ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ
ಕೂಡಿ ಕುಂತ ಜನಕೆಲ್ಲ ನಮ್ಮ ನಮನಾ.
ಕಲಿಯುಗದೊಳಗಿನ ಕಥೆಯ ವಿಸ್ತಾರವ
ತಿಳಿಸಿ ಹೇಳುವೆ ಕೇಳಬೇಕ್ರಿ ಜನಾ.

ಕೂಡಿಕುಂತ ದೈವಕ್ಕ ಕೈಮುಗದ ಹೇಳತೇನು,
ಮರೆಯೀರಿ ಮುಂದಬಂದ್ರ ಚೂರ ಕಸರಾ.
ಯಪ್ಪಾ ಸ್ವಾಮಿ ಗುರುದೇವ ತಪ್ಪ ಮರತ ಒಪ್ಪಕೊಡ
ನೆಪ್ಪಿನ್ಯಾಗ ಇಡುವಾಂಗ ಸರ್ವರಾ.

ಏ ಎವ್ವಾ ಸರಸೋತಿ ‘ತಾಳಕ್ಕ ನಲಿವಾಕಿ’
ನಾಲೀಗಕ್ಷರ ಕಲಿಸ ಐದಾರಾ.
ಹಿರಿಯರ ಪಿರತೀಗಿ ಸರಿದೊರೆ ಸಮನಿಲ್ಲ;
ಕೇಳಾವರ ಮ್ಯಾಲಿರಲಿ ನಿರಂತರಾ.

ಜಂಬೂದ್ವೀಪದ ಪೈಕಿ ಮ್ಯಾಗಡೆ ಮಲೆನಾಡ
ಸೂಸಿ ಹರಿದಾಳಲ್ಲಿ ಘಟಪ್ರಭಾ.
ಆ ದಂಡಿ ಆರ್ಯಾಣ, ಈ ದಂಡಿ ಶಿವವೂರ,
ಕೆಂಪು ಹಂಚಿನ ಊರು ಬಲು ಶೋಭಾ.

ಗೌಡ ಶ್ರೀ ಭರತೇಶ, ಗೌಡ್ತಿ ಲಕ್ಷ್ಮೀದೇವಿ,
ಎಳಕ ವಯೊದೊಬ್ಬ ಗಂಡ ಮಗಾ.
ತೂಗು ತೊಟ್ಟಿಲವಾಗಿ, ಬೆಳ್ಳಿ ಬಟ್ಟಲವಾಗಿ,
ಕೈಕಾಲ ಮುರದ ಬಿದ್ದ ಲಕ್ಷ್ಮೀಜಾಗ.

ಕತಿ | ಹೇಳತೀವ್ರಿ ಮುಂದಿಂದಾ
ಇರು | ಗುರುವೆ ನಾಲಗೆಯ ಹಿಂದಾ
ಆಗ | ದಿರಲಿ ಒಂದು ಸಹ ಕುಂದಾ
ನಾ | ನಿಮ್ಮ ಕರುಣದ ಕಂದಾ

ಗೌಡ್ತಿ ಬ್ಯಾನೀ ತಿಂದ ಗಂಡ ಹಡದ , ಗಂಗಾಳ ಹೊಡದ,
ಐದೇರೆಲ್ಲ ಜೋ ಅಂದ ಕತಿ ನಿವಳಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

ಊರಾಗೂರ ಅದರಾಗ ಇನ್ಯಾವೂರ
ಚಂದ, ಶಿವಾಪೂರ ರಾಜೇಕ.
ಮಳೆಯಾದ ಎರಿಯಳಗ ಬೆಳೆದ ಕರಿಕಿ ಹಾಂಗ
ಊರು ಹಬ್ಬsದ ಮೂಡಪಡುವಣಕ.

ಹಸರುಶಾಂತಿ ಪಸರೀಸಿ ಮೈಚಾಚಿ ಮಲಗ್ಯsದ
ನದಿಯ ಎದೆಯಾಗುನು ಅದೆ ನೆರಳಾ.
ಹೊಳೆಯ ದಂಡೆಯ ಆಲ ನೂರಾರು ಪಾರಂಬಿ,
ಬುಡದಾಗ ಕರ್ರೆ‍ವ್ವ ಊರ್ಯಾಳ್ತಳಾ.

