ್ಣನೆ ಸರ್ಪ ಮೈಸುತ್ತಿ ಬಿಗಿಧಾಂಗ
ಮುದುಡಿ, ಹಿಗ್ಗ ಈ, ನಡುಗಿ ಮಿಡುಕ್ಯಾಟವು.

ನೋಡ ನೋಡ್ತ ಇದರೀಗೆ ದೊಡ್ಡ ಧಾಂಡಿಗ ಮೂರ್ತಿ
ನಡೆದು ಬಂತೋ ಥೇಟು ಹಿಮಾಲಯಾ.
ಚಿಕ್ಕ ಮಕ್ಕಳ ಚೊಕ್ಕ ನಗಿಯ ಬೆಳದಿಂಗಳಿಗಿ
ಕೈಕಾಲು ಒಡದಾವೊ, ಏನಛಾಯಾ!

ಆಡೇನಂದರ ನಾಲಿಗಿಲ್ಲ, ಓಡುದಕಿಲ್ಲ,
ಮೈಮುಳ್ಳ ಎದ್ದಾವ ಕೊರಿ ಬೇಲಿ.
ದಳದಳ ಸುರಿದಾವ ಬೆವರಹೊಳಿ; ನಿಂತಾನ
ಚಿತ್ರದ ಒಳಗಿನ ಗೊಂಬೀ ನಮನಿ

ಸಾರಿ | ಸಾರಿ ಬಂತ ಹಂತ್ಯಾಕ
ಎ | ತ್ತೀತ ಹಸ್ತ ಹರಸುದಕ
ಖೂನ | ಗುರ್ತ ಹತ್ತಿ ಕಾಣುದಕ
ಬಿ | ದ್ದಾನ ಮತ್ತ ಹಣಗಲಕ

ಮರತಿ ಏನೋ ಮಗನs ಹರಕೀ ಹೊತ್ತ ಹಡವವನ
ನಶೀಬಿಲ್ದ ಹಾಳ ಬಾಂವಿ ಹಿಡಿದವನಾ
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ || ಗೀ ||

೧೮

ಬಾರಾ ವರ್ಷದ ಮಾತು ನೀ ಗೇಣ ಚೋಟಿದ್ದಿ.
ಯೋಳ ಪಟ್ಟಿ ಹುಲಿ ಬಂತ ಅಡಿವೀಗಿ.
ಹಿಂದ ಮುಂದ ಹಳಬರು ಎಡಬಲಕ ಬ್ಯಾಟಿಗಾರು
ಗೌಡ್ತೀ ಮಾತ ಮೀರಿ ಹೊಂಟೆ ಬ್ಯಾಟೀಗಿ.

ಹುಲಿಯಲ್ಲ ಅಂವ ದೊಡ್ಡ ರಾಕ್ಷೇಸ, ಮಾಯಾವಿ
ಮಳ್ಳ ಮಾಡಿ ಮಂದಿ ಒಯ್ದಾ ಸಂದರ್ಯಾಗ.
ಮಟಾ ಮಟಾ ಮದ್ದೀನ ಮೈಮ್ಯಾಲ ಬಿದ್ದಾನ
ಕೊಂದಾನ ಸಂಶಯ ಬರಧಾಂಗ.

ನನ್ನ ಚರ್ಮ ಸುಲಿದ ಮೈಮ್ಯಾಲ ಹೊದ್ದಾನ
ಕಡಿದು ಬುಟ್ಟೀ ತುಂಬಿ ಹೊತ್ತ ತಂದಾನ.
ಹಾಳsಬಾಂವಿಯ ಹಾಳಿನೊಳಗೆ ಹೂಳ್ಯಾನಯ್ಯೊ
ಪಾರಮಾಡೊ ನಿನ್ನ ಕೆಟ್ಟ ತಂದೀಯನಾ.

ಭಾವಿಸಿದ್ದುದನೆಲ್ಲ ಬಿಚ್ಚಿಟ್ಟ ಶಬ್ದಧಾಂಗ
ಹೇಳಿತಿಷ್ಟು ಬಾಯಿಬಿಟ್ಟು ಆಕಾಶಕ
ದಂಗಬಡದ ರಾಮಗೊಂಡ ದಿಕ್ಕ ಮರತ ನಿಂತಾನ
ಸುರದ ಸೋಸಿ ನೆನದಾನ ತಳತನಕ.

