ಸೂಚನೆ ||
ಸಿಂಧುನಗರದಿಂದೆ ನಡೆತಂದು ಪವನಜಂ |
ಸಿಂಧುರಂಗದೊಳೆಸೆವ ದ್ವಾರಕೆಯೊಳೈದೆ ಮುಳಿ |
ಸಿಂ ಧುರದೊಳಸುರರಂ ಗೆಲ್ವವನನಾರೋಗಣಿಯ ಸಮಯದೊಳ್ ಕಂಡನು ||

ಎಲೆ ಮಹೀಶ್ವರ ನಾಗನಗರಮಂ ಪೊರಮಟ್ಟ |
ನಿಲಸುತಂ ಪಯಣಗತಿಯೊಳ್ ಬರುತೆ ಕಂಡನಘ |
ಕುಲದ ಪವಿಘಾತ ಭಯ ಶಮನೌಷಧಿಯನತುಲಕಲ್ಲೋಲನಿರವಧಿಯನು ||
ಜಲಜಂತು ಚಾರಣವಿಧಿಯನಿಳಾಮಂಡಲದ |
ಬಳಸಿದ ಪರಿಧಿಯ ನಪಹೃತಗಣಿತಸುಧಿಯ ನವಿ |
ರಳಘೋಷದುದಧಿಯ ನನೇಕರತ್ನಪ್ರತತಿಗಳ ನಿಧಿಯನಂಬುಧಿಯನು ||೧||

ಮುನಿ ಮುನಿದು ಪೀರ್ದುದಂ ರಾಜವಂಶಕುಠಾರ |
ಕನ ಕನಲ್ಕೆಗೆ ನೆಲಂಬಿಟ್ಟುದಂ ರಘುಜರಾ |
ಮನ ಮನದ ಕೋಪದುರುಬೆಗೆ ಬಟ್ಟೆಗೊಟ್ಟುದಂ ಬಡಬಾನಲಂ ತನ್ನೊಳು ||
ದಿನದಿದೊಳವಗಡಿಸುತಿರ್ಪುದಂ ಬಹಳ ಜಡ |
ತನ ತನಗೆ ಬಂದುದಂ ಭಂಗಮೆಡೆಗೊಂಡುದಂ |
ನೆನೆನೆನೆದು ನಿಟ್ಟುಸಿರ್ವಿಟ್ಟು ಸುಯ್ವಂತುದಧಿ ತೆರೆವೆರ್ಚುಗೆಯೊಳಿರ್ದುದು ||೨||

ಘುಳಿಘುಳಿಸುತೇಳ್ವ ಬೊಬ್ಬುಳಿಗಳಿಂ ಸುಳಿಗಳಿಂ |
ಸೆಳೆ ಸೆಳೆದು ನಡೆವ ಪೆರ್ದೆರೆಗಳಿಂ ನೊರೆಗಳಿಂ |
ಪೊಳೆವ ತುಂತುರಿನ ಸೀರ್ಪನಿಗಳಿಂ ಧ್ವನಿಗಳಿಂ ವಿವಿಧರತ್ನಗಳಿಂದೆ ||
ಒಳಕೊಳ್ವ ನಾನಾಪ್ರವಾಹದಿಂ ಗ್ರಾಹದಿಂ |
ದಳತೆಗಳವಡದೆಂಬ ಪೆಂಪಿನಿಂ ಗುಂಪಿನಿಂ |
ದಳದ ಪವಳದ ನಿಮಿರ್ದ ಕುಡಿಗಳಿಂ ತಡಿಗಳಿಂದಾ ಕಡಲ್ ಕಣ್ಗೆಸೆದುದು ||೩||

ಪಾಕಶಾಸನನ ಸಕಲೈಶ್ವರ್ಯ ಸಂಪದಕೆ |
ಬೇಕಾದ ವಸ್ತುವಂ ಪಡೆದಿತ್ತೆನೆನ್ನವ |
ರ್ಗಾಕುಲಿಶಧರನುಪಹತಿಯನೆಸಗನದರಿಂದಮಿನ್ನಿಳೆಗೆ ಮುನ್ನಿನಂತೆ ||
ಜೋಕೆ ಮಿಗೆ ತೆರಳಿ ನೀವೆಂದು ಸಂತೈಸಿರ |
ತ್ನಾಕರಂ ಕಳುಹಿದ ಕುಲಾದ್ರಿಗಳ ಪರ್ಬುಗೆಗ |
ಳೇ ಕರಮಿವಹುವೆನಲ್ ಪೆರ್ದೆರೆಗಳೆದ್ದು ಬರುತಿರ್ದವು ಮಹಾರ್ಣವದೊಳು ||೪||

ಶಿವನಂತೆ ಗಂಗಾಹಿಮಕರಾವಹಂ ರಮಾ |
ಧವನಂತೆ ಗೋತೈ ಕಪಾಲಕಂ ಪಂಕರುಹ |
ಭವನಂತೆ ಸಕಲಭುವನಾಶ್ರಯಂ ಶಕ್ರನಂತನಿಮಿಷನಿಕರಕಾಂತನು ||
ದಿವಸಾಧಿಪತಿಯಂತನಂತರತ್ನಂ ರಾಜ |
ನಿವಹದಂತಪರಿಮಿತವಾಹಿನೀಸಂಗತನು |
ಪವನಾಳಿಯಂತೆ ವಿದ್ರುಮಲತಾಶೋಭಿತಂ ತಾನೆಂದುದಧಿ ಮೆರೆದುದು ||೫||

ಚಿಪ್ಪೊಡೆದು ಸಿಡಿವ ಮುತ್ತುಗಳಲ್ಲದಿವು ಮಗು |
ಳ್ದುಪ್ಪರಿಸುವೆಳವಿನ್ ಬಿದಿರ್ವ ಶೀಕರಮಲ್ಲ |
ಮೊಪ್ಪವ ಸುಲಲಿತಶಂಖದ ಸರಿಗಳಲ್ಲದಿವು ಬೆಳ್ನೆರೆಗಳೊಟ್ಟಿಲಲ್ಲ||
ತಪ್ಪದೊಳಗಣ ರನ್ನವೆಳಗಲ್ಲದಿವು ತೊಡ |
ರ್ದಿಪ್ಪ ಕೆಂಬವಳಮಲ್ಲಿವು ಪಯೋನಿಧಿಯ ಕೆನೆ |
ಯೊಪ್ಪಮಲ್ಲದೆ ನೀರ್ ಮೊಗೆಯಲಿಳಿವ ಮೇಘಂಗಳಲ್ಲೆನಿಸಿದುವು ಕಡಲೊಳು ||೬||

ಕ್ರೂರ ಕರ್ಕಟಕ-ಕಟಕಂ ಕಮಠಮಠಮಿಡಿದ |
ನೀರಾನೆಗಳ್ ನೆಗಳ್ದೆಡೆ ಮುದಮುದಯಿಪ ಶಾ |
ಲೂರಕುಲರಾಜಿ ರಾಜಿಪ ಗೃಹಂ ನಿಬಿಡ ಗಂಡೂಪದ ಪದಂ ಪೆರ್ಚಿದ ||
ಘೋರ ಸಮುದಗ್ರದ ಗ್ರಾಹಭವ ಭವನಮುಂ |
ಭೂರಿಭೀಕರ ಮಕರಮಹಿ ತಿಮಿತಿಮಿಂಗಿಲ ಕ |
ಠೋರತರ ರಾಜೀವ ಜೀವಪ್ರತತಿ ವಾಸವಾ ಸಮುದ್ರದೊಳೆಸೆದುದು ||೭||

