ರುದ್ರಪಟ್ಟಣ ಎಂಬ ಹೆಸರು ಸಂಗೀತ ಕ್ಷೇತ್ರದಲ್ಲಿ ವಿಶೇಷವಾಗಿ ಪ್ರಸಿದ್ಧವಾಗಿದೆ. ಈ ಗ್ರಾಮವು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ ಹರಿಯುವ ಕಾವೇರಿ ನದಿ ತೀರದಲ್ಲಿದೆ. ತಮಿಳುನಾಡಿನಲ್ಲಿ ಕಾವೇರಿ ತೀರದಲ್ಲಿರುವ ತಂಜಾವೂರಿನ ತಿರುವೈಯ್ಯಾರ್ ಎಂಬುದು ಸಂಗೀತ ಕ್ಷೇತ್ರದಲ್ಲಿಕ ಹೇಗೆ ಪ್ರಸಿದ್ಧವಾಗಿದೆಯೋ ಹಾಗೆ ರುದ್ರಪಟ್ಟಣವೂ ಅಷ್ಟೇ ಪ್ರಸಿದ್ಧವಾಗಿದೆ. ಅತಿರುದ್ರ ಮಹಾಯಾಗ ನಡೆದಂತಹ ಪವಿತ್ರ ಸ್ಥಳ ಈ ಕ್ಷೇತ್ರ. ಈ ಗ್ರಾಮದ ಸುಮಾರು ೪೦-೫೦ ಜನ ಸಂಗೀತ ಕಲಾವಿದರು, ವಾಗ್ಗೇಯಕಾರರು ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಪಂಚದಲ್ಲಿ ಬೆಳಗಿದ್ದಾರೆ, ಬೆಳಗುತ್ತಿದ್ದಾರೆ.

ಇಂತಹ ರುದ್ರಪಟ್ಟಣ ಗ್ರಾಮದವರೂ ಏಳು ತಂತಿ ಪಿಟೀಲುವಾದಕರೂ ಆದ ಆರ್.ಆರ್.ಆರ್. ಕೇಶವಮೂರ್ತಿಯವರು ಪಿಟೀಲು ವಿದ್ವಾಂಸರಲ್ಲಿಯೇ ಅಗ್ರಗಣ್ಯರು. ಇವರ ಸಂಗೀತಗಾರರ ಮಾತಿನಲ್ಲಿ ಆರ್.ಆರ್.ಕೆ. ಎಂದೇ ಪ್ರಸಿದ್ಧರಾಗಿದ್ದಾರೆ. ೨೭.೫.೧೯೧೪ರಲ್ಲಿ ರುದ್ರಪಟ್ಟಣದ ರಾಮಸ್ವಾಮಯ್ಯ ಮತ್ತು ಶ್ರೀಮತಿ ಸುಬ್ಬಮ್ಮ ದಂಪತಿಗಳಿಗೆ ಜನಿಸಿದರು. ಆರ್.ಆರ್.ಕೆ.ಯವರದ್ದು ಸಂಗೀತ ಮನೆತನ. ಇವರ ತಾತ ವೆಂಕಟರಾಮಯ್ಯನವರು ಸಂಗೀತಗಾರರು ಮತ್ತು ವಾಗ್ಗೇಯಕಾರರು. ಹೀಗೆ ಸಂಗೀತ ವಾತಾವರಣದಲ್ಲೆ ಬೆಳೆದ ಇವರಿಗೆ ಬಾಲ್ಯದಲ್ಲೆ ತಂದೆಯವರಿಂದ ಸಂಗೀತ ಪಾಠವಾಯಿತು. ನಂತರ ೧೯೨೩ರ ವೇಳೆಗೆ ಮೈಸೂರಿಗೆ ಬಂದರು. ಮೈಸೂರಿನಲ್ಲಿ ಆ ಕಾಲಕ್ಕೆ ಸಂಗೀತಗಾರರಲ್ಲಿ ಅಗ್ರಮಾನ್ಯರಾಗಿದ್ದ ಬಿಡಾರಂ ಕೃಷ್ಣಪ್ಪನವರಲ್ಲಿ ಪಿಟೀಲು ಅಭ್ಯಾಸವನ್ನು, ಚಿಕ್ಕರಾಮರಾಯರಲ್ಲಿ ಗಾಯನ ಪಾಠವನ್ನು ಮುಂದುವರಿಸಿದರು. ಇವರು ಬಿಡಾರಂ ಕೃಷ್ಣಪ್ಪನವರಲ್ಲಿ ಶಿಷ್ಯವೃತ್ತಿಗೆ ಸೇರುವ ವೇಳೆಗೆ ಪಿಟೀಲು ಮಾಂತ್ರಿಕ, ಸಂಗೀತ ಕಲಾನಿಧಿ ಟಿ. ಚೌಡಯ್ಯನವರು ಗುರುಗಳ ಬಳಿ ಶಿಷ್ಯವೃತ್ತಿಯಲ್ಲಿದ್ದರು. ಆರ್.ಆರ್.ಕೆ.ಯವರೊಂದಿಗೆ ಡಾ.ಬಿ. ದೇವೇಂದ್ರಪ್ಪ, ಎ.ಎಸ್‌. ಶಿವರುದ್ರಪ್ಪ, ಟಿ.ಪುಟ್ಟಸ್ವಾಮಯ್ಯ ಮುಂತಾದವರು ಇದ್ದರು.

