(ಕ್ರಿ. ಪೂ. ೨೮೭-೨೧೨) (ಆರ್ಕಿಮಿಡೀಸ್ ತತ್ವ)

ಆರ್ಕಿಮಿಡೀಸ್ ಕ್ರಿ. ಪೂ. ೨೮೭ರಲ್ಲಿ ಸಿರಾಕ್ಯೂಸ್ ನಲ್ಲಿ ಜನಿಸಿದರು. ಈತ ಸಿರಾಕ್ಯೂಸ್ ದೇಶದ ಅರಸು ಮನೆತನದ ಸಮೀಪದ ಸಂಬಂಧಿಕನಾಗಿದ್ದರಿಂದ ರಾಜಕಾರಣದಲ್ಲಿ ಇವರಿಗೆ ಬೇಕಾದಷ್ಟು ಅವಕಾಶಗಳಿದ್ದವು. ಆದರೆ ಇವರ ಒಲವು ರಾಜಕಾರಣದಲ್ಲಿ ಇರಲಿಲ್ಲ. ಯಾವಾಗಲೂ ವ್ಯಾಸಂಗದಲ್ಲಿ, ಅದರಲ್ಲೂ ವಿಶೇಷವಾಗಿ ಗಣಿತ ಶಾಸ್ತ್ರದ ವ್ಯಾಸಂಗದಲ್ಲಿ ತೊಡಗಿಕೊಂಡಿರುತ್ತಿದ್ದರು. ಈತ ಚಿಕ್ಕವನಿದ್ದಾಗ ಸಮುದ್ರದ ಕಡೆಗೆ ಅಡ್ಡಾಡಲು ಹೋಗುತ್ತಿದ್ದರು. ಅಲ್ಲಿ ಕೂಲಿಕಾರರು ಭಾರಗಳನ್ನು ಹೊತ್ತು ನೌಕೆಗಳಲ್ಲಿ ತುಂಬುತ್ತಿದ್ದುದನ್ನು ಕಂಡು ಅವರ ಮನ ಕರಗಿತು. ಕೂಲಿಕಾರರ ಕೆಲಸ ಹಗುರ ಮಾಡಲು ಉಪಾಯ ಹುಡುಕತೊಡಗಿದರು.

ಆಯಾಸವಿಲ್ಲದೆ ಭಾರವಾದ ವಸ್ತುಗಳನ್ನು ಎತ್ತಲು “ಸನ್ನೆ ತತ್ವ”ವನ್ನು ಆತ ಕಂಡು ಹಿಡಿದರು. ಒಂದು ಕೋಲನ್ನು ತೆಗೆದುಕೊಂಡು ಅದರ ಒಂದು ತುದಿಯನ್ನು ಭಾರವಾದ ವಸ್ತುವಿನ ಬುಡದಲ್ಲಿಡಬೇಕು. ಅದಕ್ಕೆ ಹೊಂದಿಕೆಯಾಗುವಂತೆ ಈ ಕೋಲಿನ ಕೆಳಗೆ ಒಂದು ಅನಿಕೆಯನ್ನು ಕೊಟ್ಟು ಇನ್ನೊಂದು ತುದಿಯನ್ನು ಕೆಳಕ್ಕೆ ಅದುಮಬೇಕು. ಆಗ ಭಾರವಾದ ವಸ್ತು ಸುಲಭವಾಗಿ ಮೇಲಕ್ಕೇಳುತ್ತದೆ. ಇದನ್ನೇ “ಸನ್ನೆ ತತ್ವ” ಎಂದು ಕರೆಯುತ್ತಾರೆ. ಆರ್ಕಿಮಿಡಿಸ್ ತಿರುಪು ಎಂಬುದು ಆತನ ಇನ್ನೊಂದು ಸಾಧನೆ. ನೀರು ಇರುವ ಸೀಸೆಯೊಳಗೆ ಒಂದು ಪೊಳ್ಳು ಕೊಳವೆಯನ್ನು ಇಳಿಬಿಟ್ಟು ತಿರುಗಿಸಿದರೆ ಸೀಸೆಯಲ್ಲಿನ ನೀರು, ಆ ಕೊಳವೆಯ ಇನ್ನೊಂದು ತುದಿಯಿಂದ ಹೊರ ಬರುತ್ತದೆ. ಇದನ್ನೇ “ಆರ್ಕಿಮಿಡಿಸ್ ತಿರುಪು” ಎನ್ನುತ್ತಾರೆ.

