ಬೀಸು ಜ್ವಾಳ ಆದಾವು, ನಮ ಹಾಡು ಮುಗಿದಾವು,
ಹಕ್ಕಿ ಚಿಲಿಪಿಲಿ ಚೀರಿ ಬೆಳಗಾಯಿತ.
ಝಮ ಝಮ ನಸಕಿನ್ಯಾಗ ಆsಲದ ಬಡ್ಡ್ಯಾಗ
ಕರಿಯಜ್ಞ ಕೂರ್ತಾನ ಕೆಮ್ಮಿಕೋತ.

ಗೊಂಡೀಯ ಲಂಗೋಟಿ, ಕಸಿಯಂಗಿ ತೊಟ್ಟಾನ,
ಮುದಿಸೂಳಿ ಬಂದಾಳ ಹೊಳಿನೀರಿಗಿ.
ಕೈಬೀಸಿ ಕುಂಡಿ ಹೊಳಿಸಿ ಕಣ್ಣ ಹಾರ್ಸಿ ನಡದಾಳ
ನೆನೆನೆನದ ನಗತಾನ ತಿರುತಿರುಗಿ.

ಇಳಿದ ಪಾರಂಬೀಗಿ ಗೊಡ್ಡೆ ಮ್ಮಿ ಮೈತಿಕ್ಕಿ
ಸೆಗಣಿ ಹಾಕಿದ ನಾತ ಗೊಮ್ಮೆಂದಿತ.
ದಿನದಾಂಗ ರಾಮಗೊಂಡ ಚರಿಗಿ ಹಿಡಿದ ಬಂದಾಣು,
ಕೂಡ್ರತಾನು ಮುದುಕನ ಹಂತ್ಯಾಕ.

ನಾತಕ್ಕ ಹೇಸಿ ತುಸು ಮುಂದ ಕೂಡ್ರೂನಂದ;
ಅಜ್ಜ ಕೀಳಲೆ ಇಲ್ಲ ತನ್ನ ತಳ.
ಎಣ್ಣೆ ಇಲ್ಲದೆ ಉರಿದ ತನ್ನ ದಿನಮಾನಗಳ
ಹೇಳತಾನ, ಕ್ವಾರಿಮೀಸಿ ಕೊಲರಕೊರದ.

ಅಷ್ಟರಾಗ ಸಮಗಾರ ಬಸ್ಸಿಕೂಸನು ತಂದು
ಕರ್ರೆವ್ವಗಿದಿರಾಗಿ ಇಟ್ಟಾಳಡ್ಡ:
ರಾತ್ರಿ ಚಿಟ್ಟನೆ ಚೀರಿ ಮಲಿಮರತ ಮಲಗೇತಿ
ತಾಯಿ ನಿನ್ನ ವರ್ಮಬ್ಯಾಡ ನಮಗೂಡ.

ಕೇಳಿ | ಬಂತ ಹೊಡದ ಡಂಗೂರಾ
ಹಾಳ | ಬಾಂವ್ಗಿ ಹೋಗಬ್ಯಾಡ್ರಿ ಯಾರಾ.
ಹಣಿಕಿ | ಹಾಕಬಾರ್ದು ಯಾರ್ಯಾರಾ
ಯಾ | ವತ್ತು ಇರಲಿ ಖಬರಾ.

ತಪ್ಪಿಗಿಪ್ಪಿ ಹಣಿಕಿದರರ ದಂಡಾಶಿಕ್ಷಾ ಮಾಡತಾರು
ನೆಪ್ಪಿನ್ಯಾಗ ಇಟಗೊಳ್ರಿ ಎಲ್ಲಾ ಜನಾ.
ಹೇಳತೇನ ಕೇಳ ಗೆಳೆಯಾ ನಿನ ಮುಂದ ಕತಿಯೊಂದ
ನನ ಮುಂದ ಕುಂಡ್ರ ಹೀಂಗ ತೆರದ ಮನಾ || ಗೀ ||

ಹೋರೀಯ ಕೊಂಬಿನ್ಹಾಂಗ ಮಕ ಮೀಸಿ ಮೂಡ್ಯಾವ
ಎಳಕ ಯೌವನ ಬಂದು ರಾಮಗೊಂಡಗ,
ಹಿಂಡ ದನಗೋಳೊಳಗ ದ್ಯಾಮವ್ನ ಕ್ವಾಣಧಾಂಗ
ಅವನಿದ್ದ ವಾರಿಗಿಯವರೊಳಗ.