ಬಿಡಾರಂ ಕೃಷ್ಣಪ್ಪನವರು ಪಾಠ ಪ್ರವಚನದ ವಿಷಯದಲ್ಲಿ ಕಬ್ಬಿಣದಷ್ಟು ಕಠಿಣ ಹೃದಯಿಗಳು. ಆದರೆ ಇತರ ವೇಳೆಗಳಲ್ಲಿ ಶಿಷ್ಯರೊಡನೆ ಪ್ರೀತಿ ವಿಶ್ವಾಸದಿಂದ ಬೆರೆತು ಸಲಿಗೆಯಿಂದ ಇರುತ್ತಿದ್ದರು .ಗುರುಗಳು ಶಿಷ್ಯರಿಗೆ ವಿಧಿಸಿದ್ದ ದಿನಚರಿ ಹೀಗಿತ್ತು. ಬೆಳಗಿನ ಝಾವವೇ ಎದ್ದು ಎಂಟು ಗಂಟೆಯ ಒಳಗೆ ವ್ಯಾಯಾಮ, ಅಂಗಸಾಧನೆ, ಸ್ನಾನ ಫಲಹಾರಗಳನ್ನು ಮುಗಿಸಿರಬೇಕು. ನಂತರ ಒಂಬತ್ತರಿಂದ ಮೂರು ಗಂಟೆಕಾಲ ಪಿಟೀಲು ಸಾಧನೆ, ಪುನಃ ಮೂರು ಗಂಟೆಯಿಂದ ಅಭ್ಯಾಸ ಮುಂದುವರಿಸಬೇಕು ಮತ್ತು ರಾತ್ರಿ ಊಟವಾದ ಮೇಲೆ ಸಾಧನೆಗೆ ಕುಳಿತುಕೊಳ್ಳಬೇಕು. ಹೀಗೆ ದಿನಕ್ಕೆಕ ಕನಿಷ್ಠ ಪಕ್ಷ ಎಂಟು ಗಂಟೆಗಳ ಕಾಲ ಸಾಧನೆ ಮಾಡಬೇಕು. ಹಾಗೆಯೇ ಒಂದು ರಾಗವನ್ನೇ ಒಂದು ವಾರಗಳ ಕಾಲ ಮೂರು ಹೊತ್ತು ಅಭ್ಯಾಸ ಮಾಡಬೇಕು. ಶಿಷ್ಯರು ಸಾಧನೆ ಮಾಡುವಾಗ ಗುರುಗಳು ಬೇರೆ ಕೆಲಸದಲ್ಲಿ ಮಗ್ನರಾಗಿದ್ದರೂ ಗಮನವೆಲ್ಲಾ ಇಲ್ಲೆ ಇರುತ್ತಿತ್ತು. ಶ್ರುತಿ, ತಾಳಗಳಲ್ಲಿ ಕೂದಲೆಳೆಯಷ್ಟು ವ್ಯತ್ಯಾಸವಾದರೂ ಗುರುಗಳು ದುರ್ವಾಸರಂತೆ ಕೆಂಡಮಂಡಲರಾಗುತ್ತಿದ್ದರು.

