ಕಟ್ಟಿರುವ ಕಣ್ಣಿ ಹರಕೊಂಡು. ಢುರಕೀ ಹೊಡೆದು,
ಹಿಡಿಯ ಬಂದಣ್ಣಗಳ ಕೊಸರಿ, ಕೈಮೀರಿ,
ಉದ್ಗಾರ ಕೊರೆ ಬೇಲಿ ಹಾರಿ ಹೋಹೋ
ಬಂತು ಹಂಡ ಹೋರಿ.
ಮುಸಮುಸನೆ ಮುಸಮುಸನೆ ತೇಗುವುದು;
ಕಿಸಮೂಗಿಂದ ಬಸಿಯುವುದು ಸೊಕ್ಕು, ಹುಣ್ಣಿಮೆಯ
ಜೇನು ಹುಟ್ಟಿನ ತೊಟಕು.
ಮಡುಗೊಂಡ ಗಾಳಿಯನು ಬೀಸು ಕಿವಿಗಳ ಚಾಚಿ
ಎದುರು ಈಸುವ ಹಮ್ಮು.
ಮುಂದೆ ಬಂದವರ ತುಟಿ ಕಂಟಕ್ಕೆ ಬಾಯಿಕ್ಕಿ
ಇಡಿಯ ಕೊಡವನ್ನೆಲ್ಲ ಬರಿದು ಮಾಡುವ ಆಸೆ.             ೧೦
ಬೆಂಕಿ ಮೈ, ಮೈ ತುಂಬ ಬಾಯಿ; ಸಿಕ್ಕಷ್ಟನ್ನು,
ಸಿಕ್ಕಲ್ಲಿ ಗಪಗಪಾ ತಿಂಬಾಸೆ.
ದೃಷ್ಟಿ ಕಡೆಗೋಲಿಂದ ದಿಕ್ಕ ಕಡೆಯುವ ಮೋಡಿ.
ಕರಣಗಳ ಕಳವಳಕೆ ಕಾಲ ಕೆದರುತ್ತಲಿದೆ
ಎದ್ದ ಧೂಳಲಿ ನಾನು ನೀನು ಯಾರೊ!
ಇನಿಯಲುಗಿ ಬೆನ್ನ ಹುರಿಯುಬ್ಬಿನಲಿ ಒಡಮುರಿತ;
ಒಳಗೆ ಗಲ್ಫಸ್ಟ್ರೀಮು, ತಿರುಗಣಿಯ ಮಡುಸುತ್ತಿ
ತೊಡೆಯ ನಾಡಿಯ ಬೇರ ಕೀಳಲೆಳಸುವದು.
ಮತ ಮತ್ತ ಬೆರಳ ತುದಿಯಲ್ಲಿ ಮುಡಿಯನು ಮುಟ್ಟಿ      ೨೦
ಸಲಕೊಮ್ಮೆ ಒಡಪನಾಡುವ ಎಲಗ ಏ ಬಾಲಿ,
ಮುನ್ನೋಡೆ ಸರಿ ಅತ್ತ; ಇಲದಿರಕ
ತುಟಿ ಕೆನ್ನೆಯಲಿ ಬೆಳೆದ ಚೆಂಗುಲಾಬಿಗಳನ್ನು
ಜತನವಾಗಿಟ್ಟುಕೋ ಜ್ವಾಕಿ!


ಒಂದೆ ಬಿಳಿಯಲ್ಲೀಗ ಏಳು ಬಣ್ಣದ ಸೃಷ್ಟಿ.
ಹಳೆ ಹಸಿರು ಪಡಿಕಿಯನು ಹಚ್ಚಿಕೊಂಡಿದೆ ಬಿಡೋ ಭೂಮಿ,
ಹರಕಿನಲಿ ಕಂಡದ್ದು ಬಿಳಿಯ ತೂಗಲು!
ಆಕಾಶಕಾದರೂ ಎಂಥ ಕೆಂಪು!
ಘಟ್ಟದಲ್ಲಿನ ಭಟ್ಟಿ ಸೆರೆ ಹರಿವಿ ತೂತಾಗಿ
ಸೋರಿ, ಒಸರುತ್ತಲಿದೆ ಹೊಳೆಯಾಗಿ; ದಂಡೆಯಲಿ       ೩೦
ತೆರೆ ನಿರಿಯನೊದ್ದಾಡಿ ದೀಡಿಯಾಡುವ ಮುರುಕ.
ಈ ಗಾಳಿ, ಹೂವ ಹುಡಿಯಲ್ಲಿ ಹುಡದಿಯನಾಡಿ,
ಬಿದಿರ ಹರೆ ನದಿನೆಂಟರಲ್ಲಿ ಕಚಗುಳಿಯಿಟ್ಟು,
ಹಾಕುವುದುಲ ಗವಿಯೊಳಗೆ ಸಿಳ್ಳು-ತುಡುಗು ಸಂಕೇತ.
ಯಾಸಿ ಕಣ್ಣಿನ ಹಾಗೆ ಬೇಲಿಯಲಿ ಹೀ ಚಿಗುರು.
ಮಗ್ಗಿ ತಗಿಸಿದ ಕುಬಸ ಬಳ್ಳಿ.
ಕಂಡು ಹೆಣ್ಣಿನ ಕತೆಗೆ ನಾನೆ ನಾಯಕನೀಗ.
ಸೀರೆಯುಟ್ಟದ್ದೆಲ್ಲ ಜೀವಂತ ಉದ್ರೇಕ.
ಹಸಿರು ಐಸಿರಿಯಿಂದ ಮೂರ್ಛೆ ಹೋಗುವ ತಳದಿ
ಹೇಳು ‘ಚಲುವನು ಸಿಕ್ಕಿ
ನನಗೆ ಮದುವೆಯೆಂದು?’  ೪೦


ಬಿಸಿಯೆಂಬುದುಂಟೆಂದು ನನಗೆ ಗೊತ್ತಾದದ್ದೆ ಈಗ,
ಇದೆ ಮೊದಲ ಸಲ.
ಸಸಿಯ ಒಳಗಡೆ ಹೂತ ಚಿಗುರು,
ಚೈತ್ರಗಳ ಆರೈಕೆಯಲ್ಲಿ ಆಗಲೆ ಬೆಳೆದು,
ಹೊಳೆಯ ದಂಡೆಯ ಕರಿಕಿಯಾಗಿ ಆವರಿಸಿತೋ
ಇದ್ದ ಬಿದ್ದಿರುವೆಲ್ಲ ಅವಕಾಶವ!
ಮೀಸಲದ ಬಯಕೆಯಲಿ ಬಾಯಿ ಬಿಟ್ಟಿದೆ ಭೂಮಿ.
ತನ್ನ ಅಸ್ತಿತ್ವಕ್ಕೆ ಸಾರ್ಥಕತೆ ಬರುವ ಕ್ಷಣ
ಮೋಡ ತೊಡೆಯಾಳದಲಿ ಮಿಂಚಿನಾಟ.
ಸಾವುಗಳ ಸತ್ತ ಬೆರಗಿನಲಿ ಹಸುರಿನನಂತ,    ೫೦
ಲೀಲೆಯಿದು, ಹುಡುಗಿ ಬಾ ಒಡೆದೆನೊಡಪ!