ಸುಳಿದೊಂದು ವಿನ್ನುಂಗಿತಾ ವಿನನಾ |
ಗಳೆ ನುಂಗಿತೊಂದು ವಿನಾ ವಿನಾ ನುಂಗಿದುದು |
ಬಳಿಕೊಂದು ವಿನದಂ ಮತ್ತೊಂದು ವಿನ್ನುಗಿತಾ ವಿನ ನುಂಗಿತೊಂದು ||
ತೊಳಲುತೊಂದೊಂದನೊಂದಿಂತು ನುಂಗಲ್ ತಿಮಿಂ |
ಗಿಳನೆಲ್ಲಮಂ ನುಂಗುತಿರ್ಪುದೆನೆ ಬೆದರಿ ವಿ |
ನ್ಗಳೆ ತಿರುಗುತಿರ್ದುವೆರಕೆಗಳೊಡನೆ ಮುಂಪೊಕ್ಕ ಗಿರಿಗಳೆಡೆಯಾಡುವಂತೆ ||೮||

ಆ ಮಹಾಂಭೋಧಿಯಂ ನೋಡಿ ಹರ್ಷಿತನಾಗಿ |
ಭೀಮಸೇನಂ ಬಳಿಕ ನಲವಿನಿಂ ದ್ವಾರಕೆಯ |

ಸೀಮೆಗೈತಂದು ನಗರದ್ವಾರಮಂ ಪೊಕ್ಕು ಬರೆ ರಾಜಮಾರ್ಗದೊಳಗೆ ||
ಸಾಮಜಗಿರಿಯ ಹಯತರಂಗದ ನೆರವಿದೊರೆಯ |
ಚಾಮರ ಶಫರಿಯ ಬೆಳ್ಗೊಡೆನೊರೆಯ ಭೂಪಣ |
ಸ್ತೋಮಮಣಿಗಣದ ಕಳಕಳರವದ ಜನದ ಸಂದಣಿಯ ಕಡಲಂ ಕಂಡನು ||೯||

ಪೆಚ್ಚಿದಿಂಗಡಲೂರ್ಮಿಮಾಲೆ ಮಾಲೆಗಳೆಡೆಯೊ |
ಳುಚ್ಚಳಿಸಿ ಹೊಳೆಹೊಳೆವ ಮರಿವಿನ್ಗಳೆನೆ ತೊಳಗು |
ವಚ್ಚಬೆಳ್ಮುಗಿಲೊಡ್ಡುಗಳ ತರತರಂಗಳೊಳ್ ತಲೆದೋರ್ಪ ಮಿಂಚುಗಳೆವೆ ||
ಅಚ್ಚರಿಯೆನಿಸಪ ರಾಜಮಾರ್ಗದಿಕ್ಕೆಲದೊಳಿಹ |
ನಿಚ್ಚಳದ ಕರುಮಾಡದೋರಣದ ನೆಲೆನೆಲೆಯೊ |
ಲೋಚ್ಚೇರೆಗಂಗಳೆಳವೆಂಗಳ ಕಟಾಕ್ಷರ ಮರೀಚಿಗಳ್ ಸೊಗಯಿಸಿದುವು ||೧೦||

ವಿರಚಿಸಿದ ಕರುವಾಡದಿಕ್ಕೆಲದ ನವರತ್ನ |
ಪರಿಖಚಿತ ಕನಕತೋರಣಮೊಪ್ಪಿದುದು ರಜತ |
ಗಿರಿಶಿಖರಮಂ ಸಾರ್ದ ಶುಭ್ರಾಭ್ರದೊಳ್ ಮೂಡಿದಮರೇಂದ್ರಚಾಪದಂತೆ ||
ಪರಿಪರಿಯ ಗುಡಿ ಕಳಸ ಕನ್ನಡಿ ಪತಾಕೆ ಸೀ |
ಗುರಿಚವರಿಗಳ ಸಾಲ್ಗಲೆಸೆದವು ಗಗನಮೆಂಬ |
ಕರಿಯ ಸಿಂಗರಿಸಿದರೊ ಪರಿಮಳೋಸವಕೆ ಪೊರಮಡುವನಿಲರಾಜಂಗೆನೆ ||೧೧||

ಹರ್ಮ್ಯಾಗ್ರದೊಳ್ ವಿರಾಜಿಪ ಚಂದ್ರಶಾಲೆಗಳ |
ನಿರ್ಮಲಸ್ಥಳದೊಳೇಕಾಂತದಿಂ ತನುಲತೆಯ |
ಘರ್ಮಶ್ರಮಂಗಳೆವ ಸೊಕ್ಕು ಜೌವನದ ನೀರಜಗಂಧಿಯರ ಕೊಬ್ಬಿದ ||
ಪೆರ್ಮೊಲೆಗಳೆಡೆಯ ಚಂದನದಣ್ಪ ಮಲ್ಲಿಗೆಯ |
ಲರ್ಮುಡಿಯ ತನಿಗಂಪ ನೆರವಿ ನೆರವಿಗೆ ತಂಬೆ |
ಲರ್ಮೆಲ್ಲಮೆಲ್ಲನೆ ಪರಪುತಿರ್ದುದಾ ರಾಜಮಾರ್ಗದೊಳ್ ಪಿಸುಣರಂತೆ ||೧೨||

ದುರ್ಗಮ ಜಡಾಶ್ರಯಮನುಗ್ರಜಂತುಗಳ ಸಂ |
ಸರ್ಗಮಂ ಬಿಟ್ಟು ಮುಕ್ತಾಳಿ ವಿದ್ರುಮ ರತ್ನ |
ವರ್ಗಂಗಳಿಲ್ಲಿ ಸೇರಿದುವೆಂಬೊಳೊಪ್ಪಿದವನರ್ಘ್ಯಮಣಿವಸರಂಗಳು ||
ಭರ್ಗಸಖನೊಲಿದು ನವನಿಧಿಗಳಂ ಧಾತ್ರಿಯ ಜ |
ನರ್ಗೆ ವಿಸ್ತರಿಸಿ ತೋರಿಸಿದನೆನೆ ಚಿನ್ನವರ |
ದರ್ಗುಡಿಸಿಗೊಂಡಿರ್ಪ ರಾಸಿಪೊನ್ಗಳ್ ಪಿಂಗದಂಗಡಿಗಳೆಸೆದಿರ್ದುವು ||೧೩||