ಇಂತಹ ಕಟ್ಟುನಿಟ್ಟಾದ ಪಾಠದಿಂದ, ತಮ್ಮ ಹಠಸಾಧನೆಯಿಂದ ನುರಿತ ಆರ್.ಆರ್.ಕೆ. ಯವರು ಪಿಟೀಲಿನಲ್ಲಿ ಹೆಚ್ಚಿನ ಸಾಧನೆ ಸಾಧಿಸಿದರು. ಆರಂಭದಲ್ಲಿ ಇವರೂ, ಪಕ್ಕವಾದ್ಯದಲ್ಲಿ, ತನಿ ಕಚೇರಿಗಳಲ್ಲಿ ನಾಲ್ಕು ತಂತಿಯ ಪಿಟೀಲನ್ನೇ ನುಡಿಸುತ್ತಿದ್ದರು. ಆರ್.ಆರ್.ಕೆ. ಹೇಳುವಂತೆ ಏಳು ತಂತಿ ವಾದ್ಯಕ್ಕೆ ಮಾರು ಹೋದದ್ದು ಚೌಡಯ್ಯನವರು ನುಡಿಸಿದಾಗ. ಚೌಡಯ್ಯನವರ ನುಡಿಸಾಣಿಕೆಯಿಂದ ಸ್ಫೂರ್ತಿ ಪಡೆದು ತಾವೂ ಏಳು ತಂತಿ ಪಿಟೀಲನ್ನೇ ಅಭ್ಯಸಿಸಿ ತನಿ ಕಚೇರಿಗೂ ಪಕ್ಕವಾದ್ಯಕ್ಕೂ ಅಳವಡಿಸಿಕೊಂಡರು. ಕೆಲವು ವಿದ್ವಾಂಸರ ಕಚೇರಿಗಳಿಗೆ ವಿದ್ವಾಂಸರ ಇಚ್ಛೆಯಂತೆ ನಾಲ್ಕು ತಂತಿ ಪಿಟೀಲನ್ನು ನುಡಿಸುತ್ತಿದ್ದುದೂ ಉಂಟು.

೧೯೩೪ರಲ್ಲಿ ಇವರ ಕುಟುಂಬದವರೆಲ್ಲಾ ಬೆಂಗಳೂರಿಗೆ ಬಂದು ನೆಲೆಸಿದರು. ಬೆಂಗಳೂರಿಗೆ ಬಂದ ಮೇಲೆ ಆರ್.ಆರ್.ಕೆ.ಯವರು ಸಂಸ್ಕೃತ, ತೆಲುಗು, ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಪ್ರಭುತ್ವ ಗಳಿಸಿಕೊಂಡರು. ೧೯೩೪ರ ವೇಳೆಗೆ ಗಾಯನ ಕಚೇರಿಗಳಿಗೆ ಸಮರ್ಪಕವಾಗಿ ಸಹಕಾರ ನೀಡುವ ಮಟ್ಟಕ್ಕೆ ಏರಿದ್ದರು. ೧೯೩೦ರಲ್ಲಿಯೇ ವಿದ್ವಾನ್‌ ಬಿ.ಎಸ್‌. ರಾಜೈಂಗಾರ್ಯ (ಜಗದೋದ್ಧಾರನ ಹಾಡಿನ ಪ್ರಸಿದ್ಧಿ)ರಿಗೆ ಪಿಟೀಲು ಪಕ್ಕವಾದ್ಯ ನೀಡಿದ್ದರಂತೆ. ಅಲ್ಲದೆ, ಬಾಲ್ಯದಲ್ಲಿ ಅನೇಕ ಹರಿಕಥೆಗಳಿಗೂ ಪಿಟೀಲು ಸಹಕಾರ ನೀಡುತ್ತಿದ್ದರಂತೆ.

ಬೆಂಗಳೂರಿಗೆ ಬಂದ ಮೇಲೆ ತಮ್ಮ ಗುರುಗಳ ಹೆಸರಿನಲ್ಲಿ “ಗಾನ ವಿಶಾರದ ಬಿಡಾರಂ ಕೃಷ್ಣಪ್ಪ ಸ್ಮಾಋಕ ಸಂಗೀತ ವಿದ್ಯಾಲಯ” ಎಂಬ ಸಂಗೀತ ಶಾಲೆಯನ್ನು ಆರಂಭಿಸಿದರು. ನೂರಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಕಚೇರಿ ನೀಡುವ ಮಟ್ಟಕ್ಕೆ

ತಯಾರು ಮಾಡಿದ್ದಾರೆ.

ಆರ್.ಆರ್.ಕೆ. ಯವರ ಪಾಠಕ್ರಮವು ಬಿಡಾರಂರವರ ಕ್ರಮದಲ್ಲಿ ಇದೆ. ಅಂದರೆ ಅಷ್ಟೆ ಅಚ್ಚು ಕಟ್ಟಾಗಿ ಹೇಳಿ ಕೊಟ್ಟ ಪಾಠ ಚಾಚೂ ತಪ್ಪದೆ ಬರಬೇಕು. ಇವರೂ ಪಾಠಕ್ರಮದಲ್ಲಿ ಉಗ್ರನರಸಿಂಹರೆಂದೇ ಹೆಸರುವಾಸಿ. ಯಾವುದನ್ನೂ ಬಡಪೆಟ್ಟಿಗೂ ಒಪ್ಪುವುದಿಲ್ಲ, ಎಲ್ಲವೂ ಶಾಸ್ತ್ರಾಧಾರವಾಗಿದ್ದು, ಭಾವಪೂರ್ಣವಾಗಿ ಮತ್ತು ಲಯ ಬದ್ಧವಾಗಿರಬೇಕು.