ಕತ್ತಲ ನಿರಾಕಾರ ಸರಿದು ಚಂದಿರ ಏರಿ
ಸಾಕಾರವಾಯಿತೊ ಸರ್ವಜಗಾ.
ನಿನ್ನ ಪಡೆವುದಕೆ ನಾವಿನ್ನೇನ ಮಾಡೋಣ
ಹೇಳೆಂದ ಕಾಲೂರಿ, ಕೈಮುಗದ,

ದಿಕ್ಕಿ | ನ್ಯಾಗ ದಿಕ್ಕ ಮೂಡsಣಾ
ಅಲ್ಲಿ | ಒಬ್ಬ ಸಾಧು ಶರಣಾ
ಕೊಡ | ತಾನ ಮಂತ್ರಿಸಿದ ನೀರಾ
ಸಿಂ | ಪಡಿಸಿ ರಾಕ್ಷಸಗೆ ಪೂರಾ

ಜ್ವಾಕಿ ಬಾಳಾ ಅಲ್ಲಿ ತಿರಗತಾವ ರಾಕ್ಷೇಸ
ನೇಮಿಸಿದ ಹಿಂಡ ಹಿಂಡ ಸೈತಾನಾ.
ಹೇಳತೇನ ಕೇಳ ಗೆಳೆಯ ಆ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ || ಗೀ ||

೧೯

ಇನ್ನೊಮ್ಮೆ ಅಲ್ಲಮ ಪ್ರಭುವಿಗೆ ಶರಣಾರ್ಥಿ
ಕೂಡಿ ಕುಂತ ಜನಕೆಲ್ಲ ನಮ್ಮ ನಮಲನಾ.
ಕಲಿಯುಗದೊಳಗಿನ ಕಥೆಯ ವಿಸ್ತಾರವ
ತಿಳಿಸಿ ಹೇಳುವೆ ಕೇಳಬೇಕ್ರಿ ಜನಾ.

ಕೂಡಿ ಕುಂತ ದೈಂವಕ್ಕ ಕೈಮುಗದ ಹೇಳತೇನು,
ಹೊಟ್ಯಾಗ್ಹಾಕ್ರಿ ಉಳಿದಿದ್ರ ಚೂರ ಕಸರಾ
ಯಪ್ಪಾ ಸ್ವಾಮಿ ಗುರುದೇವ ತಪ್ಪ ಮರತ ಒಪ್ಪಕೊಡ
ನೆಪ್ಪಿನ್ಯಾಗ ಇಡುವಾಂಗ ಸರ್ವರಾ.

ನೇಸರಿಗು ಬಿಸಲೀಗು ಬಿಗಿದಿಟ್ಟ ಒಗತಾನ;
ಅಂತೆ ಅನುಭವ ಮಾತು ಎರಡಕ್ಕುನು
ಅನುಭವದ ಐಸಿರಿಯ ಆಗುಮಾಡುವ ಮಾತಿ
ಗೋತು ನಮೋನಮೋ ಎನ್ನುವೆನು.

ಘೋಡಗೇರಿ ಬಸ್ಸಪ್ಪ ಅವರ ಮಗ ಚಂದ್ರಪ್ಪ
ಪದಾ ಮಾಡಿದಾರ ಭಾಳ ನಿವಳಾ
ಗೌಡ್ತಿ ಬ್ಯಾನೀ ತಿಂದ ಗಂಡ ಹಡದ ಗಂಗಾಳ ಹೊಡದ
ಐದೇರೆಲ್ಲ ಜೋ ಅಂದ ಕತಿ ನಿವಳಾ

ಹಿರಿಯರ ಪಿರತೀಗಿ ಸರಿದೊರೆ ಸಮನಿಲ್ಲ
ಕೇಳಾವರ  ಮ್ಯಾಲಿರಲಿ ನಿರಂತರಾ.
ಏ ಎವ್ವಾ ಸರಸೋತಿ ತಾಳಕ್ಕ ನಲಿವಾಕಿ
ನಾಲೀಗಕ್ಷರ ಕಲಿಸಾ ಇನ್ನೆರಡಾ