ದಾನವಧ್ವಂಸಿಗೀ ದ್ವಾರಕಾಪುರಿ ರಾಜ |
ಧಾನಿ ಗಡ ಸಕಲವೈಭವದೊಳಾತನ ರಾಣಿ |
ತಾನಿರದಿಹಳೆ ಲಕ್ಷ್ಮಿ ಮೇಣಿವಳುಮರಸಿಯಲ್ಲದೆ ಧರಣಿ ತನ್ನೊಳಿರ್ದ ||
ನಾನಾ ಸುವಸ್ತುಗಳನೊದವಿಸದಿಹಳೆ ಚೋದ್ಯ |
ಮೇನೆನೆ ವಣಿಗ್ವಾಟಪಂಙಗಳ್ ಶೋಭಾಯ |
ಮಾನವಾದುವು ರಾಜಮಾರ್ಗದೊಳ್ ಬಹಳ ಧನಸಂಪತ್ಸಮಾಜದಿಂದೆ ||೧೪||

ಸವಿಯೆ ಪ್ರಯರಾಗಮದ ರಾಗಮದರಾಗ ಮದ |
ನವಿಲಾಸವೆಂದು ತಾಂಬೂಲಮಂ ತೋರ್ಪರ್ ಮು |
ಡಿವೊಡೆ ಬೇಕಾದಲರ್ಕಾದಲರ್ಕಾದಲಕ್ಕಂಗಜಾಹವದೊಳೆಂದು ||
ನವಸುಗಂಧಾಮೋದಕುಸುಮಂಗಳಂ ತೋರಿ |
ಸುವರೊಂದುವೇಕಾಂತಕಾಂತರನೊಲಿಸ |
ಲಿವು ಬಲ್ಲುವೆಂದು ಪರಿಮಳದ ಕರಡಿಗೆಗಳಂ ತೋರ್ಪರ್ ಪಲರ್ ವಿಟರ್ಗೆ ||೧೫||

ನಸುನಗೆಯೊಳರೆವಿರಿದ ಮಲ್ಲಿಗೆಯನುರೆಪೊಳೆವ |
ದಶನದೊಳ್ ಕುಂದಮಂ ಮೊಗದೊಳರವಿಂದಮಂ |
ಮಿಸುಪ ನಳಿತೋಳೊಳ್ ಶಿರೀಷಮಾಲೆಯನೆಸೆವನಾಸದೊಳ್ ಸಂಪಗೆಯನು ||
ಎಸಳ್ಗಣ್ಣೊಳುತ್ಪಲವನುಗುರ್ಗುಳೊಳ್ ಕೇತಕಿಯ |
ನೊಸೆದಿರಿಸಿ ಕೊಂಡುಳಿದಲರ್ಗಳಂ ಮಾರ್ವವೊಲ್ |
ಕುಸುಮದ ಪಸರದೊಳೊಪ್ಪಿದರಲ್ಲಿ ಪೂವಡಿಗವೆಣ್ಗಳದನೇವೇಳ್ವೆನು ||೧೬||

ಕಬ್ಬುವಿಲ್ ತುಂಬಿವೆದೆ ಪೂಸರಲ್ ಪೂಣ್ದಿಸಲ್ |
ನಿಬ್ಬರಮಿದೆಂದು ಮದನಂ ಮಾಲೆಗಾರ್ತಿಯರ |
ಹುಬ್ಬೆಂಬ ಚಾಪಮಂ ಕುರುಳೆಂಬ ನಾರಿಯಂ ಕಣ್ಣೆಂಬ ಕೂರ್ಗಣೆಯನು ||
ಉಬ್ಬರದ ಸಾಹಸದೊಳಳವಡಿಸಿಕೊಂಡು ಬಿಡ |
ದಬ್ಬರಿಸಿ ಸೋವಿ ತಂದವರ ಬಲ್ಮೊಲೆಯೆಂಬ |
ಹೆಬ್ಬೆಟ್ಟದೆಡೆಯಿರುಬಿನೊಳ್ ಕೆಡಪುತಿಹನಲ್ಲಿ ವಿಟ ಪಕ್ಷಿಮೃಗಕುಲವನು ||೧೭||

ಮಲ್ಲಿಗೆಯಲರ್ವಿಡಿದು ಕೆಂಜಾದಿಯೆಂದೀವ |
ರುಲ್ಲಾಸದಿಂದೆ ನೀಲೋತ್ಪಲವನೆಳನಗೆಯ |
ಸೊಲ್ಲಿಂದ ಕುಮುದಮೆಂದುಸಿರುವರ್ ಸುರಹೊನ್ನಯಲರ ಮಾಲೆಯನೊಪ್ಪುವ ||
ಸಲ್ಲಲಿತ ಕಾಯದ ಸರಸಕೆತ್ತಿ ಸುರಗಿಯೆಂ |
ದೆಲ್ಲರ್ಗೆ ತೋರಿಸುವರರುಣ ತಾಮರಸಮಂ |
ಚೆಲ್ಲೆಗಣ್ಗೊನೆಯೊಳೀಕ್ಷಿಸಿ ಪುಂಡರೀಕಮೆಂದೆಚ್ಚರಿಪರೆಳವೆಣ್ಗಳು ||೧೮||

ಪಸರದೊಳ್ ಮಾರ್ವಲರ್ಗಳ ಸರಂಗಳ್ಗೆ ಸೊಗ |
ಯಿಸುವ ಸುಯುಎಲರ ಕಂಪಿಂದೆ ಕಂಪೇರಿಸುವ |
ರೊಸೆದು ಕೋಮಲದ ತನುವಲ್ಲರಿಯ ಸೊಂಪಿಂದೆ ಸೊಂಪುದೋರಿಸುತಿರ್ಪರು ||
ಲಸದವಯವಂಗಳಾಕೃತಿಯ ಚೆಲ್ವಿಕೆಯಿಂದೆ |
ಪೊಸತೆನಿಪ ಚೆಲ್ವಿಯನೆಯ್ದೆ ನಲವಿಂದೆ ಕಾ |
ಣಿಸುವರಲ್ಲಿಯ ಮಾಲೆಗಾರ್ತಿಯರ್ ಮದನಶರಮೂರ್ತಿಯರ್ ವಿರಹಿಗಳ್ಗೆ ||೧೯||

ನಾನಾಸುವತ್ತುಗಳ ವಿಸ್ತರನೊಲಿದು ಪವ |
ಮಾನಾತ್ಮಜಂ ನೋಡುತೈತರಲ್ ಮುಂದೆ ಗಣಿ |
ಕಾ ನಾರಿಯರ ಸದನಪಙಗಳ ಲೋವೆಗಳ ಸಾಲ್ಮೆರೆದುವಿಕ್ಕೆಲದೊಳು ||
ಏನಾದೊಡಂ ಮುನಿಮೃಗಾವಳಿಯ ಬೇಂಟೆಯಂ |
ತಾನಾಡಲೆಂದು ಸಿಂಗರದ ಪೆಣ್ಗಾಡಿನೊಳ್ |
ಮೀನಾಂಕನೃಪತಿ ಕಟ್ಟಿಸಿದ ಬೆಳ್ಳಾರಂಗಳಾಗಬೇಕೆಂಬಂತಿರೆ ||೨೦||