ಅವನ ಕೆನ್ನಿಯ ಒಳಗ ಸೂರ್ಯದೇವ ಹೊಳದಾನು
ಕಣ್ಣಾಗ ಹುಣ್ಣೀಮಿ ಚಂದ್ರಾಮರಾ
ಒಗರೇನು, ಹೊಗರೇನು, ಹರೆಯ ಗರುವಿಕಿಯೇನು
ಬಾಯಿ ಬಾಯಿ ಬಿಡತಾವ ಹುಡಿಗೇರಾ.

ಹಸನಾದ ಬಾಲೇರು ಹಂತೇಲಿ ಬಂದ ಬಂದ,
ಒಡಪ ಹೇಳಿ ಓಡತಾರ ನಗನಗತ,

ಸರಿಸರಿ ಸಖಿಯರು ಮಾರೀಗಿ ನೀರಗೊಜ್ಜಿ
ಕಾಡತಾರ ಪರಿ ಪರಿ ಅಡ್ಡ ನಿಂತಾ.

ತುಂಬೀದ ಹೊಳಿಯಾಗ ತೆರಿ ಹೊಡದ ಈಸಾಂವಾ,
ಗುಡಿಯ ಮುಂದಿನ ಗುಂಡ ಹೊತ್ತ ಒಗದಾಂವಾ.
ಮನ್ನಿ ಶಿವರಾತ್ಯ್ರಾಗ ಹತ್ತು ಮಂದಿಯ ಕೂಡ
ಕುಸ್ತಿ ಹಿಡಿದ, ಎರಿ ಮಣ್ಣ ಮುಕ್ಕಿಸಿದಾಂವಾ.

ಊರೀನ ಹುಡುಗೋರು ದೊಡ್ಡಾಟ ಬಿಟಕೊಟ್ಟು
ನಾಟಕವಾಡ್ಯಾರು ಪಟ್ಟಪೈಲೇಕ.
ಹೇಸಿ ಹೆಣ್ಣಿವ್ಹಾಂಗ ಪುಗ್ಗಾ ತಗದ ಕುಣೀತಾವ;
ನೋಡಲಿಲ್ಲ ರಾಮಗೊಂಡ, ಕರಿಮುದುಕ.

ಅವನ | ಮ್ಯಾಲೆ ಮುದುಕ ಭಾಳ ಪ್ರೀತಿ
ಕ | ಣ್ಣಾಗ ತುಂಬಿ ಅಕ್ಕರತಿ
ನೀ |  ನಮ್ಮ ಊರ ಸರದಾರಾ
ನನ | ಗಿಲ್ಲ ಎದರ ದರಕಾರಾ

ಊರ ಹೊರಗ ಹೋಗುವಾಗ ತಿರುಗಿ ನೋಡ್ಯಾನ ಗೌಡ
ಹಾವಿನ ಹುತ್ತಿನ್ಹಾಂಗ ಮೂಗ ಮುರದಾನ.
ಹೇಳತೇನ ಕೇಳ ಗೆಳೆಯಾ ನಿನ ಮುಂದ ಕತಿಯೊಂದ
ನನ ಮುಂದ ಕುಂಡ್ರ ಹೀಂಗ ತೆರದ ಮನಾ || ಗೀ ||

ನಾಟಕದ ಹುಡಗೋರು ಕೆಟ್ಟ ಚಾಳಿಗೆ ಬಿದ್ದು,
ಹುಳಮೇದ ಒಣಧಾಂಗ ಒಣಗಹತ್ಯಾವ.
ಲುಟುಲುಟು ಕಾಲ ಬಡದ ದಂಡ್ಯಾಗ ಈಸ್ಯಾವ;
ಶೀರ ದನಿಯ ನಮನಿ ಸೊರಗಹತ್ಯಾವ.

ತಲಿಯೇನ ತಗದಾವ, ಹಲ್ಲೇನ ಕಿಸಿದಾವ,
ಸಿಳ್ಳ ಹಾಕಿ ತಿರಗತಾವ ಫರಿಸೀನಾಯಿ;
ನೀರ ತರುವ ದಾರ್ಯಾಗ, ಹಾರೂರ ಕೇರ್ಯಾಗ
ಸುತ್ತತಾವ ತೊಟಗೊಂಡ ಬಿಳಿಚಾಯಿ.