ಇವರು ಕಟ್ಟಾ ಸಂಪ್ರದಾಯವಾದಿಗಳು. ಗೌರವರ್ಣ ಕಟ್ಟುಮಸ್ತಾಗಿದ್ದು, ಹಣೆಯಲ್ಲಿ ಗಂಧಾಕ್ಷತೆ ಎದ್ದು ತೋರುತ್ತದೆ. ನೋಡಿದರೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕೆಂಬ ವ್ಯಕ್ತಿತ್ವ. ನಿರ್ಭಯ  ಸ್ವಭಾವ. ಯಾವುದಕ್ಕೂ ಹೆದರಿಕೆಯಿಲ್ಲ. ಯಾರಾದರೂ ವಿದ್ವಾಂಸರು ಅಶುದ್ಧವಾಗಿ ಹಾಡಿದರೆ ಅಥವಾ ಸಂಗೀತದ ವಿಷಯವಾಗಿ ಮಾತನಾಡುತ್ತ ತಪ್ಪಾಗಿ ಹೇಳಿದರೆ ಕೂಡಲೇ ಎದ್ದು ನಿಂತು ಪ್ರಶ್ನಿಸುವಂತಹ ದಿಟ್ಟತನ. ಹಾಗೆಯೇ ಇವರಿಗೆ ಸಂಗೀತ ಶಾಸ್ತ್ರವೂ ಕರತಲಾಮಲಕ.

ಇವರ ಸಂಗೀತದಲ್ಲಿ ಪಿಟೀಲು ಮತ್ತು ಹಾಡುಗಾರಿಕೆಯಲ್ಲದೆ ಇನ್ಯಾವುದಕ್ಕೂ ಆದ್ಯತೆಯಿಲ್ಲ. ಇವರ ಸಂಗೀತಶಾಲೆಯಲ್ಲಿ ಸಂಗೀತಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿಕೊಂಡಿದ್ದಾರೆ. ಪ್ರಸ್ತುತ ಚೆನ್ನೈನಲ್ಲಿರುವ ವಿದುಷಿ ಟಿ. ರುಕ್ಮಿಣಿಯವರು ಆರ್.ಆರ‍.ಕೆ. ಯವರ ಶಿಷ್ಯೆ. ಅವರು “ಗುರುಗಳು ಹೇಳಿಕೊಟ್ಟ ಪಾಠ ಎಂದೂ ಮರೆಯದಂತಿದೆ, ಅವರು ಕೃತಿಗಳನ್ನು ಬಾಯಲ್ಲಿ ಹಾಡಿಕೊಂಡು ಸಾಹಿತ್ಯ ಭಾವ, ಸ್ವರಭಾವ, ರಾಗಭಾವ ಇವೆಲ್ಲವನ್ನೂ ವಿವರಿಸುತ್ತಾ ಹೇಳುತ್ತಿದ್ದರು. ಹಾಗೆಯೇ ಸಾಹಿತ್ಯವನ್ನು ಎಲ್ಲಿ ಬಿಡಿಸಬೇಕು, ಹೇಗೆ ಜೋಡಿಸಬೇಕು, ಕಮಾನು ಹೇಗೆ ಹಾಕಬೇಕು, ಅದರಿಂದ ಸಾಹಿತ್ಯ ಭಾವ ಹೇಗೆ ಕೇಳಿಸಬೇಕು ಎಂಬೆಲ್ಲಾ ಅಂಶಗಳನ್ನು ಬಿಡಿಸಿ ಅರ್ಥವಾಗುವಂತೆ ಹೇಳುತ್ತಿದ್ದರು” ಎಂದು ಸ್ಮರಿಸುತ್ತಾರೆ. ಇವರ ಶಿಷ್ಯವೃಂದ ಅಪಾರ. ದಿ.ಆಣೂರು ಎಸ್‌.ರಾಮಕೃಷ್ಣ, ಅವರ ಶಿಷ್ಯರ ಪೈಕಿ ರತ್ನಪ್ರಾಯರಾಗಿದ್ದವರು. ಇತ್ತೀಚಿನವರಲ್ಲಿ ಹೆಸರಿಬೇಕಾದ, ಅಪರೂಪ ವಾದ್ಯದ ಉದಯೋನ್ಮುಖ ಕಲಾವಿದ, ನಿಖಿಲ್‌ ಜೋಶಿ. ಈಗ ಗಿಟಾರ್ ವಾದ್ಯದಲ್ಲಿ ಕರ್ನಾಟಕ ಸಂಗೀತವನ್ನು ನುಡಿಸುತ್ತಾನೆ. ಈ ವಾದ್ಯವನ್ನು ಮತ್ತು ಈ ವಾದ್ಯ ನುಡಿಸಲು ಪಾಠ ಹೇಳಿಕೊಡುವುದಿಲ್ಲವೆಂದು ಶಿಷ್ಯನನ್ನು ನಿರಾಕರಿಸಿಬಿಟ್ಟಿದ್ದರು. ಇವರಲ್ಲಿಯೇ ಕಲಿಯಬೇಕೆಂಬ ಛಲದಿಂದ ಅವರ ಮನವೊಲಿಸಿ ಕಲಿಯಲಾರಂಭಿಸಿದ ನಿಖಿಲ್‌ಗೆ ಗುರುಗಳ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ. ಅವರ ಪಾಠಕ್ರಮದಿಂದ ಈ ಮಟ್ಟವನ್ನು ತಲುಪವಂತಾಗಿದೆ ಎಂದು ಹೇಳುತ್ತಾನೆ. ಇಂದಿಗೂ ಗುರುಗಳಿಗೆ ಬಹು ಪ್ರಿಯನಾದ ಶಿಷ್ಯ.