ನೂರು ಬಂಡಿಗೆ ಇಂಬುಗೊಡುವಷ್ಟು ನೆರಳಿತ್ತು;
ಯಾರ್ಯಾರು ಸುಳಿದಿಲ್ಲ ಬಡ್ಡೀತಕ.
ಉದಯಾಸ್ತಗಳ ನಡಕ, ಹೊಳಿಗುಡ್ಡ ಎಡಬಲಕ,
ಜಗದಾಗಿಂಥಾದ್ದಿಲ್ಲ ಬಹುತೇಕ.

ಊರ ದನಗಳನೆಲ್ಲ ಇಲ್ಲಿ ಹಾರಸತಾರ,
ಕೂಡತಾರ ಹಿರಿಯರು ಯಾವಾಗರೆ.
ಈ ನೆರಳ ತಂಪನ್ನ ಅದಕಿದಕು ಬಳಸುವರು
ಎಳಿಗೂಸು ನಗುವುದು ಅದರಾಗರೆ.

ನದಿಯ ತೆರೆಗಳ ಮ್ಯಾಲೆ ಬಿಸಲಿಂದ ಬರಬರದ
ಈ ತಂಪ ಕಳಿಸ್ಯಾರು ದಿಗ್ದೇಶಕ.
ಪೂಜಾರಿಗಳ ಬಿಟ್ಟು ಇನ್ಯಾರು ನೋಡಿಲ್ಲ
ಊರಕ್ರರೆವ್ವನ  ಕರೀಮಕಾ.

ಮಾ | ಡಿದನು ಹರಿಯಿಲ್ಲಿ ಬೋಧಾ
ಬೆಳೆ | ದಾರು ಇಲ್ಲೆ ವೇದಾ
ಈ | ನೆರಳ ತಂಪಿನ ಹಸಾದಾ
ಕೊನೆ | ಕೊನೆಗೆ ಬುದ್ಧ ಏನಾದ ?

ಈ ತಂಪು ಸತ್ಯದಲಿ ಈ ಬದುಕ ಬಣ್ಣಿಸಿದ
ಚೆನ್ನsರ ನೆನಿ ತಮ್ಮ ದಿನಾದಿನಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

ಹುಡಿಗೇರ ಹುಸಿ ಸಿಟ್ಟಿನ್ಹಾಂಗ ಓಣಿಯ ತಿರು ವು,
ತೆರೆದ ಕಣ್ಣುಗಳಣ್ಣ ಮನಿಬಾಗಿಲಾ;
ಮಣ್ಣಾಗ ಆಡೂವ ಚಿಣ್ಣರ ಗಿಣಿ ಹಿಂಡ
ಯಾವತ್ತು ಊರಾಗ ಕಲಲಲಲಾ.

ಸೂರ್ಯಾ ಕರಗಿ ನೀರಾಗಿ ನಾಡಿ ಒಳಗ ಹರದಾನು
ಎಳಿ ಹರೆ ಬಂದಾಗ ಹುಡಗೋರಿಗಿ
ಜೋಡೆಮ್ಮಿ ಹಾಲಕುಡದ ಸೆಡ್ಡು ಹೊಡೆದ, ಕುಸ್ತಿಹಿಡದ,
ಗರಡೀಮನೆ ಕಾಣಸ್ತೈತಿ ಓಣಿ ತುದಿಗಿ.

ಚಿಗುರು ಮೊಲೆಗಳ ಕಂಡು ಚಿಗುರು ಚಿಗುರಲೆ ಇಲ್ಲ
ಒಮ್ಮಿಗಿಲೆ ಎಲೆಯಾಯ್ತು ಗಿಡಗಿಡಕ.
ಚೈತ್ರ ಫಾಲ್ಗುಣಗಳನು ಎದೆಯಾಗ ಹಿಡಿದಾರು
ಹೂವಾಗಿ ಸೋರೀತ ತಟತಟಕ.

ಯಾರೇನ ಆಡಿದರು ಗಾದಿ ನಾಣ್ಣುಡಿಯಾಗಿ
ವಾಡಿಕೆಯಾದಾವು ನಾಡೊಳಗ
ಕರಿಯಜ್ಜ ಹಾಕೀದ ಗೆರಿಗೋಳ ಯಾರ್ಯಾರು
ದಾಟಿಲ್ಲ ಹದಿನಾಕು ಹಳ್ಳಿಯಳಗ.