ಹೊತ್ತೇರಿ ಎದ್ದ ಗೌಡ ಬಡ್ಡೀಗಿ ಹಣ ಕೊಟ್ಟು
ಕೂಡ್ಸ್ಯಾನ ಚಾವಡ್ಯಾಗ ದೊಡ್ಡ ಸಭಾ,
ಹಸಮಕ್ಳ ಸಲುವಾಗಿ ಗರಡೀಯ ಮನಿ ಕೆಡಿವಿ
ಹೊಸ ಸಾಲಿ ಕಟ್ಟಿಸೋಣ,-ಬಲೆ ಶೋಭಾ

ಊರೀಗಿ ಊರೆಲ್ಲ ಹೌದಂತ ತಲಿದೂಗಿ
ಬಾಯಿತುಂಬ ಹೊಗಳ್ಯಾರ ಗೌಡಪ್ಪನ,
ಮನಿಗೊಂಡು ಹೆಣ್ಣಾಳು ಗಂಡಾಳು ಬಂದಾವಗು,
ಲಗುಮಾಡಿ ಮುಗಿಬೇಕ , ಮಕೂರsದಿನಾ.

ಶುಕ್ರಾರ ಸುರುವಾಗಿ ಆಯ್ತಾರ ತಯ್ಯಾರ
ಬಿರದೀತ ಸ್ವಾಮಾರ ಬಡ್ಡ್ಯಾಗನ.
ಆಲsದ ಬೇರೆ ಬಂದು ತೊಡರ್ರಾ‍ವು ತೊಡಕ್ಯಾವು;
ಮೊದಲದನ ಎಲ್ಲಾರು ಕಡಿಯೋಣ.

ಚಾಲಿ | ವರದ ಮುದುಕ ಬೇಡಿಕೊಂಡಾ
ಕೈ | ಲಮುಗಿದು ಅಡ್ಡ ನಿಂತಕೊಂಡಾ
ಸರಿ | ಸರಿಸಿ ಗಿಡವ ಕಡಿದಾರ
ಸಾ | ಲೀಯ ಪೂಜಿ ಮಾಡ್ಯಾರ.

ತಾಸೇ ಹಲಗಿ ಡೊಳ್ಳ ಗರ್ದೀಲೆ ಬಾರಿಸ್ಯಾರ;
ಕರಿಯಜ್ಜ ತೀರಿಕೊಂಡ ಅದsದಿನಾ.
ಹೇಳತೇನ ಕೇಳ ಗೆಳೆಯಾ ನಿನ ಮುಂದ ಕತಿಯೊಂದ
ನನ ಮುಂದ ಕುಂಡ್ರ ಹೀಂಗ ತೆರದ ಮನಾ || ಗೀ ||

ಬಾಂದದ ಮ್ಯಾಗಿನ ಕೆಂದ ಗೋವಿನ ಕರಾ
ಬಿಸಲೀಗಿ ಬಾಯಿ ಬಾಯಿ ಬಿಡತsದರಿ.
ಬಿಸಲ ಹಳದಿಯ ನಡಲುವ ಕರಿ ನೆರಳ ಚೆಲ್ಲೂವ
ಹಸರ ನಂಬಿಗೆಯನ್ನು ಕಡದಾರರಿ.

ರಾಮ ಮುದುಕನ ನೆನೆದು ಹಾಡಿ ಅಳಬೇಕಂದ್ರ
ಹನಿ ನೀರ ಬರಲಿಲ್ಲ ಕಣ್ಣ ಆಗ.
ಹಡೆದವನ ಬಯ್ಯುದಕ ಬಾಯಸರ ತೆಗೆದಾನ
ಅಕ್ಷರ ಹಿಡೀಲಿಲ್ಲ ಶಬ್ದದೊಳಗ.

ಕೋಲೇ ಬಾಗಿಲ ಮುಚ್ಚಿ ಕುಂತ ಧ್ಯಾನಿಸತಾನ ,
ಉಸುರರೆ  ಹಾಕತಾನ ಮೈಲುದ್ದ.
ಕತ್ತಲೆಯ ಗವಿಯೊಳಗ ಕೇಂದ್ರ ತಪ್ಪಿದ ಭ್ರಾಂತಿ
ಉರುಳ್ಯಾವ ಇಳಕಲಕಡ್ಡಬಿದ್ದಾ.

ಅದನಿದನು ಬ್ಯಾರೇ ಮಾಡಿ ವರ್ಣಿಸುವ ವಿವರಿಸುವ
ಬೆಳಕಿಲ್ಲ, ಬಲ್ಲಿರೇನ ನೀವ್ಯಾರರೇ ?
ದೀವೀಗಿ ತರಲಾಕ ದೇವರ ಮನಿ ಹೊಕ್ಕ,
ಮನದಾಗ ಖುಶಿಯಾಗಿ ಕುಂತಾನರಿ.