ಕತಿ | ಹೇಳತೇವ್ರಿ ಮುಂದಿಂದಾ
ಆಗ | ಧಾಂಗ ಒಂದು ಸಹ ಕುಂದಾ
ಇರು  | ಗುರುವೆ ನಾಲಗೆಯ ಹಿಂದಾ
ನಾ | ನಿಮ್ಮ ಕರುಣದ ಕಂದಾ

ಬೆನ್ನಾಗ ನೆತ್ತರ ಕಣ್ಣಾಗ ಕಣ್ಣೀರ
ಗೌಡಪ್ಪ ಕರಸತಾನ ಗೌಡ್ತಿಯನಾ.
ಹೇಳತೇನ ಕೇಳ ಗೆಳೆಯಾ ನಿನ ಮುಂದ ಕಥೆಯೊಂದ
ನನ ಮುಂದ ಕುಂಡ್ರ ಹೀಂಗ ತೆರದ ಮನಾ || ಗೀ ||

೨೦

ಕಾಳ ತುಂಬಿದ ಜ್ವಾಳ ಗಾಳಿಗಲುಗಿದ ಹಾಂಗ
ತೂಗಿ ತೂಗಿ ಬಂದಾಳ ಮೈವಜನಾ,
ಚಳ್ಳಪಳ್ಳ ಗೆಜ್ಜೀನಾದ ಹೆಜ್ಜೀಯ ಚೆಲ್ಲತಾಳ
ನಾಜೂಕ ನಗಿ ನಕ್ಕ, ಏನ ಹಗಣಾ!

ಹಾಸ್ಗ್ಯಾಗ ಗುಜುಗುಜು ಆಡತಾರ, ಹಾಕತಾರ
ಲೆಕ್ಕಾ ಗುಣಿಸಿ ಭಾಗಾಕಾರ ಪರಭಾರೆ :
ಯೋಳಕಕ್ಕ ಗೋಳಾತ ಎಂಟಕ್ಕ ಗಂಟಬಿತ್ತ
ಸರಿ ಬೆಸ, ಹಿಡಿದ ಹ್ವಾರೆ ಗಂಡs ಖರೆ.

ಯೋಳ ಗಾದಿಯ ಮ್ಯಾಲ ಹೋಳಾಗಿ ಮಲಗ್ಯಾಳ
ಅಂತಾಳ : ಕರೆತರ್ರೆ‍ ರಾಮಗೊಂಡಗ.
ಕೈಯಾಗ ಹಾಲತಾಲಿ, ಕಣ್ಣ ತಾಮ್ರದ ತಾಲಿ
ಕಂಡಾನ ಖರೆಖರೆ ಯಮನ್ಹಾಂಗ!

ಒಲಿಯ ಮ್ಯಾಲಿನ ಅಕ್ಕಿ ಉಕ್ಕುಕ್ಕಿ ಕುದ್ಧಾಂಗ
ಸಿಟ್ಟಾಗಿ ಕಿಸಿದಾಳ ಕಿಸಮ ಊಗನಾ.
ಬಲಾ ಇಲ್ಲದವನ ನೆಲಾ ಎದ್ದು ಬಡಿಧಾಂಗ
ಕರದಾಳ, ಮುಂದಕ ಬಾ ಚೆಲುವಾ.

ತುಸು ಆಡಿ ಹಲ್ಲsರೆ ಕಿಸಕಿಸದ ನಕ್ಕಾಳ.
ಜೊಲ್ಲಬಿತ್ತು ಗಾದಿಮ್ಯಾಲ ನಾಕ ಹನಿ.
ಏನೋ ಆಡಲು ಹೋಗಿ ಇನ್ನಷ್ಟ ನಕ್ಕಾಳ,
ಥೂ ಅಂತ ಉಗುಳ್ಯಾನ, ಅಲ್ಲತಗೀ.

