ಹಿಮಾಲಯಕ್ಕೆ ಹೆಗಲೆಣೆಯಾದ ಆಲ್ಪ್ಸ್
ಮಹಾಪರ್ವತದ ಮೇಲು ಮೇಲಕ್ಕೆ
ಏರಿದ ಹಾಗೆ ‘ರೋಪ್‌ವೇ’ ಯಲ್ಲಿ, ನಿ-
ಶ್ಶಬ್ದ ಹಿಮಧವಳ ಕಣಿವೆಯಿಕ್ಕೆ-

ಲದಲ್ಲಿ ತೆರೆವ ದೃಶ್ಯವೈಭವಗಳಿಗೆ
ಕೊನೆಯೇ ಇಲ್ಲ. ಸ್ವಚ್ಛ ಬಿಳಿ ಹಿಮದ
ಮಹಾ ಸಾಮ್ರಾಜ್ಯದೊಳಗಲ್ಲಲ್ಲಿ, ಬಂಡಾಯ
ವೆದ್ದಿರುವ ವಕ್ರ ಶಿಲಾ ಸಮುಚ್ಚಯದ

ಮಧ್ಯೆ ಟಿಟ್ಲಸ್ ಶಿಖರ, ಪರ್ವತ ಪ್ರಾ-
ಣವೇ ಶೀತೋಜ್ವಲ ಶ್ವೇತ ಕುಟ್ಮಲ
ದಂತೆ ಮೇಲೆದ್ದು, ನಭದ ನೀಲಿಮೆಗೆ
ನೈವೇದ್ಯವಾಗುತಿದೆ. ನಟ್ಟ ನಡುಹಗಲ

ಬಿಸಿಲಲ್ಲಿ, ಥಳಥಳ ಹೊಳೆವ ಸಕ್ಕರೆ ಮಂ-
ಜಿನಿಳಿಜಾರು ಸಾನುಗಳಲ್ಲಿ, ಕಪ್ಪು
ಚಿಕ್ಕೆಗಳಂತೆ ಚಲಿಸುತಿದೆ ಕ್ರೀಡಾರ್ಥಿ-
ಗಳ ಹಿಂಡು. ಏರುತಿದ್ದೇವೆ ನಾವು ಹೆಪ್ಪು

ಗಟ್ಟಿರುವ ಹಿಮದ ಬಣಬೆಗಳಾಚೆ-
ಗಿರುವ ಶಿಖರದ ಕಡೆಗೆ ನಿಧಾನವಾಗಿ
ಸುತ್ತ ವ್ಯಾಪಿಸಿದ ನೀರವ, ನಿಗೂಢ, ನಿಷ್ಠುರ
ಶ್ವೇತ ಮೌನದ ಮಧ್ಯೆ ಮೂಕವಾಗಿ.