ಲೋಹದ ಪರಿಶುದ್ಧತೆಯನ್ನು ಕಂಡು ಹಿಡಿಯಲು ಆರ್ಕಿಮಿಡಿಸ್ ಮಾಡಿದ ಪ್ರಯತ್ನದ ಹಿಂದೆ ಒಂದು ಸೋಜಿಗದ ಕಥೆಯೇ ಇದೆ. ಒಮ್ಮೆ ಸಿರಾಕ್ಯೂಸ್ ದೇಶದ ದೊರೆಗೆ ಅಕ್ಕಸಾಲಿಗ ಮಾಡಿಕೊಟ್ಟಿದ್ದ ಬಂಗಾರದ ಕಿರೀಟದ ಪರಿಶುದ್ಧತೆಯ ಬಗ್ಗೆ ಅನುಮಾನ ಬಂತು. ಅದು ಪರಿಶುದ್ಧವೋ ಅಲ್ಲವೋ ಎಂಬುದನ್ನು ತಿಳಿಯಲು ಆತ ಆರ್ಕಿಮಿಡಿಸ್ನ ಸಲಹೆ ಕೇಳಿದ. ದೊರೆಯ ಸಲಹೆ ಆರ್ಕಿಮಿಡಿಸ್ ರನ್ನು ತೀವ್ರ ಆಲೋಚನೆಯಲ್ಲಿ ತೊಡಗಿಸಿತು. ವಸ್ತುವಿನ ತೂಕಕ್ಕೆ ತಕ್ಕಂತೆ ಅದರ ಗಾತ್ರದಲ್ಲಿ ವ್ಯತ್ಯಾಸವಿರುತ್ತದೆಂಬುದು ಆತನಿಗೆ ಗೊತ್ತಿತ್ತು. ಆದರೆ ಬೆರಕೆ ಲೋಹದಲ್ಲಿ ಯಾವ ಲೋಹ ಎಷ್ಟು ಮಿಶ್ರವಾಗಿದೆ ಎಂಬುದನ್ನು ಹೇಗೆ ಗುರುತಿಸಬೇಕು ಎಂಬ ಗುಂಗು ಆರ್ಕಿಮಿಡಿಸ್ ಗೆ ಹಿಡಿಯಿತು. ಒಮ್ಮೆ ಆತ ಸ್ನಾನ ಮಾಡಲು ನೀರಿನ ತೊಟ್ಟಿಗೆ ಇಳಿದಾಗ ನೀರು ಹೊರಚೆಲ್ಲಿತು. ಅದನ್ನು ಗಮನಿಸಿದ ಆತ “ಯೂರಿಕಾ!, ಯೂರಿಕಾ!” ಎಂದು ಕೂಗುತ್ತ ಬರಿಮೈಯಲ್ಲೇ ಓಡತೊಡಗಿದರು. ಗ್ರೀಕ್ ಭಾಷೆಯಲ್ಲಿ “ಯೂರಿಕಾ” ಎಂದರೆ “ಕಂಡು ಹಿಡಿದೆ” ಎಂದರ್ಥ. ಅಷ್ಟೇ ತೂಕದ ಬೇರೆ ಬೇರೆ ಆಕಾರದ ಲೋಹಗಳನ್ನು ನೀರಲ್ಲಿ ಮುಳುಗಿಸಿ ಅವು ಹೊರಚೆಲ್ಲುವ ನೀರನ್ನು ಅಳೆದು ನೋಡಿದಾಗ ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಾಯಿತು. ಅದೇ ರೀತಿ ಬೆರಕೆಯಾಗಿದ್ದ ಕಿರೀಟದಷ್ಟೇ ನೀರನ್ನು ಹೊರ ಚೆಲ್ಲುವಷ್ಟು ಬಂಗಾರದ ವಸ್ತುವನ್ನು ತೆಗೆದುಕೊಂಡು ಆ ಬಂಗಾರದ ತೂಕಕ್ಕೂ ಕಿರೀಟದ ತೂಕಕ್ಕೂ ಇರುವ ವ್ಯತ್ಯಾಸವನ್ನು ಕಂಡು ಹಿಡಿದರು. ಅದರ ಆಧಾರದ ಮೇಲೆ ಕಿರೀಟದಲ್ಲಿ ಬಂಗಾರದ ಜತೆಗೆ ಎಷ್ಟು ಅನ್ಯಲೋಹವನ್ನು ಬೆರಕೆ ಮಾಡಲಾಗಿತ್ತೆಂಬುದನ್ನು ನಿಖರವಾಗಿ ತಿಳಿಸಿದರು. ಅದನ್ನು ತಿಳಿದು ದೊರೆ ಅಕ್ಕಸಾಲಿಗನಿಗೆ ಶಿಕ್ಷೆ ವಿಧಿಸಿದ. ಅದೇ ರೀತಿ ವಸ್ತು ಹೊರದೂಡಿದ ನೀರಿನಷ್ಟು ತೂಕವನ್ನು ಅದು ನೀರಿನಲ್ಲಿ ಮುಳುಗಿರುವಾಗ ಕಳೆದುಕೊಂಡಿರುತ್ತದೆ ಎಂಬ ಸೂತ್ರವನ್ನೂ ಆರ್ಕಿಮಿಡಿಸ್ ಕಂಡು ಹಿಡಿದ. ಇದನ್ನೇ “ಆರ್ಕಿಮಿಡಿಸ್ ತತ್ವ” ಎನ್ನುತ್ತಾರೆ.

ವೃತ್ತದ ವ್ಯಾಸ ಹಾಗೂ ಪರಿಧಿಗಳ ನಡುವಣ ನಿರ್ದಿಷ್ಟ ಸಂಬಂಧವನ್ನು ಕಂಡು ಹಿಡಿದವರೂ ಆರ್ಕಿಮಿಡಿಸರೇ. ಪರಿಧಿಯನ್ನು ವ್ಯಾಸದಿಂದ ಭಾಗಿಸಿದರೆ ಬರುವ ಸಂಖ್ಯೆಯ ಮೌಲ್ಯ ೩ ೧೦/೭೧ ಮತ್ತು ೩ ೧೦/೭೦ರ ನಡುವೆ ಇರುತ್ತದೆಂಬುದನ್ನು ಆತ ತೋರಿಸಿಕೊಟ್ಟರು. ಇಂದು ಇದನ್ನು pai (ಪೈ) ಎಂದು ಕರೆಯುತ್ತಾರೆ.

ಈತ ಕ್ರಿ. ಪೂ. ೨೧೨ರಲ್ಲಿ ಸಿರಾಕ್ಯೂಸ್ ಮೇಲೆ ಆಕ್ರಮಣ ನಡೆದ ಕಾಲಕ್ಕೆ ತಲೆತಿರುಕ ಸೈನಿಕನೊಬ್ಬನಿಂದ ಕೊಲ್ಲಲ್ಪಟ್ಟನು.