ಬೇಡಿ ಬಂದಾನ ಗೌಡ ಪಡದ ಬಂದಾರ ಜನಾ
ಕೊರತಿಲ್ಲ ಹೊಗಳುವ ಕವಿಜನಕ.
ಮನಿಮನಿಗಿ ನಡುವಡ್ಡ ಗೆರೆಯಿಲ್ಲ, ಎರಡಿಲ್ಲ,
ಕಾಣಿ ತಕ್ಕಡಿಗಿಲ್ಲ, ಸಮತೂಕ

ಮರ | ತಾನ ಕೊಟ್ಟ ಭಗವಾನಾ
ಕಡಿ | ಮಿಲ್ಲ ಅವರಿಗೇನೇನಾ
ಹೊಲ | ದಾಗ ಕಾಳ ಭರಪೂರಾ
ದರ | ದಾಗ ಇಲ್ಲ ಹೇರಪೇರಾ

ಪಾರಂಬಿ ಕ್ರರೆವ್ವ ಗುಡ್ಡದ ನಿರವಾಣಿ
ಈ ಊರ ಕಡೆಗಿರಲಿ ನಿಮ್ಮ ಧ್ಯಾನಾ
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹಿಂಗ ತೆರೆದ ಮನಾ       || ಗೀ ||

ಇನ್ನ ಮುಂದಿನ ಕತಿ ಹ್ಯಾಂಗಾರೆ ಹೇಳಲಿ?
ಎದೆಯಾಗ ಆಗತದ ಕಸಿವೀಸಿ.
ಯೋಳಪಟ್ಟಿ ಹುಲಿಬಂದು ಯೋಳೆಂಟು ದನತಿಂದು
ಸುದ್ದಿ ಕೇಳಿ ಗೌಡಹೊಂಟಾ ಬ್ಯಾಟೀಗಿ.

ಗೌಡ್ತಿ ಲಕ್ಷ್ಮೀದೇವಿ ಸೆರಗೊಡ್ಡಿ ಬೇಡತಾಳ
ಹೋಗಬ್ಯಾಡ್ರಿ ಬಿದ್ದೀತೆನಗ ಕೆಟ್ಟ ಕನಸಾ;
ಖುಶೀಲಿಂದ ಸರಸವಾಡಿ, ಗೌಡಾ ನೀವು ಮಲಗಿದಾಗ,
ಮಂಚದ ಕಾಲ ಮುರಧಾಂಗಾತ ಕಸಕ್ಕನ.

ಅಬಲೆ ಅಂಜಿದಳೆಂದು ದಾದುಮಾಡದೆ ಹೊಂಟ;
ವಾದ್ಯದ ದನಿ ತುಂಬಿ ದಿಕ್ಕದಿಶಾ
ಬೆಲ್ಲದ ಬೆಂಟೀಗಿ ಇರುವಿ ಮುತ್ತಿದ ಹಾಂಗ
ಜನಸೇರಿ ಹರಸ್ಯಾರು ತುಂಬಿ ಮನಸಾ.

ಇದೆ ಕೊನೆಯ ಸಲದಂತೆ ಮಳಮಳ ಮಕನೋಡಿ
ಎದಿಯಾಗ ಹಿಡಿದಾರು ಆ ರೂಪವ.
ಹತ್ತು ದೇವರಿಗೆಲ್ಲ ಹರಕೀಯ ಹೊತ್ತಾರು,
ತೇರ ಎಳಸತೇವ ಕಾಯ ಕರ್ರೆ‍ವ್ವ.

ಬ್ಯಾಟಿಗಾರರ ಕುದರಿ ರಥದ ಧೂಳಿನೊಳಗ
ಮುಳುಗಿ ಹೋದಾನ ಗೌಡ ಮುಂದಮುಂದಕ.
ಹುಬ್ಬಗಯಯ ಹಚ್ಚಿಕೊಂಡು ಏರನೇರಿ ನೋಡತಾರ
ಬೆಂಕಿ ಹೊತ್ತಿಸಿಧಾಂಗ ಬಿಸಿಲ ಬಿದ್ದೀತ.