ಆರ್.ಆರ್.ಕೆ. ಯವರ ಇನ್ನೊಬ್ಬ ಶಿಷ್ಯೆ ಜ್ಯೋತ್ಸ್ನಾ ಶ್ರೀಕಾಂತ್‌. ಈಕೆ ವೃತ್ತಿಯಲ್ಲಿ ವೈದ್ಯೆ. ಆದರೆ ಪ್ರವೃತ್ತಿಯಲ್ಲಿ ಪಿಟೀಲು ಲವಾದಕಿ. ಎಲ್ಲ ಹಿರಿಯ ಕಿರಿಯ ವಿದ್ವಾಂಸರಿಗೆ ಪಿಟೀಲು ಪಕ್ಕವಾದ್ಯನುಡಿಸಿ ಶೋತೃಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರಲ್ಲದೆ ಅಂಬಳೆ ಕೃಷ್ಣಮೂರ್ತಿ, ನಳಿನಾ ಮೋಹನ್‌ ಮುಂತಾದವರು ಪಿಟೀಲು ವಾದನದಲ್ಲಿ ಹೆಸರುಗಳಿಸಿದ್ದಾರೆ.

ಆರ್.ಆರ್.ಕೆ. ಯವರಿಗೆ ತಮ್ಮ ಏಳು ತಂತಿ ಪಿಟೀಲಿನ ಬಗ್ಗೆ ಬಹಳ ಹೆಮ್ಮೆ. ಇದರ ನಾದ ತುಂಬಿ ಬರುತ್ತದೆ. ಇವರನ್ನು ನಾಲ್ಕು ತಂತಿ ವಾದ್ಯಕ್ಕಿಂತ ಏಳು ತಂತಿ ವಾದ್ಯ ಒರಟಲ್ಲವೆ? ಎಂದು ಪ್ರಶ್ನಿಸಿದರೆ ತಕ್ಷಣವೇ ಬರುತ್ತದೆ ಇವರ ಉತ್ತರ! “ಹೌದು; ನೋಡಿ ಹೆಣ್ಣಿನ ಮೃದುತ್ವ ಗಂಡಿಗೆ ಹೇಗೆ ಬರುತ್ತದೆ?” ಎಂದು ನಾಲ್ಕು ತಂತಿ ವಾದ್ಯವನ್ನು ಹೆಣ್ಣಿಗೂ ಏಳುತಂತಿ ವಾದ್ಯವನ್ನು ಗಂಡಿಗೂ ಹೋಲಿಸಿ ಹೇಳುತ್ತಾರೆ. ಮುಂದುವರಿಯುತ್ತಾ, “ಪಿಟೀಲಿಗೆ ಸತತ ಸಾಧನೆ ಅಗತ್ಯ . ಈ ಏಳು ತಂತಿ ವಾದ್ಯವನ್ನು ನುಡಿಸಲು ದೈಹಿಕ ಸಾಮರ್ಥ್ಯ ಮತ್ತು ವೈಜ್ಞಾನಿಕ ಜ್ಞಾನ ಅತ್ಯಗತ್ಯ , ಏಳು ತಂತಿ ವಾದ್ಯವನ್ನು ಪಕ್ಕವಾದ್ಯಕ್ಕೆಕ ಹಾಕಿಕೊಂಡಾಗ ಗಾಯಕ ಸ್ವಲ್ಪ ಅಪ್‌ಸೆಟ್‌ ಆಗಬಹುದು. ಮುಖ್ಯವಾಗಿ ಗಾಯಕನಿಗೆ ಒಳ್ಳೆಯ ಗಾತ್ರ ಶಾರೀರವಿರಬೇಕು ನಾವು ಸುಮ್ಮನೆ ಕಮಾನು ಹಾಕಿ ಷಡ್ಜ ಹಾಕಿದರೆ ಗಾಯಕನ ಧ್ವನಿಯೇ ಮುಚ್ಚಿ ಹೋಗುತ್ತದೆ. ಅಲ್ಲದೆ ಗಾಯಕ ಒಂದು ರಾಗಾಲಾಪನೆ ಆರಂಭಿಸುತ್ತಾನೆ. ಗಾಯಕ ಪಕ್ಕವಾದ್ಯದವನು ಅದನ್ನೆ ನುಡಿಸಬೇಕೆಂದು ಎದುರುನೋಡುತ್ತಿರುತ್ತಾನೆ. ಆದರೆ ನಾನು ಅದರ ಮುಂದಿನ ಸಂಗತಿ ನುಡಿಸುತ್ತೇನೆ. ನಂತರ ಆತ ಮುಂದುವರಿಸಬೇಕು. ಇದು ಒಂದು ರೀತಿಯಲ್ಲಿ ಸವಾಲ್‌ ಜವಾಬ್‌ನಂತಿರುತ್ತದೆ. ಈ ಕ್ರಮ ಕೆಲವರಿಗೆ ಹಿಡುಸುವುದಿಲ್ಲ. ಈ ದೃಷ್ಟಿಯಿಂದ ಎಲ್ಲರೂ ನನ್ನನ್ನು ಪಕ್ಕವಾದ್ಯಕ್ಕೆ ಹಾಕಿಕೊಳ್ಳಲು ಯೋಚಿಸುತ್ತಾರೆ” ಎಂಬ ಚಿಂತನಾರ್ಹ ವಿವರಣೆಯನ್ನು ನೀಡುತ್ತಾರೆ.