ಅವರಪ್ಪ ಬಂದವನು ‘ಭಕ್ತಿ ನಾಟಕ ಸಾ ಕಲು’
ಹಿಂಗಂದು ಚೆಂಡೀಯ ಚಿವುಟ್ಯಾನರಿ
ನಾಚಿ ಕೋಲೆಗೆ ಬಂದು ನೋಡತಾನು,-ಕರಿಯಜ್ಜ
ಮೀಸ್ಯಾಗ ಮುಸಿ ಮುಸಿ ನಗತಾನರಿ.

ಚಿ | ಟ್ಟಂತ ಚೀರಿ ಬಿದ್ದಾನು
ಬೇ | ಖಬರ ಆಗಿ ಅಂದಾನಲು
ಪಾ | ರಂಬಿ ಅಂತ ಕೂಗ್ಯಾನು
ಹಡೆ | ದವನ ಬಳಿಗೆ ಕರದಾನು

ಕರ್ರೆವ್ವನಾಣಿ ನೀನಲ್ಲ-ಇನ್ನೇನೇನೊ
ಬಡಬಡಿಸಿ, ಹೊಸ್ತಿಲಕ ತಲಿ ಹೊಡೆದಾನ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನ ಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

೧೦

ಕರಿಯ ಅಜ್ಜನ ಭೂತ ರಾಮಗೊಂಡನ ಹಿಡಿದ
ಸುದ್ದಿ ಹಬ್ಬಿತು ಊರ ಕಡೀತಕ;
ಹೊರಕಡಿಗೆ ಹೋದ ಹೆಣ್ಣಿಗೆ ತಿಳಿದು ಹೊಳಿಮ್ಯಾಗ
ಬರ ಬರದ ಕಳಿಸ್ಯಾಳು ದಿಗ್ದೇಶಕ.

ಬಾಗೀಲ ಹಾಕ್ಯಾನು, ಅಡಳೀಯ ಜಡದಾನು,
ಕಳಕೊಂಡು ಹುಡುಕ್ಯಾನು ಒಳಹೊರಗ.
ಉಗುರು ತಾಕಿದ ಹೇನಿನಂತೆ ಅಡಗುವ ಹೆಣ್ಣು
ಮರ ಮರಾ ಮರಿಗ್ಯಾವ ಮನದೊಳಗ.

ಏಸೋ ಅಮಾಸೆಗಳ ಪುರಮಾಸೆ ಸಾಕ್ಯಾನ
ಸುರದಾನ ಅಳದಾನ ನಿಟ್ಟುಸಿರ
ಮುತಿಲ ನೀಲಿಯ ಕೆಳಗ ಟೊಂಗಿ ತೂಗ್ಯಾಡ್ಯಾವ
ಎಲಿ ಉದುರಿ ಅದರ್ಯಾವ ತೆರಿನೀರ.

ಈ ಊರಿಗೆರವಾಗಿ ಬ್ಯಾರೆ ಕಡೆ ಹೋಡುದಕ –
ಕಾಲಕಿತ್ತ ಆದಾನ ತಯ್ಯಾರಾ.
ಹಡದಪ್ಪ ಬ್ಯಾಡಂತ ಅನಲಿಲ್ಲ, ಹಡದವ್ವ
ಹಾಕಿದ್ದ ಗೆರಿದಾಟಿ ನಡೀಲಾರ.

ಕಣ್ಣಾಗ  ಸೊನ್ನೀಯನಿಂಬುಗೊಂಡಾನಣ್ಣ
ಹಳಿ ನಿಮಿಷ ಹಾಸ್ಯಾನ ಮಲಗ್ಯಾನರಿ
ಬೂದಿ ಬೆಳದಿಂಗಳಲಿ ಹುದುಗಿ ಹೊಳೆದವು ಕೆಂಡ
ಮೈ ಸುಟ್ಟು ಛಟ್ಟನೆ ಎದ್ದಾನರಿ

ಮೈ | ನಡುಕ ಹುಟ್ಟಿ ಎದ್ದಾನರಿ
ದಿ | ಕ್ಕೀಗಿ ಕೈಯ ಮುಗದಾನ
ಹಡೆ | ದಾಕಿ ಬಳಿಗೆ ಬಂದಾನ
ಹೇಳುದಕ ಬಾಯಿ ತಗದಾನ

ತಾಯಿ ಕುಲು ಕುಲು ಏನಂತ ಅಂದಾಳ
ತೃಪ್ತಿ ಮಾಡೊ ಬಸರಿನ ಬಂಕಿಯನಾ
ಹೇಳತೇನ ಕೇಳ ಗೆಳೆಯಾ ನಿನ ಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರೆದ ಮನಾ || ಗೀ ||