ಘನಕುಚಧ್ವಯಕೆ ಲೋಚನಯುಗಕೆ ಸೊಗಯಿಸುವ |
ತನುಮಧ್ಯಕಿಂಪಾದನುಣ್ದೊಡೆಗೆ ಪಡಿಗಟ್ಟು |
ವನಿತು ಸುಬಗುಳ್ಳ ವಸ್ತುಗಳನಂಬುಜಭವಂ ಭುವನದೊಳ್ ಕಾಣೆನೆಂದು ||
ಜನಮರಿಯೆ ಪೆರ್ಗವತೆ ಸೇರೆ ಪಿಡಿ ಕರಭಂಗ |
ಳೆನಿಪಿವರೊಳಭಿನಯಿಸಿ ತೋರಿಸಲ್ ಮೃದುಪಾಣಿ |
ವನಜಮಂ ಸಥಷ್ಟಿಸಿದನೆಂಬ ಚೆಲ್ವಿನ ಕೋಮಲೆಯರಲ್ಲಿ ಕಣ್ಗೆಸೆದರು |೨೧||

ಗುರುಕುಚದ ಭರಣಿ ಸುಂದರಗಜಾರೋಹಿಣಿ ಮ |
ಧುರಕಾಮಕೇಳೀರಸಾರ್ದ್ರೆ ಸನ್ಮೋಹನೋ |
ತ್ತರೆ ಸುರತ ತಂತ್ರವಿರಚಿತ ಹಸ್ತಚಿತ್ತೆ ಹ್ರಸ್ವಾತಿವರ್ತುಳಸುಕಂಠೆ ||
ವರಬಾಹುಮೂಲೆ ಮಣಿಭೂಷಣಶ್ರವಣೆ ವಿ |
ಸ್ತರಗುಣಾಪೂರ್ವೆಯೆನಿಸುವ ಬಾಲಿಕೆಯರಲ್ಲಿ |
ಪರಿಶೋಭಿಸಿದರೆಸೆವ ನಕ್ಷತ್ರಗಣದಂತೆ ಮೊಗಸಸಿಯ ಸೇರುವೆಯೊಳು ||೨೨||

ಅಡಿಯುಮಮಲಾಸ್ಯಮುಂ ಕಮಲಮಂ ಕಮಲಮಂ |
ನಡೆಯುಮೆಳವಾಸೆಯುಂ ನಾಗಮಂ ನಾಗಮಂ |
ಕಡುಚೆಲ್ವಪಾಣಿಯುಮಧರಮುಂ ಪ್ರವಾಳಮಂ ಲಲಿತಪ್ರವಾಲಮಣಿಯಂ ||
ತೊಡೆಯುಮೆಸೆವಕ್ಷಿಯುಂ ಬಾಳೆಯಂ ಬಾಳೆಯಂ |
ನಡುವುಂ ಸುವಾಣೆಯುಂ ಹರಿಯುಮಂ ಹರಿಯುಮಂ |
ಬಿಡದೆಪೋಲ್ತಿರೆ ಮೆರೆವ ಕಾಂತೆಯರ್ ನೀಲಾಳಕಾಂತೆಯರ್ ಸೊಗಯಿಸಿದರು ||೨೩||

ನಾಗರಿಪುಮಧ್ಯಮುರ್ವಸಿಯ ನಡುವಿಂಗೆ ಸರಿ |
ಯಾಗಬಲ್ಲುದೆ ಪೊಸವಸಂತೋತ್ಸವದೊಳುಲಿವ |
ಕೋಗಿಲೆಯ ಸರ ಮೇನಕೀನಿತಂಬಿನಿಯ ನುಣ್ದನಿಗೆ ಪಾಸಟಿಯಪ್ಪುದೇ ||
ಪೂಗಣೆ ವಿಲಾಸದಾರಂಭೆಯ ವಿರಾಜಿಸುವ |
ಸೋಗೆಗಣ್ಗೆಣೆಯಹುದೆ ನೋಡೆಂದು ಪೊಗಳ್ದನನು |
ರಾಗದಿಂದೊರ್ವಳಂ ವಿಟನಪ್ಸರಸ್ತ್ರಿಯರಂ ಪೆಸರಿಸುವ ನೆವದೊಳು ||೨೪||

ಸುನಿಮೇಷ ವಿನಚಾಪಲನೇತ್ರೆ ಚಕ್ರೋನ್ಮಿ |
ಥುನಕುಂಭಕುಚೆ ಮಕರಕೇತು ವರಮಾತುಲಾ |
ನನೆ ಸಿಂಹಮಧ್ಯೆ ವೃಷಭಾಂಕವೈರಿಯೆ ಪಟ್ಟದಾನೆ ಕನ್ಯಾಕುಲಮಣಿ ||
ಮನಸಿಜ ಶಶಾಂಕ ಕರ್ಕಟಕಚೇಳಂಗುಡುವ |
ತನಿಸೊಬಗುವಡೆದ ಸನ್ಮೋಹನದ ಕಣಿಯೆ ಬಾ |
ಯೆನುತೊರ್ವನೀರೆ ಸಖಿಯಂ ಕರೆದಳೀರಾರುರಾಶಿಯಂ ಪೆಸರಿಪವೊಲು ||೨೫||

ಬೇಡ ಪೂರ್ವಸ್ನೇಹಮಿನ್ನು ದಾಕ್ಷಿಣ್ಯಮಂ |
ಮಾಡದಿರ್ ನಿನಗಪರವಯಸಾದೊಡೊರ್ವರುಂ |
ನೋಡರಿದಿರುತ್ತರಂಗುಡು ಬಿಡಿಸು ವಾಸವಂ ನುಡಿದ ಕಾಲಂ ನಡೆದುದು ||
ಕೂಡಿರ್ದ ಪಾಶಿಯನುಬಂಧಮಂ ಪರಿ ಧನದ |
ಕೋಡರೆತನಂ ನೂಕು ಸಾಕೆಂದು ಬುದ್ದಿಯಂ |
ಜೋಡಿಸಿದಳೊರ್ವಳಣುಗಿಗೆ ನಾಲ್ಕು ದೆಸೆಯಾಣ್ಮರಂಪೆಸರಿಸುವ ನೆವದೊಳು ||೨೬||

ಮೊಳೆ ಮೊಲೆಯೊಳೆಸೆವ ಸಸಿ ವದನದೊಳ್ ಕುಡಿ ನೋಟ |
ದೊಳೆ ಪರ್ಬು ತೋಳ್ಗಳೊಳ್ ಬೆಳೆದುಬ್ಬು ಜಘನದೊಳ್ |
ಸೆಳೆ ನಡುವಿನೊಳ್ ಸುಳಿ ಕುರುಳ್ಗಳೊಳ್ ಸೊಗಯಿಸುವ ಮಡಲಿಡಿದ ಸೌಂದರದೊಳು ||
ತಳಿರಡಿಗಳೊಳ್‌ಮುಗುಳ್ ನಗೆಯೊಳಲರಕ್ಷಿಯೊಳ್ |
ತಳೆದು ಸಲೆರಾಜಿಸುವ ತನುಲತೆಯೊಳೊಪ್ಪಿರ್ದ |
ರೆಳವೆಣ್ಗಳಚ್ಚಪೊಸ ಜೌವನದೊಳಾವಗಂ ವಿಟಪೀವರಾಸ್ರಯದೊಳು ||೨೭||