ಆರ್.ಆರ್.ಕೆ. ಯವರು ಲಕ್ಷ್ಯದಲ್ಲಿಕ ಪರಿಣತರಾಗಿರುವುದೇ ಅಲ್ಲದೆ ಶಾಸ್ತ್ರದಲ್ಲೂ, ಅಷ್ಟೆ ಪರಿಣತರು. ಇದಕ್ಕೆ ಸಾಕ್ಷಿಯಾಗಿ ಇವರು ಲಕ್ಷ್ಯ ಮತ್ತು ಲಕ್ಷಣಕ್ಕೆ ಸಂಬಂಧಿಸಿದ ಸುಮಾರು ಹದಿನಾಲ್ಕು ಗ್ರಂಥಗಳನ್ನು ಬರೆದಿರುವುದೇ ಅಲ್ಲದೆ ಮಾಸಪತ್ರಿಕೆ, ಸ್ಮರಣ ಸಂಚಿಕೆ, ವಾರ್ಷಿಕ ಪತ್ರಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆದಿರುವರು. ಜೊತೆಗೆ ಅನೇಕ ಸಂಗೀತ ಸಂಸ್ಥೆಗಳ ವಿಚಾರ ಸಂಕಿರಣಗಳಲ್ಲಿ ಪ್ರಾತ್ಯಕ್ಷಿಕೆ, ಭಾಷಣಗಳನ್ನು ಯಶಸ್ವಿಯಾಗಿ ನೀಡಿದ್ದಾರೆ.

ಪ್ರಕಟವಾಗಿರುವ ಗ್ರಂಥಗಳು: ಬಾಲಶಿಕ್ಷಾ-ಭಾಗ ೧ ಮತ್ತು ೨, ವಾಗ್ಗೇಯಕಾರ ಕೃತಿಗಳು-ಭಾಗ ೧, ೨ ಮತ್ತು ೩, ಭಾರತೀಯ ವಾಗ್ಗೇಯಕಾರರು, ರಾಗಲಕ್ಷಣ ಮತ್ತು ರಾಗಕೋಶ, ಲಕ್ಷ್ಯ ಲಕ್ಷಣ ಪದ್ಧತಿ, ಸಂಗೀತ ಲಕ್ಷ್ಯ ವಿಜ್ಞಾನ, ಹಿಂದುಸ್ತಾನಿ ರಾಗಕೋಶ, ಬಹತ್ತರ ಮೇಳರಾಗಮಾಲಿಕಾ, ಮುವ್ವಗೋಪಾಲಾಂಕಿತ ಕ್ಷೇತ್ರಯ್ಯ ಪದಗಳು-ಭಾಗ ೧ ಮತ್ತು ೨, ಸಂಗೀತ ಶಾಸ್ತ್ರಸಾಗರ, ಕಚೇರಿ ಪದ್ಧತಿ, ತಂತೀ ವಾದ್ಯಗಳ ಲಕ್ಷ್ಯ ಮತ್ತು ಲಕ್ಷಣ, ಲಕ್ಷಣ ಗೀತ ಭಂಡಾರ, ಗೀತಗೋವಿಂದ ಅಷ್ಟಪದಿ, ರಾಗಗಳ ರಸ ಮೀಮಾಂಸೆ, ಕೃತಿಗಳ ಮೀಮಾಂಸೆ.

