(ಕ್ರಿ. ಪೂ. ೪೭೬) (ಬೀಜಗಣಿತ ಪದ್ಧತಿ)

ಭಾರತ ಏಪ್ರಿಲ್ ೧೯, ೧೯೭೫ರಂದು ತನ್ನ ಪ್ರಥಮ ಕೃತಕ ಭೂ ಉಪಗ್ರಹವನ್ನು ಅಂತರಿಕ್ಷ ಕಕ್ಷೆಗೆ ಹಾರಿಸಿತು. ಅದರ ಹೆಸರು “ಆರ್ಯಭಟ”. ಆ ಉಪಗ್ರಹಕ್ಕೆ ಈ ಹೆಸರು ಹೇಗೆ ಬಂತು? ಪ್ರಾಚೀನ ಭಾರತದ ಅದ್ವಿತೀಯ ಗಣಿತ ಶಾಸ್ತ್ರಜ್ಞ ಮತ್ತು ಖಗೋಲ ವಿಜ್ಞಾನಿ ಆರ್ಯಭಟರ ಗೌರವ ಸ್ಮರಣೆಗಾಗಿ ಅದಕ್ಕೆ ಈ ಹೆಸರು. ಆ ಮಹಾನ್ ವಿಜ್ಞಾನಿಯ ಹೆಸರು ಇಡೀ ಜಗತ್ತಿಗೇ ಗೊತ್ತಾಗುವಂತೆ ಮಾಡಿದ ಘಟನೆ ಅದು. ಗಣಿತ, ಬೀಜಗಣಿತ ಮತ್ತು ಟ್ರಿಗ್ನಾಮೆಟ್ರಿಯಲ್ಲಿ (ತ್ರಿಕೋಣಮಿತಿ) ಈತ ಕಂಡು ಹಿಡಿದ ನಿಯಮಗಳು ಸಾರ್ವಕೌಲಿಕ ಮೌಲ್ಯವನ್ನು ಪಡೆದಿವೆ.

ಆರ್ಯಭಟ ಕ್ರಿ. ಶ. ೪೭೬ರಲ್ಲಿ ಜನಿಸಿದರು. ಈತ ಚಿಕ್ಕ ವಯಸ್ಸಿನಿಂದಲೇ ಗಣಿತ ಶಾಸ್ತ್ರವನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದರು. ಬೀಜ ಗಣಿತ (ಆಲ್ಜಿಬ್ರಾ) ಕುರಿತಾದ ವಿವರಗಳನ್ನು ತಿಳಿಸುವ ಅತ್ಯಂತ ಹಳೆಯ ಪುಸ್ತಕದ ಕರ್ತೃ ಈತನೇ ಎಂದು ಹೇಳಲಾಗುತ್ತದೆ. ಖಗೋಳ ಶಾಸ್ತ್ರ ಮತ್ತು ಗಣಿತಶಾಸ್ತ್ರ ಕುರಿತಾದ ತನ್ನ ಪುಸ್ತಕದಲ್ಲಿ ಆತ ಬೀಜಗಣಿತದ ಬಗ್ಗೆ ಬರೆದಿದ್ದಾರೆ. ಆ ಪುಸ್ತಕ ಬರೆದಾಗ ಆತನ ವಯಸ್ಸು ಕೇವಲ ಇಪ್ಪತ್ತ ಮೂರು. ಆರ್ಯಭಟ ಬೀಜಗಣಿತ ಕಂಡು ಹಿಡಿದವರೆಂದೂ ಹೇಳಲಾಗುತ್ತದೆ. ಪೈ (pai) ನ ಮೌಲ್ಯ ೩.೧೪೧೬ ಎಂದು ಆತ ನಿಖರವಾಗಿ ವಿವರಿಸಿದ್ದಾರೆ.

“ಆರ್ಯಭಟೀಯಮ್ ” ಎಂಬ ಈತನ ಪುಸ್ತಕ ಭಾರತೀಯ ಖಗೋಲ ವಿಜ್ಞಾನದ ಅಧ್ಯಯನಕ್ಕೆ ಬುನಾದಿಯಾಗಿದೆ. ಆರ್ಯಭಟ ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಗೌರವಾನ್ವಿತ ಪಂಡಿತರಲ್ಲಿ ಒಬ್ಬರು. ಆರ್ಯಭಟ ಮತ್ತು ಇತರರ ಕೃತಿಗಳನ್ನು ಅರೇಬಿಕ್ ಭಾಷೆಗೆ ಅನುವಾದಿಸಲಾಗಿತ್ತು. ಅವು ಅರಬ್ ಜಗತ್ತಿಗೆ ಖಗೋಳಶಾಸ್ತ್ರದ ಮತ್ತು ಗಣಿತಶಾಸ್ತ್ರದ ಪರಿಚಯ ಮಾಡಿಕೊಟ್ಟವು. ಆರ್ಯಭಟ ಕೇವಲ ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ ಮಾತ್ರವೇ ಆಗಿರಲಿಲ್ಲ, ಆತ ಒಬ್ಬ ತತ್ವಜ್ಞಾನಿ ಕೂಡ ಆಗಿದ್ದರು. ಪ್ರಾಚೀನ ಭಾರತದ ಈ ಖಗೋಳಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞ, ವಿದ್ವಾಂಸ, ತತ್ತ್ವಜ್ಞಾನಿ ಕ್ರಿ.ಶ. ೫೫೦ರಲ್ಲಿ ನಿಧನ ಹೊಂದಿದರು.

ಆರ್ಯಭಟರ ಗೌರವಾರ್ಥವಾಗಿ ನಮ್ಮ ದೇಶ ಮಾಡಿದ ಇನ್ನೊಂದು ಮಹತ್ಕಾರ್ಯವೆಂದರೆ, ಆತನ ೧೫೦೦ನೆಯ ಜನ್ಮ ವಾರ್ಷಿಕದ ಸಂದರ್ಭಕ್ಕೆ ಮೀಸಲಾಗಿ ೧೯೭೭ರಲ್ಲಿ ದೆಹಲಿಯಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವನ್ನು ಜರಗಿಸಿದ್ದು. ಆ ಸಮ್ಮೇಳನದಲ್ಲಿ ಸೋವಿಯತ್ ಒಕ್ಕೂಟ ಮತ್ತು ಇತರ ದೇಶಗಳ ವಿದ್ವಾಂಸರುಗಳೂ ಭಾಗವಹಿಸಿದ್ದರು.