ದಾನಸಾಮಜ ಭೇದನೋದ್ದಂಡದುಗ್ರ ಪಂ |
ಚಾನನಂ ಗೆಲ್ವ ಚತುರೋಪಾಯಮಂ ಬಿಟ್ಟು |
ತಾನಳ್ಕಿ ಬಳ್ಕಿ ಕಡುದೈನ್ಯದಿಂದೀಗ ಮುಗ್ಧಾಂಗಮಂ ತಳೆದಿರ್ಪುದು ||
ಏನಿದಚ್ಚರಿಯೆಂದು ವಿಟನೊರ್ವಳಂ ಕೇಳ್ದೊ |
ಡಾ ನೀರೆನಗುತುಮಬಲಾಶ್ರಯದೊಳಿರೆ ಮೇರು |
ಮಾನವನ ಕೈವಿಡಿತೆಗೊಳಗಪ್ಪುದೆಲೆ ಮರುಳೆ ನೀನರಿದುಲ್ಲೆಂದಳು ||೨೮||

ಕಲಹಂಸಗಮನೆ ಪೂರ್ಣೇಂದುಮುಖಿ ಚಾರುಮಂ |
ಗಳಗಾತ್ರಿ ಘನಸೌಮ್ಯಸುಂದರವಿಲಾಸಿನಿ ವಿ |
ಮಲಗುರುಪಯೋಧರೆ ಸರಸಕವಿನುತಪ್ರಮದೆ ಮಲ್ಲಿಕಾಮಂದಸ್ಮಿತೆ ||
ವಿಲಸದ್ಭುಜಂಗಸಂಗತೆ ಮದನಕೇತು ಚಂ |
ಚಲನೇತ್ರ ಕೇಳ್ ನಿನ್ನ ದೆಸೆಗಿದೆ ನವಗ್ರಹಂ |
ಗಳ ಪೆಸರ ಬಲಮಿನ್ನು ಪೋಲ್ದಪುದು ನಿನಗೆ ಜನಮೆಂದಳೊರ್ವಳ್ ಸಖಿಯೊಳು ||೨೯||

ಇನ್ನು ಹಿಡಿಯದಿರು ಸಾಕಾಳ ಪನ್ನಗವೇಣಿ |
ಮುನ್ನಾನೆ ಸಿಕ್ಕಿದುದ ನೋಡಿದಾ ಶಶಿವದನೆ |
ಯೆನ್ನಮನೆಯೊಳ್ ಪೋದುದಕಟಕಟ ನಿನ್ನ ಕೈಗುದುರೆ ಪೋಂಗೊಡಮೊಲೆಯಳೇ ||
ನಿನ್ನ ತೇರ್ಮಾರ್ಪಜ್ಜೆಗೆಟ್ಟುದು ಸರೋಜಾಕ್ಷಿ |
ನಿನ್ನಾಟ ಕಟ್ಟಿತರಸಂಚೆನಡೆಯಳೆ ಪೋಗು |
ನಿನ್ನ ಚದುರಂಗಮಂ ಗೆಲ್ದೆ ನೆಂದೊರ್ವನಾಡುತೆ ಮುನಿದನಿನಿಯಳೊಡನೆ ||೩೦||

ಅಚ್ಚಪಳದಿಯ ಕಾಯ ಜೋಡ ಮೇಲೊತ್ತದೊಡೆ |
ನಚ್ಚಿರ್ದ ಕೈರ್ಯ ಕರಿದಿನ ಹಿಂಡ ಹಿಡಿಯದೊಡೆ |
ಮೆಚ್ಚಿನಾಟಕೆ ವಿರಿ ಬಂದ ಕೆಂಪಿನ ಹಣ್ಣನಂಡಲೆದು ಬಿಡದಿರ್ದೊಡೆ ||
ಬಚ್ಚನಾಲಗೆಯೆ ಬೀಳೆಂದು ಹಾಸಂಗಿಯಂ |
ಪಚ್ಚೆಯ ವಿದೂಷಕನುರುಳ್ಚಿದಂ ಬಾಲೆಯರ |
ಮೆಚ್ಚಿಸುವ ಕಟಕಿವಾತುಗಳ ಜಾಣ್ಮೆಗಳಿಂದೆ ಪಗಡೆಯಾಡುವ ನೆವದೊಳು ||೩೧||

ಕೈಗೆ ಮೊಲೆಗಳ ಬಿಣ್ಪು ಕಣ್ಗೆ ಚೆಲ್ವಿನ ಸೊಂಪು |
ಬಾಯ್ಗೆ ಚೆಂದುಟಿಯಿಂಪು ಕಿವಿಗೆ ನುಡಿಗಳ ನುಣ್ಪು |
ಸುಯ್ಗೆ ತನುವಿನ ಕಂಪು ಸೋಂಕಿಗಣ್ಪಿನ ತಂಪು ಚಿತ್ತಕೆ ಸೊಗಸಿನಲಂಪು ||
ಮೈಗೂಟದೊಳ್ ಸಮನಿಪೆಳವೆಣ್ಗಳೆಸೆದಿರ್ದ |
ರೈಗಣಿಗಳಿಸುಗೆಗಳುಕದ ಯೋಗಿನಿಕರಮಂ |
ಸೈಗೆಡಪಲೆಂದಂಗಜಂ ಪೂಜೆಗೈವ ಸಮ್ಮೋಹನಾಸ್ತ್ರಂಗಳೆಲು ||೩೨||

ಇವಳ ಮನಮೇಕಿವಳ ತುಂಗದುಚದಂತಾದು |
ದಿವಳ ಸನ್ಮಾನಮೇಕಿವಳ ನಡೆಯಂತಾದು |
ದಿವಳೊಲವಿದೇಕಿವಳ ಮಧ್ಯದಂತಾದುದಿರ್ದವೊಲೀಗಳೆನ್ನೆಡಿಯೊಳು ||
ಇವಳ ನುಡಿಯೇಕಿವಳ ಕುರುಳಂದಮಾದುದಿಂ |
ದಿವಳರಿಯಳಿವಳ ತಾಯ್ಬೋಧಿಸಿದಳಾಗಬೇ |
ಕಿವಳನೆಂದವಳ ಕಣ್ಣಂ ತಾಗಿ ನಿಜಸಖನೊಳೊರ್ವನಾಲೋಚಿಸಿದನು ||೩೩||

ಸವಿನೋಟದೊಳ್ ಸಂಚು ನಗೆಯೊಳ್ ಪ್ರಪಂಚು ಸೊಗ |
ಸುವ ಬೇಟದೊಳ್ ಕೃತಕಮೊಲವಿನೊಳ್ ಗತಕಮುಸಿ |
ರುವ ಲಲ್ಲೆಯೊಳ್ ಕೊಂಕು ಬಗೆಯೊಳ್ ಕಳಂಕು ಸವಿಗಲೆಗಳೊಳ್ ಸಲೆ ವಂಚನೆ ||
ತವಕದೊಳ್ ಪುಸಿಯಳವು ತಕ್ಕೆಯೊಳ್ ಕಳವು ವಿ |
ರುವ ನೇಹದೊಳ್ ನುಸುಳು ಕೂಟದೊಳ್ ಮಸುಳು ಸೇ |
ರುವೆಯಾಗಿ ನೆಲೆಗೊಂಡ ಗಣಿಕೆಯರ ತುಂಡವಿ ತೆರದ ಚೆಲ್ವಂ ಪಡೆದುದು ||೩೪||