ಪ್ರಸ್ತುತ, ರಾಗಗಳಲ್ಲಿ ರಸವು ಹೇಗೆ ಮತ್ತು ಏಕೆ ಪ್ರತಿಪಾದಿತವಾಗುತ್ತದೆ ಎಂಬ ಸಂಶೋಧನೆಯಲ್ಲಿ ಕಾರ್ಯನಿರತರಾಗಿದ್ದಾರೆ. ಈ ವಿಷಯವು ಮಾನಸಿಕ ಶಾಸ್ತ್ರದ ಮೇಲೆ ಆಧಾರವಾಗಿದೆ.

ಕಚೇರಿಗಳು: ಇವರು ಭಾರತದಾದ್ಯಂತ ಹಲವು ಪ್ರತಿಷ್ಠಿತ ಸಭೆ, ಸಮ್ಮೇಳನ ಹಾಗೂ ಉತ್ಸವಗಳಲ್ಲಿ ಪಿಟೀಲು ತನಿ ಕಚೇರಿಯನ್ನು ಅಲ್ಲದೆ ಹಿರಿಯ ವಿದ್ವಾಂಸರುಗಳಿಗೆ ಪಿಟೀಲು ಪಕ್ಕವಾದ್ಯವನ್ನು ನುಡಿಸಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರಗಳಿಂದ ಇವರ ಪಿಟೀಲು ವಾದನ ಬಿತ್ತರಗೊಳ್ಳುತ್ತಿದೆ. ಇವರು ೧೯೩೪-೩೫ರಲ್ಲೇ ಕಚೇರಿ ಮಾಡಲು ಆರಂಭಿಸಿದ್ದರು. ಆ ಕಾಲದಲ್ಲಿದ್ದ ಸಂಗೀತ ದಿಗ್ಗಜರಾದ ಪಲ್ಲಡಂ ಸಂಜೀವರಾವ್‌, ಮುಸಿರಿ ಸುಬ್ರಹ್ಮಣ್ಯ ಐಯ್ಯರ್, ಅರಿಯಕುಡಿ ರಾಮಾನುಜ ಐಯಂಗಾರ್, ಚೆಂಬೈ ವೈದ್ಯನಾಥ ಭಾಗವತರ್, ಆಲತ್ತೂರು ಸಹೋದರರು, ಟೈಗರ್ ವರದಾಚಾರ್, ಜಿ.ಎನ್‌. ಬಾಲಸುಬ್ರಹ್ಮಣ್ಯಂ, ಮೈಸೂರು ವಾಸುದೇವಾಚಾರ್ ಮತ್ತು ತಮ್ಮ ಗುರುಗಳಿಗೂ ನಂತರದ ಅನೇಕ ವಿದ್ವಾಂಸರಿಗೂ ಪಿಟೀಲು ಪಕ್ಕವಾದ್ಯ ನುಡಿಸಿದ್ದಾರೆ. ಹೀಗೆ ಸಾವಿರಾರು ಕಚೇರಿಗಳನ್ನು ನಡೆಸಿದ್ದಾರೆ.

ಸಾಧನೆ: ಏಳು ತಂತಿ ಪಿಟೀಲನ್ನು ಪ್ರಸಿದ್ಧಿಗೆ ತಂದವರಲ್ಲಿ ಟಿ.ಚೌಡಯ್ಯನವರು ಮೊದಲಿಗರಾದರೆಕ ಅನಂತರ ಈ ವಾದ್ಯದಲ್ಲಿ ಅದ್ಭುತ ಸಾಧನೆ ಮಾಡಿದವರು ಆರ್.ಆರ್.ಕೆ. ಯವರು. ಇವರ ಸಾಧನೆಗೆ ಹತ್ತು ಹಲವು ಪ್ರಶಸ್ತಿ, ಬಿರುದು, ಪುರಸ್ಕಾರಗಳು ದೊರೆತಿವೆ. ಅವುಗಳ ಪಟ್ಟಿಯನ್ನು ಮಾಡುತ್ತಾ ಹೋದರೆ ಹನುಮಂತನ ಬಾಲದಂತಾಗುತ್ತದೆ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಹೆಸರಿಸಿದೆ

