ಸಂಗೀತ ಸಾಹಿತ್ಯಗಳ ನೆಲೆಬೀಡಾದ ರುದ್ರಪಟ್ಟಣದಲ್ಲಿ ೧೯೧೪ರಲ್ಲಿ ಜನಿಸಿದ ಕೇಶವಮೂರ್ತಿಗಳ ಸಂಗೀತ ಕಲಿಕೆ ಚಿಕ್ಕಂದಿನಿಂದಲೇ ತಂದೆ ರಾಮಸ್ವಾಮಯ್ಯನವರ ಶಿಕ್ಷಣದಲ್ಲಿ ಆರಂಭವಾಯಿತು. ಇವರ ತಾತ ದಮ್ಮಡಿ ನಾಗಪ್ಪನವರು ಖಂಜರಿ ವಿದ್ವಾಂಸರಾಗಿದ್ದರು. ಬಿ.ಎಸ್‌.ಸಿ. ಪದವೀಧರರಾದ ಇವರು ಉನ್ನತ ಸಂಗೀತ ಶಿಕ್ಷಣಕ್ಕಾಗಿ ಚಿಕ್ಕರಾಮರಾಯರನ್ನು ಬಿಡಾರಂ ಕೃಷ್ಣಪ್ಪನವರನ್ನು ಆಶ್ರಯಿಸಿದರು. ಟಿ. ಚೌಡಯ್ಯನವರ ಆವಿಷ್ಕಾರವಾದ ಏಳು ತಂತಿ ಪಿಟೀಲನ್ನು ಊರ್ಜಿತಗೊಳಿಸಿ ಏಳು ತಂತಿಗಳಾಗಲೀ, ನಾಲ್ಕು ತಂತಿಗಳಾಗಲಿ, ಪಿಟೀಲನ್ನು ಅದ್ಭುತವಾಗಿ ನುಡಿಸುವ ಸಾಮರ್ಥ್ಯವನ್ನು  ಹಠ ಸಾಧನೆಯಿಂದ ಹಸ್ತಗತ ಮಾಡಿಕೊಂಡ ವಿದ್ವದ್ವರೇಣ್ಯರು.

೧೯೩೪ರಲ್ಲಿ ಬೆಂಗಳೂರಿಗೆ ಸಕುಟುಂಬರಾಗಿ ಬಂದ ಮೇಲೆ ಸಂಸ್ಕೃತ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲೂ ಪಾಂಡಿತ್ಯ ಪಡೆದುಕೊಂಡರು. ಗುರುಗಳ ಹೆಸರಿನಲ್ಲಿ ಸಂಗೀತದ ಶಾಲೆ ಸ್ಥಾಪಿಸಿ ಅಸಂಖ್ಯಾ ವಿದ್ವಾಂಸ ವಿದುಷಿಯರನ್ನು ಕ್ಷೇತ್ರಕ್ಕೆ ತರಬೇತಿ ನೀಡಿ ಒಪ್ಪಿಸಿರುವ ದಕ್ಷ ಶಿಕ್ಷಕರು. ಗ್ರಂಥಕರ್ತರಾಗಿ ಇವರು ನೀಡಿರುವ ಬಾಲಶಿಕ್ಷ (ಎರಡು ಭಾಗಗಗಳಲ್ಲಿ) ವಾಗ್ಗೇಯ ಕಾರ ಕೃತಿಗಳು (ಮೂರು ಭಾಗಗಳಲ್ಲಿ) ಹಿಂದೂಸ್ಥಾನಿ ರಾಗ ಕೋಶ ಲಕ್ಷ್ಯ-ಲಕ್ಷಣ ಪದ್ಧತಿ, ರಾಗ ಲಕ್ಷಣ ಮತ್ತು ರಾಗಕೋಶ ಬೃಹತ್ತರ ಮೇಳರಾಗ ಮಾಲಿಕಾ ಇತ್ಯಾದಿ ಕೃತಿಗಳು ಸಂಗೀತ ಸಾರಸ್ವತ ಲೋಕಕ್ಕೆ ಅಮೂಲ್ಯವಾದ ಕೊಡುಗೆಗಳು.

ಪಕ್ಕವಾದ್ಯಗಾರರಾಗಿಯೂ, ತನಿವಾದಕರಾಗಿಯೂ ಅದ್ವಿತೀಯವಾದ ಸ್ಥಾನಮಾನಗಳನ್ನು ಗಳಿಸಿರುವ ಶ್ರೀಯುತರ ಕಾರ್ಯಕ್ರಮಗಳು ಆಕಾಶವಾಣಿ ದೂರದರ್ಶನಗಳಿಂದಲೂ ಪ್ರಸಾರವಾಗುತ್ತಿವೆ. ಇವರ ಅದ್ಭುತ ಸಾಧನೆಗೆ ದೊರೆತ ಪುರಸ್ಕಾರಗಳಲ್ಲಿ ಎಚ್‌.ಎಂ.ವಿ.ಯವರು ಮಾಡಿರುವ ಎಂಟು ಧ್ವನಿ ಮುದ್ರಿಕೆಗಳು; ‘ಗಾನ ಸಾಹಿತ್ಯ ಶಿರೋಮಣಿ’, ‘ಸಂಗೀತ ವಿದ್ಯಾಸಾಗರ’, ‘ಸಂಗೀತ ಶಾಸ್ತ್ರ ಪ್ರವೀಣ’, ‘ಸಂಗೀತ ಕಲಾರತ್ನ’, ‘ಕರ್ನಾಟಕ ಕಲಾತಿಲಕ’, ‘ಲಯಕಲಾ ನಿಪುಣ’, ಗಾಂಧರ್ವ ವಿದ್ಯಾನಿಧಿ’, ರಾಜ್ಯೋತ್ಸವ ಪ್ರಶಸ್ತಿ; ಕನಕ-ಪುರಂದರ ಪ್ರಶಸ್ತಿ; ರಾಜ್ಯ ಸಂಗೀತ ವಿದ್ವಾನ್‌; ಸಂಗೀತ ಕಲಾ ಪ್ರಪೂರ್ಣ – ಇತ್ಯಾದಿ ಕೆಲವು ಉಲ್ಲೇಖಾರ್ಹಗಳು. ಹಾಗೆಯೇ ಗಾನಕಲಾ ಪರಿಷತ್ತು ಶ್ರೀರಂಗಪಟ್ಟಣದ ತ್ಯಾಗರಾಜ ಆರಾಧನಾ ಉತ್ಸವ ಮತ್ತು ಪುರಂದರದಾಸರ ಆರಾಧನಾ ಸಮಿತಿ ಟ್ರಸ್ಟ್‌ ಮುಂತಾದ ಸಂಸ್ಥೆಗಳು ಬೆಳೆಯಲು ಬಹುವಾಗಿ ಶ್ರಮಿಸಿದ್ದಾರೆ.