ಅಕ್ಕಜವ ಮಾಡದಿರಿವಂ ನಿನ್ನಮೈವಳಿಗೆ |
ತಕ್ಕನಲ್ಲಂ ನೀನೊಲಿವಗೊಡವೆಯೇಕಿನ್ನು |
ಕಕ್ಕುಲಿತೆ ಬೇಡಿವನ ಕೂಟಮಂ ಪರಿದ ಬಳಿಕಿವನ ಲೇಸಾವುದುಂಟು ||
ಠಕ್ಕಿಪೊಡೆ ಪೊನ್ನಿಲ್ಲದಾತನಿವನಾಗನಿದಿ |
ರಿಕ್ಕಿದಿರ್ ಸಾಕೆಂದು ಮುಳಿಸಿನೊಳ್ ವಿಟನ ಚಿ |
ತ್ತಕ್ಕೆಸೊಗಸೆನೆ ಸೂಳೆಗವಳ ದೂತಿಕೆ ನುಡಿದಳವನ ಜರೆದು ಪೊಗಳ್ವೊಲು ||೩೫||

ತಾಂ ತವೆ ಕೃತಾಂತರಿಪುನೇತ್ರದಿಂದುರಿದ ವೃ |
ತ್ತಾಂತಮಂ ನೆನೆಯದೆ ಲತಾಂತಶರನಗಲ್ದವನಿ
ತಾಂತರ್ ನಿತಾಂತವನಮಂ ಸುಡುವೆನೆಂದು ಪೊರಮಟ್ಟು ನಡೆತಪ್ಪನಂತೆ ||
ಕಾಂತೆ ನೀನೇಕಾಂತದಿಂ ಪವಡಿಸುವ ಚಂದ್ರ |
ಕಾಂತಭವನದೊಳಗೇಕಾಂತದೊಳೀಹಂ ನಿನ್ನ |
ಕಾಂತನೇಕಾಂತರಂಗದೊಳೆಣೆಕೆಯೆಂದೊರ್ವ ಚಪಳೆ ತರಳೆಗೆ ನುಡಿದಳು ||೩೫||

ತೋಟಿಗೆಳಸದರನೊಯ್ಯೊನೆ ಮನೋಭವನ |
ಧಾಟಿಗೊಳಗಾಗಿ ನಿಲಿಸುವ ಮದನಕಲೆಗಳಂ |
ಪಾಟಿಸುವ ಬಗೆಯನೆಳೆಯರ್ಗೆ ಕಲಿಸುವ ನಾಯಕಿಗೆ ಧನಯುತರನೊಲಿಸುವ ||
ತಾಟಿ ಗಂಟಕ್ಕಿ ಸಂಧಿಗಳನೆಸಗುವ ಮುಳಿಯೆ |
ಮೇಟಿಗೊರ್ವನನರಸಿ ಸೊಗಸು ಬಲಿಸುವ ಚಾರು |
ಚೇಟಿಯರ್ ಚಲಿಸುವರನಂಗಶಬರನ ಬೇಂಟೆದೋಹಿನ ಮೃಗಂಗಳಂತೆ ||೩೭||

ಇಂತೆಸೆವ ಗಣಿಕಾ ಸಮೂಹಮಂ ನೋಡಿತ |
ಲ್ಲಿಂ ತಳರ್ದನಿಲಜಂ ಬರೆ ಮುಂದೆ ನಾನಾದಿ |
ಗಂತದಿಂ ಮುರಹರನ ಕೀರ್ತಿಯಂ ಕೇಳ್ದೊದವಿದಿಷ್ಟಾರ್ಥಮಂ ಪಡೆಯಲು ||
ತಂತಮ್ಮ ವಿದ್ಯಾವಿನೋದಮಂ ತೋರಿಸುವ |
ಸಮಶಸದೊಳೈತಂದು ನೆರೆದಿರ್ದ ಕೋವಿದರ |
ತಿಂತಿಣಿಯ ರಾಜಿ ರಾಜಿಪ ರಾಜಗೇಹದ ಮವಿಪದೆಡೆಯಂ ಕಂಡನು ||೩೮||

ತಗರ್ವೆಣಗಿಸುವ ಸಿಪಿಲೆಗಚ್ಚಿಸುವ ಕೋಳಿಗಾ |
ಳೆಗವ ಕಾದಿಸುವ ಕರಿತುರಗದೇರಾಟಮಂ |
ಮಿಗೆ ತೋರಿಸುವ ನೆತ್ತಪಗಡೆಯೊಳ್ ಬಿನದಿಸುವ ಜೂಜುಗಳನೊಡ್ಡಿ ನಲಿವ ||
ಬಗೆಬಗೆಯ ರಾಜಪುತ್ರರ ತನುವಿಲೇಪನಾ |
ದಿಗಳೊರಸೊರಸಿನಿಂದುದಿರ್ದ ಪರಿಮಳದ ಧೂ |
ಳಿಗಳನಲ್ಲಿರ್ದ ಸೊಕ್ಕಾನೆಗಳ್ ಮೊಗೆಮೊಗೆದು ಮಿಗೆ ಚೆಲ್ಲಿಕೊಳುತಿರ್ದುವು ||೩೯||

ತನ್ನೊಳಿರ್ದಚ್ಚ್ಯುತಂ ದ್ವಾರಕೆಗೆ ಬಂದಿರಲ್ |
ಮುನ್ನ ತಾನೈತಂದು ನಿಂದುದೋ ರಾಜಿಸುವ |
ರನ್ನಂಗಳೊಡನೆ ಪಾಲ್ಗಡನೆಲ್ ಮಣಿಸೌಧಕಾಂತಿಗಳ್ ಕಣ್ಗೊಳಿಸುವ ||
ಪನ್ನಗಾರಿಧ್ವಜನ ರಾಜಗೃಹಮಂ ಕಂಡು |
ಸನ್ನುತವರೂಥದಿಂದಿಳಿದು ಮೆಯ್ಯಿಕ್ಕಿ ಸಂ |
ಪನ್ನಮತಿ ಪವಜನಂ ತಳರ್ದನಲ್ಲಿಗೆ ವಿಪುಲಪುಲಕೋತ್ಸವಂ ಪೊಣ್ಮಲು ||೪೦||

ಮಾರನಂ ಪಡೆದ ಚೆಲ್ವಿಂದಿರೆನಯನಾಳ್ದ ಸಿರಿ |
ವಾರಿಜಾಸನ ಮುಖ್ಯ ದೇವರ್ಕಳಂ ಪೊರೆವು |
ದಾರಂ ತನಗೆ ಸಾಲದೆಂದು ಭೂಪಾಲಕರ ಭಾಗ್ಯಮಂತಳೆದನೆಂಬ ||
ನೀರದಶ್ಯಾಮನರಮನೆಯೆಂದೊಡದರ ವಿ |
ಸ್ತಾರಮಂ ಬಣಣಿಸವೊಡೆನ್ನಳವೆ ಪೇಳೆನಲ್ |
ಮಾರುತಿಯ ಕಣ್ಗೆ ರಮಣೀಯಮಾದುದು ಬಹುಳ ಮಣಿತೋರಣಪ್ರಭೆಗಳು ||೪೧||