೧೯೩೪-ಎಚ್‌.ಎಂ.ವಿ. ಯವರು ಎಂಟು ಧ್ವನಿಮುದ್ರಿಕೆ ಮಾಡಿದ್ದಾರೆ. ೧೯೫೮-ಗಾನ ಸಾಹಿತ್ಯ ಶಿರೋಮಣಿ-ಶ್ರೀ ರಂಭಾಪುರಿ ಜಗದ್ಗುರಿಗಳು, ೧೯೬೩-ಸಂಗೀತ ವಿದ್ಯಾಸಾಗರ-ಶೃಂಗೇರಿ ಮಹಾಸಂಸ್ಥಾನ, ೧೯೭೧-ಸಂಗೀತ ಶಾಸ್ತ್ರ ಪ್ರವೀಣ-ತಿರುಮಲ ತಿರುಪತಿ ವಾರ್ತಾ ಕೇಂದ್ರ, ೧೯೭೩-ಸಂಗೀತ ಕಲಾರತ್ನ, ೧೦ನೇ ವಾರ್ಷಿಕ ಸಮ್ಮೇಳನ, ಗಾಯನ ಸಮಾಜ, ಬೆಂಗಳೂರು, ೧೯೮೦-ಕರ್ನಾಟಕ ಕಲಾ ತಿಲಕ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ೧೯೮೧-ಲಯ ಕಲಾನಿಪುಣ ಪರ್ ಕಸ್ಸಿವ್‌ ಆರ್ಟ್ಸ್ ಸೆಂಟರ್, ಬೆಂಗಳೂರು, ೧೯೯೩-ಪುರಸ್ಕಾರ-ರಾಜೋತ್ಸವ ಸಮಿತಿ, ಕರ್ನಾಟಕ ಸರ್ಕಾರ, ೧೯೯೫-ಸಂಗೀತ ಕಲಾ ಪ್ರಪೂರ್ಣ-ಆರ್ಯಭಟ ಕಲ್ಚರಲ್‌ ಆರಗ್ಗನೈಸೇಷನ್‌, ೧೯೯೩ರ ಕನಸ ಪುರಂದರ ಪ್ರಶಸ್ತಿ ಕರ್ನಾಟಕ ಸರ್ಕಾರ,

೧೯೯೦-೨೦೦೦-ಪ್ರಶಸ್ತಿ-ಸಂಗೀತ ನಾಟಕ ಅಕಾಡೆಮಿ, ನವದೆಹಲಿ, ೨೦೦೦-ನಾದಾಂಜಲಿ-ಎನ್‌.ಎಸ್‌.ಕೆ. ಆಚಾರ್ಯ ಅವಾರ್ಡ್‌, ೨೦೦೧-ಸನ್ಮಾನ-ಶ್ರೀ ಪುರಂದರ ಆರಾಧನ ಮಹೋತ್ಸವ, ಮುಳಬಾಗಿಲು ೨೦೦೨-ಸನ್ಮಾನ-ಶಾರದ ಕಲಾ ಕೇಂದ್ರ (ರಿ), ಬೆಂಗಳೂರು, ೨೦೦೨-ಸನ್ಮಾನ, ಗಂಜಾಂ ನಾಗಪ್ಪ & ಸನ್ಸ್, ವಜ್ರ ವ್ಯಾಪಾರಿಗಳು, ಬೆಂಗಳೂರು.

ಗಾನಕಲಾ ಪರಿಷತ್‌, ಪುರಂದರ ದಾಸರ ಆರಾಧನಾ ಸಮಿತಿ ಟ್ರಸ್ಟ್‌, ತ್ಯಾಗರಾಜ ಆರಾಧನಾ ಉತ್ಸವ-ಶ್ರೀ ರಂಗ ಪಟ್ಟಣ ಮುಂತಾದ ಸಂಸ್ಥೆಗಳು ಬೆಳೆಯಲು ಆರ್.ಆರ್.ಕೆ. ಯವರು ಬಹುವಾಗಿ ಶ್ರಮಸಿದ್ದಾರೆ.

ಹೀಗೆ ನಮ್ಮ ನಡುವೆ ಸಂಗೀತದ ಉನ್ನತ ಮೌಲ್ಯಗಳ ಮಾದರಿಯಾಗಿ ನಿಂತಿರುವ ಆರ್.ಆರ್.ಕೆ ಯವರಿಗೆ ಕಲಾಲೋಕ ಆಭಾರಿಯಾಗಿದೆ..