ಬರ | ಲಿಲ್ಲ ಏಟು ಕಕಲಾತಿ
ಮರ | ತಾಳ ರೀತಿ ಮತ್ತ ನಡತಿ
ದಾ | ಸೇರು ಮರುಗಿ ಮರಮರಾ
ಬದ | ಲಾಗಿದಾನ ಗೌಡ ಪೂರಾ

ಎರಡಂಬು ತಿಂಗಳಿಗೆ ಎರಡೇನು ಬಯಸ್ಯಾಳ?
ತಿನ್ನಲು ಕೊಡು ನಿನ್ನ ಹೃದಯವನಾ!
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನ ಮುಂದ ಕುಂಡ್ರ ಹೀಂಗ ತೆರದ ಮನಾ  || ಗೀ ||

೨೧

ಮೂರಂಬು ತಿಂಗಳಿಗೆ ಮೀಗೀನ ಸಿರ ಕೋದ
ಮೂಸ್ಯಾಳ ಕಿಸಮೂಗ ತುಂಬೂಮಟಾ!
ನಾಕಂಬು ತಿಂಗಳಿಗೆ ಅಂಡ್ಯಾಳ ಆಡುದಕ
ಕಣ್ಣಗುಡ್ಡಿ ಬಯಸ್ಯಾಳ ಕೊಡ ಲಗುಟಾ

ಐದಂಬು ತಿಂಗಳಿಗೆ ಐದೇನ ಬಯಸ್ಯಾಳ?
ಕಿವಿಯ ಗಂಟಿಯ ಕೊಡ ನಾದಕ್ಕ.
ಆರಂಬು ತಿಂಗಳಿಗೆ ನಾಲೀಗಿ ಹೆರಚೀರಿ
ಸಾಂಬಾರ ಮಾಡಿರಿ ನಂಜೂದಕ!

ಏಳಂಬು ತಿಂಗಳಿಗೆ ಸಾಕಂಬುತನ ಬೇಕ
ತೊಗಲ ಹೆಚ್ಚಿರಿ ಪಚಡಿ ಮಾಡುದಕ!
ಎಂಟಂಬು ತಿಂಗಳಿಗೆ ಹೊಟ್ಟೀಯ ಹೊಸದಾಳ
ಗಾಂಧಾರಿ ಹಡದಾಳ ಗಂಡ ಮಗಾ!

ಐದೇರು ಬಂದಾರು ಗುಗ್ಗರಿ ತಿಂದಾರು
ಕುರ್ರಂತ ಕೂಗ್ಯಾರು ಹೆಸರಿಟ್ಟಾ !
ಊರ ತುಂಬ ಸಕ್ರಿ ಹಂಚಿ ಸಿಹಿ ಬಾಯಿ ಮಾಡ್ಯಾರ
ನಿಮ್ಮ ಮನಸೂ ಹೀಂಗs ಇರಲಿ ಸಿಹಿ ಕಟ್ಟಾ.

ಝಳ ತಾಗಿ ಬಾಡೀದ ಚಿವುಟಿದ್ದ ಚಿಗುರೆಲಿ
ರಾಮಗೊಂಡ ನಿಂತಾನ ಬಾಡಿ ಮುಖಾ
ಬಂದs ಬರತಾsದಂತ ಆ ದಿನ ಕಾದಾನ
ಕಣ್ಣಿರದs ಕಂಡಾನ ಸೂರ್ಯದಿಕ್ಕಾ

ದಿಕ್ಕಿ | ನ್ಯಾಗ ದಿಕ್ಕ ಮೂಡsಣಾ
ಅಲ್ಲಿ | ಒಬ್ಬ ಸಾಧು ಶರಣಾ
ಕೊಡ | ತಾನ ಮಂತ್ರಿಸಿದ ನೀರಾ
ಸಿಂ | ಪಡಿಸ ರಾಕ್ಷಸಗ ಪೂರ

ಹೇಳಾಕ ಹೆಸರ ಚಂದ ಕೇಳಾಕ ಕತಿ ಚಂದ
ನಿಮಗಾಗ್ಲಿ ಹತ್ತೆಂಟು ಮರಿಮಕ್ಕಳಾ
ಅವರಲ್ಲಿ ನಾವಿಲ್ಲಿ ಮಗಹುಟ್ಟಿ ಶುಭವಾಗಿ
ಅಂತಿಂತು ಬೆಳಗಾಯ್ತು ನಮ ಶರಣಾ.