ಪಾರಿಜಾತಪ್ರಸವ ಪರಿಮಳಕೆ ಗಗನದೊಳ್ |
ಸೇರಿದಳಿಮಾಲೆಗಳನುಜ್ಜ್ವಲಿಪ ನೀಲಮಣಿ |
ತೋರಣಪ್ರಭೆಗಳಂ ಬೇರ್ಪಡಿಸಲರಿದೆನಲ್ ಮೆರೆವ ಹರಿಯರಮನೆಯನು ||
ಸಾರಿದಂ ಪವನಜಂ ಬಾಗಿಲೊಳ್ ತನ್ನ ಪರಿ |
ವಾರಮಂ ನಿಲಿಸುತೊಳವೊಕ್ಕನೆಂ ಸಲುಗೆಯೊ ಮು |
ರಾರಿಯೆಡೆಯೊಳ್ ದ್ವಾರಪಾಲಕರ್ ತಡೆಯರೊರ್ವರುಮಂತರಾಂತರದೊಳು ||೪೨||

ಜನಪ ಕೇಳಾ ಸಮಯಕಸುರಾರಿ ಕನಕಭಾ |
ಜನ ರತ್ನದೋಪ್ತಿಗಳ ಶಾಲ್ಗಳಿಂದೆಸೆವ ಭೋ |
ಜನಶಾಲೆಗೈತಂದು  ಬಾಂಧವರ್ವೆರಸಿ ಕುಳ್ಳಿರ್ದು ದಿವ್ಯಾಸನದೊಳು ||
ಜನನಿಯರುಣಿಸನಿಕ್ಕಿ ಸವಿಗೊಳಿಸೆ ಚಮರವ್ಯ |
ಜನಮಂ ಪಿಡಿದು ರಾನಿಯರ ಕೆಲದೊಳಿರೆ ಸುರಂ |
ಜನ ಕಥಾಲಾಪ ರಸದಿಂ ಷಟ್ರಸಾನ್ನದಾರೋಗಣೆಯೊಳಿರುತಿರ್ದನು ||೪೩||

ಎಸೆವ ಪೊಂಬರಿವಾಣ ಮಿಸುನಿವಟ್ಟಲ್ಗಳೊಳ್ |
ಮಿಸುವ ಶಾಲ್ಯೋದನಂ ಸೂಪ ಘೃತ ಭಕ್ಷ್ಯ ಪಾ |
ಯಸ ಪರಡಿ ಮಧು ಶರ್ಕರಾಮಿಷ ಪಳಿದ್ಯ ಸೀಕರಣೆ ಶಾಕ ತನಿವಣ್ಗಳ ||
ರಸ ರಸಾಯನ ಸಾರ್ಗಳುಪ್ಪುಗಾಯ್ ಬಾಳುಕಂ |
ಕೃಸರಿ ಕಚ್ಚಡಿ ಪಾಲ್ಮೊಸರ್ಗಳಿವು ಬಗೆಗೊಳಸಿ |
ಪೊಸತೆನಿಸಿರಲ್ ಸವಿದನಚ್ಚ್ಯುತಂ ದೇವಕಿಯಶೋದೆಯರ್ ತಂದಿಕ್ಕಲು ||೪೪||

ಗುಪ್ತದಿಂದಮರರ್ಗಮೃತವನುಣಿಸಿದ ನಿತ್ಯ |
ತೃಪ್ತಂ ಸಕಲಮಖಂಗಳ ಹವಿರ್ಭಾಗಮಂ |
ಸಪ್ತಾರ್ಚಿಮುಖದಿಂದೆ ಕೈಕೊಂಡದರ ಫಲವನೂಡಿಸುವ ಪರಮಾತ್ಮನು ||
ಕ್ಲುಪ್ತಮೆನಿಸುವ ರಾಜಭೋಗ್ಯದೊಳಗಾವುದುಂ |
ಲುಪ್ತಮಾಗದವೊಲಾರೋಗಣೆಯನೈದೆ ಲೋ |
ಲುಪ್ತಿಯಿಂ ಮಾಡುತಿರ್ದಂ ತನ್ನ ಮಾನುಷ್ಯಲೀಲೆಗಿದು ಸಾರ್ಥಮೆನಲು ||೪೫||

ಹಾರ ನೂಪುರ ಕಂಕಣಾದಿ ಭೂಷಣ ಝಣ |
ತ್ಕಾರಧ್ವನಿಗಳ ಮೇಲುದಿನೊಳ್ ಪೊದಳ್ವ ಕುಚ |
ಭಾರದಿಂ ನಸುವಾಗಿದಂಗಲತೆ ಲುರಿಗಳ ಸಿರಿಮೊಗಕೊಲಿವ ಕಂಗಳ ||
ಸ್ಮೇರೊಲ್ಲಸದ್ರುಚಿರದಂತಪಙ್ತಿಗಳ ಶೃಂ |
ಗಾರಸರಸೋಕ್ತಿಗಳ ವಿನುತಾಷ್ಟಮಹಿಷಿಯರ್ |
ಚಾರು ಚಾಮರ ತಾಲವೃಂತಮಂ ಪಿಡಿದಿರ್ದರಚ್ಚ್ಯತನ ಕೆಲಬಲದೊಳು ||೪೬||

ಕದ್ದು ಮನೆಮನೆವೊಕ್ಕು ಬೆಣ್ಣೆಪಾಲ್ಗೆನೆಗಳಂ |
ಮೆದ್ದು ಗೋವಳರ ಮೇಳದ ಕಲ್ಲಿಗೂಳ ಕೈ |
ಮುದ್ದೆಯಂ ತೆಗೆದುಕೊಂಡು ತುರುಗಾವ ಪಳ್ಳಿಯಂ ಬಿಟ್ಟು ಬಳಿಕೆರವಿಲ್ಲದೆ ||
ಹೊದ್ದಿ ಪಾಂಡವರನೋಲೈಸಲಾದುದು ಭಾಗ್ಯ |
ಮಿದ್ದಪುವು ರಾಜಭೋಜ್ಯಂಗಳಿವು ಪಡೆದವರ್ |
ಮುದ್ದುಗೈದಪರೂಟದೆಡೆಗಳೊಳ್ ಚೋದ್ಯಮೆಂದಾಲ್ ಸತ್ಯಬಾಮೆ ನಗುತೆ ||೪೭||

ಬರಿದೆ ಗಳದಿರತ್ತೆ ಮಾವದಿರಿರಲ್ಕೆ ನೀ |
ನರಿಯಲಾ ತನ್ನ ಬಂಧನವಿತನುದಯಿಸಲ್ |
ಪರಿದುದೀತನೆ ಕಗದ್ದುರು ಕಣಾ ಪಾಲಿಸುವನಿಂದ್ರಾದಿ ನಿರ್ಜರರನು |
ಕುರುಪಿಡಲ್ಬಹುದೆ ಮಾನವನೆಂದು ಕೃಷ್ಣನಂ |
ಜರಿಯೆ ನೀನೇಸರವಳೊಡನಾಡಿತನದಿಂದೆ |
ಬೆರೆಯಬೇಡತ್ತಹೋಗೆಂದು ದೇವಕಿ ಸತ್ಯಭಾಮೆಯಂ ಗರ್ಜಿಸಿದಳು ||೪೮||