ಹೊಳಿ | ಯಾಗ ತೆರಿಗಳಿರಲಿಲ್ಲ
ಆ | ಲsದ ಗಿಡಕ ತಂಪಿಲ್ಲ
ಓ | ಣ್ಯಾಗ ಎಲ್ಲ ಬಣ ಬಣಾ
ಸುಡ | ಗಾಡಧಾಮಗ ರಣ ರಣಾ

ಗುಡ್ಡದ ಕಡ್ಡಕ ಬೆಂಕಿ ಹಚ್ಚಿದರ್ಯಾರೊ,
ಹೊಗಿ ತುಂಬಿ ನೋಡ್ಯಾರು ಎಲ್ಲಾ ಜನಾ.
ಹೇಳತೇನ ಕೇಳ ಗೆಳೆಯಾ ನಿನಮುದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರೆದ ಮನಾ ||ಗೀ||

ಪಡುವಣದ ಮೂಗಿನ ಮುತ್ತುದುರಿ ಸಂಜಾಯ್ತು,
ಹಿಂದಿರುಗಿ ಬಂದಾವು ದನಾ ಕರಾ.
ಈದೊಡನೆ ಕರುಸತ್ತು, ಎಮ್ಮಿ ಕೆರೆಯೊಳಗೊದರಿ
ಕ್ಷಿತಿಜ ಬಾನಿನ ತುಂಬ ಹಸಿನೆತ್ತರಾ.

ಕಂಡ ಹಗಲಿನ ಸತ್ಯ ಸಂಶಯವಾದೀತು
ಸಂಧಿಪ್ರಕಾಶದ ಸಂಧಿನೊಳಗ.
ಕನಸಿನ ಕರಿಯ ಚೋರನ ಹಾಂಗ ಗೌಡ ಬಂದ,
ಊದಿ ಬಾರ್ಸಿ ಏನೇನಿಲ್ಲ ಬ್ಯಾಟಿ ಬಳಗ.

ಸಿಡ್ಲ ಹೊಡೆದು ಹಾಳಬಿದ್ದ ಬಾವೀತನಕ ತಾನs ಹೋಗಿ
ಏನೋ ಚೆಲ್ಲಿ ತಿರುಗಿ ಬಂದಾ ನಗನಗತ.
ತೊಟ್ಟಿಲೊಳಗಿನ ಕೂಸು ಚಿಟ್ಟಂತ ಚೀರೀತ-
ಊದು ಹಾಕಿದ ಹೋಗಿ  ಓಣಿ ತುಂಬೀತ.

ಊದ ಹಾಕಿ ಐದೇರು ಆರತಿಯ ಬೆಳಗ್ಯಾರು
ಖುಶಿ ಬಾಳ ಗೌಡ್ತೀಗಿ ಒಳಗೊಳಗ.
ಮಗ ಬಂದು ಕೇಳ್ಯಾನು: ಹುಲಿ ಎಲ್ಲಿ?-ಸತ್ತೀತ?

ಇನ್ನ ಮ್ಯಾಲ ಚಿಂತಿಲ್ಲ ಏಟು ನಮಗ.

ಪರಭಾರೆ ಹಾಸ್ಗಿ ಒಳಗ ಮುಟ್ಟಿಬಿಟ್ಟು ಹೇಳ್ತಾನ:
ನಿನ್ನ ತಾಳಿ ಗಟ್ಟಿಮುಟ್ಟ ಉಳಿದು ಬಂದೇನ.
ಹುಲಿಯಲ್ಲ ಆಂವ ದೊಡ್ಡ ರಾಕ್ಷೇಸ, ಮಾಯಾವಿ,
ಕೊಂದ ಹಾಳ ಬಾಂವಿ ತಳಖಾ ಕಾಣ್ಸಿ ಬಂದೇನ.

ಹಣಕಿ | ಹಾಕಬಾರ್ದು ಯಾರ್ಯಾರಾ
ಹಾ | ಕಿದರ ಗೋರಿ ತಯ್ಯಾರಾ
ಊ | ರಾಗ ಹೊಡಸ ಡಂಗೂರಾ
ಯಾ | ವತ್ತು ಇರಲಿ ಖಬರಾ

ನಿನ್ನ ಮಗ ಹಣಿಕಿ ಹಾಕಿದಂದು ನಾನು ಹಲಿಗಿ ಹೊಡಿಸಿ
ಹಾದೀ ಹಿಡಿದೀನಂತ ಗಟ್ಟಿ ತಿಳಕೊ ರಮಣಾ.
ಹೇಳತೇನ ಕೇಳ ಗೆಳೆಯಾ ನಿನಮುಂದೆ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರೆದ ಮನಾ || ಗೀ ||