ನಿಮ್ಮ ಬಂಧನವ ಬಿಡಿಸಿದವಂಗೆ ತವೆ ಬಂದ |
ನಮ್ಮಗುಳಬೇಕಾಯ್ತು ದಿವಿಜರಂ ಪೊರೆವವಂ |
ಚಮ್ಮಟಿಗೆವಿಡಿಯಲೇತಕೆ ನರನ ಕುರುಹುಗಾಣಿಸಿದವಂ ಪೆಳವಿಗೊಲ್ದು ||
ಸುಮ್ಮನೇತಕೆ ಸಿಕ್ಕಿದಂ ಜಗದ್ಗುರುವೆನಲ್ |
ನಮ್ಮ ಜಗದೊಳಗಿಹಿರಿ ನೀವು ನಿಮಗೆಯು ಗುರುವೆ |
ನಮ್ಮನಂಜಿಸದೆ ನೀಂ ತಿಳಿಪುದೆಂದಳ್ ದೇವಕಿಗೆ ಮತ್ತೆ ಸತ್ಯಭಾಮೆ ||೪೯||

ಸತ್ಯಭಾಮಾದೇವಿ ನುಡಿದ ಕಟಕಿಯ ಮಾತಿ |
ಗತ್ಯುತ್ತರಂಗುಡವೆನೆಂಬನಿತರೊಳ್ ತಾಳ್ದದಕೆ ನಸುನಗುತೆ |
ಪ್ರತ್ಯುತ್ತರಂಗುಡುವೆನೆಂಬನಿತರೊಳ್ ಭೀಮಸೇನನೈತರುತಿಹುದನು ||
ಭೃತ್ಯರೆಚ್ಚರಿಸಿದೊಡೆ ಭಾವಮೈದುತನದ |
ಕೃತ್ಯದಿಂದಚ್ಚುತಂ ಸೂಚಿಸಲ್ ತಡೆದಳೌ |
ಚಿತ್ಯಮಲ್ಲೊಳವುಗುವೊಡಾರೋಗಣೆಯ ಸಮಯಮೆಂದು ಸೈರಂದ್ರಿಬಂದು ||೫೦||

ಆರೋಗಣೆಯ ಸಮಯಮಾರ್ಗೆ ಭೂತಂ ಪೊಯ್ದು |
ದಾರನೀ ಮನೆಯೊಳಿಂತೀಗಳೇತಕೆ ಮೌನ |
ಮಾರುಮಿಲ್ಲದೆ ಪೊರೆಯೊಳಿಹಳೆ ದೇವಕಿ ಸತ್ಯಭಾಮೆಗಾವುದುಮಿಲ್ಲಲಾ ||
ಆರೆನ್ನನಿಂತು ತಡೆಸಿದರಾಯ್ತೆ ದುರ್ಭಿಕ್ಷ |
ಮೂರೊಳ್ ಬೆಳೆಯದೆ ಧಾನ್ಯಂ ಕರೆಯದೇ ವೃಷ್ಟಿ |
ನಾರಿಯರನಿನಿಬರಂ ಕಟ್ಟಿಕೊಳಲೇಕೆ ಬಿಡಲೆಂದು ಮಾರುತಿ ನುಡಿದನು ||೫೧||

ಭೀಮನಾಡಿದ ನುಡಿಯ ಕೇಳಿ ರುಕ್ಮಿಣಿ ಸತ್ಯ |
ಭಾಮೆಯರ ಮೊಗನೋಡಿ ನಸುನಗುತೆ ಮುರಹರಂ |
ತಾ ಮತ್ತೆ ರಭಸದಿಂ ಭೋಜನಂಗೆಯ್ಯತೊಡನೊಡನೆ ಧರ್ರನೆ ತೇಗಲು ||
ತಾಮಸಮಿದೇಕೆ ನಾಂ ಬಂದನೊರ್ವನೆ ಮುಳಿದೊ |
ಡೀಮೂಜಗಂ ನಿನ್ನ ಬಾಯ್ಗೊಂದು ತುತ್ತಾಗ |
ದೀ ಮನುಜಗಿನುಜರಂ ಬಲ್ಲರಾರೆನ್ನನುಳುಹೆಂದನಿಲಜಂ ಚೀರ್ದನು ||೫೨||

ಬಿಡದೆ ಕಳವಿಂದೆ ಲೋಗರ ಮನೆಗಳಂ ಪೊಕ್ಕು |
ತುಡುತಿಂದವನ ಭೋಜನಕ್ಕೆ ಮೃಷ್ಷಾನ್ನಮಾ |
ದೊಡೆ ಕೆಲಬಲಂಗಳಂ ನೋಡುವನೆ ಗೋವಳಂಗರಸುತನಮಾದ ಬಳಿಕ ||
ಪೊಡವಿಯಂ ಕಂಡು ನಡೆವನ ಮುಳಿದು ಮಾವನಂ |
ಬಡಿದವಂ ನೆಂಟರನರಿವನೆ ಮೊಲೆಗೊಟ್ಟಳಸು |
ಗುಡಿದವಂ ಪುರಷಾರ್ಥಿಯಾದಪನೆ ನಾಜ್ಞರೆಂದು ಮಾರುತಿ ಜರೆದನು ||೫೩||

ದೇವತನಮಂ ಬಿಟ್ಟು ನರನಾದವಂಗೆ ಬಳಿ |
ಕಾವ ಗೌರವಮಿಹುದಿವಂ ನಾಚುವನೆ ಸಾಕು |
ನಾವೀತನಂ ಕಾಣ್ಬುದುಚಿತಮಲ್ಲೆಂದು ಭೀಮಂ ವಿಭಾಡಿಸಲಿತ್ತಲು ||
ಶ್ರೀವರಂ ನಸುನಗೆಯೊಳಾಗಳರಿದಂದದಿಂ |
ದಾವಾಗ ಬಂದನನಿಲಜನಿತ್ತ ಕರೆ ತಡೆದ |
ಳಾವಳೇತಕೆ ಕೋಪಮೆನೆ ಮತ್ತೆ ಪವನಸುತನೊಳವುಗುತ್ತಿಂತೆಂದನು ||೫೪||

ದೇವ ನಿಮ್ಮರ್ಜುನನ ಸಲುಗೆ ನಮಗುಂಟೆ ಸಂ |
ಭಾವಿಸುವರಿಲ್ಲೆಮ್ಮ ನಿಲ್ಲಿ ನಿಲಿಸಿದರೆನಲ್ |
ನಾವು ತಡೆಸಿದೆವಿತ್ತ ಬಾಯೆನುತೆ ಸೆರಗುವಿಡಿದೊಡನೆ ಕುಳ್ಳಿರಿಸಿಕೊಂಡು ||
ಆ ವಿವಿಧ ಭೋಜ್ಯದಿಂದಾರೋಗಿಸಿದ ಬಳಿಕ |
ತೀವಿದ ಸುಗಂಧ ಕರ್ಪೂರ ತಾಂಬೂಲ ಪು
ಷ್ಪಾವಳಿಗಳಿಂದೆ ಸತ್ಕರಿಸಿದಂ ಭೀಮನಂ ಸುರಪುರದ ಲಕ್ಷ್ಮೀಶನು ||೫೫||